ಇತ್ತೀಚೆಗೆ ನಡೆಯುತ್ತಿರುವ ನೀಟ್ (NEET) ಪರೀಕ್ಷೆಯ ವಿವಾದಗಳ ನಡುವೆ ಅತ್ಯಂತ ಅಸಹ್ಯಕರ ಟ್ರೆಂಡ್ ಒಂದು ಶುರುವಾಗಿದೆ. ಅದೇ ಕೆಲವು ಶಿಕ್ಷಕರು ಕ್ಯಾಮೆರಾ ಮುಂದೆ ನಿಂತು ಕಣ್ಣೀರು ಹಾಕುವುದು, ಅತ್ತು ಗೋಳಾಡುವ ವಿಡಿಯೋಗಳನ್ನು ಅಪ್ಲೋಡ್ ಮಾಡುವುದು. ಮೇಲ್ನೋಟಕ್ಕೆ ಇದು ವಿದ್ಯಾರ್ಥಿಗಳ ಮೇಲಿನ ಅಪಾರ ಕಾಳಜಿಯಂತೆ ಕಂಡರೂ, ವಾಸ್ತವದಲ್ಲಿ ಇದು ಸಾಮಾಜಿಕ ಜಾಲತಾಣಗಳಲ್ಲಿ ಅಗ್ಗದ ಪ್ರಚಾರ (Cheap Publicity) ಪಡೆಯಲು ಮಾಡುವ ‘ಪ್ರೊಪಗಾಂಡಾ’. ಶಿಕ್ಷಕರ ಈ ಮೊಸಳೆ ಕಣ್ಣೀರು ವಿದ್ಯಾರ್ಥಿಗಳಿಗೆ ಲಾಭಕ್ಕಿಂತ ಮಾಡುತ್ತಿರುವ ಮಾನಸಿಕ ಹಾನಿಯೇ ಹೆಚ್ಚು.
ಈ ‘ಭಾವನಾತ್ಮಕ ಬ್ಲ್ಯಾಕ್ಮೇಲ್’ನಿಂದ ಆಗುವ ಅಡ್ಡ ಪರಿಣಾಮಗಳು
ವಿದ್ಯಾರ್ಥಿಗಳ ಮಾನಸಿಕ ಸ್ಥೈರ್ಯದ ನಾಶ:
ಪರೀಕ್ಷೆ ಮತ್ತು ಭವಿಷ್ಯದ ಚಿಂತೆಯಲ್ಲಿರುವ ವಿದ್ಯಾರ್ಥಿಗಳಿಗೆ ಶಿಕ್ಷಕರು ಬೆನ್ನೆಲುಬಾಗಿ ನಿಲ್ಲಬೇಕು. ದಾರಿದೀಪವಾಗಬೇಕಾದ ಗುರುವೇ ಕ್ಯಾಮೆರಾ ಮುಂದೆ ನಿಂತು ಅತ್ತರೆ, ವಿದ್ಯಾರ್ಥಿಯ ಗತಿಯೇನು? ಮಾರ್ಗದರ್ಶನ ಮಾಡುವ ಗುರುವೇ ಕುಸಿದು ಬಿದ್ದಾಗ, ಮಕ್ಕಳಲ್ಲಿ ಆತ್ಮಹತ್ಯೆಯಂತಹ ನಕಾರಾತ್ಮಕ ಆಲೋಚನೆಗಳು ಬರುವ ಅಪಾಯವಿರುತ್ತದೆ. ಇದು ವಿದ್ಯಾರ್ಥಿಗಳಲ್ಲಿ ಮತ್ತಷ್ಟು ಆತಂಕ, ಖಿನ್ನತೆ ಮತ್ತು ಭಯವನ್ನು ಹುಟ್ಟುಹಾಕುತ್ತದೆ.
