ಅಂಕಣ – ದೃಶ್ಯ
● ಕಲಾಕೃತಿಗಳ ಹಂದರದಲಿ ಘಮಿಸಿದ ಕರ್ನಾಟಕ ಉತ್ತರ ಗ್ರಾಮೀಣ ಸೊಗಡು
- ಗಣಪತಿ ಅಗ್ನಿಹೋತ್ರಿ, ದೃಶ್ಯ ಕಲಾವಿದ, ಕಲಾವಿಮರ್ಶಕ, ಪತ್ರಕರ್ತ
ದೃಶ್ಯಕಲೆಯ ಮೇಲೆ ನಗರೀಕರಣದ ಪ್ರಭಾವ ಅಥವಾ ಕಲಾಕೃತಿ ಹುಟ್ಟಿಕೊಳ್ಳುವ ಪ್ರಕ್ರಿಯೆಯ ಹಿಂದಿನ ಸ್ಫೂರ್ತಿ, ಆಕರ್ಷಣೆಯಲ್ಲೂ ನಗರ ಸಂಸ್ಕೃತಿಯೇ ಪ್ರಭಾವ ಬೀರುತ್ತಿರುವುದು ಕಳೆದೊಂದು ದಶಕದಲ್ಲಿ ತುಸು ಜಾಸ್ತಿಯೇ ಕಂಡುಬರುತ್ತಿದೆ. ಕೆಲವೊಮ್ಮೆ ಕಲಾಕೃತಿಗಳ ಹಂದರದೊಳಗಿನ ಚೆಂದವೆನಿಸುವ ಗ್ರಾಮೀಣ ಸೊಗಡಿನ ಭಾವನೆಗಳನ್ನೇ ಕಳೆದುಕೊಳ್ಳುತ್ತಿದ್ದೇವೇನೋ ಎನ್ನುವಷ್ಟರ ಮಟ್ಟಿಗೆ ಕಾಡುವುದುಂಟು. ಹಾಗಂತ ನಗರೀಕರಣದ ದ್ವೇಷಿ ಎಂದು ಭಾವಿಸಬೇಕಿಲ್ಲ. ನಗರ ಸಂಸ್ಕೃತಿ ಅಷ್ಟರಮಟ್ಟಿಗೆ ಕಲಾವಿದರನ್ನು ಅಥವಾ ಇನ್ನಾವುದೇ ಸಾಂಸ್ಕೃತಿಕ ಕ್ಷೇತ್ರವನ್ನು ಆವರಿಸಿಕೊಳ್ಳುವುದನ್ನು ಗಮನಿಸಿದಾಗ ಗ್ರಾಮೀಣ ಸಂಸ್ಕೃತಿಯ ಸೊಗಡನ್ನು ಮುಂಬರುವ ಪೀಳಿಗೆ ಕಳೆದುಕೊಳ್ಳುವುದರಲ್ಲಿ ಯಾವ ಅನುಮಾನವೂ ಕಾಣಿಸುವುದಿಲ್ಲ.
“The soul of India lives in its villages” ಈ ಮಾತು ಹೇಳಿರುವ ಮಹಾತ್ಮಾ ಗಾಂಧಿ ಅವರು ಈಗ ಇದ್ದಿದ್ದರೆ ಹೇಗೆ, ಪ್ರತಿಕ್ರಿಯಿಸುತ್ತಿದ್ದರೋ ಅನಿಸುವುದುಂಟು. ಗ್ರಾಮೀಣ ಭಾಗದ ವಿಚಾರ ಧಾರೆಗಳು ಕಲಾಕೃತಿಗಳಲ್ಲಿ ಕಡಿಮೆ ಆಗುತ್ತಿವೆ ಎಂದು ನೇರವಾಗಿ ಹೇಳಲು ಸಾಧ್ಯವಾಗದೇ ಇರಬಹುದು. ಆದರೆ, ಅಪರೂಪ ಎನ್ನುವಂತಿವೆ ಎಂದರೆ ತಪ್ಪಾಗಲಿಕ್ಕಿಲ್ಲವೇನೊ. ಕಾರಣ ನಗರೀಕರಣಕ್ಕೆ ಹೊಸ ತಲೆಮಾರಿನ ಕಲಾವಿದರು ಹೆಚ್ಚು ಆಕರ್ಷಿತರಾಗುತ್ತಿದ್ದಾರಾ ಎನ್ನುವ ಅನುಮಾನವಂತೂ ಇದ್ದೇ ಇದೆ. ಇಂತಹ ಅನುಮಾನಗಳು ಸುಳ್ಳು ಎನ್ನಬಹುದಾದಂತಹ ‘ಹೂ… ಬಳ್ಳಿ-ವರ್ಣ ಸಂಗಮ’ ಶೀರ್ಷಿಕೆಯಡಿ ಮೂರು ಪ್ರತ್ಯೇಕ ಕಲಾಪ್ರದರ್ಶನಗಳು ಏಕಕಾಲದಲ್ಲಿ ಬೆಂಗಳೂರಿನ ವೆಂಕಟಪ್ಪ ಆರ್ಟ್ ಗ್ಯಾಲರಿಗಳಲ್ಲಿ ನಡೆದವು. ಎರಡು ಗ್ಯಾಲರಿಗಳಲ್ಲಿ ಪ್ರತ್ಯೇಕ ಏಕವ್ಯಕ್ತಿ ಕಲಾಪ್ರದರ್ಶನಗಳಾಗಿದ್ದರೆ, ಇನ್ನೊಂದು ಗ್ಯಾಲರಿಯಲ್ಲಿ ಸಮೂಹ ಪ್ರದರ್ಶನ ಆಯೋಜನೆಗೊಂಡಿತ್ತು. ಹುಬ್ಬಳ್ಳಿಯ ಹೂ… ಬಳ್ಳಿಗಳು ರಚಿಸಿರುವ ಕಲಾಕೃತಿಗಳು ಗಮನ ಸೆಳೆದವು.
ಹುಬ್ಬಳ್ಳಿಯ 18 ಮಂದಿ ಕಲಾವಿದರ ಸಮೂಹ ರಾಜಧಾನಿಯ ಗ್ಯಾಲರಿಯಲ್ಲಿ ಕಲಾಕೃತಿಗಳನ್ನು ಪ್ರದರ್ಶಿಸುವುದು ಶ್ಲಾಘನೀಯ. ಅಷ್ಟೇ ಅಲ್ಲ, ಇದೊಂದು ಸಂಘಟನಾತ್ಮಕ ಪ್ರಯತ್ನವೂ ಹೌದು. ಸಾಮಾನ್ಯವಾಗಿ ರಾಜಧಾನಿಯಲ್ಲೇ ಇರುವ ಹೂ…ಬಳ್ಳಿ ಕಲಾವಿದರಿಗೆ ಪ್ರದರ್ಶನ ಹೆಚ್ಚು ಮುಖ್ಯವಾಗುತ್ತೆ ಎನ್ನಲಾಗದು. ಹತ್ತಾರು ಗ್ಯಾಲರಿಗಳಲ್ಲಿ ಒಂದಲ್ಲಾ ಒಂದು ಪ್ರದರ್ಶನ ನಡೆಯುವಾಗ ಹತ್ತರ ಜೊತೆ ಇನ್ನೊಂದು ಅನಿಸಿಕೊಳ್ಳಬಹುದು. ಆದರೆ, ಕಲಾಕೃತಿಗಳಲ್ಲಿರುವ ವಿಚಾರಧಾರೆಗಳು ರಾಜಧಾನಿಗೆ ಮುಖ್ಯವಾಗುತ್ತದೆ. ಗ್ರಾಮೀಣ ಮಟ್ಟದಲ್ಲಿ ವಿಚಾರಗಳು ನಗರೀಕರಣಕ್ಕೀಂತ ಹೆಚ್ಚು ಪ್ರಾಮಾಣಿಕ ಮತ್ತು ಪರಿಶುದ್ಧ ಭಾವ ನೀಡಲು ಸಾಧ್ಯವಾದೀತು ಎನ್ನುವುದು ಗಮನ ಸೆಳೆಯುತ್ತದೆ. ಕಾಂಕ್ರೀಟ್ ಕಾಡಿನ ಮಧ್ಯೆ ಗ್ರಾಮೀಣ ಭಾಗದ ನಗರೀಕರಣ ಪ್ರಭಾವದಿಂದ ದೂರವುಳಿದ ಕಲಾಕೃತಿಗಳು ಪ್ರದರ್ಶಿಸಲ್ಪಟ್ಟಿರುವುದು ಇತಿಹಾಸದ ಪುಟದಲ್ಲಿ ದಾಖಲಾಗಬೇಕಾದ ಸಂಗತಿಯಾಗಿದೆ.
