ಅಂಕಣ – ಮಕ್ಕಳಿಗೆ ವಿಜ್ಞಾನ
- ರೋಹಿತ್ ಚಕ್ರತೀರ್ಥ, ಚಿಂತಕರು, ಲೇಖಕರು
ನ್ಯೂಟನ್ನನ ಸೇಬಿನ ಕತೆ ಎಲ್ಲರಿಗೂ ಗೊತ್ತಿರುವಂಥದ್ದೇ. ಅವನು ತೋಟದಲ್ಲಿ ಅಡ್ಡಾಡುತ್ತಿದ್ದನೋ ಅಥವಾ ಮರದ ಕೆಳಗೆ ಕೂತಿದ್ದನೋ – ಅಂತೂ ಅವನು ಮರದಿಂದ ಸೇಬುಹಣ್ಣು ತೊಟ್ಟು ಕಳಚಿ ಕೆಳಬೀಳುವುದನ್ನು ನೋಡಿದ. ನೋಡಿದಾಗ ಅವನಿಗೊಂದು ಅಂತರ್ಬೋಧೆಯಾಯಿತು. ಹಣ್ಣು ತೊಟ್ಟು ಕಳಚಿ ಕೆಳಗೇ ಯಾಕೆ ಬೀಳುತ್ತದೆ? ತೊಟ್ಟು ಕಳಚಿಕೊಂಡ ಹಣ್ಣು ಎಡಕ್ಕೋ ಬಲಕ್ಕೋ ಮೇಲಕ್ಕೋ ಯಾಕೆ ಹೋಗೋಲ್ಲ, ಅದು ಕೆಳಗೇ ಬೀಳಲು ಕಾರಣವಾದರೂ ಏನು? ಈ ಪ್ರಶ್ನೆಯು ಯಾರಿಗಾದರೂ ಎಂದಾದರೂ ಬರಬಹುದಾಗಿತ್ತು, ಆದರೆ ನ್ಯೂಟನ್ನನಿಗೆ ಆ ಪ್ರಶ್ನೆ ಮೂಡಲು, ನೆಲದತ್ತ ಬೀಳುತ್ತಿದ್ದ ಹಣ್ಣು ಕಾರಣವಾಯಿತು. ಪ್ರಶ್ನೆಯ ಹಿಂದೆ ಬಿದ್ದ ನ್ಯೂಟನ್ ಕೊನೆಗೆ ಗುರುತ್ವಾಕರ್ಷಣಕ್ಕೆ ಸಂಬಂಧಿಸಿದ ಸೂತ್ರಗಳನ್ನೂ ಸ್ಥಿರಾಂಕಗಳನ್ನೂ ಆವಿಷ್ಕರಿಸುವಂತಾಯಿತು.
ಭೂಮಿಯ ಗುರುತ್ವಬಲವು ಯಾವುದೇ ವಸ್ತುವನ್ನು ತನ್ನೆಡೆಗೆ ಸದಾ ಸೆಳೆಯುತ್ತಿರುತ್ತದೆ. ವಸ್ತುವು ಭೂಮಿಯಿಂದ ಬಹುದೂರದಲ್ಲಿದ್ದಾಗ ಅದರ ಮೇಲೆ ಗುರುತ್ವದ ಪ್ರಭಾವ ಕಡಮೆ. ಆದರೆ ಅದು ಭೂಮಿಯತ್ತ ಧಾವಿಸಿದಾಗ ಅದರ ವೇಗವೂ ಉತ್ಕರ್ಷವಾಗುತ್ತದೆ. ಅಂದರೆ ಭೂಮಿಗೆ ಹತ್ತಿರವಾದಂತೆ ತನ್ನ ವೇಗ ಹೆಚ್ಚಿಸಿಕೊಂಡು ಆ ವಸ್ತು ಧಾವಿಸುತ್ತದೆ. ಅದರ ವೇಗವು ಹೆಚ್ಚಾಗಲು, ಅದು ಭೂಮಿಯ ಕಡೆಗೇ ಧಾವಿಸಿಬರಲು ಕಾರಣವಾದದ್ದು ಭೂಮಿಯ ಗುರುತ್ವಬಲ. ಆ ಕಾರಣವಿದ್ದುದರಿಂದ ವಸ್ತುವು ಭೂಮಿಯತ್ತ ಧಾವಿಸಿಬರುವ ಕಾರ್ಯ ನಡೆಯುವಂತಾಯಿತು. ಹೀಗೆ ಪ್ರತಿಯೊಂದು ಕಾರ್ಯದ ಹಿಂದೆಯೂ ಒಂದು ಕಾರಣವಿರಲೇಬೇಕು; ಕಾರಣವಿಲ್ಲದೆ ಕಾರ್ಯವಿಲ್ಲ ಎಂಬುದನ್ನು ಭಾರತೀಯರು ತಮ್ಮ ದರ್ಶನಗಳಲ್ಲಿ ದಾಖಲಿಸಿದ್ದಾರೆ. ಭಾರತೀಯ ತತ್ತ್ವಜ್ಞಾನದಲ್ಲಿ ಕಾಣಿಸಿಕೊಳ್ಳುವ ಕರ್ಮಸಿದ್ಧಾಂತ, ಪುನರ್ಜನ್ಮ, ಆತ್ಮದ ಕಲ್ಪನೆ – ಇವೆಲ್ಲಕ್ಕೂ ತಾಯಿಬೇರಾಗಿರುವುದು ಕಾರ್ಯ-ಕಾರಣ ಸಂಬಂಧವೇ.
