ನೇರವಾಗಿ ಗ್ರಾಹಕರಿಗೆ ಮಾರಾಟ ಮಾಡುವ ಮಹದೇವಸ್ವಾಮಿ
ಅಂಕಣ – ಕೃಷಿಯಿಂದ ಬದುಕು
- ಸಂದೀಪ್ ಮಂಜುನಾಥ್, ಎಂ.ಎಸ್ಸಿ. ಕೃಷಿ, ಹುಣಸೂರು
ಕೃಷಿ ಆರ್ಥಿಕತೆ ಮತ್ತು ಕೃಷಿ ಮನಃಶಾಸ್ತ್ರದ ಕುರಿತು ಹಿಂದಿನ ಅಂಕಣದಲ್ಲಿ ತಿಳಿಯುತ್ತಾ ಚಾಮರಾಜನಗರಕ್ಕೆ ಹೊಂದಿಕೊಂಡಂತೆ ಇರುವ ದೊಡ್ಡಪಾಯ ಪೇಟೆಯ ಪ್ರಗತಿಪರ ಕೃಷಿಕ ಮಹದೇವಸ್ವಾಮಿಯವರು ನಂಬರ್ ಒನ್ ಆಲೆಮನೆ ಕಟ್ಟಿದ್ದನ್ನು ತಿಳಿದೆವು. ಆಲೆಮನೆ ವ್ಯವಹಾರ ಉಚ್ಛ್ರಾಯ ಸ್ಥಿತಿಯಲ್ಲಿದ್ದಾಗ ಮುಂದೊಂದು ದಿನ ನೀರಿನ ಕೊರತೆ ಅಥವಾ ಮತ್ತಾವುದಾದರೂ ಕಾರಣಕ್ಕೆ ರೈತರು ಕಬ್ಬು ಬೆಳೆಯುವುದನ್ನು ಕಡಿಮೆ ಮಾಡಿದರೆ ಈ ಉದ್ಯಮ ನಡೆಸುವುದು ಕಷ್ಟ ಎನಿಸುತ್ತದೆ. ಸಣ್ಣ ಕೆಲಸ ಮಾಡುವಾಗಲೂ ಮಹದೇವಸ್ವಾಮಿ ಹತ್ತು ಸಲ ಯೋಚಿಸುತ್ತಾರೆ. ಮುಂದಾಗಬಹುದಾದ ಆಗುಹೋಗುಗಳ ಕುರಿತು ಆಳವಾಗಿ ತಿಳಿಯುತ್ತಾರೆ. ಖರ್ಚು ಕಡಿಮೆ, ಅಧಿಕ ಲಾಭ ವಾಕ್ಯವನ್ನು ಜೀವನದ ಮುಖ್ಯ ಮಂತ್ರವಾಗಿಸಿರುವ ಮಹದೇವಸ್ವಾಮಿ ಅವರಿಗೆ ನೈಸರ್ಗಿಕ ಕೃಷಿಯ ಕುರಿತು ಆಸಕ್ತಿ ಮೂಡುತ್ತದೆ. ‘ಯದ್ಭಾವಮ್ ತದ್ಭವತಿ’ ಎನ್ನುವ ಹಾಗೆ ಅದೇ ಸಮಯದಲ್ಲಿ ಸರ್ಕಾರದ ಸಾವಯವ ಕೃಷಿ ಭಾಗ್ಯ ಯೋಜನೆ ಅವರ ಊರಿಗೆ ಬರುತ್ತದೆ. ಯೋಜನೆಯ ಮುಂದಾಳತ್ವ ವಹಿಸಿದ ಮಹದೇವಸ್ವಾಮಿ ಅವರು 2014ರಿಂದ ಸಂಪೂರ್ಣವಾಗಿ ರಾಸಾಯನಿಕಗಳನ್ನು ಬಳಸುವುದನ್ನು