ಚನ್ನೇನಹಳ್ಳಿ: ಜನಸೇವಾ ವಿದ್ಯಾಕೇಂದ್ರದಲ್ಲಿ ಭಾನುವಾರ ನಡೆದ ವಾರ್ಷಿಕ ರುದ್ರಹೋಮ ಹಾಗೂ ಸಾಧಕ ದಂಪತಿ ಸನ್ಮಾನ ಕಾರ್ಯಕ್ರಮದಲ್ಲಿ ಸನ್ಮಾನ ಸ್ವೀಕರಿಸಿ, ವಿಜಯಪುರದ ವೈದ್ಯರಾದ ಡಾ. ಸತೀಶ್ ಜಿಗಜಿನ್ನಿ ಅವರು ಈ ಅಭಿಮತ ವ್ಯಕ್ತಪಡಿಸಿದರು.
“ಪುರಾತನ ಕಾಲದಲ್ಲಿ ವೇದಮಂತ್ರಗಳ ಮೂಲಕ ಮಾನವರ ಅನೇಕ ರೋಗಗಳನ್ನು ಗುಣಪಡಿಸುತ್ತಿದ್ದರು. ಆ ಧ್ವನಿಗಳನ್ನು ಆಧರಿಸಿಯೇ ಇಂದು ಆಧುನಿಕ ವೈದ್ಯಕೀಯ ಕ್ಷೇತ್ರದಲ್ಲಿ ಸಂಶೋಧನೆಗಳು ಹಾಗೂ ಬಳಕೆಗಳು ನಡೆಯುತ್ತಿವೆ. ವೇದಮಂತ್ರಗಳ ಧ್ವನಿತರಂಗಗಳ ಬಗ್ಗೆ ಹೆಚ್ಚಿನ ಸಂಶೋಧನೆ ನಡೆದರೆ ಅದು ಮಾನವ ಜೀವನಕ್ಕೆ ಮಹತ್ತರ ಕೊಡುಗೆಯಾಗಲಿದೆ” ಎಂದರು.
ಮುಖ್ಯ ವಕ್ತಾರರಾದ ಪ್ರೊ. ರಾಮಚಂದ್ರಭಟ್ ಕೋಟೆಮನೆ ಅವರು ಮಾತನಾಡಿ, “ಜನಸೇವಾದಲ್ಲಿ ಸಾಧಕ ದಂಪತಿ ಸನ್ಮಾನ ಕಾರ್ಯಕ್ರಮವು ವಿಶೇಷವಾಗಿದ್ದು, ಸಮಾಜದಲ್ಲಿ ಸೇವೆ ಸಲ್ಲಿಸಿದವರನ್ನು ಗುರುತಿಸಿ ಸನ್ಮಾನಿಸುವುದರ ಮೂಲಕ ಅವರ ಆದರ್ಶಗಳು ನಮ್ಮ ಮುಂದಿನ ಪೀಳಿಗೆಗೆ ದಾರಿದೀಪವಾಗಬೇಕು. ವಿದ್ಯಾಭ್ಯಾಸದ ನಂತರ ಮಕ್ಕಳು ಸಮಾಜಸೇವೆ ಹಾಗೂ ಸಾಮಾಜಿಕ ಕಾರ್ಯಗಳಲ್ಲಿ ತೊಡಗಿಸಿಕೊಂಡು ಸಾಧನೆ ಮಾಡಬೇಕಿದೆ. ವೇದಶಾಸ್ತ್ರಗಳಲ್ಲಿ ಮಾನವನಿಗೆ ಬೇಕಾದ ಅನೇಕ ವಿಚಾರಗಳನ್ನು ವಿವರವಾಗಿ ತಿಳಿಸಲಾಗಿದ್ದು, ಅವುಗಳನ್ನು ಅರಿಯುವ ಕಾರ್ಯ ನಡೆಯಬೇಕಿದೆ” ಎಂದರು.
