ಮುಂಬೈ: ಡಿಸೆಂಬರ್ 18ರಿಂದ 20ರವರೆಗೆ ಮುಂಬೈನಲ್ಲಿ ನಡೆಯಲಿರುವ ವಿಶ್ವ ಹಿಂದೂ ಕಾಂಗ್ರೆಸ್ (WHC) 2026ರಲ್ಲಿ ಭಾಗವಹಿಸುವಂತೆ ಹಿಂದೂ ಯುವಕರಿಗೆ ಕರೆ ನೀಡುವ ವಿಡಿಯೋವನ್ನು ಇನ್ಸ್ಟಾಗ್ರಾಮ್ ಅಳಿಸಿದೆ. ಈ ಮೂಲಕ ಮೆಟಾ ಮಾಲೀಕತ್ವದ ಇನ್ಸ್ಟಾಗ್ರಾಮ್ ವಿರುದ್ಧ ಹಿಂದೂ ವಿರೋಧಿ ಧೋರಣೆಯ ಆರೋಪಗಳು ಮತ್ತೆ ಕೇಳಿಬಂದಿವೆ.
ಇದಕ್ಕೂ ಮೊದಲು ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಅವರು ವಿಶ್ವ ಹಿಂದೂ ಕಾಂಗ್ರೆಸ್ 2026ರಲ್ಲಿ ಭಾಗವಹಿಸುವಂತೆ ಜಾಗತಿಕ ಹಿಂದೂ ಸಮುದಾಯಕ್ಕೆ ಕರೆ ನೀಡಿದ್ದ ವಿಡಿಯೋವನ್ನು ಇನ್ಸ್ಟಾಗ್ರಾಮ್ ಎರಡು ಬಾರಿ ಅಳಿಸಿತ್ತು.
ಮುಖ್ಯಮಂತ್ರಿಗಳ ವಿಡಿಯೋವನ್ನು ಪದೇಪದೇ ಅಳಿಸಿದ ಹಿನ್ನೆಲೆಯಲ್ಲಿ ಅಧಿಕೃತ ದೂರು ಸಲ್ಲಿಸಲಾಗಿತ್ತು. ಸಂಬಂಧಪಟ್ಟ ಅಧಿಕಾರಿಗಳ ಮಧ್ಯಪ್ರವೇಶದ ಬಳಿಕ ಇನ್ಸ್ಟಾಗ್ರಾಮ್ ಆ ವಿಡಿಯೋವನ್ನು ಮರುಸ್ಥಾಪಿಸಿತ್ತು. ಆದರೆ, ವಿಡಿಯೋವನ್ನು ಏಕೆ ಅಳಿಸಲಾಗಿತ್ತು ಎಂಬುದಕ್ಕೆ ಯಾವುದೇ ವಿವರಣೆ ನೀಡಿರಲಿಲ್ಲ. ಅಲ್ಲದೆ, ಕ್ಷಮೆಯನ್ನೂ ಕೇಳಿರಲಿಲ್ಲ.
ಇತ್ತೀಚಿನ ಘಟನೆಯಲ್ಲಿ, ಈ ಹಿಂದೆ ನಡೆದ ವಿಶ್ವ ಹಿಂದೂ ಕಾಂಗ್ರೆಸ್ ಕಾರ್ಯಕ್ರಮಗಳಲ್ಲಿ ಸ್ವಯಂಸೇವಕರಾಗಿ ಭಾಗವಹಿಸಿದ್ದ ವ್ಯಕ್ತಿಯೊಬ್ಬರ ವಿಡಿಯೋ ಸಂದೇಶವನ್ನು ಇನ್ಸ್ಟಾಗ್ರಾಮ್ ಅಳಿಸಿದೆ. ಈ ವಿಡಿಯೋದಲ್ಲಿ ಅವರು ತಮ್ಮ ಅನುಭವಗಳನ್ನು ಹಂಚಿಕೊಂಡಿದ್ದರು. ಅಲ್ಲದೆ, ವಿಶ್ವ ಹಿಂದೂ ಕಾಂಗ್ರೆಸ್ನ ಮಹತ್ವವನ್ನು ವಿವರಿಸಿ, ಹಿಂದೂ ಯುವಕರು ಈ ಕಾರ್ಯಕ್ರಮದಲ್ಲಿ ಭಾಗವಹಿಸುವಂತೆ ಮನವಿ ಮಾಡಿದ್ದರು. ಜಾಗತಿಕ ಮಟ್ಟದಲ್ಲಿ ಹಿಂದೂ ಯುವಕರು ಪರಸ್ಪರ ಸಂಪರ್ಕ ಬೆಳೆಸಲು, ಒಟ್ಟಾಗಿ ಕೆಲಸ ಮಾಡಲು ಮತ್ತು ತಮ್ಮ ಕೊಡುಗೆ ನೀಡಲು ಈ ಕಾರ್ಯಕ್ರಮ ಉತ್ತಮ ಅವಕಾಶವಾಗಿದೆ ಎಂದು ಅವರು ತಿಳಿಸಿದ್ದರು.
