ಧರ್ಮಸ್ಥಳದಂತಹ ಭಾರತೀಯರ ಧಾರ್ಮಿಕ ಶ್ರದ್ಧಾ ಕೇಂದ್ರಗಳಿಂದ ಹಿಡಿದು ದೇಶದ ಪ್ರಾಚೀನ ವೈಜ್ಞಾನಿಕ ಹಿರಿಮೆಯ ತಾಣವಾಗಿರುವ ದೆಹಲಿಯ ಜಂತರ್ ಮಂತರ್ವರೆಗೆ ದೇಶದ ಪ್ರಮುಖ ಧಾರ್ಮಿಕ, ಪವಿತ್ರ ಹಾಗೂ ಐತಿಹಾಸಿಕ ಕೇಂದ್ರಗಳು ಇಂದು ವೈಚಾರಿಕ ಸಂಘರ್ಷ ಮತ್ತು ಪ್ರತಿಭಟನೆಗಳ ನೆರಳಿನಲ್ಲಿ ಸಿಲುಕುತ್ತಿವೆ. ಸಮಾಜದ ನ್ಯಾಯಯುತ ಹೋರಾಟಗಳು ಹಾಗೂ ಭಕ್ತರ ಶ್ರದ್ಧೆಯ ತಾಣಗಳನ್ನು ಕೆಲವು ಪಟ್ಟಭದ್ರ ಹಿತಾಸಕ್ತಿಗಳು ತಮ್ಮ ಸ್ವಾರ್ಥ ಮತ್ತು ವಿಚ್ಛಿದ್ರಕಾರಕ ಅಜೆಂಡಾಗಳಿಗೆ ಬಳಸಿಕೊಳ್ಳುತ್ತಿರುವುದು ಆತಂಕಕಾರಿ ಬೆಳವಣಿಗೆಯಾಗಿದೆ. ಈ ಲೇಖನವು, ಇಂತಹ ಧಾರ್ಮಿಕ ಸಂಸ್ಥೆಗಳ ಮೇಲಿನ ಅಪಪ್ರಚಾರ, ವಿದ್ಯಾರ್ಥಿಗಳ ಪ್ರತಿಭಟನೆಯ ಮರೆಯಲ್ಲಿ ಅಡಗಿರುವ ದೇಶವಿರೋಧಿ ಕೃತ್ಯಗಳು ಮತ್ತು ದೇಶದ ಭದ್ರತೆಯ ಹಿತದೃಷ್ಟಿಯಿಂದ ನಾಗರಿಕರು ಹಾಗೂ ಸರ್ಕಾರ ತಳೆಯಬೇಕಾದ ಎಚ್ಚರಿಕೆಯ ಕುರಿತು ಬೆಳಕು ಚೆಲ್ಲುತ್ತದೆ.
- ಅರವಿಂದ ಸಿಗದಾಳ್ ಮೇಲುಕೊಪ್ಪ, ಲೇಖಕ
ಕರ್ನಾಟಕದ ದಕ್ಷಿಣಕನ್ನಡ ಜಿಲ್ಲೆಯ ನೇತ್ರಾವತಿಯ ತಟದಲ್ಲಿರುವ ಅತ್ಯಂತ ಪ್ರಸಿದ್ಧ ಹಾಗೂ ಪವಿತ್ರ ಧಾರ್ಮಿಕ ಕ್ಷೇತ್ರ ಧರ್ಮಸ್ಥಳ. ಇದು ಹಿಂದೂಧರ್ಮದ ಶ್ರದ್ಧಾಕೇಂದ್ರ ಮಾತ್ರವಲ್ಲದೆ, ಧರ್ಮ, ದಾನ ಮತ್ತು ಮಾನವೀಯತೆಗೆ ಹೆಸರುವಾಸಿಯಾದ ಸ್ಥಳ. ಮಂಜುನಾಥೇಶ್ವರ ಇಲ್ಲಿನ ಶಕ್ತಿ ದೇವರು. ಲಿಂಗರೂಪದಲ್ಲಿ ಮಂಜುನಾಥನು ಪೂಜಿಸಲ್ಪಡುವ ಧರ್ಮಸ್ಥಳದಲ್ಲಿ ಶೈವ ಮತ್ತು ವೈಷ್ಣವ ಸಂಪ್ರದಾಯಗಳೆರಡರ ಜೊತೆಗೆ ಜೈನಧರ್ಮದ ಪ್ರಭಾವವೂ ಇದೆ. ಚಂದ್ರನಾಥ ಬಸದಿಯೂ ಇಲ್ಲಿರುವುದು ವಿಶೇಷ. ‘ಅನ್ನದಾನ, ವಿದ್ಯಾದಾನ, ಔಷಧದಾನ ಮತ್ತು ಅಭಯದಾನ’ ಎಂಬ ಚತುರ್ವಿಧ ದಾನಗಳಿಗೆ ಹೆಸರುವಾಸಿಯಾಗಿರುವ ಇಲ್ಲಿ ಪ್ರತಿದಿನ ಸಾವಿರಾರು ಭಕ್ತರಿಗೆ ಜಾತಿ, ಮತ ಭೇದವಿಲ್ಲದೆ ಉಚಿತ ಪ್ರಸಾದ ಅನ್ನದಾನದ ವ್ಯವಸ್ಥೆ ಇದೆ. ಧರ್ಮಾಧಿಕಾರಿ ಡಾ. ಡಿ. ವೀರೇಂದ್ರ ಹೆಗ್ಗಡೆ ಅವರ ನೇತೃತ್ವದಲ್ಲಿ ಹಲವಾರು ಗ್ರಾಮೀಣಾಭಿವೃದ್ಧಿ ಯೋಜನೆಗಳು, ಶೈಕ್ಷಣಿಕ ಸಂಸ್ಥೆಗಳು ಮತ್ತು ಸಾಮಾಜಿಕ ಕಾರ್ಯಗಳು ನಡೆಯುತ್ತಿವೆ. ಧರ್ಮಸ್ಥಳ ಕ್ಷೇತ್ರವನ್ನು ಪರಮಪವಿತ್ರ ನ್ಯಾಯದ ಸ್ಥಳವೆಂದೂ ನಂಬಲಾಗುತ್ತದೆ. ಇಲ್ಲಿಗೆ ಬಂದು ಪ್ರಮಾಣ ಮಾಡಿದರೆ ಸಮಸ್ಯೆಗಳು ಪರಿಹಾರವಾಗುತ್ತವೆ ಎಂಬುದು ಭಕ್ತರ ನಂಬಿಕೆ.
ಜಂತರ್ ಮಂತರ್ ಎಂಬುದು ಕಲ್ಲಿನಿಂದ ನಿರ್ಮಿಸಲಾದ ಪ್ರಾಚೀನ ಖಗೋಳ ವೀಕ್ಷಣಾಲಯ. ಜಂತರ್ ಅಂದರೆ ‘ಯಂತ್ರ/ಉಪಕರಣ’. ಮಂತರ್ ಅಂದರೆ ‘ಮಂತ್ರ/ಲೆಕ್ಕಾಚಾರ/ಸೂತ್ರ’ ಎಂದರ್ಥ. ಒಟ್ಟಾರೆಯಾಗಿ ಜಂತರ್ ಮಂತರ್ ಎಂದರೆ ‘ಲೆಕ್ಕಾಚಾರದ ಯಂತ್ರ’ ಅಥವಾ ‘ಖಗೋಳ ಉಪಕರಣ’ ಎಂದರ್ಥ.
