- ಸುರೇಶ್ ನೆಲಮಂಗಲ, ಲೇಖಕ
ಇತಿಹಾಸ ಎಂದೂ ಸುಳ್ಳು ಹೇಳುವುದಿಲ್ಲ. ಭಾರತದ ರಾಜಕೀಯ ಇತಿಹಾಸದ ಪುಟ ತಿರುವಿದರೆ ಒಂದು ಅಚ್ಚರಿಯ ಸತ್ಯ ಗೋಚರಿಸುತ್ತದೆ. ರಾಷ್ಟ್ರೀಯ ಸ್ವಯಂಸೇವಕ ಸಂಘವನ್ನು ಅವಹೇಳನ ಮಾಡಿದ ರಾಜಕಾರಣಿಗಳ ರಾಜಕೀಯ ಜೀವನ ಕೊನೆಯಲ್ಲಿ ಶೋಚನೀಯ ಅಂತ್ಯ ಕಂಡಿದೆ. ಇದು ಆಕಸ್ಮಿಕ ಅಲ್ಲ, ಇದು ಭಾರತದ ಜನಮಾನಸದ ತೀರ್ಪು. ನೆಹರೂ ಅವರಿಂದ ಮೊದಲ್ಗೊಂಡು ರಾಹುಲ್ ಅವರವರೆಗೆ ಒಂದೇ ದುರಂತ ಕಥೆ.
ಜವಾಹರಲಾಲ್ ನೆಹರೂ ಅವರು ಸಂಘವನ್ನು ‘ಫ್ಯಾಸಿಸ್ಟ್ ಸಂಸ್ಥೆ’ ಎಂದು ಕರೆದರು. 1948ರಲ್ಲಿ ನಿಷೇಧ ಹೇರಿದರು. ಆದರೆ ನಂತರ ಅವರೇ ಹೇರಿದ ನಿಷೇಧವನ್ನು ಹಿಂದೆ ತೆಗೆದುಕೊಳ್ಳಬೇಕಾಯಿತು. ನೆಹರೂ ಕಟ್ಟಿದ ಸೆಕ್ಯುಲರ್ ಭಾರತ ಇಂದು ಅವರ ಮೊಮ್ಮಗ ರಾಹುಲ್ ಗಾಂಧಿ ಅವರ ಕಾಲದಲ್ಲಿ ಚೂರು ಚೂರಾಗಿದೆ. ಕಾಂಗ್ರೆಸ್ ಪಕ್ಷ 543 ಸ್ಥಾನಗಳ ಸಂಸತ್ತಿನಲ್ಲಿ 44 ಸ್ಥಾನಕ್ಕೆ ಕುಸಿದ ಕಟುಸತ್ಯ ಯಾರಿಗೂ ಮರೆಯಾಗಿಲ್ಲ.
ಇಂದಿರಾ ಗಾಂಧಿಯವರು ತುರ್ತು ಪರಿಸ್ಥಿತಿಯ ಅವಧಿಯಲ್ಲಿ ಸಂಘವನ್ನು ನಿಷೇಧಿಸಿದರು, ಸಾವಿರಾರು ಸ್ವಯಂಸೇವಕರನ್ನು ಜೈಲಿಗೆ ಅಟ್ಟಿದರು. ಅದರ ಪರಿಣಾಮ 1977ರ ಚುನಾವಣೆಯಲ್ಲಿ ಇಂದಿರಾ ಸ್ವತಃ ರಾಯ್ಬರೇಲಿಯಲ್ಲಿ ಸೋತರು. ಪಿ.ವಿ. ನರಸಿಂಹ ರಾವ್ ಅವರಿಗಂತೂ ಕಾಂಗ್ರೆಸ್ ಪಕ್ಷವೇ ನೆಲೆ ನೀಡಲಿಲ್ಲ. ದೆಹಲಿಯಲ್ಲಿ ನಿಧನರಾದ ಮಾಜಿ ಪ್ರಧಾನಿಯ ಶವಪೆಟ್ಟಿಗೆಯನ್ನು ಏಐಸಿಸಿ ಕಚೇರಿ ಒಳಗೂ ಬಿಡಲಿಲ್ಲ — ಇದು ಕಾಂಗ್ರೆಸ್ ಸಂಸ್ಕೃತಿ.
