ನ್ಯೂಯಾರ್ಕ್: “ವೈವಿಧ್ಯತೆಯು ನೈಸರ್ಗಿಕವಾಗಿದ್ದು, ಏಕತೆಯೇ ಅಂತಿಮ ಸತ್ಯವಾಗಿದೆ. ನಮಗೆ ವಿಭಿನ್ನ ಶರೀರಗಳಿದ್ದರೂ, ಆತ್ಮತತ್ವ ಒಂದೇ ಆಗಿದ್ದು ನಾವೆಲ್ಲರೂ ಪರಸ್ಪರ ಸೇರಿದವರಾಗಿದ್ದೇವೆ,” ಎಂದು ರಾಷ್ಟ್ರೀಯ ಸ್ವಯಂಸೇವಕ ಸಂಘದ (ಆರ್ಎಸ್ಎಸ್) ಸರಸಂಘಚಾಲಕ್ ಪೂಜನೀಯ ಡಾ. ಮೋಹನ್ ಭಾಗವತ್ ಅಭಿಪ್ರಾಯಪಟ್ಟಿದ್ದಾರೆ.
ಅಮೆರಿಕದ ನ್ಯೂಯಾರ್ಕ್ನ ಪ್ರತಿಷ್ಠಿತ ಮ್ಯಾಡಿಸನ್ ಸ್ಕ್ವೇರ್ ಗಾರ್ಡನ್ನಲ್ಲಿ ಅಮೆರಿಕನ್ ಹಿಂದೂಸ್ ಫಾರ್ ಎಂಗೇಜ್ಮೆಂಟ್ ಅಂಡ್ ಡೈಲಾಗ್ (AHEAD Forum) ಆಯೋಜಿಸಿದ್ದ ‘ಯುನಿವರ್ಸಲ್ ಒನ್ನೆಸ್ ಸೆಲೆಬ್ರೇಷನ್’ (ಸಾಕಲ್ಯ ಏಕತಾ ಉತ್ಸವ) ಕಾರ್ಯಕ್ರಮದಲ್ಲಿ ಅವರು ದಿಕ್ಸೂಚಿ ಭಾಷಣ ಮಾಡಿದರು.
ಭಾಷಣದ ಪ್ರಮುಖ ಅಂಶಗಳು:
ಸಂಸ್ಕೃತಿ ಮತ್ತು ರಾಷ್ಟ್ರಧರ್ಮ: “ಅಮೆರಿಕ ಎಂದರೆ ‘ಬಹುತ್ವ’ ಎನ್ನುವ ಪದ ನೆನಪಾದರೆ, ಭಾರತ ಎಂದರೆ ‘ವೈವಿಧ್ಯತೆಯಲ್ಲಿ ಏಕತೆ’ ನೆನಪಾಗುತ್ತದೆ. ರಾಷ್ಟ್ರಗಳು ಕೇವಲ ಭೌಗೋಳಿಕ ಗಡಿಗಳಲ್ಲ. ಸ್ವಾಮಿ ವಿವೇಕಾನಂದರು ಹೇಳಿದಂತೆ, ಪ್ರತಿಯೊಂದು ರಾಷ್ಟ್ರಕ್ಕೂ ಜಗತ್ತಿಗೆ ನೀಡಲು ಒಂದು ಸಂದೇಶ ಮತ್ತು ತಲುಪಬೇಕಾದ ಗಮ್ಯವಿದೆ. ಆ ವೈವಿಧ್ಯತೆಯನ್ನು ಗೌರವಿಸಿ, ಆಚರಿಸುವುದರ ಜೊತೆಗೆ ಏಕತೆಯ ಭಾವನೆಯನ್ನು ನಾವು ಸದಾ ಕಾಯ್ದುಕೊಳ್ಳಬೇಕು” ಎಂದರು.
ಧರ್ಮದ ನಿಜವಾದ ಅರ್ಥ: ಅನ್ಯರನ್ನು ನಿಯಂತ್ರಿಸುವ ಪ್ರವೃತ್ತಿಯನ್ನು ಟೀಕಿಸಿದ ಅವರು, “ಸಮಾಜವನ್ನು ನಿಯಂತ್ರಿಸುವುದು ಧರ್ಮವಲ್ಲ; ಬದಲಿಗೆ ಎಲ್ಲರನ್ನೂ ಒಟ್ಟುಗೂಡಿಸುವ, ಸರಿದೂಗಿಸುವ ಮತ್ತು ಮಧ್ಯಮ ಮಾರ್ಗವನ್ನು ತೋರಿಸುವ ತತ್ವವೇ ಧರ್ಮ” ಎಂದು ವ್ಯಾಖ್ಯಾನಿಸಿದರು.
