ಕಾವ್ಯಕುತೂಹಲ
- ಮೇದಿನಿ ಕೆಸವಿನಮನೆ, ಸಹಾಯಕ ಪ್ರಾಧ್ಯಾಪಕಿ
ಕೃಷ್ಣಗೀತೆಗಳು ಎಷ್ಟೊಂದಿವೆ! ಗೋಕುಲದ್ದು, ಬೃಂದಾವನದ್ದು, ಮಧುರೆಗೆ ಹೊರಟದ್ದು, ಹೊರಟ ನಂತರದ್ದು! ಬಹುಶಃ ಅವನು ಬೆಳೆದು ಪಾಂಡವರ ಬಾವನಾಗಿ ಕಾವನಾದ ಮೇಲೆ ಗೀತೆಗಳಿಗೆ ಅವಕಾಶವಾಗಲಿಲ್ಲ ಎನಿಸುತ್ತದೆ. ಅಲ್ಲಿ ಗೀತೆ ಕದನ ಕಾವ್ಯವಾಯಿತು. ಕೊಳಲಿನ ಮಾಧುರ್ಯಕ್ಕಿಂತ ಪಾಂಚಜನ್ಯವೇ ಮೇಲಾಗಿ, ಯುದ್ಧವೇ ಬದುಕಾಗಿಬಿಟ್ಟಿತೇನೋ ಅವನಿಗೆ. ಈ ಸಂಧಾನ, ಶಾಂತಿ, ಉಪಾಯ, ರಕ್ಷಣೆ ಇತ್ಯಾದಿಗಳ ಜವಾಬ್ದಾರಿಯಲ್ಲಿ ಕೃಷ್ಣ ತನ್ನ ವೈಯಕ್ತಿಕ ಬದುಕನ್ನೇ ಕಳೆದುಕೊಂಡುಬಿಟ್ಟನೇನೋ ಅನಿಸುತ್ತದೆ.
ಒಂದಷ್ಟು ಕಾಲದ ಗೋಕುಲದ ಬದುಕನ್ನು ಬಿಟ್ಟರೆ ಅವನದ್ದು ಸದಾ ಹೋರಾಟವೇ. ಗೋಕುಲದಲ್ಲಾದರೂ ಅವನಿಗೆ ನೆಮ್ಮದಿ ಇತ್ತಾ? ಶಕಟ, ಧೇನುಕ, ಬಕ, ಕಾಳಿಂಗ, ಪೂತನಿಯರು ಹೆಜ್ಜೆ ಹೆಜ್ಜೆಗೂ ಇದ್ದರು. ಆ ವಯಸ್ಸಿಗೆ ಅವನಿಗೆ ಅದೆಲ್ಲ ಬೇಕಿತ್ತಾ? ಅವನಿಗಾಗ ವಯಸ್ಸಾದರೂ ಎಷ್ಟು? ಬಾಲಕ. ಆದರೂ ಆತ ಎಲ್ಲರನ್ನೂ ಮಣಿಸಿ ಬದುಕನ್ನು ಚಂದಮಾಡಿಕೊಂಡಿದ್ದ. ಕಷ್ಟಗಳ ಮುಳ್ಳಿನ ನಡುವೆ ಅರಳುವ ಸುಂದರ ಗುಲಾಬಿಯಂತೆ ಆತ ತನ್ನ ಬದುಕನ್ನೇ ಸಂದೇಶವಾಗಿಸಿದ್ದ. ನಂತರದ್ದೇ, ಮಥುರೆಗೆ ಹೋದ ಮೇಲಿನದ್ದೇ ಅವನ ನಿಜ ಹೋರಾಟ. ಹೋಗುವಾಗಲೇ ಅವನಿಗೆ ಸಾವಿಗಾಗಿಯೇ ಆಹ್ವಾನ, ನೆಪ ಬಿಲ್ಲಹಬ್ಬದ್ದಾದರೂ, ಅಲ್ಲಿ ಇದ್ದುದು ಸಾವೇ. ಆತ ಅನಂತನಾದದ್ದಕ್ಕೆ ಬದುಕಿದ. ಅವನನ್ನು ದೇವನೆನ್ನಬಹುದು, ಆದರೆ ಹುಟ್ಟಿದ್ದು ಮನುಷ್ಯನಾಗಿಯಲ್ಲವೇ? ಬದುಕು ಇರಬೇಕಾದುದು ಮನುಷ್ಯರಂತೆಯೇ, ಅನಿವಾರ್ಯ. ಹಾಗಾಗಿ ಬರೀ ಹೋರಾಟ. ತಾಯಿ ಸತ್ತರೂ ಸೋದರಮಾವ ಉಳಿಯಬೇಕು ಎನ್ನುತ್ತದೆ ಗಾದೆ. ಆದರೆ ಇವನಿಗೆ ಸೋದರಮಾವನೇ ಸಾವು. ಎಲ್ಲಕ್ಕೂ ಮೀರಿದ ಬದುಕು ಇವನದ್ದು.