ಮುಂದುವರಿದು, “ಯಂತ್ರಮಾನವನ (ಎಐ/ರೋಬೋಟ್) ಹಾವಳಿಗೆ ಮಾನವ ಸಂಕುಲವೇ ನಾಶವಾಗುವ ಕಾಲ ಸನಿಹದಲ್ಲಿದ್ದು, ಇಂದಿನ ಮಕ್ಕಳು ಮತ್ತು ಯುವಪೀಳಿಗೆ ಸದಾ ಜಾಗರೂಕರಾಗಿರಬೇಕು. ನಮ್ಮ ಸಾಧನೆ ಪ್ರತಿಯೊಂದು ಮನೆ-ಮನಗಳನ್ನು ಬೆಳಗಬೇಕಿದೆ ಹಾಗೂ ಮಾನವನ ಶ್ರೇಷ್ಠತೆಯನ್ನು ಕಾಯ್ದುಕೊಳ್ಳಬೇಕಿದೆ. ಕಂಪ್ಯೂಟರ್, ಮೊಬೈಲ್ನಂತಹ ಯಂತ್ರಗಳ ಜೊತೆ ಸಮಯ ಕಳೆಯುವ ಬದಲು ನಿತ್ಯ ಯೋಗ, ಸತ್ಸಂಗ ಹಾಗೂ ಸಂಸ್ಕಾರಗಳೊಂದಿಗೆ ಕಾಲ ಕಳೆಯಬೇಕು. ವಿದೇಶಿಯರು ನಮ್ಮ ಸಂಸ್ಕೃತಿಯ ಮಹತ್ವವನ್ನು ತಿಳಿದು ಅನುಸರಿಸುತ್ತಿದ್ದಾರೆ; ಆದರೆ ನಾವು ಭಾರತೀಯರಾಗಿಯೂ ನಮ್ಮ ಆಚಾರ-ವಿಚಾರಗಳನ್ನು ಮರೆಯುತ್ತಿರುವುದು ವಿಷಾದನೀಯ” ಎಂದು ಕಳವಳ ವ್ಯಕ್ತಪಡಿಸಿದರು. ರುದ್ರಹೋಮದಲ್ಲಿ ಲೋಕಕಲ್ಯಾಣಕ್ಕಾಗಿ ಶಿವನನ್ನು ಪ್ರಾರ್ಥಿಸಲಾಯಿತು.
ಕಾರ್ಯಕ್ರಮದಲ್ಲಿ ಸಾಧಕ ದಂಪತಿಗಳಾದ ಡಾ. ಸತೀಶ ಸಿದ್ಧವೀರಪ್ಪ ಜಿಗಜಿನ್ನಿ ಹಾಗೂ ಅವರ ಧರ್ಮಪತ್ನಿ ಡಾ. ದಾಕ್ಷಾಯಿಣಿ ಸತೀಶ್ ಜಿಗಜಿನ್ನಿ ಅವರನ್ನು ಗೌರವಿಸಿ ಸನ್ಮಾನಿಸಲಾಯಿತು.
ಜನಸೇವಾ ವಿಶ್ವಸ್ಥ ಮಂಡಳಿಯ ಅಧ್ಯಕ್ಷರಾದ ಶ್ರೀನಿವಾಸ ಗುಪ್ತಾ ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಗೌರವ ಕಾರ್ಯದರ್ಶಿಗಳಾದ ಎ.ಎಸ್. ನಿರ್ಮಲ್ ಕುಮಾರ್ ಹಾಗೂ ಸಂಸ್ಥೆಯ ಸದಸ್ಯರು ಉಪಸ್ಥಿತರಿದ್ದರು. ಜನಸೇವಾ ವಿಶ್ವಸ್ಥ ಮಂಡಳಿಯ ನಿರ್ವಾಹಕ ವಿಶ್ವಸ್ಥರಾದ ನಾ. ತಿಪ್ಪೇಸ್ವಾಮಿ ಅವರು ಸ್ವಾಗತಿಸಿ, ಪರಿಚಯ ಮಾಡಿಕೊಟ್ಟರು. ಶ್ರೀಯುತ ಮಹಾಬಲೇಶ್ವರ ಭಟ್ ಅವರು ಪ್ರಾಸ್ತಾವಿಕ ನುಡಿಗಳನ್ನಾಡಿದರು. ಶ್ರೀಯುತ ಚಂದನ್ ಕಾರ್ಯಕ್ರಮ ನಿರೂಪಿಸಿ, ಶ್ರೀ ಶಿವಲಿಂಗಯ್ಯ ಅವರು ವಂದಿಸಿದರು.
ವಿಕ್ರಮ ಓದುಗರ ವಾಟ್ಸಪ್ ಬಳಗಕ್ಕೆ ಸೇರಲು ಈ ಸಂಖ್ಯೆಯನ್ನು ನಿಮ್ಮ ಮೊಬೈಲ್ನಲ್ಲಿ ಸೇವ್ ಮಾಡಿಕೊಂಡು ನಮಗೊಂದು ಸಂದೇಶ ಕಳುಹಿಸಿ. ಮೊಬೈಲ್ ಸಂಖ್ಯೆ: 98800 21122
