- ಭವ್ಯಾ ಯೋಗೀಶ್, ಯೋಗ ಶಿಕ್ಷಕಿ, ಬೆಂಗಳೂರು
ವಚನ ಸಾಹಿತ್ಯ ಪ್ರತಿಯೊಬ್ಬರಿಗೂ ವಿನೂತನವಾದ ಚೈತನ್ಯವನ್ನು ನೀಡುತ್ತದೆ. ಮನಸ್ಸನ್ನು ಅರಳಿಸಿ ಬುದ್ಧಿ-ಕ್ರಿಯೆಗಳಲ್ಲಿ ಬದಲಾವಣೆಯ ಕಂಪನವನ್ನು ಉಂಟುಮಾಡುವ ಶಕ್ತಿ ವಚನಗಳಿಗಿದೆ. ಎಷ್ಟು ಬಾರಿ ಹೇಳಿದರೂ ಅದರ ಅಭಿರುಚಿ ಹೆಚ್ಚುತ್ತದೆ ಹೊರತು ಕಡಿಮೆಯಾಗದು. ವಚನಗಳಲ್ಲಿನ ವಿಚಾರಗಳು ಸರ್ವಕಾಲಕ್ಕೂ ಪ್ರಸ್ತುತವಾಗಿದ್ದು, ಸಾಮಾನ್ಯರ ಹೃದಯಕ್ಕೆ ಸಮೀಪಿಸುತ್ತದೆ. ಅಲ್ಲದೆ, ನಮ್ಮ ಜೀವನಕ್ಕೆ ಅನ್ವಯವಾಗುತ್ತದೆ. ಅಂತಹ ವಚನಗಳನ್ನು ರಚಿಸಿದವರಲ್ಲಿ ಕನ್ನಡದ ಶ್ರೇಷ್ಠ ಕವಿ, ದಾರ್ಶನಿಕ, ಸಂತ ಹಾಗೂ ತ್ರಿಪದಿಯ ಬ್ರಹ್ಮನಾದ ಸರ್ವಜ್ಞ ಒಬ್ಬರು.
ಆಡು ಮುಟ್ಟದ ಸೊಪ್ಪಿಲ್ಲ ಎಂಬ ಗಾದೆ ಮಾತಿನಂತೆ ಸರ್ವಜ್ಞನಿಗೆ ತಿಳಿಯದ ವಿಚಾರಗಳಿಲ್ಲ. ಸಾಮಾಜಿಕ, ಶೈಕ್ಷಣಿಕ, ಧಾರ್ಮಿಕ, ಆಧ್ಯಾತ್ಮಿಕ, ವೈಚಾರಿಕ ಹೀಗೆ ಅನೇಕ ರೀತಿಯ ವಿಚಾರಗಳನ್ನು ಸಾಮಾನ್ಯರಿಗೆ ತಿಳಿಯುವ ಹಾಗೆ ಸರಳ, ಸುಂದರ ಶೈಲಿಯಲ್ಲಿ ತಮ್ಮ ತ್ರಿಪದಿಯಲ್ಲಿ ಸೂಕ್ಷ್ಮವಾಗಿ ಉಲ್ಲೇಖಿಸಿದ್ದಾರೆ.
ಸರ್ವಜ್ಞ ನೆಂಬುವನು | ಗರ್ವದಿಂದಾದವನೆ |
ಸರ್ವರೊಳಗೊಂದು ನುಡಿಗಲಿತು ವಿದ್ಯೆಯಾ |
ಪರ್ವತವೇ ಆದ ಸರ್ವಜ್ಞ ||
ಸರ್ವಜ್ಞ ಎಂಬ ಹೆಸರನ್ನು ಗರ್ವದಿಂದ ಇಟ್ಟುಕೊಂಡಿಲ್ಲ. ಎಲ್ಲರೊಳು ಒಂದಾಗಿ, ಎಲ್ಲರನ್ನು ಗುರುವಾಗಿ ಕಂಡು, ಎಲ್ಲರಲ್ಲೂ ಇರುವ ‘ವಿದ್ಯೆ’ಯನ್ನು ಗ್ರಹಿಸಿ, ಸಂಗ್ರಹಿಸಿ ನಮ್ಮದಾಗಿಸಿಕೊಂಡು ಸ್ವಚ್ಛ ಜ್ಞಾನವನ್ನು ಪಡೆದುಕೊಂಡು ವಿದ್ಯೆಯ ಪರ್ವತವಾದೆನು ಎಂದು ಅತ್ಯಂತ ಸರಳವಾಗಿ ತನ್ನನ್ನು ಪರಿಚಯಿಸಿಕೊಂಡಿದ್ದಾರೆ ಮಹಾಕವಿ ಸರ್ವಜ್ಞ. ಇವರ ವಚನಗಳಲ್ಲಿ ಧಾರ್ಮಿಕ, ಸಾಮಾಜಿಕ, ರಾಜನೈತಿಕ, ಆಧ್ಯಾತ್ಮಿಕ, ಶಿಕ್ಷಣ ವಿಚಾರಗಳಿಗೆ ಮಾತ್ರ ಸೀಮಿತವಾಗಿಲ್ಲ. ಯೋಗಕ್ಕೂ ಅನ್ವಯಿಸುವಂತೆಯೂ ವಚನಗಳನ್ನು ರಚಿಸಿದ್ದಾರೆ.
ಕತ್ತಲೆಯ ಠಾವಿಂಗೆ | ಉತ್ತಮವು ಜ್ಯೋತಿ ತಾ |
ಮತ್ತೆ ಪ್ರಜ್ವಲಿಸುವಾ ಠಾವು ಬೆಳಗಲತ್ಯುತ್ತಮವಕ್ಕು ಸರ್ವಜ್ಞ ||
ನಾವು ಸಾಮಾನ್ಯವಾಗಿ ಯೋಗಕ್ಷೇಮ ಹೇಗಿದೆ ಎಂದು ಕೇಳುತ್ತೇವೆ. ಇಲ್ಲಿ ಯೋಗ ಎಂದರೆ ಹೊಸತನ್ನು ಪಡೆಯುವುದು. ಕ್ಷೇಮ ಎಂದರೆ ರಕ್ಷಿಸಿಕೊಳ್ಳುವುದು ಎಂದರ್ಥ. ಗಳಿಸುವ, ರಕ್ಷಿಸಿಕೊಳ್ಳುವ ಸಾಮರ್ಥ್ಯವಿದ್ದಾಗಲೇ ವ್ಯಕ್ತಿಯು ಚೆನ್ನಾಗಿದ್ದಾನೆಂದು ಅರ್ಥ. ಯಾರಾದರೂ ಅಪಾಯದಿಂದ ಪಾರಾದರೆ, ಅನಿರೀಕ್ಷಿತ ಲಾಭಗಳಿಸಿದರೆ ಅವರ ಯೋಗ ಚೆನ್ನಾಗಿದೆ ಎನ್ನುತ್ತೇವೆ. ಹೀಗೆ ಯೋಗ ಎಂಬ ಶಬ್ಧ ವಿಶಾಲ ಅರ್ಥವನ್ನು ಪಡೆದುಕೊಂಡಿದೆ. ಕತ್ತಲೆಯುಳ್ಳ ಸ್ಥಳದಲ್ಲಿ ದೀಪವನ್ನು ಬೆಳಗಿಸಿದರೆ, ಅದು ಹೇಗೆ ಸುಂದರವಾಗಿ ಬೆಳಕನ್ನು ನೀಡುತ್ತದೆಯೋ ಆದರಂತೆ ಅಜ್ಞಾನವೆಂಬ ಕತ್ತಲೆಯಿಂದ ತುಂಬಿದ ಮನುಷ್ಯನಲ್ಲಿ ಯೋಗ ಎಂಬ ದೀಪ ಪ್ರಜ್ವಲಿಸಿದರೆ, ಆತನ ದೇಹ ಮತ್ತು ಜೀವನದಲ್ಲಿ ವಿಶೇಷ ಚೈತನ್ಯವನ್ನು ಕಾಣಬಹುದಾಗಿದೆ. ಯೋಗದ ತೇಜಸ್ಸಿನಿಂದ ದೇಹ ಸುವರ್ಣದಂತೆ ಪ್ರಕಾಶಮಾನವಾಗುತ್ತದೆ ಎಂದು ಸರ್ವಜ್ಞ ತಮ್ಮ ವಚನದಲ್ಲಿ ಯೋಗದ ಮಹತ್ವ ಹೇಳಿದ್ದಾರೆ.