ಅಂತೂ ಆತ ಬಿಲ್ಲಹಬ್ಬದ ನೆವಕ್ಕಾಗಿ ಮಥುರೆಗೆ ಹೋದ. ಅಥವಾ ಅವನನ್ನು ಕರೆದೊಯ್ಯಲಾಯಿತು. ಹಾಗೊಂದು ನೆಪದಲ್ಲಿ ಹೋದವನು ಮತ್ತೆ ಬರಲಿಲ್ಲವೇ? ಬಂದರೂ ಆತ ಗೋಕುಲದಲ್ಲಿ ಉಳಿಯಲಿಲ್ಲವೇ? ಅವನನ್ನು ಸಾಕಿದ, ಅವನ ಮೇಲೆ ಪ್ರಾಣವನ್ನೇ ಇಟ್ಟುಕೊಂಡ ಯಶೋಧೆಯ ಕತೆಯೇನು? ಹೆತ್ತರಷ್ಟೇ ಮಗನಲ್ಲವಲ್ಲ? ಅಷ್ಟು ಕಾಲ ಮಡಿಲೊಳಗಿಟ್ಟುಕೊಂಡು ಕಾಪಿಟ್ಟ ಈ ಅಮ್ಮನ ಒಡಲ ದುಃಖ ಕಡಲಿಗಿಂತ ಹಿರಿದಲ್ಲವೇ? ಇಲ್ಲಿಯ ಕಥೆಯೇನು? ರಾಧೆಯೇನಾದಳು? ಸೇರುವುದು ಹಣೆಯಲ್ಲಿ ಇರಲಿಲ್ಲ, ಸರಿ. ಆದರೆ ನೆನಪು? ಅವನಿಗಾಗಿ ಹಂಬಲಿಸಿದ ಘಳಿಗೆಗಳು?
ಹೆಚ್.ಎಸ್. ವೆಂಕಟೇಶ ಮೂರ್ತಿಯವರ ಒಂದು ಗೀತೆಯಿದೆ. ‘ಮಧುರೆಗೆ ಹೋದನು ಮಾಧವ, ಬರುವನೋ ಬಾರನೋ ಹೋದವ…!!’. ರಾಜು ಅನಂತಸ್ವಾಮಿ ಎಷ್ಟು ಮಧುರವಾಗಿ ಮತ್ತು ಭಾವಪೂರ್ಣವಾಗಿ ಹಾಡಿದ್ದಾರೆಂದರೆ, ಧ್ವನಿಯ ಜೇನು ಹಾಗೂ ಆ ಭಾವದ ರುಚಿಯೇ ಬೇರೆ. ಬಹುಶಃ ಮತ್ತೆ ಯಾರು ಹಾಡಿದರೂ ಈ ಹಾಡು ಜೀವ ಪಡೆಯುವುದಿಲ್ಲ. ಪದಗಳ ನಡುವೆ ತೆಗೆದುಕೊಳ್ಳುವ ಉಸಿರು ಕೂಡ ಹಾಡಿಗೆ ಜೀವ ಕೊಡುತ್ತದೆ. ಪದಗಳ ಉಚ್ಚಾರವೇ ಹಾಡನ್ನು ಎದೆಗಿಳಿಸುತ್ತದೆ. ರಾಗಕ್ಕಿಂತಲೂ ಅದನ್ನು ಹೊರಡಿಸುವ ವಿಧಾನವೇ ರಾಜು ಅನಂತಸ್ವಾಮಿಯವರ ತಾಕತ್ತು. ನನಗೆ ತೀವ್ರವಾಗಿ ಅನ್ನಿಸುವ ಸಂಗತಿ, ಕನ್ನಡ ಭಾವಗೀತೆಯ ಪ್ರಪಂಚದ ಅತ್ಯಂತ ದುರದೃಷ್ಟಕರ ಸಂಗತಿಯೆಂದರೆ ರಾಜು ಅನಂತಸ್ವಾಮಿಯವರ ಸಾವು. ಅವರಿದ್ದಿದ್ದರೆ, ಭಾವಗೀತೆಗಳು ಇನ್ನಷ್ಟು ಶ್ರೀಮಂತವಾಗುತ್ತಿತ್ತು. ಕವಿಗಳು ಇವರ ಕಾರಣಕ್ಕಾಗಿಯೇ ಬರೆಯುತ್ತಿದ್ದರೇನೋ.
