ಅಂಕಣ – ಸಂಘ ಸೌರಭ 48
- ಬಿ. ವಿ. ಶ್ರೀಧರಸ್ವಾಮಿ, ನಿವೃತ್ತ ಪ್ರಾಧ್ಯಾಪಕ
ಭಾರತದ ನದಿಗಳ ಪಾವನ ಜಲದೊಂದಿಗೆ ಇಲ್ಲಿಯ ಜನಜೀವನ ವಿಕಾಸವಾಗಿದೆ. ಪ್ರಯಾಗರಾಜ್, ಹರಿದ್ವಾರ, ನಾಶಿಕ್ ಮೊದಲಾದ ಸಂಗಮ ಸ್ಥಾನಗಳಲ್ಲಿ ನಡೆಯುವ ಕುಂಭಮೇಳಗಳು ದೇಶದ ಜನರನ್ನು ಜೋಡಿಸುವ, ಏಕತೆಯ ಅನುಭೂತಿಯನ್ನು ಅವರಲ್ಲಿ ಬೆಳೆಸುವ ಪಾರಂಪರಿಕ ಉತ್ಸವವಾಗಿ ರೂಪುಗೊಂಡಿದೆ. ಇದು ಭಾರತದ ಸಂಸ್ಕೃತಿಯ ವಿಶೇಷವೆಂದೇ ಹೇಳಬಹುದು. ಇತ್ತೀಚೆಗೆ ಪ್ರಯಾಗರಾಜ್ನಲ್ಲಿ ನಡೆದ ಮಹಾಕುಂಭದಲ್ಲಿ ದೇಶ ವಿದೇಶಗಳ 6೦ ಕೋಟಿಗೂ ಹೆಚ್ಚು ಶ್ರದ್ಧಾಳುಗಳು ಪುಣ್ಯಸ್ನಾನದಲ್ಲಿ ಭಾಗವಹಿಸಿ ಪುನೀತರಾದರು. ವಿಶ್ವದ ಜನಸಂಖ್ಯೆಯ ಶೇಕಡಾ ಹತ್ತರಷ್ಟು ಜನ ಇಲ್ಲಿ ಪಾಲ್ಗೊಂಡಿದ್ದರು ಎನ್ನುವುದು ಕುಂಭಮೇಳದ ಭವ್ಯತೆಯನ್ನು ತೋರಿಸುತ್ತದೆ.
ಅಂತಹುದೇ ಮತ್ತೊಂದು ಕುಂಭ ಫೆಬ್ರವರಿ 2006ರಲ್ಲಿ ಗುಜರಾತ್ನ ಡಾಂಗ್ ಜಿಲ್ಲೆಯಲ್ಲಿ ನಡೆಯಿತು. ಆದರೆ ಈ ಆಧುನಿಕ ಕುಂಭ ದೇಶದಲ್ಲಿನ ವನವಾಸಿ ಬಂಧುಭಗಿನಿಯರಲ್ಲಿ ದೇಶಭಕ್ತಿ ಮತ್ತು ಧರ್ಮಶ್ರದ್ಧೆಯನ್ನು ಅರಳಿಸುವ ಸಲುವಾಗಿ ನಡೆಯಿತು. ವನವಾಸಿಗಳ ನಡುವೆ ಮತಾಂತರ ಮೊದಲಾದ ಕುತಂತ್ರಗಳ ಮೂಲಕ ನಡೆಸಲಾದ ಎಲ್ಲ ಬಗೆಯ ದೇಶವಿರೋಧಿ ಶಕ್ತಿಗಳ ನಿಗ್ರಹದ ಹೋರಾಟಕ್ಕೆ ಚರಿತ್ರಾರ್ಹ ಭೂಮಿಕೆಯನ್ನು ಒದಗಿಸಿತು.