ಕ್ರಿಮಿಯನ್ ಯುದ್ಧದಲ್ಲಿ ಸಾವಿರಾರು ಯೋಧರು ಕೈಕಾಲುಗಳಿಗೆ ಗಾಯ ಮಾಡಿಕೊಂಡು ಆಸ್ಪತ್ರೆಗೆ ದಾಖಲಾಗುತ್ತಿದ್ದರು. ಅಂಥವರಿಗೆ ಗಾಯಗಳಿಗೆ ಔಷಧಿ ಹಚ್ಚಿ ಶುಶ್ರೂಷೆ ಮಾಡುತ್ತಿದ್ದರೂ ವಾರ-ವಾರವೆರಡರಲ್ಲಿ ಸಾವು ಬಂದೆರಗುತ್ತಿತ್ತು. ಯುದ್ಧದಲ್ಲಾಗುವ ಗಾಯಗಳೇ ಅವರ ಸಾವಿಗೆ ಕಾರಣ ಎಂಬುದು ಸರ್ವಸಾಮಾನ್ಯವಾದ ತಿಳಿವಳಿಕೆಯಾಗಿತ್ತು. ಆದರೆ ಈ ಯುದ್ಧದ ಸಮಯದಲ್ಲಿ ಆಸ್ಪತ್ರೆಯಲ್ಲಿ ದಾದಿಯಾಗಿ ಕೆಲಸ ಮಾಡುತ್ತಿದ್ದ ಫ್ಲಾರೆನ್ಸ್ ನೈಟಿಂಗೇಲ್, ಪ್ರತಿ ರೋಗಿಯ ಪ್ರತಿಯೊಂದು ಸಂಗತಿಯನ್ನೂ ಬರೆದಿಡತೊಡಗಿದಳು. ಅವರು ಆಸ್ಪತ್ರೆಗೆ ದಾಖಲಾದದ್ದು ಯಾವಾಗ, ಅವರಿಗೆ ಯಾವ್ಯಾವ ಭಾಗಗಳಲ್ಲಿ ಎಷ್ಟೆಷ್ಟು ತೀವ್ರತೆಯ ಗಾಯಗಳಾಗಿದ್ದವು, ಅವಕ್ಕೆ ಏನೇನು ಔಷಧ ಹಚ್ಚಲಾಯಿತು, ನಂತರದ ದಿನಗಳಲ್ಲಿ ಅವರ ಆರೋಗ್ಯದಲ್ಲಿ ಏನು ಬದಲಾವಣೆ ಆದವು, ಸಾವಿನ ಹಂತದಲ್ಲಿ ಅವರ ಆರೋಗ್ಯದ ಸ್ಥಿತಿ ಹೇಗಿತ್ತು – ಹೀಗೆ ಪ್ರತಿಯೊಂದು ಸಂಗತಿಯನ್ನೂ ಫ್ಲಾರೆನ್ಸ್ ದಾಖಲಿಸಿಕೊಂಡಿದ್ದಳು. ಅದೇನೂ ಅವಳ ವೃತ್ತಿಯ ಭಾಗವಾಗಿರಲಿಲ್ಲ; ತನ್ನ ಆಸಕ್ತಿಯಿಂದಾಗಿ ಅವಳು ಈ ಹೆಚ್ಚುವರಿ ಕೆಲಸವನ್ನು ತಾನಾಗೇ ಹೆಗಲಿಗೇರಿಸಿಕೊಂಡಿದ್ದಳು ಅಷ್ಟೆ. ಆದರೆ ಆಕೆ ಮಾಡಿಕೊಂಡ ಈ ಎಲ್ಲ ದಾಖಲಾತಿಗಳಿಂದಾಗಿ ಕಾಲಾಂತರದಲ್ಲಿ ಒಂದು ವಿಷಯ ಸ್ಪಷ್ಟವಾಯಿತು. ಅದೇನೆಂದರೆ ಯುದ್ಧಭೂಮಿಯಲ್ಲಾದ ಗಾಯದ ಪರಿಣಾಮವಾಗಿ ಸತ್ತವರು ಕೆಲವೇ ಮಂದಿ; ಬಹಳಷ್ಟು ಸೈನಿಕರು ಸಾವಿಗೀಡಾದದ್ದು ಆಸ್ಪತ್ರೆಯಲ್ಲಿ ಅವರಿಗೆ ಸಿಕ್ಕ ಕನಿಷ್ಠ ಸೌಲಭ್ಯಗಳಿಂದಾಗಿ. ಆಸ್ಪತ್ರೆಗಳಲ್ಲಿ ಕುರಿದೊಡ್ಡಿಯಂತೆ ರೋಗಿಗಳನ್ನು ತುಂಬಿಸಿಡಲಾಗಿತ್ತು; ಅವರಿಗೆ ಸರಿಯಾಗಿ ಗಾಳಿ-ಬೆಳಕಿನ ವ್ಯವಸ್ಥೆ ಇರಲಿಲ್ಲ; ಸ್ವಚ್ಛತೆಗೆ ಕೊನೆಯ ಆದ್ಯತೆ ಕೊಡಲಾಗಿತ್ತು; ಒಬ್ಬ ರೋಗಿಗೆ ಬಳಸಿದ ಸಲಕರಣೆಗಳನ್ನೇ ಯಾವುದೇ ಶುದ್ಧೀಕರಣವಿಲ್ಲದೆ ವೈದ್ಯರು ಮತ್ತೂ ಹತ್ತು ಜನಕ್ಕೆ ಬಳಸುತ್ತಿದ್ದರು; ರೋಗಿಗಳ ಹಾಸಿಗೆ-ದಿಂಬುಗಳನ್ನು ವಾರಗಟ್ಟಲೆ ಬದಲಾಯಿಸುತ್ತ ಇರಲಿಲ್ಲ; ಆಸ್ಪತ್ರೆಗೆ ಪೂರೈಕೆಯಾಗುತ್ತಿದ್ದ ನೀರು ಶುದ್ಧವಾಗಿರಲಿಲ್ಲ… ಹೀಗೆ ಹತ್ತುಹಲವು ಕಾರಣಗಳು ಒಟ್ಟಾಗಿ, ಅವರಿಗೆ ಸೂಕ್ಷ್ಮಾಣುಜೀವಿಗಳಿಂದ ಹರಡುವ ಕಾಯಿಲೆಗಳು ಅಮರಿಕೊಂಡು ಅವರು ಸಾಯುತ್ತಿದ್ದರು. ಒಂದು ವೇಳೆ ಆ ಯೋಧರು ಆಸ್ಪತ್ರೆಗೆ ಸೇರದೆ ತಂತಮ್ಮ ಮನೆಗಳಲ್ಲೇ ಚಿಕಿತ್ಸೆ ಪಡೆದಿದ್ದರೆ ಬದುಕುವ ಸಾಧ್ಯತೆ ಇತ್ತು! ಆಸ್ಪತ್ರೆಯೇ ಅವರ ಪಾಲಿಗೆ ಮರಣಮೃದಂಗವಾಗಿತ್ತು. ಈ ಎಲ್ಲ ಸತ್ಯಗಳು ಗೊತ್ತಾದದ್ದು ಫ್ಲಾರೆನ್ಸ್ ಬರೆದುಕೊಂಡಿದ್ದ ನೋಟ್ಸ್ಗಳಿಂದಾಗಿ. ಕಾರ್ಯ-ಕಾರಣ ಸಂಬಂಧವಿದ್ದರೂ ಅದು ಅಂದಿನ ಕಾಲದ ವ್ಯಕ್ತಿಗಳಿಗೆ ಸರಿಯಾಗಿ ಕಂಡಿರಲಿಲ್ಲ. ಅದರ ಪರಿಣಾಮ ಮಾತ್ರ ದುಬಾರಿಯಾಗಿತ್ತು; ಸಾವಿರಾರು ಸೈನಿಕರು ಗಾಯದ್ದಲ್ಲದ ಬೇರೆ ಕಾರಣಗಳಿಗಾಗಿ ಮೃತ್ಯುವನ್ನು ಅಪ್ಪಬೇಕಾಯಿತು.