ಇದಕ್ಕಿಂತ ಮೊದಲು ಇದೇ ಕವಿಯ ಒಂದು ಗೀತೆಯಿದೆ. ‘ಎಲ್ಲಿಗೆ ಹೋದನು ನಿಲ್ಲದೆ ಮಾಧವ, ಎಲ್ಲರ ನಲ್ಲ ಶ್ರೀ ಗೋಪಾಲ’ ಎಂದು. ಇಡೀ ಕವಿತೆ ರಾಧೆಯ ವಿರಹ, ಕಾಯುವಿಕೆಯ ತಪನೆಯನ್ನು ಹೇಳುವಂಥದ್ದು. ಅವನೆಲ್ಲಿ ಎಂದು ಕೇಳುವಂಥದ್ದು. ಆ ಹಾಡಿಗೆ ಉತ್ತರವಾಗಿ ಈ ಹಾಡು, ಮಧುರೆಗೆ ಹೋದನು ಮಾಧವ!. ಮಥುರೆ/ಮಧುರೆಗೆ ಹೋಗುವುದು ಸಹಜ, ಏಕೆಂದರೆ ಅದು ಅವನ ಊರು. ಹೋದಮೇಲೆ ಗೋಕುಲಕ್ಕೆ ಹಿಂದಿರುಗುತ್ತಾನೆಯೇ ಎಂಬುದೊಂದು ಪ್ರಶ್ನೆ, ಬರಲಿ ಎನ್ನುವ ನಿರೀಕ್ಷೆ, ಬರಬೇಕು ಎನ್ನುವ ಹಂಬಲ, ಬರದೇ ಹೋದರೆ ಎನ್ನುವ ಬೇಸರ, ಬರುವನೋ ಇಲ್ಲವೋ ಎನ್ನುವ ಅನುಮಾನದಲ್ಲಿಯೇ ಈ ಹಾಡು ಆರಂಭವಾಗುತ್ತದೆ.
ಕೃಷ್ಣ ಗೋಕುಲಕ್ಕೆ ಬಂದದ್ದು ಮಾವನ ಮನೆ ಮಧುರೆಯಿಂದ. ಮತ್ತೆ ಆತ ಅಲ್ಲಿಗೇ ಹೋಗಬೇಕು, ಹೋದ. ಇಷ್ಟು ಕಾಲ ಬೆಳೆಸಿದ ನಂದ – ಯಶೋಧೆ, ಪ್ರಾಣಸಖಿ ರಾಧೆ, ಗೆಳೆಯ ಮಕರಂದ, ಬೃಂದಾವನದ ಗೋಪಿಕೆಯರು, ಹಸುಕರು, ಬೆಟ್ಟ, ಗದ್ದೆ, ಯಮುನಾ ಎಲ್ಲವನ್ನೂ ಬಿಟ್ಟು ಆತ ಮಧುರೆಗೆ ನಡೆದ. ಹೋಗುವಾಗ ಆತನಿಗೆ ಯಾವ ಭಾವ ಉದಯಿಸಿರಬಹುದು? ಕಷ್ಟವಾಗಲಿಲ್ಲವೇ? ತಾಯಿ, ತಂದೆ ಮತ್ತು ಸಖಿಯನ್ನು ಬಿಡುವುದು ಅವನಿಗೆ ಸಲೀಸಾಯಿತೇ? ರಾಸಲೀಲೆಯ ಕ್ಷಣಗಳು ಕಣ್ಮುಂದೆ ಬರಲಿಲ್ಲವೇ? ಆತ ಆಟವಾಡಿದ ಬಯಲು, ಓಡಾಡಿದ ದಾರಿ, ಕೂತು ಸಾವರಿಸಿಕೊಂಡ ಮರ, ಕಣ್ಣಾಮುಚ್ಚಾಲೆ ಆಡಿ, ಜೋಕಾಲಿ ಜೀಕಿ, ಚಿಣ್ಣಿಕೋಲು, ಚೆಂಡು ಬುಗುರಿಯಾಡಿದ ಸ್ನೇಹಿತರನ್ನು ಬಿಟ್ಟು ಆತ ಹೊರಟಿದ್ದಾದರೂ ಯಾಕೆ? ಕರ್ತವ್ಯದ ಕಾರಣವೇ? ಕಂಸನನ್ನು ಕೊಲ್ಲುವ ಕೆಲಸಕ್ಕಲ್ಲದೆ ಮತ್ತೆಲ್ಲಿಗೆ? ಕೊಂದ ಮೇಲೆ ಹಿಂದಿರುಗುವ ಯೋಚನೆ ಇತ್ತೇ? ಇತ್ತಾದರೆ ಯಾಕೆ ಬರಲಿಲ್ಲ? ಮತ್ತು ಯಾಕೆ ಇಲ್ಲಿ ಇರಲಿಲ್ಲ? ಹೋದಮೇಲೆ ಇಲ್ಲೇನಾಗಿರಬಹುದು?

