- ರೋಹಿತ್ ಚಕ್ರತೀರ್ಥ, ಚಿಂತಕರು, ಲೇಖಕರು
ವಿಸ್ತೀರ್ಣದ ಲೆಕ್ಕದಲ್ಲಿ ನೋಡುವುದಾದರೆ ಜಗತ್ತಿನಲ್ಲಿ ಏಳನೇ ದೊಡ್ಡ ದೇಶ ಭಾರತ. ಆದರೆ ಜಗತ್ತಿನ ಬೇರೆಲ್ಲ ದೇಶಗಳಿಗಿಂತ ವಿಚಿತ್ರವಾದ, ವಿಭಿನ್ನವಾದ, ವೈವಿಧ್ಯಮಯವಾದ ಪ್ರಾಕೃತಿಕ ವಿಶೇಷಗಳು ಭಾರತಕ್ಕಿವೆ. ಉತ್ತರದಲ್ಲಿ ಹಬ್ಬಿಕೊಂಡ ಹಿಮಾಲಯ, ಜಗತ್ತಿನ ಅತಿ ಉದ್ದದ ಹಿಮಪರ್ವತ. ಜಗತ್ತಿನ ಅತಿ ಎತ್ತರದ ಪರ್ವತಗಳನ್ನು ಹೆಸರಿಸುವುದಾದರೆ ಹತ್ತರಲ್ಲಿ ಏಳು ಈ ಪರ್ವತಶ್ರೇಣಿಯಲ್ಲೇ ಇವೆ. ಈಶಾನ್ಯದಲ್ಲಿ ಸಮುದ್ರದಂತೆ ಹರಿಯುವ ಬ್ರಹ್ಮಪುತ್ರ, ಪಶ್ಚಿಮದಲ್ಲಿ ಸಾವಿರಾರು ಎಕರೆಗಳಷ್ಟು ವಿಶಾಲವಾಗಿ ಹರಡಿರುವ ಮರಳುಗಾಡು, ಪಶ್ಚಿಮದ ತುದಿಯಲ್ಲಿ ಉಪ್ಪಿನ ಮರುಭೂಮಿ, ದಕ್ಷಿಣದಲ್ಲಿ ಸಮುದ್ರ, ಪೂರ್ವದಲ್ಲಿ ದಟ್ಟ ಕಾಡು ಹಾಗೂ ಆಳವಾದ ಕಣಿವೆಗಳು – ಇಷ್ಟೆಲ್ಲ ಬಗೆಬಗೆಯ ಪ್ರಕೃತಿವಿಸ್ಮಯಗಳನ್ನು ತನ್ನ ಗಡಿಯುದ್ದಕ್ಕೆ ಹರಡಿಕೊಂಡ ಇನ್ನೊಂದು ದೇಶ ಜಗತ್ತಿನಲ್ಲಿಲ್ಲ.
ಭಾರತವು ಒಟ್ಟು 15,106 ಕಿಮೀ ಉದ್ದದ ಗಡಿರೇಖೆಯನ್ನು ಸುತ್ತಲಿನ 7 ದೇಶಗಳ ಜೊತೆ ಹಂಚಿಕೊಂಡಿದೆ. ಪಾಕಿಸ್ತಾನದೊಡನೆ ಜಗಳದಲ್ಲಿರುವ 776 ಕಿಮೀ ಉದ್ದದ ಗಡಿರೇಖೆಯನ್ನು ಲೈನ್ ಆಫ್ ಕಂಟ್ರೋಲ್ (ಎಲ್ಓಸಿ) ಎಂದು ಕರೆಯಲಾಗುತ್ತದೆ. ಜೊತೆಗೆ 3,488 ಕಿಮೀ ಉದ್ದದ ಭಾರತ – ಚೀನಾಗಡಿಯನ್ನು ಲೈನ್ ಆಫ್ ಆಕ್ಚುಯಲ್ ಕಂಟ್ರೋಲ್ (ಎಲ್ಎಸಿ) ಎನ್ನುತ್ತಾರೆ. ಹಾಗೆಯೇ ಸಿಯಾಚಿನ್ ಪ್ರಾಂತ್ಯದಲ್ಲಿ ಭಾರತ – ಪಾಕ್ ಹಂಚಿಕೊಂಡಿರುವ ಗಡಿಗೆ ಆಕ್ಚುಯಲ್ ಗ್ರೌಂಡ್ ಪೊಸಿಷನ್ ಲೈನ್ (ಎಜಿಪಿಎಲ್) ಎಂದು ಹೆಸರು. ಗಡಿಯ ಹೊರತಾಗಿ ಭಾರತಕ್ಕೆ ಗುಜರಾತಿನಿಂದ ಬಂಗಾಳದವರೆಗೆ 5422 ಕಿಮೀ ಉದ್ದದ ಕಡಲ ಕಿನಾರೆ ಇದೆ. ಹಾಗೆಯೇ, ಅಂಡಮಾನ್, ನಿಕೋಬಾರ್, ಲಕ್ಷದ್ವೀಪಗಳಂಥ ದ್ವೀಪಗಳ ಒಟ್ಟು ತೀರಪ್ರದೇಶ 2,094 ಕಿಮೀ ಇದೆ. ಇವೆರಡನ್ನು ಸೇರಿಸಿದರೆ 7,516 ಕಿಮೀ ಉದ್ದದ ಸಮುದ್ರತೀರ ನಮ್ಮದು.
ಆಗಲೇ ಹೇಳಿದಂತೆ ಒಂದೊಂದು ದೇಶದ ಜೊತೆಗೂ ಒಂದೊಂದು ಬಗೆಯ ವೈವಿಧ್ಯಮಯ ಗಡಿಯನ್ನು ಹಂಚಿಕೊಂಡಿರುವ ದೇಶ ನಮ್ಮದು.
1 ಬಾಂಗ್ಲಾದೇಶದ ಜೊತೆ ಇರುವ ಗಡಿಯಲ್ಲಿ ನದಿ ಮುಖಜಭೂಮಿ ಇದೆ. ಬಯಲುಪ್ರದೇಶವಿದೆ. ಹಾಗೆಯೇ ದಟ್ಟಕಾಡುಗಳಿವೆ. ಪಶ್ಚಿಮ ಬಂಗಾಳ, ಅಸ್ಸಾಂ, ತ್ರಿಪುರ, ಮೇಘಾಲಯ ಮತ್ತು ಮಿಝೊರಾಂ ರಾಜ್ಯಗಳು ಬಾಂಗ್ಲಾ ದೇಶದೊಡನೆ ಗಡಿ ಹಂಚಿಕೊಂಡಿವೆ (ಒಟ್ಟು ಗಡಿ ಉದ್ದ: 4,097 ಕಿಮೀ. ಇದು ಜಗತ್ತಿನಲ್ಲಿ ಐದನೆಯ ಅತಿ ಉದ್ದದ ಗಡಿರೇಖೆ ಕೂಡ ಹೌದು. ಮೊದಲ ನಾಲ್ಕು: ಅಮೆರಿಕ-ಕೆನಡ, ರಷ್ಯಾ-ಕಝಕಿಸ್ತಾನ, ಚಿಲಿ-ಅರ್ಜೆಂಟೀನಾ, ಚೀನಾ-ಮಂಗೋಲಿಯ).
2 ಉತ್ತರದ ಹಿಮಾಲಯದ ಆ ಕಡೆ ಚೀನಾ ಆದರೆ ಈ ಕಡೆ ನಾವು. ಚೀನಾದೊಡನೆ ಗಡಿ ಹಂಚಿಕೊಂಡಿರುವ ರಾಜ್ಯ/ಕೇಂದ್ರಾಡಳಿತ ಪ್ರದೇಶಗಳು: ಲಡಾಖ್, ಹಿಮಾಚಲ ಪ್ರದೇಶ, ಉತ್ತರಾಖಂಡ, ಸಿಕ್ಕಿಂ, ಅರುಣಾಚಲ ಪ್ರದೇಶ (3,488 ಕಿಮೀ).