ಈ ಕುರಿತು ಪ್ರತಿಕ್ರಿಯಿಸಿರುವ ವಿಶ್ವ ಹಿಂದೂ ಕಾಂಗ್ರೆಸ್ 2026ರ ಸಂಘಟನಾ ಸಮಿತಿಯ ಕಾರ್ಯದರ್ಶಿ ಸ್ವದೇಶ್ ಖೇತಾವತ್ ಅವರು, ಇನ್ಸ್ಟಾಗ್ರಾಮ್ನ ಈ ಕ್ರಮವನ್ನು ಖಂಡಿಸಿದ್ದಾರೆ.
“ವಿಶ್ವ ಹಿಂದೂ ಕಾಂಗ್ರೆಸ್ಗೆ ಸಂಬಂಧಿಸಿದ ವಿಡಿಯೋಗಳನ್ನು ಇನ್ಸ್ಟಾಗ್ರಾಮ್ ಪದೇಪದೇ ಅಳಿಸುತ್ತಿರುವುದು ನಮ್ಮ ಪ್ರಚಾರ ಕಾರ್ಯಕ್ಕೆ ಅಡ್ಡಿಪಡಿಸುವ ಮತ್ತು ಜಾಗತಿಕ ಹಿಂದೂ ನಾಯಕತ್ವದ ಈ ಸಮಾವೇಶದ ವ್ಯಾಪ್ತಿಯನ್ನು ಕುಗ್ಗಿಸುವ ಉದ್ದೇಶಪೂರ್ವಕ ಪ್ರಯತ್ನದಂತೆ ಕಾಣುತ್ತಿದೆ. ನಾವು ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಿದ್ದೇವೆ. ಸೂಕ್ತ ಮಾರ್ಗಗಳ ಮೂಲಕ ಈ ವಿಚಾರವನ್ನು ಮುಂದಕ್ಕೆ ಕೊಂಡೊಯ್ಯುತ್ತೇವೆ. ಇನ್ಸ್ಟಾಗ್ರಾಮ್ ತನ್ನ ಹಿಂದೂ ವಿರೋಧಿ ಧೋರಣೆಯನ್ನು ನಿಲ್ಲಿಸಿ, ಎಲ್ಲರಿಗೂ ಯಾವುದೇ ತಾರತಮ್ಯವಿಲ್ಲದೆ ಸಮಾನ ಅವಕಾಶ ನೀಡುವಂತೆ ಮಾಡಲು ಅಗತ್ಯ ಕ್ರಮಗಳನ್ನು ಕೈಗೊಳ್ಳುತ್ತೇವೆ” ಎಂದು ಅವರು ಹೇಳಿದ್ದಾರೆ.
ವಿಶ್ವ ಹಿಂದೂ ಕಾಂಗ್ರೆಸ್ಗೆ ಸಂಬಂಧಿಸಿದ ವಿಡಿಯೋಗಳನ್ನು ಪದೇಪದೇ ಅಳಿಸುತ್ತಿರುವುದು ಇನ್ಸ್ಟಾಗ್ರಾಮ್ನ ವಿಷಯ ನಿಯಂತ್ರಣ ಕ್ರಮಗಳ ಬಗ್ಗೆ ಹಲವು ಪ್ರಶ್ನೆಗಳನ್ನು ಹುಟ್ಟುಹಾಕಿದೆ. ಹಿಂದೂ ಸಂಘಟನೆಗಳು ಮತ್ತು ಅವುಗಳ ಚಟುವಟಿಕೆಗಳಿಗೆ ಸಂಬಂಧಿಸಿದ ವಿಷಯಗಳನ್ನು ಇನ್ಸ್ಟಾಗ್ರಾಮ್ ಹೇಗೆ ನಿರ್ವಹಿಸುತ್ತಿದೆ ಎಂಬ ಬಗ್ಗೆಯೂ ಕಳವಳ ವ್ಯಕ್ತವಾಗಿದೆ. ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಅವರ ವಿಡಿಯೋ ಪ್ರಕರಣದಲ್ಲಿ ಅಧಿಕಾರಿಗಳು ಮಧ್ಯಪ್ರವೇಶಿಸಿದ ಬಳಿಕವೂ ಇಂತಹ ಘಟನೆ ಮರುಕಳಿಸಿರುವುದು ಈ ಕಳವಳವನ್ನು ಮತ್ತಷ್ಟು ಹೆಚ್ಚಿಸಿದೆ.