ಇತಿಹಾಸದಿಂದ ಲಭಿಸುವ ಮಾಹಿತಿಯ ಪ್ರಕಾರ 1724 ಮತ್ತು 1735ರ ನಡುವಿನ ಕಾಲದಲ್ಲಿ, ಜೈಪುರದ ರಜಪೂತ ರಾಜ ಮಹಾರಾಜಾ ಸವಾಯಿ ಜೈ ಸಿಂಗ್ ಜಂತರ್ ಮಂತರ್ಗಳನ್ನು ನಿರ್ಮಿಸಿದನು. ಖಗೋಳಶಾಸ್ತ್ರ, ಗಣಿತ ಮತ್ತು ವಾಸ್ತುಶಿಲ್ಪದಲ್ಲಿ ಅತಿ ಹೆಚ್ಚಿನ ಆಸಕ್ತಿಯಿದ್ದ ಆತ, ಒಟ್ಟು ಐದು ಸ್ಥಳಗಳಲ್ಲಿ ಇಂತಹ ವೀಕ್ಷಣಾಲಯಗಳನ್ನು ಕಟ್ಟಿಸಿದನು. ದೆಹಲಿ, ಜೈಪುರ, ಉಜ್ಜಯಿನಿ, ಮಥುರಾ ಮತ್ತು ವಾರಣಾಸಿ. ಇವುಗಳಲ್ಲಿ ಮಥುರಾದಲ್ಲಿದ್ದ ರಚನೆ ಪ್ರಸ್ತುತ ಅಸ್ತಿತ್ವದಲ್ಲಿಲ್ಲ. ಇವುಗಳನ್ನು ಯಾವುದೇ ದೂರದರ್ಶಕ ಇಲ್ಲದೆ, ಬರಿಗಣ್ಣಿನಿಂದಲೇ ಆಕಾಶಕಾಯಗಳ ಚಲನೆಯನ್ನು ಗಮನಿಸಲು ಮತ್ತು ಲೆಕ್ಕಹಾಕಲು ವಿನ್ಯಾಸಗೊಳಿಸಲಾಗಿದೆ. ಇಲ್ಲಿ ಸೂರ್ಯನ ನೆರಳಿನ ಮೂಲಕ ನಿಖರವಾದ ಸಮಯವನ್ನು, ಗ್ರಹಗಳ ಸ್ಥಾನಗಳನ್ನು ಮತ್ತು ಗ್ರಹಣಗಳನ್ನು ಲೆಕ್ಕಹಾಕುವ ದೈತ್ಯಾಕಾರದ ಉಪಕರಣಗಳಿವೆ.
‘ಸಾಮ್ರಾಟ್ ಯಂತ್ರ’ ಜೈಪುರದಲ್ಲಿರುವ ವಿಶ್ವದ ಅತಿದೊಡ್ಡ ಕಲ್ಲಿನ ಬಿಸಿಲಿನ ಗಡಿಯಾರ. ಇದು ಸಮಯ ಅಳೆಯುವಿಕೆಗೆ ಅತಿ ನಿಖರವಾಗಿದ್ದು, ಅರ್ಧ ಸೆಕೆಂಡಿನ ವ್ಯತ್ಯಾಸದಲ್ಲೂ ಸಮಯವನ್ನು ತಿಳಿಸಬಲ್ಲದು ಎನ್ನುತ್ತಾರೆ.ರಾಜಸ್ಥಾನದ ಜೈಪುರದಲ್ಲಿರುವ ಜಂತರ್ ಮಂತರ್ ಅತ್ಯಂತ ದೊಡ್ಡದಾಗಿದ್ದು, ಉತ್ತಮವಾಗಿ ಸಂರಕ್ಷಿಸಲ್ಪಟ್ಟಿದೆ. ಇದನ್ನು UNESCO ‘ವಿಶ್ವ ಪರಂಪರೆಯ ತಾಣ’ ಎಂದು ಘೋಷಿಸಿದೆ. ಪ್ರಾಚೀನ ಭಾರತದಲ್ಲಿ ಖಗೋಳಶಾಸ್ತ್ರವು ಎಷ್ಟು ಉತ್ತುಂಗದಲ್ಲಿತ್ತು ಎಂಬುದಕ್ಕೆ ಜಂತರ್ ಮಂತರ್ ಜ್ಯೋತಿಷ, ವಿಜ್ಞಾನ ಹಾಗೂ ವಾಸ್ತುಶಿಲ್ಪ ಒಂದು ಬೆರಗುಗೊಳಿಸುವಂತಹ ಉದಾಹರಣೆಯಾಗಿದೆ. ಪ್ರಸ್ತುತ ದೆಹಲಿ ಮತ್ತು ಜೈಪುರದಲ್ಲಿರುವ ಜಂತರ್ ಮಂತರ್ಗಳು ಪ್ರಮುಖ ಪ್ರವಾಸಿ ತಾಣಗಳಾಗಿವೆ. ಅದರಲ್ಲೂ ದೆಹಲಿಯ ಜಂತರ್ ಮಂತರ್ ಮೊದಲಿನಿಂದಲೂ ರಾಜಕೀಯ ಪ್ರತಿಭಟನೆಗಳು ಮತ್ತು ಧರಣಿಗಳಿಗೆ ಪ್ರಸಿದ್ಧ ವೇದಿಕೆಯಾಗಿ ಗುರುತಿಸಿಕೊಂಡಿದೆ.
