ಬೆಳಗಾವಿ: ರಾಷ್ಟ್ರೀಯ ಸ್ವಯಂಸೇವಕ ಸಂಘದ (RSS) ಅತ್ಯುನ್ನತ ಮತ್ತು ಪ್ರಮುಖ ವಾರ್ಷಿಕ ಸಭೆಗಳಲ್ಲೊಂದಾದ ‘ಅಖಿಲ ಭಾರತೀಯ ಪ್ರಾಂತ ಪ್ರಚಾರಕ ಬೈಠಕ್’ ಭಾನುವಾರ (ಜುಲೈ 12) ಇಲ್ಲಿ ಯಶಸ್ವಿಯಾಗಿ ಮುಕ್ತಾಯಗೊಂಡಿತು. ದೇಶದ ಪ್ರಸಕ್ತ ವಿದ್ಯಮಾನಗಳು, ಸಾಂಘಿಕ ವಿಸ್ತರಣೆ ಮತ್ತು ಸಾಮಾಜಿಕ ಸವಾಲುಗಳ ಕುರಿತು ಸಭೆಯಲ್ಲಿ ಸುದೀರ್ಘ ಮಂಥನ ನಡೆಸಲಾಯಿತು.
ಸಂಘದ ಪರಮಪೂಜನೀಯ ಸರಸಂಘಚಾಲಕರಾದ ಡಾ. ಮೋಹನ್ ಜಿ ಭಾಗವತ್ ಹಾಗೂ ಸರಕಾರ್ಯವಾಹರಾದ ದತ್ತಾತ್ರೇಯ ಹೊಸಬಾಳೆ ಅವರ ನೇತೃತ್ವದಲ್ಲಿ ನಡೆದ ಈ ಮೂರು ದಿನಗಳ ಉನ್ನತ ಮಟ್ಟದ ಸಭೆಯಲ್ಲಿ ದೇಶದ ವಿವಿಧ ಪ್ರಾಂತಗಳ ಒಟ್ಟು 226 ಹಿರಿಯ ಸಂಘಟನಾ ಕಾರ್ಯಕರ್ತರು ಪಾಲ್ಗೊಂಡಿದ್ದರು.
ಜನಸಂಖ್ಯಾ ಅಸಮತೋಲನ ಹಾಗೂ ಮಾದಕ ದ್ರವ್ಯ ವ್ಯಸನದ ಬಗ್ಗೆ ಕಳವಳ:
ದೇಶದ ಪ್ರಸಕ್ತ ಸನ್ನಿವೇಶದ ಕುರಿತು ಚರ್ಚಿಸುವಾಗ, ಮುಂಬರುವ ಜನಗಣತಿ ಹಾಗೂ ದೇಶದಲ್ಲಿ ತಲೆದೋರುತ್ತಿರುವ ಜನಸಂಖ್ಯಾ ಅಸಮತೋಲನದ ಸವಾಲುಗಳ ಬಗ್ಗೆ ಸಭೆಯಲ್ಲಿ ತೀವ್ರ ಕಳವಳ ವ್ಯಕ್ತಪಡಿಸಲಾಯಿತು. ಇದರೊಂದಿಗೆ ಯುವ ಪೀಳಿಗೆಯನ್ನು ಕಾಡುತ್ತಿರುವ ಮಾದಕ ದ್ರವ್ಯಗಳ (Drugs) ದುಷ್ಪರಿಣಾಮಗಳ ಬಗ್ಗೆ ಆತಂಕ ಹಂಚಿಕೊಂಡ ಸಂಘವು, ಸಮಾಜವನ್ನು ವ್ಯಸನಮುಕ್ತಗೊಳಿಸಲು ಆದ್ಯತೆಯ ಮೇರೆಗೆ ವಿಶೇಷ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲು ನಿರ್ಣಯಿಸಿತು. ಇದೇ ವೇಳೆ, ಶ್ರೇಷ್ಠ ಸಂತ ಶಿರೋಮಣಿ ರವಿದಾಸ್ ಮಹಾರಾಜ್ ಅವರ 650ನೇ ಜನ್ಮ ಜಯಂತಿಯ ವರ್ಷಾಚರಣೆಯನ್ನು ದೇಶಾದ್ಯಂತ ಅರ್ಥಪೂರ್ಣವಾಗಿ ಆಚರಿಸುವ ಕುರಿತು ಯೋಜನೆ ರೂಪಿಸಲಾಯಿತು.
ರಾಮ ಮಂದಿರ ಕಾಣಿಕೆ ಅಕ್ರಮ: ಕಠಿಣ ಕ್ರಮಕ್ಕೆ ಅಪೇಕ್ಷೆ
ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ಮಂದಿರದ ಕಾಣಿಕೆ ಪೆಟ್ಟಿಗೆಯ ಹಣದ ಎಣಿಕೆಯಲ್ಲಿ ನಡೆದಿರುವ ಅಕ್ರಮಗಳ ಘಟನೆಯ ಬಗ್ಗೆ ಸಭೆಯಲ್ಲಿ ಆಘಾತ ಮತ್ತು ತೀವ್ರ ದುಃಖ ವ್ಯಕ್ತಪಡಿಸಲಾಯಿತು. ಶ್ರೀ ರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ನ್ಯಾಸದ (ಟ್ರಸ್ಟ್) ಮನವಿಯ ಮೇರೆಗೆ ಸದ್ಯ ನಡೆಯುತ್ತಿರುವ ಎಸ್ಐಟಿ (SIT) ಮತ್ತು ಪೊಲೀಸ್ ತನಿಖೆಯು ಶೀಘ್ರದಲ್ಲೇ ನಿರ್ಣಾಯಕ ಹಂತ ತಲುಪಿ, ತಪ್ಪಿತಸ್ಥರಿಗೆ ಶಿಕ್ಷೆಯಾಗಲಿದೆ ಎಂಬ ವಿಶ್ವಾಸವನ್ನು ಸಂಘ ವ್ಯಕ್ತಪಡಿಸಿದೆ. ಅಲ್ಲದೆ, ಕೋಟ್ಯಂತರ ರಾಮಭಕ್ತರ ಆಳವಾದ ನಂಬಿಕೆ ಮತ್ತು ಭಾವನೆಗಳಿಗೆ ಧಕ್ಕೆ ತರುವಂತಹ ಇಂತಹ ಯಾವುದೇ ಘಟನೆಗಳು ಭವಿಷ್ಯದಲ್ಲಿ ಮರುಕಳಿಸದಂತೆ ಟ್ರಸ್ಟ್ ಕಟ್ಟುನಿಟ್ಟಿನ ಕ್ರಮ ವಹಿಸಬೇಕು ಎಂದು ಸಭೆಯು ಕಳಕಳಿಯ ಆಶಯ ವ್ಯಕ್ತಪಡಿಸಿತು.