‘ನಾನು ನನ್ನಸುತ್ತ’ ಪ್ರದರ್ಶನದಲ್ಲಿನ ಕಲಾಕೃತಿಗಳ ಬಗ್ಗೆ ಹೇಳಬೇಕೆಂದರೆ, ಉತ್ತರ ಕರ್ನಾಟಕದ ಜೀವನ ಪದ್ಧತಿ ಮತ್ತು ತಮ್ಮ ವೃತ್ತಿ ಪ್ರೀತಿಯ ಬಗ್ಗೆ ಅಪಾರವಾದ ಅಭಿಮಾನ ಹೊಂದಿರುವ ಕಲಾವಿದ, ಸಂಘಟಕ ಶಂಕರ್ ಕಡಕುಂಟ್ಲ ಅವರ ಕಲಾಕೃತಿಗಳು ವಾಸ್ತವಿಕ ವಾದಿಗಳ ಸಿದ್ಧಾಂತವನ್ನೆ ತೆರೆದಿಡುತ್ತವೆ ಎಂದೇ ಹೇಳಬಹುದು. ಆದರೆ, ಇತ್ತೀಚಿನ ದಿನಳಲ್ಲಿ ಅವರ ಎಂದಿನ ಕಲಾಕೃತಿಗಳ ರಚನಾ ಶೈಲಿ ಬದಲಾಗಲಾರಂಭಿಸಿದೆ. ಒಂದೆರಡು ಕಲಾಕೃತಿಗಳಲ್ಲಿ ಸಮಕಾಲೀನ ಚಿಂತನೆಯ ಸುಳಿವು ಅವರನ್ನು ಹೊಸ ದಿಕ್ಕಿನತ್ತ ಕರೆದೊಯ್ಯುತ್ತಿದೆ ಎನ್ನುವುದಕ್ಕೆ ಸಾಕ್ಷಿಯಾಗಿತ್ತು. ಉತ್ತರ ಕರ್ನಾಟಕದ ಜೀವನ ಸಂಸ್ಕೃತಿಗೆ ಕನ್ನಡಿ ಹಿಡಿದಂತೆ ಇರುವ ಇವರ ಕಲಾಕೃತಿಗಳು ಗಾಢ ವರ್ಣಗಳಿಂದ ಕೂಡಿರುತ್ತವೆ. ಇತ್ತೀಚಿನ ಕಲಾಕೃತಿಗಳಲ್ಲಿ ವರ್ಣ ಬಳಕೆ ಬೇರೆಯೇ ಆಗಿದೆ. ಸಮಕಾಲೀನ ಸಂದರ್ಭದ ಕಲಾಕೃತಿಗಳಲ್ಲಿನ ಭಾಷೆ ಇನ್ನಷ್ಟು ತೆರೆದುಕೊಳ್ಳುವ ಸಾಧ್ಯತೆ ಶಂಕರ್ ಅವರ ಮೇಲಿನ ನಿರೀಕ್ಷೆ ಹೆಚ್ಚಿಸಿದೆ.
ಇನ್ನು ‘ಸ್ತ್ರೀ ಕೃತಿ’ ಪ್ರದರ್ಶನದಲ್ಲಿದ್ದ ಯುವ ಕಲಾವಿದ ವಿಜಂ ಅ. ಧೋಂಗಡಿ ಅವರ ಕಲಾಕೃತಿಗಳು ಕಣ್ಣಿಗೆ ಹಳದಿ ಹಬ್ಬದ ಸವಿ ಉಣಬಡಿಸಿಬಿಡುವಂತಿತ್ತು. ಉತ್ತರ ಕರ್ನಾಟಕದ ಸಾಂಪ್ರದಾಯಿಕ ಹೆಣ್ಣಿನ ಪ್ರತಿರೂಪ ಎನ್ನುವಂತೆ ಕಾಣಿಸುವ ಅವರ ಕಲಾಕೃತಿಗಳಲ್ಲಿನ ಬಣ್ಣ, ರೇಖೆ ಮತ್ತು ಅಲಂಕಾರಿಕ ಶೈಲಿಯ ರೂಪಗಳು ಕಣ್ಮನ ಸೆಳೆಯುತ್ತವೆ. ರೂಪ, ಭಾವದಲ್ಲಿ ತುಸು ಹಳ್ಳಿ ಹುಡುಗಿಗೆ ಪೇಟೆ ಆಕರ್ಷಣೆ ಇದ್ದಂತೆ ಕಾಣಿಸಿದರೂ ಶೈಲಿ ನಿರೂಪಣೆಯ ನಿರ್ವಹಣೆ ಗಮನ ಸೆಳೆಯುವಂತೆ ಮಾಡುತ್ತವೆ. ಇವರ ಕಲಾಕೃತಿಗಳಲ್ಲಿಯೂ ಸಂಯೋಜನೆಯಲ್ಲಿನ ಬದಲಾವಣೆ ಹೊಸ ಆಯಾಮವನ್ನು ತೆರೆದುಕೊಡುತ್ತವೆ. ಸಂಸ್ಕೃತಿ, ಸಂಸ್ಕಾರದ ನೆಲೆಯಲ್ಲಿ ಬಣ್ಣಗಳ ನಿರ್ವಹಣೆ ನೋಡುಗರಿಗೆ ಆಕರ್ಷಣೀಯವೆನಿಸುತ್ತವೆ.
