ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿ ಸಾಮಾನ್ಯದ್ದಲ್ಲ. ಸಹಜವಾಗಿ ಜೀವಮಾನದ ಸಾಧಕರಿಗೆ ಸಿಗುವ ಗರಿಯದು. ಒಂದಲ್ಲ ಒಂದು ರೀತಿಯಲ್ಲಿ ಚಿತ್ರರಂಗದ ಬೆಳವಣಿಗೆಗೆ ಕಾರಣೀಭೂತರಾದವರಿಗೆ ಸಿಗುವ ಪ್ರಶಸ್ತಿ. ಹಲವಾರು ಜನರಿಗೆ ಸಿಕ್ಕಾಗ, ಅವರಲ್ಲಿ ಕೆಲವರು ಅರ್ಹರಲ್ಲ ಎನಿಸುತ್ತದೆ, ಮತ್ತೆ ಕೆಲವರು ಪ್ರಭಾವದಿಂದ ಅಥವಾ ರಾಜಕೀಯದಿಂದ ಪಡೆದವರೆನಿಸುತ್ತದೆ. ಯಾರೇ ಆಗಿರಲಿ, ಈ ಪ್ರಶಸ್ತಿಯನ್ನು ಪಡೆಯಬೇಕಾದರೆ ಒಂದು ಹಂತದ ಸಾಧನೆ, ಸೇವೆ ಮತ್ತು ಚಿತ್ರರಂಗದಲ್ಲಿ ಮಹತ್ತರ ಕೊಡುಗೆ ನೀಡಿದವರೇ ಆಗಿರಬೇಕು.
“ಹಾಗಾದರೆ ಅನಂತ್ ನಾಗ್ ಈ ಪ್ರಶಸ್ತಿಗೆ ಅರ್ಹರೇ?” ಎಂಬ ಪ್ರಶ್ನೆ ನನ್ನಲ್ಲೇ ಮೂಡಿತು. ಉತ್ತರವೂ ನನ್ನಲ್ಲೇ ದೊರೆಯಿತು. “ಅನಂತನಿಗೆ ಪ್ರಶಸ್ತಿ” ಎಂದು ಮತ್ತೆ ಟಿವಿಯಲ್ಲಿ ಅನಂತ್ ನಾಗ್ ಅವರ ಸಂದರ್ಶನ ನೋಡಿದೆ. ಅವರು ತಮ್ಮ ಸಂತೋಷವನ್ನು ಕನ್ನಡ ಮತ್ತು ರಾಷ್ಟ್ರೀಯ ವಾಹಿನಿಗಳ ಮೂಲಕ ವ್ಯಕ್ತಪಡಿಸುತ್ತಿದ್ದರು.
ಇತ್ತೀಚೆಗಷ್ಟೇ ಅನಂತ್ ನಾಗ್ ಅವರಿಗೆ ಪದ್ಮಭೂಷಣ ಪ್ರಶಸ್ತಿ ಬಂದಿತ್ತಲ್ಲಾ; ಅದರ ನೆನಪು ಇನ್ನೂ ಹಸಿರಾಗಿರುವಾಗಲೇ ಫಾಲ್ಕೆ ಪ್ರಶಸ್ತಿ ಬಂದಿದೆಯಲ್ಲ, ವಾಹ್! GREAT ಎನಿಸಿತು. ಅದರ ಜೊತೆಯಲ್ಲೇ ನಾನು ಚಿಕ್ಕ ಹುಡುಗನಿದ್ದಾಗ ಅನಂತ್ ನಾಗ್ ಮತ್ತು ಅವರ ತಮ್ಮ ಶಂಕರ್ ನಾಗ್ ಅವರನ್ನು ಮಲ್ಲೇಶ್ವರಂನ ಮನೆಯಲ್ಲಿ, ‘ಮಕ್ಕಳಿರಲವ್ವ ಮನೆತುಂಬ’ ಚಿತ್ರದ ಚಿತ್ರೀಕರಣದಲ್ಲಿ ಕಂಡದ್ದು ನೆನಪಿಗೆ ಬಂತು. ಜೊತೆಗೆ ಅವರ ಹೆಸರಾಂತ ಸಿನಿಮಾಗಳು ಮತ್ತು ನಾನು ಮೆಚ್ಚಿದ ಸಿನಿಮಾಗಳೂ ನೆನಪಿನ ಪುಟಗಳಿಂದ ಸರಮಾಲೆಯಂತೆ ಹೊರಬಂದವು.