ಯೋಗಕ್ಕೂ ಯೋಗಿಗೂ ಅವಿನಾಭಾವ ಸಂಬಂಧವಿದೆ. ಆಧ್ಯಾತ್ಮಿಕ ಕ್ಷೇತ್ರದಲ್ಲಿ ವಿಶಿಷ್ಟ ಸಾಧನೆ ಮಾಡುತ್ತಿರುವ ಯೋಗಿ ಸಾಮಾನ್ಯವಾಗಿ ಲೌಕಿಕ ಜೀವನದಿಂದ ವಿಮುಖವಾಗಿರುತ್ತಾರೆ. ನಮ್ಮಂತಹ ಸಾಮಾನ್ಯ ಜನರಂತೆ ಅವರು ಬದುಕಲು ಆಸಕ್ತಿವಹಿಸುವುದಿಲ್ಲ. ಅವರ ಬಯಕೆಗಳೂ ಕಡಿಮೆಯಾಗಿದ್ದು, ತಮ್ಮ ಸಾಧನೆಯಲ್ಲಿ ತೊಡಗಿಸಿಕೊಂಡಿರುತ್ತಾರೆ. ಹೀಗೆ, ಸಾಮಾನ್ಯ ಜನರಿಂದ ಸ್ವಲ್ಪ ದೂರವಿರುವ ಯೋಗಿಯನ್ನು ಜನರು ಯಾವ ದೃಷ್ಟಿಯಿಂದ ನೋಡುತ್ತಾರೆ ಎಂಬುದನ್ನು ಸರ್ವಜ್ಞ ವಚನದ ಸುಂದರ ಸಾಲುಗಳನ್ನು ನೋಡಬಹುದು.
ಯೋನಿಜರು ಯೋಗಿಯನು |
ಹೀನವೆನ್ನುವಡೇನು? ಆನಂದ ತಾಣದೊಳಗಿರಲು ಯೋಗಿಯಾ |
ಮಾನ ಘನವಹುದು ಸರ್ವಜ್ಞ ||
ಮನುಷ್ಯರು ಯೋಗಿಯನ್ನು ಕಂಡು ಹೀಯಾಳಿಸಿದರೆ, ಅದರಿಂದ ಯೋಗಿಗೆ ಯಾವ ಕೊರತೆ ಉಂಟಾಗುವುದಿಲ್ಲ. ಆತನು ತನ್ನ ಆತ್ಮಾನಂದದಲ್ಲಿ ತಲ್ಲೀನನಾಗಿರುವುದರಿಂದ ಜನರು ಯೋಗಿಗೆ ನಿಂದಿಸಿದರೂ ಯಾವ ಪರಿಣಾಮವೂ ಬೀರುವುದಿಲ್ಲ. ಸಾವಕಾಶವಾಗಿ ಆತನ ಸ್ಥಾನಮಾನ ಉನ್ನತಕ್ಕೆ ಏರುತ್ತಲೇ ಹೋಗುತ್ತದೆ ಹೊರತು ಕಡಿಮೆಯಾಗುವುದಿಲ್ಲ ಎಂಬ ಸಾರ ವಚನದಲ್ಲಿದೆ.
