ಇಂದಿನ ಆಧುನಿಕ ಸಮಾಜದಲ್ಲಿ ಕೇಳಿಬರುತ್ತಿರುವ ವಿಚಿತ್ರ ಹಾಗೂ ವಿಕೃತ ಅಪರಾಧ ಕೃತ್ಯಗಳು ಕೇವಲ ಕಾನೂನು ಸುವ್ಯವಸ್ಥೆಯ ವೈಫಲ್ಯವಲ್ಲ; ಬದಲಿಗೆ ಅದೊಂದು ಗಂಭೀರ ಸಾಮಾಜಿಕ ಮತ್ತು ಮಾನಸಿಕ ತಲ್ಲಣ. ಪ್ರಿಯಕರನಿಗಾಗಿ ಸ್ವಂತ ಮಗುವನ್ನೇ ಕೊಲ್ಲುವ ತಾಯಿ, ನಿಶ್ಚಿತ ವರನನ್ನು ಮುಗಿಸುವ ಯುವತಿ – ಇಂತಹ ಘಟನೆಗಳು ನಮ್ಮ ನೈತಿಕ ಅಧಃಪತನಕ್ಕೆ ಹಿಡಿದ ಕನ್ನಡಿಯಾಗಿವೆ. ಈ ಆತಂಕಕಾರಿ ಬೆಳವಣಿಗೆಯ ಮೂಲವನ್ನು ಸಮಾಜ ವಿಜ್ಞಾನ ಹಾಗೂ ಮನೋವಿಜ್ಞಾನದ ವಿಭಿನ್ನ ದೃಷ್ಟಿಕೋನಗಳಿಂದ ವಿಶ್ಲೇಷಿಸುವುದು ಇಂದಿನ ತುರ್ತು ಅಗತ್ಯವಾಗಿದೆ.
ಮನೋವಿಜ್ಞಾನದ ಪ್ರಕಾರ, ಡಿಜಿಟಲ್ ಯುಗದ ಅತಿಯಾದ ಆಕ್ರಮಣ ಮತ್ತು ತಂತ್ರಜ್ಞಾನದ ದಾಸ್ಯ ಇಂದಿನ ಯುವ ಪೀಳಿಗೆಯನ್ನು (ಜೆನ್ ಝೀ ಮತ್ತು ಆಲ್ಫಾ) ವಾಸ್ತವದಿಂದ ದೂರ ಸರಿಸುತ್ತಿದೆ. ಸಾಮಾಜಿಕ ಜಾಲತಾಣಗಳ ‘ಡೋಪಮೈನ್ ಸ್ಪೈಕ್’ ಮತ್ತು ಲೈಕ್-ಕಾಮೆಂಟ್ಗಳ ಭ್ರಮಾಲೋಕವು ಸಂಬಂಧಗಳ ಮೌಲ್ಯವನ್ನು ಕಸಿದುಕೊಳ್ಳುತ್ತಿದೆ. ಪ್ರಕೃತಿ ಸಹಜವಾಗಿ ಹೆಣ್ಣಿನಲ್ಲಿ ಕರುಣೆ, ತಾಳ್ಮೆಗೆ ಕಾರಣವಾಗುವ ಆಕ್ಸಿಟೋಸಿನ್ ಹಾಗೂ ಈಸ್ಟ್ರೋಜನ್ ಹಾರ್ಮೋನ್ಗಳ ಸಮತೋಲನವು ಇಂದಿನ ಅತಿಯಾದ ಮೊಬೈಲ್ ಗೀಳು, ನಾರ್ಸಿಸಿಸಮ್ (ಸ್ವಪ್ರೇಮ) ಮತ್ತು ವಾಸ್ತವದೊಂದಿಗಿನ ಸಂಪರ್ಕ ಕಡಿತದಿಂದಾಗಿ ಏರುಪೇರಾಗುತ್ತಿದೆ. ಇದು ಅವರಲ್ಲಿ ಅತಿಯಾದ ಹಠ, ಅಸಹನೆ ಮತ್ತು ಅಪರಾಧಿ ಮನೋಭಾವಕ್ಕೆ (ADHD, ASPD) ಪ್ರೇರಣೆ ನೀಡುತ್ತಿದೆ.
