ಅಂಕಣ – ರಾಷ್ಟ್ರಹಿತ
- ಡಾ. ನಂದ ಕಿಶೋರ್ ಎಂ.ಎಸ್., ಸಹ ಪ್ರಾಧ್ಯಾಪಕ, ಪುದುಚೆರಿ ವಿಶ್ವವಿದ್ಯಾಲಯ
2028-29ನೇ ಸಾಲಿನ ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ ಅಶಾಶ್ವತ ಸದಸ್ಯ ಸ್ಥಾನಕ್ಕಾಗಿ ಭಾರತವು ಅಧಿಕೃತವಾಗಿ ತನ್ನ ಪ್ರಚಾರಕಾರ್ಯವನ್ನು ಆರಂಭಿಸಿದೆ. ಇದು ಕೇವಲ ಮತ್ತೊಂದು ರಾಜತಾಂತ್ರಿಕ ಕಸರತ್ತಲ್ಲ, ಜಾಗತಿಕ ಆಡಳಿತ ವ್ಯವಸ್ಥೆಯಲ್ಲಿ ಪ್ರಬಲ ಧ್ವನಿಯಾಗಿ ಹೊರಹೊಮ್ಮುವ ಹಾಗೂ ಮಂಡಳಿಯ ಕಾಯಂ ಸದಸ್ಯತ್ವದ ತನ್ನ ಬಹುಕಾಲದ ಹಕ್ಕೊತ್ತಾಯವನ್ನು ಮತ್ತಷ್ಟು ಗಟ್ಟಿಗೊಳಿಸುವ ಒಂದು ಯುದ್ಧತಂತ್ರದ ಹೆಜ್ಜೆಯಿದು. ನ್ಯೂಯಾರ್ಕ್ ನ ವಿಶ್ವಸಂಸ್ಥೆಯ ಕೇಂದ್ರ ಕಚೇರಿಯಲ್ಲಿ ವಿದೇಶಾಂಗ ಸಚಿವ ಡಾ. ಎಸ್. ಜೈಶಂಕರ್ ಅವರು ಈ ಅಭಿಯಾನವನ್ನು ಘೋಷಿಸುತ್ತಾ, ‘ಶಾಂತಿ’ – ನಿಯಮಗಳು, ವಿಶ್ವಾಸ ಮತ್ತು ನಿಷ್ಠೆಯ ಮೂಲಕ ಸಮಗ್ರ ಪ್ರಗತಿಯ ಸಾಧನೆ (SHANTI- Securing Holistic Advancement through Norms, Trust, Integrity) ಎಂಬ ತತ್ತ್ವವನ್ನು ಭಾರತದ ಮಾರ್ಗದರ್ಶಿ ಸೂತ್ರವಾಗಿ ಮುಂದಿಟ್ಟಿದ್ದಾರೆ.
ಈ ಅಭಿಯಾನದ ಕಾಲಘಟ್ಟವು ಅತ್ಯಂತ ಮಹತ್ವದ್ದಾಗಿದೆ. ಶೀತಲ ಸಮರದ ಅಂತ್ಯದ ಬಳಿಕ ಜಾಗತಿಕ ವ್ಯವಸ್ಥೆಯು ಹಿಂದೆಂದೂ ಕಂಡರಿಯದಂತಹ ತಲ್ಲಣಗಳನ್ನು ಇಂದು ಎದುರಿಸುತ್ತಿದೆ. ಯುರೋಪ್ ಮತ್ತು ಪಶ್ಚಿಮ ಏಷ್ಯಾದಲ್ಲಿನ ಯುದ್ಧಗಳು, ಬಲಾಢ್ಯ ರಾಷ್ಟ್ರಗಳ ನಡುವಿನ ಪೈಪೋಟಿ, ಹೆಚ್ಚುತ್ತಿರುವ ಭಯೋತ್ಪಾದನೆ, ಸೈಬರ್ ಬೆದರಿಕೆಗಳು, ಹವಾಮಾನ ವೈಪರೀತ್ಯ ಹಾಗೂ ಮುಂದುವರಿದ ಮತ್ತು ಅಭಿವೃದ್ಧಿಶೀಲ ರಾಷ್ಟ್ರಗಳ ನಡುವೆ ಹೆಚ್ಚುತ್ತಿರುವ ಕಂದಕವು ಇಂದಿನ ಬಹುಪಕ್ಷೀಯ ಸಂಸ್ಥೆಗಳ ಇತಿಮಿತಿಗಳನ್ನು ಬಟಾಬಯಲು ಮಾಡಿವೆ. ಇಂತಹ ಬಿಕ್ಕಟ್ಟಿನ ವಾತಾವರಣದಲ್ಲಿ ಭಾರತದ ಈ ಹೆಜ್ಜೆಯು ಕೇವಲ ಅಧಿಕಾರದ ಗದ್ದುಗೆಯನ್ನೇರುವ ಆಸೆಯಲ್ಲ, ಬದಲಾಗಿ ಜಾಗತಿಕ ಆಡಳಿತವು ಹೇಗೆ ಕಾರ್ಯನಿರ್ವಹಿಸಬೇಕು ಎಂಬುದನ್ನು ಮರುವ್ಯಾಖ್ಯಾನಿಸುವ ಒಂದು ದಿಟ್ಟ ಪ್ರಯತ್ನವಾಗಿದೆ.
ಇಂದು ಭದ್ರತಾ ಮಂಡಳಿಯು ತನ್ನ ವಿಶ್ವಾಸಾರ್ಹತೆಯನ್ನೇ ಕಳೆದುಕೊಳ್ಳುವ ಭೀತಿಯಲ್ಲಿದೆ. ಎರಡನೇ ಮಹಾಯುದ್ಧದ ನಂತರ ಜಗತ್ತಿನಲ್ಲಿ ಶಾಂತಿ ಮತ್ತು ಭದ್ರತೆಯನ್ನು ಕಾಪಾಡುವ ಸದಾಶಯದಿಂದ ಇದನ್ನು ಹುಟ್ಟುಹಾಕಲಾಯಿತು. ಆದರೆ 1945ರ ಭೌಗೋಳಿಕ ಮತ್ತು ರಾಜಕೀಯ ವಾಸ್ತವಗಳಿಗೂ 21ನೇ ಶತಮಾನದ ಇಂದಿನ ಪರಿಸ್ಥಿತಿಗೂ ಅಜಗಜಾಂತರವಿದೆ. ರಷ್ಯಾ – ಉಕ್ರೇನ್ ಯುದ್ಧ, ಇಸ್ರೇಲ್ – ಹಮಾಸ್ ಸಂಘರ್ಷ ಮತ್ತು ಸುಡಾನ್, ಮಯನ್ಮಾರ್, ಸಿರಿಯಾ ಹಾಗೂ ಕಾಂಗೋದಂತಹ ದೇಶಗಳಲ್ಲಿನ ದೀರ್ಘಕಾಲಿಕ ಅಸ್ಥಿರತೆಯನ್ನು ಶಮನಗೊಳಿಸುವಲ್ಲಿ ಮಂಡಳಿಯ ಅಸಹಾಯಕತೆಯು ಅದರ ಅಸ್ತಿತ್ವದ ಬಗ್ಗೆಯೇ ಗಂಭೀರ ಪ್ರಶ್ನೆಗಳನ್ನು ಹುಟ್ಟುಹಾಕಿದೆ. ಕಾಯಂ ಸದಸ್ಯ ರಾಷ್ಟ್ರಗಳು ತಮ್ಮ ನಿರಾಕರಣಾ (ವೀಟೋ) ಅಧಿಕಾರವನ್ನು ಪದೇಪದೇ ಚಲಾಯಿಸುವ ಮೂಲಕ ನಿರ್ಧಾರಗಳನ್ನು ತೆಗೆದುಕೊಳ್ಳುವ ಪ್ರಕ್ರಿಯೆಯನ್ನೇ ಸಾಂಸ್ಥಿಕ ಪಾರ್ಶ್ವವಾಯುವಿಗೆ ತುತ್ತಾಗುವಂತೆ ಮಾಡಿವೆ. ಇದು ಇಡೀ ಜಾಗತಿಕ ಸಮುದಾಯದಲ್ಲಿ ಹತಾಶೆಯನ್ನು ಮೂಡಿಸಿದೆ. ಇಂತಹ ಸಂದರ್ಭದಲ್ಲಿ ಛಿದ್ರಗೊಂಡಿರುವ ವಿಶ್ವವನ್ನು ಬೆಸೆಯಲು ಮತ್ತು ಬಹುಪಕ್ಷೀಯ ಸಂಸ್ಥೆಗಳ ಮೇಲಿನ ನಂಬಿಕೆಯನ್ನು ಮರುಸ್ಥಾಪಿಸಲು ಜವಾಬ್ದಾರಿಯುತ ಮಧ್ಯಮ ಶಕ್ತಿಗಳು ಹೆಚ್ಚಿನ ಪಾತ್ರವನ್ನು ವಹಿಸಲೇಬೇಕು ಎಂಬ ಬಲವಾದ ವಾದವನ್ನು ಭಾರತವು ಮಂಡಿಸುತ್ತಿದೆ.