ಈ ಬೆಳವಣಿಗೆಯ ಬೆನ್ನಲ್ಲೇ ವಿಶ್ವ ಹಿಂದೂ ಕಾಂಗ್ರೆಸ್ನ ನಿಯೋಗವು ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಅವರನ್ನು ಭೇಟಿಯಾಗಿ, ಮೆಟಾ (ಇನ್ಸ್ಟಾಗ್ರಾಮ್) ಸಂಸ್ಥೆಯು ವಿಶ್ವ ಹಿಂದೂ ಕಾಂಗ್ರೆಸ್ 2026ರ ಪ್ರಚಾರ ವಿಡಿಯೋಗಳನ್ನು ಪದೇಪದೇ ಅಳಿಸುತ್ತಿರುವ ಕುರಿತು ತಕ್ಷಣ ಮಧ್ಯಪ್ರವೇಶಿಸುವಂತೆ ಮನವಿ ಸಲ್ಲಿಸಿದೆ.
ಮೆಟಾ ಸಂಸ್ಥೆಯ ಪ್ರತಿನಿಧಿಗಳನ್ನು ಮುಂಬೈಗೆ ಕರೆಸಿ, ವಿಡಿಯೋಗಳನ್ನು ಪದೇಪದೇ ಅಳಿಸುತ್ತಿರುವುದಕ್ಕೆ ಅಧಿಕೃತ ವಿವರಣೆ ಪಡೆಯಬೇಕು. ಅನ್ವಯವಾಗುವ ಕಾನೂನುಗಳ ಉಲ್ಲಂಘನೆ ಕಂಡುಬಂದರೆ ಸೂಕ್ತ ಪೊಲೀಸ್ ತನಿಖೆ ಆರಂಭಿಸಬೇಕು. ಅಲ್ಲದೆ, ಮೆಟಾದ ವಿಷಯ ನಿಯಂತ್ರಣ ಕ್ರಮಗಳಲ್ಲಿ ಹೊಣೆಗಾರಿಕೆ ಮತ್ತು ಪಾರದರ್ಶಕತೆಯನ್ನು ಖಚಿತಪಡಿಸಬೇಕು ಎಂದು ನಿಯೋಗವು ಮುಖ್ಯಮಂತ್ರಿಗಳನ್ನು ಒತ್ತಾಯಿಸಿದೆ.
ಕಾನೂನುಬದ್ಧವಾದ ಪ್ರಚಾರ ವಿಡಿಯೋಗಳನ್ನು ಪದೇಪದೇ ಅಳಿಸುತ್ತಿರುವುದರಿಂದ ಜಾಗತಿಕ ಹಿಂದೂ ಸಮುದಾಯವನ್ನು ತಲುಪುವ ವಿಶ್ವ ಹಿಂದೂ ಕಾಂಗ್ರೆಸ್ನ ಪ್ರಯತ್ನಗಳಿಗೆ ತೊಂದರೆಯಾಗುತ್ತಿದೆ ಎಂದು ನಿಯೋಗ ಕಳವಳ ವ್ಯಕ್ತಪಡಿಸಿದೆ. ವಿಶೇಷವಾಗಿ ಭಾರತ ಸೇರಿದಂತೆ ವಿಶ್ವದ ವಿವಿಧ ಭಾಗಗಳಲ್ಲಿರುವ ಹೊಸ ತಲೆಮಾರಿನ ಹಿಂದೂ ಯುವ ನಾಯಕರನ್ನು ತಲುಪುವ ಅವಕಾಶಕ್ಕೆ ಇದರಿಂದ ಹಿನ್ನಡೆಯಾಗುತ್ತಿದೆ ಎಂದು ತಿಳಿಸಿದೆ.
ವಿಕ್ರಮ ಓದುಗರ ವಾಟ್ಸಪ್ ಬಳಗಕ್ಕೆ ಸೇರಲು ಈ ಸಂಖ್ಯೆಯನ್ನು ನಿಮ್ಮ ಮೊಬೈಲ್ನಲ್ಲಿ ಸೇವ್ ಮಾಡಿಕೊಂಡು ನಮಗೊಂದು ಸಂದೇಶ ಕಳುಹಿಸಿ. ಮೊಬೈಲ್ ಸಂಖ್ಯೆ: 98800 21122