ವಿಜ್ಞಾನ ಕಲಿಸುವವರಿಂದಲೇ ತರ್ಕಹೀನ ವರ್ತನೆ!: ತರಗತಿಗಳಲ್ಲಿ ವಿಜ್ಞಾನ ವಿಷಯಗಳನ್ನು ಕಲಿಸುವಾಗ ‘ತರ್ಕ’ (Logic) ಮತ್ತು ವೈಜ್ಞಾನಿಕ ಮನೋಭಾವದ ಬಗ್ಗೆ ಮಾತನಾಡುವ ಶಿಕ್ಷಕರು, ಒಂದು ಬಿಕ್ಕಟ್ಟು ಎದುರಾದಾಗ ತರ್ಕಬದ್ಧವಾಗಿ ಯೋಚಿಸುವುದನ್ನು ಬಿಟ್ಟು ಹೀಗೆ ಅಳುವುದು ಎಷ್ಟು ಸರಿ? ಇದು ವಿದ್ಯಾರ್ಥಿಗಳಿಗೆ ಯಾವ ರೀತಿಯ ಸಂದೇಶ ನೀಡುತ್ತದೆ? ‘ಸಮಸ್ಯೆ ಬಂದಾಗ ಎದುರಿಸಿ ಹೋರಾಡುವುದನ್ನು ಬಿಟ್ಟು ಅಳಬೇಕು’ ಎಂಬುದನ್ನೇ? ಶಿಕ್ಷಕರು ಇಂತಹ ಸಂಕಷ್ಟದ ಸಂದರ್ಭದಲ್ಲಿ ಸಮಸ್ಯೆಯನ್ನು ವಿಶ್ಲೇಷಿಸಿ ಪರಿಹಾರದ ದಾರಿಯನ್ನು ತೋರಿಸುವ ಮಾರ್ಗದರ್ಶಕರಾಗಬೇಕು. ಭಾವೋದ್ವೇಗದ ಪ್ರದರ್ಶನಕ್ಕಿಂತ ಸಮಚಿತ್ತದ ಮಾರ್ಗದರ್ಶನವೇ ವಿದ್ಯಾರ್ಥಿಗಳಿಗೆ ಆತ್ಮಸ್ಥೈರ್ಯ ತುಂಬಲು ಸಹಾಯ ಮಾಡುತ್ತವೆ.
ಲೈಕ್ಸ್’ ಮತ್ತು ‘ವ್ಯೂವ್ಸ್’ಗಾಗಿ ಹುಟ್ಟುವ ಕೃತಕ ಕಾಳಜಿ: ಇತ್ತೀಚೆಗೆ ಶಿಕ್ಷಕರು ಮಾರ್ಗದರ್ಶಕರಿಗಿಂತ ಹೆಚ್ಚಾಗಿ ‘ಸೋಷಿಯಲ್ ಮೀಡಿಯಾ ಇನ್ಫ್ಲುಯೆನ್ಸರ್’ಗಳಂತೆ (Influencers) ವರ್ತಿಸುತ್ತಿದ್ದಾರೆ. ತಮ್ಮ ಚಾನೆಲ್ನ ಸಬ್ಸ್ಕ್ರೈಬರ್ಗಳನ್ನು ಹೆಚ್ಚಿಸಿಕೊಳ್ಳಲು, ವಿಡಿಯೋ ಟ್ರೆಂಡಿಂಗ್ಗೆ ತರಲು ಮಕ್ಕಳ ನೋವನ್ನು ಬಂಡವಾಳವಾಗಿಸಿಕೊಳ್ಳುತ್ತಿದ್ದಾರೆ. ಇದು ಅತ್ಯಂತ ಹೇಯ ಕೃತ್ಯ. ವಿದ್ಯಾರ್ಥಿಗಳ ನೋವು ಮತ್ತು ಆತಂಕವು ಸಾಮಾಜಿಕ ಜಾಲತಾಣಗಳಲ್ಲಿ ಪ್ರಚಾರದ ಸಾಧನವಾಗಬಾರದು. ಶಿಕ್ಷಕರ ಮಾತು ಮತ್ತು ನಡೆ ಯಾವಾಗಲೂ ವಿದ್ಯಾರ್ಥಿಗಳ ಹಿತಾಸಕ್ತಿಯನ್ನೇ ಕೇಂದ್ರವಾಗಿಟ್ಟುಕೊಂಡಿರಬೇಕು.
