ರಾಂಚಿ: ಆದಿವಾಸಿ ಹೋರಾಟಗಾರ್ತಿ ನಿಶಾ ಭಗತ್ ಸಾವಿನ ಪ್ರಕರಣದ ಬಗ್ಗೆ ನ್ಯಾಯಯುತ ತನಿಖೆ ನಡೆಸಬೇಕು ಎಂದು ಆಗ್ರಹಿಸಿ ಜಾರ್ಖಂಡ್ನಲ್ಲಿ ಬಿಜೆಪಿ ಹೋರಾಟ ತೀವ್ರಗೊಳಿಸಿದೆ. ನಿಶಾ ಅವರ ಸಾವಿಗೆ ಕಾರಣರಾದವರನ್ನು ಬಂಧಿಸಬೇಕು ಮತ್ತು ಪ್ರಕರಣವನ್ನು ಸಿಬಿಐ ತನಿಖೆಗೆ ವಹಿಸಬೇಕು ಎಂದು ಪಕ್ಷ ಒತ್ತಾಯಿಸಿದೆ.
ಈ ಬೇಡಿಕೆಗಳನ್ನು ಮುಂದಿಟ್ಟುಕೊಂಡು ಬಿಜೆಪಿ ಎಸ್ಟಿ ಮೋರ್ಚಾ ಮಂಗಳವಾರ ದಕ್ಷಿಣ ಛೋಟಾನಾಗಪುರ ವಿಭಾಗದ ಏಳು ಜಿಲ್ಲೆಗಳಲ್ಲಿ ಮಶಾಲ್ ಮೆರವಣಿಗೆ ನಡೆಸಿತು. ರಾಂಚಿ, ಲೋಹರ್ದಗಾ, ಗುಮ್ಲಾ, ಸಿಮ್ಡೆಗಾ ಮತ್ತು ಖೂಂಟಿ ಸೇರಿದಂತೆ ಏಳು ಜಿಲ್ಲೆಗಳಲ್ಲಿ ಪಕ್ಷದ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.
ರಾಂಚಿಯಲ್ಲಿ ನಡೆದ ಮೆರವಣಿಗೆಗೆ ಮಾಜಿ ಸಂಸದ ಸಮೀರ್ ಓರಾನ್ ನೇತೃತ್ವ ವಹಿಸಿದ್ದರು. ನಿಶಾ ಭಗತ್ಗೆ ನ್ಯಾಯ ಸಿಗುವವರೆಗೂ ಹೋರಾಟ ಮುಂದುವರಿಸುವುದಾಗಿ ಬಿಜೆಪಿ ತಿಳಿಸಿದೆ. ಇದರ ಭಾಗವಾಗಿ ನವೆಂಬರ್ 18ರಂದು ದಕ್ಷಿಣ ಛೋಟಾನಾಗಪುರ ವಿಭಾಗದಲ್ಲಿ ಬಂದ್ ನಡೆಸುವುದಾಗಿಯೂ ಘೋಷಿಸಿದೆ.
ನಿಶಾ ಅವರು ಆದಿವಾಸಿಗಳ ಹಕ್ಕು, ಭೂಮಿ, ಸಂಸ್ಕೃತಿ ಮತ್ತು ಸಂಪ್ರದಾಯಗಳ ರಕ್ಷಣೆಗಾಗಿ ಹೋರಾಡುತ್ತಿದ್ದರು ಎಂದು ಬಿಜೆಪಿ ನಾಯಕರು ಹೇಳಿದ್ದಾರೆ. ಅವರ ಸಾವಿನ ಹಿಂದಿನ ಎಲ್ಲ ಘಟನೆಗಳ ಬಗ್ಗೆ ಸಮಗ್ರ ತನಿಖೆ ನಡೆಸಬೇಕು ಎಂದು ಆಗ್ರಹಿಸಿದ್ದಾರೆ.
ನಿಶಾ ಅವರ ತಂದೆ ನೀಡಿದ್ದ ದೂರಿನಲ್ಲಿ ಪೊಲೀಸ್ ಅಧಿಕಾರಿಯೊಬ್ಬರ ಹೆಸರಿದ್ದರೂ, ಎಫ್ಐಆರ್ನಲ್ಲಿ ಆ ಹೆಸರನ್ನು ಆರೋಪಿಗಳ ಪಟ್ಟಿಯಲ್ಲಿ ಸೇರಿಸಿಲ್ಲ ಎಂಬ ಆರೋಪವೂ ಕೇಳಿಬಂದಿದೆ. ಈ ಬಗ್ಗೆ ಬಿಜೆಪಿ ನಾಯಕರು ಪೊಲೀಸ್ ಇಲಾಖೆಯನ್ನು ಪ್ರಶ್ನಿಸಿದ್ದಾರೆ.
ಇದಕ್ಕೆ ಪ್ರತಿಕ್ರಿಯಿಸಿರುವ ರಾಂಚಿ ಗ್ರಾಮೀಣ ಪೊಲೀಸ್ ವರಿಷ್ಠಾಧಿಕಾರಿ ಗೌರವ್ ಗೋಸ್ವಾಮಿ, ಪ್ರಕರಣದ ತನಿಖೆ ಡಿಎಸ್ಪಿ ಮಟ್ಟದ ಅಧಿಕಾರಿಯಿಂದ ನಡೆಯುತ್ತಿದೆ. ಪ್ರಕರಣದ ಎಲ್ಲ ಆಯಾಮಗಳನ್ನು ಪರಿಶೀಲಿಸಲು ವಿಶೇಷ ತನಿಖಾ ತಂಡವನ್ನೂ ರಚಿಸಲಾಗಿದೆ ಎಂದು ತಿಳಿಸಿದ್ದಾರೆ. ವಿಧಿವಿಜ್ಞಾನ ಮತ್ತು ಮರಣೋತ್ತರ ಪರೀಕ್ಷೆಯ ವರದಿಗಳಿಗಾಗಿ ಪೊಲೀಸರು ಕಾಯುತ್ತಿದ್ದಾರೆ. ತನಿಖೆಯಲ್ಲಿ ಯಾರ ಪಾತ್ರ ಸಾಬೀತಾದರೂ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದ್ದಾರೆ.
ವಿಕ್ರಮ ಓದುಗರ ವಾಟ್ಸಪ್ ಬಳಗಕ್ಕೆ ಸೇರಲು ಈ ಸಂಖ್ಯೆಯನ್ನು ನಿಮ್ಮ ಮೊಬೈಲ್ನಲ್ಲಿ ಸೇವ್ ಮಾಡಿಕೊಂಡು ನಮಗೊಂದು ಸಂದೇಶ ಕಳುಹಿಸಿ. ಮೊಬೈಲ್ ಸಂಖ್ಯೆ: 98800 21122