ಇನ್ನು ಯೋಗಿಯು ಯೋಗ ಸಾಧನೆಯನ್ನು ಹೇಗೆ ಮಾಡುತ್ತಾರೆ ಎಂಬ ಪ್ರಶ್ನೆಗೆ ಈ ವಚನದಲ್ಲಿದೆ ಉತ್ತರವನ್ನು ಕಾಣಬಹುದಾಗಿದೆ.
ಯೋಗವನ್ನು ಮನಮುಟ್ಟಿ |
ಭೋಗವನ್ನು ತೊರೆದಿದ್ದರೆ ಮಾಗಿಯಾ
ಮಳೆಯು ಸುರಿದಂತೆ ಸರ್ವಜ್ಞ ||
ಯೋಗಿಯು ತನ್ನ ದೇಹದ ಭೋಗಗಳನ್ನೆಲ್ಲ ಮನಸ್ಸಿನಿಂದ ತಿರಸ್ಕರಿಸಿ, ಮನಸ್ಸು ಏಕಾಗ್ರತೆಗೊಳಿಸಿ, ಯೋಗ ಸಾಧನೆ ಮಾಡಬೇಕು. ಹೀಗೆ ಮಾಡಿದರೆ ಬರಗಾಲದ ದಿನಗಳಲ್ಲಿ ಮಳೆ ಸುರಿದರೆ, ಭೂಮಿಯ ಮೇಲಿನ ಪೈರಿಗೆ ಹೇಗೆ ಹಿತಕರವಾಗಿರುತ್ತದೆಯೋ ಅದರಂತೆಯೇ ಆ ಯೋಗಿಯ ಯೋಗ ಸಾಧನೆಯು ಉನ್ನತಮಟ್ಟಕೇರುತ್ತದೆ. ಹಾಗಾದರೆ, ಯೋಗಿಯ ಯೋಗ್ಯತೆ, ಯೋಗ ಸಾಧನೆಯ ಮಹತ್ವ ಯಾರಿಗೆ ತಿಳಿದಿರುತ್ತದೆ?
ಯೋಗಿಯಾ ಮನದಳವ | ಯೋಗಿಯೇ ತಾ ಬಲ್ಲ |
ಯೋಗಿ ಯೋಗದಲಿ ಬೆರೆದಿದರೆ ಅವನೇ ನಿಜ |
ಯೋಗಿಯೆಂದರಿಗು ಸರ್ವಜ್ಞ ||
ಯೋಗಿಯ ಮನಸ್ಸಿನ ಯೋಗ್ಯತೆಯು ಯೋಗಿಗೆ ಮಾತ್ರ ತಿಳಿದಿರಬೇಕು. ಅದು ಬೇರೆಯವರಿಗೆ ತಿಳಿಯಲು ಸಾಧ್ಯವಾಗುವುದಿಲ್ಲ. ಯೋಗಿಯು ಯೋಗದಲ್ಲಿ ಆಸಕ್ತನಾದರೆ ಅವನೇ ನಿಜವಾದ ಯೋಗಿ. ಹೀಗೆ ಯೋಗದ ಮೂಲಕ ಮನಸ್ಸು ಮತ್ತು ಇಂದ್ರಿಯಗಳನ್ನು ಗೆದ್ದ ಯೋಗಿಯು ಏನಾಗುತ್ತಾನೆ ಎಂಬುದನ್ನು ನೋಡಬಹುದು.