ಪೋಷಕರಲ್ಲಿ ಮನೆಮಾಡುವ ಭೀತಿ: ಕೇವಲ ವಿದ್ಯಾರ್ಥಿಗಳಷ್ಟೇ ಅಲ್ಲ, ತಮ್ಮ ಮಕ್ಕಳ ಭವಿಷ್ಯದ ಬಗ್ಗೆ ಕನಸು ಕಂಡಿರುವ ಪೋಷಕರು ಈ ವಿಡಿಯೋಗಳನ್ನು ನೋಡಿದಾಗ ಸಂಪೂರ್ಣವಾಗಿ ಕುಸಿದುಹೋಗುತ್ತಾರೆ. ವ್ಯವಸ್ಥೆಯನ್ನು ಪ್ರಶ್ನಿಸಿ, ಮಕ್ಕಳಿಗೆ ಧೈರ್ಯ ತುಂಬಬೇಕಾದ ಶಿಕ್ಷಕರೇ ಹೀಗೆ ಅಸಹಾಯಕರಂತೆ ಅತ್ತರೆ, ಪೋಷಕರು ಯಾರನ್ನು ನಂಬಬೇಕು? ಇದು ಇಡೀ ಸಮಾಜದಲ್ಲಿ ಒಂದು ರೀತಿಯ ಆತಂಕವನ್ನು ಸೃಷ್ಟಿಸುತ್ತದೆ.
ತುರ್ತು ನಿಗಾ ಘಟಕದಲ್ಲಿರುವ ರೋಗಿಯ ಮುಂದೆ ವೈದ್ಯ ಅಳಬಾರದು, ಹಾಗೆಯೇ ಸಂಕಷ್ಟದಲ್ಲಿರುವ ವಿದ್ಯಾರ್ಥಿಯ ಮುಂದೆ ಶಿಕ್ಷಕ ಕಣ್ಣೀರು ಹಾಕಬಾರದು. ಶಿಕ್ಷಕನಿಗೆ ಭಾವನೆಗಳ ನಿಯಂತ್ರಣ ಮತ್ತು ಸ್ಥಿತಪ್ರಜ್ಞತೆ ಇರಬೇಕು. ಸಾರ್ವಜನಿಕವಾಗಿ ಅಳುವ ಮೂಲಕ ಅವರು ‘ಶಿಕ್ಷಕ’ ಎಂಬ ಪದದ ಘನತೆಯನ್ನೇ ಹರಾಜು ಹಾಕುತ್ತಿದ್ದಾರೆ.
ನಮಗೆ ಬೇಕಿರುವುದು ಸದೃಢ ಮಾರ್ಗದರ್ಶಕರು,ಕ್ಯಾಮೆರಾ ಮುಂದೆ ನಟಿಸುವ ಆಕ್ಟರ್ಗಳಲ್ಲ!
ನೀಟ್ ಪರೀಕ್ಷೆಗೆ ಸಂಬಂಧಿಸಿದ ಅಕ್ರಮಗಳು ಅಥವಾ ಅನ್ಯಾಯಗಳ ವಿರುದ್ಧ ಧ್ವನಿ ಎತ್ತುವುದು ಅತ್ಯಗತ್ಯ. ಆದರೆ ಆ ಹೋರಾಟವು ಭಾವನಾತ್ಮಕ ಪ್ರದರ್ಶನದ ಮೂಲಕವಲ್ಲ, ಕಾನೂನಾತ್ಮಕ ಹೋರಾಟ, ವಾಸ್ತವಾಧಾರಿತ ಚರ್ಚೆ ಮತ್ತು ವಿದ್ಯಾರ್ಥಿಗಳಿಗೆ ಮಾನಸಿಕ ಬೆಂಬಲ ನೀಡುವ ಮೂಲಕ ನಡೆಯಬೇಕು.