ರಾಷ್ಟ್ರಕವಿ ಕುವೆಂಪು ನಮ್ಮ ನಾಡನ್ನು ‘ಸರ್ವ ಜನಾಂಗದ ಶಾಂತಿಯ ತೋಟ’ ಎಂದರು. ‘ಜಯ ಭಾರತ ಜನನಿಯ ತನುಜಾತೆ, ಜಯಹೇ ಕರ್ನಾಟಕ ಮಾತೆ’ ಎಂಬ ಗೀತೆ ರಚಿಸಿ, ಭಾರತವನ್ನು ತಾಯಿಯಾಗಿಸಿ, ರಾಜ್ಯಗಳನ್ನು ಮಕ್ಕಳಾಗಿಸಿದರು. ಆ ರಾಜ್ಯಗಳನ್ನು ಮತ್ತೆ ಮಾತೆ ಎಂದರು. ನಾವೆಲ್ಲಾ ಕರ್ನಾಟಕ ಮಾತೆಯ ಮಕ್ಕಳಾದೆವು. ಅವರು ಸಾರಿದ ‘ವಿಶ್ವ ಮಾನವತೆ’ಯನ್ನು ಗೌರವಿಸಿದೆವು, ಆಚರಿಸಿದೆವು. ಕಾಲ ಕಳೆದಂತೆ ಈ ವಿಶ್ವ ಮಾನವರಲ್ಲಿ ಗುಂಪುಗಳಾದವು. ಧರ್ಮ – ಪಂಥಗಳ ಗುಂಪು, ಪಥಗಳ ಗುಂಪು, ಎಡ ಬಲಗಳ ಗುಂಪು, ರಾಷ್ಟ್ರೀಯತೆಯ ಗುಂಪು, ರಾಷ್ಟ್ರೀಯತೆಯನ್ನು ವಿರೋಧಿಸುವ ಗುಂಪು, ಪಾಸಿಟಿವ್ ಗುಂಪು, ನೆಗೆಟಿವ್ ಗುಂಪು ಇತ್ಯಾದಿ. ಕೆಲವೊಂದು ರಕ್ತದ ಗುಂಪು ಬೇರೆಯದಕ್ಕೆ ಹೊಂದಾಣಿಕೆ ಆಗದಂತೆ ಇಲ್ಲೂ ಒಂದು ಗುಂಪಿನ ಧಾರ್ಮಿಕ, ಸೈದ್ಧಾಂತಿಕ ನಿಲುವುಗಳು ಮತ್ತೊಂದಕ್ಕೆ ಆಗಿಬರಲೇ ಇಲ್ಲ.
ಇತ್ತೀಚೆಗಷ್ಟೇ ಧರ್ಮಸ್ಥಳದ ‘ಬುರುಡೆ ಪ್ರಕರಣ’ ಸಾಕಷ್ಟು ಸದ್ದು ಮಾಡಿ ಸದ್ಯಕ್ಕೆ ತಣ್ಣಗಾಗಿದೆ. ವ್ಯಕ್ತಿಗಳ ಮೇಲಿನ ಆರೋಪವನ್ನು ಧಾರ್ಮಿಕ ಕ್ಷೇತ್ರದ ನಂಬಿಕೆಯ ತನಕ ಎಳೆದು ತರುವ ಕಾರ್ಯವಾಯಿತು. ಸುಳ್ಳು ಸಾಕ್ಷ್ಯ ಸೃಷ್ಟಿಸುವ ಮತ್ತು ವ್ಯವಸ್ಥಿತವಾಗಿ ಧರ್ಮದ ನಂಬಿಕೆಗಳ ಹಾಗೂ ಧರ್ಮ ಸಂಸ್ಥೆಗಳ ವಿರುದ್ಧ ಸಂಚು ಹೂಡುವ ಕಾರ್ಯ ಮೊದಲಿನಿಂದಲೂ ನಡೆದಿವೆ.