ಹಸಿವು ಕೊಂದಾಯೋಗಿ | ವಸುಧೆಗೀಶ್ವರನಕ್ಕು ||
ಪಶುಪತಿಯು ಅಕ್ಕು ಕೈಲಾಸವಾತಂಗೆ ವಶವರ್ತಿಯಕ್ಕು ಸರ್ವಜ್ಞ |
ಹಸಿವೆ ಸೇರಿದಂತೆ ಎಲ್ಲವನ್ನೂ ಯೋಗದ ಮೂಲಕ ಗೆದ್ದ ಯೋಗಿಯು ಈ ಭೂಮಿಗೆ ರಾಜನಾಗುವನು. ಶಿವನಿಗೆ ಸಮಾನನಾದ ಯೋಗ್ಯತೆಯನ್ನು ಪಡೆಯುವನು. ಆತನಿಗೆ ಕೈಲಾಸವು ನಿಶ್ಚಯವಾಗಿ ಪ್ರಾಪ್ತವಾಗುತ್ತದೆ. ಇಂತಹ ಯೋಗಿಗೆ ಯಾವ ಜಾತಿ, ಮತವಿಲ್ಲ ಎಂದು ಸರ್ವಜ್ಞ ನುಡಿದಿದ್ದಾರೆ.
ಹೊಲೆಯಿಲ್ಲ ಅರಿದಂಗೆ | ಬಲವಿಲ್ಲ ಬಡವಂಗೆ |
ತೊಲೆ ಕಂಭವಿಲ್ಲ ಗಗನಕ್ಕೆ ಯೋಗಿಗಂ | ಕುಲವೆಂಬುದಿಲ್ಲ ಸರ್ವಜ್ಞ ||
ಈ ವಚನ ಜ್ಞಾನಿಗೆ ಯಾವ ಮೈಲಿಗೆಯೂ ಇಲ್ಲ. ಬಡವನಿಗೆ ಶಕ್ತಿಯಿಲ್ಲ, ಆಕಾಶಕ್ಕೆ ತೊಲೆಕಂಭ ವಿರುವುದಿಲ್ಲ. ಹೀಗೆಯೇ ಯೋಗಿ ಆದವನಿಗೂ ಯಾವ ಜಾತಿ, ಕುಲವೂ ಇರುವುದಿಲ್ಲ ಎನ್ನುವುದನ್ನು ತಿಳಿಸುತ್ತದೆ.
ಪತಂಜಲಿ ಮಹರ್ಷಿಗಳು “ಯೋಗಃಶ್ಚಿತ್ತವೃತ್ತಿ ನಿರೋಧಃ” ಎಂದು ಹೇಳಿದ್ದಾರೆ. ಮನಸ್ಸಿನಲ್ಲಿ ಏಳುವ ಅಲೆಗಳ ನಿರೋಧವೇ ಯೋಗ ಎಂಬುದೇ ಇದರರ್ಥ. ಭಗವದ್ಗೀತೆಯಲ್ಲಿ “ಸಮತ್ವಂ ಯೋಗ ಉಚ್ಚತೇ” ಎಂಬ ಉಲ್ಲೇಖವಿದೆ. ಹೀಗೆ ಮನಸ್ಸಿನ ಸಮಸ್ಥಿತಿಯನ್ನು ಸಾಧಿಸುವುದೇ ಯೋಗವಾಗಿದೆ. ಯೋಗಿಯಾದವನು ಎಂತಹ ಪರಿಸ್ಥಿತಿಯಲ್ಲೂ ಮನಸ್ಸಿನ ಸಮಚಿತ್ತತೆಯನ್ನು ಕಾಪಾಡಿಕೊಳ್ಳಬೇಕಾಗುತ್ತದೆ.
ಒಡಲು ತಾನಳಿವಲ್ಲಿ | ಮಡದಿಯರು ಕೆಡುವಲ್ಲಿ |
ತಡೆಯೆಡರು ನಿಂದೆ ಬರುವಲ್ಲಿ ಸಮತೆಯನು |
ಬಿಡದಿಹನೆ ಯೋಗಿ ಸರ್ವಜ್ಞ ||
ದೇಹವು ನಾಶವಾಗುವಾಗ (ಅಂದರೆ ಮರಣ ಕಾಲ ಬಂದಾಗ) ಹೆಂಡತಿ, ಮಕ್ಕಳಿಗೆ ಮರಣ ಬಂದಾಗ, ಅಡ್ಡಿ, ಸಂಕಟಗಳು ಬಂದಾಗ, ಮನಸ್ಸಿನ ಸಮತ್ವವನ್ನು (ಶಾಂತತೆಯನ್ನು) ಬಿಡದೆ ಇರುವವನು ನಿಜವಾದ ಯೋಗಿಯಾಗಿದ್ದಾನೆ ಎನ್ನುತ್ತಾರೆ ಸರ್ವಜ್ಞ. ಯೋಗಿಯು ಯಾವುದಕ್ಕೂ ಆಸೆಪಡುವುದಿಲ್ಲ ಎಂಬುದನ್ನು ಇಲ್ಲಿ ತಿಳಿಸಿದ್ದಾರೆ.
