- ಸಿ.ಎಸ್. ಸ್ಪೂರ್ತಿ ಮುರಳೀಧರ್
ಆಡಳಿತ ವ್ಯವಸ್ಥೆಗಳು ಅಥವಾ ಸಂಸ್ಥೆಗಳು ವಿಫಲವಾದಾಗ ಅವುಗಳನ್ನು ಪ್ರಶ್ನಿಸುವ ಹಾಗೂ ಹೊಣೆಗಾರಿಕೆ ಕೇಳುವ ಸಂಪೂರ್ಣ ಹಕ್ಕು ಭಾರತದ ಯುವಜನತೆಗಿದೆ. ಆದರೆ, ಇಂದಿನ ತಂತ್ರಜ್ಞಾನದ (ಅಲ್ಗಾರಿದಮ್ಗಳ) ಯುಗದಲ್ಲಿ ಜನರ ಅಸಮಾಧಾನವನ್ನು ರಾತ್ರೋರಾತ್ರಿ ರಾಜಕೀಯ ಬೇಳೆ ಬೇಯಿಸಿಕೊಳ್ಳಲು ಬಳಸಿಕೊಳ್ಳಲಾಗುತ್ತದೆ. ಇಂಥ ಹೊತ್ತಿನಲ್ಲಿ ವಿವೇಚನೆ ಕಾಯ್ದುಕೊಳ್ಳುವುದೇ ನಮ್ಮ ಮುಂದಿರುವ ಅತಿದೊಡ್ಡ ಸವಾಲು. ಯುವಕರ ಈ ಕೋಪವನ್ನು ಪ್ರಜಾಸತ್ತಾತ್ಮಕವಾಗಿ, ರಚನಾತ್ಮಕವಾಗಿ ಹಾಗೂ ರಾಷ್ಟ್ರ ನಿರ್ಮಾಣದ ಪರವಾಗಿ ಬಳಕೆಯಾಗುವಂತೆ ಮಾಡುವುದು ಹೇಗೆ?
ಆಕ್ರೋಶಭರಿತ ಯುವ ಸಮುದಾಯದಲ್ಲಿ ಅಪಾರವಾದ ಶಕ್ತಿಯಿರುತ್ತದೆ. ಅಂದರೆ, ಈ ಯುವಕರಿಗೆ ತಮ್ಮ ದೇಶದ ಬಗ್ಗೆ ದೊಡ್ಡ ನಿರೀಕ್ಷೆಗಳಿರುತ್ತವೆ ಮತ್ತು ತಮ್ಮ ದೇಶ ಇನ್ನೂ ಉತ್ತಮವಾಗಿ ರೂಪುಗೊಳ್ಳಬೇಕು ಎಂಬ ಆಕಾಂಕ್ಷೆಗಳಿರುತ್ತವೆ. ಆದರೆ, ಇಲ್ಲೊಂದು ಅಪಾಯವೂ ಇದೆ: ಯುವಕರ ಈ ಆಕ್ರೋಶ ತನ್ನ ಮೂಲ ಉದ್ದೇಶವನ್ನೇ ಕಳೆದುಕೊಂಡರೆ, ಅದು ಬೇರಾರೋ ಸ್ವಾರ್ಥಿಗಳ ಕೈಯಲ್ಲಿ ರಾಜಕೀಯ ಅಸ್ತ್ರವಾಗಿ ಬದಲಾಗುವ ಸಾಧ್ಯತೆಯಿರುತ್ತದೆ.
ಇತ್ತೀಚೆಗೆ ‘ನೀಟ್’ (NEET) ಸೇರಿದಂತೆ ಇತರ ಪರೀಕ್ಷಾ ಅಕ್ರಮಗಳ ವಿರುದ್ಧ ಯುವಜನರು ನಡೆಸಿದ ಪ್ರತಿಭಟನೆಗಳನ್ನು ಗಂಭೀರವಾಗಿ ಪರಿಗಣಿಸಲೇಬೇಕು. ತಪ್ಪು ಮಾಡಿದವರನ್ನು ಹೊಣೆಗಾರರನ್ನಾಗಿ ಮಾಡುವಂತೆ ಆಗ್ರಹಿಸುವುದು ವಿದ್ಯಾರ್ಥಿಗಳ ಮೂಲಭೂತ ಹಕ್ಕು. ಆದರೆ, ನ್ಯಾಯಯುತವಾದ ಈ ಹೋರಾಟಕ್ಕೆ ಸಂಬಂಧವೇ ಇಲ್ಲದ ರಾಜಕೀಯ ಘೋಷಣೆಗಳು, ವ್ಯಕ್ತಿಗಳು ಮತ್ತು ಸೈದ್ಧಾಂತಿಕ ಹಿತಾಸಕ್ತಿಗಳು ನುಸುಳಿದಾಗ, ಯುವ ಭಾರತೀಯರು ಕೊಂಚ ಎಚ್ಚೆತ್ತುಕೊಳ್ಳಬೇಕು. ಡಿಜಿಟಲ್ ಯುಗದಲ್ಲಿ ನೈಜ ಸಮಸ್ಯೆಗಳನ್ನು ಹೇಗೆ ತಿರುಚಲಾಗುತ್ತದೆ ಮತ್ತು ದುರ್ಬಳಕೆ ಮಾಡಿಕೊಳ್ಳಲಾಗುತ್ತದೆ ಎಂಬುದನ್ನು ಅವರು ಅರ್ಥಮಾಡಿಕೊಳ್ಳಬೇಕಿದೆ.
