ಅಂಕಣ – ಜ್ಞಾನಭಂಡಾರ
- ಸಾವಿತ್ರಿ ಶ್ಯಾನುಭಾಗ, ಲೇಖಕಿ
ಇಂದಿನ ತಂತ್ರಜ್ಞಾನ ವೇಗದ ಯುಗದಲ್ಲಿ ಮಕ್ಕಳು ಗಡಿಬಿಡಿಯಲ್ಲಿ ಶಾಲೆಗೆ ಹೋಗುವುದು, ಮನೆಗೆ ಬರುವುದು, ಹೋಂವರ್ಕ್ ಬರೆಯುವುದು, ಸಂಗೀತ, ಕರಾಟೆ ತರಗತಿಯೆಂದು ಬಿಡುವಿಲ್ಲದೇ ಸಣ್ಣ ವಯಸ್ಸಿನಲ್ಲೇ ಓಡಾಡುವುದನ್ನು ನೋಡುತ್ತೇವೆ. ಇನ್ನು ಹಬ್ಬ ಆಚರಿಸಲು, ದೇವರ ಪೂಜೆಯ ಮಹತ್ವ ತಿಳಿಯಲು ಸಮಯವೆಲ್ಲಿಹುದು? ಇದ್ದರೂ ಅದರ ಅರ್ಥ ತಿಳಿಸಲು ಮನೆಯಲ್ಲಿ ಹಿರಿಯರಿರುವುದಿಲ್ಲ. ಪಾಲಕರಿಗೂ ಸಮಯವಿರುವುದಿಲ್ಲ. ಭಾರತದಲ್ಲಿ ಅನಾದಿಕಾಲದಿಂದಲೂ ನಡೆದುಕೊಂಡು ಬಂದಿರುವ ಉತ್ತಮ ಆಚಾರ ವಿಚಾರಗಳನ್ನು ತಿಳಿದು ಆಚರಿಸಿದರೆ ಸಂಬಂಧಗಳಲ್ಲಿ ಸೌಹಾರ್ದತೆ ಹೆಚ್ಚುವುದರಲ್ಲಿ ಸಂಶಯವಿಲ್ಲ. ‘ಹಿಂದೂ ಹಬ್ಬಗಳ ಮಹತ್ವ’ ಕೃತಿಯು ಈ ಕುರಿತಂತೆ ವಿವರವಾಗಿ ಮಾಹಿತಿ ನೀಡುತ್ತದೆ.
ನಮಗೆ ಜನವರಿ ತಿಂಗಳಲ್ಲಿ ಬರೀ ಕ್ಯಾಲೆಂಡರ್ ಬದಲಾಗುತ್ತದೆ, ಆದರೆ ಯುಗಾದಿಯ ಚೈತ್ರಮಾಸದಲ್ಲಿ ಪ್ರಕೃತಿಯೇ ಬದಲಾಗಿ ನಮಗೆ ಮಾಸಗಳ ಪ್ರಾರಂಭವನ್ನು ಸೂಚಿಸುತ್ತದೆ ಮತ್ತು ಹಬ್ಬಗಳ ಸಾಲನ್ನು ಸ್ವಾಗತಿಸುತ್ತದೆ ಎನ್ನುವ ಲೇಖಕರು, ಆಯಾಮಾಸಗಳಿಗೆ ಆ ಹೆಸರು ಹೇಗೆ ಬಂತು?, ಭಾರತದಲ್ಲಿ ಪ್ರತಿದಿನವೂ ಒಂದು ಹಬ್ಬವಿದ್ದು, ಆ ಪ್ರತಿ ಹಬ್ಬಕ್ಕೂ ಏನು ಅರ್ಥ, ಏಕೆ ನಾವದನ್ನು ಆಚರಿಸಬೇಕು? ಹಬ್ಬದೊಂದಿಗೆ ಪ್ರಕೃತಿಯ ಆರಾಧನೆ ಹೇಗೆ ಸಂಬಂಧ ಹೊಂದಿದೆ? ಇತ್ಯಾದಿಗಳಲ್ಲದೆ ಈಗಿನ ಯುವಜನತೆಯಲ್ಲಿ ದೇವರನೇಕೆ ಪೂಜಿಸಬೇಕು? ದೇವಸ್ಥಾನದ ಭೇಟಿಯ ಮಹತ್ವವೇನು ಎಂದೆಲ್ಲಾ ಮೂಡುವ ಪ್ರಶ್ನೆಗಳಿಗೆ ಉತ್ತರ ನೀಡಿದ್ದಾರೆ.