3 ಪಾಕಿಸ್ತಾನದ ಗಡಿಯುದ್ದಕ್ಕೆ ಇರುವುದು ನದಿಗಳು, ಬೆಟ್ಟಗುಡ್ಡಗಳು, ಹಿಮಾಲಯದ ಪರ್ವತಗಳು ಮತ್ತು ಮರುಭೂಮಿ. ಜಮ್ಮು-ಕಾಶ್ಮೀರ, ಪಂಜಾಬ್, ರಾಜಸ್ತಾನ, ಗುಜರಾತ್ – ಇವಿಷ್ಟು ರಾಜ್ಯಗಳು ಪಾಕಿಸ್ತಾನದ ಪಕ್ಕದಲ್ಲಿವೆ.
4 ನೇಪಾಳದ ಜೊತೆ ಉತ್ತರಾಖಂಡ, ಉತ್ತರ ಪ್ರದೇಶ, ಬಿಹಾರ, ಪಶ್ಚಿಮ ಬಂಗಾಳ, ಸಿಕ್ಕಿಮ್ ರಾಜ್ಯಗಳು ಗಡಿ ಹಂಚಿಕೊಂಡಿವೆ (1,751 ಕಿಮೀ).
5 ಅರುಣಾಚಲ ಪ್ರದೇಶ, ನಾಗಾಲ್ಯಾಂಡ್, ಮಣಿಪುರ, ಮಿಝೊರಾಂ ರಾಜ್ಯಗಳು ಮ್ಯಾನ್ಮಾರ್ನ ಪಕ್ಕದಲ್ಲಿವೆ. ಈ ದೇಶದೊಡನೆ ನಮ್ಮ ಗಡಿ ಇರುವುದು ಪರ್ವತಗಳು ಮತ್ತು ದಟ್ಟವಾದ ಅರಣ್ಯಗಳಿರುವ ಜಾಗದಲ್ಲಿ (1,643 ಕಿಮೀ).
6 ಭೂತಾನ್ ಸಣ್ಣ ದೇಶವಾದರೂ ಅದರೊಡನೆ ಅರುಣಾಚಲ ಪ್ರದೇಶ, ಅಸ್ಸಾಂ, ಪಶ್ಚಿಮ ಬಂಗಾಳ, ಸಿಕ್ಕಿಂ – ಈ ನಾಲ್ಕು ರಾಜ್ಯಗಳು ಗಡಿ ಹಂಚಿಕೊಂಡಿವೆ (699 ಕಿಮೀ).
7 ಅಫ್ಘಾನಿಸ್ತಾನದ ಜೊತೆ ನಮ್ಮ ಗಡಿ 106 ಕಿಮೀ ಉದ್ದದ್ದು – ಇದು ಅತಿ ಎತ್ತರದ ಪರ್ವತಶ್ರೇಣಿಗಳ ಸಾಲು ಇರುವ ಜಾಗ; ಸದ್ಯ ಪಿಒಕೆ ನಿಯಂತ್ರಣದಲ್ಲಿದೆ.
ಹೀಗೆ ಹಲವು ವಿಧದ ಪ್ರಾಕೃತಿಕ ವೈವಿಧ್ಯದಿಂದಾಗಿ ನಾವು ಎದುರಿಸಬೇಕಾದ ಸಂಕಷ್ಟಗಳೂ ನೂರಾರು. ಹಿಮಾಲಯದಂಥ ಪರ್ವತಶ್ರೇಣಿಯಲ್ಲಿ ಎತ್ತರ ಮತ್ತು ತಾಪಮಾನ ಎರಡರದೂ ಸಮಸ್ಯೆಯೇ. ಎತ್ತರಕ್ಕೆ ಹೋದಂತೆ ಆಕ್ಸಿಜನ್ ಕೊರತೆ. ಯಾವ ವಸ್ತುಗಳ ಪೂರೈಕೆಯೂ ಕಷ್ಟವೇ. ತಾಪಮಾನ ವರ್ಷದ ಬಹುತೇಕ ಎಲ್ಲ ದಿನಗಳಲ್ಲೂ ಸೊನ್ನೆಗಿಂತ ಕೆಳಗೆ. ಇನ್ನು ಮರುಭೂಮಿಯಲ್ಲಿ ಇದರ ತದ್ವಿರುದ್ಧ ಪರಿಸ್ಥಿತಿ – ಅತಿಯಾದ ತಾಪಮಾನ, ನೀರಿನ ಕೊರತೆ, ಪರ್ವತಗಳಷ್ಟು ಎತ್ತರಕ್ಕೆ ನಿಲ್ಲುವ ಮರಳದಿಬ್ಬಗಳು ಒಂದೇ ದಿನದಲ್ಲಿ ಹತ್ತಾರು ಕಿಲೋಮೀಟರುಗಳಷ್ಟು ಅತ್ತಿತ್ತ ಸರಿದಾಡಬಲ್ಲವು. ಇಂಥ ಪರಿಸರದಲ್ಲಿ ಹೊರಗಿನ ಶತ್ರುಗಳ ಸಂಚಾರ ಸುಲಭ; ಸೈನಿಕರನ್ನು ನಿಲ್ಲಿಸಿ ಶತ್ರುಸಂಚಾರದ ಮೇಲೆ ನಿಗಾ ಇಡುವುದೂ ಕಷ್ಟದ ಕೆಲಸವೇ. ನದಿಗಳು ಸಮುದ್ರವನ್ನು ಸೇರುವ ಭಾಗಗಳಲ್ಲಿರುವ ಗಡಿಪ್ರದೇಶಗಳದ್ದು ಭಿನ್ನ ಸವಾಲು. ಮಳೆಗಾಲದಲ್ಲಿ ಇಲ್ಲಿ ಸಮುದ್ರದ ಆರ್ಭಟ; ರಾತ್ರೋರಾತ್ರಿ ತಮ್ಮ ಹರಿವಿನ ದಿಕ್ಕನ್ನೇ ಬದಲಾಯಿಸಿಕೊಳ್ಳುವ ನದಿಗಳಿಂದಾಗಿ ಇಂಥಲ್ಲಿಯೇ ಗಡಿ ಇದೆ ಎನ್ನುವಂತಿಲ್ಲ. ನದಿಗಳಿರುವ ಕಡೆಗಳಲ್ಲಿ ಗಡಿಬೇಲಿ ಸಾಧ್ಯವಿಲ್ಲ; ನುಸುಳುವಿಕೆಯ ಕೆಲಸ ಇದರಿಂದಾಗಿ ಸಲೀಸು. ಇದೇ ಸಮಸ್ಯೆ ಅತ್ಯಂತ ದಟ್ಟವಾದ ಕಾಡಿನ ಪ್ರದೇಶದಲ್ಲೂ ಇದೆ. ಇಲ್ಲಿ ಬೇಲಿ ಹಾಕಲು ಹೋದರೆ ಕಾಡುಪ್ರಾಣಿಗಳ ಮುಕ್ತಸಂಚಾರಕ್ಕೆ ತಡೆ ಒಡ್ಡಿದಂತೆ. ಬೇಲಿ ಹಾಕದೆ ಸ್ವಚ್ಛಂದ ಸಂಚಾರಕ್ಕೆ ಮುಕ್ತವಾಗಿಟ್ಟರೆ ದೇಶದಿಂದ ದೇಶಕ್ಕೆ ಹಾರುವ ನುಸುಳುಕೋರರು, ಅಕ್ರಮ ವಲಸಿಗರು, ಅಂತಾರಾಷ್ಟ್ರೀಯ ಕಳ್ಳರು – ಎಲ್ಲರಿಗೂ ಪರವಾನಿಗೆ ಕೊಟ್ಟಂತೆ. ಭಾರತಕ್ಕೆ ಸಾವಿರಾರು ಮೈಲಿಗಳುದ್ದದ ಸಮುದ್ರ ಕಿನಾರೆ ಇರುವುದರಿಂದ ಇಲ್ಲಿಯೂ ಬೇರೆ ದೇಶಗಳಿಂದ ಬರುವ ವಲಸಿಗರ ಮೇಲೆ ನಿಗಾ ಇಡುವುದು ಸವಾಲಿನ ಕೆಲಸವೇ.