‘ಶಾಂತಿ’ ಎಂಬ ದೃಷ್ಟಿಕೋನವು ಅಂತಾರಾಷ್ಟ್ರೀಯ ರಾಜಕಾರಣದ ಬಗ್ಗೆ ಭಾರತದ ಸಾಂಪ್ರದಾಯಿಕ ನಿಲುವನ್ನು ಬಿಂಬಿಸುತ್ತದೆ. ಇದರಲ್ಲಿನ ‘ನಿಯಮಗಳ’ ಮೇಲಿನ ಒಲವು ಅಧಿಕಾರದ ದರ್ಪದ ಬದಲಾಗಿ ಅಂತಾರಾಷ್ಟ್ರೀಯ ಕಾನೂನಿನ ಬುನಾದಿಯ ಮೇಲೆ ನಿಂತಿರುವ ನಿಯಮಾಧಾರಿತ ಜಾಗತಿಕ ವ್ಯವಸ್ಥೆಯೆಡೆಗಿನ ಭಾರತದ ಬದ್ಧತೆಯನ್ನು ತೋರಿಸುತ್ತದೆ. ತಮ್ಮ ರಾಜಕೀಯ ಅನುಕೂಲಕ್ಕೆ ತಕ್ಕಂತೆ ಅಂತಾರಾಷ್ಟ್ರೀಯ ಕಾನೂನನ್ನು ಬಳಸಿಕೊಳ್ಳುವ ಹಲವು ರಾಷ್ಟ್ರಗಳಿಗಿಂತ ಭಿನ್ನವಾಗಿ, ಬೇರೆ ದೇಶಗಳ ಸಾರ್ವಭೌಮತೆ, ಪ್ರಾದೇಶಿಕ ಸಮಗ್ರತೆ, ವಿವಾದಗಳ ಶಾಂತಿಯುತ ಇತ್ಯರ್ಥ ಮತ್ತು ವಿಶ್ವಸಂಸ್ಥೆಯ ಸನ್ನದಿಗೆ ತೋರುವ ಗೌರವವೇ ಜಾಗತಿಕ ಆಡಳಿತದ ತಳಹದಿಯಾಗಬೇಕು ಎಂದು ಭಾರತ ಪ್ರತಿಪಾದಿಸುತ್ತಲೇ ಬಂದಿದೆ. ‘ವಿಶ್ವಾಸ’ದ ಬಗೆಗಿನ ಒತ್ತು ಕೂಡ ಅಷ್ಟೇ ಮಹತ್ವದ್ದಾಗಿದೆ. ಇಂದಿನ ಅಂತಾರಾಷ್ಟ್ರೀಯ ಸಂಬಂಧಗಳಲ್ಲಿ ವಿಶ್ವಾಸ ಎಂಬುದು ಮರೀಚಿಕೆಯಾಗುತ್ತಿದೆ. ಅಮೆರಿಕ ಮತ್ತು ಚೀನಾದ ನಡುವಿನ ತಂತ್ರಗಾರಿಕೆಯ ಪೈಪೋಟಿ, ನ್ಯಾಟೋ ಮತ್ತು ರಷ್ಯಾ ನಡುವಿನ ಉದ್ವಿಗ್ನತೆ ಹಾಗೂ ಜಗತ್ತಿನ ಉತ್ತರ ಮತ್ತು ದಕ್ಷಿಣ ಗೋಳಗಳ ನಡುವಿನ ಕಂದಕವು ಬಹುಪಕ್ಷೀಯ ವೇದಿಕೆಗಳ ಮೇಲಿನ ನಂಬಿಕೆಯನ್ನು ಹುಸಿಗೊಳಿಸಿವೆ. ಕ್ವಾಡ್, ಬ್ರಿಕ್ಸ್, ಜಿ-ಇಪ್ಪತ್ತು, ಎಸ್ಸಿಒ ಮತ್ತು ಜಾಗತಿಕ ದಕ್ಷಿಣದ ರಾಷ್ಟ್ರಗಳಂತಹ ಪರಸ್ಪರ ವಿರುದ್ಧ ನಿಲುವುಗಳ ಗುಂಪುಗಳೊಂದಿಗೆ ಭಾರತ ಇಟ್ಟುಕೊಂಡಿರುವ ಸೌಹಾರ್ದಯುತ ಸಂಬಂಧವು ಸೈದ್ಧಾಂತಿಕ ಭಿನ್ನಾಭಿಪ್ರಾಯಗಳ ನಡುವೆಯೂ ಸಂವಾದವನ್ನು ಕಾಯ್ದುಕೊಳ್ಳಬಲ್ಲ ಬೆರಳೆಣಿಕೆಯ ರಾಷ್ಟ್ರಗಳ ಸಾಲಿನಲ್ಲಿ ಭಾರತವನ್ನು ನಿಲ್ಲಿಸಿದೆ.
