ಅಂಕಣ – ಪರ್ಯಾಯ
- ಪ್ರೊ. ಎಂ.ಎಸ್. ಚೈತ್ರ, ನಿರ್ದೇಶಕ ಮತ್ತು ಸೀನಿಯರ್ ಫೆಲೋ,,ಫೌಂಡೇಶನ್ ಫಾರ್ ಸ್ಟಡಿ ಆಫ್ ಇಂಡಿಯನ್ ಕಲ್ಚರ್, ಬೆಂಗಳೂರು.
ಸಹಪ್ರಾಧ್ಯಾಪಕ, ಯುನಿವರ್ಸಿಟಿ ಆಫ್ ಟ್ರಾನ್ಸ್-ಡಿಸಿಪ್ಲಿನರಿ ಹೆಲ್ತ್ ಸೈನ್ಸ್ ಮತ್ತು ಟೆಕ್ನಾಲಜಿ, ಬೆಂಗಳೂರು
ಭಾರತೀಯ ಪರಂಪರೆಗಳ ಕುರಿತು ಯಾವ ರೀತಿಯ ನಿರೂಪಣೆಗಳನ್ನು ಶಾಲಾ-ಕಾಲೇಜುಗಳಲ್ಲಿನ ಮಕ್ಕಳಿಗೆ ಹೇಳಿಕೊಡಬೇಕು ಎನ್ನುವುದು ಜಗತ್ತಿನಾದ್ಯಂತವು ಮತ್ತು ಭಾರತದಲ್ಲೂ ಆಗಾಗ ಚರ್ಚೆಗೆ ಒಳಪಡುತ್ತಿರುತ್ತದೆ. ಈ ಚರ್ಚೆಯಲ್ಲಿ ಮಾರ್ಕ್ಸ್ ವಾದಿಗಳು, ಸೆಕ್ಯುಲರ್ ಚಿಂತಕರು, ಹಿಂದೂ ರಾಷ್ಟ್ರೀಯವಾದಿಗಳು ಇತ್ಯಾದಿ ಅನೇಕ ಗುಂಪುಗಳು ಭಾಗವಹಿಸುತ್ತವೆ. ವಿಶೇಷತಃ ಪಠ್ಯಪುಸ್ತಕ ರಚನೆಯ ಸಂದರ್ಭದಲ್ಲಂತೂ ಶೈಕ್ಷಣಿಕ ಚರ್ಚೆಗಳು ತಾರಕಕ್ಕೆ ಏರಿವೆ. ಭಾರತದಾದ್ಯಂತ ಕಳೆದ ಒಂದು ದಶಕದಲ್ಲಿ ನಡೆದ ಪಠ್ಯಪುಸ್ತಕದ ಕುರಿತಾದ ಚರ್ಚೆಗಳು ನಮಗೆ ಅರ್ಥವಾಗುವಂತಿಲ್ಲ. ಈ ಸಮಸ್ಯೆ ಕೇವಲ ಭಾರತಕ್ಕೆ ಸೀಮಿತವಾಗಿಲ್ಲ. ಅಮೆರಿಕದಲ್ಲಿ ‘ಕ್ಯಾಲಿಫೋರ್ನಿಯಾ ಪಠ್ಯಪುಸ್ತಕ ಪ್ರಕರಣ’ ಕಳೆದ ಒಂದು ದಶಕದಿಂದ ನ್ಯಾಯಾಲಯದ ಕಟಕಟೆಯಲ್ಲಿ ಸದ್ದು ಮಾಡುತ್ತಿದೆ.
ಕಳೆದ ಏಳೆಂಟು ದಶಕಗಳಲ್ಲಿ ಪಠ್ಯಪುಸ್ತಕದ ಕುರಿತಾಗಿ ನಡೆದ ವಾದ-ವಿವಾದಗಳು ಅನೇಕ ಸಂಗತಿಗಳನ್ನು ನಮ್ಮ ಗಮನಕ್ಕೆ ತರುತ್ತವೆ. ಮೊದಲನೆಯದಾಗಿ ಪಠ್ಯಪುಸ್ತಕಗಳು ಚರ್ಚಾಸ್ಪದ ವಿಷಯವೇಕೆ ಆಗಬೇಕು ಎನ್ನುವ ಪ್ರಶ್ನೆಯು ಬರುತ್ತದೆ. ನಮ್ಮೆಲ್ಲರ ತಿಳಿವಳಿಕೆಯಂತೆ ಪಠ್ಯಪುಸ್ತಕಗಳನ್ನು ಸಾಕಷ್ಟು ಬುದ್ಧಿವಂತ ಜನರು ರಚಿಸುತ್ತಾರೆ. ಅಂದರೆ ಅವರಿಗೆ ನಿರ್ದಿಷ್ಟವಾಗಿ ಕೆಲವು ಕ್ಷೇತ್ರಗಳಲ್ಲಿ ಅನೇಕ ವರ್ಷ ಕೆಲಸ ಮಾಡಿ ಗಳಿಸಿಕೊಂಡಿರುವ ಪರಿಣತಿ ಇರುತ್ತದೆ. ಆ ಕಾರಣಕ್ಕಾಗಿ ಅವರು ವಿಭಿನ್ನ ಹಂತದ ಕಲಿಕೆಯಲ್ಲಿ, ಯಾವ ವಿಷಯವನ್ನು ಮಕ್ಕಳಿಗೆ ಹೇಗೆ ಹೇಳಿಕೊಡಬೇಕು ಎನ್ನುವುದರ ಬಗ್ಗೆ ತಿಳಿವಳಿಕೆಯುಳ್ಳವರು. ಅಂದರೆ ಅವರು ವೈಜ್ಞಾನಿಕವಾಗಿಯೋ, ವಸ್ತುನಿಷ್ಠವಾಗಿಯೋ ಮತ್ತು ಸತ್ಯ ಆಧಾರಿತವಾಗಿ ಪಠ್ಯಪುಸ್ತಕವನ್ನು ರಚಿಸುತ್ತಾರೆ ಎನ್ನುವುದು ಸಾಮಾನ್ಯ ಜನರ ನಂಬಿಕೆಯಾಗಿರುತ್ತದೆ. ಹಾಗಿದ್ದರೆ ಪಠ್ಯಪುಸ್ತಕ ರಚನೆ ವಿವಾದದ ವಿಷಯವೇಕೆ ಆಗಬೇಕು ಎನ್ನುವುದು ಸ್ಪಷ್ಟವಾಗುವುದಿಲ್ಲ. ಸತ್ಯವೆನ್ನುವುದು ಒಂದೇ ಎಂದಾದಲ್ಲಿ, ಪಠ್ಯಪುಸ್ತಕದಲ್ಲಿ ಸತ್ಯವಿದೆ ಎಂದಾದರೆ, ಅದು ವಿವಾದಾಸ್ಪದವಾಗಲು ಕಾರಣವೇನು ಎಂದು ಕೇಳಿಕೊಳ್ಳಬೇಕಾಗುತ್ತದೆ. ಕೆಲವೊಮ್ಮೆ ಅನೇಕ ಭಾರತೀಯರು ಪಠ್ಯಪುಸ್ತಕದಲ್ಲಿರುವ ನಿರೂಪಣೆಗಳು ನಮ್ಮ ಬದುಕನ್ನು ವಿಕೃತಗೊಳಿಸಿ ಚಿತ್ರಿಸುತ್ತವೆ, ಆ ಕಾರಣಕ್ಕಾಗಿ ಅವುಗಳಲ್ಲಿ ಬದಲಾವಣೆ ಬೇಕು ಎಂದು ವಾದಿಸುತ್ತಾರೆ. ಇನ್ನು ಕೆಲವೊಮ್ಮೆ ಈ ಪಠ್ಯಪುಸ್ತಕಗಳಲ್ಲಿ ಅರ್ಧಸತ್ಯವನ್ನು ಹೇಳಿ ಅರ್ಧಸತ್ಯವನ್ನು ಮುಚ್ಚಿಡಲಾಗುತ್ತಿದೆ, ವಾಸ್ತವಗಳನ್ನು ತಿರುಚಲಾಗಿದೆ, ಚರಿತ್ರೆಯನ್ನು ತಿದ್ದಿ ಬರೆಯಲಾಗಿದೆ ಇತ್ಯಾದಿ ಆರೋಪಗಳು ಕೇಳಿಬರುತ್ತವೆ.
ಬಹುತೇಕ ಪಠ್ಯಪುಸ್ತಗಳ ಮೇಲಿನ ಚರ್ಚೆಯನ್ನು ಜಾಗತಿಕವಾಗಿ ಗಮನಿಸಿದರೆ, ಚರ್ಚೆಯ ಕೇಂದ್ರ ಭಾರತವಿದ್ದಂತೆ ತೋರುತ್ತದೆ. ನಮಗೆಲ್ಲರಿಗೂ ತಿಳಿದಿರುವಂತೆ, ಜಗತ್ತಿನಾದ್ಯಂತ ಎಲ್ಲ ಕಲಿಕಾ ಕ್ರಮಗಳಲ್ಲಿ ಯಾವುದಾದರೊಂದು ಪಠ್ಯಪುಸ್ತಕವನ್ನು ಇಟ್ಟುಕೊಳ್ಳುವುದು ಸಹಜ ಮತ್ತು ಉಪಯುಕ್ತವು ಆಗಿದೆ. ಆದರೆ ಭಾರತದಲ್ಲಿನ ಇಂದಿನ ಪಠ್ಯಪುಸ್ತಕದ ಚರ್ಚೆ ಯಾಕಿಷ್ಟು ಮಹತ್ತ್ವದ ಸ್ಥಾನ ಪಡೆದುಕೊಳ್ಳುತ್ತಿದೆ ಎನ್ನುವುದು ಅತ್ಯಂತ ಆಸಕ್ತಿದಾಯಕವೂ ಉಪಯುಕ್ತವೂ ಆದ ಚರ್ಚೆಯಾಗಿದೆ. ಪಠ್ಯ-ಪುಸ್ತಕದ ರಚನೆಯ ವಿವಾದಕ್ಕೆ ಇರುವ ಪ್ರಮುಖ ಕಾರಣವೆಂದರೆ ಭಾರತದಲ್ಲಿ ಶಾಲಾ-ಕಾಲೇಜುಗಳ ಪಠ್ಯ-ಪುಸ್ತಕಗಳು ರಾಜಕೀಯದೊಂದಿಗೆ ತಳುಕು ಹಾಕಿಕೊಂಡಿರುವುದಾಗಿದೆ. ರಾಜಕೀಯದೊಂದಿಗೆ ಭಾರತದಲ್ಲಿ ಪಠ್ಯಪುಸ್ತಕಗಳು ಏಕೆ ತಳುಕು ಹಾಕಿಕೊಳ್ಳಬೇಕು ಮತ್ತು ಪಠ್ಯಪುಸ್ತಕಗಳಿಂದ ವಿದ್ಯಾರ್ಥಿಯೊಬ್ಬನ ಕಲಿಕೆಗೆ ಲಾಭವಾಗುತ್ತಿದೆಯೋ, ನಷ್ಟವಾಗುತ್ತಿದೆಯೋ ಎಂದು ಯೋಚಿಸುವುದು ಕೂಡ ಮುಖ್ಯವಾಗುತ್ತದೆ. ಪಠ್ಯಪುಸ್ತಕಗಳ ಚರ್ಚೆಯನ್ನು ಸರಿಯಾಗಿ ಗ್ರಹಿಸಿಕೊಳ್ಳಬೇಕೆಂದರೆ, ನಮ್ಮ ದೇಶದಲ್ಲಿ ಪಠ್ಯಪುಸ್ತಕಗಳನ್ನು ಹೇಗೆ ಬಳಸುತ್ತಿದ್ದರು ಎನ್ನುವುದರ ಚಾರಿತ್ರಿಕ ವಿಶ್ಲೇಷಣೆ ಅತ್ಯಂತ ಉಪಯುಕ್ತ.
ಭಾರತೀಯ ಪರಂಪರೆಗಳಲ್ಲಿ ಪಠ್ಯಪುಸ್ತಕಗಳ ಬಳಕೆ ಮತ್ತು ಕಲಿಕಾಕ್ರಮ
ಭಾರತದಲ್ಲಿನ ಬ್ರಿಟಿಷ್ ಪೂರ್ವ ಶಿಕ್ಷಣ ವ್ಯವಸ್ಥೆಯನ್ನು ಗಮನಿಸಿದರೆ, ಭಾರತದಾದ್ಯಂತ ಹರಡಿದ್ದ ವಿಶಾಲ ಶಿಕ್ಷಣ ವಲಯದಲ್ಲಿ ಪಠ್ಯಪುಸ್ತಕ ಪ್ರಮುಖ ಪಾತ್ರವನ್ನು ವಹಿಸಿತ್ತು. ಭಾರತದಲ್ಲಿದ್ದ ಲಕ್ಷಾಂತರ ಶಾಲೆಗಳಲ್ಲಿ ಸ್ಥಳೀಯವಾಗಿ ಅಧ್ಯಾಪಕರು ವಿಭಿನ್ನ ರೀತಿಯ ಪಠ್ಯಪುಸ್ತಕವನ್ನು ಬಳಸಿಯೇ ಪಾಠಮಾಡುತ್ತಿದ್ದರು. 19ನೆಯ ಶತಮಾನದ ಆರಂಭದಲ್ಲಿ ಕಲಿಕೆಗಾಗಿ ಗಣಿತದಲ್ಲಿ ಲೆಕ್ಕಾಚಾರಕ್ಕಾಗಿ ಶುಂಭಕರೀ ಎಂಬ ಪಠ್ಯ, ಅಮರಕೋಶ, ಚಾಣಕ್ಯನ ಶ್ಲೋಕಗಳು, ರಾಮಾಯಣ, ಮಹಾಭಾರತ, ವಿವಿಧ ನಿತ್ಯ ಸ್ತೋತ್ರಗಳು ಇತ್ಯಾದಿಗಳನ್ನು ಆರಂಭಿಕ ಹಂತದಲ್ಲಿ ಕಲಿಸುತ್ತಿದ್ದರು. ಉನ್ನತ ಶಿಕ್ಷಣದಲ್ಲಿ ಪಾಣಿನಿಯ ಅಷ್ಟಾಧ್ಯಾಯಿ, ಭಟ್ಟೋಜಿಯ ಸಿದ್ಧಾಂತಕೌಮುದೀ, ತರ್ಕಸಂಗ್ರಹ, ಲೀಲಾವತಿ, ಸೂರ್ಯಸಿದ್ಧಾಂತ, ಚರಕಸಂಹಿತೆ, ಸುಶ್ರುತ ಸಂಹಿತೆ ಇತ್ಯಾದಿಗಳನ್ನು ಹೇಳಿಕೊಡುತ್ತಿದ್ದರು. ಇಂದಿಗೂ, ಹಿಂದೆಯೂ ವೈದಿಕ ಗುರುಕುಲಗಳಲ್ಲಿ ಪ್ರಸ್ಥಾನತ್ರಯ ಎಂದು ಖ್ಯಾತವಾದ ಉಪನಿಷತ್ತು, ಭಗವದ್ಗೀತೆ ಮತ್ತು ಬ್ರಹ್ಮಸೂತ್ರ ಭಾಷ್ಯ ಇತ್ಯಾದಿಗಳನ್ನು ಹೇಳಿಕೊಡಲಾಗುತ್ತಿತ್ತು. ಅದೇ ರೀತಿ ಬೌದ್ಧಪರಂಪರೆಗಳಲ್ಲಿ ಪ್ರಮಾಣ ವಾರ್ತಿಕ, ಪ್ರಜ್ಞಾಪರಮಿತ ಸೂತ್ರ, ಮಾಧ್ಯಮಿಕ ಕಾರಿಕೆ, ಅಭಿಧಾಮಧಮ್ಮ ಕೋಶ ಇತ್ಯಾದಿ ಅನೇಕ ಪಠ್ಯಗಳನ್ನು ಬಳಸಿ ಸಮಗ್ರ ಶಿಕ್ಷಣ ನಿರ್ವಹಣೆಯನ್ನು ಮಾಡಲಾಗುತ್ತಿತ್ತು. ವೈದಿಕ, ಬೌದ್ಧ, ಜೈನ ಗುರುಕುಲಗಳಾಚೆಗೆ ಆಗಮ, ಲೋಹದ ಕೆಲಸ, ಸ್ಥಾಪತ್ಯ ಇತ್ಯಾದಿಗಳಿಗೆ ಕಲಿಕೆಗೆ ಸಂಬಂಧಿಸಿ ಗುರುಕುಲ, ಕೂಲಿಮಠ ಮೊದಲಾದವುಗಳು ಚಾಲ್ತಿಯಲ್ಲಿದ್ದವು.