ನಿಲ್ಲಿಸುತ್ತಾರೆ. ಜೀವಾಮೃತ ತಯಾರಿಸಲು ಎರಡು ತೊಟ್ಟಿಗಳನ್ನು ಆಲೆಮನೆ ಪಕ್ಕದಲ್ಲೇ ನಿರ್ಮಿಸುತ್ತಾರೆ. ಜಮೀನಿನಲ್ಲಿ ವಾಣಿಜ್ಯ ಬೆಳೆಗಳ ಜೊತೆ ಸ್ವಲ್ಪ ಜಾಗದಲ್ಲಿ ರಾಗಿ, ಎಳ್ಳು, ಹುಚ್ಚೇಳು, ನವಣೆ, ಹಲಸಂದೆ, ಉದ್ದು, ಹೆಸರು, ಅವರೆ, ತೊಗರಿ, ಸಾಸಿವೆ, ಬದುಗಳಲ್ಲಿ ಕುಂಬಳ, ಹೀರೆ, ಸೋರೆ, ಚಪ್ಪರದ ಅವರೆ ಹೀಗೆ 32ಕ್ಕೂ ಹೆಚ್ಚು ಬೆಳೆ ಬೆಳೆಯಲು ಪ್ರಾರಂಭಿಸುತ್ತಾರೆ. ಇದರಿಂದ ಮನೆಗೆ ಬೇಕಾದ ಬಹುತೇಕ ಕಾಳುಗಳು ಜಮೀನಿನಲ್ಲೇ ಲಭಿಸುತ್ತದೆ. ಈ ರೀತಿ ಮನೆ ಬಳಕೆಗೆ ಬೇಕಾದ ಸಾಮಗ್ರಿಗಳನ್ನು ಹೊರಗಿನಿಂದ ಖರೀದಿಸುವುದನ್ನು ಬಿಟ್ಟರೆ ರೈತರಿಗೆ ಎಷ್ಟೋ ಉಳಿತಾಯವಾಗುತ್ತದೆ. ಅದೂ ಸಾವಯವ ಕೃಷಿ ಪದ್ಧತಿಯಲ್ಲಿ ಬೆಳೆದಿರುವ ಕಾರಣ ಕೀಟನಾಶಕಗಳ ಉಳಿಕೆ ಅಂಶ ಇಲ್ಲದೆ ವಿಷಮುಕ್ತವಾದ ಆಹಾರ ದೊರೆಯುತ್ತದೆ. ಹಸುಗಳಿಗೆ ರಾಗಿ ಮತ್ತಿತರ ಬೆಳೆಗಳ ಹುಲ್ಲು, ವರ್ಷ ಪೂರ್ತಿ ಒಣ ಮೇವಾಗಿ ಉಪಯೋಗವಾಗುತ್ತದೆ. ಇನ್ನು ಸಪೋಟ, ಮಾವು, ಪಪ್ಪಾಯಿ ರೀತಿಯ ಹಣ್ಣಿನ ಗಿಡಗಳನ್ನು ಅಲಲ್ಲಿ ನೆಟ್ಟಿದ್ದು ಮನೆಗೆ ಬೇಕಾದ ಹಣ್ಣು ಹಂಪಲು ಸಹ ಇದರಿಂದ ಲಭಿಸುತ್ತಿದೆ. ರೈತರು ಯಾವುದೇ ಒಂದು ಬೆಳೆಯನ್ನು ಮಾತ್ರ ಬೆಳೆಯದೇ ಬಹುಬೆಳೆ ಪದ್ಧತಿಯಲ್ಲಿ ಮಾರಾಟಕ್ಕಾಗಿ ಮತ್ತು ಮನೆಗಾಗಿ ಬೆಳೆಗಳನ್ನು ಬೆಳದರೆ ಸ್ವಾವಲಂಬಿ ಬದುಕು ನಡೆಸಬಹುದಾಗಿದೆ.