ಗೋಕುಲದಲಿ ಪದ ಉಳಿದವು
ರಾಗಗಳೆಲ್ಲೋ ಕಳೆದವೋ…
ಇಷ್ಟು ಸರಳವಾದ ಪದದಲ್ಲಿ ತೀವ್ರ ಪರಿಣಾಮವನ್ನು ಉಂಟುಮಾಡಿದ್ದಾದರೂ ಹೇಗೆ ಎಂದು ನಾನು ಯೋಚಿಸುತ್ತೇನೆ. ಪದವೆಂದರೆ word ಎಂದುಕೊಳ್ಳೋಣ. ಅವನ ಕುರಿತಾಗಿ ಪದಗಳಷ್ಟೇ ಉಳಿದವು. ಅವನಾಡಿದ ಪದಗಳಷ್ಟೇ ಉಳಿದವು. ಅದರ ಭಾವ ಮತ್ತು ರಾಗ ಕಳೆದುಹೋದವು. ಹಾಡುಗಾರನಿಲ್ಲದ ಮೇಲೆ ಆ ಹಾಡಿಗೇನು ಬೆಲೆ? ರಾಗವಿಲ್ಲದ ಪದಗಳಿಗೆ ಜೀವ ಎಲ್ಲಿರುತ್ತದೆ? ಕವಿತೆ ಪರಿಣಾಮಕಾರಿಯಾಗುವುದು ಅದು ಹಾಡಾದಾಗ. ಬರೀ ಪದವಾಗಿದ್ದರೆ ಅದಕ್ಕೆ ಬೆಲೆ ಕಡಿಮೆ, ಭಾವವೂ ಕಡಿಮೆ. ಹಾಗಾಗಿಯೇ ‘ಮಾಡುವವನದಲ್ಲ ಹಾಡು, ಹಾಡುವವನದು’, ಪದಗಳಷ್ಟೇ, ಪದ್ಯವಿಲ್ಲ. ಜೊತೆಗೆ ಪದವೆಂದರೆ words ಅಷ್ಟೇ ಅಲ್ಲ. ಹೆಜ್ಜೆ ಎಂಬರ್ಥವೂ ಇದೆ. ಇಲ್ಲಿ ಉಳಿದದ್ದು ಅವನ ಹೆಜ್ಜೆಗುರುತಷ್ಟೇ, ಹೆಜ್ಜೆಯೊಳಗಿನ ಅವನಲ್ಲ. ತಾನಿದ್ದ ಅಷ್ಟೇ ಕಾಲದ ಗುರುತನ್ನು ಅಚ್ಚಳಿಯದೇ ಮೂಡಿಸಿ ಆತ ಹೊರಟ. ಇದಕ್ಕೆ ಇನ್ನೂ ಒಂದು ಆಲೋಚನೆಯನ್ನು ಸೇರಿಸುವುದಾದರೆ, ಆತ ಹೊರಡುವಾಗ ರಾಧೆಗೆ ಕೊಳಲನ್ನು ಕೊಟ್ಟನಂತೆ. ಮುಂದೆ ಆತನ ಕೈಯಲ್ಲಿ ಯಾವತ್ತೂ ಕೊಳಲಿಲ್ಲ. ಯುದ್ಧಪ್ರೇರಕವಾದ ಶಂಖ, ಅದೇ ಪಾಂಚಜನ್ಯ. ಅವನ ಪದವಾದ ಕೊಳಲನ್ನೇನೋ ಕೊಟ್ಟ. ಆದರೆ ಅದಕ್ಕೆ ಉಸಿರಾದ ರಾಗವನ್ನು ಅವನೇ ಕಳೆದುಬಿಟ್ಟ. ಅವನು ಕಳೆದದ್ದೇ ಹೌದು, ಕೊಂಡೊಯ್ಯಲಿಲ್ಲ. ಕೊಂಡೊಯ್ದಿದ್ದರೆ ಅವನ ಬಳಿ ಅದು ಇರುತ್ತಿತ್ತು! ಹಾಗಾಗಲಿಲ್ಲವಲ್ಲ. ಜೀವವಿಲ್ಲದ ಪದವನ್ನಷ್ಟೇ ಬಿಟ್ಟು ಆತ ಮಧುರೆಗೆ ಮರಳಿದ.