‘ಸಂಕಲ್ಪ’ ಅವರ ಮೊದಲ ಕನ್ನಡ ಚಿತ್ರ. ಇದು 1973ರಲ್ಲಿ ತೆರೆ ಕಂಡಿತ್ತು. ಇದೊಂದು ಕಲಾತ್ಮಕ ಶೈಲಿಯ ಚಿತ್ರ. ಅದಕ್ಕೂ ಮೊದಲು, ಅವರೇ ಹೇಳಿದಂತೆ, ಮುಂಬೈನಲ್ಲಿ ಯೂನಿಯನ್ ಬ್ಯಾಂಕ್ ಉದ್ಯೋಗಿಯಾಗಿದ್ದರು. ಅಲ್ಲಿಂದ ಮುಂಬೈ ರಂಗಭೂಮಿಯೊಂದಿಗೆ ಸ್ನೇಹ ಬೆಳೆಯಿತು. ನಾಟಕಗಳಲ್ಲಿ ಪಾತ್ರ ಹಾಗೂ ನಿರ್ದೇಶನದ ಕೆಲಸವೂ ನಡೆಸಿದರು. ವಿಧಿ ಅವರಿಗೆ ಕರ್ಮಭೂಮಿಯಾಗಿ ಕರ್ನಾಟಕವನ್ನು ಆಯ್ಕೆ ಮಾಡಿತು. ಬಾಲ್ಯವನ್ನು ಕರ್ನಾಟಕದಲ್ಲಿ ಕಳೆದು, ಜೀವನೋಪಾಯಕ್ಕಾಗಿ ಮುಂಬೈ ಸೇರಿ, ಮತ್ತೆ ತಮ್ಮ ನಾಡಿಗೆ ಮರಳಿದರು. ಕನ್ನಡ ಚಿತ್ರಗಳಲ್ಲಿ ಅವಕಾಶಗಳು ಬೆಳೆಯುತ್ತಾ ಬಂದವು.
ಇವರಲ್ಲಿನ ಪ್ರತಿಭೆಯನ್ನು ಗುರುತಿಸಿ ಮನ್ನಣೆ ನೀಡಿದವರಲ್ಲಿ ಮುಖ್ಯರಾದವರು ದೊರೈ-ಭಗವಾನ್ ಖ್ಯಾತಿಯ ಭಗವಾನ್ ಅವರು.
ಇವರು ನಟಿಸಿದ ಚಿತ್ರಗಳ ಬಗ್ಗೆ ಮೆಲಕು ಹಾಕಿದಾಗ ವೈವಿಧ್ಯದ ಹೊಸ ಹಂತವನ್ನು ನಾವು ಕಾಣಬಹುದು. ಉದಾಹರಣೆಗೆ ‘ಸಂಕಲ್ಪ’ ಚಿತ್ರದಲ್ಲಿ ಮೂಢನಂಬಿಕೆಯ ವಿರುದ್ಧ ಮಾತನಾಡುವ ಪಾತ್ರ. ‘ಬರ’ ಚಿತ್ರದಲ್ಲಿ ನೀರಿನ ಸಮಸ್ಯೆಯನ್ನು ಪರಿಹರಿಸಲು ಪರದಾಡುವ ಜಿಲ್ಲಾಧಿಕಾರಿಯ ಪಾತ್ರ. ‘ಹಂಸಗೀತೆ’ಯಲ್ಲಿ ಸಂಗೀತ ಕಲಿಕೆಗಾಗಿ ಗುರುವಿನ ಹಿಂದೆ ಬಿದ್ದು ದೊಡ್ಡ ಸಂಗೀತಗಾರನಾಗಿ ಬೆಳೆದು, ನಂತರ ಅಹಂಕಾರದಿಂದ ಅಧಃಪತನಕ್ಕೊಳಗಾಗುವ ಪಾತ್ರ. ‘ಕನ್ನೇಶ್ವರ ರಾಮ’ ಚಿತ್ರದಲ್ಲಿ ಬ್ರಿಟಿಷರ ಹಾಗೂ ಮಠಾಧೀಶರ ವಿರುದ್ಧ ಹೊರಡುವ ಪಾತ್ರ. ‘ಆಕ್ಸಿಡೆಂಟ್’ ಚಿತ್ರದಲ್ಲಿ ವಯಸ್ಸಾದ, ನುರಿತ ರಾಜಕಾರಣಿಯ ಪಾತ್ರ.