ಪ್ರತಿಯೊಂದು ಕಾರ್ಯದ ಹಿಂದೆಯೂ ಒಂದು ಕಾರಣ ಇರಬೇಕು ಎಂಬುದು ಪಾಶ್ಚಾತ್ಯ ಕಲ್ಪನೆ. “ಕನಿಷ್ಠ ಒಂದು ಕಾರಣವಾದರೂ ಇದ್ದಿರಬೇಕು” ಎಂಬುದು ಭಾರತೀಯ ಚಿಂತನೆ. ಮಿಂಚು ಮಿಂಚಿ ಕೆಲಕ್ಷಣಗಳ ನಂತರ ಗುಡುಗು ಕೇಳುತ್ತದೆ – ಈ ಎರಡು ಸಂಗತಿಗಳನ್ನು ಹತ್ತುಹಲವು ಸಲ ಅದೇ ಕ್ರಮದಲ್ಲಿ ನಡೆದದ್ದನ್ನು ನೋಡಿದ ಬುದ್ಧಿ ತನ್ನ ತರ್ಕವನ್ನು ಹೂಡುತ್ತದೆ. ಪ್ರತಿ ಬಾರಿಯೂ ಮಿಂಚು ಕಂಡ ಕೆಲಕ್ಷಣಗಳ ನಂತರವೇ ಗುಡುಗು ಕೇಳುತ್ತದೆ ಎಂಬುದು ಗೊತ್ತಾದ ಮೇಲೆ, ಗುಡುಗಿಗೆ ಮಿಂಚೇ ಕಾರಣವೆಂಬುದು ಹೊಳೆಯುತ್ತದೆ. ಆದರೆ – ಅಷ್ಟೇ ಏನು? ಖಂಡಿತವಾಗಿಯೂ ಅಲ್ಲ. ಮಿಂಚು ಹೊಳೆಯಬೇಕಾದರೆ ಮೋಡಗಳಿರಬೇಕು; ಅವುಗಳು ಎಲೆಕ್ಟ್ರಾನುಗಳಿಂದ ತುಂಬಿತುಳುಕುತ್ತಿರಬೇಕು; ಎಲೆಕ್ಟ್ರಾನುಗಳು ಒಂದರಿಂದೊಂದಕ್ಕೆ ಹಾರಲು ಅನುವಾಗುವಂತೆ ಆ ಮೋಡಗಳು ತೀರ ಹತ್ತಿರವೂ ಅಲ್ಲದ ತೀರ ದೂರವೂ ಅಲ್ಲದ ಒಂದು ನಿರ್ದಿಷ್ಟ ಅಂತರದಲ್ಲಿರಬೇಕು; ಸಿಡಿಲಿನ ಅಬ್ಬರವನ್ನು ಶಬ್ದವಾಗಿ ದಾಟಿಸಬಲ್ಲ ಮಾಧ್ಯಮ ಬೇಕು. ಹೀಗೆ ಮೇಲ್ನೋಟಕ್ಕೆ ಕಾಣುವ ಮೂರ್ನಾಲ್ಕು ಮಹತ್ತರ ಕಾರಣಗಳೂ, ಮೇಲ್ನೋಟಕ್ಕೆ ಸಿಕ್ಕದ ಇನ್ನೂ ಹಲವಾರು ಕಾರಣಗಳೂ ಕೂಡಿ ಸಿಡಿಲೆಂಬ ಕಾರ್ಯವು ಸಂಭವಿಸುತ್ತದೆ. ಕಾರಣದಿಂದ ಕಾರ್ಯವು ಸಂಭವಿಸಿದಾಗ ಎರಡು ವಿಭಿನ್ನ ವಸ್ತುಗಳು ಉಂಟಾಗುವುದಿಲ್ಲ; ಒಂದೇ ವಸ್ತುವಿನ ಎರಡು ರೂಪಗಳು