ಕಿಚ್ಚಿಗೆ ಸಾಕಿಲ್ಲ | ಕೊಚ್ಚೆಗೆ ಹೊಲೆಯಿಲ್ಲ |
ಚುಚ್ಚಿ ಕೊಡುವಂಗೆ ಗತಿಯಿಲ್ಲ ಯೋಗಿಗಂ ಇಚ್ಛೆಗಳೆ ಇಲ್ಲ ಸರ್ವಜ್ಞ |
ಬೆಂಕಿಗೆ ಎಷ್ಟು ಕಟ್ಟಿಗೆಯನ್ನು ಹಾಕಿದರೂ ಸಾಕಾಗುವುದಿಲ್ಲ. ಕೊಚ್ಚೆಗೆ ಹೊಲಸು ಎಂಬುದಿಲ್ಲ. ಇನ್ನೊಬ್ಬರ ಮೇಲೆ ಚಾಡಿಯನ್ನು ಹೇಳುವವನಿಗೆ ಪರಿಣಾಮವಿಲ್ಲ. ಯೋಗಿಗೆ ಯಾವ ಆಸೆಯೂ ಇರುವುದಿಲ್ಲ ಎಂಬ ಸಾರವನ್ನು ವಚನ ತಿಳಿಸುತ್ತದೆ.
ಮನುಷ್ಯರು ಇಂದ್ರಿಯಗಳ ದಾಸರಾಗಿದ್ದಾರೆ. ಸುಳ್ಳು ಹೇಳುವುದು, ವ್ಯಭಿಚಾರ, ಕುಡಿತ, ಧೂಮಪಾನ ಮಾಡುವುದು ಹೀಗೆ ಇಂದ್ರಿಯಗಳ ಅಲ್ಪ ಸುಖಕ್ಕಾಗಿ ಕಲಿತದ್ದನ್ನು ಬಿಡುವುದು ಕಷ್ಟವಾಗುತ್ತದೆ. ಏಕೆಂದರೆ ದೇಹ, ಮನಸ್ಸು ಅದಕ್ಕೆ ಒಗ್ಗಿಕೊಂಡಿರುತ್ತವೆ. ಅಷ್ಟಾಂಗ ಯೋಗದ ಐದನೇ ಹಂತವಾದ ಪ್ರತ್ಯಾಹಾರದಲ್ಲಿ ಹೇಳಿರುವಂತೆ ಇಂದ್ರಿಯಗಳನ್ನು ನಿಯಂತ್ರಣ ಮಾಡುವವನು ಯೋಗಿಯಾಗುತ್ತಾನೆ. ಇದೇ ವಿಚಾರಕ್ಕೆ ಸಂಬಂಧಿಸಿದಂತೆ ಸರ್ವಜ್ಞನ ವಚನ ಹೀಗಿದೆ.