ಲಕ್ಷಾಂತರ ಸ್ವಯಂಸೇವಕರಿಗೆ ತರಬೇತಿ; ಸಾಂಘಿಕ ವಿಸ್ತರಣೆ
2026ರ ಮಾರ್ಚ್ ನಂತರ ದೇಶಾದ್ಯಂತ ನಡೆದ ತರಬೇತಿ ಶಿಬಿರಗಳ ಯಶಸ್ಸಿನ ಬಗ್ಗೆಯೂ ಸಭೆಯಲ್ಲಿ ಪರಾಮರ್ಶೆ ನಡೆಸಲಾಯಿತು. ಈ ವರ್ಷ ಒಟ್ಟು 83 ‘ಸಂಘ ಶಿಕ್ಷಾ ವರ್ಗ’ ಹಾಗೂ 12 ‘ಕಾರ್ಯಕರ್ತ ವಿಕಾಸ ವರ್ಗ’ಗಳು ಪೂರ್ಣಗೊಂಡಿದ್ದು, ಇವುಗಳಲ್ಲಿ 18,842 ಸ್ವಯಂಸೇವಕರು ಪಾಲ್ಗೊಂಡಿದ್ದರು. ಇವರಿಗೆ ದೈನಂದಿನ ಶಾಖಾ ನಿರ್ವಹಣೆಯ ಜೊತೆಗೆ ಗ್ರಾಮ ವಿಕಾಸ, ಕುಟುಂಬ ಪ್ರಬೋಧನ (ಕೌಟುಂಬಿಕ ಮೌಲ್ಯಗಳು), ಪರಿಸರ ಸಂರಕ್ಷಣೆ ಮತ್ತು ವಿಪತ್ತು ನಿರ್ವಹಣೆಯಂತಹ ರಾಷ್ಟ್ರನಿರ್ಮಾಣದ ವಿಷಯಗಳಲ್ಲಿ ತರಬೇತಿ ನೀಡಲಾಗಿದೆ.
ಶತಮಾನೋತ್ಸವ ವರ್ಷದ ‘ಪಂಚ ಪರಿವರ್ತನ’ ಸಂಕಲ್ಪ
ಸಂಘದ ಶತಮಾನೋತ್ಸವ ವರ್ಷದ ಅಂಗವಾಗಿ ಈಗಾಗಲೇ ನಡೆದಿರುವ ಕಾರ್ಯಕ್ರಮಗಳ ಯಶಸ್ಸನ್ನು ಶ್ಲಾಘಿಸಿದ ಸಭೆಯು, ಮುಂಬರುವ ದಿನಗಳಲ್ಲಿ ‘ಪಂಚ ಪರಿವರ್ತನ’ (ಸಾಮಾಜಿಕ ಸಾಮರಸ್ಯ, ಪರಿಸರ, ಕೌಟುಂಬಿಕ ಮೌಲ್ಯಗಳು, ಸ್ವದೇಶಿ ಜಾಗೃತಿ ಮತ್ತು ನಾಗರಿಕ ಕರ್ತವ್ಯ) ಉಪಕ್ರಮಗಳ ಮೂಲಕ ಸಮಾಜದ ಪ್ರತಿಯೊಬ್ಬ ನಾಗರಿಕನನ್ನು ಸಕ್ರಿಯವಾಗಿ ಸಾಮಾಜಿಕ ಕಾರ್ಯಗಳಲ್ಲಿ ತೊಡಗಿಸಲು ನಿರ್ಧರಿಸಿತು. ಮುಂಬರುವ ಸೆಪ್ಟೆಂಬರ್ ತಿಂಗಳಿನಲ್ಲಿ ದೇಶಾದ್ಯಂತ ಬೃಹತ್ ‘ಶಾಖಾ ವಿಸ್ತಾರ ಯೋಜನೆ’ಯನ್ನು ಹಮ್ಮಿಕೊಳ್ಳಲು ಹಾಗೂ ಸರಸಂಘಚಾಲಕರ 2026-27ರ ಸಾಲಿನ ದೇಶವ್ಯಾಪಿ ಪ್ರವಾಸದ ರೂಪುರೇಷೆಗಳನ್ನು ಈ ಬೈಠಕ್ನಲ್ಲಿ ಅಂತಿಮಗೊಳಿಸಲಾಯಿತು ಎಂದು ಆರೆಸ್ಸೆಸ್ನ ಅಖಿಲ ಭಾರತೀಯ ಪ್ರಚಾರ ಪ್ರಮುಖರಾದ ಸುನಿಲ್ ಅಂಬೇಕರ್ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