ಸಂಭವಿಸಬಹುದು. ಹಾಲಿಗೆ ಹೆಪ್ಪು ಹಾಕಿದಾಗ ಅದು ಮೊಸರಾಗುತ್ತದೆ – ಹಾಗೆಂದ ಮಾತ್ರಕ್ಕೆ ಅದು ಹಾಲು ಅಲ್ಲ ಎನ್ನುವಂತಿಲ್ಲ. ಅದು ಮೂಲಭೂತವಾಗಿ ಹಾಲೇ – ಆದರೆ ಈಗ ತನ್ನ ಸ್ವರೂಪವನ್ನು ಬದಲಾಯಿಸಿಕೊಂಡಿದೆ ಅಷ್ಟೆ. ಆಕ್ಸಿಜನ್ ಜೊತೆ ಹೈಡ್ರೋಜನ್ ನಿರ್ದಿಷ್ಟ ರೀತಿಯಲ್ಲಿ ಸಂಯೋಗವಾದಾಗ ನೀರು ಎಂಬ ವಸ್ತು ಹುಟ್ಟಿತು. ಆದರೆ ಅದು ಸಂಪೂರ್ಣವಾಗಿ ಹೊಚ್ಚಹೊಸ ಸಂಗತಿಯೇನಲ್ಲ – ಮೂಲದಲ್ಲಿ ಅದು ಈ ಎರಡು ಧಾತುಗಳದ್ದೇ ಗೊಂಚಲು.
ಭಾರತೀಯ ತತ್ತ್ವಜ್ಞಾನದಲ್ಲಿ ಹಲವು ಬಗೆಯ ಕಾರ್ಯ-ಕಾರಣ ಸಂಬಂಧಗಳನ್ನು ವಿವೇಚಿಸಲಾಗಿದೆ. ಮೊದಲನೆಯದು ಸಮವಾಯಿ ಕಾರಣ. ಅಂದರೆ ಹೊರಗಿನ ವ್ಯವಸ್ಥೆಗಳ ಹೆಚ್ಚಿನ ಬೆಂಬಲವಿಲ್ಲದೆ ಮೊದಲ ವಸ್ತುವೇ ಇನ್ನೊಂದಾಗಿ ಪರಿವರ್ತನೆಯಾಗುವ ಪ್ರಕ್ರಿಯೆ. ಉದಾಹರಣೆಗೆ ಕುಂಬಾರ ಮೊದಲು ಮಣ್ಣು ಕಲೆಸಿಕೊಳ್ಳುತ್ತಾನೆ. ನಂತರ ಅದರಿಂದಲೇ ಮಡಕೆಯನ್ನು ಮಾಡುತ್ತಾನೆ. ಮಣ್ಣು ಎಂಬ ಪೂರ್ವರೂಪವು ಹೋಗಿ ಮಡಕೆ ಎಂಬ ಉತ್ತರರೂಪವು ಬಂತು. ರೂಪ ಬದಲಾದರೂ ಅದು ಮೂಲತಃ ಮಣ್ಣೇ. ಅದನ್ನೀಗಲೂ ನಾವು ಮಣ್ಣಿನ ಮಡಕೆ ಎಂತಲೇ ಹೇಳುವುದು. ಹಲವಾರು ಜೀವಕೋಶಗಳು ಜೊತೆಗೂಡಿಕೊಂಡು ಕೊನೆಗೆ ಅಂಗಾಂಶ, ಅಂಗ ಎಂಬ ಸಂಯುಕ್ತ ವ್ಯವಸ್ಥೆ ಹುಟ್ಟುವುದನ್ನೂ ಇದಕ್ಕೇ ಹೋಲಿಸಬಹುದು. ಉದಾಹರಣೆಗೆ ಕಿವಿ ಎಂಬುದು ಒಂದು ಅಂಗ. ಆದರೆ ಅದು ಮೂಲತಃ ಕೋಟ್ಯಂತರ ಜೀವಕೋಶಗಳ ಸಂಗಮವೇ.