ಬ್ರಿಟಿಷ್ ಪೂರ್ವದಲ್ಲಿ ಭಾರತೀಯ ಶಿಕ್ಷಣದ ಪದ್ಧತಿಯಲ್ಲಿ ಈ ಮೇಲೆ ವಿವರಿಸಿದ ಪಠ್ಯಪುಸ್ತಕಗಳು ಎಂದಿಗೂ ವಿವಾದದಕ್ಕೆ ಒಳಗಾಗಿರಲಿಲ್ಲ. ಅನೇಕ ಗುರುಕುಲಗಳು ಸಾವಿರಾರು ವರ್ಷಗಳಿಂದ ದಾಟಿಸಿಕೊಂಡು ಬಂದ ಪಠ್ಯಕ್ರಮದಿಂದ ಮಕ್ಕಳನ್ನು ತರಬೇತು ಮಾಡುತ್ತಿದ್ದರು. ಈ ಪಠ್ಯಕ್ರಮದ ಕುರಿತಂತೆ ಸಾರ್ವಜನಿಕರಿಂದಾಗಲಿ, ರಾಜರಿಂದಾಗಲಿ ಯಾವುದೇ ವಿವಾದ ಉಂಟಾದ ಒಂದೇ ಒಂದು ಉದಾಹರಣೆಯೂ ನಮಗೆ ದೊರಕದು. ಅಷ್ಟೇ ಅಲ್ಲ, ಈ ಪಠ್ಯ ಪುಸ್ತಕಗಳ ರಚನೆಗಾಗಿ ಯಾವುದೇ ರಾಜನಾಗಲಿ, ಜನರಾಗಲಿ ಪಠ್ಯಪುಸ್ತಕ ರಚನಾ ಸಮಿತಿಯನ್ನು ರಚಿಸಿದ್ದು ಕಂಡುಬರುವುದಿಲ್ಲ. ಈ ಕ್ರಮದಲ್ಲಿ ವಿದ್ಯಾರ್ಥಿಗಳ ಕಲಿಕೆಯ ಮೌಲ್ಯಮಾಪವನ್ನು ಸ್ಥಳೀಯ ಅಧ್ಯಾಪಕರು ನಿರ್ವಹಿಸುತ್ತಿದ್ದರು. ರಾಜರಾಗಲಿ, ಯಾವುದೇ ಅಧಿಕಾರಿಗಳಾಗಲಿ ಮೌಲ್ಯಮಾಪನಕ್ಕಾಗಿ ರಾಜ್ಯವ್ಯಾಪಿ ಅನ್ವಯವಾಗುವ ಮಾರ್ಗದರ್ಶಿಸೂತ್ರವನ್ನು ಅಥವಾ ಸುತ್ತೋಲೆಯನ್ನು ಹೊರಡಿಸಿದ್ದು ಕಾಣುವುದಿಲ್ಲ. ಹೀಗಿದ್ದಾಗಲೂ, ಭಾರತದಾದ್ಯಂತ ಶಿಕ್ಷಣದಲ್ಲಿ ಯಾವ ರೀತಿಯಾಗಿ ಮೂಲಭೂತವಾಗಿ ಇಂತಹ ಅಭೂತಪೂರ್ವ ಕಲಿಕೆಯನ್ನು ವಿದ್ಯಾರ್ಥಿಗಳಿಗೆ ಹೇಳಿಕೊಡಲಾಗುತ್ತದೆ ಎನ್ನುವುದು ಬ್ರಿಟಿಷರಿಗೆ ಸೋಜಿಗದ ಸಂಗತಿಯಾಗಿತ್ತು. ಭಾರತೀಯ ಶಿಕ್ಷಣಕ್ಕೆ ಸಂಬಂಧಿಸಿದ ಬ್ರಿಟಿಷರ ವರದಿಗಳನ್ನು ಗಮನಿಸಿದಾಗ ನಮಗೆ ಈ ರೀತಿಯ ವಿವರಣೆಗಳು ಕಂಡುಬರುತ್ತವೆ. 19ನೆಯ ಶತಮಾನದ ಮಧ್ಯಭಾಗದವರೆಗೆ ಪಠ್ಯಪುಸ್ತಕಗಳನ್ನು ಅಧ್ಯಾಪಕರು ನಿರ್ವಹಿಸುತ್ತಿದ್ದರು. ಈ ವಿಷಯಗಳಲ್ಲಿ ರಾಜರಾಗಲಿ, ಸರ್ಕಾರಗಳಾಗಲಿ, ಜನರಾಗಲಿ ಮೂಗು ತೂರಿಸುತ್ತಿರಲಿಲ್ಲ. ಇಂದು ಕಂಡುಬರುವ ಶಿಕ್ಷಣದ ಯಾವುದೇ ನೀತಿ-ನಿಯಮಗಳು ಇಲ್ಲದಿದ್ದರೂ ಅಂದಿನ ಕಾಲಕ್ಕೆ ಉತ್ತಮ ಗುಣಮಟ್ಟದ ಶಿಕ್ಷಣವನ್ನು ಭಾರತೀಯ ಶಿಕ್ಷಣ ಪದ್ಧತಿ ನೀಡುತ್ತಿತ್ತು ಎಂದು 19ನೇ ಶತಮಾನದ ಬ್ರಿಟಿಷರ ವರದಿಗಳು ನಮಗೆ ತಿಳಿಸುತ್ತವೆ.
