ವಾರಾಣಸಿ: ಅಖಿಲ ಭಾರತ ವಿದ್ಯಾರ್ಥಿ ಪರಿಷತ್ (ABVP) ವತಿಯಿಂದ ‘ಅರಾಜಕತೆಯನ್ನು ನಿಲ್ಲಿಸಿ– ಪ್ರಜಾಪ್ರಭುತ್ವವನ್ನು ಅಪ್ಪಿಕೊಳ್ಳಿ’ (“Stop Anarchy – Embrace Democracy”) ಅಭಿಯಾನದಡಿ ಹಿಮಾಚಲ ಪ್ರದೇಶ ವಿಶ್ವವಿದ್ಯಾಲಯ ಹಾಗೂ ವಾರಣಾಸಿಯ ಮಹಾತ್ಮ ಗಾಂಧಿ ಕಾಶಿ ವಿದ್ಯಾಪೀಠದಲ್ಲಿ ಬೃಹತ್ ಪ್ರತಿಭಟನೆಗಳು ಮತ್ತು ರ್ಯಾಲಿಗಳನ್ನು ಆಯೋಜಿಸಲಾಯಿತು.
ಪ್ರಜಾಸತ್ತಾತ್ಮಕ ಮೌಲ್ಯಗಳು, ಸಾವಿಧಾನಿಕ ಆಡಳಿತ, ರಾಷ್ಟ್ರೀಯ ಐಕ್ಯತೆ ಹಾಗೂ ಶಾಂತಿ ಮತ್ತು ಸುವ್ಯವಸ್ಥೆಯನ್ನು ಎತ್ತಿಹಿಡಿಯುವ ಉದ್ದೇಶದಿಂದ ಈ ಪ್ರತಿಭಟನಾ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿತ್ತು. ಹಿಂಸಾಚಾರ ಮತ್ತು ಅರಾಜಕತಾ ತಂತ್ರಗಳಿಗೆ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಯಾವುದೇ ಸ್ಥಾನವಿಲ್ಲ ಎಂದು ಪ್ರತಿಭಟನಾಕಾರರು ಈ ವೇಳೆ ಸ್ಪಷ್ಟಪಡಿಸಿದರು.
ಹಿಮಾಚಲ ಪ್ರದೇಶ ವಿಶ್ವವಿದ್ಯಾಲಯದಲ್ಲಿ ಧರಣಿ ಮತ್ತು ಜಾಗೃತಿ:
ಹಿಮಾಚಲ ಪ್ರದೇಶ ವಿಶ್ವವಿದ್ಯಾಲಯದಲ್ಲಿ ಎಬಿವಿಪಿ ಘಟಕದ ವತಿಯಿಂದ ‘ಅರಾಜಕತೆ ನಿಲ್ಲಿಸಿ– ಪ್ರಜಾಪ್ರಭುತ್ವ ಅಪ್ಪಿಕೊಳ್ಳಿ’ ಎಂಬ ಶೀರ್ಷಿಕೆಯಡಿ ಧರಣಿ ನಡೆಸಲಾಯಿತು. ಪ್ರಜಾಪ್ರಭುತ್ವದ ಮೂಲತತ್ವಗಳು, ದೇಶದ ಐಕ್ಯತೆ ಮತ್ತು ಸಮಗ್ರತೆ ಹಾಗೂ ಪ್ರಜಾಸತ್ತಾತ್ಮಕ ಸಂಸ್ಥೆಗಳನ್ನು ಬಲಪಡಿಸುವಲ್ಲಿ ಯುವಜನತೆಯ ಜವಾಬ್ದಾರಿಯನ್ನು ಈ ಪ್ರತಿಭಟನೆ ಎತ್ತಿಹಿಡಿಯಿತು. ರಾಷ್ಟ್ರದ ಹಿತಾಸಕ್ತಿಯನ್ನು ಕಾಪಾಡುವಲ್ಲಿ ಯುವಕರು ಸದಾ ಜಾಗರೂಕರಾಗಿರಬೇಕು ಮತ್ತು ಸಾವಿಧಾನಿಕ ನಿಯಮಗಳನ್ನು ಎತ್ತಿಹಿಡಿಯುವಲ್ಲಿ ತಮ್ಮ ಕೊಡುಗೆಯನ್ನು ನೀಡಬೇಕು ಎಂದು ವಿದ್ಯಾರ್ಥಿಗಳಿಗೆ ಕರೆ ನೀಡಲಾಯಿತು.
ವಾರಣಾಸಿಯ ಕಾಶಿ ವಿದ್ಯಾಪೀಠದಲ್ಲಿ ವಿದ್ಯಾರ್ಥಿಗಳ ಬೃಹತ್ ಸಹಭಾಗಿತ್ವ:
ವಾರಣಾಸಿಯ ಮಹಾತ್ಮ ಗಾಂಧಿ ಕಾಶಿ ವಿದ್ಯಾಪೀಠದಲ್ಲಿ ಎಬಿವಿಪಿ ವಾರಣಾಸಿ ಮಹಾನಗರ ಘಟಕದ ನೇತೃತ್ವದಲ್ಲಿ ನಡೆದ ಈ ಅಭಿಯಾನದಲ್ಲಿ ಅಪಾರ ಸಂಖ್ಯೆಯ ವಿದ್ಯಾರ್ಥಿಗಳು ಪಾಲ್ಗೊಂಡರು. ಪ್ರಜಾಪ್ರಭುತ್ವ, ಶಾಂತಿ ಹಾಗೂ ಕಾನೂನು ಸುವ್ಯವಸ್ಥೆಯ ಪರವಾಗಿ ವಿದ್ಯಾರ್ಥಿಗಳು ಧ್ವನಿ ಎತ್ತಿದರು. ಪ್ರಜಾಸತ್ತಾತ್ಮಕ ವ್ಯವಸ್ಥೆಯಲ್ಲಿ ಹಿಂಸೆ, ಅರಾಜಕತೆ ಮತ್ತು ಗೊಂದಲಗಳಿಗೆ ಯಾವುದೇ ಅವಕಾಶವಿಲ್ಲ ಎಂಬುದನ್ನು ಈ ರ್ಯಾಲಿಯು ಪುನರುಚ್ಚರಿಸಿತು.
