ಮ್ಯಾಡಿಸನ್ ಸ್ಕ್ವೇರ್ ಗಾರ್ಡನ್ನಲ್ಲಿ “ಯೂನಿವರ್ಸಲ್ ಒನ್-ನೆಸ್ ಸೆಲೆಬ್ರೇಷನ್”
ನ್ಯೂಯಾರ್ಕ್, ಅಮೆರಿಕ: “ವೈವಿಧ್ಯತೆಯು ನೈಸರ್ಗಿಕವಾದದ್ದು ಮತ್ತು ಏಕತೆಯೇ ಪರಮ ಸತ್ಯ. ವಿಭಿನ್ನ ಶರೀರಗಳು ಮತ್ತು ವೈವಿಧ್ಯತೆಗಳಿದ್ದಾಗ್ಯೂ ನಾವೆಲ್ಲರೂ ಪರಸ್ಪರ ಒಬ್ಬರಿಗೊಬ್ಬರು ಸಂಬಂಧಿಸಿದವರಾಗಿದ್ದೇವೆ” ಎಂದು ಆರ್ಎಸ್ಎಸ್ (RSS) ಸರಸಂಘಚಾಲಕ ಪೂಜನೀಯ ಡಾ. ಮೋಹನ್ ಭಾಗವತ್ ಅವರು ಪ್ರತಿಪಾದಿಸಿದ್ದಾರೆ.
ಅಮೆರಿಕದ ನ್ಯೂಯಾರ್ಕ್ನ ಐತಿಹಾಸಿಕ ‘ಮ್ಯಾಡಿಸನ್ ಸ್ಕ್ವೇರ್ ಗಾರ್ಡನ್’ನಲ್ಲಿ ಆಯೋಜಿಸಲಾಗಿದ್ದ “ಯೂನಿವರ್ಸಲ್ ಒನ್-ನೆಸ್ ಸೆಲೆಬ್ರೇಷನ್” (ಆಲ್ ಹೈಟ್ಸ್ / AHEAD ಫೋರಂ ಆಯೋಜನೆ) ಕಾರ್ಯಕ್ರಮದಲ್ಲಿ ಮುಖ್ಯ ಭಾಷಣಕಾರರಾಗಿ ಅವರು ಮಾತನಾಡುತ್ತಿದ್ದರು.
ವಿಶ್ವಕ್ಕೆ ಭಾರತದ ಸಂದೇಶ ಮತ್ತು ಹೊಣೆಗಾರಿಕೆ: “ಅಮೆರಿಕ ಎಂದ ತಕ್ಷಣ ‘ಬಹುತ್ವ’ (Pluralism) ಎಂಬ ಪದ ಪ್ರಸ್ತಾಪವಾದರೆ, ಭಾರತ (ಭಾರತೀಯತೆ) ಎಂದಾಗ ‘ವೈವಿಧ್ಯತೆಯಲ್ಲಿ ಏಕತೆ’ ಎಂಬ ತತ್ವ ನೆನಪಾಗುತ್ತದೆ. ಭಾರತಕ್ಕೆ ಈ ಏಕತೆ ಮತ್ತು ವೈವಿಧ್ಯತೆ ಎರಡೂ ಅದರ ಡಿಎನ್ಎ (DNA) ನಲ್ಲೇ ಇದೆ. ರಾಷ್ಟ್ರಗಳು ಕೇವಲ ಭೌಗೋಳಿಕ ಗಡಿಗಳಲ್ಲ; ಜಗತ್ತಿನ ಸೃಷ್ಟಿಯ ವಿನ್ಯಾಸದಲ್ಲಿ ಪ್ರತಿಯೊಂದು ರಾಷ್ಟ್ರಕ್ಕೂ ಒಂದು ನಿರ್ದಿಷ್ಟ ಕರ್ತವ್ಯ ಮತ್ತು ಉದ್ದೇಶವಿದೆ” ಎಂದು ಸರಸಂಘಚಾಲಕರು ಹೇಳಿದರು.
ಸ್ವಾಮಿ ವಿವೇಕಾನಂದರ ವಿಚಾರಗಳನ್ನು ಸ್ಮರಿಸಿದ ಅವರು, “ಭಾರತದ ಪ್ರಮುಖ ಧ್ವೇಯವೆಂದರೆ ಪ್ರಪಂಚಕ್ಕೆ ಈ ಏಕತೆಯ ಅರಿವನ್ನು ಮೂಡಿಸುವುದು. ನಾವು ಧರ್ಮದ ಮೂಲಕ ಸನ್ಮಾರ್ಗ, ಸಮತೋಲನ ಮತ್ತು ಸಾಮರಸ್ಯವನ್ನು ಕಾಪಾಡಿಕೊಳ್ಳಬೇಕು. ನಮಗೆ ಆಹಾರ ನೀಡುವ ರೈತರು, ಬಟ್ಟೆ ನೀಡುವ ಕಾರ್ಮಿಕರು ಸೇರಿದಂತೆ ಈ ಸಮಾಜಕ್ಕೆ ಮತ್ತು ಪ್ರಕೃತಿಗೆ ನಾವು ಸದಾ ಋಣಿಯಾಗಿರುತ್ತೇವೆ. ಹೀಗಾಗಿ ಸಮಾಜಕ್ಕೆ ಮರಳಿ ನೀಡುವುದು (Giving Back) ನಮ್ಮ ಕರ್ತವ್ಯ” ಎಂದರು.