ದಿಗ್ವಿಜಯ ಸಿಂಗ್, ಮಣಿಶಂಕರ ಅಯ್ಯರ್ — ಸಂಘ ವಿರೋಧವನ್ನೇ ವೃತ್ತಿ ಮಾಡಿಕೊಂಡವರು ಇಂದು ಎಲ್ಲಿದ್ದಾರೆ? ಅಯ್ಯರ್ ‘ಚಾಯ್ವಾಲಾ’ ಎಂದ ವ್ಯಕ್ತಿ ಇಂದು ಮೂರು ಬಾರಿ ಪ್ರಧಾನಮಂತ್ರಿಯಾಗಿದ್ದಾರೆ. ಆದರೆ ಅಯ್ಯರ್ ಸ್ವಂತ ಪಕ್ಷದಿಂದಲೇ ಮೂಲೆಗುಂಪಾಗಿದ್ದಾರೆ. ಇದು ಇತಿಹಾಸದ ವ್ಯಂಗ್ಯ. ದಿಗ್ವಿಜಯ್ ಸಿಂಘ್ ಮಧ್ಯಪ್ರದೇಶದ ಮುಖ್ಯಮಂತ್ರಿಯಾಗಿ ಜನಪ್ರಿಯತೆ ಗಳಿಸಿದ ನಾಯಕನಾಗಿದ್ದರು. ಆದರೆ ಅವರ ಸಂಘ ವಿರೋಧಿ ನಡೆ, ಸಂಘದ ವಿರುದ್ಧ ದ್ವೇಷ, 26/11 ಮುಂಬೈ ದಾಳಿ ಆರ್ಎಸ್ಎಸ್ ಮಾಡಿದ್ದು ಎಂಬ ನುಡಿ ಇದೆಲ್ಲವೂ ಅವರ ರಾಜಕೀಯ ಜೀವನದ ಮೇಲೆ ಪರಿಣಾಮ ಬೀರಿತು.
ಪ್ರಿಯಾಂಕ್ ಖರ್ಗೆ ನಡೆ
ಕರ್ನಾಟಕದ ಗೃಹಸಚಿವರಾಗಿ ಅಧಿಕಾರ ಸ್ವೀಕರಿಸಿ 48 ಗಂಟೆಯಾಗುವ ಮೊದಲೇ ಪ್ರಿಯಾಂಕ್ ಖರ್ಗೆ ಅವರು ಆರ್ಎಸ್ಎಸ್ ನೋಂದಣಿ ದಾಖಲೆ ಸಿದ್ಧಪಡಿಸಿ ಇಡಬೇಕೆಂದು ಮಿಂಚಂಚೆಯಲ್ಲಿ ಸವಾಲು ಹಾಕಿದರು. 1925ರಲ್ಲಿ ಹುಟ್ಟಿ, ಮೂರು ಬಾರಿ ನಿಷೇಧ ಎದುರಿಸಿ, ಎರಡು ತುರ್ತು ಪರಿಸ್ಥಿತಿ ಎದುರಿಸಿ ಬದುಕಿ ಉಳಿದ ರಾಷ್ಟ್ರೀಯ ಸ್ವಯಂಸೇವಕ ಸಂಘ ಟ್ವೀಟ್ ಒಂದಕ್ಕೆ ಮಣಿಯುವಷ್ಟು ದುರ್ಬಲವಲ್ಲ ಎಂಬುದನ್ನು ಗೃಹಸಚಿವರು ಮರೆತಂತಿದೆ.
ಇನ್ನು ನೋಂದಣಿ ಇಲ್ಲ ಎಂಬ ವಾದ ಸಂಪೂರ್ಣ ಟೊಳ್ಳು. ಆದಾಯ ತೆರಿಗೆ ಇಲಾಖೆ ಮತ್ತು ನ್ಯಾಯಾಲಯಗಳು ಸಂಘವನ್ನು ‘ವ್ಯಕ್ತಿಗಳ ಸಮೂಹ’ (Body of Individuals) ಎಂದು ಮಾನ್ಯ ಮಾಡಿ ತೆರಿಗೆ ವಿನಾಯಿತಿ ನೀಡಿವೆ. ಸ್ವತಃ ಆರ್ಎಸ್ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಅವರು ಇದನ್ನು ನವೆಂಬರ್ 2025ರಲ್ಲಿ ಸ್ಪಷ್ಟಪಡಿಸಿದ್ದಾರೆ. ಆದರೂ ಈ ಬಾಲಿಶ ವಾದವನ್ನು ಮತ್ತೆ ಮತ್ತೆ ಮಂಡಿಸುತ್ತಿರುವುದು ಏನನ್ನು ತೋರಿಸುತ್ತದೆ? ಬೌದ್ಧಿಕ ದಾರಿದ್ರ್ಯ ಅಥವಾ ರಾಜಕೀಯ ದಾಹ?.