ಗುತ್ತಿಗೆಗೆ ಪಡೆದ ಜಮೀನಿನಲ್ಲೂ ನೈಸರ್ಗಿಕ ಕೃಷಿ
ನಾನು ಕೆಲವೊಮ್ಮೆ ಬಾಳೆ, ಅರಿಶಿಣ ಮತ್ತು ಕಬ್ಬು ಬೆಳೆಯಲು ಇತರರ ಜಮೀನಿನ್ನು ಗುತ್ತಿಗೆಗೆ ಪಡೆಯತ್ತೇನೆ. ಸಾಮಾನ್ಯವಾಗಿ ಎಲ್ಲರೂ ಗುತ್ತಿಗೆ ಜಮೀನಿಗೆ ಹೆಚ್ಚು ತಿಪ್ಪೆಗೊಬ್ಬರ ಹಾಕುವುದಿಲ್ಲ. ಆದರೆ ನಾನು ಈ ಜಮೀನಿನಲ್ಲೂ ಯಾವುದೇ ರಾಸಾಯನಿಕ ಗೊಬ್ಬರ/ಕೀಟನಾಶಕ ಬಳಸುವುದಿಲ್ಲ. ಸರಿಯಾಗಿ ಯೋಜನೆ ಮಾಡಿ ಬೆಳೆ ಬೆಳೆದರೆ ಮೊದಲ ವರ್ಷದಲ್ಲೇ ಉತ್ತಮ ಇಳುವರಿ ಪಡೆಯಬಹುದಾಗಿದೆ. ಹೀಗೆ ಬೆಳೆದ ಕಬ್ಬನ್ನು ನಮ್ಮ ಆಲೆಮನೆಯಲ್ಲೇ ಸಂಸ್ಕರಿಸಿ ಬೆಲ್ಲ ತಯಾರಿಸುತ್ತೇವೆ. ಬೆಲ್ಲದ ಪುಡಿಗೆ ಬಹಳ ಬೇಡಿಕೆ ಇರುವ ಕಾರಣ ಇತ್ತೀಚಿಗೆ ಪುಡಿ ಬೆಲ್ಲವನ್ನೇ ಹೆಚ್ಚು ಉತ್ಪಾದಿಸುತ್ತೇವೆ.
ಸಾವಯವ ಸೊಪ್ಪು ತರಕಾರಿ ಕೃಷಿ ಗ್ರಾಹಕರಿಗೆ ನೇರ ಮಾರಾಟ
ನೈಸರ್ಗಿಕ ಕೃಷಿ ಮಾಡುವ ಕಾರಣ ಒಮ್ಮೊಮ್ಮೆ ಇಳುವರಿ ಕಡಿಮೆಯಾಗುವ ಸಾಧ್ಯತೆಯಿದೆ. ಹಾಗಾಗಿ ನೈಸರ್ಗಿಕ ಕೃಷಿಕರು ತಮ್ಮ ಉತ್ಪನ್ನವನ್ನು ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಗೆ ಮಾರಾಟಕ್ಕೆ ತೆಗೆದುಕೊಂಡು ಹೋಗದೆ ನೇರವಾಗಿ ಗ್ರಾಹಕರಿಗೆ ಮಾರಾಟ ಮಾಡಿದರೆ ಸ್ವಲ್ಪ ಲಾಭ ನೋಡಬಹುದು. ಇಲ್ಲವಾದರೆ ನಾವು ಕಷ್ಟಪಟ್ಟು ದುಡಿದದ್ದೆಲ್ಲಾ ದಲ್ಲಾಳಿಯ ಪಾಲಾಗುತ್ತದೆ. ನಮಗೆ ಚಾಮರಾಜನಗರ ಬಹಳ ಹತ್ತಿರವಾಗಿದೆ. ಹಾಗಾಗಿ ನಾನು