ಹಾಗಾದರೆ, ಪ್ರಾರಂಭದಲ್ಲಿ ಚರ್ಚಿಸಿದ ಪಠ್ಯಪುಸ್ತಕದ ರಚನೆಯ ವಿವಾದವು ಇಂದು ಚಾಲ್ತಿಯಲ್ಲಿರಲು ಭಾರತೀಯ ಪರಂಪರೆಗಳು ಕಾರಣವಲ್ಲ ಎನ್ನಬೇಕಾಗುತ್ತದೆ. ಅಂದರೆ ಈ ವಿವಾದವು ಯುರೋಪಿನವರು ಭಾರತದಲ್ಲಿ ಶಿಕ್ಷಣವನ್ನು ಪ್ರಾರಂಭ ಮಾಡಿದ ಸಂದರ್ಭದಲ್ಲಿ ಹುಟ್ಟುಹಾಕಿದ ಹೊಸ ಸಮಸ್ಯೆಯನ್ನು ತೋರುತ್ತದೆ. ಹಾಗಾದರೆ ಭಾರತದಲ್ಲಿ ಬ್ರಿಟಿಷರು ಸಮಸ್ಯೆಯನ್ನು ಹುಟ್ಟುಹಾಕಲು ಕಾರಣವೇನು, ಆ ಸಮಸ್ಯೆಯ ಸ್ವರೂಪವೇನು ಮತ್ತು ಇಂದಿಗೂ ಆ ಸಮಸ್ಯೆ ನಮ್ಮ ನಡುವೆ ಇರಲು ಕಾರಣವೇನು ಎಂದು ಯೋಚಿಸುವುದು ಅಗತ್ಯವೆನಿಸುತ್ತದೆ.
ವಸಾಹತು ಪ್ರಭುತ್ವ ಮತ್ತು ಪಠ್ಯ ಪುಸ್ತಕ
ಬ್ರಿಟಿಷರು ಭಾರತದಲ್ಲಿ ತಮ್ಮ ಅಧಿಕಾರವನ್ನು ಪ್ರಾರಂಭಿಸಿದ ಕಾಲಘಟ್ಟದಿಂದ ಸರ್ಕಾರದ ಅಧೀನಕ್ಕೆ ಭಾರತದಲ್ಲಿನ ಶಿಕ್ಷಣವನ್ನು ಜೋಡಿಸತೊಡಗಿದರು. ಇದಕ್ಕೂ ಪೂರ್ವದಲ್ಲಿ ಭಾರತದ ರಾಜಕೀಯ ಸ್ಥಿತ್ಯಂತರಗಳು ಏನೇ ಇದ್ದರೂ, ಯಾವುದೇ ರಾಜರಾಗಲಿ, ಜನರಾಗಲಿ ಶಿಕ್ಷಣವನ್ನು ನಿಯಂತ್ರಿಸುತ್ತಿರರಲಿಲ್ಲ. ಹಾಗಾಗಿ ಶಿಕ್ಷಣ ಕೇಂದ್ರವನ್ನು ತೆರೆಯಲು ಯಾವುದೇ ಸರ್ಕಾರಿ ಕಛೇರಿಯ ಪರವಾನಿಗೆಯ ಅಗತ್ಯವೂ ಇರಲಿಲ್ಲ. ಆದರೆ ಭಾರತದಲ್ಲಿ ಬ್ರಿಟಿಷ್ ಸರ್ಕಾರವು ಈಸ್ಟ್ ಇಂಡಿಯಾ ಕಂಪನಿಯ ಮುಖಾಂತರ ತನ್ನ ಆಡಳಿತವನ್ನು ಪ್ರಾರಂಭಿಸಿದ ಕಾಲದಿಂದ ಅನೇಕ ಸಮಸ್ಯೆಗಳನ್ನು ಎದುರಿಸತೊಡಗಿತು. ಮೊದಲು ಶಿಕ್ಷಣ ವ್ಯವಸ್ಥೆಯನ್ನು ಸರ್ಕಾರಿ ಸ್ವಾಮ್ಯದ ಅಡಿಯಲ್ಲಿ ರೂಪುಗೊಳಿಸಲು ಬ್ರಿಟಿಷರಿಗೆ ಆಡಳಿತಾತ್ಮಕ ಕೇಂದ್ರೀಕೃತ ವ್ಯವಸ್ಥೆಯೊಂದರ ಅಗತ್ಯವಿತ್ತು. ಹಾಗಾಗಿ ಅವರು ಶಿಕ್ಷಣಕ್ಕಾಗಿ ನಿರ್ದಿಷ್ಟ ಹಣವನ್ನು ಪ್ರತಿವರ್ಷ ತಮ್ಮ ಆಯ-ವ್ಯಯದಲ್ಲಿ ಮೀಸಲಿಟ್ಟರು. ಶಿಕ್ಷಣಕ್ಕಾಗಿ ಮೀಸಲಿಟ್ಟ ಹಣದ ಸರಿಯಾದ ಬಳಕೆಯನ್ನು ಪರೀಕ್ಷಿಸುವ ದೃಷ್ಟಿಯಿಂದ, ಶಿಕ್ಷಣ ವ್ಯವಸ್ಥೆಯು ಹೇಗೆ ಕಾರ್ಯ ನಿರ್ವಹಿಸುತ್ತದೆ ಎಂದು ಮೌಲ್ಯಮಾಪನವನ್ನು ಮಾಡಲು ಅವರು ಮುಂದಾದರು. ಹಾಗಾಗಿ ಭಾರತದಾದ್ಯಂತ ಸ್ವತಂತ್ರವಾಗಿ ಅಧ್ಯಾಪಕ ಕೇಂದ್ರೀಕೃತವಾಗಿ ನಡೆಯುತ್ತಿದ್ದ ಶಿಕ್ಷಣವನ್ನು ಸರ್ಕಾರಿ ಸ್ವಾಮ್ಯದ ಒಳಗೆ ತರುವ ಅನಿವಾರ್ಯತೆಯಿತ್ತು. ಸರ್ಕಾರಿ ಸ್ವಾಮ್ಯದ ಒಳಗೆ ಶಿಕ್ಷಣವನ್ನು ತರಲು ಶಾಲೆಗಳು ಯಾವ ರೀತಿಯಲ್ಲಿ ಇರಬೇಕು ಎನ್ನುವ ನಿಯಮಗಳನ್ನು 19ನೆಯ ಶತಮಾನದ ಆರಂಭದಲ್ಲಿ ಜಾರಿಗೊಳಿಸಲಾಯಿತು. ಅನಂತರ ಬ್ರಿಟಿಷರು ಸರ್ಕಾರದಿಂದಲೇ ನೇರವಾಗಿ ಅಧ್ಯಾಪಕರಿಗೆ ಸಂಬಳವನ್ನು ಕೊಡುವ ವ್ಯವಸ್ಥೆಯನ್ನು ಪ್ರಾರಂಭಿಸಿದರು. ವೇತನ ಶ್ರೇಣಿಯನ್ನು ನಿರ್ಧರಿಸುವ ಕಾರಣಕ್ಕಾಗಿ ಬ್ರಿಟಿಷರು ಈ ವ್ಯವಸ್ಥೆಯ ಅಧ್ಯಾಪಕರಿಗೆ ಕನಿಷ್ಠ ವಿದ್ಯಾರ್ಹತೆಯನ್ನು ನಿರ್ಧರಿಸತೊಡಗಿದರು. ಹಾಗಾಗಿ ಕಂಪನಿಯ ಸಂಬಳವನ್ನು ಪಡೆಯುವ ಅಧ್ಯಾಪಕರಾಗಬೇಕೆಂದು ವಿದ್ಯಾರ್ಹತೆಯನ್ನು ಪಡೆಯಲು ಹೊರಟ ವಿದ್ಯಾರ್ಥಿ-ಅಧ್ಯಾಪಕರ ಸಮೂಹ ನಿರ್ಮಾಣವಾಗತೊಡಗಿತು.
ಈ ಸಂದರ್ಭದಲ್ಲಿ ಭಾರತದಾದ್ಯಂತ ಇಲ್ಲಿನ ಹಿಂದೂಗಳು, ಜೈನರು, ಬೌದ್ಧರು ಮೊದಲಾದವರು ಹೇಳಿಕೊಡುತ್ತಿದ್ದ ಪಠ್ಯಗಳು ಮುಂದಿನ ತಲೆಮಾರಿನವರನ್ನು ಭ್ರಷ್ಟರನ್ನಾಗಿಸುತ್ತವೆ ಎಂದು ಬ್ರಿಟಿಷರು ಯೋಚಿಸತೊಡಗಿದರು. ಏಕೆಂದರೆ, ಅವರು ತಮ್ಮ ಯುರೋಪಿನ ಕ್ರಿಶ್ಚಿಯನ್ ಜಗತ್ತಿನ ಅನುಭವದ ಹಿನ್ನೆಲೆಯಲ್ಲಿ ಮನುಷ್ಯನೊಬ್ಬ ಹೇಗೆ ಬದುಕಬೇಕು ಎಂಬ ಕಲ್ಪನೆಯನ್ನು ಹೊಂದಿದ್ದರು. ಅದೇ ರೀತಿಯಲ್ಲಿ ಭಾರತದಲ್ಲಿರುವ ಪೇಗನ್ನರಾದ ಹಿಂದೂ, ಜೈನ, ಬೌದ್ಧ ಮೊದಲಾದವರೂ ಕೂಡ ಪರಿವರ್ತನೆಗೊಳ್ಳುವುದು ಮುಖ್ಯ ಎಂದು ಭಾವಿಸತೊಡಗಿದರು. ಆ ಕಾರಣಕ್ಕಾಗಿಯೇ ಹೊಸ ರೀತಿಯ ಪಠ್ಯಪುಸ್ತಕಗಳನ್ನು ಬ್ರಿಟಿಷ್ ಸರ್ಕಾರದ ಮೂಲಕ ರಚಿಸತೊಡಗಿದರು. ಆದರೆ ಈ ಪಠ್ಯಪುಸ್ತಕಗಳನ್ನು