ಮೂರನೆಯ ಆಧಾರಸ್ತಂಭವಾದ ‘ನಿಷ್ಠೆ’ ತನ್ನನ್ನು ತಾನೊಂದು ಜವಾಬ್ದಾರಿಯುತ ಪಾಲುದಾರನನ್ನಾಗಿ ಬಿಂಬಿಸಿಕೊಳ್ಳುವ ಭಾರತದ ಪ್ರಾಮಾಣಿಕ ಪ್ರಯತ್ನವನ್ನು ಸೂಚಿಸುತ್ತದೆ. ಅಭಿವೃದ್ಧಿಯ ಪಾಲುದಾರಿಕೆ, ಮಾನವೀಯ ನೆರವು, ವಿಪತ್ತು ನಿರ್ವಹಣೆ, ಕೋವಿಡ್ ಸಾಂಕ್ರಾಮಿಕದ ಕಾಲದ ಲಸಿಕಾ ಮೈತ್ರಿ, ಉಕ್ರೇನ್ನಲ್ಲಿನ ಆಪರೇಷನ್ ಗಂಗಾ ಮತ್ತು ಸುಡಾನ್ನಲ್ಲಿನ ಆಪರೇಷನ್ ಕಾವೇರಿಯಂತಹ ಕಾರ್ಯಾಚರಣೆಗಳು ಭಾರತದ ಜಾಗತಿಕ ವರ್ಚಸ್ಸನ್ನು ಇಮ್ಮಡಿಗೊಳಿಸಿವೆ. ತನ್ನನ್ನು ತಾನು ಕೇವಲ ಒಂದು ಪ್ರಾದೇಶಿಕ ಶಕ್ತಿ ಎಂದು ಬಿಂಬಿಸಿಕೊಳ್ಳುವ ಬದಲಾಗಿ ಜಗತ್ತಿಗೆ ಒಳಿತನ್ನು ಒದಗಿಸುವ ದಾತೃವಾಗಿ ಭಾರತವು ಹೊರಹೊಮ್ಮುತ್ತಿದೆ. ಹಾಗಾಗಿ 21ನೇ ಶತಮಾನದ ಬಹುಪಕ್ಷೀಯ ವ್ಯವಸ್ಥೆಯ ಪ್ರಾಯೋಗಿಕ ಅಗತ್ಯಗಳೊಂದಿಗೆ ಭಾರತದ ವಿದೇಶಾಂಗ ನೀತಿಯ ಪರಂಪರೆಯನ್ನು ಬೆಸೆಯುವ ಪ್ರಯತ್ನವೇ ಈ ‘ಶಾಂತಿ’ ಚೌಕಟ್ಟು.
ಆದರೆ ಕೇವಲ ಸುಂದರ ಘೋಷಣೆಗಳಿಂದ ಭದ್ರತಾ ಮಂಡಳಿಯ ಚುನಾವಣೆಗಳನ್ನು ಗೆಲ್ಲಲಾಗುವುದಿಲ್ಲ. ಏಷ್ಯಾ ಪೆಸಿಫಿಕ್ ಗುಂಪಿನ ಸ್ಥಾನಕ್ಕಾಗಿ ವಿಶ್ವಸಂಸ್ಥೆಯ ಸಾಮಾನ್ಯ ಸಭೆಯಲ್ಲಿ ನಡೆಯುವ ಚುನಾವಣೆಯಲ್ಲಿ ಅಗತ್ಯ ಮತಗಳನ್ನು ಕಲೆಹಾಕುವುದು ಭಾರತದ ಮುಂದಿರುವ ತಕ್ಷಣದ ಸವಾಲು. ತಜಕಿಸ್ತಾನ್ ಕೂಡ ಇದೇ ಸ್ಥಾನಕ್ಕಾಗಿ ಸ್ಪರ್ಧಿಸುತ್ತಿರುವುದರಿಂದ ಈ ಚುನಾವಣೆ ತೀವ್ರ ಪೈಪೋಟಿಯಿಂದ ಕೂಡಿರಲಿದೆ. ಅಶಾಶ್ವತ ಸದಸ್ಯ ಸ್ಥಾನಗಳ ಚುನಾವಣೆಯು ರಹಸ್ಯ ಮತದಾನದ ಮೂಲಕ ನಡೆಯಲಿದ್ದು, ಹಾಜರಿದ್ದು ಮತದಾನ ಮಾಡುವ ಸದಸ್ಯರಲ್ಲಿ ಮೂರನೇ ಎರಡರಷ್ಟು ಬಹುಮತದ ಅಗತ್ಯವಿರುತ್ತದೆ. ಹಾಗಾಗಿ ಪ್ರಚಾರ ಕಾರ್ಯವು ಕೇವಲ ದ್ವಿಪಕ್ಷೀಯ ಸಂಬಂಧಗಳಿಗಿಂತಲೂ ಮೀರಿದ್ದಾಗಿದೆ. ಆಫ್ರಿಕಾ, ಲ್ಯಾಟಿನ್ ಅಮೆರಿಕ, ಕೆರಿಬಿಯನ್, ಪೆಸಿಫಿಕ್ ದ್ವೀಪಗಳು, ಯುರೋಪ್ ಮತ್ತು ಅರಬ್ ಜಗತ್ತಿನೆಲ್ಲೆಡೆ ನಿರಂತರವಾದ ಸಂಪರ್ಕವನ್ನು ಇದು ಬೇಡುತ್ತದೆ. ಇಲ್ಲಿ ಪ್ರತಿಯೊಂದು ಮತವೂ ನಿರ್ಣಾಯಕವೇ.
ಈ ಕಣಕ್ಕೆ ಭಾರತವು ಬಲವಾದ ರಾಜತಾಂತ್ರಿಕ ಸವಲತ್ತುಗಳೊಂದಿಗೆ ಪ್ರವೇಶಿಸುತ್ತಿದೆ. ವಿಶ್ವದ ಅತಿದೊಡ್ಡ ರಾಜತಾಂತ್ರಿಕ ಜಾಲಗಳಲ್ಲೊಂದನ್ನು ಹೊಂದಿರುವ ಭಾರತ ಅಭಿವೃದ್ಧಿಶೀಲ ರಾಷ್ಟ್ರಗಳಾದ್ಯಂತ ಅಪಾರವಾದ ಸದ್ಭಾವನೆಯನ್ನು ಗಳಿಸಿದೆ. ಅಭಿವೃದ್ಧಿ ನೆರವು, ಡಿಜಿಟಲ್ ಸಾರ್ವಜನಿಕ ಮೂಲಸೌಕರ್ಯ, ಹವಾಮಾನ ಬದಲಾವಣೆಯ ವಿರುದ್ಧದ ಹೋರಾಟ ಮತ್ತು ಸಾಮರ್ಥ್ಯ ವೃದ್ಧಿ ಕಾರ್ಯಕ್ರಮಗಳ ಮೂಲಕ ತನ್ನ ಪಾಲುದಾರಿಕೆಯನ್ನು ಗಮನಾರ್ಹವಾಗಿ ವಿಸ್ತರಿಸಿಕೊಂಡಿದೆ. 2023ರಲ್ಲಿ G-20 ಶೃಂಗಸಭೆಯ ಅಧ್ಯಕ್ಷತೆಯನ್ನು ವಹಿಸಿಕೊಂಡಿದ್ದ ಭಾರತ, ಜಾಗತಿಕ ಮಟ್ಟದ ಭಿನ್ನಾಭಿಪ್ರಾಯಗಳ ನಡುವೆಯೂ ಕಠಿಣ ಸಮಸ್ಯೆಗಳ ಬಗ್ಗೆ ಒಮ್ಮತವನ್ನು ಮೂಡಿಸುವ ಸಾಮರ್ಥ್ಯವಿರುವ ರಾಷ್ಟ್ರವಾಗಿ ತನ್ನ ಘನತೆಯನ್ನು ಹೆಚ್ಚಿಸಿಕೊಂಡಿತು. ಆಫ್ರಿಕನ್ ಒಕ್ಕೂಟವನ್ನು G-20ಯ ಕಾಯಂ ಸದಸ್ಯನನ್ನಾಗಿ ಸೇರ್ಪಡೆಗೊಳಿಸುವಲ್ಲಿ ಯಶಸ್ವಿಯಾದದ್ದು ಜಾಗತಿಕ ದಕ್ಷಿಣದ ಕಾಳಜಿಗಳನ್ನು ಸಾಂಸ್ಥಿಕ ಮಟ್ಟದಲ್ಲಿ ಕಾರ್ಯಗತಗೊಳಿಸುವ ಭಾರತದ ಸಾಮರ್ಥ್ಯಕ್ಕೆ ಹಿಡಿದ ಕೈಗನ್ನಡಿಯಾಗಿದೆ. ಸಾಮಾನ್ಯ ಸಭೆಯಲ್ಲಿ ಅತಿದೊಡ್ಡ ಮತಬ್ಯಾಂಕ್ ಆಗಿರುವ ಆಫ್ರಿಕನ್ ರಾಷ್ಟ್ರಗಳ ನಡುವೆ ಭಾರತದ ಅಭಿಯಾನಕ್ಕೆ ಇದು ದೊಡ್ಡ ಮಟ್ಟದ ಬೆಂಬಲವನ್ನು ತಂದುಕೊಡುವ ನಿರೀಕ್ಷೆಯಿದೆ.
ವಿಶ್ವಸಂಸ್ಥೆಯ ಶಾಂತಿಪಾಲನಾ ಕಾರ್ಯಾಚರಣೆಗಳಲ್ಲಿನ ಭಾರತದ ಸುದೀರ್ಘ ಇತಿಹಾಸವು ಮತ್ತೊಂದು ಪ್ರಮುಖ ಬಲವಾಗಿದೆ. ಸ್ವಾತಂತ್ರ್ಯಾನಂತರ ವಿಶ್ವಸಂಸ್ಥೆಯ 50ಕ್ಕೂ ಹೆಚ್ಚು ಕಾರ್ಯಾಚರಣೆಗಳಿಗೆ ಭಾರತವು 2,90,000ಕ್ಕೂ ಹೆಚ್ಚು ಶಾಂತಿಪಾಲಕರನ್ನು ಕಳುಹಿಸಿದ್ದು, ಇತಿಹಾಸದಲ್ಲೇ ಅತಿಹೆಚ್ಚು ಸೈನಿಕರನ್ನು ಕೊಡುಗೆಯಾಗಿ ನೀಡಿದ ರಾಷ್ಟ್ರಗಳಲ್ಲಿ ಒಂದೆನಿಸಿದೆ. ಭಾರತೀಯ ಸೈನಿಕರು ಪ್ರಪಂಚದ ಅತ್ಯಂತ ಅಪಾಯಕಾರಿ ಯುದ್ಧಭೂಮಿಗಳಲ್ಲಿ ಸೇವೆ ಸಲ್ಲಿಸಿದ್ದಾರೆ ಮತ್ತು ಅನೇಕರು ತಮ್ಮ ಪ್ರಾಣವನ್ನೇ ಬಲಿದಾನ ಮಾಡಿದ್ದಾರೆ. ಶಾಂತಿಪಾಲನಾ ಕಾರ್ಯಾಚರಣೆಗಳಿಗೆ ಸೈನಿಕರನ್ನು ಕಳುಹಿಸುವ ದೇಶಗಳಿಗೆ ಭದ್ರತಾ ಮಂಡಳಿಯ ನಿರ್ಣಯಗಳಲ್ಲಿ ಹೆಚ್ಚಿನ ಪಾಲುಗಾರಿಕೆ ಇರಬೇಕು ಎಂದು ಭಾರತವು ಸತತವಾಗಿ ಪ್ರತಿಪಾದಿಸುತ್ತಲೇ ಬಂದಿದೆ. ಅನೇಕ ಸೈನಿಕ-ಕೊಡುಗೆ ನೀಡುವ ದೇಶಗಳು ಮಂಡಳಿಯ ಕಾಯಂ ನಿರ್ಧಾರ-ತೆಗೆದುಕೊಳ್ಳುವ ರಚನೆಗಳಿಂದ ಹೊರಗುಳಿದಿರುವುದರಿಂದ ಈ ವಾದವು ನೈತಿಕ ತೂಕವನ್ನು ಹೊಂದಿದೆ. ಹಿಂದೆ 8 ಬಾರಿ ಅಶಾಶ್ವತ ಸದಸ್ಯನಾಗಿ ಕಾರ್ಯನಿರ್ವಹಿಸಿದ ಅನುಭವವೂ ಭಾರತದ ಕೈಹಿಡಿಯಲಿದೆ. ಇತ್ತೀಚೆಗೆ 2021-22ರ ಅವಧಿಯಲ್ಲಿ ಭಾರತವು ಭಯೋತ್ಪಾದನಾ ನಿಗ್ರಹ, ಕಡಲ ಭದ್ರತೆ ಮತ್ತು ಶಾಂತಿಪಾಲನಾ ಸುಧಾರಣೆಗಳ ಪ್ರಮುಖ ಸಮಿತಿಗಳ ಅಧ್ಯಕ್ಷತೆ ವಹಿಸಿತ್ತು. ಕಡಲ ಭದ್ರತೆಯ ಕುರಿತು ಮಂಡಳಿಯಲ್ಲಿ ಐತಿಹಾಸಿಕ ಚರ್ಚೆಯೊಂದನ್ನು ಆಯೋಜಿಸಿದ್ದ ಭಾರತ ಸಮುದ್ರ ಮಾರ್ಗಗಳ ಸುರಕ್ಷತೆ, ನೌಕಾಯಾನದ ಸ್ವಾತಂತ್ರ್ಯ ಮತ್ತು ಕಡಲ್ಗಳ್ಳರ ಹಾವಳಿಯನ್ನು ತಡೆಗಟ್ಟುವ ಮಹತ್ವವನ್ನು ಒತ್ತಿಹೇಳಿತ್ತು. ಭಯೋತ್ಪಾದನೆಗೆ ಹಣಕಾಸು ಪೂರೈಕೆ, ಉದಯೋನ್ಮುಖ ತಂತ್ರಜ್ಞಾನಗಳು ಮತ್ತು ಭಯೋತ್ಪಾದಕ ಸಂಘಟನೆಗಳು ಡ್ರೋನ್ಗಳನ್ನು ದುರ್ಬಳಕೆ ಮಾಡಿಕೊಳ್ಳುತ್ತಿರುವ ಬಗ್ಗೆಯೂ ಭಾರತವು ಬಲವಾದ ಧ್ವನಿಯೆತ್ತಿತ್ತು. ತಾನು ಕೇವಲ ಮಂಡಳಿಯ ಸ್ಥಾನವನ್ನು ಅಲಂಕರಿಸುವುದಷ್ಟೇ ಅಲ್ಲ, ಹೊಸ ಭದ್ರತಾ ಸವಾಲುಗಳ ಕುರಿತಾದ ಚರ್ಚೆಗಳಿಗೆ ದಿಕ್ಕು ತೋರಬಲ್ಲೆ ಎಂಬುದನ್ನು ಈ ಕೊಡುಗೆಗಳು ಸಾಬೀತುಪಡಿಸಿವೆ.