ಇನ್ನು ಸಮೂಹ ಪ್ರದರ್ಶನದಲ್ಲಿ ವಿ.ಡಿ. ಬಡಿಗೇರ್, ಈಶ್ವರ್ ಜೋಷಿ, ಸಿ.ಕೆ. ಯಡ್ರಾಮಿ, ಎಂ. ಶೇಕ್, ಜಿ.ಆರ್. ಮಲ್ಲಾಪುರ್, ಸುಮಾ ಶೇಟ್, ಶಕುಂತಲಾ ವರ್ಣೇಕರ್, ಪ್ರತಿಮಾ ದೊಡ್ಡಮನಿ, ಮಂಜುಳಾ ಕೆ.ವಿ, ಎಂ.ಎಸ್. ಲಂಗೋಟಿ, ಲಕ್ಷ್ಮಣ್ ಕಬಾಡಿ, ಗಣೇಶ್ ಬಡಿಗೇರ್, ಎಂ.ಎನ್. ಪಾಟೀ, ಕಿರಣ್ ಶೇರ್ಖಾನೆ, ಗಣೇಶ್ ಸಾಬೋಜಿ, ಗಂಗೂ ಗೌಡ ಅವರ ಕಲಾಕೃತಿಗಳು ಪ್ರದರ್ಶನಗೊಂಡಿದ್ದವು. ಮೂರ್ತ – ಅಮೂರ್ತ ನೆಲೆಯಲ್ಲಿ ನಿಲ್ಲಬಹುದಾದ ಕಲಾಕೃತಿಗಳು ಇದ್ದವು. ಕಲಾಕೃತಿಗಳನ್ನು ಪ್ರದರ್ಶನಕ್ಕೆಂದು ಕೈಗೆತ್ತಿಕೊಳ್ಳುವ ಸಂದರ್ಭದಲ್ಲಿ ಗುಣಮಟ್ಟದ ಕಡೆ ಇನ್ನಷ್ಟು ಗಮನ ಹರಿಸಿ, ಸಂಖ್ಯೆಯ ಮಿತಿ ಇಟ್ಟುಕೊಂಡಿದ್ದರೆ ಪ್ರದರ್ಶನದ ಕಂಪನ ಹೆಚ್ಚುತ್ತಿತ್ತು. ಈ ನಿಟ್ಟಿನಲ್ಲಿ ಕಲಾವಿದರ ಜವಾಬ್ದಾರಿಯೇ ಹೆಚ್ಚು. ಉಳಿದಂತೆ ಪ್ರದರ್ಶನದಲ್ಲಿ ಒಂದಿಷ್ಟು ಉತ್ತಮ ಕಲಾಕೃತಿಗಳು ಆಕರ್ಷಿಸಿದವು. ಕಲಾವಿದರ ಮೇಲಿನ ನಿರೀಕ್ಷೆಯನ್ನು ಹೆಚ್ಚಿಸಿದವು. ಬೆಂಗಳೂರೇತರ ರಾಜ್ಯದ ಉಳಿದ ಭಾಗಗಳ ಕಲಾಪ್ರದರ್ಶನ ವಿರಳ ಎನ್ನಿಸತೊಡಗಿದ ದಿನಗಳಲ್ಲಿ ಹುಬ್ಬಳ್ಳಿ ಭಾಗದ ಕಲಾವಿದರು ಯಶಸ್ವಿ ಕಲಾಪ್ರದರ್ಶನ ಆಯೋಜಿಸಿದ್ದು ಶ್ಲಾಘನೀಯ. ಹೂ…ಬಳ್ಳಿ ಕಲಾವಿದರು ಮತ್ತಷ್ಟು ಪ್ರದರ್ಶನ ಆಯೋಜಿಸಿ, ವರ್ಣ ಸಂಗಮದೊಂದಿಗೆ ಜನಮನ್ನಣೆ ಗಿಟ್ಟಿಸಿಕೊಳ್ಳಲಿ ಎನ್ನುವುದೇ ಎಲ್ಲರ ಹಾರೈಕೆ.