ಇನ್ನು ಅಸಮವಾಯಿ ಕಾರಣ ಎಂಬುದೊಂದಿದೆ. ಕುಂಬಾರ ಮಾಡಿದ ಮಡಕೆಗೆ ಬಣ್ಣ ಹಚ್ಚಿದೆವೆನ್ನಿ. ಇದರಿಂದ ಆ ಮಡಕೆಯ ಸೌಂದರ್ಯ ಹೆಚ್ಚಾಯಿತು. ಅಂದರೆ ಮಡಕೆಯ ಚಂದವನ್ನು ಹೆಚ್ಚಿಸಲು ಬಣ್ಣ ಕಾರಣವಾಯಿತು. ಬಣ್ಣವೇನೂ ಮಡಕೆಯ ಮೂಲದ್ರವ್ಯವಲ್ಲ. ಆದರೆ ಅದು ಮಡಕೆಯಲ್ಲಿ ಸೇರಿಕೊಂಡು ಮಡಕೆಗೊಂದು ಹೊಸ ಗುಣ ಬರಲು ಕಾರಣವಾಯಿತು. ಅದೇ ರೀತಿ, ಸ್ಫಟಿಕಗಳ ಬೆಳವಣಿಗೆಗೆ ಸರಿಯಾದ ತಾಪಮಾನ ಇರಬೇಕು. ಹಾಗೆಂದ ಮಾತ್ರಕ್ಕೆ ತಾಪಮಾನವೊಂದೇ ಸ್ಪಟಿಕಗಳ ಬೆಳವಣಿಗೆಗೆ ಕಾರಣ ಎಂದೇನೂ ಅರ್ಥವಲ್ಲ; ಅದಿದ್ದುದರಿಂದ ಇದು ಆಯಿತು ಅಷ್ಟೆ. ಹೀಗೆ ಒಂದು ವಸ್ತುವಿನ ಬದಲಾವಣೆಗೆ ನೇರ ಕಾರಣವಲ್ಲದೆ ಹೋದರೂ ಬಹುಮುಖ್ಯ ಪಾತ್ರವನ್ನು ವಹಿಸುವ ಅಂಶವಿದ್ದರೆ ಅದನ್ನು ಅಸಮವಾಯಿ ಕಾರಣ ಎನ್ನುತ್ತೇವೆ. ಗಣಿತ ಪರೀಕ್ಷೆಯಲ್ಲಿ ಒಳ್ಳೆಯ ಅಂಕ ಬರಲು ಕಾರಣ ಏನು ಎಂದರೆ – ಪರೀಕ್ಷೆಯ ಹಿಂದಿನ ಮೂರು ದಿನ ರಜೆ ಇದ್ದದ್ದು ಎಂದೊಬ್ಬ ವಿದ್ಯಾರ್ಥಿ ಹೇಳಬಹುದು. ರಜೆ ಇದ್ದುದೊಂದೇ ಒಳ್ಳೆಯ ಅಂಕಗಳಿಗೆ ಕಾರಣವೇನಲ್ಲ. ವಿದ್ಯಾರ್ಥಿಯ ತಯಾರಿ, ಪ್ರಶ್ನೆಪತ್ರಿಕೆಯ ಗುಣಮಟ್ಟ, ಅಂಕ ಹಾಕುವ ಶಿಕ್ಷಕ – ಹೀಗೆ ಹತ್ತುಹಲವು ಸಂಗತಿಗಳೂ ಕಾರಣವಿದ್ದಾವು; ಆದರೆ ಅವುಗಳ ಜೊತೆಗೆ ರಜೆಯೂ ಒಂದು ಮುಖ್ಯ ಕಾರಣವೇ ಆಯಿತು. ಅದು ಅಸಮವಾಯಿ ಕಾರಣ.
ನಿಮಿತ್ತ ಕಾರಣವೆಂಬುದು ಮೂರನೆಯದು. ಮಡಕೆ ಮಾಡಲು ಮಣ್ಣು ಬೇಕು ನಿಜ; ಆದರೆ ಮಣ್ಣಿದ್ದ ಮಾತ್ರಕ್ಕೆ ಮಡಕೆ ಆಗಿಬಿಡುತ್ತದೆಯೆ? ಇಲ್ಲ, ಮಣ್ಣನ್ನು ಮಡಕೆ ಮಾಡುವ ಕುಂಬಾರ ಇರಬೇಕಲ್ಲ? ಅವನೇ ನಿಮಿತ್ತ ಕಾರಣ.