ಅದಲ್ಲದೆ ‘ಬಾಡದ ಹೂವು’, ‘ಒಲವು ಮೂಡಿದಾಗ’, ‘ಮುದುಡಿದ ತಾವರೆ ಅರಳಿತು’ ಮೊದಲಾದ ಚಿತ್ರಗಳಲ್ಲಿ ಲವರ್ ಬಾಯ್ ಪಾತ್ರ. ‘ಕುದುರೆಮುಖ’, ‘ವರ್ಣಚಕ್ರ’, ‘ನಾರದ ವಿಜಯ’ ಚಿತ್ರಗಳಲ್ಲಿ ಜೇಮ್ಸ್ ಬಾಂಡ್ ಶೈಲಿಯ ಪಾತ್ರ. ದೊರೈ-ಭಗವಾನ್ ಸರಣಿಯ ‘ಬೆಂಕಿಯ ಬಲೆ’, ‘ಚಂದನದ ಗೊಂಬೆ’ ಮುಂತಾದ ಚಿತ್ರಗಳಲ್ಲಿನ ಹಳ್ಳಿಯ ಮೇಷ್ಟ್ರ ಪಾತ್ರ. ‘ಅವಸ್ಥೆ’ಯಲ್ಲಿನ ಅಸಹಾಯಕ ರೋಗಿಯ ಪಾತ್ರ.
‘ಗೋಲ್ ಮಾಲ್ ರಾಧಾಕೃಷ್ಣ’, ‘ರೋಲ್ ಕಾಲ್ ರಾಮಕೃಷ್ಣ’, ‘ಚಾಲೆಂಜ್ ಗೋಪಾಲಕೃಷ್ಣ’ ಎಂಬ ಸಾಯಿ ಪ್ರಕಾಶ್ ಸರಣಿಯ ಹಾಸ್ಯಪಾತ್ರಗಳು. ‘ಉದ್ಭವ’ ಚಿತ್ರದಲ್ಲಿ ರಾಜಕೀಯ ವಿಷಯಗಳನ್ನು ಉಪಯೋಗಿಸಿಕೊಂಡು ಬದುಕನ್ನು ಕಟ್ಟಿಕೊಳ್ಳುವ ಹೊಸ ಅಲೆಯ ಪಾತ್ರ. ‘ಗಣೇಶನ ಮದುವೆ’, ‘ಗೌರಿಗಣೇಶ್’, ‘ಒಂದು ಸಿನಿಮಾ ಕಥೆ’, ‘ಯಾರಿಗೂ ಹೇಳ್ಬೇಡಿ’ ಎಂಬ ಹಾಸ್ಯದ ಮತ್ತೊಂದು ಆಯಾಮದ ಚಿತ್ರಗಳು, ‘ಭಕ್ತ ಪ್ರಹ್ಲಾದ’ ಚಿತ್ರದಲ್ಲಿ ರಾಜಕುಮಾರ್ ಜೊತೆ ನಾರದನ ಪಾತ್ರ, ‘ನಾ ನಿನ್ನ ಬಿಡಲಾರೆ’ ಚಿತ್ರದಲ್ಲಿನ ದೆವ್ವ ಮೈಮೇಲೆ ಬಂದವನ ಪಾತ್ರ… ಅಬ್ಬಬ್ಬಾ! ಜ್ಞಾಪಿಸಿಕೊಳ್ಳುತ್ತಾ ಹೋದರೆ ಇನ್ನೂ ದೊಡ್ಡ ಪಟ್ಟಿಯನ್ನೇ ಬರೆಯಬಹುದು.
