ಬೀದರ್: ಸರಸ್ವತಿ ಶಿಕ್ಷಣ ವಿಕಾಸ ಸಮಿತಿ ಸಂಚಾಲಿತ ಶ್ರೀ ಮಡಿವಾಳೇಶ್ವರ ಶಿಶುಮಂದಿರ ಹಿರಿಯ ಪ್ರಾಥಮಿಕ ಹಾಗೂ ಪ್ರೌಢಶಾಲೆಯಲ್ಲಿ ‘ನಮಾಮಿ ಭಾರತ– ವಂದೇ ಮಾತರಂ’ ಅಭಿಯಾನದ ಅಂಗವಾಗಿ ವಂದೇ ಮಾತರಂ ಗೀತೆಯ 150ನೇ ವರ್ಷದ ಸಂಭ್ರಮಾಚರಣೆಯನ್ನು ಅರ್ಥಪೂರ್ಣವಾಗಿ ಆಚರಿಸಲಾಯಿತು.
ಕಾರ್ಯಕ್ರಮದ ಆರಂಭದಲ್ಲಿ ಭಾರತಮಾತೆಯ ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು. ಬೆಳಗ್ಗೆ 11 ಗಂಟೆಗೆ ಶಾಲೆಯ ವಿದ್ಯಾರ್ಥಿಗಳು, ಶಿಕ್ಷಕರು ಹಾಗೂ ಸಿಬ್ಬಂದಿ ವರ್ಗದವರು ಏಕಕಾಲದಲ್ಲಿ ಸಾಮೂಹಿಕವಾಗಿ ‘ವಂದೇ ಮಾತರಂ’ ಗೀತೆಯನ್ನು ಗಾಯನ ಮಾಡಿದರು.
ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಸಂಸ್ಥೆಯ ಆಡಳಿತ ಮಂಡಳಿಯ ಸದಸ್ಯರಾದ ಶ್ರೀ ಶಿವಕುಮಾರ್ ಉಪ್ಪೆ ಅವರು ಮಾತನಾಡಿ, “ವಂದೇ ಮಾತರಂ ಗೀತೆಯು ಸ್ವಾತಂತ್ರ್ಯ ಹೋರಾಟದ ಸಂದರ್ಭದಲ್ಲಿ ದೇಶಭಕ್ತಿಯ ಕಿಚ್ಚನ್ನು ಹೆಚ್ಚಿಸಿತು. ಕವಿ ಹಾಗೂ ಸಾಹಿತಿ ಬಂಕಿಮಚಂದ್ರ ಚಟ್ಟೋಪಾಧ್ಯಾಯರು ರಚಿಸಿದ ಈ ಗೀತೆ ಭಾರತೀಯರಲ್ಲಿ ದೇಶಪ್ರೇಮ ಮತ್ತು ಸ್ವಾತಂತ್ರ್ಯದ ಹಂಬಲವನ್ನು ಬಲಪಡಿಸಿತು. ವಂದೇ ಮಾತರಂ ಘೋಷಣೆ ಸ್ವಾತಂತ್ರ್ಯ ಹೋರಾಟಕ್ಕೆ ಹೊಸ ಉತ್ಸಾಹವನ್ನು ನೀಡಿತು” ಎಂದು ಹೇಳಿದರು.
ವಂದೇ ಮಾತರಂ ಗೀತೆಯು ಭಾರತೀಯರ ಸ್ವಾಭಿಮಾನ, ಮಾತೃಭೂಮಿಯ ಮೇಲಿನ ಭಕ್ತಿ ಹಾಗೂ ದೇಶಪ್ರೇಮದ ಭಾವನೆಗಳನ್ನು ಬಿಂಬಿಸುವ ಮಹತ್ವದ ಗೀತೆಯಾಗಿದೆ. ಸ್ವಾತಂತ್ರ್ಯ ಹೋರಾಟದ ಸಂದರ್ಭದಲ್ಲಿ ಈ ಗೀತೆ ಜನರಲ್ಲಿ ರಾಷ್ಟ್ರಭಕ್ತಿಯ ಭಾವನೆಯನ್ನು ಮೂಡಿಸುವಲ್ಲಿ ಪ್ರಮುಖ ಪಾತ್ರ ವಹಿಸಿತು. ಬಂಗಾಳ ವಿಭಜನೆ ವಿರೋಧಿ ಚಳವಳಿಯ ಸಂದರ್ಭದಲ್ಲಿಯೂ ವಂದೇ ಮಾತರಂ ಘೋಷಣೆ ವ್ಯಾಪಕವಾಗಿ ಮೊಳಗಿತು.