ಇಲ್ಲಿ ರಾಧೆಯ ಕೈಯಲ್ಲಿ ಕೊಳಲು, ಒಡೆದುಬಿದ್ದಿದೆ. ಅದಕ್ಕೆ ಉಸಿರುಕೊಟ್ಟು ಸ್ವರ ತೆಗೆಯಲು ಅವಳಲ್ಲಿ ರಾಗವಿಲ್ಲ. ರಾಗವೆಂದರೆ ಸ್ವರವಷ್ಟೇ ಅಲ್ಲ. ಅದು ಪ್ರೇಮದ ಇನ್ನೊಂದು ಪದ. ಆತ ಹೋದ ಮೇಲೆ ಇಲ್ಲಿ ಯಾರಲ್ಲೂ ಬದುಕಿನ ಕುರಿತು ರಾಗವಿಲ್ಲ, ಮೋಹವಿಲ್ಲ, ಪ್ರೇಮವಿಲ್ಲ. ಎಲ್ಲವನ್ನೂ ಕಳೆದುಕೊಂಡು ಜಡ ಬದುಕನ್ನು ಬಾಳುತ್ತಿದ್ದಾರೆ. ಆಯಸ್ಸಿದೆ, ಹೀಗಾಗಿ ಬದುಕುತ್ತಿದ್ದಾರೆ. ರಾಗವೆಂದರೆ ತೀವ್ರ ಪ್ರೇಮ. ಅವನ ಕುರಿತಾದ ಒಲವು. ಅವನೇ ಹೋದಮೇಲೆ ಇವರ ಬದುಕಿನಲ್ಲಿ ರಾಗವಾದರೂ ಎಲ್ಲಿರುತ್ತದೆ?
ಮುಂದಿನ ಸಾಲುಗಳು ಇನ್ನಷ್ಟು ಭಾವ ಮತ್ತು ಜೀವದುಂಬಿಕೊಂಡಿವೆ. ಹಾಡುವಾಗ ಗಂಟಲು ಕಟ್ಟುವಂತೆ ಮಾಡುವ ಸಾಲುಗಳು. ಅವನಿಷ್ಟದ ಬೆಣ್ಣೆಯೂ ಅವನಿಗಾಗಿ ಕಾಯುತ್ತಿದೆ ಎನ್ನುವಂತಹ ಸಾಲು.
ಬಾನ ನೆಲುವಿನಲಿ ನವನೀತ
ಮರಳುವನೇ ಹೋದವನೀತ!