ಬೆಳೆಯುವ ಸೊಪ್ಪು ತರಕಾರಿಗಳನ್ನು ನಗರದಲ್ಲಿ ರಸ್ತೆ ಬದಿ ಇಟ್ಟು ಮಾರಾಟಮಾಡಲು ಪ್ರಾರಂಭಿಸಿದೆ. ಆದರೆ ಇದು ಸುಲಭದ ಮಾರ್ಗವಲ್ಲ. ಗ್ರಾಹಕರು ನಮ್ಮನ್ನು ನೂರು ಪ್ರಶ್ನೆ ಕೇಳುತ್ತಾರೆ. ಚೌಕಾಸಿ ಮಾಡುತ್ತಾರೆ. ಕೆಲವೊಮ್ಮೆ ಹೀಯಾಳಿಸುತ್ತಾರೆ. ಎಲ್ಲವನ್ನೂ ಸಮಾಧಾನದಿಂದ ಸ್ವೀಕರಿಸಬೇಕು. ಕೆಲವರು ನೀವು ಸಾವಯವದಲ್ಲಿ ಬೆಳೆದಿರುವುದಕ್ಕೆ ಏನು ಆಧಾರ? ಹೇಗೆ ನಂಬುವುದು ಎಂದು ಪ್ರಶ್ನಿಸಿದರು. ಅದಕ್ಕೆ ಉತ್ತರವಾಗಿ ನನ್ನ ಭಾವಚಿತ್ರ ಮತ್ತು ತೋಟದ ಮಾಹಿತಿ ಇರುವ ಫಲಕ (flex banner) ಸಿದ್ಧಪಡಿಸಿ ನಾನು ರಸ್ತೆ ಬದಿ ಮಾರಾಟ ಮಾಡುವ ಜಾಗದಲ್ಲಿ ಇರಿಸಿದೆ. ನಮ್ಮ ತೋಟಕ್ಕೆ ಯಾವಾಗ ಬೇಕಾದರೂ ಬಂದು ತಾವು ಪರಿಶೀಲಿಸಬಹುದು ಎಂದು ಧೈರ್ಯವಾಗಿ ಗ್ರಾಹಕರಿಗೆ ಹೇಳಿದೆ. ನಗರದ ಹೊರವಲಯದಲ್ಲಿರುವ ಕಾರಣ ಕೆಲ ಗ್ರಾಹಕರು ನೇರವಾಗಿ ತೋಟಕ್ಕೆ ಆಗಮಿಸಿ ನಾವು ಅನುಸರಿಸುತ್ತಿರುವ ಪದ್ಧತಿಗಳ ಕುರಿತು ಮಾಹಿತಿ ಪಡೆದರು. ಅವರು ಬಾಯಿಂದ ಬಾಯಿಗೆ ನಮ್ಮ ಕುರಿತು ಪ್ರಚಾರ ಮಾಡುತ್ತಾ ಇಂದು ನಾನು ಮಾರಾಟ ಮಾಡಲು ಎಲ್ಲಿಗೂ ಹೋಗುವುದಿಲ್ಲ. ಬದಲಾಗಿ ಗ್ರಾಹಕರೇ ನಮ್ಮ ತೋಟಕ್ಕೆ ಆಗಮಿಸಿ ಸೊಪ್ಪು, ತರಕಾರಿ, ಬೆಲ್ಲ ಮತ್ತು ಆ ಸಮಯದಲ್ಲಿ ಏನು ಸಿಗುತ್ತದೋ ಎಲ್ಲವನ್ನೂ ಖರೀದಿಸುತ್ತಿದ್ದಾರೆ. ಇದರಿಂದ ಹೆಚ್ಚಿನ ಲಾಭ ಮತ್ತು ನನ್ನ ಸಮಯ ಉಳಿಯುತ್ತಿದೆ.