ಹೇಳಿಕೊಡುವ ಅಧ್ಯಾಪಕರೆಲ್ಲರೂ ಇದೇ ಪೇಗನ್ ಸಮುದಾಯದ ಭಾಗವಾಗಿದ್ದರು. ಆದ್ದರಿಂದ ಬ್ರಿಟಿಷರು ಯಾವ ರೀತಿಯ ಕಲಿಕೆಯನ್ನು ಮಾಡಿಸಬೇಕಿತ್ತೋ ಅದಕ್ಕಿಂತ ಭಿನ್ನವಾಗಿ ಈ ಭಾರತೀಯ ಅಧ್ಯಾಪಕರು ತಮ್ಮ ಅನುಭವದ ಹಿನ್ನೆಲೆಯಲ್ಲಿಯೇ ಪಠ್ಯಗಳನ್ನು ಹೇಳಿಕೊಡುತ್ತಿದ್ದರು. ಬ್ರಿಟಿಷರ ಪ್ರಕಾರ ಇದು ಒಂದು ಭ್ರಷ್ಟ ಶಿಕ್ಷಣಕ್ಕೆ ಮಾದರಿಯಾಗಿತ್ತು. ಹಾಗಾಗಿ ಅವರು ಭಾರತದಲ್ಲಿನ ಅಧ್ಯಾಪಕರು ಯಾವ ಪರೀಕ್ಷೆಯಲ್ಲಿ, ಯಾವ ಪಠ್ಯಪುಸ್ತಕದಿಂದ, ಯಾವ ಅಧ್ಯಾಯದಿಂದ, ಯಾವ ಪ್ರಶ್ನೆಗೆ, ಯಾವ ರೀತಿಯ ಉತ್ತರವನ್ನು ಕೊಡಬೇಕೆಂದು ವಿದ್ಯಾರ್ಥಿಗಳಿಗೆ ಬಾಯಿಪಾಠ ಮಾಡಿಸಿ ಕಲಿಸುವ ಪ್ರಕ್ರಿಯೆಯನ್ನು ಚಾಲ್ತಿಗೆ ತಂದರು. 1857ರ ಭಾರತದ ಸ್ವತಂತ್ರ ಸಂಗ್ರಾಮದ ನಂತರ, ಪಠ್ಯಪುಸ್ತಕಗಳನ್ನು ಇದೇ ನಿರ್ದಿಷ್ಟ ರೀತಿಯಲ್ಲಿ ಬಳಸಬೇಕು, ಇದೇ ರೀತಿಯ ಪಠ್ಯಪುಸ್ತಕಗಳನ್ನು ರಚಿಸಬೇಕು ಎನ್ನುವ ಸಾಂಸ್ಥಿಕ ಸ್ವರೂಪವನ್ನು ಗಟ್ಟಿಗೊಳಿಸತೊಡಗಿದರು. ಆ ಕಾರಣಕ್ಕಾಗಿಯೇ ಮೊಟ್ಟಮೊದಲಿಗೆ ಭಾರತದಲ್ಲಿ ರಾಜ್ಯಮಟ್ಟದ ಪುಸ್ತಕರಚನಾ ಸಮಿತಿಗಳು ಅಸ್ತಿತ್ವಕ್ಕೆ ಬಂದವು. ಕಾಲಕ್ರಮೇಣ ಈ ಪಠ್ಯಪುಸ್ತಕ ರಚನಾ ಸಮಿತಿಯು, ಅನೇಕ ಅಧಿಕಾರಿಗಳು ಇತ್ಯಾದಿಗಳನ್ನು ಒಳಗೊಂಡು ನಿರ್ದಿಷ್ಟವಾಗಿ ಇದೇ ವಿಷಯವನ್ನು ಆಯಾ ನಿರ್ದಿಷ್ಟ ವಯಸ್ಸಿನಲ್ಲಿ ಕಲಿಯಬೇಕೆಂದು ನಿರ್ಧರಿಸತೊಡಗಿತು. 20ನೆಯ ಶತಮಾನದ ಪ್ರಾರಂಭದ ಹೊತ್ತಿಗೆ ಭಾರತದಲ್ಲಿ ಈ ರೀತಿಯ ಪಠ್ಯಪುಸ್ತಕ ರಚನೆಯ ಸಾಂಸ್ಥಿಕ ಸ್ವರೂಪ ಮತ್ತು ಅದು ಭಾರತದ ಎಲ್ಲ ಶಿಕ್ಷಣ ವ್ಯವಸ್ಥೆಯನ್ನು ಕಾನೂನಾತ್ಮಕವಾಗಿ ಮಾನ್ಯಮಾಡಲು ಇರುವ ಏಕೈಕ ದಾರಿಯಾಗಿತ್ತು. ಇದು ಅವರಿಗೆ ಭಾರತದಲ್ಲಿ ಇರುವ ಭ್ರಷ್ಟ ಪೇಗನ್ನರನ್ನು ಸರಿಯಾದ ದಾರಿಗೆ ತಂದು ನಾಗರಿಕರನ್ನಾಗಿಸಲು ಕಂಡ ಏಕಮಾತ್ರ ಮಾರ್ಗವಾಗಿತ್ತು.