ಪರೀಕ್ಷಾ ಅಕ್ರಮಗಳ ಬಗ್ಗೆ ಆರಂಭದಲ್ಲಿ ಭುಗಿಲೆದ್ದ ಆಕ್ರೋಶವೇನೂ ಕ್ಷುಲ್ಲಕವಾಗಿರಲಿಲ್ಲ. ಲಕ್ಷಾಂತರ ಯುವಕರಿಗೆ, ಸ್ಪರ್ಧಾತ್ಮಕ ಪರೀಕ್ಷೆಗಳೆಂದರೆ ವರ್ಷಗಳ ಕಠಿಣ ಶ್ರಮ, ತ್ಯಾಗ ಮತ್ತು ತಮ್ಮ ಬದುಕನ್ನು ಕಟ್ಟಿಕೊಳ್ಳುವ ಭರವಸೆಯ ದಾರಿ. ಹೀಗಿರುವಾಗ, ಪ್ರಶ್ನೆಪತ್ರಿಕೆ ಸೋರಿಕೆ ಅಥವಾ ವ್ಯವಸ್ಥೆಯ ವೈಫಲ್ಯವೆಂಬುದು ಕೇವಲ ಒಂದು ಆಡಳಿತಾತ್ಮಕ ಲೋಪವಾಗಿ ಉಳಿಯುವುದಿಲ್ಲ; ಅದು ಇಡೀ ಯುವಪೀಳಿಗೆಗೇ ಮಾಡಿದ ದೊಡ್ಡ ದ್ರೋಹದಂತೆ ಕಾಡುತ್ತದೆ. ಹಾಗಾಗಿಯೇ, ವಿದ್ಯಾರ್ಥಿಗಳ ಇಂತಹ ಪ್ರತಿಭಟನೆಗಳು ನಮ್ಮ ಶಿಕ್ಷಣ ವ್ಯವಸ್ಥೆಯನ್ನು ಎಚ್ಚರಿಸುವ ಕೆಲಸ ಮಾಡುತ್ತವೆ.
ಅಸಮಾಧಾನಕ್ಕೆ ರಾಜಕೀಯದ ಬಣ್ಣ ಲೇಪನವಾದಾಗ:
ವಿದ್ಯಾರ್ಥಿಗಳ ನ್ಯಾಯಬದ್ಧ ಹೋರಾಟವು ತನ್ನ ಹಾದಿ ತಪ್ಪುವುದು ಯಾವಾಗ? ಪರೀಕ್ಷಾ ಅಕ್ರಮಗಳ ವಿರುದ್ಧ ಶುರುವಾದ ಹೋರಾಟವು ದೊಡ್ಡ ರಾಜಕೀಯ ಅಭಿಯಾನವಾಗಿ ಬದಲಾದಂತೆ, ಜಂತರ್ ಮಂತರ್ ಮತ್ತು ಸಂಸತ್ತಿನ ಸುತ್ತಮುತ್ತಲಿನ ಪ್ರತಿಭಟನೆಗಳು ಮೂಲ ಸಮಸ್ಯೆಯನ್ನು ಬಿಟ್ಟು ಬೇರೆಯದೇ ಸಂದೇಶಗಳನ್ನು ಸಾರಲು ಶುರುಮಾಡಿದವು. ಪ್ರಜಾಪ್ರಭುತ್ವದಲ್ಲಿ ಭಿನ್ನಾಭಿಪ್ರಾಯ ವ್ಯಕ್ತಪಡಿಸುವುದು ಅಥವಾ ರಾಜಕೀಯ ದೃಷ್ಟಿಕೋನಗಳನ್ನು ಹೊಂದಿರುವುದು ತಪ್ಪಲ್ಲ. ಆದರೆ ಇಲ್ಲಿನ ಪ್ರಶ್ನೆಯೇ ಬೇರೆ: ಪರೀಕ್ಷೆಯ ಅನ್ಯಾಯದ ವಿರುದ್ಧ ಹುಟ್ಟಿದ ಚಳವಳಿಯೊಂದು, ದಿಢೀರನೆ ಸಂಪೂರ್ಣ ವಿಭಿನ್ನವಾದ ರಾಜಕೀಯ ಸೈದ್ಧಾಂತಿಕ ಅಸ್ತ್ರವಾಗಿ ಏಕೆ ಬದಲಾಗಬೇಕು?