ಈಗ NEET ಪರೀಕ್ಷೆಯ ಪ್ರಶ್ನೆ ಪತ್ರಿಕೆ ಸೋರಿಕೆಯ ವಿಷಯವೂ ಸಂತ್ರಸ್ತ ವಿದ್ಯಾರ್ಥಿಗಳ ಪ್ರತಿಭಟನೆಯನ್ನು ತಮ್ಮ ಅಜೆಂಡಾವನ್ನಾಗಿಸಿಕೊಂಡು, ಅದರ ಪ್ರತಿಭಟನಾ ಕಾರ್ಯಕ್ರಮದಲ್ಲಿ, ನೀಟ್ ಸಮಸ್ಯೆಯನ್ನು ಬದಿಗಿರಿಸಿ, ಮತ್ತದೇ ದೇಶವನ್ನು ಒಡೆಯುವ ಅಜೆಂಡಾವನ್ನು ಮುಂದಿಟ್ಟುಕೊಂಡು ಜಂತರ್ ಮಂತರ್ನಲ್ಲಿ ವೇದಿಕೆ ಏರಿದ್ದು ವಿಷಾದನೀಯ. ನೀಟ್ ಪರೀಕ್ಷಾ ಸಂತ್ರಸ್ತ ಮುಗ್ಧ ವಿದ್ಯಾರ್ಥಿಗಳನ್ನು ಹಿಂದಿನ ಸಾಲಿಗೆ ನಿಲ್ಲಿಸಿ, ಮುಂದಿನ ಸಾಲಿನಲ್ಲಿ ‘ಹಿಂದೂ ಧರ್ಮ ನಿಂದನೆ, ಅನ್ಯ ಧರ್ಮದ ಪ್ರಚಾರ, ಅಸ್ಸಾಂ ಅನ್ನು ಪ್ರತ್ಯೇಕ ದೇಶ ಮಾಡುವ ಘೋಷಣೆ, 370ನೇ ವಿಧಿಯ ಮರುಸ್ಥಾಪನೆ, ಭಾರತ ಮಾತೆ ಆದರೆ, ಅಪ್ಪ ಯಾರು ಅಂತ ಕೇಳುವ ಹೀನ ಮಾತುಗಳು, ಜಾತಿ ವೈಷಮ್ಯದ ಬೀಜ ಬಿತ್ತನೆ, ಆರ್ಎಸ್ಎಸ್ ಮುರ್ದಾಬಾದ್, ಪ್ರಧಾನಿ ಅವಹೇಳನ, ಸೀತಾಪತಿ-ನೀತಾಪತಿ ಕತೆ, ಶಾಂತಿಯುತ ಪ್ರತಿಭಟನೆ ಎನ್ನುತ್ತ ಕಲ್ಲೆಸೆತ, ದೊಂಬಿ, ಪೆಪ್ಪರ್ಸ್ಪ್ರೇ, ದೇಶ ವಿಭಜನೆಯ ಘೋಷಣೆಗಳು…. ಸರ್ಕಾರ, ರಕ್ಷಣಾ ವ್ಯವಸ್ಥೆಯೇ ಬೆಚ್ಚಿ ಬೀಳುವಂತೆ ಮಾಡಿವೆ. ರಸ್ತೆ ಬದಿಯ ಇಂಟರ್ಲಾಕ್, ಇಟ್ಟಿಗೆಗಳನ್ನು ಸಾಂಕೇತಿಕವಾಗಿ ಕೀಳುತ್ತ, ಸ್ಥಳವನ್ನು ಶಿಥಿಲಗೊಳಿಸುವ ತಮ್ಮ ಸಾಮರ್ಥ್ಯವನ್ನು ಈ ಪಟ್ಟಭದ್ರ ಹಿತಾಸಕ್ತಿಗಳು ಮೆರೆದಿವೆ.
