ನವದೆಹಲಿ: ಅಮೆರಿಕದ ನ್ಯೂಯಾರ್ಕ್ನಲ್ಲಿ ರಾಷ್ಟ್ರೀಯ ಸ್ವಯಂಸೇವಕ ಸಂಘದ (ಆರ್ಎಸ್ಎಸ್) ಸರಸಂಘಚಾಲಕ ಮೋಹನ್ ಭಾಗವತ್ ಭಾಗವಹಿಸಲಿರುವ ಕಾರ್ಯಕ್ರಮವನ್ನು ಮುಕ್ತ ಸಂವಾದದ ಉದ್ದೇಶದಿಂದ ಆಯೋಜಿಸಲಾಗಿದ್ದು, ಸಂಘದ ಕುರಿತು ಹೆಚ್ಚು ತಿಳಿದುಕೊಳ್ಳಲು ಆಸಕ್ತಿ ಉಳ್ಳ ಪ್ರತಿಯೊಬ್ಬರಿಗೂ ಆಹ್ವಾನವಿದೆ ಎಂದು ಆರ್ಎಸ್ಎಸ್ ಬುಧವಾರ ತಿಳಿಸಿದೆ.
ನ್ಯೂಯಾರ್ಕ್ನ ಮ್ಯಾಡಿಸನ್ ಸ್ಕ್ವೇರ್ ಗಾರ್ಡನ್ನಲ್ಲಿರುವ ಇನ್ಫೋಸಿಸ್ ಥಿಯೇಟರ್ನಲ್ಲಿ ನಡೆಯಲಿರುವ ‘ಯುನಿವರ್ಸಲ್ ಒನ್ನೆಸ್’ (ಸಾರ್ವತ್ರಿಕ ಏಕತೆ) ಆಚರಣೆಯಲ್ಲಿ ಭಾಗವತ್ ಭಾಗವಹಿಸುವುದನ್ನು ನ್ಯೂಯಾರ್ಕ್ ಮೇಯರ್ ಜೊಹ್ರಾನ್ ಮಮ್ದಾನಿ ವಿರೋಧಿಸಿದ ಹಿನ್ನೆಲೆಯಲ್ಲಿ ಆರ್ಎಸ್ಎಸ್ ಹಿರಿಯ ಪದಾಧಿಕಾರಿ ಸುನಿಲ್ ಅಂಬೇಕರ್ ಈ ಹೇಳಿಕೆ ನೀಡಿದ್ದಾರೆ.
“ನ್ಯೂಯಾರ್ಕ್ನಲ್ಲಿ ನಡೆಯಲಿರುವ ಯುನಿವರ್ಸಲ್ ಒನ್ನೆಸ್ ಆಚರಣೆಯು ಒಂದು ಅಂತರ್-ಧರ್ಮೀಯ ಸಭೆಯಾಗಿದ್ದು, ಇಲ್ಲಿ ಆರ್ಎಸ್ಎಸ್ ಸರಸಂಘಚಾಲಕ ಡಾ. ಮೋಹನ್ ಭಾಗವತ್ಜಿ ಅವರು ವೈವಿಧ್ಯಮಯ, ಬಹುಸಾಂಸ್ಕೃತಿಕ ಮತ್ತು ಬಹುಧರ್ಮೀಯ ಶ್ರೋತೃಗಳೊಂದಿಗೆ ಸಂವಹನ ನಡೆಸಲಿದ್ದಾರೆ,” ಎಂದು ಅಂಬೇಕರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಮುಕ್ತ ಸಂವಾದ ಮತ್ತು ಪರಸ್ಪರ ಗೌರವದ ಭಾವನೆಯಿಂದ ಆಯೋಜಿಸಲಾದ ಈ ಕಾರ್ಯಕ್ರಮವು ಭಾರತೀಯ ಮೂಲತತ್ವವನ್ನು ಪ್ರತಿಬಿಂಬಿಸುತ್ತದೆ. ಇದು ಮೂಲಭೂತವಾಗಿ ಎಲ್ಲರನ್ನೂ ಒಳಗೊಳ್ಳುವ ಮತ್ತು ಸ್ವಾಗತಿಸುವ ಸಂಸ್ಕೃತಿಯಾಗಿದೆ ಎಂದು ಆರ್ಎಸ್ಎಸ್ ರಾಷ್ಟ್ರೀಯ ಪ್ರಚಾರ ಪ್ರಮುಖ್ ಸೇರಿಸಿದರು.
“ಆರ್ಎಸ್ಎಸ್ ಭಾರತ ಮತ್ತು ವಿಶ್ವದಾದ್ಯಂತ ವಿವಿಧ ಸಮುದಾಯಗಳೊಂದಿಗೆ ಸೌಹಾರ್ದತೆ ಹಾಗೂ ಹಂಚಿಕೆಯ ಉದ್ದೇಶವನ್ನು ಬೆಳೆಸಲು ನಡೆಸಿಕೊಂಡು ಬಂದಿರುವ ಸುದೀರ್ಘ ಪರಂಪರೆಗೆ ಅನುಗುಣವಾಗಿ ಈ ಉಪಕ್ರಮವಿದೆ,” ಎಂದು ಅಂಬೇಕರ್ ಹೇಳಿದರು. “ಆರ್ಎಸ್ಎಸ್ ದೂರದೃಷ್ಟಿ ಮತ್ತು ತತ್ತ್ವಶಾಸ್ತ್ರದ ಬಗ್ಗೆ ಇನ್ನಷ್ಟು ತಿಳಿದುಕೊಳ್ಳಲು ಆಸಕ್ತಿ ಹೊಂದಿರುವ ಯಾರನ್ನಾದರೂ ಈ ಮುಕ್ತ ಸಂವಾದ ವೇದಿಕೆಯಲ್ಲಿ ಭಾಗವಹಿಸಲು ನಾವು ಆಹ್ವಾನಿಸುತ್ತೇವೆ,” ಎಂದು ಅವರು ಹೇಳಿದರು.