ಭಾರತವು ಅರ್ಥಮಾಡಿಕೊಳ್ಳಬೇಕಾದ ಮತ್ತೊಂದು ಆಯಾಮವೆಂದರೆ: ‘ಅಲ್ಗಾರಿದಮ್ಗಳ ರಾಜಕೀಯ’. ಇಂದಿನ ಯುವಕರು ರಾಜಕೀಯವನ್ನು ನೇರವಾಗಿ ನೋಡುವುದಿಲ್ಲ; ಬದಲಾಗಿ ರೀಲ್ಸ್, ಮೀಮ್ಸ್, ಕಿರು ವಿಡಿಯೋಗಳು ಮತ್ತು ಇನ್ಫ್ಲುಯೆನ್ಸರ್ಗಳ ಮೂಲಕ ಗ್ರಹಿಸುತ್ತಾರೆ. ಹಿಂದೆಲ್ಲಾ ಒಂದು ಅಸಮಾಧಾನವು ಚಳವಳಿಯಾಗಿ ರೂಪುಗೊಳ್ಳಲು ತಿಂಗಳುಗಳೇ ಬೇಕಾಗುತ್ತಿತ್ತು. ಆದರೆ ಇಂದು ಕೆಲವೇ ಗಂಟೆಗಳಲ್ಲಿ ಅದೊಂದು ರಾಷ್ಟ್ರೀಯ ಸುದ್ದಿಯಾಗಿ ಬಿಡುತ್ತದೆ.
ಇದರ ಹಿಂದೆ ಯಾವುದೋ ‘ಅದೃಶ್ಯ ಕೈ’ವಾಡವಿದೆ ಎಂದಾಗಲೀ ಅಥವಾ ಪ್ರತಿ ಯುವ ಚಳವಳಿಯೂ ಒಂದು ಪಿತೂರಿ ಎಂದಾಗಲೀ ಇದರರ್ಥವಲ್ಲ. ಆದರೆ ನಾವೊಂದು ಗಂಭೀರವಾದ ಪ್ರಶ್ನೆಯನ್ನು ಕೇಳಿಕೊಳ್ಳಲೇಬೇಕು: ಯುವಜನರ ನ್ಯಾಯಸಮ್ಮತವಾದ ಆಕ್ರೋಶವನ್ನು ನಿರಂತರವಾಗಿ ಹಿಗ್ಗಿಸಿ, ರಾಜಕೀಯ ಧ್ರುವೀಕರಣಕ್ಕಾಗಿ ಬಳಸಿಕೊಂಡು ಲಾಭ ಮಾಡಿಕೊಳ್ಳುತ್ತಿರುವವರು ಯಾರು?
ಡಿಜಿಟಲ್ ಯುಗದಲ್ಲಿ, ಯುವಜನರನ್ನು ಒಗ್ಗೂಡಿಸುವುದು ರಾಜಕೀಯ ಶಕ್ತಿಯ ಹೊಸ ರೂಪವಾಗಿ ಬೆಳೆದಿದೆ. ಆದ್ದರಿಂದ ಭಾರತವು ಪ್ರತಿಭಟನೆಗಳಿಗೆ ಹೇಗೆ ಪ್ರತಿಕ್ರಿಯಿಸಬೇಕು ಎಂಬುದಷ್ಟೇ ಅಲ್ಲ, ಆ ಪ್ರತಿಭಟನೆಗಳು ಹುಟ್ಟಿಕೊಳ್ಳುವ ಹಿನ್ನೆಲೆಯನ್ನು ಅರ್ಥಮಾಡಿಕೊಳ್ಳುವುದನ್ನೂ ಕಲಿಯಬೇಕಿದೆ. ಇದಕ್ಕಾಗಿ ನಾವು ನಮ್ಮದೇ ಆದ ಪುರಾತನ ಸಾಂಸ್ಕೃತಿಕ ಮೌಲ್ಯಗಳತ್ತ ಮರಳಬೇಕಿದೆ.