ಭಾರತ ಸ್ವಾತಂತ್ರ್ಯ ಪಡೆದ ಕ್ಷಣದಲ್ಲೇ ಗಡಿತಂಟೆ ಪ್ರಾರಂಭವಾಗಿತ್ತು. ಇನ್ನೊಂದು ರೀತಿಯಲ್ಲಿ ಹೇಳುವುದಾದರೆ ಗಡಿತಂಟೆಯ ಗರ್ಭವನ್ನು ಹೊತ್ತೇ ಭಾರತವು ಸ್ವತಂತ್ರವಾಯಿತು. ಕೆಲವು ಉದಾಹರಣೆಗಳನ್ನು ನೋಡಿ:
1 ರ್ಯಾಡ್ಕ್ಲಿಫ್ ಎಂಬ ವಕೀಲ – ಭಾರತವನ್ನು ಎಂದೂ ನೋಡಿರದವನು; ಭಾರತದ ನೆಲಕ್ಕೆ ಕಾಲನ್ನೇ ಇಡದಿದ್ದವನು – ಕೇವಲ ಐದು ವಾರಗಳಲ್ಲಿ ಈ ಅಖಂಡ ಭೂಖಂಡವನ್ನು ಇಬ್ಭಾಗ ಮಾಡುವ ರೇಖೆಗಳನ್ನು ಎಳೆದುಹಾಕಿದ. ಭಾರತಕ್ಕೆ ಬರಬೇಕಿದ್ದ ಜಾಗಗಳೆಲ್ಲವೂ ಪಾಕಿಸ್ತಾನಕ್ಕೆ ಹೋಗಿ, ಮುಸ್ಲಿಂ ಬಾಹುಳ್ಯವಿದ್ದ ಜಾಗಗಳು ಭಾರತಕ್ಕೆ ಸಿಕ್ಕಿ – ಸ್ವಾತಂತ್ರ್ಯ ಸಿಗುವ ಕ್ಷಣದಲ್ಲಿಯೇ ಇಲ್ಲಿ ನೆತ್ತರೋಕುಳಿ ಹರಿಯುವುದಕ್ಕೆ ಕಾರಣವಾಯಿತು. ಜಗತ್ತಿನ ಇತಿಹಾಸದಲ್ಲಿ ಆಗಿಹೋದ ಮಹಾ ಮಾರಣಹೋಮಗಳ ಪೈಕಿ ಭಾರತದಲ್ಲಿ 1947ರಲ್ಲಿ ನಡೆದ ರಕ್ತಪಾತವೂ ಒಂದು. ಅಂದಿನಿಂದಲೂ ಭಾರತವು ಗಡಿಯ ವಿಷಯದಲ್ಲಿ ಒಂದಲ್ಲ ಒಂದು ಯುದ್ಧವನ್ನು ನೋಡಬೇಕಾಗಿ ಬಂದಿದೆ. 1947-48ರಲ್ಲಿ ನಡೆದ ಭಾರತ-ಪಾಕಿಸ್ತಾನ ಯುದ್ಧದಲ್ಲಿ ಜಮ್ಮು-ಕಾಶ್ಮೀರದ ಶೇ.37 ಭಾಗ ಪಾಕಿಸ್ತಾನದ ವಶಕ್ಕೆ ಬಂತು; ಲೈನ್ ಆಫ್ ಕಂಟ್ರೋಲ್ ನಿರ್ಮಾಣವಾಯಿತು. ಪಾಕಿಸ್ತಾನದ ಕೈಗೆ ಹೋದ ಆ ಭಾಗವನ್ನು ಅಂದಿನಿಂದ ಇಂದಿನವರೆಗೂ ‘ಪಾಕ್ ಆಕ್ರಮಿತ ಪ್ರದೇಶ’ ಎಂದು ಭಾರತ ಕರೆಯುತ್ತಿದೆ; ಆದರೆ ಅದರ ಸ್ವಲ್ಪ ಭಾಗವನ್ನೂ ಮರಳಿಪಡೆಯಲು ನಮಗೆ ಸಾಧ್ಯವಾಗಿಲ್ಲ ಎಂಬುದು ದುರಂತ.
2 1962ರಲ್ಲಿ ನಡೆದ ಭಾರತ-ಚೀನಾ ಯುದ್ಧದಲ್ಲಿ ನಾವು 38,000 ಚದರ ಕಿಮೀ ವಿಸ್ತೀರ್ಣದ (ಸ್ವಿಟ್ಜರ್ಲ್ಯಾಂಡಿನ ವಿಸ್ತೀರ್ಣಕ್ಕೆ ಸಮ) ಅಕ್ಸಾಯ್ ಚಿನ್ ಪ್ರದೇಶವನ್ನು ಸಂಪೂರ್ಣವಾಗಿ ಕಳೆದುಕೊಂಡೆವು. ಅಂದಿನಿಂದ ಇಂದಿನವರೆಗೂ ಅದು ಚೀನಾದ ಭಾಗವಾಗಿಯೇ ಇದೆ. ಚೀನಾವು ಭಾರತದ ಜೊತೆಗಿನ ತನ್ನ ಗಡಿರೇಖೆಯನ್ನು ಮೂರು ಭಾಗಗಳಾಗಿ ವಿಭಾಗಿಸಿಕೊಂಡಿದೆ: ಪಶ್ಚಿಮ (ಅಕ್ಸಾಯ್ ಚಿನ್/ಲಡಾಖ್), ಮಧ್ಯ (ಹಿಮಾಚಲ ಪ್ರದೇಶ, ಉತ್ತರಾಖಂಡ), ಪೂರ್ವ (ಅರುಣಾಚಲ ಪ್ರದೇಶ). ಈ ಮೂರೂ ಭಾಗಗಳಲ್ಲೂ ನಮ್ಮ ಜೊತೆಗೆ ಚೀನಾದ ತಕರಾರು ಇದೆ. ಜಮ್ಮು-ಕಾಶ್ಮೀರವನ್ನು ಎರಡು ಪ್ರಾಂತ್ಯಗಳಾಗಿ ವಿಂಗಡಿಸಿ ಕೇಂದ್ರಾಡಳಿತ ಪ್ರದೇಶಗಳನ್ನಾಗಿ ಮಾಡಿದ್ದರ ಬಗ್ಗೆ ಚೀನಾದ ತಕರಾರು ಇದೆ! ಅರುಣಾಚಲವನ್ನು ಪ್ರತಿ ಸಲವೂ ತನ್ನ ರಾಷ್ಟ್ರನಕ್ಷೆಯ ಒಳಗೆ ಹಾಕಿಕೊಂಡು, ಅದನ್ನು ದಕ್ಷಿಣ ಟಿಬೆಟ್ ಎಂದು ಕರೆಯುತ್ತ ಅಲ್ಲಿಯೂ ತನ್ನ ತಗಾದೆಯನ್ನು ಜೀವಂತವಾಗಿಟ್ಟಿದೆ. ನೇಪಾಳ ಮತ್ತು ಪಾಕಿಸ್ತಾನಗಳನ್ನು ಭಾರತದ ವಿರುದ್ಧ ಎತ್ತಿಕಟ್ಟುವ ಕೆಲಸವನ್ನು ಈ ದೇಶ ಲಾಗಾಯ್ತಿನಿಂದ ಮಾಡಿಕೊಂಡು ಬಂದಿದೆ.
3 ಗಡಿತಂಟೆಯು ಉಲ್ಬಣಾವಸ್ಥೆಗೆ ಹೋದಾಗ 1971ರಲ್ಲಿ ಬಾಂಗ್ಲಾ ವಿಮೋಚನ ಸಮರವನ್ನು ಭಾರತದ ನೇತೃತ್ವದಲ್ಲಿ ನಡೆಸಬೇಕಾಯಿತು ಮತ್ತು ಇದು ಬಾಂಗ್ಲಾದೇಶವೆಂಬ ಹೊಸ ರಾಷ್ಟ್ರದ ಉದಯಕ್ಕೆ ಕಾರಣವಾಯಿತು.