ಪರಿಸರ ಹಾಗೂ ಸಮಾಜಕ್ಕೆ ಕೃತಜ್ಞತೆ: “ನಾವು ಉಣ್ಣುವ ಅನ್ನ, ಉಡುವ ಬಟ್ಟೆಯ ಹಿಂದೆ ರೈತರು ಮತ್ತು ಕಾರ್ಮಿಕರ ಶ್ರಮವಿದೆ. ಪ್ರಕೃತಿ ಮತ್ತು ಸಮಾಜಕ್ಕೆ ಪ್ರತ್ಯುಪಕಾರ ಮಾಡುವುದು ನಮ್ಮ ಆದ್ಯ ಕರ್ತವ್ಯ” ಎಂದು ಕಿವಿಮಾತು ಹೇಳಿದರು.
ಪ್ರವಾಸಿ ಭಾರತೀಯರಿಗೆ ಕಿವಿಮಾತು: “ತಮ್ಮ ಕರ್ಮಭೂಮಿಗೆ (ಅಮೆರಿಕ) ನಿಷ್ಠೆಯಿಂದಿದ್ದು, ಜನ್ಮಭೂಮಿಯ (ಭಾರತ) ಉನ್ನತ ಮೌಲ್ಯಗಳನ್ನು ತಮ್ಮ ಆಚರಣೆಯ ಮೂಲಕ ಜಗತ್ತಿಗೆ ತೋರಿಸಿಕೊಡಬೇಕು” ಎಂದು ಪ್ರವಾಸಿ ಭಾರತೀಯರಿಗೆ ಕರೆ ನೀಡಿದರು.

ಐತಿಹಾಸಿಕ ‘ಏಕತಾ ನಿರ್ಣಯ’ ಹಾಗೂ ರಕ್ಷಾಬಂಧನ:
ಈ ವಿಶೇಷ ಸಮಾವೇಶದಲ್ಲಿ ಜಗತ್ತಿನ 30 ದೇಶಗಳ ಸುಮಾರು 180 ಧಾರ್ಮಿಕ ಮುಖಂಡರು ಭಾಗವಹಿಸಿ ‘ಒಂದು ಜಗತ್ತು – ಒಂದು ಮಾನವೀಯತೆ’ ಎಂಬ ಪಂಚಸೂತ್ರಗಳ ಕ್ರಿಯಾ ಯೋಜನೆಯ ನಿರ್ಣಯವನ್ನು ಅಂಗೀಕರಿಸಿದರು. ಧರ್ಮದ ಹೆಸರಿನಲ್ಲಿ ನಡೆಯುವ ದ್ವೇಷ, ಹಿಂಸೆ ಮತ್ತು ಅವಮಾನಗಳನ್ನು ಒಮ್ಮತದಿಂದ ಖಂಡಿಸಲಾಯಿತು.
ಕಾರ್ಯಕ್ರಮದ ಆರಂಭದಲ್ಲಿ ಏಕತೆಯ ಸಂಕೇತವಾಗಿ ರಕ್ಷಾಬಂಧನವನ್ನು ಆಚರಿಸಲಾಯಿತು. ಭಾಗವಹಿಸಿದ್ದ ಗಣ್ಯರು ಪರಸ್ಪರ ರಾಖಿ ಕಟ್ಟಿ ಸಹೋದರತ್ವದ ಸಂದೇಶ ಸಾರಿದರು. ಈ ಬೃಹತ್ ಉತ್ಸವದಲ್ಲಿ 250ಕ್ಕೂ ಹೆಚ್ಚು ಸಂಸ್ಥೆಗಳು ಕೈಜೋಡಿಸಿದ್ದು, ಜಗತ್ತಿನ 29 ದೇಶಗಳು ಹಾಗೂ ಅಮೆರಿಕದ 39 ರಾಜ್ಯಗಳ 6,000ಕ್ಕೂ ಹೆಚ್ಚು ಪ್ರತಿನಿಧಿಗಳು ಪಾಲ್ಗೊಂಡಿದ್ದರು.
ವಿಕ್ರಮ ಓದುಗರ ವಾಟ್ಸಪ್ ಬಳಗಕ್ಕೆ ಸೇರಲು ಈ ಸಂಖ್ಯೆಯನ್ನು ನಿಮ್ಮ ಮೊಬೈಲ್ನಲ್ಲಿ ಸೇವ್ ಮಾಡಿಕೊಂಡು ನಮಗೊಂದು ಸಂದೇಶ ಕಳುಹಿಸಿ. ಮೊಬೈಲ್ ಸಂಖ್ಯೆ: 98800 21122