ಓದಿ ಬೂದಿಯ ಪೂಸಿ | ತೇದು ಕಾವಿಯ ಹೊದೆದು |
ಹೋದಾತ ಯೋಗಿ ಎನಬೇಡ |
ಇಂದ್ರಿಯವ ಕಾದಾತ ಯೋಗಿ ಸರ್ವಜ್ಞ ||
ಅನೇಕ ಗ್ರಂಥಗಳನ್ನು ಓದಿ ವೈರಾಗ್ಯವನ್ನು ಸೂಚಿಸುವ ಬೂದಿಯನ್ನು ಮೈಗೆ ಬಳಿದುಕೊಂಡು ಅದರಂತೆಯೇ ಕಾವಿಯನ್ನು ಹೊದ್ದುಕೊಂಡು ದೇಶದಲ್ಲಿ ಸಂಚರಿಸುವವನಿಗೆ ಯೋಗಿಯೆನಬೇಡ. ಯಾರು ತನ್ನ ಇಂದ್ರಿಯವನ್ನು ಕಾಯ್ದುಕೊಂಡು (ಬಿಗಿಹಿಡಿದಿರುವನೋ) ಇರುವನೋ ಅವನೇ ನಿಜವಾದ ಯೋಗಿ.
ಮಾಳಿಗೆಯ ಮನೆಯಾಗಿ |
ಮೇಳದಾ ಸತಿಯಾಗಿ ಹೋಳಿಗೆಯು ತುಪ್ಪ ಉಣಲಾಗಿ ಇಂದ್ರಿಯನ |
ತಾಳಿದನೆ ಯೋಗಿ ಸರ್ವಜ್ಞ ||
ಉತ್ತಮವಾದ ಮೇಲಂತಸ್ತುಳ್ಳ ಮನೆಯಿದ್ದು, ಅನುಕೂಲಳಾದ ಹೆಂಡತಿಯಿದ್ದು, ನಿತ್ಯ ಹೋಳಿಗೆ, ತುಪ್ಪದೊಂದಿಗೆ ಮೃಷ್ಟಾನ್ನ ಭೋಜನ ಮಾಡುತ್ತಾ, ಎಲ್ಲ ಸುಖಕರವಾದ ಪರಿಸ್ಥಿತಿಯಲ್ಲೂ ಸಹ ಇಂದ್ರಿಯವನ್ನು ನಿಯಂತ್ರಿಸುವವನೇ ಯೋಗಿಯಾಗಿದ್ದಾನೆ.
ಮನಸ್ಸನ್ನು ಸ್ಥಿರವಾಗಿಟ್ಟುಕೊಂಡು, ಇಂದ್ರಿಯಗಳನ್ನು ನಿಯಂತ್ರಣ ಮಾಡಿಕೊಳ್ಳಬೇಕು. ಆಗ ಮೋಕ್ಷ ಪ್ರಾಪ್ತಿ ಸುಲಭವಾಗುತ್ತದೆ. ಇದಕ್ಕೆ ಮನುಷ್ಯ ಸದಾ ಪ್ರಯತ್ನಿಸುತ್ತಿರಬೇಕು. ಇದಕ್ಕೆ ಮುಖ್ಯವಾಗಿ ಅಷ್ಟಾಂಗ ಯೋಗದ ಪ್ರತಿಹಂತವನ್ನು ಅನುಸರಿಸಬೇಕಾಗುತ್ತದೆ. ಇದನ್ನೇ ಸರ್ವಜ್ಞ ತನ್ನ ವಚನಗಳಲ್ಲಿ ಹೇಳಿರುವುದನ್ನು ನೋಡಬಹುದಾಗಿದೆ.
ಎತ್ತಿತಾ ಪ್ರಾಣವನು | ನೆತ್ತಿಯಾ ಕೊನೆವರೆಗೆ |
ಚಿತ್ತದಾ ಮರ್ಮವರಿದಿಪ್ಪ ಶಿವಯೋಗಿಗೆತ್ತಣದು ಕೇಡು ಸರ್ವಜ್ಞ ||
ಯೋಗದಿಂದ ಪ್ರಾಣವಾಯುವನ್ನು ನಿರೋಧಿಸಿ ಅದನ್ನು ಮೇಲಕ್ಕೇರಿಸಿ ನೆತ್ತಿಗೆ (ಬ್ರಹ್ಮರಂಧ್ರದವರೆಗೆ) ಒಟ್ಟು ಮನಸ್ಸನ್ನು ಶಿವನಲ್ಲಿಯೇ ಲೀನವಾಗಿ ಮಾಡುವ ಶಿವಯೋಗಿಯ ಮೋಕ್ಷವೇ ಹೊರತು ಕೇಡು ಎಂದಿಗೂ ಒದಗಲಾರದು.