ಏನೇ ಆದರೂ, ಭಾರತದ ಈ ಅಭಿಯಾನವನ್ನು ಕಾಯಂ ಸದಸ್ಯತ್ವದ ಅದರ ಅಂತಿಮ ಗುರಿಯಿಂದ ಪ್ರತ್ಯೇಕಿಸಿ ನೋಡಲಾಗದು. ಭದ್ರತಾ ಮಂಡಳಿಯ ಸುಧಾರಣೆಯ ಕೂಗು ಕಳೆದ ಮೂರು ದಶಕಗಳಿಂದ ಭಾರತದ ವಿದೇಶಾಂಗ ನೀತಿಯ ಪ್ರಮುಖ ಲಕ್ಷಣಗಳಲ್ಲೊಂದಾಗಿದೆ. ಮಂಡಳಿಯ ಪ್ರಸ್ತುತ ರಚನೆಯು ಇಂದಿನ ಜಾಗತಿಕ ವಾಸ್ತವಗಳಿಗೆ ಕನ್ನಡಿ ಹಿಡಿಯುತ್ತಿಲ್ಲ ಎಂಬುದು ಭಾರತದ ವಾದ. ರಚನೆಯಾಗಿ 80 ವರ್ಷಗಳೇ ಕಳೆದರೂ ಆಫ್ರಿಕಾ ಮತ್ತು ಲ್ಯಾಟಿನ್ ಅಮೆರಿಕ ಖಂಡಗಳಿಗೆ ಇನ್ನೂ ಕಾಯಂ ಪ್ರಾತಿನಿಧ್ಯವೇ ಸಿಕ್ಕಿಲ್ಲ. ವಿಶ್ವದ ಶೇ.60ರಷ್ಟು ಜನಸಂಖ್ಯೆಯನ್ನು ಹೊಂದಿರುವ ಏಷ್ಯಾ ಖಂಡದಲ್ಲಿ ಚೀನಾವನ್ನು ಹೊರತುಪಡಿಸಿದರೆ ಮತ್ತೊಂದು ಕಾಯಂ ಸದಸ್ಯ ರಾಷ್ಟ್ರವಿಲ್ಲ. G-4 ಗುಂಪಿನ ರಾಷ್ಟ್ರಗಳಾದ ಭಾರತ, ಬ್ರೆಜಿಲ್, ಜರ್ಮನಿ ಮತ್ತು ಜಪಾನ್ ದೇಶಗಳು ಮಂಡಳಿಯ ವಿಶ್ವಾಸಾರ್ಹತೆ ಕಾಯಂ ಮತ್ತು ಅಶಾಶ್ವತ ಸ್ಥಾನಗಳೆರಡರ ವಿಸ್ತರಣೆಯ ಮೇಲೆ ನಿಂತಿದೆ ಎಂದು ಪ್ರತಿಪಾದಿಸುತ್ತಿವೆ.

ಭಾರತದ ಕಾಯಂ ಸದಸ್ಯತ್ವದ ಹಕ್ಕೊತ್ತಾಯವು ಹಲವು ಆಧಾರಸ್ತಂಭಗಳ ಮೇಲೆ ನಿಂತಿದೆ. ಭಾರತ ವಿಶ್ವದ ಅತಿ ಹೆಚ್ಚು ಜನಸಂಖ್ಯೆ ಹೊಂದಿರುವ ದೇಶ, ಐದನೇ ಅತಿದೊಡ್ಡ ಆರ್ಥಿಕತೆ, ಶಾಂತಿಪಾಲನೆಗೆ ಅತಿ ಹೆಚ್ಚು ಕೊಡುಗೆ ನೀಡುವ ರಾಷ್ಟ್ರ, ಅಣ್ವಸ್ತ್ರ ಶಕ್ತಿಯಲ್ಲಿ ಮಾನ್ಯತೆ, ಅಭಿವೃದ್ಧಿಶೀಲ ಜಗತ್ತಿನ ಪ್ರಮುಖ ಧ್ವನಿ ಮತ್ತು ಹವಾಮಾನ ಮಾತುಕತೆಗಳು, ಕಡಲ ಭದ್ರತೆ, ಡಿಜಿಟಲ್ ಆಡಳಿತ ಹಾಗೂ ವಿಪತ್ತು ನಿರ್ವಹಣೆಯಲ್ಲಿ ಪ್ರಭಾವಶಾಲಿ ಪಾತ್ರಧಾರಿ; ಜನಸಂಖ್ಯಾ ಬಲ, ಆರ್ಥಿಕ ಸಾಮರ್ಥ್ಯ, ಸೇನಾ ಶಕ್ತಿ, ಪ್ರಜಾಸತ್ತಾತ್ಮಕ ಮೌಲ್ಯಗಳು ಮತ್ತು ರಾಜತಾಂತ್ರಿಕ ವ್ಯಾಪ್ತಿಯನ್ನು ಇಷ್ಟೊಂದು ಅದ್ಭುತವಾಗಿ ಮೇಳೈಸಿಕೊಂಡಿರುವ ರಾಷ್ಟ್ರಗಳು ಜಗತ್ತಿನಲ್ಲಿ ಬಹಳ ವಿರಳ.
ಆದರೂ ಕಾಯಂ ಸದಸ್ಯತ್ವದ ಹಾದಿ ರಾಜಕೀಯವಾಗಿ ಕಲ್ಲುಮುಳ್ಳುಗಳಿಂದ ಕೂಡಿದೆ. ಈ ಸುಧಾರಣೆಗೆ ವಿಶ್ವಸಂಸ್ಥೆಯ ಸನ್ನದಿಗೆ ತಿದ್ದುಪಡಿ ತರುವುದು ಅನಿವಾರ್ಯ. ಇದಕ್ಕೆ ಸಾಮಾನ್ಯ ಸಭೆಯ ಮೂರನೇ ಎರಡರಷ್ಟು ಬಹುಮತ ಬೇಕು ಮತ್ತು 5 ಕಾಯಂ ಸದಸ್ಯ ರಾಷ್ಟ್ರಗಳೂ ಸೇರಿದಂತೆ ಮೂರನೇ ಎರಡರಷ್ಟು ಸದಸ್ಯ ರಾಷ್ಟ್ರಗಳ ಅನುಮೋದನೆ ಬೇಕು. ಇದು ಪರೋಕ್ಷವಾಗಿ ಪ್ರತಿ ಕಾಯಂ ಸದಸ್ಯ ರಾಷ್ಟ್ರಕ್ಕೂ ಸುಧಾರಣೆಯ ಮೇಲೆಯೇ ನಿರಾಕರಣಾ ಅಧಿಕಾರವನ್ನು ನೀಡಿದಂತಾಗಿದೆ. ಭಾರತದ ಕಾಯಂ ಸದಸ್ಯತ್ವದ ಬಗ್ಗೆ ಚೀನಾ ಒಲವು ತೋರುತ್ತಿಲ್ಲ, ಜೊತೆಗೆ ಪ್ರಾದೇಶಿಕ ಹಿತಾಸಕ್ತಿಗಳ ಪೈಪೋಟಿಯೂ ಮಾತುಕತೆಗಳನ್ನು ಮತ್ತಷ್ಟು ಕಗ್ಗಂಟಾಗಿಸಿವೆ. ಭಾರತದ ಉಮೇದುವಾರಿಕೆಯನ್ನು ವಿರೋಧಿಸುವ ಪಾಕಿಸ್ತಾನವು ‘ಯುನೈಟಿಂಗ್ ಫಾರ್ ಕನ್ಸೆನ್ಸಸ್’ ಗುಂಪಿನ ಮೂಲಕ ಹೊಸ ಕಾಯಂ ಸದಸ್ಯರನ್ನು ಸೃಷ್ಟಿಸುವ ಪ್ರಸ್ತಾಪದ ವಿರುದ್ಧವೇ ಕೆಲಸ ಮಾಡುತ್ತಿದೆ. ಇಂತಹದ್ದೇ ಪ್ರಾದೇಶಿಕ ಪೈಪೋಟಿಗಳು ಬ್ರೆಜಿಲ್, ಜರ್ಮನಿ ಮತ್ತು ಜಪಾನ್ಗಳಿಗೂ ಅಡ್ಡಿಯಾಗಿವೆ. ಇದರ ಪರಿಣಾಮವಾಗಿ ವ್ಯಾಪಕ ಬೆಂಬಲದ ಮಾತುಗಳ ನಡುವೆಯೂ ಭದ್ರತಾ ಮಂಡಳಿಯ ಸುಧಾರಣೆಯ ಪ್ರಕ್ರಿಯೆ ನೆನೆಗುದಿಗೆ ಬಿದ್ದಿದೆ.