ಬಾನ ನೆಲುವು ಎಂಬುದು ಎಷ್ಟು ಅದ್ಭುತವಾದ ಪದಪ್ರಯೋಗ! ನೆಲುವು ಎಂದರೆ, ಹಾಲು ಮೊಸರು ಬೆಣ್ಣೆಯ ಗಡಿಗೆಗಳನ್ನು ನೆಲಕ್ಕಿಟ್ಟರೆ ಬೆಕ್ಕು ಅಥವಾ ಇನ್ಯಾವುದೇ ಪಶುಗಳು ನೆಕ್ಕುತ್ತವೆ, ಗಡಿಗೆಯನ್ನು ಒಡೆದು ಹಾಕುತ್ತವೆ ಎಂಬ ಕಾರಣಕ್ಕಾಗಿ ಮನೆಯ ಮುಚ್ಚಿಗೆಗೆ ಮೊಳೆ ಹೊಡೆದು ನೇತು ಹಾಕಲು ಮಾಡಿಕೊಂಡ ಹಗ್ಗದ ಸಾಧನ, ಒಂದು ರೀತಿಯ ಜೋಕಾಲಿ, ಸುತ್ತಲೂ ದಾರವನ್ನು ಹೆಣೆದು ಮಧ್ಯದಲ್ಲಿ ಮಡಕೆಯನ್ನು ಇಟ್ಟು ನೇತು ಹಾಕುತ್ತಿದ್ದ ಕಾಲವೊಂದಿತ್ತು. ಮರದ ಮುಚ್ಚಿಗೆ ಇದ್ದ ಮನೆಗಳವು, ಅಲ್ಲಿ ಅಡುಗೆ ಮನೆಯ ಒಂದು ಬದಿಯಲ್ಲಿ ಈ ನೆಲುವು ಇರುತ್ತಿತ್ತು. ಅದರಲ್ಲಿ ಹಾಕು, ಮೊಸರು, ಬೆಣ್ಣೆಯ ಗಡಿಗೆಗಳು ತೂಗುತ್ತಿತ್ತು. ಅದನ್ನು ಇಳಿಸಿ ತಿನ್ನುವ ದೊಡ್ಡ ಗುಂಪೇ ಇತ್ತು. ಬೃಂದಾವನದಲ್ಲಿ ಇದನ್ನು ನಿರ್ಮಿಸಲು ಕಾರಣ ಬೆಕ್ಕು! ಕಳ್ಳಬೆಕ್ಕು, ಕೃಷ್ಣನೆಂಬ ತುಂಟ ಬೆಕ್ಕು. ಮೊಸರು ಬೆಣ್ಣೆಯನ್ನು ಕದ್ದು ಮೆಲ್ಲುವ ಈ ತುಂಟನಿಗೆ ಮನೆಯ ಮುಚ್ಚಿಗೆಗೆ ತೂಗುಹಾಕಿದ ನೆಲುವು ಒಂದು ಲೆಕ್ಕವೇ? ಹಾಗಾಗಿಯೇ ಅವನ ನೆಲುವು ಇರುವುದು ಬಾನಿನಲ್ಲಿ. ಆಕಾಶವನ್ನೇ ಮನೆ ಮಾಡಿಕೊಂಡವನಿಗೆ, ಈ ನೆಲುವು ಯಾವ ಲೆಕ್ಕ? ಗೆಳೆಯರನ್ನೇ ಬಳಸಿಕೊಂಡು ಒಬ್ಬರ ಮೇಲೊಬ್ಬರನ್ನು ನಿಲ್ಲಿಸಿ, ಅವರ ಮೇಲೆ ತಾನು ಹತ್ತಿನಿಂತು ಬೆಣ್ಣೆ ತೆಗೆದು ಗೆಳೆಯರಿಗೆ ಕೊಟ್ಟು, ನಂತರ ತಾನು ತಿನ್ನುವ ಈ ಗೊಲ್ಲನಿಗೆ ಈಗ ನವನೀತದ ನೆನಪಾದರೂ ಆಗುವುದಿಲ್ಲವೇ? ಆಗುವುದಿಲ್ಲ ಅಂತಾದರೆ ಗೋಕುಲದಲ್ಲಿ ಆತ ಬೆಣ್ಣೆ ಮೊಸರಿಗಾಗಿ ಕಷ್ಟಪಟ್ಟಿದ್ದು, ಪೆಟ್ಟು ತಿಂದಿದ್ದು ಸುಮ್ಮನೆಯೇ? ಆಕಾಶದ ಮನೆಯಲ್ಲಿನ ನೆಲುವು ಬಹುದೊಡ್ಡದು, ಇಡೀ ಜಗತ್ತನ್ನು ತೂಗುಯ್ಯಾಲೆ ಮಾಡಿಕೊಂಡು ತೂಗುವ ಅವನಿಗೆ ಈ ನವನೀತ ಎಷ್ಟರಮಟ್ಟಿಗಿನದು?.