4 1984ರಲ್ಲಿ ಸಿಯಾಚಿನ್ಗಾಗಿ ನಡೆದ ಜಗಳದಲ್ಲಿ ಭಾರತ ಗೆದ್ದದ್ದೇನೋ ನಿಜ, ಆದರೆ ಅದನ್ನು ಉಳಿಸಿಕೊಳ್ಳಲು ಅಂದಿನಿಂದ ಇಂದಿನವರೆಗೆ ಸಾವಿರಾರು ಯೋಧರ ಬಲಿದಾನವನ್ನೂ ನಾವು ನೋಡಬೇಕಾಗಿದೆ. 15ರಿಂದ 22 ಸಾವಿರ ಅಡಿ ಎತ್ತರದಲ್ಲಿರುವ ಈ ಜಾಗ – ಜಗತ್ತಿನ ಅತಿ ಎತ್ತರದ ರಣಭೂಮಿಯೂ ಹೌದು. ಹೆಚ್ಚಾಗಿ -30, -40ರ ತಾಪಮಾನವೇ ಇರುವ ಈ ಜಾಗದಲ್ಲಿ – ಇದನ್ನು ನಮ್ಮ ದೇಶಕ್ಕಾಗಿ ಉಳಿಸಿಕೊಳ್ಳಲು ಇದುವರೆಗೆ 2000ದಷ್ಟು ಸೈನಿಕರು ಬಲಿದಾನ ಮಾಡಿದ್ದಾರೆ – ಯುದ್ಧದಿಂದಲ್ಲ; ಶೈತ್ಯದಿಂದ.
5 ಭಾರತವನ್ನು ನೆಮ್ಮದಿಯಾಗಿರಲು ಬಿಡಬಾರದು ಎಂಬುದು ಪಾಕ್ ಸಿದ್ಧಾಂತ. ಇದನ್ನು ‘100 ಕಡಿತಗಳು’ (100 ಕಟ್ಸ್) ತಂತ್ರ ಎಂದೂ ಕರೆಯಲಾಗುತ್ತದೆ. ಅಂದರೆ ಭಾರತವು ಒಂದಿಲ್ಲೊಂದು ಸಮಸ್ಯೆಗೆ ಈಡಾಗುತ್ತ, ತನ್ನ ಸಮಸ್ಯೆಗಳಿಂದ ಪೂರ್ಣವಾಗಿ ಹೊರಬರಲು ಸಾಧ್ಯವೇ ಆಗದಂತೆ ಒದ್ದಾಡುತ್ತ ಇರಬೇಕು. ನಮ್ಮ ಗುರಿ ಗೆಲ್ಲುವುದಲ್ಲ, ಆದರೆ ಭಾರತವನ್ನು ಕಂಗೆಡಿಸುತ್ತ ಇರುವುದು – ಎಂಬುದು ಪಾಕ್ನ ರಣತಂತ್ರ. ಕಾಲು ಕೆರೆದು ಜಗಳವಾಡುವ ಪ್ರವೃತ್ತಿಯ ಪಾಕಿಸ್ತಾನದ ಯುದ್ಧಪಿಪಾಸುತನದಿಂದಾಗಿ 1999ರಲ್ಲಿ ಕಾರ್ಗಿಲ್ ಯುದ್ಧ ನಡೆಯಿತು ಮತ್ತು ಇದರಲ್ಲಿ ಭಾರತ ಐನೂರು ಯೋಧರನ್ನು ಕಳೆದುಕೊಳ್ಳಬೇಕಾಯಿತು.
2017ರಲ್ಲಿ ಭಾರತ-ಚೀನಾ ನಡುವೆ ನಡೆದ ದೋಕ್ಲಮ್ ಘರ್ಷಣೆ, 2020ರಲ್ಲಿ ಗಲ್ವಾನ್ ಕಣಿವೆಯಲ್ಲಿ ನಡೆದ ಭಾರತೀಯ ಯೋಧರ ಬರ್ಬರ ಹತ್ಯೆಗಳು, 2025ರ ಮೇ ತಿಂಗಳಿನಲ್ಲಿ ನಡೆದ ಆಪರೇಶನ್ ಸಿಂದೂರ – ಇವೆಲ್ಲವೂ ನಡೆದಿರುವುದು ಗಡಿಸಮಸ್ಯೆಯಿಂದಾಗಿಯೇ. 1947ರಿಂದ ಇಂದಿನವರೆಗೆ ನಾವು ನಾಲ್ಕು ಪೂರ್ಣಪ್ರಮಾಣದ ಯುದ್ಧಗಳನ್ನೇ ಗಡಿಸಮಸ್ಯೆಯ ಕಾರಣಕ್ಕೆ ಮಾಡಬೇಕಾಗಿ ಬಂದಿದೆ ಎಂಬುದನ್ನು ಅರ್ಥೈಸಿಕೊಂಡರೆ ಭಾರತಕ್ಕೆ ಗಡಿಸಮಸ್ಯೆಯು ಎಂಥ ಜ್ವಲಂತ ತಲೆನೋವು ಎಂಬುದು ಅರ್ಥವಾದೀತು.
ಹಿಂದೆ ಹೇಗಿತ್ತು?
ಭಾರತವು ತನ್ನ ಗಡಿರಕ್ಷಣೆಯನ್ನು ಹೇಗೆ ಮಾಡಿಕೊಳ್ಳುತ್ತಿದೆ ಎಂಬುದನ್ನು ಅರ್ಥ ಮಾಡಿಕೊಳ್ಳುವ ಮೊದಲು ಈ ಹಿಂದಿನ ಸರ್ಕಾರಗಳು ಆ ಸಮಸ್ಯೆಯನ್ನು ಹೇಗೆ ನಿಭಾಯಿಸಿವೆ ಎಂಬುದನ್ನು ಗಮನಿಸಬೇಕು. ಪಾಕಿಸ್ತಾನ ಮತ್ತು ಚೀನಾ ಜೊತೆಗೆ ಗಡಿಸಂಬಂಧಗಳನ್ನು ಹಾಳುಮಾಡಿಕೊಂಡ ಮೊದಲ ವ್ಯಕ್ತಿ ನೆಹರೂ. ಪಾಕಿಸ್ತಾನದ ಜೊತೆ ಕಾಶ್ಮೀರದ ಸಮಸ್ಯೆಯನ್ನು ಇವರು ಹೇಗೆ ಕಗ್ಗಂಟು ಮಾಡಿಕೊಂಡರು ಎಂಬುದು ಎಲ್ಲರಿಗೂ ಗೊತ್ತಿರುವ ವಿಷಯ. ಅದೇ ರೀತಿ ಚೀನಾ ಭಾರತದ ಮೇಲೆ ಏರಿಬಂದಾಗ ಇವರಿನ್ನೂ ಹಿಂದೀ ಚೀನೀ ಭಾಯಿಭಾಯಿ ಎನ್ನುವ ಯುಗಳಗೀತೆ ಹಾಡುತ್ತಿದ್ದರು. ಅಕ್ಸಾಯ್ ಚಿನ್ ಎಂಬ – ಒಂದು ದೇಶದಷ್ಟು ವಿಸ್ತೀರ್ಣದ ಜಾಗವನ್ನು ತಟ್ಟೆಯಲ್ಲಿಟ್ಟು ಚೀನಾ ದೇಶಕ್ಕೆ ಕೊಟ್ಟರು. ಈ ಯುದ್ಧ ಅಂತಾರಾಷ್ಟ್ರೀಯ ಮಟ್ಟದಲ್ಲಿ ಭಾರತದ ಮಾನವನ್ನು ಮೂರಾಬಟ್ಟೆ ಮಾಡಿತು. ಚೀನಾದ ಗಡಿಯಗುಂಟ ಇರುವ ಯಾವ ಪ್ರದೇಶವನ್ನೂ ಅಭಿವೃದ್ಧಿಪಡಿಸಬಾರದು. ಅವು ತೀರಾ ಹಿಂದುಳಿದಿರಬೇಕು. ಅಲ್ಲಿ ರಸ್ತೆಸೌಕರ್ಯವನ್ನೂ ಮಾಡಬಾರದು – ಎಂಬುದು ನೆಹರೂ ನೀತಿಯಾಗಿತ್ತು. ಹೀಗೆ ಗಡಿಯುದ್ದಕ್ಕೆ ಯಾವ ಪ್ರದೇಶವನ್ನೂ ಅಭಿವೃದ್ಧಿ ಮಾಡದೆ ಇರುವುದು ಅತ್ಯಂತ ಜಾಣ್ಮೆಯ ಗಡಿರಕ್ಷಣಾತಂತ್ರ ಎಂದು ಆ ಕಾಲದಲ್ಲಿ ಭಾರತದಲ್ಲಿ ಹಾಡಿಹೊಗಳಲಾಗುತ್ತಿತ್ತು. ಇದನ್ನು ಅತ್ಯಂತ ಯಶಸ್ವೀ ತಂತ್ರವೆಂದು ಮಕ್ಕಳು ಓದುವ ಪಠ್ಯಪುಸ್ತಕಗಳಲ್ಲೂ ಬರೆಯಲಾಗಿತ್ತು! ನೆಹರೂ ನಿಧನರಾಗುವ ತನಕವೂ ಭಾರತದಲ್ಲಿ ಗಡಿರಕ್ಷಣಾದಳ (ಬಾರ್ಡರ್ ಸೆಕ್ಯುರಿಟಿ ಫೋರ್ಸ್ – ಸಂಕ್ಷಿಪ್ತವಾಗಿ ಬಿಎಸ್ಎಫ್) ಇರಲಿಲ್ಲ! ಅದು ಜನ್ಮತಳೆದದ್ದು ಲಾಲ್ ಬಹದ್ದೂರ್ ಶಾಸ್ತ್ರಿಯವರ ಕಾಲದಲ್ಲಿ – 1965ರಲ್ಲಿ. ಭಾರತಕ್ಕೆ ತಾಗಿಕೊಂಡಿರುವ ದೇಶಗಳಿಂದ ಸೃಷ್ಟಿಯಾಗುವ ಗಡಿತಂಟೆಗಳನ್ನು ಆಯಾ ಗಡಿಗಳಿಗೆ ಅಂಟಿಕೊಂಡಿರುವ ರಾಜ್ಯಗಳ ಪೊಲೀಸರೇ ನಿಭಾಯಿಸಬೇಕು ಎಂಬುದು ನೆಹರೂ ನೀತಿಯಾಗಿತ್ತು!.