ಹಾಗಾಗಿಯೇ ಅಶಾಶ್ವತ ಸ್ಥಾನಕ್ಕಿರುವ ಭಾರತದ ಹೋರಾಟವು ತನ್ನದೇ ಆದ ಯುದ್ಧತಂತ್ರದ ಪ್ರಾಮುಖ್ಯತೆಯನ್ನು ಉಳಿಸಿಕೊಂಡಿದೆ. ಮಂಡಳಿಯಲ್ಲಿನ ಪ್ರತಿಯೊಂದು ಯಶಸ್ವಿ ಅವಧಿಯೂ ಭಾರತದ ರಾಜತಾಂತ್ರಿಕ ಘನತೆಯನ್ನು ಹೆಚ್ಚಿಸುತ್ತದೆ, ಜಾಗತಿಕ ಬಿಕ್ಕಟ್ಟುಗಳ ನಿರ್ವಹಣೆಯಲ್ಲಿ ಅದರ ಅನುಭವವನ್ನು ವಿಸ್ತರಿಸುತ್ತದೆ ಮತ್ತು ಕಾಯಂ ಸದಸ್ಯ ರಾಷ್ಟ್ರಗಳಿಂದ ನಿರೀಕ್ಷಿಸಲಾಗುವ ಬಹುತೇಕ ಜವಾಬ್ದಾರಿಗಳನ್ನು ತಾನು ಈಗಾಗಲೇ ನಿಭಾಯಿಸುತ್ತಿದ್ದೇನೆ ಎಂಬ ವಾದಕ್ಕೆ ಮತ್ತಷ್ಟು ಬಲ ತುಂಬುತ್ತದೆ. ಅಶಾಶ್ವತ ಸದಸ್ಯತ್ವವನ್ನು ಕೇವಲ ಸಮಾಧಾನಕರ ಬಹುಮಾನ ಎಂದು ಭಾವಿಸದೆ ತನ್ನ ನಾಯಕತ್ವವನ್ನು ಪ್ರದರ್ಶಿಸಲು ಭಾರತವು ಈ ಅವಕಾಶಗಳನ್ನು ನಿರಂತರವಾಗಿ ಬಳಸಿಕೊಳ್ಳುತ್ತಾ ಬಂದಿದೆ.
ಜಾಗತಿಕ ದಕ್ಷಿಣದ ಧ್ವನಿಯಾಗಿ ಹೊರಹೊಮ್ಮಲು ಭಾರತ ನೀಡುತ್ತಿರುವ ಒತ್ತು ಅಭಿಯಾನದ ಮತ್ತೊಂದು ಗಮನಾರ್ಹ ಲಕ್ಷಣ. ಈ ನಿಲುವಿಗೆ ಇತ್ತೀಚಿನ ವರ್ಷಗಳಲ್ಲಿ ಹೆಚ್ಚಿನ ಬಲ ಬಂದಿದೆ. ಅಂತಾರಾಷ್ಟ್ರೀಯ ಸಂಸ್ಥೆಗಳು ತಮ್ಮ ಆದ್ಯತೆಗಳನ್ನು ಸರಿಯಾಗಿ ಪ್ರತಿನಿಧಿಸುತ್ತಿಲ್ಲ ಎಂಬ ಭಾವನೆ ಅನೇಕ ಅಭಿವೃದ್ಧಿಶೀಲ ರಾಷ್ಟ್ರಗಳಲ್ಲಿದೆ. ಸಾಲದ ಸುಳಿ, ಆಹಾರ ಭದ್ರತೆ, ಸಮಾನ ಹವಾಮಾನ ನಿಧಿ, ಡಿಜಿಟಲ್ ಅಸಮಾನತೆ, ಸಾಂಕ್ರಾಮಿಕ ರೋಗಗಳನ್ನು ಎದುರಿಸುವ ಸನ್ನದ್ಧತೆ ಮತ್ತು ಸುಸ್ಥಿರ ಅಭಿವೃದ್ಧಿಯಂತಹ ವಿಷಯಗಳಿಗೆ ಸಾಂಪ್ರದಾಯಿಕ ಭದ್ರತಾ ಕಾಳಜಿಗಳಿಗೆ ಹೋಲಿಸಿದರೆ ಸಾಕಷ್ಟು ಗಮನ ಸಿಗುತ್ತಿಲ್ಲ. ಅಭಿವೃದ್ಧಿ ಮತ್ತು ಭದ್ರತೆಯನ್ನು ಒಟ್ಟಾಗಿ ಬೆಸೆಯಬಲ್ಲ ಪ್ರತಿಪಾದಕನಾಗಿ ತನ್ನನ್ನು ತಾನು ನೆಲೆಗೊಳಿಸಿಕೊಳ್ಳಲು ಭಾರತ ಪ್ರಯತ್ನಿಸುತ್ತಿದೆ. ಆದರೆ ಈ ಮಹತ್ವಾಕಾಂಕ್ಷೆಯು ತನ್ನದೇ ಆದ ಜವಾಬ್ದಾರಿಗಳನ್ನು ತರುತ್ತದೆ. ಜಾಗತಿಕ ದಕ್ಷಿಣವನ್ನು ಪ್ರತಿನಿಧಿಸುವುದೆಂದರೆ ಯಾವಾಗಲೂ ಒಂದೇ ದಿಕ್ಕಿನಲ್ಲಿರದ ವೈವಿಧ್ಯಮಯ ಹಿತಾಸಕ್ತಿಗಳ ನಡುವೆ ಸಮತೋಲನ ಕಾಯ್ದುಕೊಳ್ಳುವುದು ಎಂದರ್ಥ. ಆಫ್ರಿಕಾ, ಲ್ಯಾಟಿನ್ ಅಮೆರಿಕ, ಆಗ್ನೇಯ ಏಷ್ಯಾ, ಪೆಸಿಫಿಕ್ ದ್ವೀಪಗಳು ಮತ್ತು ಕೆರಿಬಿಯನ್ ರಾಷ್ಟ್ರಗಳು ವಿಭಿನ್ನ ಆದ್ಯತೆಗಳನ್ನು ಹೊಂದಿರುತ್ತವೆ. ಹಾಗಾಗಿ ತನ್ನ ವಾದವು ಕೇವಲ ಭಾಷಣಗಳಿಗೆ ಸೀಮಿತವಾಗದೆ ಭದ್ರತಾ ಮಂಡಳಿಯೊಳಗೆ ಪ್ರಾಯೋಗಿಕ ಕಾರ್ಯಕ್ರಮಗಳಾಗಿ ರೂಪಾಂತರಗೊಳ್ಳಬೇಕು ಎಂಬುದನ್ನು ಭಾರತ ಸಾಬೀತುಪಡಿಸಬೇಕಾಗುತ್ತದೆ. ಹೆಚ್ಚು ಅಂತರ್ಗತವಾದ ಶಾಂತಿ ನಿರ್ಮಾಣ, ದ್ವಂದ್ವ ನೀತಿಗಳಿಲ್ಲದೆ ಭಯೋತ್ಪಾದನಾ ನಿಗ್ರಹ, ಮಾನವೀಯ ನೆರವಿನ ಸಮನ್ವಯತೆಯನ್ನು ಸುಧಾರಿಸುವುದು, ಶಾಂತಿಪಾಲನಾ ಕಾರ್ಯಾಚರಣೆಗಳನ್ನು ಬಲಪಡಿಸುವುದು ಮತ್ತು ಸಂತ್ರಸ್ಥ ಪ್ರದೇಶಗಳೊಂದಿಗೆ ಹೆಚ್ಚಿನ ಸಮಾಲೋಚನೆಯನ್ನು ಖಾತರಿಪಡಿಸುವುದು ಇದರಲ್ಲಿ ಸೇರಿದೆ.
ಈ ಅಭಿಯಾನವು ಭಾರತದ ವಿದೇಶಾಂಗ ನೀತಿಯ ವಿಸ್ತಾರಗೊಳ್ಳುತ್ತಿರುವ ಆಯಾಮವನ್ನೂ ಪ್ರತಿಬಿಂಬಿಸುತ್ತದೆ. ದಶಕಗಳ ಕಾಲ ಅಂತಾರಾಷ್ಟ್ರೀಯ ಮಟ್ಟದಲ್ಲಿ ಸೀಮಿತ ಬದ್ಧತೆಗಳನ್ನು ಮಾತ್ರ ವಹಿಸಿಕೊಳ್ಳಲು ಇಷ್ಟಪಡುವ ಅತೀವ ಎಚ್ಚರಿಕೆಯ ರಾಷ್ಟ್ರ ಎಂದು ಭಾರತವನ್ನು ಪರಿಗಣಿಸಲಾಗಿತ್ತು. ಆದರೆ ಇಂದು ಜಾಗತಿಕ ವೇದಿಕೆಗಳಲ್ಲಿ ನಾಯಕತ್ವದ ಪಾತ್ರವನ್ನು ವಹಿಸಿಕೊಳ್ಳಲು ಅದು ಉತ್ಸುಕವಾಗಿದೆ. ಅಂತಾರಾಷ್ಟ್ರೀಯ ಸೌರ ಒಕ್ಕೂಟ, ವಿಪತ್ತು ನಿರೋಧಕ ಮೂಲಸೌಕರ್ಯಗಳ ಒಕ್ಕೂಟ, ಡಿಜಿಟಲ್ ಸಾರ್ವಜನಿಕ ಮೂಲಸೌಕರ್ಯ ಉಪಕ್ರಮಗಳು ಅಥವಾ ಇಂಡೋ-ಪೆಸಿಫಿಕ್ ವಲಯದಲ್ಲಿ ಸಾಗರ ಭದ್ರತಾ ಸಹಕಾರ ಹಾಗೂ ಜಾಗತಿಕ ಕಾರ್ಯಸೂಚಿಗಳನ್ನು ರೂಪಿಸುವಲ್ಲಿ ಭಾರತವು ಹೆಚ್ಚಿನ ಇಚ್ಛಾಶಕ್ತಿಯನ್ನು ಪ್ರದರ್ಶಿಸಿದೆ. ಆದ್ದರಿಂದ ‘ಶಾಂತಿ’ ಚೌಕಟ್ಟು ಕೇವಲ ನೀತಿ ಪ್ರತಿಪಾದನೆಯ ಹಂತದಿಂದ ಸಾಂಸ್ಥಿಕ ನಾಯಕತ್ವದ ಕಡೆಗಿನ ವಿಶಾಲವಾದ ಯುದ್ಧತಂತ್ರದ ಪಲ್ಲಟದ ಭಾಗವಾಗಿ ಮೂಡಿಬಂದಿದೆ. ಆದರೂ ನಿರೀಕ್ಷೆಗಳು ವಾಸ್ತವಿಕವಾಗಿರಬೇಕು. ಭದ್ರತಾ ಮಂಡಳಿಯ ಅಶಾಶ್ವತ ಸ್ಥಾನಕ್ಕೆ ತನ್ನದೇ ಆದ ಇತಿಮಿತಿಗಳಿವೆ. ಅಶಾಶ್ವತ ಸದಸ್ಯರಿಗೆ ನಿರಾಕರಣಾ ಅಧಿಕಾರವಿರುವುದಿಲ್ಲ, ಅವರ ಅಧಿಕಾರಾವಧಿ ಕೇವಲ ಎರಡು ವರ್ಷಗಳಿಗೆ ಸೀಮಿತವಾಗಿರುತ್ತದೆ ಮತ್ತು ಕಾರ್ಯಸೂಚಿಯನ್ನು ರೂಪಿಸುವಲ್ಲಿ ಐದು ಕಾಯಂ ಸದಸ್ಯ ರಾಷ್ಟ್ರಗಳ ಪ್ರಭಾವವೇ ಮಿತಿಮೀರಿರುತ್ತದೆ. ಫಲಿತಾಂಶಗಳನ್ನು ರೂಪಿಸುವ ಭಾರತದ ಸಾಮರ್ಥ್ಯವು ಸಾಂಸ್ಥಿಕ ಅಧಿಕಾರಕ್ಕಿಂತ ಹೆಚ್ಚಾಗಿ ಅದರ ಒಕ್ಕೂಟ ನಿರ್ಮಾಣದ ಕೌಶಲ್ಯ, ಮನವೊಲಿಸುವ ರಾಜತಾಂತ್ರಿಕತೆ ಮತ್ತು ವಿಷಯಾಧಾರಿತ ಪಾಲುದಾರಿಕೆಗಳ ಮೇಲೆಯೇ ಅವಲಂಬಿತವಾಗಿರುತ್ತದೆ. ಇದು ಸಂಖ್ಯಾಬಲದ ಮತಗಳಿಗಿಂತ ರಾಜತಾಂತ್ರಿಕ ಕೌಶಲ್ಯವೇ ಹೆಚ್ಚು ಮುಖ್ಯ ಎಂಬುದನ್ನು ಸಾರುತ್ತದೆ.