ಸ್ವಾತಂತ್ರ್ಯಾನಂತರದ ಭಾರತದಲ್ಲಿ ಬ್ರಿಟಿಷರು ತಂದ ಶಿಕ್ಷಣ ವ್ಯವಸ್ಥೆಯು ಇನ್ನೂ ಹೆಚ್ಚು ಕೇಂದ್ರೀಕರಣಗೊಂಡಿತು. ಹಾಗಾಗಿ ಯಾವ ರೀತಿಯಲ್ಲಿ ಯುರೋಪಿಯನ್ನರು ಭಾರತೀಯರು ಭ್ರಷ್ಟರೆಂದು ಭಾವಿಸಿಕೊಂಡು, ಸರಿಯಾದ ನೈತಿಕ ಮಾರ್ಗಕ್ಕೆ ಕರೆದೊಯ್ಯಬೇಕು ಎಂಬ ಭಾವನೆಯಿಂದ ಶಿಕ್ಷಣ ವ್ಯವಸ್ಥೆಯನ್ನು ರೂಪಿಸಿದ್ದರೋ, ಅದನ್ನೇ ನಮ್ಮದೇ ಸರ್ಕಾರಗಳು ತನ್ನದೇ ಜನರನ್ನು ನಿಯಂತ್ರಿಸಲು ಬಳಸತೊಡಗಿದವು. ಹಾಗಾಗಿ ಇಂದು ಪಠ್ಯಪುಸ್ತಕ ರಚನೆ ಎಂಬುದು ಭಿನ್ನ ಭಿನ್ನ ರಾಜಕೀಯ ವಿಚಾರಧಾರೆಗಳ ಐಡಿಯಾಲಾಜಿಕಲ್ ದೃಷ್ಟಿಕೋನಗಳನ್ನು ವಿದ್ಯಾರ್ಥಿಗಳ ಮೇಲೆ ಹೇರುವ ದಾರಿಯಾಗಿದೆ. ಯಾವ ವ್ಯವಸ್ಥೆಯು ಯುರೋಪಿಯನ್ನರಿಗೆ ನಮ್ಮನ್ನು ನಮ್ಮ ಸ್ವಾನುಭವದಿಂದ ದೂರಮಾಡುವ ಮಾರ್ಗವಾಗಿತ್ತೋ, ಅದು ಇಂದು ಭಾರತೀಯರಿಗೆ ಭಿನ್ನ ಭಿನ್ನ ಐಡಿಯಾಲಾಜಿಗಳು ಮುಂದಿನ ತಲೆಮಾರುಗಳನ್ನು ತಮ್ಮ ದೃಷ್ಟಿಕೋನಕ್ಕೆ ಸೇರಿಸಿಕೊಳ್ಳುವ ಮಾರ್ಗವಾಗಿದೆ. ಬ್ರಿಟಿಷರಿಗೆ ಭಾರತೀಯ ಸಂಪ್ರದಾಯ, ಆಚರಣೆಗಳು ಭ್ರಷ್ಟ ಮತ್ತು ಸುಳ್ಳು ರಿಲಿಜನ್ಗಳೆಂದು ಕಂಡವು. ಸಂಪ್ರದಾಯ, ಆಚರಣೆ ಮತ್ತು ಸುಳ್ಳು ರಿಲಿಜನ್ನಿಂದ ಭ್ರಷ್ಟರಾದ ಜನರನ್ನು ಸರಿಪಡಿಸಬೇಕೆಂಬ ಆಶಯದಿಂದ ಅವರು ನಿರ್ಮಿಸಿದ ಸಾಂಸ್ಥಿಕ ವ್ಯವಸ್ಥೆಯೆ ಈ ಪಠ್ಯಪುಸ್ತಕ ರಚನೆಯ ಕೇಂದ್ರೀಕೃತ ವ್ಯವಸ್ಥೆ. ಇಂದು ನಮಗೆ ಈ ಪಠ್ಯಪುಸ್ತಕ ರಚನೆಯ ಪ್ರಕ್ರಿಯೆಯು ನಮ್ಮನ್ನೇ ನಾವು ಒಬ್ಬರ ಮೇಲೆ ಒಬ್ಬರು ಹಿಡಿತ ಸಾಧಿಸಿಕೊಳ್ಳಲು ಬಯಸುವ ರಾಜಕೀಯದ ಏಣಿಯಾಗಿದೆ. ಭಾರತೀಯ ಸಮುದಾಯವೆಂಬ ಹಗ್ಗ ಬ್ರಿಟಿಷರಿಗೆ ಹಾವಾಗಿ (ಭ್ರಷ್ಟವಾಗಿರುವುದಾಗಿ) ಕಂಡಿದ್ದಂತೂ ಸರಿ. ಆದರೆ ಭಾರತೀಯರಿಗೆ ತಮ್ಮದೇ ಜೀವನ, ತಮ್ಮದೇ ಬದುಕನ್ನು ಬ್ರಿಟಿಷರ ಸಾಂಸ್ಕೃತಿಕ ಅನುಭವದ ಮೂಸೆಯಿಂದ ನೋಡುವುದು ಇಂದು ಅತ್ಯಂತ ಆತ್ಮೀಯವು ಮತ್ತು ಉಪಯುಕ್ತವೂ ಆದಂತೆ ಕಾಣುತ್ತದೆ. ಈ ಪಠ್ಯಪುಸ್ತಕ ರಚನೆ ಎಂಬ ಆಡುಂಬೊಲವೊಂದು ಇಂದು ಭಿನ್ನ ರಾಜಕೀಯ ಸಿದ್ಧಾಂತಗಳ ರಣಾಂಗಣವಾಗಿ ಮಾರ್ಪಟ್ಟಿದೆ. ನಾವು ಕೇಳಿಕೊಳ್ಳಬೇಕಾಗಿರುವ ಪ್ರಶ್ನೆ ನಾವು ನಮ್ಮ ಅನುಭವದಿಂದ ನೆಮ್ಮದಿಯ ಜೀವನವನ್ನು ಕಟ್ಟಿಕೊಳ್ಳಬೇಕೋ ಅಥವಾ ಯುರೋಪಿನ ಅನುಭವದ ಮಾಯೆಯಲ್ಲಿ ನರಳಬೇಕೋ ಎನ್ನುವುದೇ ಆಗಿದೆ.