ಚಿತ್ತಾಪುರ ಎಚ್ಚರಿಕೆ
ಪ್ರಿಯಾಂಕ್ ಅವರ ಕ್ಷೇತ್ರ ಚಿತ್ತಾಪುರ. ಅಲ್ಲಿ ಬಹುಸಂಖ್ಯಾತ ಹಿಂದೂ ಮತದಾರರಿದ್ದಾರೆ. ಅವರಲ್ಲಿ ಕಾಂಗ್ರೆಸ್ಗೆ ಮತ ನೀಡುವ ಸ್ವಾಭಿಮಾನಿ ಲಿಬರಲ್ ಹಿಂದೂಗಳೂ ಇದ್ದಾರೆ. ಅವರು ಒಂದು ವಿಷಯ ಬಹಳ ಸ್ಪಷ್ಟವಾಗಿ ಬಲ್ಲರು, ಆರ್ಎಸ್ಎಸ್ ವಿರೋಧ ಅಂದರೆ ಹಿಂದೂ ಸಂಸ್ಕೃತಿ ವಿರೋಧ ಅಲ್ಲ ಎಂದು ಹೇಳಬಹುದು, ಆದರೆ ಅದರ ಗೆರೆ ಎಲ್ಲಿ ಎಳೆಯಬೇಕು ಎಂದು ಗೊತ್ತಿಲ್ಲದ ರಾಜಕಾರಣಿಯ ಮೇಲೆ ಅವರಿಗೆ ನಂಬಿಕೆ ಇರುವುದೇ ಎಂಬ ಪ್ರಶ್ನೆ ಮೂಡುತ್ತದೆ. ಮಿಗಿಲಾಗಿ ಯಾವ ಲಿಬರಲ್ ಹಿಂದೂ ಮತದಾರ ಕೂಡ ತನ್ನ ಶ್ರದ್ಧೆ ಮತ್ತು ಸಂಸ್ಕೃತಿಯ ಮೇಲೆ ಅಗೌರವ ತೋರಿಸುವ ನಾಯಕನಿಗೆ ಮತ ನೀಡಲಾರ. ಆಜ್ಞೆ ಮಾಡುವ ಸ್ವರದಲ್ಲಿ ‘ದಾಖಲೆ ಸಿದ್ಧಪಡಿಸಿ ಇಡಿ’ ಎಂದು ಹೇಳುವ ಒಬ್ಬ ಗೃಹಸಚಿವರು ಮುಂದೆ ಏನು ಹೇಳುವರು ಎಂಬ ಕೌತುಕ ಜನರಲ್ಲಿ ಮೂಡುತ್ತದೆ. ಇದರೊಂದಿಗೆ ಮುಂದಿನ ಚುನಾವಣೆಯಲ್ಲಿ ಏನು ಉತ್ತರ ನೀಡಬೇಕು ಎಂಬುದನ್ನೂ ಚಿತ್ತಾಪುರ ಜನರು ತೀರ್ಮಾನಿಸಬಲ್ಲರು. ಈ ದಾರಿಯಲ್ಲಿ ಮತ್ತಷ್ಟು ಮುಂದುವರಿದರೆ, ಪ್ರಿಯಾಂಕ್ ಅವರು ಚಿತ್ತಾಪುರ ಮಾತ್ರವಲ್ಲ, ಕರ್ನಾಟಕದ ಯಾವ ಮತಕ್ಷೇತ್ರದಲ್ಲಿ ನಿಂತರೂ ಸ್ಪರ್ಧಾತ್ಮಕ ಅಭ್ಯರ್ಥಿಯಾಗುವುದೂ ಕಷ್ಟವಾಗಬಹುದು. ಅತ್ಯಂತ ಉದಾರ ಮನಸ್ಸಿನ ಹಿಂದೂ ಮತದಾರ ಕೂಡ ಇಂಥ ನಾಯಕನಿಗೆ ಶಾಶ್ವತವಾಗಿ ಮುಖ ತಿರುಗಿಸಲು ಸಿದ್ಧನಾಗುತ್ತಾನೆ.
ಸ್ವಯಂಸೇವಕ ಸೇವೆ ನಿರಂತರ
ರಾಷ್ಟ್ರೀಯ ಸ್ವಯಂಸೇವಕ ಸಂಘ 60,000ಕ್ಕೂ ಹೆಚ್ಚು ಶಾಖೆಗಳನ್ನು ನಡೆಸುತ್ತಿದೆ. ಪ್ರವಾಹ, ಭೂಕಂಪ, ಕೋವಿಡ್ ಸಂಕಟದಲ್ಲಿ ಊರೂರಿಗೆ ಮೊದಲು ಧಾವಿಸಿದ ಸ್ವಯಂಸೇವಕರನ್ನು ಈ ದೇಶ ಮರೆತಿಲ್ಲ. ಅಂಥ ಸಂಸ್ಥೆಯ ಮೇಲೆ ‘ಮನಿ ಲಾಂಡರಿಂಗ್’ ಆರೋಪ ಹೊರಿಸುವುದು ಕೇವಲ ರಾಜಕೀಯ ಅಂಧತ್ವ ಅಲ್ಲ, ಅದು ಲಕ್ಷಾಂತರ ಸ್ವಯಂಸೇವಕರ ಸೇವೆಯನ್ನು ಅವಮಾನಿಸಿದಂತೆ.