ಭಾರತವು ವ್ಯಕ್ತಿಯನ್ನು ಕೇವಲ ಹಕ್ಕುಗಳನ್ನು ಅನುಭವಿಸುವ ಯಂತ್ರವನ್ನಾಗಿ ಎಂದಿಗೂ ನೋಡಿಲ್ಲ. ಪ್ರತಿಯೊಬ್ಬ ವ್ಯಕ್ತಿಯೂ ತನ್ನ ಸುತ್ತಲಿನ ಕುಟುಂಬ, ಸಮಾಜ, ಪ್ರಕೃತಿ ಮತ್ತು ಅಂತಿಮವಾಗಿ ರಾಷ್ಟ್ರದ ಬಗೆಗಿನ ಜವಾಬ್ದಾರಿಗಳೊಂದಿಗೆ ಬೆಸೆದುಕೊಂಡಿರುತ್ತಾನೆ. ಇದನ್ನೇ ‘ಸ್ವ’ (ತನ್ನತನ) ಎನ್ನುವುದು.
‘ಸ್ವ’ ಎಂದರೆ ಕೇವಲ ಸ್ವಾರ್ಥವಲ್ಲ. ಅದು ಸ್ವಯಂ ಅರಿವು: ನಾವು ಯಾರು, ಎಲ್ಲಿಂದ ಬಂದಿದ್ದೇವೆ ಮತ್ತು ನಮ್ಮ ಪರಂಪರೆಯಿಂದ ನಮಗೆ ಬಂದಿರುವ ಜವಾಬ್ದಾರಿಗಳೇನು ಎಂಬುದನ್ನು ಅರಿತುಕೊಳ್ಳುವುದು. ಹಾಗೆಯೇ ‘ರಾಷ್ಟ್ರ’ ಎಂದರೆ ಕೇವಲ ಸರ್ಕಾರದಿಂದ ಆಳಲ್ಪಡುವ ಭೂಭಾಗವಲ್ಲ. ಅದು ನಮ್ಮೆಲ್ಲರ ನೆನಪುಗಳು, ಸಂಸ್ಥೆಗಳು, ಕರ್ತವ್ಯಗಳು ಮತ್ತು ಕನಸುಗಳಿಂದ ಜೀವಂತವಾಗಿರುವ ಒಂದು ಬೃಹತ್ ಸಾಂಸ್ಕೃತಿಕ ಕುಟುಂಬ. ಅದಕ್ಕಾಗಿಯೇ ಎಲ್ಲರನ್ನೂ ಒಳಗೊಳ್ಳುವ ಭಾರತೀಯ ಸಂಸ್ಕೃತಿಯ ಪರಿಕಲ್ಪನೆ ಅತ್ಯಂತ ಮಹತ್ವದ್ದಾಗಿದೆ.
ಮಹಾ ಉಪನಿಷತ್ತು ನಮಗೆ ‘ವಸುಧೈವ ಕುಟುಂಬಕಂ’ – ಅಂದರೆ ‘ಇಡೀ ಪ್ರಪಂಚವೇ ಒಂದು ಕುಟುಂಬ’ ಎಂಬ ಶ್ರೇಷ್ಠ ಆದರ್ಶವನ್ನು ನೀಡಿದೆ. ಇದು ಇತರರನ್ನು ಒಪ್ಪಿಕೊಳ್ಳಲು ನಮ್ಮ ಅಸ್ತಿತ್ವವನ್ನು ಅಳಿಸಿಕೊಳ್ಳುವಂತೆ ಹೇಳುವುದಿಲ್ಲ; ಬದಲಾಗಿ, ಇತರರನ್ನೂ ಒಳಗೊಳ್ಳುವಷ್ಟು ನಮ್ಮ ಮನಸ್ಸನ್ನು ವಿಸ್ತರಿಸಿಕೊಳ್ಳಲು ಹೇಳುತ್ತದೆ. ಋಗ್ವೇದದ ‘ಸಂಗಚ್ಛಧ್ವಂ, ಸಂವದಧ್ವಂ’ (ಒಟ್ಟಾಗಿ ಸಾಗೋಣ, ಒಟ್ಟಾಗಿ ಚರ್ಚಿಸೋಣ) ಎಂಬ ಮಂತ್ರವೂ ಇದನ್ನೇ ಸಾರುತ್ತದೆ. ಪರಸ್ಪರ ಸಂವಾದ ಮತ್ತು ಒಗ್ಗಟ್ಟಿನಿಂದ ಮಾತ್ರ ಸಮಾಜವು ಮುನ್ನಡೆಯಲು ಸಾಧ್ಯ. ಆದರೆ ಇಂದಿನ ‘ನಿರಂತರ ಆಕ್ರೋಶದ ರಾಜಕೀಯ’ವು ಅಪಾಯಕಾರಿಯಾಗುತ್ತಿರುವುದು ಇಲ್ಲಿಯೇ.