ಕಲ್ಕತ್ತಾದ ಕಾಂಗ್ರೆಸ್ ಅಧಿವೇಶನದಲ್ಲಿ ರವೀಂದ್ರನಾಥ ಟ್ಯಾಗೋರ್ ಅವರು ವಂದೇ ಮಾತರಂ ಗೀತೆಯನ್ನು ಸಂಗೀತದೊಂದಿಗೆ ಹಾಡಿದ ಐತಿಹಾಸಿಕ ಘಟನೆಯನ್ನು ಸಹ ಅವರು ಸ್ಮರಿಸಿದರು. ನಂತರ ಭಾರತದ ಸ್ವಾತಂತ್ರ್ಯಾನಂತರ ವಂದೇ ಮಾತರಂಗೆ ರಾಷ್ಟ್ರಗೀತೆಯ ಸಮಾನ ಗೌರವದ ಸ್ಥಾನಮಾನ ದೊರಕಿದ ವಿಚಾರವನ್ನು ವಿವರಿಸಿದರು.
ಇದೇ ಸಂದರ್ಭದಲ್ಲಿ ವಿದ್ಯಾರ್ಥಿಗಳಿಗೆ ‘ಒಂದು ಕಥೆ ಒಂದು ವ್ಯಥೆ’ ಪುಸ್ತಕವನ್ನು ಓದುವಂತೆ ಪ್ರೇರೇಪಿಸಲಾಯಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಸಂಸ್ಥೆಯ ಕೋಶ್ಯಾಧ್ಯಕ್ಷರು ವಂದೇ ಮಾತರಂ ಗೀತೆ ವಿಶೇಷತೆ ಹಾಗೂ ಮಹತ್ವವನ್ನು ವಿವರಿಸಿ, ಪ್ರತಿಯೊಬ್ಬರು ಗೀತೆಯನ್ನು ಗೌರವದಿಂದ ಸ್ಮರಿಸಬೇಕು ನಮ್ಮ ಮನೆ ಮನಗಳಲ್ಲಿ ಗೀತೆ ಹೇಳಿ ಅಮರವಾಗಬೇಕು. ಸ್ವತಂತ್ರದ ಕಿಚ್ಚನ್ನು ಹೆಚ್ಚಿಸಿದ ಗೀತೆ ರಾಷ್ಟ್ರೀಯ ಗೀತೆಯಾಗಿ. ಪ್ರತಿ ಕಾರ್ಯಕ್ರಮದ ಪ್ರಾರಂಭದಲ್ಲಿ ಹೇಳಬೇಕು ಎಂದು ಕರೆ ನೀಡಿದರು. ಪ್ರೌಢಶಾಲೆ ಮುಖ್ಯ ಶಿಕ್ಷಕರು ಶ್ರೀ ಶರಣು ಪಾಟೀಲ್ ಹಾಗೂ ಪ್ರಾಥಮಿಕ ಶಾಲೆ ಮುಖ್ಯ ಶಿಕ್ಷಕಿ ಅರ್ಚನಾ ಸಿರಿಗೆರೆ ಸಮಸ್ತ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು. ರಂಜನ್ ಬಸವರಾಜ್ ಸ್ವಾಗತಿಸಿದನು. ವಿಜಯಲಕ್ಷ್ಮಿ ಶಿವಪುತ್ರ ವಂದಿಸಿದಳು, ಕಾರ್ಯಕ್ರಮ ಅಚ್ಚುಕಟ್ಟಾಗಿ ಹಾಗೂ ಶಿಸ್ತಿನಿಂದ ನೆರವೇರಿತು.
ವಿಕ್ರಮ ಓದುಗರ ವಾಟ್ಸಪ್ ಬಳಗಕ್ಕೆ ಸೇರಲು ಈ ಸಂಖ್ಯೆಯನ್ನು ನಿಮ್ಮ ಮೊಬೈಲ್ನಲ್ಲಿ ಸೇವ್ ಮಾಡಿಕೊಂಡು ನಮಗೊಂದು ಸಂದೇಶ ಕಳುಹಿಸಿ. ಮೊಬೈಲ್ ಸಂಖ್ಯೆ: 98800 21122