ಈ ಸಂಸ್ಥೆಯ ವಿರುದ್ಧ ಕಾನೂನು ಕ್ರಮ ತೆಗೆದುಕೊಳ್ಳಲು ಮುಂದಾದ ಪ್ರತಿಯೊಬ್ಬ ನೇತಾರನೂ ಅದನ್ನು ಹಿಂದೆ ತೆಗೆದುಕೊಳ್ಳಬೇಕಾಗಿ ಬಂತು. ಕೋರ್ಟ್ ಗಳು, ಸಾರ್ವಜನಿಕ ಅಭಿಪ್ರಾಯ ಮತ್ತು ಚುನಾವಣಾ ಫಲಿತಾಂಶ — ಮೂರೂ ಆ ದಿಕ್ಕಿನಲ್ಲೇ ನಿಂತಿವೆ. ರಾಷ್ಟ್ರೀಯ ಸ್ವಯಂಸೇವಕ ಸಂಘ 100 ವರ್ಷ ಪೂರ್ಣ ಮಾಡಿದೆ, ಸರ್ಕಾರಗಳು ಬಂದು ಹೋಗುತ್ತಲೇ ಇವೆ.
ಮಲ್ಲಿಕಾರ್ಜುನ ಖರ್ಗೆ ಕರ್ನಾಟಕದ ಗೃಹ ಸಚಿವರಾಗಿದ್ದಾಗ ಆರ್ಎಸ್ಎಸ್ ವಿರುದ್ಧ ಯಾವ ಕ್ರಮವನ್ನೂ ತೆಗೆದುಕೊಳ್ಳಲಿಲ್ಲ ಎಂದು ಸಿ.ಟಿ. ರವಿ ಅವರು ನೆನಪಿಸಿಕೊಟ್ಟಿದ್ದಾರೆ. ರಾಷ್ಟ್ರ ರಾಜಕೀಯದಲ್ಲಿ ಬೆಳೆದ ಅನುಭವಿ ತಂದೆ ಮಗನ ದಾರಿ ನೋಡಿ ಒಳಗೊಳಗೇ ಏನು ಭಾವಿಸುತ್ತಿದ್ದಾರೋ? ಸಂಘ ವಿರೋಧ ಮೈನಾರಿಟಿ ಮತ ತರುತ್ತದೆ ಎಂಬ ಲೆಕ್ಕಾಚಾರ ತಪ್ಪಾದದ್ದು ಮಹಾರಾಷ್ಟ್ರ ಮತ್ತು ಉತ್ತರ ಭಾರತದಲ್ಲಿ ಅದೆಷ್ಟೋ ಬಾರಿ ಸಾಬೀತಾಗಿದೆ.
ಪ್ರಿಯಾಂಕ್ ಖರ್ಗೆ ಅವರು ಯುವ ರಾಜಕಾರಣಿ. ಕರ್ನಾಟಕ ಅವರಿಂದ ಒಳ್ಳೆಯ ಆಡಳಿತ ನಿರೀಕ್ಷಿಸುತ್ತಿದೆ. ಆದರೆ ಗೃಹಸಚಿವ ಪಟ್ಟ ಸಿಕ್ಕಿದ ಮೊದಲ ದಿನದಿಂದಲೇ ಸಂಘಟನೆಗಳನ್ನು ಬೇಟೆ ಆಡುವ ಭ್ರಮೆಯಲ್ಲಿ ತೇಲಾಡುವುದು ಆಡಳಿತ ಅಲ್ಲ, ಅದು ರಾಜಕೀಯ ಆತ್ಮಘಾತ.
ನೆಹರೂ ಸೋತರು. ಇಂದಿರಾ ಸೋತರು. ರಾಹುಲ್ ಗಾಂಧಿ ಮತ್ತೆ ಮತ್ತೆ ಸೋಲುತ್ತಿದ್ದಾರೆ. ಈ ಪಟ್ಟಿಗೆ ನಿಮ್ಮ ಹೆಸರನ್ನು ಸೇರಿಸಿಕೊಳ್ಳುವ ಅವಸರ ಬೇಕಿತ್ತೇ? ಚಿತ್ತಾಪುರದ ಮತದಾರ ಕಾದು ನೋಡುತ್ತಿದ್ದಾನೆ. ಕರ್ನಾಟಕದ ಉದಾರ ಹಿಂದೂ ಮತದಾರ ಎಚ್ಚರದಿಂದ ಇದ್ದಾನೆ. ಮಿತಿ ಮೀರಿ ಮಾತಾಡಿದರೆ, ರಾಜಕೀಯ ಜೀವನ ಮುಗಿಯಿತು ಎಂದೇ ಅರ್ಥ.