ಇಂದಿಗೂ ಜನ್ಮಾಷ್ಟಮಿಯ ಸಮಯದಲ್ಲಿ ಈ ಮೊಸರು ಗಡಿಗೆ ಒಡೆಯುವ ಆಟವೇ ಇದೆ. ಅವನು ಹೋದ ನಂತರ ಅವನ ನೆನಪಿಗಾಗಿ ಇದನ್ನೆಲ್ಲ ಮಾಡುತ್ತಾರೋ ಏನೋ. ಅವನಾದರೂ ಬರಲಿಲ್ಲ, ಬರಲೊಲ್ಲ!. ಕೊನೆಯ ಚರಣದಲ್ಲಿ ಅವನಿಗಾಗಿ ಬರೀ ಹಂಬಲಿಕೆ.
ಅಳುತಿದೆ ಹೃದಯವು ಶ್ಯಾಮನಿಗೆ
ತಡೆಯುಂಟೇ ನಿಸ್ಸೀಮನಿಗೆ?!
ಯಶೋಧೆ, ರಾಧೆಯಷ್ಟೇ ಅಲ್ಲ. ಇಡೀ ಬೃಂದಾವನವೇ ಅವನಿಗಾಗಿ ಅಳುತ್ತಿತ್ತು ಮತ್ತು ಅಳುತ್ತಲೇ ಇತ್ತು. ಅವನು ಹೋಗುವುದು ಯಾರಿಗಿಷ್ಟವಿತ್ತು? ಹಾಗಂತ ಅವನನ್ನು ತಡೆದು ನಿಲ್ಲಿಸುವ ತಾಕತ್ತಾದರೂ ಯಾರಿಗಿತ್ತು? ತಾಕತ್ತೆಂಬುದು ದೈಹಿಕ ಬಲವಲ್ಲವಲ್ಲ. ಅವನನ್ನು ತಡೆಯಲು ಯಾರಿಂದ ಅಥವಾ ಯಾವುದರಿಂದ ಸಾಧ್ಯವಿದೆ? ತಡೆದು ನಿಲ್ಲಿಸಿಕೊಂಡರೂ, ಅದನ್ನು ಜೀರ್ಣಿಸಿಕೊಳ್ಳುವ ಶಕ್ತಿಯಾದರೂ ಯಾರಿಗಿದೆ? ಹರಿಯುವ ನದಿಗೆ ಒಡ್ಡು ಕಟ್ಟಬಹುದು, ಆದರೆ ಆ ಒಡ್ಡಿನಲ್ಲಿ ಸಂಗ್ರಹವಾದುದನ್ನು ಹಾಗೆಯೇ ಕಾಪಾಡುವ ಸಾಮರ್ಥ್ಯವೂ ಬೇಕಲ್ಲ, ಇಲ್ಲದಿದ್ದರೆ ಸುತ್ತಲಿನ ಜಗತ್ತು ಮುಳುಗುತ್ತದೆ. ಹಾಗಾಗಿಯೇ ಈ ಶ್ಯಾಮನನ್ನು ನಿಲ್ಲಿಸುವ ಶಕ್ತಿ ಗೋಕುಲದಲ್ಲಿ ಯಾರಿಗೂ ಇರಲಿಲ್ಲ. ಅವನು ಹೊರಟ. ಮತ್ತವನು ಬುದ್ಧಿವಂತ. ಬೆಣ್ಣೆ ಕದಿಯುವಾಗ, ಕಣ್ಣಾಮುಚ್ಚಾಲೆ ಆಡುವಾಗ, ಅಮ್ಮನಿಗೆ ಬಾಯಿತೆರೆದು ಬ್ರಹ್ಮಾಂಡ ತೋರಿಸಿ ಮುಗ್ಧನಂತೆ ಮಡಿಲೇರಿದವ ಅತೀ ನಿಸ್ಸೀಮ. ಜಗತ್ತನ್ನೇ ಬಾಯಲ್ಲಿ ತೋರಿದವನಿಗೆ ಸೀಮೆಗಳುಂಟೇ? ಸೀಮಾತೀತ ಅವನು. ಕೊಳಲು ಹಿಡಿದ ಕೈ ಪಾಂಚಜನ್ಯ ಹಿಡಿಯುತ್ತದೆ, ಮೊಸರು ಮೆದ್ದ ಬಾಯಿ ಬ್ರಹ್ಮಾಂಡವನ್ನು ತೋರುತ್ತದೆ, ದನವನ್ನು ಕಾದ ದೇಹ ಮುಂದೆ ಪಾಂಡವರ ಬದುಕನ್ನು ಕಾಯುತ್ತದೆ ಅಂತಾದರೆ ಆತ ಇನ್ನೆಂತಹ ಮಹಿಮನಿರಬಹುದು?