ನೆಹರೂ ಮಗಳು ಇಂದಿರಾ ಗಾಂಧಿಯ ಕಾಲದಲ್ಲಿ ಬಾಂಗ್ಲಾ ವಿಮೋಚನ ಸಮರ ನಡೆಯಿತು; 93000 ಪಾಕ್ ಸೈನಿಕರು ಭಾರತ ಸೇನೆಯ ವಶದಲ್ಲಿದ್ದರು. ಇವರನ್ನು ಬಿಡುಗಡೆ ಮಾಡಬೇಕಾದರೆ ಕಾಶ್ಮೀರದ ಯೋಚನೆಯನ್ನು ಶಾಶ್ವತವಾಗಿ ಬಿಟ್ಟುಬಿಡಬೇಕು ಎಂದು ಪಾಕಿಸ್ತಾನದ ಕತ್ತುಪಟ್ಟಿ ಹಿಡಿದುಕೇಳುವ ಸುವರ್ಣ ಅವಕಾಶವೊಂದು ಆಗ ಒದಗಿಬಂದಿತ್ತು. ಆದರೆ ಅಷ್ಟೂ ಸೈನಿಕರನ್ನು ಪಾಕಿಸ್ತಾನಕ್ಕೆ ಬೇಷರತ್ತಾಗಿ ಕೊಟ್ಟುಕಳಿಸಿದ ಇಂದಿರಾ, ಕೈಗೆ ಬಂದ ತುತ್ತನ್ನು ಬಾಯಿಗಿಡದೆ ಚೆಲ್ಲಿಬಿಟ್ಟರು. 1971ರಲ್ಲಿ ಪಾಕಿಸ್ತಾನವನ್ನು ಹೆಡೆಮುರಿಕಟ್ಟಿ ಕೂರಿಸಿದ್ದರೆ 1999ರ ಕಾರ್ಗಿಲ್ ಕದನ ನಡೆಯುವುದಕ್ಕೆ ಅವಕಾಶವೇ ಇರಲಿಲ್ಲ. 2001ರ ಆಗ್ರಾ ಶೃಂಗದಲ್ಲಿ ನಾವು ಮತ್ತೆ ಪಾಕಿಸ್ತಾನದ ಜನರಲ್ ಪರ್ವೇಜ್ ಮುಷರಫನನ್ನು ಕೈಕಾಲು ಹಿಡಿದು ಬೇಡಿಕೊಳ್ಳುವಂಥ ದೈನೇಸಿತನಕ್ಕೆ ಇಳಿಯಬೇಕಿರಲಿಲ್ಲ. 2008ರಲ್ಲಿ ಪಾಕಿಸ್ತಾನದ ಲಷ್ಕರೆ ತೈಬಾ ಉಗ್ರಗಾಮಿ ಕಸಬ್ 166 ನಾಗರಿಕರನ್ನು ಮುಂಬೈ ನಗರದಲ್ಲಿ ಕೊಂದುಹಾಕಿದ. ಇದಾದ ಮೇಲೆ ಕಾಂಗ್ರೆಸ್ ನೇತೃತ್ವದ ಯುಪಿಎ ಸರ್ಕಾರ ಎಚ್ಚೆತ್ತುಕೊಂಡಂತೆ ನಟಿಸಿ ಒಂದಷ್ಟು ಕ್ರಮಗಳನ್ನು ಕೈಗೊಳ್ಳಲು ಮುಂದಾಯಿತು. ಅತ್ತ ಚೀನಾ ಮೇಲಿಂದ ಮೇಲೆ ಗಡಿಗಲಾಟೆ ಮಾಡುತ್ತಿದ್ದುದರಿಂದ ಅಲ್ಲಿಗೆ ಸೈನಿಕರನ್ನು ತಕ್ಷಣ ಸಾಗಿಸಲು ಅನುಕೂಲವಾಗುವಂತೆ ರಸ್ತೆಗಳನ್ನು ನಿರ್ಮಿಸಲು ಮನಮೋಹನ ಸಿಂಗ್ ರ ಸರ್ಕಾರ ಮುಂದಾಯಿತು. ರಸ್ತೆನಿರ್ಮಾಣಕ್ಕೆ ಮೀಸಲಿಟ್ಟದ್ದ ದುಡ್ಡಿನ ಶೇ.98 ಖರ್ಚಾಯಿತು; ಸಿದ್ಧವಾದದ್ದು ಮಾತ್ರ ಯೋಜಿಸಿದ್ದರಲ್ಲಿ ಶೇ.30 ರಸ್ತೆಗಳು ಮಾತ್ರ! 2016ರ ಸಿಎಜಿ ವರದಿಯಲ್ಲಿ, ಈ ರಸ್ತೆಗಳು ತೀರಾ ಕಳಪೆಯಾಗಿರುವುದಾಗಿಯೂ ಅಗತ್ಯವಾಗಿದ್ದ ಯಾವ ನೀತಿನಿಯಮಾವಳಿಗಳನ್ನೂ ಅನುಸರಿಸಿಲ್ಲವೆಂದೂ ಹೇಳಲಾಗಿದೆ. ಇದು ಈ ದೇಶವನ್ನು ಏಳು ದಶಕಗಳ ಕಾಲ ಆಳಿದ ಕಾಂಗ್ರೆಸ್ ಸರ್ಕಾರಗಳು ಗಡಿರಕ್ಷಣೆಗೆ ಕೊಡುತ್ತಿದ್ದ ಮಹತ್ವ ಮತ್ತು ಗೌರವ.
ಈಗ ಹೇಗಿದೆ?