ಶೈಕ್ಷಣಿಕ ಸಮಸ್ಯೆಯನ್ನು ವಿರೋಧಿಸುವ ವೇದಿಕೆಯ ಮೇಲೆ ನಿಂತು, “ಭಾರತ ಮಾತೆ ಆದರೆ ಅಪ್ಪ ಯಾರು?” ಎಂದು ಮಾತನಾಡುವ ದೇಶ ವಿರೋಧಿ ಗುಂಪಿನ ನಾಯಕರಿಗೆ, ನಾವು ಇಡೀ ಭಾರತೀಯರ ನಂಬಿಕೆಯನ್ನೇ ಪ್ರಶ್ನೆ ಮಾಡಿದ್ದೇವೆ, ಕೆಣಕಿದ್ದೇವೆ ಎಂಬ ಅರಿವು ಇಲ್ಲದೇ ಇರುವುದಿಲ್ಲ. ಈ ಅರಿವು ಇದ್ದೇ ಭಾರತೀಯರನ್ನು, ಭಾರತ ಜನನಿ ಅಂತ ಸಾರಿದ ರಾಷ್ಟ್ರಕವಿಗಳನ್ನು, ಭಾರತದ ಅಸ್ಮಿತೆಯನ್ನು ಜಂತರ್ ಮಂತರ್ನಲ್ಲಿ ಪ್ರಶ್ನಿಸಿ, ಭಾರತದ ಮಾನವನ್ನು ಭಾರತದ ನೆಲದಲ್ಲೇ ನಿಂತು ಹರಾಜು ಮಾಡಲೆತ್ನಿಸಿದ್ದು ನಿಜಕ್ಕೂ ದುರದೃಷ್ಟಕರ. ನೀಟ್ ಪರೀಕ್ಷಾ ಪ್ರತಿಭಟನೆಯಲ್ಲಿ ದೇಶಾದ್ಯಂತ ವಿದ್ಯಾರ್ಥಿಗಳನ್ನು, ದೇಶ ಭಕ್ತರನ್ನು, ಎಲ್ಲ ಭಾರತೀಯರನ್ನೂ ನಗೆಪಾಟಲು ಮಾಡಲಾಗಿದೆ.
ವಿದ್ಯಾರ್ಥಿಗಳ ಸಮಸ್ಯೆಗೆ ಬೆಂಬಲ ಕೊಟ್ಟವರು ದೇಶವನ್ನು ಶಿಥಿಲಗೊಳಿಸುವ ವಿಚ್ಛಿದ್ರಕಾರಕ ಶಕ್ತಿಗಳೆಂಬ ವಾಸ್ತವದ ಸತ್ಯ ವಿದ್ಯಾರ್ಥಿಗಳಿಗೆ ಅರಿವಾಗುವಾಗ ಕಾಲ ಮಿಂಚಿಹೋಗಿದೆ. ಲಕ್ಷೋಪಲಕ್ಷ ಜನ ಸೇರಿದ್ದರೂ, ದೆಹಲಿ ರಣರಂಗವಾದರೂ, ಭೀಕರ ಹತ್ಯೆ, ಸಾವು, ಮಾರಣಾಂತಿಕ ಹಲ್ಲೆ ಆಗದಂತೆ ತಡೆಯುವಲ್ಲಿ ಸರ್ಕಾರ ಯಶಸ್ವಿಯಾಗಿದ್ದೇ ಸಾಧನೆ!. ಆದರೂ, ಲಕ್ಷೋಪಲಕ್ಷ ಜನ ಸೇರಿ ದೆಹಲಿ ರಣರಂಗ ವಾಗುವವರೆಗೂ ಸರ್ಕಾರ ತಟಸ್ಥ ನೀತಿ ಅನುಸರಿಸಿದ್ದು ಒಂದು ಕಪ್ಪುಚುಕ್ಕಿಯೇ ಸರಿ.
