ಆರ್ಬಿಐ ಹೆಸರಿನಲ್ಲಿ ನಕಲಿ ಸುತ್ತೋಲೆ ವೈರಲ್; ನೋಟುಗಳ ಪೂರೈಕೆ ಕಡಿಮೆಯಾಗಲಿದೆ ಎಂಬ ಯಾವುದೇ ಘೋಷಣೆ ಮಾಡಿಲ್ಲ ಎಂದು ಸ್ಪಷ್ಟನೆ
ನವದೆಹಲಿ: ದೀಪಾವಳಿ ಹಬ್ಬದ ಸಂದರ್ಭದಲ್ಲಿ ₹10, ₹20 ಮತ್ತು ₹50 ಮುಖಬೆಲೆಯ ನೋಟುಗಳ ಕೊರತೆ ಉಂಟಾಗಲಿದೆ ಎಂಬ ಸಂದೇಶವೊಂದು ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿದ್ದು, ಇದು ಸುಳ್ಳು ಎಂದು ಪತ್ರಿಕಾ ಮಾಹಿತಿ ಬ್ಯೂರೋದ (ಪಿಐಬಿ) ಫ್ಯಾಕ್ಟ್ಚೆಕ್ ಘಟಕ ಸ್ಪಷ್ಟಪಡಿಸಿದೆ. ಭಾರತೀಯ ರಿಸರ್ವ್ ಬ್ಯಾಂಕ್ (ಆರ್ಬಿಐ) ಹೆಸರಿನಲ್ಲಿ ಹರಡಲಾಗುತ್ತಿರುವ ಈ ಸಂದೇಶದಲ್ಲಿ ಯಾವುದೇ ಸತ್ಯಾಂಶವಿಲ್ಲ ಎಂದು ಪಿಐಬಿ ತಿಳಿಸಿದೆ.
ವಾಟ್ಸ್ಆ್ಯಪ್ನಲ್ಲಿ ಹರಿದಾಡುತ್ತಿರುವ ಸಂದೇಶದಲ್ಲಿ, ದೀಪಾವಳಿಗೂ ಮುನ್ನ ₹10, ₹20 ಮತ್ತು ₹50 ಮುಖಬೆಲೆಯ ಹೊಸ ನೋಟುಗಳ ಪೂರೈಕೆ ಕಡಿಮೆಯಾಗಲಿದೆ ಎಂದು ಹೇಳಲಾಗಿದೆ. ನಗದು ಬಳಕೆಯನ್ನು ಕಡಿಮೆ ಮಾಡಿ ಡಿಜಿಟಲ್ ವಹಿವಾಟುಗಳನ್ನು ಉತ್ತೇಜಿಸುವ ಉದ್ದೇಶದಿಂದ ಸಣ್ಣ ಮುಖಬೆಲೆಯ ನೋಟುಗಳ ಮುದ್ರಣವನ್ನು ಹಂತಹಂತವಾಗಿ ಕಡಿಮೆ ಮಾಡಲಾಗುತ್ತಿದೆ ಎಂಬ ಮಾಹಿತಿಯನ್ನೂ ಅದರಲ್ಲಿ ಸೇರಿಸಲಾಗಿದೆ. ಹಬ್ಬದ ಸಂದರ್ಭದಲ್ಲಿ ಯುಪಿಐ, ಕಾರ್ಡ್ಗಳು ಮತ್ತು ನೆಟ್ ಬ್ಯಾಂಕಿಂಗ್ ಮೂಲಕ ಪಾವತಿ ಮಾಡುವಂತೆ ಸಲಹೆ ನೀಡಲಾಗಿದೆ.