ಬಹುಪಕ್ಷೀಯ ವ್ಯವಸ್ಥೆಯೇ ಸಂಕಷ್ಟದಲ್ಲಿರುವ ಈ ಹೊತ್ತಿನಲ್ಲಿ ಭಾರತದ ಅಭಿಯಾನ ಶುರುವಾಗಿದೆ. ತಂತ್ರಗಾರಿಕೆಯ ಸವಾಲುಗಳನ್ನು ಎದುರಿಸಲು ಕ್ವಾಡ್, ಆಕಸ್, ಬ್ರಿಕ್ಸ್ ಮತ್ತು ಪ್ರಾದೇಶಿಕ ಭದ್ರತಾ ಪಾಲುದಾರಿಕೆಗಳಂತಹ ಸೀಮಿತ ಗುಂಪುಗಳ ಒಕ್ಕೂಟಗಳನ್ನು ಅನೇಕ ದೇಶಗಳು ಹೆಚ್ಚಾಗಿ ನೆಚ್ಚಿಕೊಳ್ಳುತ್ತಿವೆ. ಇಂತಹ ಹೊಂದಾಣಿಕೆಯ ಒಕ್ಕೂಟಗಳತ್ತ ಹೆಚ್ಚುತ್ತಿರುವ ಒಲವು ಸಾರ್ವತ್ರಿಕ ಸಂಸ್ಥೆಗಳ ಮೇಲಿನ ನಂಬಿಕೆ ಕುಸಿಯುತ್ತಿರುವುದರ ದ್ಯೋತಕವಾಗಿದೆ. ಆದ್ದರಿಂದ ಭಾರತದ ಮುಂದಿರುವ ಸವಾಲು ಇಮ್ಮಡಿಯಾಗಿದೆ. ಭದ್ರತಾ ಮಂಡಳಿಯ ಪ್ರಸ್ತುತತೆಯನ್ನು ಬಲಪಡಿಸುವುದರ ಜೊತೆಜೊತೆಗೇ ಛಿದ್ರಗೊಳ್ಳುತ್ತಿರುವ ಅಂತಾರಾಷ್ಟ್ರೀಯ ವ್ಯವಸ್ಥೆಗೆ ಅದು ಒಗ್ಗಿಕೊಳ್ಳಬೇಕಾಗಿದೆ. ಅಂತಿಮವಾಗಿ ಭದ್ರತಾ ಮಂಡಳಿ ಸ್ಥಾನಕ್ಕಾಗಿ ನಡೆಯುತ್ತಿರುವ ಭಾರತದ ಹೋರಾಟವನ್ನು ಒಂದು ದೊಡ್ಡ ಯುದ್ಧತಂತ್ರದ ಪಯಣದ ಭಾಗವಾಗಿ ಅರ್ಥಮಾಡಿಕೊಳ್ಳಬೇಕು. ತಜಕಿಸ್ತಾನದ ವಿರುದ್ಧ ಚುನಾವಣೆಯಲ್ಲಿ ಗೆಲ್ಲುವುದು ಮುಖ್ಯವಾದರೂ ಅದು ಕೇವಲ ಒಂದು ಮೈಲಿಗಲ್ಲಷ್ಟೇ. ಜಾಗತಿಕ ಆಡಳಿತದಲ್ಲಿ ಕಾಯಂ ಪಾಲುದಾರನಾಗಿ ಮನ್ನಣೆ ಗಳಿಸುವುದೇ ಅದರ ಅಂತಿಮ ಗುರಿ. ‘ಶಾಂತಿ’ ಚೌಕಟ್ಟು ಮೌಲ್ಯಗಳು, ವಿಶ್ವಾಸ ಮತ್ತು ನಿಷ್ಠೆಯ ಸುತ್ತ ಹೆಣೆದ ಸುಸಂಬದ್ಧ ರಾಜತಾಂತ್ರಿಕ ನಿರೂಪಣೆಯನ್ನು ಒದಗಿಸುತ್ತದೆ. ಈ ದೃಷ್ಟಿಕೋನವು ಯಶಸ್ವಿಯಾಗುತ್ತದೆಯೇ ಎಂಬುದು ಕೇವಲ ಚುನಾವಣೆಯ ಗೆಲುವಿನ ಮೇಲೆ ಮಾತ್ರವಲ್ಲ, ಮುಂಬರುವ ಬಿಕ್ಕಟ್ಟುಗಳ ಸಂದರ್ಭದಲ್ಲಿ ಈ ತತ್ತ್ವಗಳನ್ನು ಪ್ರಾಯೋಗಿಕ ನಾಯಕತ್ವವನ್ನಾಗಿ ಪರಿವರ್ತಿಸುವ ಭಾರತದ ಸಾಮರ್ಥ್ಯದ ಮೇಲೆಯೂ ಅವಲಂಬಿತವಾಗಿರುತ್ತದೆ.
ಭೌಗೋಳಿಕ ರಾಜಕೀಯ ಪೈಪೋಟಿ, ಸಾಂಸ್ಥಿಕ ನಿಷ್ಕ್ರಿಯತೆ ಮತ್ತು ಅಭಿವೃದ್ಧಿಶೀಲ ಪ್ರಪಂಚದ ಹೆಚ್ಚುತ್ತಿರುವ ಬೇಡಿಕೆಗಳಿಂದಲೇ ವ್ಯಾಖ್ಯಾನಿಸಲ್ಪಡುತ್ತಿರುವ ಈ ಯುಗದಲ್ಲಿ ಭಾರತದ ಉಮೇದುವಾರಿಕೆಯು ರಾಷ್ಟ್ರೀಯ ಪ್ರತಿಷ್ಠೆಯನ್ನೂ ಮೀರಿದ ಮಹತ್ವವನ್ನು ಹೊಂದಿದೆ. 21ನೇ ಶತಮಾನದಲ್ಲಿ ಅಂತಾರಾಷ್ಟ್ರೀಯ ವ್ಯವಸ್ಥೆಯ ನಿಯಮಗಳನ್ನು ಯಾರು ರೂಪಿಸಬೇಕು ಎಂಬ ಬಗೆಗಿನ ಬಹುದೊಡ್ಡ ಚರ್ಚೆಯನ್ನು ಇದು ಬಿಂಬಿಸುತ್ತದೆ. ವಿಶ್ವಸಂಸ್ಥೆಯು ತನ್ನ ಅಸ್ತಿತ್ವವನ್ನು ಉಳಿಸಿಕೊಳ್ಳಬೇಕಾದರೆ ಅದು ಹೆಚ್ಚು ಪ್ರಾತಿನಿಧಿಕವಾಗಿ, ಹೆಚ್ಚು ಸ್ಪಂದನಾಶೀಲವಾಗಿ ಮತ್ತು ಹೆಚ್ಚು ಪರಿಣಾಮಕಾರಿಯಾಗಿ ರೂಪುಗೊಳ್ಳಲೇಬೇಕು. ಹಾಗಾಗಿ ಭಾರತದ ಈ ಅಭಿಯಾನವು ಭದ್ರತಾ ಮಂಡಳಿಯಲ್ಲಿ ಕೇವಲ ಮತ್ತೊಂದು ಎರಡು ವರ್ಷಗಳ ಅವಧಿಯನ್ನು ಪಡೆಯುವ ಉದ್ದೇಶದ್ದಲ್ಲ. ಬದಲಾಗುತ್ತಿರುವ ಜಾಗತಿಕ ವಾಸ್ತವಗಳೊಂದಿಗೆ ಜಾಗತಿಕ ಆಡಳಿತವೂ ವಿಕಸನಗೊಳ್ಳಬೇಕು ಮತ್ತು ಆ ಬಹುದೊಡ್ಡ ರೂಪಾಂತರದ ಕೇಂದ್ರಬಿಂದುವಾಗಲು ಭಾರತ ಸಜ್ಜಾಗಿದೆ ಎಂಬ ಬಲವಾದ ಸಂದೇಶವನ್ನು ಜಗತ್ತಿಗೆ ಸಾರುವ ಪ್ರಖರ ನಡೆಯಿದು.
ವಿಕ್ರಮಕ್ಕಾಗಿ ಬರೆದ ಇಂಗ್ಲಿಷ್ ಲೇಖನದ ಕನ್ನಡಾನುವಾದ – ತೇಜಸ್ ಹೆಚ್. ಬಾಡಾಲ