ಇನ್ನು ನೀಟ್ ಪರೀಕ್ಷೆಯ ವಿಚಾರಕ್ಕೆ ಬಂದರೆ, ನೀಟ್ನ ಪ್ರಶ್ನೆ ಪತ್ರಿಕೆ ಸೋರಿಕೆಯ ಪ್ರಕರಣದಲ್ಲಿ ಸೂಕ್ತ ಕ್ರಮ ಆಗಲೇಬೇಕು. ತಪ್ಪಿತಸ್ಥರಿಗೆ ವಿಳಂಬವಿಲ್ಲದೆ ಶಿಕ್ಷೆ ಆಗಬೇಕು ಮತ್ತು ಇಂತಹ ಅಕ್ರಮ ಮುಂದೆ ಘಟಿಸದಂತೆ ಶಾಶ್ವತವಾದ ಬಿಗಿ ಭದ್ರತಾ ಕ್ರಮ ಆಗಬೇಕೆನ್ನುವುದರಲ್ಲಿ ಅನುಮಾನವೇ ಇಲ್ಲ. ನೀಟ್ ಪರೀಕ್ಷೆಯೊಳಗಿನ ಲೋಪ ಮಾತ್ರವಲ್ಲ, ದೇಶವನ್ನು ಅಭದ್ರಗೊಳಿಸುವ ಎಲ್ಲ ಕೃತ್ಯಗಳ ವಿಷಯದಲ್ಲಿಯೂ ಸರಿಯಾದ ಕ್ರಮ ಕೈಗೊಳ್ಳಬೇಕು.
ಅಕ್ರಮ ಒಂದೆರಡಲ್ಲ
ವಿದೇಶೀ ಅಕ್ರಮ ಅಡಿಕೆ ಆಮದು ಪ್ರತಿದಿನ ಎಂಬಂತೆ ನಡೆಯುತ್ತಿದೆ. ಅಕ್ರಮ ಅಡಿಕೆ ಆಮದು ಪ್ರಕರಣ ಬಯಲಾಗುತ್ತಿದೆ, ಆದರೆ ಅದಕ್ಕೆ ಭದ್ರತಾ ಕ್ರಮ ತೆಗೆದುಕೊಂಡ ಸುದ್ದಿಗಳು ಬರುತ್ತಿಲ್ಲ. ಪ್ರಕರಣಗಳು ಬಯಲಾದರೂ ಮತ್ತೆ ಮತ್ತೆ ಅಂತಹದ್ದೇ ಪ್ರಕರಣಗಳು ಗಣನೀಯವಾಗಿ ನಡೆಯುತ್ತಿವೆ. ಅಡಕೆಯಂತೆಯೇ ಗಾಂಜಾ, ಶಸ್ತ್ರಾಸ್ತ್ರಗಳು, ಮಾರಕಾಸ್ತ್ರಗಳು, ಕಪ್ಪು ಹಣ, ಬಂಗಾರ, ಸಂಪತ್ತುಗಳೂ ಬರುವಂತಹದ್ದಾದರೆ, ನಾಳೆ ದೇಶದ ಸ್ವಾಸ್ಥ್ಯ ಕೆಡಿಸುವ ವಿದ್ವಂಸಕ ಕೃತ್ಯ ಎಸಗುವ ಶಕ್ತಿಗಳಿಗೇ ಶಕ್ತಿ ಕೊಡುವ ಮಾರ್ಗ ಆಗಬಹುದು. ಇದರೊಂದಿಗೆ ಅನೇಕ ದಶಕಗಳಿಂದ ಅಕ್ರಮ ವಲಸಿಗರು ದೇಶದೊಳಗೆ ಬರುತ್ತಲೇ ಇದ್ದಾರೆ ಅನ್ನುವುದು ಈಗ ಓಪನ್ ಸೀಕ್ರೇಟ್. ನಾಳೆ ಅವರೂ ದೇಶ ಶಿಥಿಲಗೊಳಿಸುವ ಶಕ್ತಿಗಳ ಜೊತೆ ಕೈ ಜೋಡಿಸಿದರೆ? ಇದನ್ನೆಲ್ಲ ನಿರ್ಲಕ್ಷಿಸದೆ ತುರ್ತಾಗಿ ಕಾರ್ಯಪ್ರವೃತ್ತವಾಗುವುದು ಸರ್ಕಾರದ ಜವಾಬ್ದಾರಿ.