ಗಡಿರೇಖೆಯುದ್ದಕ್ಕೆ ಇರುವ ಹಳ್ಳಿಗಳನ್ನು ಕತ್ತಲಲ್ಲಿಡುವುದು ರಕ್ಷಣಾತಂತ್ರವಲ್ಲ; ಅದು ಆತ್ಮಹತ್ಯಾಕಾರಕ. ಗಡಿರೇಖೆಯಲ್ಲಿರುವ ಎಲ್ಲ ಹಳ್ಳಿಗಳನ್ನೂ ಅಭಿವೃದ್ಧಿಪಡಿಸಬೇಕು ಎಂಬುದು ಮೋದಿಸರ್ಕಾರದ ನಿಲುವು. 2014ರಿಂದ ಭಾರತದ ಅಷ್ಟೂ ಗಡಿರೇಖೆಯ ಹಳ್ಳಿಗಳ ದೆಸೆ ಈ ಕಾರಣದಿಂದ ಬದಲಾಯಿಸಿದೆ. ಗಡಿರಸ್ತೆ ನಿಗಮ (ಬಾರ್ಡರ್ ರೋಡ್ಸ್ ಆರ್ಗನೈಸೇಶನ್ – ಸಂಕ್ಷಿಪ್ತವಾಗಿ ಬ್ರೋ) – 2014ರವರೆಗೆ ನಿರ್ಮಿಸಿದ್ದ ರಸ್ತೆಗಳ ಸಂಖ್ಯೆ 22 (ಯೋಜನೆ ಹಾಕಿದ್ದು 73). 2014-15ರಲ್ಲಿ – ಅಂದರೆ ಎನ್ಡಿಎ ಸರ್ಕಾರವು ಅಧಿಕಾರ ಪದಗ್ರಹಣ ಮಾಡಿದ ಮೊದಲ ವರ್ಷದಲ್ಲಿ ಬ್ರೋ ನಿರ್ಮಿಸಿದ ರಸ್ತೆಗಳ ಸಂಖ್ಯೆ 600. 2017-18ರಲ್ಲಿ: 612. 2020-21ರಲ್ಲಿ 941 (ಗಮನಿಸಿ: ಇದು ಕೊವಿಡ್ ವರ್ಷ!). 2021-22ರಲ್ಲಿ 742. 2014ರಲ್ಲಿ ಅಜಮಾಸು 3000 ಕೋಟಿ ರುಪಾಯಿ ಇದ್ದ ಬ್ರೋ ವಾರ್ಷಿಕ ಬಜೆಟ್ 2025ರ ಹೊತ್ತಿಗೆ 17,900 ಕೋಟಿ ರುಪಾಯಿಗಳಾಗಿತ್ತು. 2023ರಿಂದ 25ರವರೆಗಿನ ಮೂರು ವರ್ಷಗಳಲ್ಲಿ ಬ್ರೋ ಪರಿಪೂರ್ಣಗೊಳಿಸಿದ ಬೃಹತ್ ಯೋಜನೆಗಳ ಸಂಖ್ಯೆ ಕ್ರಮವಾಗಿ 125, 111 ಹಾಗೂ 250. 2020ರಿಂದ 25ರವರೆಗಿನ ಐದು ವರ್ಷಗಳಲ್ಲಿ ಬ್ರೋ ಸುಮಾರು 16,000 ಕೋಟಿ ರುಪಾಯಿಗಳ ಒಟ್ಟು 450 ಯೋಜನೆಗಳನ್ನು ಕೈಗೆತ್ತಿಕೊಂಡು ಮುಗಿಸಿದೆ. 2024ರಲ್ಲಿ ಅರುಣಾಚಲ ಪ್ರದೇಶದಲ್ಲಿ 13,000 ಅಡಿ ಎತ್ತರದಲ್ಲಿ ನಿರ್ಮಾಣವಾದ ಸೇಲಾ ಸುರಂಗವನ್ನು ಪ್ರಧಾನಿ ಮೋದಿ ಉದ್ಘಾಟಿಸಿದರು. ಇದು ಭಾರತದ ಬೇರೆ ಪ್ರದೇಶಗಳನ್ನು ಅರುಣಾಚಲದ ತವಾಂಗ್ಗೆ ವರ್ಷಪೂರ್ತಿ ಸಂಪರ್ಕ ಕಲ್ಪಿಸುತ್ತದೆ (ತವಾಂಗ್ ಈ ಪ್ರಾಂತ್ಯದ ಅತಿ ಪ್ರಮುಖ ಸ್ಥಳ. 1962ರಲ್ಲಿ ಭಾರತದ ಮೇಲೆ ಯುದ್ಧ ಸಾರಿದ್ದಾಗ ಚೀನಾ ಮೊದಲು ವಶಪಡಿಸಿಕೊಂಡದ್ದೇ ತವಾಂಗ್ ಅನ್ನು. ಸುರಂಗ ನಿರ್ಮಾಣ ಆಗುವವರೆಗೂ ತವಾಂಗ್ ವರ್ಷದಲ್ಲಿ ಐದು ತಿಂಗಳು (ಚಳಿಗಾಲದಲ್ಲಿ) ಭಾರತದ ಉಳಿದ ಪ್ರದೇಶಗಳ ಜೊತೆ ಸಂಪರ್ಕ ಕಳೆದುಕೊಳ್ಳುತ್ತಿತ್ತು.
2020ರ ಅಕ್ಟೋಬರ್ 3ರಂದು ವಿಶ್ವದ ಅತ್ಯಂತ ಉದ್ದದ ಸುರಂಗ ಹೈವೇ ಮಾರ್ಗವನ್ನು ಪ್ರಧಾನಿ ನರೇಂದ್ರ ಮೋದಿ ದೇಶಕ್ಕೆ ಸಮರ್ಪಿಸಿದರು. ಅದರ ಉದ್ದ: 9.02 ಕಿಮೀ; ಸಮುದ್ರಮಟ್ಟದಿಂದ ಅದು ಇರುವ ಎತ್ತರ 10,000 ಅಡಿಗಳು. ಮೊದಲೆಲ್ಲ ಲೇಹ್ ಮತ್ತು ಮನಾಲಿಯ ನಡುವಿನ ರಸ್ತೆ ವರ್ಷದಲ್ಲಿ ಆರು ತಿಂಗಳು ಚಳಿಗಾಲದಲ್ಲಿ ಮುಚ್ಚಿರುತ್ತಿದ್ದರೆ ಈಗ ಈ ‘ಅಟಲ್ ಟನಲ್’ ಮೂಲಕ ಅವು ವರ್ಷದುದ್ದಕ್ಕೂ ಸಂಪರ್ಕದಲ್ಲಿರಬಹುದಾಗಿದೆ. ತುರ್ತು ಪರಿಸ್ಥಿತಿಯಲ್ಲಿ ದೇಶದ ಯಾವುದೇ ಭಾಗದಿಂದ ಕಾಶ್ಮೀರದ ಉತ್ತರ ಭಾಗಕ್ಕೆ ಸೇನೆಯು ಸಂಪರ್ಕ ಬೆಳೆಸುವಂತಿರಬೇಕು ಎಂಬುದೇ ಇಲ್ಲಿನ ಆಶಯ. ಅದೇ ರೀತಿ ಲಡಾಖ್ನ ಎರಡು ಭಾಗಗಳನ್ನು ಪರಸ್ಪರ ಜೋಡಿಸುವ ಉಮ್ಲಿಂಗ್ಲಾ ಪಾಸ್ 2021ರಲ್ಲಿ ಲೋಕಾರ್ಪಣೆಯಾಗಿದೆ. ಸಮುದ್ರಮಟ್ಟದಿಂದ 19,024 ಅಡಿಗಳಷ್ಟು ಎತ್ತರದಲ್ಲಿರುವ ಇದು ಜಗತ್ತಿನಲ್ಲೇ ಅತಿ ಎತ್ತರದ ಹೈವೇ ಮಾರ್ಗ ಎಂಬ ಗಿನ್ನೆಸ್ ದಾಖಲೆಯನ್ನೂ ಬರೆದಿದೆ. ಲಡಾಖ್ನಲ್ಲಿ ಸೇನಾವಿಮಾನಗಳು ಇಳಿಯಲು ಅನುಕೂಲ ಮಾಡುವ ನ್ಯೋಮಾ ಲ್ಯಾಂಡಿಂಗ್ ಗ್ರೌಂಡ್ ಇದೀಗ ನಿರ್ಮಾಣವಾಗುತ್ತಿದೆ. ಜಗತ್ತಿನ ಅತಿ ಎತ್ತರದ ಸರ್ವಋತು ಸುರಂಗ ಮಾರ್ಗ (ಸಮುದ್ರಮಟ್ಟದಿಂದ 15,800 ಅಡಿ ಎತ್ತರ) – ಶಿಂಖುನ್ ಲಾ ಟನಲ್ – ಕೂಡ ನಿರ್ಮಾಣವಾಗುತ್ತಿದ್ದು ಇದು ಮನಾಲಿಯನ್ನು ಲೇಹ್ ಜೊತೆ ಜೋಡಿಸಲಿದ್ದು ಸೇನಾಕಾರ್ಯಾಚರಣೆಗಳಿಗೆ ಅನುಕೂಲವಾಗಲಿದೆ. ಹಾಗೆಯೇ ಅಕ್ಸಾಯ್ ಚಿನ್ ಬಳಿ ಸೇನಾತುಕಡಿಗಳನ್ನು ಶೀಘ್ರಸೂಚನೆಯ ಮೇರೆಗೆ ಇಳಿಸಲು ಅನುಕೂಲವಾಗುವಂತೆ ಡರ್ಬುಕ್-ಶ್ಯೋಕ್-ಡಿಬಿಓ ರಸ್ತೆಯೂ ನಿರ್ಮಾಣವಾಗುತ್ತಿದೆ.