ಸಮಾಜವನ್ನು ಸದಾ “ನಾವು” ಮತ್ತು “ಅವರು” ಎಂದು ಒಡೆಯುತ್ತಲೇ ಹೋದರೆ, ಒಟ್ಟಾಗಿ ಕೆಲಸ ಮಾಡಲು ಸಾಧ್ಯವೇ ಆಗುವುದಿಲ್ಲ. ಪ್ರತಿಯೊಂದು ಸಂಸ್ಥೆಯನ್ನೂ ಕೇವಲ ಶತ್ರುವಿನಂತೆ ನೋಡಲು ಕಲಿತ ಯುವಪೀಳಿಗೆಯು, ಪ್ರತಿಭಟಿಸುವುದರಲ್ಲಿ ಮುಂದಿರಬಹುದು, ಆದರೆ ದೇಶವನ್ನು ಕಟ್ಟುವಲ್ಲಿ ವಿಫಲವಾಗುತ್ತದೆ. ಕೇವಲ ಪ್ರತಿಭಟಿಸುವುದನ್ನಷ್ಟೇ ತಿಳಿದಿರುವ ಯುವಜನತೆ ಭಾರತಕ್ಕೆ ಬೇಕಿಲ್ಲ; ದೇಶವನ್ನು ಕಟ್ಟಬಲ್ಲ ಯುವಪೀಳಿಗೆ ಭಾರತಕ್ಕೆ ಬೇಕಾಗಿದೆ.
ಆಂದೋಲನದಿಂದ ಜಾಗೃತಿಯೆಡೆಗೆ
ಭಾರತೀಯ ಯುವಕರು ‘ಜಾಗೃತಿ’ ಮತ್ತು ‘ಆಂದೋಲನ’ದ ನಡುವಿನ ವ್ಯತ್ಯಾಸವನ್ನು ಅರಿತುಕೊಳ್ಳಬೇಕು. ಜಾಗೃತಿಯು “ಸತ್ಯ ಯಾವುದು?” ಎಂದು ಹುಡುಕುತ್ತದೆ, ಆದರೆ ಆಂದೋಲನವು “ನಾನು ಯಾರನ್ನು ವಿರೋಧಿಸಬೇಕು?” ಎಂದು ಕೇಳುತ್ತದೆ. ಜಾಗೃತಿಯು “ನಾನು ದೇಶಕ್ಕೆ ಏನು ಕೊಡುಗೆ ನೀಡಬಲ್ಲೆ?” ಎಂದು ಯೋಚಿಸಿದರೆ, ಆಂದೋಲನವು “ನಾನು ಯಾರನ್ನು ದೂಷಿಸಲಿ?” ಎಂದು ಹುಡುಕುತ್ತದೆ. ಜಾಗೃತಿಯು ಸಂಸ್ಥೆಗಳನ್ನು ಕಟ್ಟುತ್ತದೆ; ಆದರೆ ಆಂದೋಲನವು ಪರ್ಯಾಯ ವ್ಯವಸ್ಥೆಯನ್ನು ಸೃಷ್ಟಿಸದೆ ಕೇವಲ ಇರುವ ಸಂಸ್ಥೆಗಳ ಮೇಲಿನ ನಂಬಿಕೆಯನ್ನು ನಾಶಪಡಿಸುತ್ತದೆ.