‘ಹಿಂದೂಸ್ ಫಾರ್ ಹ್ಯೂಮನ್ ರೈಟ್ಸ್’, ‘ಇಂಡಿಯನ್ ಅಮೇರಿಕನ್ ಮುಸ್ಲಿಂ ಕೌನ್ಸಿಲ್’ ಮತ್ತು ‘ಇಂಟರ್ಫೇತ್ ಸೆಂಟರ್ ಆಫ್ ನ್ಯೂಯಾರ್ಕ್’ ಸೇರಿದಂತೆ ಹಲವು ಅಂತರ್-ಧರ್ಮೀಯ ಮತ್ತು ನಾಗರಿಕ ಹಕ್ಕುಗಳ ಸಂಸ್ಥೆಗಳು ಮ್ಯಾಡಿಸನ್ ಸ್ಕ್ವೇರ್ ಗಾರ್ಡನ್ನಲ್ಲಿ ಆರ್ಎಸ್ಎಸ್ ಮುಖ್ಯಸ್ಥರು ಭಾಗವಹಿಸುವುದನ್ನು ವಿರೋಧಿಸಿದ್ದು, ಭಾಗವತ್ ಅವರ ಯುಎಸ್ ಪ್ರವಾಸವು ವಿವಾದಕ್ಕೆ ಈಡಾದ ಬೆನ್ನಲ್ಲೇ ಈ ಹೇಳಿಕೆ ಬಂದಿದೆ.
ಭಾಗವತ್ ಅವರು ಈ ವಾರದ ಕೊನೆಯಲ್ಲಿ ಭಾರತೀಯ ಡಯಾಸ್ಪೊರಾವನ್ನು ಉದ್ದೇಶಿಸಿ ಮಾತನಾಡುವ ಮ್ಯಾಡಿಸನ್ ಸ್ಕ್ವೇರ್ ಗಾರ್ಡನ್ನ ಕಾರ್ಯಕ್ರಮವನ್ನು ತಾವು ಬೆಂಬಲಿಸುವುದಿಲ್ಲ ಎಂದು ಮಮ್ದಾನಿ ಹೇಳಿದ್ದಾರೆ. ಆದರೆ, ಇದು ಖಾಸಗಿ ಕಾರ್ಯಕ್ರಮವಾಗಿರುವುದರಿಂದ ಇದನ್ನು ರದ್ದುಗೊಳಿಸುವ ಅಧಿಕಾರ ನಗರ ಆಡಳಿತಕ್ಕೆ ಇಲ್ಲದಿರಬಹುದು ಎಂದೂ ಮಮ್ದಾನಿ ಉಲ್ಲೇಖಿಸಿದ್ದಾರೆ.
ಮತ್ತೊಂದೆಡೆ, ಅಮೆರಿಕದ ಗಾಯಕಿ ಮೇರಿ ಮಿಲ್ಬೆನ್ ಅವರು ಮೋಹನ್ ಭಾಗವತ್ ಅವರ ಕಾರ್ಯಕ್ರಮವನ್ನು ವಿರೋಧಿಸುತ್ತಿರುವ ಮಮ್ದಾನಿ ಅವರನ್ನು ಟೀಕಿಸಿದ್ದಾರೆ. “ಮಮ್ದಾನಿ ಮತ್ತು ಈ ಎಲ್ಲಾ ಸೋಷಿಯಲಿಸ್ಟ್ ಹುಚ್ಚರು ಪ್ರಧಾನಿ ನರೇಂದ್ರ ಮೋದಿ ಮತ್ತು ಬಿಜೆಪಿಯನ್ನು ವಿರೋಧಿಸುತ್ತಿರುವ ಕಾರಣಕ್ಕಾಗಿ ಮೋಹನ್ ಭಾಗವತ್ ಅವರ ಮ್ಯಾಡಿಸನ್ ಸ್ಕ್ವೇರ್ ಗಾರ್ಡನ್ ಕಾರ್ಯಕ್ರಮವನ್ನು ವಿರೋಧಿಸುತ್ತಿದ್ದಾರೆ,” ಎಂದು ಮಿಲ್ಬೆನ್ ಮಂಗಳವಾರ ‘ಎಕ್ಸ್’ ಖಾತೆಯಲ್ಲಿ ಬರೆದುಕೊಂಡಿದ್ದಾರೆ.
ಆರ್ಎಸ್ಎಸ್ನ ಶತಾಬ್ದಿ ವರ್ಷದ ಜಾಗತಿಕ ಸಂಪರ್ಕ ಕಾರ್ಯಕ್ರಮದ ಭಾಗವಾಗಿ ಮಂಗಳವಾರ ಅಮೆರಿಕಕ್ಕೆ ಆಗಮಿಸಿರುವ ಭಾಗವತ್ ಅವರು, ಆಗಸ್ಟ್ 29 ರಂದು ಪ್ರತಿಷ್ಠಿತ ಎಂಎಸ್ಜಿಯಲ್ಲಿ ಸುಮಾರು 5,000 ಜನರ ಸಭೆಯನ್ನು ಉದ್ದೇಶಿಸಿ ಮಾತನಾಡಲಿದ್ದಾರೆ.