ಶಿಕ್ಷಕರಿಗೆ ನಿಜವಾದ ಕಾಳಜಿ ಇದ್ದರೆ, ಈ ಭಾವೋದ್ವೇಗದ ಅತಿರೇಕಗಳನ್ನು ಬಿಟ್ಟು ಮಕ್ಕಳಿಗೆ ಮುಂದಿನ ಪರ್ಯಾಯ ದಾರಿಗಳ ಬಗ್ಗೆ ಮಾರ್ಗದರ್ಶನ ನೀಡಲಿ. ಅದನ್ನು ಬಿಟ್ಟು, ಕೇವಲ ಸಿಂಪತಿಗಾಗಿ ಕ್ಯಾಮೆರಾ ಮುಂದೆ ನಾಟಕವಾಡುವುದನ್ನು ತಕ್ಷಣವೇ ನಿಲ್ಲಿಸಬೇಕು. ವಿದ್ಯಾರ್ಥಿಗಳು ಮತ್ತು ಪೋಷಕರು ಇಂತಹ ಭಾವನಾತ್ಮಕ ಪ್ರೊಪಗಾಂಡಾಗೆ ಬಲಿಯಾಗದೆ, ವಾಸ್ತವವನ್ನು ಅರಿತು ಮುನ್ನಡೆಯಬೇಕು.
ಕೊನೆಯ ಹನಿ:
ಭಾರತೀಯ ಪರಂಪರೆಯಲ್ಲಿ ಗುರು ಎಂದರೆ ಕೇವಲ ಪಾಠ ಹೇಳುವ ವ್ಯಕ್ತಿಯಲ್ಲ, ಸಂಕಷ್ಟದ ಸಮಯದಲ್ಲಿ ಶಿಷ್ಯನಿಗೆ ದಾರಿ ತೋರಿಸುವ ಮಾರ್ಗದರ್ಶಕ. ಯೋಗವಾಸಿಷ್ಠದಲ್ಲಿ ಶ್ರೀರಾಮನು ದೇಶ ಪರ್ಯಟನೆ ಮಾಡಿ ಜೀವನದ ನಶ್ವರತೆಯನ್ನು ಕಂಡು ಆಳವಾದ ವೈರಾಗ್ಯ ಮತ್ತು ನಿರಾಶೆಗೆ ಒಳಗಾದಾಗ, ಮಹರ್ಷಿ ವಸಿಷ್ಠರು ಅವನೊಂದಿಗೆ ಕಣ್ಣೀರು ಸುರಿಸಲಿಲ್ಲ. ಬದಲಾಗಿ, ಶೋಕವನ್ನು ಬದಿಗಿಟ್ಟು ‘ಪುರುಷಾರ್ಥ’ ಅಥವಾ ಸ್ವಪ್ರಯತ್ನದಿಂದ ಯಶಸ್ಸು ಸಾಧಿಸುವಂತೆ ರಾಮನಲ್ಲಿ ಅಗಾಧವಾದ ಆತ್ಮವಿಶ್ವಾಸವನ್ನು ಜಾಗೃತಗೊಳಿಸಿದರು. ಗುರುವಿನ ಆ ಪ್ರಬಲ ಪ್ರೇರಣೆಯೇ ರಾಮನನ್ನು ಮುಂದೆ ಅಪ್ರತಿಮ ಸಾಧಕನನ್ನಾಗಿ ಮಾಡಿತು. ಇಂದು ಸಂಕಷ್ಟದಲ್ಲಿರುವ ನೀಟ್ ವಿದ್ಯಾರ್ಥಿಗಳಿಗೆ ಬೇಕಿರುವುದು ಇದೇ ರೀತಿಯ ಪ್ರೇರಣೆ. ತಮ್ಮ ಯೂಟ್ಯೂಬ್ ವ್ಯೂವ್ಸ್ಗಾಗಿ ಕ್ಯಾಮೆರಾ ಮುಂದೆ ಕಣ್ಣೀರು ಸುರಿಸುತ್ತಾ ಮಕ್ಕಳನ್ನು ಮತ್ತಷ್ಟು ನಿರಾಶೆಗೊಳಿಸುವವರ ಬದಲು, ವಸಿಷ್ಠರಂತೆ ಸ್ಪಷ್ಟತೆ ನೀಡಿ ಯಶಸ್ಸಿನತ್ತ ಹೆಜ್ಜೆ ಹಾಕಲು ಪ್ರೇರೇಪಿಸುವ ನೈಜ ಮಾರ್ಗದರ್ಶಕರ ಅವಶ್ಯಕತೆ ನಮಗಿದೆ.