ಅಕ್ಟೋಬರ್ 27, 2026ರ ದಿನಾಂಕ ಹೊಂದಿರುವ ಈ ಸಂದೇಶವನ್ನು ಆರ್ಬಿಐನ ಅಧಿಕೃತ ಸುತ್ತೋಲೆಯಂತೆ ಸಿದ್ಧಪಡಿಸಲಾಗಿದೆ. ಇದರಲ್ಲಿ ಆರ್ಬಿಐನ ಹೆಸರು, ಲಾಂಛನ, ಸುತ್ತೋಲೆ ಸಂಖ್ಯೆ ಹಾಗೂ ಗವರ್ನರ್ ಅವರ ಸಹಿಯನ್ನು ಬಳಸಲಾಗಿದೆ. ಇದರಿಂದಾಗಿ ಜನರು ಇದನ್ನು ಅಧಿಕೃತ ಪ್ರಕಟಣೆ ಎಂದು ನಂಬುವ ಸಾಧ್ಯತೆಯಿದೆ.
ಆದರೆ, ಆರ್ಬಿಐ ಇಂತಹ ಯಾವುದೇ ಸುತ್ತೋಲೆ ಅಥವಾ ಘೋಷಣೆ ಹೊರಡಿಸಿಲ್ಲ ಎಂದು ಪಿಐಬಿ ಫ್ಯಾಕ್ಟ್ಚೆಕ್ ಘಟಕ ನವೆಂಬರ್ 2ರಂದು ತನ್ನ ಅಧಿಕೃತ ಎಕ್ಸ್ ಖಾತೆಯಲ್ಲಿ ಸ್ಪಷ್ಟಪಡಿಸಿದೆ. ₹10, ₹20 ಮತ್ತು ₹50 ಮುಖಬೆಲೆಯ ನೋಟುಗಳ ಲಭ್ಯತೆ ಕಡಿಮೆಯಾಗಲಿದೆ ಎಂದು ಆರ್ಬಿಐ ಯಾವುದೇ ಮಾಹಿತಿ ನೀಡಿಲ್ಲ. ವೈರಲ್ ಸಂದೇಶದಲ್ಲಿನ ಹೇಳಿಕೆ ಸುಳ್ಳು ಎಂದು ತಿಳಿಸಿದೆ.
ಹಬ್ಬದ ಸಂದರ್ಭದಲ್ಲಿ ಖರೀದಿ ಮತ್ತು ಚಿಲ್ಲರೆ ವಹಿವಾಟುಗಳು ಹೆಚ್ಚಾಗುವುದರಿಂದ ಸಣ್ಣ ಮುಖಬೆಲೆಯ ನೋಟುಗಳ ಕೊರತೆಯ ಬಗ್ಗೆ ಇಂತಹ ಸಂದೇಶಗಳು ಸಾರ್ವಜನಿಕರಲ್ಲಿ ಅನಗತ್ಯ ಆತಂಕ ಮೂಡಿಸಬಹುದು. ಆರ್ಬಿಐ ಅಥವಾ ಇತರ ಸರ್ಕಾರಿ ಸಂಸ್ಥೆಗಳ ಹೆಸರಿನಲ್ಲಿ ಬರುವ ಯಾವುದೇ ಮಾಹಿತಿಯನ್ನು ಅಧಿಕೃತ ಮೂಲಗಳ ಮೂಲಕ ಪರಿಶೀಲಿಸದೆ ನಂಬಬಾರದು ಮತ್ತು ಹಂಚಿಕೊಳ್ಳಬಾರದು ಎಂದು ಪಿಐಬಿ ಸಾರ್ವಜನಿಕರಿಗೆ ಸೂಚಿಸಿದೆ.
ವಿಕ್ರಮ ಓದುಗರ ವಾಟ್ಸಪ್ ಬಳಗಕ್ಕೆ ಸೇರಲು ಈ ಸಂಖ್ಯೆಯನ್ನು ನಿಮ್ಮ ಮೊಬೈಲ್ನಲ್ಲಿ ಸೇವ್ ಮಾಡಿಕೊಂಡು ನಮಗೊಂದು ಸಂದೇಶ ಕಳುಹಿಸಿ. ಮೊಬೈಲ್ ಸಂಖ್ಯೆ: 98800 21122