ಗುಜರಾತ್ನ ಡಾಂಗ್ ಜಿಲ್ಲೆಯಲ್ಲಿ ಇರುವ ಪಂಪಾ ಸರೋವರದ ಬಳಿಯಲ್ಲಿ ಮತಂಗ ಋಷಿಗಳು ತಪಸ್ಸು ಮಾಡಿದ ಸ್ಥಳ ಶಬರಿ ಧಾಮ ಪ್ರಸಿದ್ಧವಾಗಿದೆ. ವನವಾಸದ ಅವಧಿಯಲ್ಲಿ ಶ್ರೀರಾಮನು ಶಬರಿಗೆ ದರ್ಶನ ನೀಡಿದ ಜಾಗ ಅದು, ಅವಳು ಆರಿಸಿಟ್ಟ ಹಣ್ಣುಗಳನ್ನು ಸ್ವೀಕರಿಸಿ ಶ್ರೀರಾಮನು ಮಾತಾ ಶಬರಿಯ ಜೀವನಕ್ಕೆ ಧನ್ಯತೆಯನ್ನು ನೀಡಿದ ಚರಿತಾರ್ಥ ಸ್ಥಾನ ಅದು. ಈಗಲೂ ಅಲ್ಲಿ ಮಾತಾ ಶಬರಿ ಮತ್ತು ರಾಮನ ಮಂದಿರವಿದೆ. ಈ ಧಾಮವು ಅಲ್ಲಿಯ ವನವಾಸಿಗಳ ಶ್ರದ್ಧಾಕೇಂದ್ರ ಕೂಡ. ದಟ್ಟ ಅರಣ್ಯದ ನಡುವೆ ಇರುವ ಈ ಸ್ಥಳ ರಾಮಾಯಣದ ಶಬರಿಯನ್ನು ಮತ್ತು ಭಾರತೀಯ ಇತಿಹಾಸ ಮತ್ತು ಸಂಸ್ಕೃತಿಗೆ ಕೊಡುಗೆ ನೀಡಿದ ವನವಾಸಿ ಬಂಧುಗಳ ಮಹತ್ವವನ್ನು ಸ್ಮರಣೆಗೆ ತರುವಂತಿದೆ.
ವನವಾಸಿ ಸಂಗಮಕ್ಕೆ ಪ್ರಶಸ್ತವಾದ ಈ ಧಾಮದಲ್ಲಿ ನಡೆದ ಶಬರೀ ಕುಂಭಕ್ಕೆ 6 ಲಕ್ಷಕ್ಕೂ ಹೆಚ್ಚು ವನವಾಸಿಗಳು ಭಾಗವಹಿಸಿದ್ದರು. ಈ ಸಂಗಮಕ್ಕೆ ಭಾರತದ ಬಹುತೇಕ ಎಲ್ಲಾ ವನವಾಸಿ ಬುಡಕಟ್ಟುಗಳ ಜನ ಬಂದಿದ್ದರು. ತಮ್ಮ ಸಾಂಪ್ರದಾಯಿಕ ಉಡುಗೆ ತೊಡಿಗೆಗಳಿಂದ ಅಲಂಕೃತರಾದ ವಿವಿಧ ಸಂಪ್ರದಾಯದ ಬಂಧುಭಗಿನಿಯರು ಒಂದು ವಿಶಾಲ ಪರಿವಾರವಾಗಿ ಪಾಲ್ಗೊಂಡ ದೇವ ದುರ್ಲಭ ದೃಶ್ಯ ಅದಾಗಿತ್ತು. ಅವರಲ್ಲಿ ಭಾರತಮಾತೆಯ ಬಗೆಗಿನ ಭಕ್ತಿಯನ್ನು ಅರಳಿಸಿ ಹಿಂದುತ್ವದ ಅಭಿಮಾನವನ್ನು ಜಾಗೃತಗೊಳಿಸಿ ಮತಾಂತರದ ಅಪಾಯದ ಬಗ್ಗೆ ಅವರನ್ನು ಎಚ್ಚರಿಸುವ ವಿನೂತನ ಕಾರ್ಯಕ್ರಮ ಅದಾಗಿತ್ತು.