ಸಾಂವಿಧಾನಿಕ ಹಕ್ಕುಗಳಿಗಾಗಿ ಹೋರಾಡುವುದು ಮತ್ತು ದೇಶದ ಮೇಲಿನ ಜವಾಬ್ದಾರಿ – ಇವೆರಡೂ ಪರಸ್ಪರ ವಿರೋಧಿಗಳಲ್ಲ. ವಾಸ್ತವದಲ್ಲಿ ಅವು ಒಂದಕ್ಕೊಂದು ಪೂರಕವಾಗಿರಬೇಕು. ಭಾರತದ ಯುವಕರು ವ್ಯವಸ್ಥೆಯನ್ನು ಕಟುವಾಗಿ ಪ್ರಶ್ನಿಸುವ ಪ್ರಜೆಗಳಾಗಿರಬೇಕು, ಜೊತೆಗೆ ದೇಶವನ್ನು ಕಟ್ಟುವ ರಚನಾತ್ಮಕ ಪ್ರಜೆಗಳೂ ಆಗಿರಬೇಕು. ಪ್ರಜಾಪ್ರಭುತ್ವದಲ್ಲಿ ಪ್ರತಿಭಟನೆಗಳು ಮತ್ತು ಭಿನ್ನಾಭಿಪ್ರಾಯಗಳು ಇರಲೇಬೇಕು. ಸರ್ಕಾರವನ್ನು ಪ್ರಶ್ನಿಸಬೇಕು, ಸಂಸ್ಥೆಗಳು ಹೊಣೆಗಾರಿಕೆಯಿಂದ ಕೆಲಸ ಮಾಡಬೇಕು. ಪರೀಕ್ಷಾ ವ್ಯವಸ್ಥೆಗಳು ಪಾರದರ್ಶಕವಾಗಿರಬೇಕು. ಯುವಕರು ಉದ್ಯೋಗ, ಅವಕಾಶ ಮತ್ತು ನ್ಯಾಯಕ್ಕಾಗಿ ಆಗ್ರಹಿಸಲೇಬೇಕು.
ಆದರೆ, ಪರೀಕ್ಷಾ ಅಕ್ರಮಗಳಂತಹ ನೈಜ ಸಮಸ್ಯೆಗಳು ಎದುರಾದಾಗ, ಸಂಸ್ಥೆಗಳ ಮೇಲಿನ ನಂಬಿಕೆ ಕುಸಿಯುತ್ತದೆ. ಆಗ ಸೃಷ್ಟಿಯಾಗುವ ಶೂನ್ಯವನ್ನು ಬಾಹ್ಯ ಹಿತಾಸಕ್ತಿಗಳು ತಮ್ಮ ಲಾಭಕ್ಕಾಗಿ ಬಳಸಿಕೊಳ್ಳುತ್ತವೆ. ಸಂಸತ್ತಿನ ಬಳಿ ನಡೆಯುವ ಪ್ರತಿಭಟನೆಯು ಪಾರದರ್ಶಕತೆಯನ್ನು ಕೇಳುವ ಬದಲು, ಸಂಬಂಧವೇ ಇಲ್ಲದ ಸೈದ್ಧಾಂತಿಕ ಅಜೆಂಡಾಗಳನ್ನು ಪ್ರಚಾರ ಮಾಡಲು ಶುರುಮಾಡಿದಾಗ, ನೈಜ ಹೋರಾಟಗಾರರು ಮೂಲೆಗುಂಪಾಗುತ್ತಾರೆ ಮತ್ತು ಹಣದ ಬಲವಿರುವ ಡಿಜಿಟಲ್ ಶಕ್ತಿಗಳು ಮುನ್ನೆಲೆಗೆ ಬರುತ್ತವೆ ಎಂಬುದು ಸ್ಪಷ್ಟವಾಗುತ್ತದೆ. ವ್ಯವಸ್ಥೆಯ ವಿಳಂಬ ನೀತಿ ಮತ್ತು ಪಾರದರ್ಶಕತೆಯ ಕೊರತೆಯೇ ಇಂಥ ರಾಜಕೀಯ ಅವಕಾಶವಾದಿಗಳಿಗೆ ದಾರಿ ಮಾಡಿಕೊಡುತ್ತದೆ.
ಜಾಗೃತ ಯುವಶಕ್ತಿಯ ಸಾಮರ್ಥ್ಯ
ಅಂತಿಮವಾಗಿ, ಯುವಜನರ ಶಕ್ತಿಯನ್ನು ದೀರ್ಘಾವಧಿಯ ಬದಲಾವಣೆಯತ್ತ ಕೊಂಡೊಯ್ಯಬೇಕಾದರೆ, ಅವರನ್ನು ಕೇವಲ ಪ್ರಭಾವಕ್ಕೆ ಒಳಗಾಗುವ ಗುಂಪುಗಳಾಗಿ ನೋಡಬಾರದು. ಬದಲಾಗಿ, ಅವರನ್ನು ಬದಲಾವಣೆಯ ಹರಿಕಾರರು ಎಂದು ಗುರುತಿಸಬೇಕು. ಸಾಂವಿಧಾನಿಕ ಹಕ್ಕುಗಳ ಜೊತೆಗೆ ಮೂಲಭೂತ ಕರ್ತವ್ಯಗಳನ್ನೂ (ಸಂವಿಧಾನದ 51A ವಿಧಿ) ಅಳವಡಿಸಿಕೊಂಡು, ದೃಢವಾದ ಸಂಸ್ಥೆಗಳನ್ನು ಕಟ್ಟುವತ್ತ ಯುವಜನರು ಮುನ್ನಡೆದರೆ, ಆ ಭಿನ್ನಾಭಿಪ್ರಾಯಗಳೇ ರಾಷ್ಟ್ರ ನಿರ್ಮಾಣಕ್ಕೆ ದಾರಿಯಾಗುತ್ತವೆ.