ಎಲ್ಲೆಲ್ಲಿ ರಸ್ತೆ/ಸುರಂಗ ನಿರ್ಮಾಣ ಅಸಾಧ್ಯವೋ ಅಲ್ಲಿ ಭಾರತವು ಸಿಐಬಿಎಮ್ಎಸ್ (ಕಾಂಪ್ರೆಹೆನ್ಸಿವ್ ಇಂಟಿಗ್ರೇಟೆಡ್ ಬಾರ್ಡರ್ ಮ್ಯಾನೇಜ್ಮೆಂಟ್ ಸಿಸ್ಟಮ್) ಎಂಬುದನ್ನು ಅಳವಡಿಸುತ್ತಿದೆ. ಇದೊಂದು ಹಲವು ಹಂತಗಳ, ಹಲವು ಉಪಕರಣಗಳ ಸಹಾಯ ಪಡೆದ ನಿಗಾ ವ್ಯವಸ್ಥೆಯಾಗಿದ್ದು ಇದರಲ್ಲಿ ಸದ್ಯಕ್ಕೆ ಐದು ಹಂತಗಳಿವೆ. ಮೊದಲ ಹಂತ 2018-19ರಲ್ಲಿ ಪೂರ್ಣಗೊಂಡಿದ್ದು ಇದು ಜಮ್ಮು (ಭಾರತ-ಪಾಕ್ ಗಡಿ) ಹಾಗೂ ಅಸ್ಸಾಂಗಳಲ್ಲಿ (ಭಾರತ-ಬಾಂಗ್ಲಾದೇಶ ಗಡಿ) ಕಾರ್ಯಾಚರಣೆ ಮಾಡುತ್ತಿದೆ. ಎರಡನೆ ಹಂತವು 2019ರಿಂದ ಕಾರ್ಯನಿರ್ವಹಿಸುತ್ತಿದ್ದು, ಇದು ಗಡಿಬೇಲಿಯನ್ನು ಎಳೆಯಲು ಸಾಧ್ಯವಾಗದ ಬ್ರಹ್ಮಪುತ್ರ ನದಿಪ್ರದೇಶದ 61 ಕಿಲೋಮೀಟರ್ಗಳನ್ನು ಕಣ್ಗಾವಲು ಕಾಯುತ್ತಿದೆ. ಮುಂದಿನ ಮೂರು ಹಂತಗಳು ಪೂರ್ಣಗೊಳ್ಳುವ ಹಾದಿಯಲ್ಲಿದ್ದು ಈಗ ಆಂಶಿಕವಾಗಿ ಕಾರ್ಯಾಚರಣೆ ಶುರುಮಾಡಿವೆ. ಇವಲ್ಲದೆ ಭಾರತವು:
1 ಆಂಟಿ-ಡ್ರೋನ್ ಟೆಕ್ನಾಲಜಿ (Anti Drone Technology) (ಡ್ರೋನ್ಗಳನ್ನು ತಡೆಯುವ ಕೌಂಟರ್-ಯುಎಎಸ್ (ಅನ್ಮ್ಯಾನ್ಡ್ ಏರಿಯಲ್ ಸಿಸ್ಟಮ್) ಗ್ರಿಡ್
2 ಪ್ರಾಜೆಕ್ಟ್ ಹಿಮಶಕ್ತಿ (ಯಾಂತ್ರಿಕ/ಕೃತಕ ಬುದ್ಧಿವಂತಿಕೆ ಬಳಸಿಕೊಂಡು ಕಣ್ಗಾವಲು) – ಇವುಗಳನ್ನು ಕೂಡ ಜಾರಿಯಲ್ಲಿಟ್ಟಿದೆ.
ಇವುಗಳ ಜೊತೆಗೆ ಗಡಿರೇಖೆಯ ಗುಂಟ ಹೆಚ್ಚು ಹೆಚ್ಚು ಹಳ್ಳಿಗಳು ಬೆಳೆಯಬೇಕು; ಅಲ್ಲಿ ಹೆಚ್ಚು ಜನಸಂಖ್ಯೆ ತುಂಬಿಕೊಳ್ಳಬೇಕು ಎಂಬ ಆಶಯದೊಂದಿಗೆ ವೈಬ್ರಂಟ್ ವಿಲೇಜಸ್ ಪ್ರೋಗ್ರಾಮ್ (ವಿವಿಪಿ) ಕಾರ್ಯಾಚರಿಸುತ್ತಿದೆ. ಭಾರತದಲ್ಲಿ ಗಡಿರೇಖೆಯಲ್ಲಿರುವ ಜಿಲ್ಲೆಗಳ ಪೈಕಿ 19 ಜಿಲ್ಲೆಗಳಲ್ಲಿ ಒಟ್ಟು 662 ಹಳ್ಳಿಗಳನ್ನು ಅಭಿವೃದ್ಧಿಪಡಿಸುವ ಒಂದು ಮಹತ್ವಾಕಾಂಕ್ಷೆಯ ಯೋಜನೆ ಇದು. ಯೋಜನೆ, ಯೋಚನೆ, ಸಂಕಲ್ಪ ಮತ್ತು ಅನುಷ್ಠಾನ – ಎಲ್ಲದರಲ್ಲಿಯೂ ಇದು ನೆಹರೂ ಅವರ ಯೋಚನೆಗೆ ತದ್ವಿರುದ್ಧವಾದ ಸಂಗತಿ. ಗಡಿಯಲ್ಲಿರುವ ಹಳ್ಳಿಗಳನ್ನು ಕತ್ತಲೆಯಲ್ಲಿಡಬೇಕು; ರಸ್ತೆಸಂಪರ್ಕ ಕಲ್ಪಿಸಬಾರದು ಎಂಬುದನ್ನೇ ತನ್ನ ರಕ್ಷಣಾತಂತ್ರವಾಗಿಸಿಕೊಂಡಿದ್ದ ಮತ್ತು ಆ ಕಾರಣಕ್ಕಾಗಿ ಸಹಸ್ರಾರು ಎಕರೆಗಳಷ್ಟು ಜಾಗಗಳು ಭಾರತದ ಕೈಬಿಟ್ಟುಹೋಗುವಂತೆ ಮಾಡಿದ ನೆಹರೂ ಅವರ ಯೋಜನೆಗೆ ಪೂರ್ತಿ ವಿರುದ್ಧವಾಗಿ ಆ ಅಷ್ಟೂ ಹಳ್ಳಿಗಳನ್ನು ಅಭಿವೃದ್ಧಿಪಡಿಸಿ ಮಾದರಿ ಹಳ್ಳಿಗಳನ್ನಾಗಿ ಮಾಡಬೇಕು ಎಂಬುದು ಈಗಿನ ಸರ್ಕಾರದ ಸಂಕಲ್ಪ. ಈ ಹಳ್ಳಿಗಳಿಗೆ ಸರ್ವಋತು ರಸ್ತೆಗಳ ಸಂಪರ್ಕ, ವಿದ್ಯುದೀಕರಣ, ಟೆಲಿಕಾಂ, ಆರೋಗ್ಯಸೇವೆ, ಶಿಕ್ಷಣ, ಟೂರಿಸಂ ಹಾಗೂ ಉದ್ಯೋಗಸೃಷ್ಟಿ – ಇವಿಷ್ಟನ್ನು ಮಾಡುವುದು ವಿವಿಪಿಯ ಕಾರ್ಯವ್ಯಾಪ್ತಿ. 2025ರಲ್ಲಿ ಈ ಯೋಜನೆಗೆ ಮತ್ತಷ್ಟು ಹಳ್ಳಿಗಳನ್ನು ಸೇರಿಸಿ ಒಟ್ಟು 17 ರಾಜ್ಯಗಳಲ್ಲಿ (15 ರಾಜ್ಯಗಳು ಹಾಗೂ 2 ಕೇಂದ್ರಾಡಳಿತ ಪ್ರದೇಶಗಳು) ಇದು ಕಾರ್ಯನಿರ್ವಹಿಸುವಂತೆ ಮಾಡಲಾಗಿದೆ. ಅದಕ್ಕಾಗಿ 2024ರಿಂದ 2029ರವರೆಗಿನ ಐದು ವರ್ಷಗಳಲ್ಲಿ ಮೀಸಲಿಟ್ಟಿರುವ ಸಂಪನ್ಮೂಲ 6,839 ಕೋಟಿ ರುಪಾಯಿ. ತನ್ನ ಗಡಿಬೇಲಿಯ ಉದ್ದಕ್ಕೂ ಚೀನಾ ಕಟ್ಟಿರುವ 628 ಮಾದರಿ ಹಳ್ಳಿಗಳಿಗೆ (ಚಿಯಾವೋಕಾಂಗ್), ಭಾರತದ ಸಮರ್ಥ ಪ್ರತ್ಯುತ್ತರ ಇದು.