ಕುಂಭ ನಡೆಯುವ ಮುನ್ನ, ನಡೆಯುವಾಗ ಮತ್ತು ನಡೆದ ಅನೇಕ ತಿಂಗಳುಗಳ ತನಕ ನಡೆದ ಕ್ರಿಶ್ಚಿಯನ್ ಮಿಷನರಿಗಳ ವ್ಯಾಪಕ ಅಪಪ್ರಚಾರ ಮತ್ತು ವಿರೋಧದ ನಡುವೆಯೂ ಸ್ವಯಂಸೇವಕರು ಶಬರಿಕುಂಭವನ್ನು ಯಶಸ್ವಿಯನ್ನಾಗಿಸಲು ಹರಸಾಹಸ ನಡೆಸಿದರು. ಮೂರು ದಿನ ನಡೆದ ಈ ಮೇಳದಲ್ಲಿ ಜನರು ಪಂಪಾಸರೋವರದಲ್ಲಿ ಪುಣ್ಯಸ್ನಾನ ಮಾಡಿ ಶಬರಿಧಾಮದ ದರ್ಶನ ಪಡೆದರು. ಸಂತರ ಮಾರ್ಗದರ್ಶನ ಮತ್ತು ಸಂಜೆಯ ಜಾನಪದ ಕಲಾವೈಭವದ ಪ್ರದರ್ಶನ ನಮ್ಮ ಸಾಂಸ್ಕೃತಿಕ ಶ್ರೀಮಂತಿಕೆಯನ್ನು ಸಾದರಗೊಳಿಸಿತು. ಸ್ವಾತಂತ್ರ್ಯ ಹೋರಾಟದಲ್ಲಿ ಪಾಲ್ಗೊಂಡ 300ಕ್ಕೂ ಹೆಚ್ಚಿನ ವೀರಪುರುಷ, ವೀರಾಂಗನೆಯರ ವಿವರ ನೀಡುವ ಭವ್ಯ ಪ್ರದರ್ಶಿನಿ, ಜನಜಾತಿ ಪಂಗಡಗಳಲ್ಲಿ ಭಕ್ತಿಭಾವ ಬೆಳೆಸಿದ ಸಂತ ಮಹಾತ್ಮರ ಜೀವನ ತಿಳಿಸುವ ಚಿತ್ರಪ್ರದರ್ಶಿನಿ, ಭಾರತದ ಶ್ರೀಮಂತ ಸಂಸ್ಕೃತಿಗೆ ಕಾಣಿಕೆ ನೀಡಿದ ವನವಾಸಿ ಬಂಧುಗಳ ಅಪೂರ್ವ ಯಶೋಗಾಥೆಯನ್ನು ಬಿಂಬಿಸುವ ಚಿತ್ರಸಂಚಯಗಳು ಭಾರತದ ಸಾಂಸ್ಕೃತಿಕ ಯಾತ್ರೆಯನ್ನು ಸಮೃದ್ಧಿಗೊಳಿಸಿದ ವನವಾಸಿ ಬಂಧುಗಳ ಸುಂದರ ಕಥಾನಕವನ್ನು ಸಾದರಪಡಿಸಿದವು.
ಸಹಜವಾಗಿಯೇ ಭಾಗವಹಿಸಿದ ಪ್ರತಿಯೊಬ್ಬ ವನವಾಸೀ ಬಂಧು ಭಗಿನಿಯರಲ್ಲೂ ಸ್ವಾಭಿಮಾನದ ಮಿಂಚು ಸಂಚರಿಸಿದ್ದರಲ್ಲಿ ಅತಿಶಯೋಕ್ತಿಯೇನಿಲ್ಲ. ಕಲ್ಯಾಣ ಆಶ್ರಮದ ಶಬರೀ ಕುಂಭದ ಯೋಜನೆ ಮತಾಂತರಗೊಂಡವರಲ್ಲಿ ಹೊಸಚಿಂತನೆಯನ್ನು ಹುಟ್ಟು ಹಾಕಿತು. ಪರಾವರ್ತನದ ಪ್ರಕ್ರಿಯೆಗೆ ರಭಸ ನೀಡಿತು. ಅಲ್ಲಿಯವರೆಗೂ ವನವಾಸಿ ಬಂಧುಗಳ ಮುಗ್ಧತೆಯನ್ನು ದುರ್ಬಳಕೆ ಮಾಡಿ ಮತಾಂತರ ನಡೆಸುತ್ತಿದ್ದ ಚರ್ಚ್ ಹಸ್ತಕರ ಬಂಡವಾಳ ಬಯಲಾಯಿತು. ದೇಶ ವಿರೋಧಿ ಚಟುವಟಿಕೆಗಳನ್ನು ನಡೆಸುತ್ತಿದ್ದ ಶಕ್ತಿಗಳಿಗೆ ಪ್ರಬಲ ಪ್ರತಿರೋಧ ನೀಡಲು ಜನಮಾನಸ ರೂಪುಗೊಂಡಿದ್ದು ಶಬರೀ ಕುಂಭದ ಪ್ರಮುಖ ಉಪಲಬ್ಧಿಯಾಯಿತು.