ಸಂವಿಧಾನಿಕ ಆಡಳಿತ ಮತ್ತು ಪ್ರಜಾಸತ್ತಾತ್ಮಕ ಮೌಲ್ಯಗಳಿಗೆ ಒತ್ತು:
ಈ ಅಭಿಯಾನದ ಮೂಲಕ ಎಬಿವಿಪಿಯು ಪ್ರಜಾಸತ್ತಾತ್ಮಕ ಮೌಲ್ಯಗಳನ್ನು ರಕ್ಷಿಸುವ ಮತ್ತು ಸಾರ್ವಜನಿಕ ಜೀವನವು ಸಾವಿಧಾನಿಕ ತತ್ವಗಳಿಂದ ಮಾರ್ಗದರ್ಶಿಸಲ್ಪಡುವ ಅಗತ್ಯತೆಯನ್ನು ಒತ್ತಿಹೇಳಿತು. ಕಾನೂನಿನ ಆಡಳಿತ ಗೌರವ ಹಾಗೂ ಸ್ಥಾಪಿತ ಪ್ರಜಾಸತ್ತಾತ್ಮಕ ಪ್ರಕ್ರಿಯೆಗಳಿಗೆ ಬದ್ಧರಾಗಿ ಪ್ರಜಾಪ್ರಭುತ್ವ ವ್ಯವಸ್ಥೆಯು ಸಂವಿಧಾನದ ಚೌಕಟ್ಟಿನೊಳಗೆ ಕಾರ್ಯನಿರ್ವಹಿಸಬೇಕು ಎಂದು ಸಂಘಟನೆಯು ತಿಳಿಸಿದೆ.
ಪ್ರಜಾಸತ್ತಾತ್ಮಕ ಸಂಪ್ರದಾಯಗಳನ್ನು ರಕ್ಷಿಸುವಲ್ಲಿ ವಿದ್ಯಾರ್ಥಿಗಳ ಪಾತ್ರದ ಕುರಿತಾಗಿಯೂ ಈ ವೇಳೆ ಗಮನ ಸೆಳೆಯಲಾಯಿತು. ದೇಶದ ಯುವಜನತೆಯ ಪ್ರಮುಖ ಭಾಗವಾಗಿರುವ ವಿದ್ಯಾರ್ಥಿಗಳು ರಾಷ್ಟ್ರೀಯ ಸಮಸ್ಯೆಗಳ ಬಗ್ಗೆ ಅರಿವು ಹೊಂದಿರಬೇಕು, ಸಾರ್ವಜನಿಕ ಚರ್ಚೆಗಳಲ್ಲಿ ರಚನಾತ್ಮಕವಾಗಿ ಪಾಲ್ಗೊಳ್ಳಬೇಕು ಮತ್ತು ಸಾವಿಧಾನಿಕ ಮೌಲ್ಯಗಳ ಪರವಾಗಿ ದೃಢವಾಗಿ ನಿಲ್ಲಬೇಕು ಎಂದು ಪ್ರಚೋದಿಸಲಾಯಿತು.
ಅಭಿಪ್ರಾಯಗಳ ವ್ಯತ್ಯಾಸಗಳನ್ನು ಹಿಂಸಾಚಾರ ಅಥವಾ ಗೊಂದಲದ ಮೂಲಕ ಅಲ್ಲದೆ, ಶಾಂತಿಯುತ ಮತ್ತು ಪ್ರಜಾಸತ್ತಾತ್ಮಕ ಮಾರ್sಗಳ ಮೂಲಕ ವ್ಯಕ್ತಪಡಿಸಬೇಕು ಎಂಬ ಸಂದೇಶವನ್ನು ಈ ಅಭಿಯಾನ ಸಾರಿದೆ. ದೇಶದ ಹಿತಾಸಕ್ತಿ ಹಾಗೂ ಸಂವಿಧಾನಿಕ ನಿಯಮಗಳ ಗೌರವಕ್ಕಾಗಿ ಪ್ರತಿಯೊಬ್ಬ ಯುವಕರೂ ಸಕ್ರಿಯವಾಗಿ ಪಾಲ್ಗೊಳ್ಳುವಂತೆ ಈ ಕಾರ್ಯಕ್ರಮವು ಕರೆ ನೀಡಿದೆ.
ವಿಕ್ರಮ ಓದುಗರ ವಾಟ್ಸಪ್ ಬಳಗಕ್ಕೆ ಸೇರಲು ಈ ಸಂಖ್ಯೆಯನ್ನು ನಿಮ್ಮ ಮೊಬೈಲ್ನಲ್ಲಿ ಸೇವ್ ಮಾಡಿಕೊಂಡು ನಮಗೊಂದು ಸಂದೇಶ ಕಳುಹಿಸಿ. ಮೊಬೈಲ್ ಸಂಖ್ಯೆ: 98800 21122