ಆದರೆ, ಅಪರಾಧಶಾಸ್ತ್ರ ಮತ್ತು ವೈದ್ಯಕೀಯ ವಿಜ್ಞಾನದ ಮತ್ತೊಂದು ಮುಖವು ಕಹಿ ಸತ್ಯವನ್ನು ಬಿಚ್ಚಿಡುತ್ತದೆ. ಇಂತಹ ಕ್ರೂರ ಅಪರಾಧಗಳಿಗೆ ಕೇವಲ ಜೀವಶಾಸ್ತ್ರ, ಹಾರ್ಮೋನ್ಗಳ ಏರುಪೇರು ಅಥವಾ ಮೂಡ್ಸ್ವಿಂಗ್ಸ್ ಗಳನ್ನು ನೆಪವಾಗಿಸಲು ಸಾಧ್ಯವಿಲ್ಲ. ಯಾವುದೇ ಕೊಲೆಯು ಹಠಾತ್ ದೈಹಿಕ ಬದಲಾವಣೆಯಿಂದ ಸಂಭವಿಸುವುದಿಲ್ಲ; ಅದರ ಹಿಂದೆ ಅತಿಯಾದ ನಿರೀಕ್ಷೆ, ಮಾಲೀಕತ್ವದ ಮನಸ್ಥಿತಿ, ತೀವ್ರ ಸಂಶಯ ಮತ್ತು ಸಂಗಾತಿಯನ್ನು ತನ್ನ ಆಸ್ತಿ ಎಂದು ಭಾವಿಸುವ ವಿಕೃತ ಅಹಂಕಾರವಿರುತ್ತದೆ. ಸಂಬಂಧದಿಂದ ಹೊರಬರಲು ಯತ್ನಿಸಿದಾಗ ಎದುರಾಗುವ ‘ತಿರಸ್ಕಾರದ ಭಯ’ ವ್ಯಕ್ತಿಯನ್ನು ಕ್ರೂರಿಯನ್ನಾಗಿಸುತ್ತದೆ. ಇವುಗಳ ಜೊತೆಗೆ ಮಾಧ್ಯಮಗಳು ಇಂತಹ ಅಪರೂಪದ ವಿಕೃತ ಪ್ರಕರಣಗಳನ್ನು ಅತಿಯಾಗಿ ವೈಭವೀಕರಿಸಿ ಸಮಾಜದಲ್ಲಿ ಅನಗತ್ಯ ಆತಂಕವನ್ನು ಸೃಷ್ಟಿಸುತ್ತಿವೆ.
ಹಾಗಾದರೆ ಇದಕ್ಕೆ ಪರಿಹಾರವೇನು? ಪೋಷಕತ್ವದ ವೈಫಲ್ಯವನ್ನು ತಿದ್ದಿಕೊಳ್ಳುವುದು ಇದರ ಮೊದಲ ಹೆಜ್ಜೆ. ಮಕ್ಕಳಿಗೆ ಕೇಳಿದ್ದನ್ನೆಲ್ಲಾ ತಕ್ಷಣವೇ ಕೊಡಿಸದೇ ‘ಕಾಯುವ ಗುಣ’ವನ್ನು ಕಲಿಸಬೇಕಿದೆ. ಡಿಜಿಟಲ್ ಸ್ಕ್ರೀನ್ ಸಮಯವನ್ನು ಕಡಿತಗೊಳಿಸಿ, ಅವರನ್ನು ವಾಸ್ತವ ಜಗತ್ತಿನ ಕ್ರೀಡೆ ಹಾಗೂ ಕೂಡು ಕುಟುಂಬದ ಬಾಂಧವ್ಯಗಳ ಕಡೆಗೆ ಮುಖ ಮಾಡುವಂತೆ ಪ್ರೇರೇಪಿಸಬೇಕು. ಹಳೆಯ ತಲೆಮಾರಿನ ನೈತಿಕ ಕಥೆಗಳು, ಮೌಲ್ಯಗಳು ಹಾಗೂ ಧಾರ್ಮಿಕ ಆಚರಣೆಗಳ ಹಿಂದಿನ ಜೀವನ ಸಮರಸತೆಯ ಅರಿವನ್ನು ಮೂಡಿಸಬೇಕು. ಮದುವೆಯಂತಹ ಮಹತ್ತರ ನಿರ್ಧಾರಗಳಲ್ಲಿ ಬಲವಂತವನ್ನು ಬದಿಗಿಟ್ಟು, ತಾಳ್ಮೆ ಮತ್ತು ಹೊಂದಾಣಿಕೆಗೆ ಆದ್ಯತೆ ನೀಡಬೇಕು. ಅಪರಾಧದ ಕತ್ತಲೆಯನ್ನು ಕೇವಲ ಕಾನೂನಿನ ಶಿಕ್ಷೆಯಿಂದ ಅಳಿಸಲು ಸಾಧ್ಯವಿಲ್ಲ. ಮನೆ, ಶಾಲೆ ಮತ್ತು ಮಾಧ್ಯಮಗಳು ಜಂಟಿಯಾಗಿ ಕಾರ್ಯನಿರ್ವಹಿಸಿ, ವ್ಯಕ್ತಿಯ ಆತ್ಮಸಾಕ್ಷಿಯನ್ನು ಜಾಗೃತಗೊಳಿಸಬೇಕಿದೆ. ಕೃತ ಕೃತ್ಯಗಳು ಶುದ್ಧವಾಗಿರಲು, ಮೌಲ್ಯಗಳ ಪುನರುತ್ಥಾನದ ಮೂಲಕ ಮಾತ್ರವೇ ನಾವೊಂದು ಸ್ವಸ್ಥ ಮತ್ತು ಸುರಕ್ಷಿತ ಸಮಾಜವನ್ನು ನಿರ್ಮಿಸಲು ಸಾಧ್ಯ.
ಸಾಮಾಜಿಕ ಬದಲಾವಣೆಗಳು ಏಕಾಏಕಿ ಸಂಭವಿಸುವುದಿಲ್ಲ. ಕಾಲಕಾಲಕ್ಕೆ ಸಮಾಜದಲ್ಲಿ ತಲೆ ಎತ್ತುವ ದೋಷಗಳು ಅಥವಾ ಮೌಲ್ಯಗಳ ಅನುಸರಣೆ ಹೆಚ್ಚಾದಷ್ಟೂ ಸಮಾಜದ ಸ್ವಾಸ್ಥ್ಯ ಅಥವಾ ರೋಗಗಳು ಉಲ್ಬಣಿಸುತ್ತವೆ. ಈಗಿನ ಜೆನ್ಝೀ ಪೀಳಿಗೆಯಲ್ಲಿ ಕಂಡುಬರುತ್ತಿರುವ ದೋಷಗಳು ಅವರ ಹೆತ್ತವರ ಅಥವಾ ಅದಕ್ಕೂ ಹಿಂದಿನ ತಲೆಮಾರಿನವರಲ್ಲಿ ಆದ ಸಾಮಾಜಿಕ ಬದಲಾವಣೆಗಳ ಪರಿಣಾಮವಾಗಿದೆ. ಬರಿಯ ಕಾನೂನಿನಿಂದ ಯಾವುದೇ ಅಪರಾಧವನ್ನು ನಿಯಂತ್ರಿಸಲು ಸಾಧ್ಯವಿಲ್ಲ. ಅದಕ್ಕೆ ಬೇಕಿರುವುದು, ಒಂದು ಜವಾಬ್ದಾರಿಯುತ ಸಮಾಜವಾಗಿ ನಾವು ಏನನ್ನು ಎಲ್ಲಿ ಕಳೆದುಕೊಂಡಿದ್ದೇವೋ ಅದನ್ನು ಅಲ್ಲೇ ಹುಡುಕಬೇಕು ಮತ್ತು ಮರು ಅಳವಡಿಸಿಕೊಳ್ಳಬೇಕು ಅಷ್ಟೆ.