ಈ ಎಲ್ಲ ಬೆಳವಣಿಗೆಗಳ ನಡುವೆ ನಾವು ಮರೆಯಬಾರದ ಅತ್ಯಂತ ಮಹತ್ವದ ಸತ್ಯವೊಂದಿದೆ, ಶಿಕ್ಷಕರು ಕೇವಲ ಶಾಲೆಗೆ, ಪಾಠಕ್ಕೆ ಮಾತ್ರ ಸೀಮಿತವಲ್ಲ; ಅವರು ಈ ದೇಶದ, ಶಿಕ್ಷಣ ವ್ಯವಸ್ಥೆಯ ಮತ್ತು ಸುಸಂಸ್ಕೃತ ಸಮಾಜದ ನಿಜವಾದ ಬೆನ್ನೆಲುಬು. ಕೇವಲ ಅಕ್ಷರ ಕಲಿಸುವ ಜವಾಬ್ದಾರಿಯಾಚೆಗೂ, ವಿದ್ಯಾರ್ಥಿಗಳ ವ್ಯಕ್ತಿತ್ವವನ್ನು ರೂಪಿಸಿ ಒಂದು ಸದೃಢ ರಾಷ್ಟ್ರವನ್ನು ನಿರ್ಮಾಣ ಮಾಡುವ ಅತ್ಯಂತ ಪವಿತ್ರ ಜವಾಬ್ದಾರಿ ಅವರ ಮೇಲಿದೆ. ಇಂದಿಗೂ ನಮ್ಮ ನಡುವೆ ಯಾವುದೇ ಪ್ರಚಾರದ ಹಂಗಿಲ್ಲದೆ, ಎಲೆಮರೆಯ ಕಾಯಿಯಂತೆ ನಿಸ್ವಾರ್ಥದಿಂದ ದುಡಿಯುತ್ತಿರುವ ಸಾವಿರಾರು ಆದರ್ಶ ಶಿಕ್ಷಕರಿದ್ದಾರೆ. ದೇಶದ ಮೂಲೆಮೂಲೆಗಳಲ್ಲಿ ವಿದ್ಯಾರ್ಥಿಗಳ ಭವಿಷ್ಯಕ್ಕಾಗಿ ತಮ್ಮ ಜೀವನವನ್ನೇ ಮುಡಿಪಾಗಿಟ್ಟ ಮಹಾನ್ ಗುರುಗಳಿದ್ದಾರೆ. ಇಂತಹ ಶಿಕ್ಷಕರನ್ನು ಎಂದಿಗೂ ಸಮಾಜ ಗೌರವಿಸುತ್ತದೆ ಮತ್ತು ಎಲ್ಲ ಕಾಲದಲ್ಲೂ ಎದುರು ನೋಡುತ್ತದೆ.

– ಪ್ರಹ್ಲಾದ್ ಜೋಶಿ