ಇಂದು ಭಾರತದ ಮುಂದಿರುವ ಸವಾಲು ಬಹಳ ದೊಡ್ಡದು. ಡಿಜಿಟಲ್ ಜಗತ್ತಿನಲ್ಲಿ ಎಲ್ಲರೊಂದಿಗೂ ಬೆಸೆದುಕೊಂಡಿರುವ ಇಂದಿನ ಯುವಜನತೆ, ಅಷ್ಟೇ ಪ್ರಬಲವಾದ ‘ವಿವೇಚನಾ ಶಕ್ತಿ’ಯನ್ನೂ ಬೆಳೆಸಿಕೊಳ್ಳಬಲ್ಲದೇ ಎಂಬುದು ಅತಿಮುಖ್ಯ ಪ್ರಶ್ನೆ. ಏಕೆಂದರೆ, ಈ ಡಿಜಿಟಲ್ ಯುಗದಲ್ಲಿ ಅತ್ಯಂತ ಶಕ್ತಿಶಾಲಿ ಅಸ್ತ್ರ ‘ಪ್ರಚಾರ’ ಅಲ್ಲ, ಬದಲಾಗಿ ಜನರ ‘ಗಮನ’ (Attention). ಲಕ್ಷಾಂತರ ಯುವ ಭಾರತೀಯರ ಗಮನವನ್ನು ಸೆಳೆಯುವವರು, ಆ ಯುವಕರ ಭಯ, ನಂಬಿಕೆ ಮತ್ತು ಆಯ್ಕೆಗಳನ್ನು ಸುಲಭವಾಗಿ ನಿಯಂತ್ರಿಸಬಲ್ಲರು. ಆದರೆ, ಇಂತಹ ಕುತಂತ್ರಗಳಿಗೆ ಸಿಗುವ ಅತ್ಯುತ್ತಮ ಉತ್ತರವೆಂದರೆ – ‘ಜಾಗೃತ ನಾಗರಿಕ’.
ಯಾವುದೇ ಸಂದೇಶವನ್ನು ಫಾರ್ವರ್ಡ್ ಮಾಡುವ ಮುನ್ನ ಸತ್ಯಾಸತ್ಯತೆ ಪರಿಶೀಲಿಸುವ, ನಂಬುವ ಮುನ್ನ ಓದಿ ಅರ್ಥಮಾಡಿಕೊಳ್ಳುವ, ಆಡಳಿತ ಮತ್ತು ವಿರೋಧ ಪಕ್ಷಗಳೆರಡನ್ನೂ ಸಮಾನವಾಗಿ ಪ್ರಶ್ನಿಸುವ, ಕೃತಕವಾಗಿ ಸೃಷ್ಟಿಸಿದ ಆಕ್ರೋಶಕ್ಕೆ ಬಲಿಯಾಗದ ಯುವ ಸಮುದಾಯ ನಮಗೆ ಬೇಕಾಗಿದೆ. ದ್ವೇಷವಿಲ್ಲದೆ ಭಿನ್ನಾಭಿಪ್ರಾಯ ವ್ಯಕ್ತಪಡಿಸುವ, ಹಿಂಸೆಯಿಲ್ಲದೆ ಪ್ರತಿಭಟಿಸುವ ಮತ್ತು ದೇಶದ ನ್ಯೂನತೆಗಳನ್ನು ಒಪ್ಪಿಕೊಳ್ಳುತ್ತಲೇ ಅದರ ರಕ್ಷಣೆಗೆ ನಿಲ್ಲುವ ಯುವಕರು ಬೇಕಿದ್ದಾರೆ. ಪ್ರಜಾಪ್ರಭುತ್ವವೆಂದರೆ ಕೇವಲ ಬೇಡಿಕೆಗಳನ್ನು ಇಡುವುದಷ್ಟೇ ಅಲ್ಲ, ದೇಶಕ್ಕೆ ಕೊಡುಗೆ ನೀಡುವ ಜವಾಬ್ದಾರಿಯೂ ಹೌದು ಎಂಬುದನ್ನು ಅವರು ಅರಿತಿರಬೇಕು.