ನಾಲ್ಕನೆಯದಾಗಿ ಸಹಕಾರಿ ಕಾರಣ ಎಂಬುದೊಂದಿದೆ. ಆಗುವ ಕೆಲಸಕ್ಕೆ ಸಹಕಾರ ಕೊಡುವುದು ಇದರ ಕೆಲಸ. ಮಣ್ಣಿದೆ; ಕುಂಬಾರನೂ ಇದ್ದಾನೆ. ಆದರೆ ಮಡಕೆ ಮಾಡುವ ಚಕ್ರವಿಲ್ಲದಿದ್ದರೆ ಇವರಿಬ್ಬರಿಂದ ಕೆಲಸ ಸಾಗದು. ಹಾಗೆ ನಿಮಿತ್ತಕ್ಕೆ ಸಹಕಾರಿಯಾಗಿ ಒದಗಿಬರುವ ಕಾರಣವೇ ಸಹಕಾರಿ ಕಾರಣ. ಅಡುಗೆಭಟ್ಟರ ಕೈಯಲ್ಲಿ ತರಕಾರಿ-ಬೇಳೆ ಇತ್ಯಾದಿ ಸಾಹಿತ್ಯವಷ್ಟೇ ಇದ್ದರೆ ಸಾಕೆ? ಅವನ್ನು ಬಳಸಿಕೊಂಡು ಸರಿಯಾಗಿ ಅಡುಗೆ ಮಾಡಲು ಪಾತ್ರೆ-ಸಟ್ಟುಗಗಳೂ ಬೇಕು. ಅಡುಗೆ ಮಾಡಲು ಅವು ಸಹಕಾರಿ.
ಈ ಇಷ್ಟು ಬಗೆಯ ಕಾರಣಗಳ ಜೊತೆ ಭಾರತೀಯ ತತ್ತ್ವವು ಹೇಳುವ ಇನ್ನೊಂದು ಮುಖ್ಯ ಸಂಗತಿ: ಏಕಕಾರಣೇನ ನ ಕಾರ್ಯಸಿದ್ಧಿಃ. ಅಂದರೆ ಕಾರ್ಯಸಿದ್ಧಿಯಾಗಲು ಒಂದೇ ಕಾರಣವೆಂಬುದು ಸರಿಯಲ್ಲ. ಹಲವು ಕಾರಣಗಳು ಬೇರೆ ಬೇರೆ ಪ್ರಮಾಣದಲ್ಲಿ ಕೂಡಿಬಂದ ಕಾರಣಕ್ಕೇ ಒಂದು ಕಾರ್ಯವು ಸಿದ್ಧಿಸಬಹುದು. ಒಂದು ಕಾರ್ಯವು ಸಿದ್ಧಿಸಲು ಹಲವು ಕಾರಣಗಳು ಇರಬೇಕು, ಇರುತ್ತವೆ ಎಂಬುದೇ ಭಾರತೀಯ ದೃಷ್ಟಿ. ಈ ಕಾರಣಗಳಲ್ಲಿ ಅಲ್ಪಸ್ವಲ್ಪ ವ್ಯತ್ಯಾಸಗಳು ಇದ್ದೇ ಇರುವುದರಿಂದ ಅಂತಿಮ ಫಲಿತಾಂಶಗಳಲ್ಲೂ ವ್ಯತ್ಯಾಸಗಳಿರುತ್ತವೆ. ಕೆಲವೊಮ್ಮೆ ಕಾರಣಗಳಲ್ಲಿ ಇರಬಹುದಾದ ಸಣ್ಣ ವ್ಯತ್ಯಾಸಗಳೇ ಅಂತಿಮ ಕಾರ್ಯಗಳಲ್ಲಿ ದೊಡ್ಡ ವ್ಯತ್ಯಾಸವನ್ನೂ ತರುತ್ತವೆ. ಆಧುನಿಕ ಜಗತ್ತು ಇದನ್ನು ‘ಪತಂಗ ಪರಿಣಾಮ’ (ಬಟರ್ಫ್ಲೈ ಎಫೆಕ್ಟ್) ಎಂದು ಕರೆಯುತ್ತದೆ.