ಆಸನದಿ ದೃಢನಾಗಿ | ವಾಸನೆಯ ತಾ ಕಳೆದು |
ಸೂಸುವಾ ಮನವ ಬಿಗಿದಿಟ್ಟ ಶಿವಯೋಗಿ ಶಾಶ್ವತನೇ ಅಕ್ಕು ಸರ್ವಜ್ಞ ||
ಶಿವಯೋಗಿಯು ತಪಸ್ಸು ಮಾಡುವಾಗ ದೃಢವಾದ ಆಸನದ ಮೇಲೆ ಕುಳಿತು, ಎಲ್ಲ ವಿಷಯಗಳ ಮೇಲಿನ ವಾಸನೆ (ಆಸೆ)ಯನ್ನು ಬಿಟ್ಟು, ಅನೇಕ ಕಡೆಗೆ ಹರಿದಾಡುವ ಮನಸ್ಸನ್ನು ಬಿಗಿಹಿಡಿದು ಶಿವನ ಕಡೆಗೆ ಮನಸ್ಸನ್ನು ಹರಿಸಿದರೆ ಅವನು ಶಾಶ್ವತವಾದ ಕೈವಲ್ಯವನ್ನು ಹೊಂದುವನು ಎಂದು ಸರ್ವಜ್ಞ ಸಾರಿದ್ದಾರೆ.
ಮನುಷ್ಯರಲ್ಲಿ ಅರಿಷಡ್ವರ್ಗ ತುಂಬಿ ತುಳುಕುತ್ತಿದೆ. ಇವುಗಳು ಮನುಷ್ಯನ ಸ್ವಭಾವವಾಗಿ ರೂಪಗೊಂಡಿದೆ. ಯೋಗ, ಆಧ್ಯಾತ್ಮದಿಂದ ನಮ್ಮ ಆತ್ಮವನ್ನು ಶುದ್ಧಗೊಳಿಸಿದಾಗ ಮಾತ್ರ ಜ್ಞಾನದ ಬೆಳಕಿನಿಂದ ಸುಂದರ ಬದುಕನ್ನು ರೂಪಿಸಿಕೊಳ್ಳುತ್ತೇವೆ. ಯೋಗದಲ್ಲಿ ಸಾಧನೆ ಮಾಡಬೇಕಾದರೆ ಮನಸ್ಸನ್ನು ನಿಯಂತ್ರಣದಲ್ಲಿರಿಸಿಕೊಳ್ಳಬೇಕು. ಇದರಿಂದ ಧ್ಯಾನ, ತಪಸ್ಸು ಸಿದ್ಧಿಸುತ್ತದೆ. ಅಲ್ಲದೆ, ಮನುಷ್ಯನು ಮಾನಸಿಕ ಹಾಗೂ ಶಾರೀರಿಕವಾಗಿ ಸದೃಢವಾಗಿ, ಇಂದ್ರಿಯಗಳನ್ನು ನಿಯಂತ್ರಣ ಮಾಡಿ ಮುಕ್ತಿ ಪಡೆಯುವುದೇ ಯೋಗದ ಪರಮ ಗುರಿ. ಇಂತಹ ವಿಚಾರಗಳಿರುವ ಬಹುತೇಕ ವಚನಗಳು ಜನರ ಮನ್ನಣೆಗೆ ಪಾತ್ರವಾಗಿವೆ. ಏಕೆಂದರೆ ಸರ್ವಜ್ಞ ವಚನಗಳು ಇಂದಿಗೂ ಜೀವಂತವಾಗಿವೆ.