ಏನೇನಾಗುತ್ತಿದೆ?
1 ಭಾರತ-ಮ್ಯಾನ್ಮಾರ್ ಸುಮಾರು 1,643 ಕಿಮೀ ಗಡಿರೇಖೆಯನ್ನು ಹಂಚಿಕೊಳ್ಳುತ್ತವೆ. ಅರುಣಾಚಲ ಪ್ರದೇಶ, ನಾಗಾಲ್ಯಾಂಡ್, ಮಣಿಪುರ, ಮಿಝೊರಾಂ – ಗಡಿರಾಜ್ಯಗಳು. ಮೊದಲು ಈ ಎರಡೂ ರಾಷ್ಟ್ರಗಳ 16 ಕಿಮೀ ಅತ್ತ-ಇತ್ತ ಯಾವುದೇ ದಾಖಲೆಗಳಿಲ್ಲದೆಯೂ ಅಡ್ಡಾಡಬಹುದೆಂಬ ಸ್ವಾತಂತ್ರ್ಯ-ಸೌಕರ್ಯ ಇತ್ತು. ಆದರೆ 2023ರಲ್ಲಿ ಮಣಿಪುರದಲ್ಲಿ ನಡೆದ ಆಂತರಿಕ ಕಲಹಗಳನ್ನು ಅತಿಯ ಮಟ್ಟಕ್ಕೆ ಕೊಂಡೊಯ್ಯುವುದರಲ್ಲಿ, ಆ ಕಲಹಗಳಿಗೆ ಶಸ್ತ್ರಾಸ್ತ್ರಪೂರೈಕೆ ಮಾಡುವುದರಲ್ಲಿ ಮ್ಯಾನ್ಮಾರ್ ಕೈವಾಡವಿತ್ತು ಎಂಬುದು ಸಾಬೀತಾದ ಮೇಲೆ ಎರಡೂ ದೇಶಗಳ ನಡುವಿನ ನಿಗದಿತ ಅಂತರದ ಸ್ವಚ್ಛಂದ ಸಂಚಾರವನ್ನು ಭಾರತವು 2024ರಿಂದ ನಿಲ್ಲಿಸಿದೆ. ಎರಡೂ ದೇಶಗಳ ನಡುವೆ ಎಲ್ಲೆಲ್ಲಿ ಭೂಭಾಗವಿದೆಯೋ ಅಲ್ಲಿ ಬೇಲಿ ಎಳೆಯುವ ಕೆಲಸವನ್ನು ಭಾರತವು ಕೈಗೆತ್ತಿಕೊಂಡು ಅರ್ಧಭಾಗ ಮುಗಿಸಿದೆ.
2 ಭೂತಾನ್ ಜೊತೆಗೆ ಭಾರತ ಹಂಚಿಕೊಂಡಿರುವ ಗಡಿ ಕೇವಲ 699 ಕಿಮೀ ಮಾತ್ರ. ಭೂತಾನಿಗೆ ತನ್ನದೇ ಆದ ಸೈನ್ಯವ್ಯವಸ್ಥೆ ಇಲ್ಲ; ಅಗತ್ಯಬಿದ್ದಾಗ ಅದಕ್ಕೆ ಸೈನ್ಯದ ನೆರವನ್ನು ಕೊಡುವುದು, ಒಪ್ಪಂದದ ಪ್ರಕಾರ, ಭಾರತದ ಜವಾಬ್ದಾರಿ. 2017ರಲ್ಲಿ ಭಾರತವು ತನ್ನ ಸೇನೆಯನ್ನು ಭೂತಾನ್ ಒಳಗೆ ಕಳಿಸಬೇಕಾಯಿತು ಮತ್ತು ಭೂತಾನದ್ದೆಂದು ಹೇಳಲಾಗುವ ಜಾಗದಲ್ಲಿ ಚೀನಾ ರಸ್ತೆ ನಿರ್ಮಾಣ ಮಾಡುತ್ತಿದ್ದುದನ್ನು ವಿರೋಧಿಸಿ ನಿಲ್ಲಿಸಬೇಕಾಯಿತು. ಹೀಗೆ ಭಾರತ ತನ್ನ ಗಡಿರೇಖೆಗಳನ್ನು ಗಮನಿಸುವುದು ಮಾತ್ರವಲ್ಲದೆ, ಅನ್ಯರಾಷ್ಟ್ರಗಳ ಗಡಿಯೊಳಗೆ ಶತ್ರುಗಳು ನುಸುಳುವುದನ್ನೂ ಕಣ್ಣಿಗೆ ಎಣ್ಣೆ ಬಿಟ್ಟುಕೊಂಡು ಕಾಯಬೇಕಾಗಿದೆ.
3 ಭಾರತ ಮತ್ತು ಬಾಂಗ್ಲಾದೇಶಗಳ ನಡುವಿನ 4,096 ಕಿಮೀ ಗಡಿರೇಖೆಯಲ್ಲಿ 3,306 ಕಿಮೀ ಭೂಭಾಗವಿದೆ. ಇದರಲ್ಲಿ 1986ರಿಂದ ಪ್ರಾರಂಭಿಸಿ ಇಂದಿನವರೆಗೆ 3,193 ಕಿಮೀ ಬೇಲಿಯನ್ನು ಎಳೆಯಲಾಗಿದೆ (ಶೇ.98). ಭಾರತ ಮತ್ತು ಪಾಕಿಸ್ತಾನಗಳ ನಡುವಿನ 2,054 ಕಿಮೀ ಭೂಗಡಿಯಲ್ಲಿ 2,026 ಕಿಮೀಗಳಷ್ಟು ಪ್ರದೇಶದಲ್ಲಿ ಬೇಲಿ ಹಾಕಲಾಗಿದೆ. ಭಾರತ ಮತ್ತು ಚೀನಾ ದೇಶಗಳು 3,488 ಕಿಮೀ ಗಡಿಯನ್ನು ಹಂಚಿಕೊಂಡರೂ ಎಲ್ಲೂ ಬೇಲಿ ಹಾಕಲು ಸಾಧ್ಯವೇ ಇಲ್ಲದಂಥ ಭೌಗೋಳಿಕ ಪರಿಸ್ಥಿತಿ ಅಲ್ಲಿಯದು: ಹೆಚ್ಚಿನ ಭಾಗವೆಲ್ಲ ಹಿಮಾಚ್ಛಾದಿತ ಬೆಟ್ಟಗುಡ್ಡಗಳು, ಕಣಿವೆಗಳು, ಬೃಹತ್ ನದಿಗಳು. ಇನ್ನು ತಲಾ 1,751 ಕಿಮೀ ಮತ್ತು 699 ಕಿಮೀ ಗಡಿರೇಖೆಯನ್ನು ಭಾರತದೊಂದಿಗೆ ಹಂಚಿಕೊಳ್ಳುವ ನೇಪಾಳ ಮತ್ತು ಭೂತಾನ್ ಜೊತೆಗೆ ಭಾರತದ ಸ್ನೇಹ ಒಪ್ಪಂದ ಇರುವುದರಿಂದ ಈ ದೇಶಗಳನ್ನು ಪ್ರತ್ಯೇಕಿಸಿ ಬೇರ್ಪಡಿಸುವ ಬೇಲಿಯನ್ನು ಭಾರತ ಎಳೆದಿಲ್ಲ.