ರಂಗೋಲಿ ಹಾಕುವಾಗ ಹೆಬ್ಬೆರಳು ಮತ್ತು ತೋರುಬೆರಳು ಒಂದಕ್ಕೊಂದು ತಾಗಿ ಜ್ಞಾನಮುದ್ರೆಯನ್ನು ಪಡೆಯುವುದರಿಂದ ಮೆದುಳು ಹೆಚ್ಚು ಕ್ರಿಯಾಶೀಲವಾಗುತ್ತದೆ. ಹೀಗೆ ರಂಗೋಲಿಯ ಮಹತ್ವವನ್ನು ಹೇಳುವ ಲೇಖಕರು ರಂಗೋಲಿಯಲ್ಲಿ ಬಳಸುವ ವಿಧವಿಧವಾದ ಬಣ್ಣಗಳು ಕಣ್ಣಿಗೆ ಮತ್ತು ಮನಸ್ಸಿಗೆ ಮುದ ನೀಡುವುದಲ್ಲದೇ, ಇವು ಕೆಲವು ಮಾನಸಿಕ ಹಾಗೂ ದೈಹಿಕ ಸಮಸ್ಯೆಗಳನ್ನು ದೂರಮಾಡಲು ಸಹಾಯಮಾಡುವ ಕುರಿತು ವಿವರಿಸಿದ್ದಾರೆ. ಆಚರಣೆಯಲ್ಲಿನ ವೈವಿಧ್ಯತೆ, ಹಬ್ಬಗಳಲ್ಲಿ ಬಾಗಿಲಿಗೆ ಮಾವಿನ ಸೊಪ್ಪು ಕಟ್ಟುವುದರ ಹಿಂದಿನ ಕಾರಣ, ನಾವು ನಡೆಸುತ್ತಿರುವ ಆಚರಣೆಯಲ್ಲಿ ತಪ್ಪೇನಿಹುದು? ಯಾವ ಶ್ಲೋಕ ಹೇಳಬೇಕು? ಯಾವ ಅಡುಗೆ ಆಯಾ ಕಾಲಕ್ಕೆ ತಕ್ಕಂತೆ ಒಳ್ಳೆಯದು ಮತ್ತು ಇಂದಿನ ದಿನಮಾನಕ್ಕೆ ಅಗತ್ಯವಾದಂತೆ ಹಬ್ಬಗಳ ಆಚರಣೆಯ ಹಿಂದಿನ ವೈಜ್ಞಾನಿಕ ಅರ್ಥವನ್ನು ವಿವರಿಸಿ, ಆಚರಣೆಗಳನ್ನು ಇಂದಿಗೂ ಜೀವಂತವಾಗಿಟ್ಟು ಮುಂದಿನ ಪೀಳಿಗೆಗೆ ನೀಡುವ ಜವಾಬ್ದಾರಿಯ ಕುರಿತಂತೆ ಬೆಳಕು ಚೆಲ್ಲಿದ್ದಾರೆ.
ಇವನ್ನೆಲ್ಲ ಓದಿದಾಗ ನಮಗೆ ಮರೆತು ಹೋಗಿರುವ ನಮ್ಮ ಆಚರಣೆ ನೆನಪಾಗಿ ಹೇಗಾದರೂ ಮಾಡಿ ಸರಳವಾಗಿಯಾದರೂ ಹಬ್ಬಗಳನ್ನು ಆಚರಿಸಬೇಕು ಎಂಬ ಭಾವನೆ ಮೂಡುತ್ತದೆ.
ಹಬ್ಬದ ನೆಪದಲ್ಲಾದರೂ ಮನೆಯವರೆಲ್ಲರೂ ಜೊತೆಸೇರಿ, ನೆರೆಹೊರೆಯವರೊಂದಿಗೂ ಉತ್ತಮ ಸಂಬಂಧ ಬೆಸೆಯುವ ಭಾವನೆಯನ್ನು ಲೇಖಕರು ವ್ಯಕ್ತಪಡಿಸಿದ್ದು ಮನದಟ್ಟಾಗುತ್ತದೆ. ‘ಮಕ್ಕಳಿಗೆ ತಿಳಿಸಿ, ಸಂಸ್ಕೃತಿ ಬೆಳೆಸಿ’ ಎಂದು ಶೀರ್ಷಿಕೆಗೆ ಅಡಿಟಿಪ್ಪಣಿ ನೀಡಿರುವ ಲೇಖಕರ ಮಾತನ್ನು ಪಾಲಿಸಿ ನಮ್ಮ ಸನಾತನ ಭಾರತದ ಆಚರಣೆಯನ್ನು ಚಾಲ್ತಿಯಲ್ಲಿಡುವ ಪ್ರಯತ್ನ ಮಾಡಬೇಕಾದದ್ದು ಇಂದಿನ ಕರ್ತವ್ಯ.
ಕೃ: ಹಿಂದೂ ಹಬ್ಬಗಳ ಮಹತ್ವ ಲೇ: ಡಾ. ಪ್ರಕಾಶ್ ಕೆ. ನಾಡಿಗ್
ಪ್ರ: ಅಭಯ್ ರಾಘವಿ ಪ್ರಕಾಶನ ಪು: 260 ಬೆ: 260 ರೂ.