ಎರಡು ಪ್ರವೃತ್ತಿಗಳು ಹಾಗೂ ‘ಧರ್ಮ’ದ ವ್ಯಾಖ್ಯಾನ: ಜಗತ್ತಿನಲ್ಲಿ ಎರಡು ರೀತಿಯ ಆಲೋಚನೆಗಳಿವೆ ಎಂದು ವಿವರಿಸಿದ ಅವರು, “ಒಂದು ಪ್ರವೃತ್ತಿ ‘ಬಾಳು ಮತ್ತು ಬಾಳಲು ಬಿಡು’ (Live and Let Live) ಎಂಬುದಾದರೆ, ಮತ್ತೊಂದು ‘ನಮಗೆ ಶರಣಾದವರನ್ನು ಮಾತ್ರ ಬದುಕಲು ಬಿಡುತ್ತೇವೆ’ ಎಂಬ ದುರಹಂಕಾರದ ಧೋರಣೆ. ನಮಗೆ ಕಿವಿಗೊಡಲಿ ಬಿಡಲಿ, ಪ್ರತಿಯೊಬ್ಬ ಮಾನವನೂ ಒಂದೇ ಎಂಬ ಭಾವನೆಯಿಂದ ಪ್ರೀತಿ-ಸಹೋದರತ್ವದಿಂದ ಬಾಳುವುದೇ ನಿಜವಾದ ‘ಧರ್ಮ’. ಇದೇ ಭಾರತದ ಜೀವನ ಪದ್ಧತಿ” ಎಂದು ಹೇಳಿದರು.
ಅನಿವಾಸಿ ಭಾರತೀಯರಿಗೆ ಕರೆ ನೀಡಿದ ಅವರು, ತಮ್ಮ ಕರ್ಮಭೂಮಿಗೆ (ತಾವು ವಾಸಿಸುವ ದೇಶಕ್ಕೆ) ಸಂಪೂರ್ಣ ನಿಷ್ಠೆ ತೋರಿಸುತ್ತಲೇ, ಜನ್ಮಭೂಮಿಯ (ಭಾರತದ) ಸಾಂಸ್ಕೃತಿಕ ಮೌಲ್ಯಗಳನ್ನು ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಕಿವಿಮಾತು ಹೇಳಿದರು.
180 ಧಾರ್ಮಿಕ ನಾಯಕರಿಂದ ‘ಒಂದು ಜಗತ್ತು – ಒಂದು ಮಾನವೀಯತೆ’ ಪ್ರಸ್ತಾವನೆ: ಈ ಬೃಹತ್ ಸಮಾವೇಶದಲ್ಲಿ ಪ್ರಪಂಚದ 30 ದೇಶಗಳ 180ಕ್ಕೂ ಹೆಚ್ಚು ಧಾರ್ಮಿಕ ನಾಯಕರು ಭಾಗವಹಿಸಿ, ‘ಒಂದು ಜಗತ್ತು – ಒಂದು ಮಾನವೀಯತೆ’ (One World One Humanity) ಎಂಬ 5 ಪ್ರಮುಖ ಅಂಶಗಳ ಕ್ರಿಯಾ ಯೋಜನೆಯನ್ನು (Call for Action) ಅಂಗೀಕರಿಸಿದರು. ಯಾವುದೇ ಸಮುದಾಯದ ಮೇಲಿನ ಹಿಂಸೆ, ದ್ವೇಷ ಮತ್ತು ಅವಮಾನಗಳನ್ನು ಖಂಡಿಸಿದ ನಾಯಕರು, ಧರ್ಮದ ಹೆಸರಿನಲ್ಲಿ ಹಿಂಸೆಯನ್ನು ಬೆಂಬಲಿಸುವುದಿಲ್ಲ ಎಂದು ಪ್ರತಿಜ್ಞೆ ಮಾಡಿದರು.
ಕಾರ್ಯಕ್ರಮದ ಆರಂಭದಲ್ಲಿ ರಕ್ಷಾ ಬಂಧನ ಹಬ್ಬವನ್ನು ಆಚರಿಸಲಾಯಿತು. ಭಾಗವಹಿಸಿದ್ದ ಪ್ರತಿಯೊಬ್ಬರೂ ಪರಸ್ಪರ ರಾಖಿ ಕಟ್ಟುವ ಮೂಲಕ ಒಗ್ಗಟ್ಟಿನ ಸಂದೇಶ ಸಾರಿದರು. ಈ ಐತಿಹಾಸಿಕ ಕಾರ್ಯಕ್ರಮಕ್ಕಾಗಿ 250ಕ್ಕೂ ಹೆಚ್ಚು ಸಂಸ್ಥೆಗಳು ಒಂದಾಗಿದ್ದು, ಅಮೆರಿಕದ 39 ರಾಜ್ಯಗಳ 850 ನಗರಗಳಿಂದ ಹಾಗೂ ವಿಶ್ವದ 29 ದೇಶಗಳಿಂದ ಸುಮಾರು 6,000ಕ್ಕೂ ಹೆಚ್ಚು ಪ್ರತಿನಿಧಿಗಳು ಭಾಗವಹಿಸಿದ್ದರು.
ವಿಕ್ರಮ ಓದುಗರ ವಾಟ್ಸಪ್ ಬಳಗಕ್ಕೆ ಸೇರಲು ಈ ಸಂಖ್ಯೆಯನ್ನು ನಿಮ್ಮ ಮೊಬೈಲ್ನಲ್ಲಿ ಸೇವ್ ಮಾಡಿಕೊಂಡು ನಮಗೊಂದು ಸಂದೇಶ ಕಳುಹಿಸಿ. ಮೊಬೈಲ್ ಸಂಖ್ಯೆ: 98800 21122