ಇಲ್ಲಿಯೇ ನಮ್ಮ ‘ಸ್ವ’ (ತನ್ನತನ) ಎಂಬುದು ‘ರಾಷ್ಟ್ರ’ವಾಗಿ ಬದಲಾಗುವುದು. ಯುವ ಭಾರತೀಯನು ತನ್ನ ನೈಜ ಶಕ್ತಿ, ಜ್ಞಾನ, ವ್ಯಕ್ತಿತ್ವ ಮತ್ತು ಜವಾಬ್ದಾರಿಯನ್ನು ಕಂಡುಕೊಂಡಾಗ, ಆ ‘ಸ್ವ’ವು ರಾಷ್ಟ್ರದ ಪುನರುತ್ಥಾನದ ಸಾಧನವಾಗುತ್ತದೆ. ಹಾಗಾಗಿ, ಇಂದು ಯುವಕರ ಮುಂದಿರುವ ಆಯ್ಕೆಯು ‘ಮೌನ’ ಮತ್ತು ‘ಪ್ರತಿಭಟನೆ’ಯ ನಡುವಿನದ್ದಲ್ಲ; ಬದಲಿಗೆ, ಕೇವಲ ‘ಗುಂಪಾಗಿ ಸೇರುವುದು’ ಮತ್ತು ‘ನಿಜವಾದ ಜಾಗೃತಿಯನ್ನು ಪಡೆಯುವುದರ’ ನಡುವಿನದ್ದಾಗಿದೆ. ಭಾರತದ ಯುವಜನರು ತಮ್ಮ ಕಣ್ಣುಗಳನ್ನು ತೆರೆಯಬೇಕು – ದೇಶವನ್ನು ಪ್ರಶ್ನಿಸುವುದನ್ನು ನಿಲ್ಲಿಸಲಿಕ್ಕಲ್ಲ; ಬದಲಾಗಿ, ತಮ್ಮ ನೈಜ ಸಮಸ್ಯೆಗಳನ್ನು ಬದಿಗೊತ್ತಿ, ಹೋರಾಟವನ್ನು ತಮ್ಮ ಸ್ವಾರ್ಥಕ್ಕಾಗಿ ಬಳಸಿಕೊಳ್ಳುತ್ತಿರುವವರನ್ನು ಪ್ರಶ್ನಿಸಲಿಕ್ಕಾಗಿ!
ಕೆಲವೇ ಕೆಲವು ಧೈರ್ಯಶಾಲಿ ಮತ್ತು ಸಮರ್ಪಿತ ಯುವಕರು ಇಡೀ ಭಾರತವನ್ನು ಬದಲಾಯಿಸಬಲ್ಲರು ಎಂದು ಸ್ವಾಮಿ ವಿವೇಕಾನಂದರು ಬಲವಾಗಿ ನಂಬಿದ್ದರು. ಆ ನಂಬಿಕೆಯನ್ನು ನಾವಿಂದು ಮರಳಿ ಪಡೆಯಬೇಕಿದೆ. ರಾಜಕೀಯ, ಸೈದ್ಧಾಂತಿಕ ಅಥವಾ ಡಿಜಿಟಲ್ ಅಲ್ಗಾರಿದಮ್ಗಳೇ ಆಗಿರಲಿ – ಯಾರೇ ಸೃಷ್ಟಿಸಿದ ಕೃತಕ ಆಕ್ರೋಶಕ್ಕೂ ಭಾರತದ ಯುವಕರು ಬಲಿಯಾಗಬಾರದು. ಅವರು ಭವ್ಯ ಭಾರತದ ರೂವಾರಿಗಳಾಗಬೇಕು. ಏಳಿ, ಎಚ್ಚರಗೊಳ್ಳಿ, ಯೋಚಿಸಿ, ಪ್ರಶ್ನಿಸಿ, ನಿರ್ಮಿಸಿ. ಭಾರತದ ಯುವಜನತೆಯ ಈ ಅಸಾಧಾರಣ ಶಕ್ತಿ, ಮೊಟ್ಟಮೊದಲನೆಯದಾಗಿ ನಮ್ಮ ಹೆಮ್ಮೆಯ ಭಾರತಕ್ಕೆ ಮೀಸಲಾಗಿರಲಿ.
ವಿಕ್ರಮ ಓದುಗರ ವಾಟ್ಸಪ್ ಬಳಗಕ್ಕೆ ಸೇರಲು ಈ ಸಂಖ್ಯೆಯನ್ನು ನಿಮ್ಮ ಮೊಬೈಲ್ನಲ್ಲಿ ಸೇವ್ ಮಾಡಿಕೊಂಡು ನಮಗೊಂದು ಸಂದೇಶ ಕಳುಹಿಸಿ. ಮೊಬೈಲ್ ಸಂಖ್ಯೆ: 98800 21122