ಯುವಕರಿಗೆ ಮಾರ್ಗದರ್ಶನ
ಕೇವಲ ನಾವು ಮಾತ್ರ ಜೀವನದಲ್ಲಿ ಮುಂದೆಬರದೇ ಇತರರೂ ನನ್ನ ಹಾಗೆ ನೈಸರ್ಗಿಕ ಕೃಷಿ ಮಾಡಬೇಕು, ಭೂಮಿಯನ್ನು ಉಳಿಸಬೇಕೆಂದು ನನ್ನ ಅನುಭವ ಹಂಚಿಕೊಳ್ಳಲು ಸದಾ ಸಿದ್ಧವಾಗಿದ್ದೇನೆ. ಗುಂಪಾಗಿ ಯಾರಾದರೂ ನಮ್ಮ ತೋಟಕ್ಕೆ ಆಗಮಿಸಿದರೆ ನೈಸರ್ಗಿಕ ಕೃಷಿಯ ಪೂರ್ಣ ಮಾಹಿತಿ ನೀಡಲಾಗುತ್ತದೆ. ಸದ್ಯ ನಮ್ಮ ತೋಟದಲ್ಲಿ ಬೆಳೆಯುವ ಕಬ್ಬನ್ನು ಮಾತ್ರ ನಮ್ಮ ಆಲೆಮನೆಯಲ್ಲಿ ಅರೆಯಲಾಗುತ್ತಿದೆ. ಅದರ ಕುರಿತು ಮಾಹಿತಿ ಬೇಕಿದ್ದರೂ ಆಲೆಮನೆ ನಡೆಯುವಾಗ ಆಗಮಿಸಿ ವಿಷಯ ಸಂಗ್ರಹಿಸಬಹುದು. ನನ್ನ ಬ್ಯಾಂಕ್ ಬ್ಯಾಲೆನ್ಸ್ ಅಷ್ಟಾಗಿ ಇಲ್ಲದಿದ್ದರೂ ಭೂಮಿಯ ಫಲವತ್ತತೆ ಹೆಚ್ಚಾಗಿದೆ ಎಂದು ಹೆಮ್ಮೆಯಿಂದ ಹೇಳಬಹುದು. ನೈಸರ್ಗಿಕ ಕೃಷಿ ಮಾಡುವುದರಿಂದ ಹಿಟ್ಟು ಬಟ್ಟೆಗೆ ಕೊರತೆಯಿಲ್ಲ. ಮೌಲ್ಯವರ್ಧನೆ ಮಾಡಿ ಗ್ರಾಹಕರಿಗೆ ನೇರವಾಗಿ ಮಾಡಿದರೆ ರೈತರು ಮತ್ತಷ್ಟು ಆರ್ಥಿಕವಾಗಿ ಸಬಲರಾಗಬಹುದು. ಹೊಸದಾಗಿ ಕೃಷಿಗೆ ಆಗಮಿಸುವವರು ಈ ವಿಷಯ ಮರೆಯಬಾರದು. ಒಂದು ವೇಳೆ ಕೂಲಿ ಕೆಲಸದವರು ಕೈ ಕೊಟ್ಟರೂ ಎಲ್ಲಾ ಕೆಲಸ ಮಾಲಿಕರೇ ಮಾಡುವಂತಿರಬೇಕು. ಎಲ್ಲದಕ್ಕೂ ಮುಂದಾಲೋಚನೆ ಮಾಡಬೇಕು. ಒಂದು ವಾರದಲ್ಲಿ ಕಟಾವಿಗೆ ಸಿದ್ಧ ಎಂದು ತಿಳಿದಿರುತ್ತದೆ. ಕೂಲಿ ಆಳುಗಳ ಸಮಸ್ಯೆ ಎಂದೂ ಗೊತ್ತಿರುತ್ತದೆ. ಆದರೂ ಮೈಗಳ್ಳತನ ಮಾಡಿ ವಾರದ ನಂತರ ನೋಡೋಣ ಎಂದರೆ ಕೃಷಿಗೆ ಯಾರೂ ಬರಬೇಡಿ. ವಾರದ ಮೊದಲೇ ಆಳುಗಳಿಗೆ ಮುಂಗಡ ಹಣ ನೀಡಿ ಇಂತಹ ದಿನ ಬರಲೇಬೇಕು ಎಂದು follow up ಮಾಡಬೇಕು. ಕಟಾವಿಗೂ ಮುನ್ನ ಉತ್ಪನ್ನ ಎಷ್ಟು ಬರುತ್ತದೆ ಎಂಬ ಅಂದಾಜಿರಬೇಕು. ಅದನ್ನು ಯಾರಿಗೆ ಎಷ್ಟು ದರಕ್ಕೆ ಮಾರಬೇಕು ಎನ್ನುವ ವಿವೇಚನೆ ನಮ್ಮಲಿರಬೇಕು. ಇದು ಒಂದು ದಿನಕ್ಕೆ ಸಿದ್ಧಿಸುವುದಿಲ್ಲ. ಒಂದು ಸಲಕ್ಕೆ ಯಾವುದೂ ಬರುವುದಿಲ್ಲ. ಕಾಲಕ್ರಮೇಣ ಎಲ್ಲವೂ ಭೂಮಿತಾಯಿ ಕಲಿಸುತ್ತಾಳೆ. ನಾವು ತಾಳ್ಮೆಯಿಂದ ಕಲಿಯಬೇಕು. ಅಪ್ಡೇಟ್ ಆಗದಿದ್ದರೆ ಫೋನ್ ಕೂಡ ಕೆಲಸ ಮಾಡುವುದಿಲ್ಲ. ಅಂತಹದರಲ್ಲಿ ಕೃಷಿ ಎನ್ನುವುದು ನಿತ್ಯ ಬದಲಾಗುವ, ಹೊಸ ಹೊಸ ಸವಾಲುಗಳಿಗೆ ತೆರೆದುಕೊಳ್ಳಬೇಕಾದ, ನಾವು ಅಂದುಕೊಳ್ಳುವುದಕ್ಕಿಂತ ವಿಭಿನ್ನವಾಗಿರುವ ಕ್ಷೇತ್ರ. ನಮ್ಮಕಡೆ ಒಂದು ಗಾದೆ ಮಾತಿದೆ. ‘ಜಾಣನಿಗೆ ಮೂರು ದಾರಿ, ಕೋಣನಿಗೆ ಒಂದೇ ದಾರಿ’ ಎಂದು. ಆಯ್ಕೆ ನಮಗೆ ಬಿಟ್ಟದ್ದು. ಈ ರೀತಿ ಯೋಚನೆ ಮಾಡಿದುದಕ್ಕೆ ನಾನು 2014ರಿಂದ ಒಮ್ಮೆಯೂ APMCಗೆ ಕಾಲಿಟ್ಟಿಲ್ಲ. ಗೊಬ್ಬರದ ಅಂಗಡಿಯಿಂದ ಏನನ್ನೂ ಖರೀದಿಸಿಲ್ಲ. ಗ್ರಾಹಕರೇ ನಮ್ಮ ತೋಟಕ್ಕೆ ಆಗಮಿಸಿ ನಾನು ಬೆಳೆದುದನ್ನು ಖರೀದಿಸುವ ಸ್ಥಿತಿ ನಿರ್ಮಾಣವಾಗಿದೆ ಎಂದು ತಮ್ಮ ಸುದೀರ್ಘ ಕೃಷಿ ಅನುಭವ ಹಂಚಿಕೊಂಡರು ಮಹದೇವಸ್ವಾಮಿ. ನಿಮಗೂ ಇವರ ಉತ್ಪನ್ನಗಳು ಮತ್ತು ಮಾರ್ಗದರ್ಶನ ಬೇಕಾದಲ್ಲಿ ಸಂಪರ್ಕಿಸಿ +91 89716 70774.