ಪ್ರಖರತೆ ನಮ್ಮಲ್ಲಿರಲಿ
ಜಂತರ್ ಮಂತರ್ ಪ್ರತಿಭಟನೆ ಹೆಚ್ಚು ಪ್ರಖರವಾಗಿತ್ತು ಎನ್ನುವುದರಲ್ಲಿ ಸಂಶಯವಿಲ್ಲ. ವಾಸ್ತವ ಸತ್ಯ ಹೊರಗೆ ಬಂದು, ದೇಶ ವಿರೋಧಿ ಶಕ್ತಿಗಳ ಬಣ್ಣ ಬಯಲಾಗಿ, ಅವುಗಳ ಶಕ್ತಿ ಸದ್ಯಕ್ಕೆ ಕ್ಷೀಣಿಸಿದ್ದರೂ, ನಾಳೆ ಇನ್ನಷ್ಟು ಅಜೆಂಡಾಗಳೊಂದಿಗೆ, ಇದಕ್ಕಿಂತ ದೊಡ್ಡದಾಗಿ ನಡೆಯಬಹುದಾದ ಘಟನೆಗಳಿಗೆ ಕಾರಣವಾಗಬಹುದು. ನಾಗರಿಕರಾಗಿ ಇತರರು, ಮಕ್ಕಳು ಇದಕ್ಕೆ ಬಲಿಯಾಗದ ಹಾಗೆ ಎಚ್ಚರಿಕೆಯಿಂದ ಇರಬೇಕಾಗಿರುವುದು ಅನಿವಾರ್ಯ. ಆ ಎಚ್ಚರಿಕೆಯೇ ದೇಶವನ್ನು ಕಾಯುವಲ್ಲಿ ಸಹಾಯವಾಗಬಹುದು. “ಏ, ನಮಗಿದೆಲ್ಲಾ ಅರ್ಥ ಆಗಲ್ಲಪ್ಪಾ, ನಮಗಿಂತಹದ್ದರಲ್ಲಿ ಆಸಕ್ತಿಯೂ ಇಲ್ಲ” ಅಂತ ದೂರ ನಿಂತರೆ ಬೀಳುವ ನೆಮ್ಮದಿಯ ಕಟ್ಟಡ ನಮ್ಮ ತಲೆಯ ಮೇಲೆಯೇ ಮೊದಲು ಬೀಳಬಹುದು. ಶಿಶುನಾಳ ಷರೀಫರ ‘ಸೋರುತಿಹುದು ಮನೆಯ ಮಾಳಿಗಿ… ಅಜ್ಞಾನದಿಂದ ಸೋರುತಿಹುದು ಮನೆಯ ಮಾಳಿಗಿ’ ಹಾಡು ಪ್ರಸ್ತುತ ಪರಿಸ್ಥಿತಿಯನ್ನು ನೆನಪಿಸಿ ಕಾರ್ಯಪ್ರವೃತ್ತರಾಗಲು ಪ್ರೇರಣೆಯಾಗಿದೆ.
ವಿಕ್ರಮ ಓದುಗರ ವಾಟ್ಸಪ್ ಬಳಗಕ್ಕೆ ಸೇರಲು ಈ ಸಂಖ್ಯೆಯನ್ನು ನಿಮ್ಮ ಮೊಬೈಲ್ನಲ್ಲಿ ಸೇವ್ ಮಾಡಿಕೊಂಡು ನಮಗೊಂದು ಸಂದೇಶ ಕಳುಹಿಸಿ. ಮೊಬೈಲ್ ಸಂಖ್ಯೆ: 98800 21122