ಮಧುರೆಗೆ ಹೋದನು ಮೋಹನ
ಕಾದೆ ಇದೆ ಬೃಂದಾವನ
ಮೋಹನ ಎಂಬುದು ಒಂದು ರಾಗದ ಹೆಸರೂ ಹೌದು. ಈ ರಾಗದ ಸಂಚಾರವೂ ಅತೀ ಮೋಹ ಉಂಟುಮಾಡುವಂತದ್ದೇ. ಸಂತಸ, ಆಶ್ಚರ್ಯ, ಮೋಹ, ಮಾಧುರ್ಯದ ಭಾವಗಳನ್ನು ಹೊರಡಿಸಲು ಈ ರಾಗ ಬಹುವಾಗಿ ಹೊಂದುತ್ತದೆ. ಕೃಷ್ಣನಿಗೂ ಮೋಹನ ಎಂಬ ಹೆಸರಿದೆ. ಎಲ್ಲರನ್ನೂ ಮೋಹಗೊಳಿಸುವವನು ಎಂದು. ಬಹುಶಃ ಈ ಜಗತ್ತಿನಲ್ಲಿ ಮೋಹನ ಎಂಬ ಹೆಸರು ಅನ್ವರ್ಥವಾಗುವುದು ಅವನಿಗೆ ಮಾತ್ರ. ಯಾಕೆಂದರೆ ಆತ ಅಷ್ಟು ಮೋಹಕ.
ಅವನೇನೋ ಹೋದ. ಇಲ್ಲಿ ಕಾಯುತ್ತಲೇ ಇದ್ದಾರೆ. ಜನರೊಂದಿಗೆ ಬೃಂದಾವನವೂ. ಕೆಲವರಿಗೆ ಮಾತ್ರ ಈ ಭಾವ ಇರುತ್ತದೆ. ಜನ, ವಸ್ತು, ಪ್ರಾಣಿಗಳೊಂದಿಗೆ ಹೇಗೆ ಒಂದು ಅವಿನಾಭಾವ ಸಂಬಂಧ ಇರುತ್ತದೆಯೋ ಹಾಗೆಯೇ ಊರಿನೊಂದಿಗೂ ಇರುತ್ತದೆ. ಊರೆಂದರೆ ಜನವಲ್ಲ, ಮನೆಯಲ್ಲ, ವಸ್ತು ಒಡವೆಗಳಲ್ಲ, ಆಸ್ತಿ ಮನೆ ಗದ್ದೆ ತೋಟಗಳಲ್ಲ. ಅದೆಲ್ಲವನ್ನೂ ಮೀರಿದ್ದು. ಅಲ್ಲಿನ ಹುಲ್ಲು, ಕಲ್ಲು, ಅಲ್ಲಿನ ಗಾಳಿ, ಮಳೆಹನಿಯೊಂದಿಗಿರುವ ಬಂಧ ಅದು. ಅಂತಹ ಊರು ಬೃಂದಾವನ! ಅದೂ ಇವನಿಗಾಗಿ ಕಾಯುತ್ತಿದೆ. ಕಾದು ಕಾಯುತ್ತಿದೆ. ಬಿಸಿಯಾಗಿ ಬಳಲಿದೆ. ಆತ ಹೋದ ನಂತರ ಯಮುನೆಯಲ್ಲಿ ಜೀವವಿಲ್ಲ, ಗೋವರ್ಧನದಲ್ಲಿ ಹಸಿರಿಲ್ಲ, ಅವನಿಗಾಗಿ ಕಾಯಬೇಕು, ಕಾಯುವುದಕ್ಕೆ ಕಾಯ ಬೇಕು, ಆ ಕಾಯ ಬಳಲಿದೆ. ಕಾದಿದೆ. ಹೋಗಿದ್ದಾನೆ. ಬರುತ್ತಾನೋ, ಬಾರನೋ ಗೊತ್ತಿಲ್ಲ. ನಿರೀಕ್ಷೆ ಮಾತ್ರ ನಿರಂತರ. ಕಾದೇ ಇದೆ ಬೃಂದಾವನ…