ಕಿರುತೆರೆಗೆ ಬಂದರೆ, 80ರ ದಶಕದಲ್ಲೇ ಇವರು ಶಂಕರ್ ನಾಗ್ ನಿರ್ದೇಶಿಸಿದ ‘ಮಾಲ್ಗುಡಿ ಡೇಸ್’ ಎಂಬ ಹಿಂದಿ ಧಾರಾವಾಹಿಯಲ್ಲಿ ನಟಿಸಿದ್ದರು. ಆ ಧಾರಾವಾಹಿಯಲ್ಲಿ ಬರುವ ‘ವೆಂಡರ್ ಆಫ್ ಸ್ವೀಟ್ಸ್’ ಸಂಚಿಕೆ ಇಡೀ ದೇಶದ ಮನೆಮಾತಾಗಿತ್ತು. ಅಲ್ಲದೆ ಅನೇಕ ಕನ್ನಡ ಧಾರಾವಾಹಿಗಳಲ್ಲಿಯೂ ನಟಿಸಿದರು. ಕೇವಲ ಕಣ್ಣಿನ ನೋಟ ಮತ್ತು ಮುಖಭಾವಗಳಿಂದಲೇ ಅಭಿನಯಿಸುವ ಸಾಮರ್ಥ್ಯವುಳ್ಳವರು ಎಂದು ಹೆಸರಾದವರು.
ಹಿಂದಿ ಭಾಷೆಯಲ್ಲಿ ಇವರು ನಟಿಸಿದ ಶ್ಯಾಮ್ ಬೆನೆಗಲ್ ನಿರ್ದೇಶನದ “ಮಂಥನ್”, “ಜುನೂನ್”, “ಭೂಮಿಕಾ”, “ನಿಶಾಂತ್” ಹಾಗೂ ಮರಾಠಿಯ “ಅನಾಹತ”, ಮಲಯಾಳಂನ “ಸ್ವಾತಿ ತಿರುನಾಳ್” ಚಿತ್ರಗಳು ಪರಭಾಷೆಗಳಲ್ಲಿಯೂ ಅವರಿಗೆ ಹೆಸರು-ಕೀರ್ತಿ ತಂದುಕೊಟ್ಟವು. ವಿಶೇಷವಾಗಿ ಹೇಳಬೇಕೆಂದರೆ, “ಬೆಳದಿಂಗಳ ಬಾಲೆ” ಚಿತ್ರದಲ್ಲಿನ ಅವರ ನಟನೆ ನೋಡಿ ಅದರ ಹ್ಯಾಂಗೋವರ್ನಿಂದ ಹೊರಬರಲು ನನಗೆ ಬಹಳಷ್ಟು ದಿನ ಹಿಡಿಯಿತು. ಈ ಚಿತ್ರವು ಅದೇ ಹೆಸರಿನ ತೆಲುಗು ಮೂಲದ ಯಂಡಮೂರಿ ವೀರೇಂದ್ರನಾಥ್ ಅವರ ಕಾದಂಬರಿಯನ್ನು ಆಧರಿಸಿತ್ತು. ಈ ಸಿನಿಮಾ ಯಶಸ್ಸು ಕಂಡಾಗ, ಸ್ವತಃ ಯಂಡಮೂರಿ ವೀರೇಂದ್ರನಾಥ್ ಅವರೇ ಈ ಪಾತ್ರವನ್ನು ಅನಂತ್ ನಾಗ್ ಅವರ ಬದಲು ಬೇರೆ ಯಾರಾದರೂ ಮಾಡಿದ್ದರೆ ತಮಗೆ ತೃಪ್ತಿಯಾಗುತ್ತಿರಲಿಲ್ಲ ಎಂದು ಹೇಳಿದ್ದರು. ಈ ಕಾದಂಬರಿಯನ್ನು ಕನ್ನಡಕ್ಕೆ ತರ್ಜುಮೆ ಮಾಡಿದ ವಂಶಿ ಎಂಬ ಲೇಖಕರೂ, ತಾವು ತರ್ಜುಮೆ ಮಾಡುವಾಗ ಅನಂತ್ ನಾಗ್ ಅವರನ್ನೇ ಕಲ್ಪಿಸಿಕೊಂಡು ಕನ್ನಡಕ್ಕೆ ಅನುವಾದ ಮಾಡಿದ್ದಾಗಿ, ಹಾಗೂ ಸಿನಿಮಾ ಮಾಡುವಾಗ ಅನಂತ್ ನಾಗ್ ಅವರೇ ಪಾತ್ರ ಮಾಡಬೇಕು ಎಂಬ ಷರತ್ತು ಹಾಕಿ ಮಾತ್ರ ಅನುಮತಿ ನೀಡಿದ್ದಾಗಿ ಹೇಳಿದ್ದರು. ಇದು 90ರ ದಶಕದಲ್ಲೇ ದಾಖಲಾಗಿರುವ ಹೇಳಿಕೆಯಾಗಿದೆ.
ಇಷ್ಟೊಂದು ವೈವಿಧ್ಯಮಯ ಪಾತ್ರಗಳಲ್ಲಿ ನಟಿಸಿ ಪ್ರತಿಭಾನ್ವಿತರೆನಿಸಿಕೊಂಡ ಇವರಿಗೆ ರಾಷ್ಟ್ರಮಟ್ಟದ ಅತ್ಯುತ್ತಮ ನಟ ಪ್ರಶಸ್ತಿ ಒಂದು ಸಲವೂ ಬರಲಿಲ್ಲವಲ್ಲ ಎಂದು ಕೆಲ ವರ್ಷಗಳ ಹಿಂದೆ ಅನಿಸಿದ್ದುಂಟು. ಈಗ ಅದೆಲ್ಲದರ ಕೊರಗನ್ನು ನೀಗಿಸುವಂತೆ ಕೇಂದ್ರ ಸರ್ಕಾರ ಈ ಪ್ರಶಸ್ತಿಯನ್ನು ಘೋಷಿಸಿದೆ. ಈ ಪೀಳಿಗೆಗೆ ಗೊತ್ತಿಲ್ಲದ ಒಂದು ವಿಷಯವೇನೆಂದರೆ, ಅನಂತ್ ನಾಗ್ ಅವರು ಒಬ್ಬ ರಾಜಕಾರಣಿಯೂ ಆಗಿದ್ದರು. ಜೆ.ಎಚ್. ಪಟೇಲ್ ಅವರ ಸಚಿವ ಸಂಪುಟದಲ್ಲಿ ಮಂತ್ರಿಯಾಗಿದ್ದರು. ರಾಮಕೃಷ್ಣ ಹೆಗಡೆ ಅವರೊಂದಿಗೆ ಆರಂಭವಾದ ಅವರ ರಾಜಕೀಯ ಜೀವನವು ಎರಡು ಬಾರಿ ಗೆಲುವು ಮತ್ತು ಎರಡು ಬಾರಿ ಸೋಲನ್ನು ಕಂಡಿತು.
ಅವರ ರಾಜಕೀಯ ಜೀವನದಲ್ಲಿ 50-50ರಷ್ಟು ಯಶಸ್ಸನ್ನಷ್ಟೇ ಕಂಡರು. ನಂತರ ರಾಜಕೀಯದಿಂದ ದೂರ ಸರಿದರು. ನಮ್ಮ ಸಮಕಾಲೀನರಲ್ಲಿ ಎಷ್ಟೋ ಮಂದಿ ಇವರು ರಾಜಕಾರಣಿಯಾಗಿದ್ದರು ಎಂಬ ವಿಷಯವನ್ನೇ ಮರೆತಿದ್ದಾರೆ. ಏಕೆಂದರೆ ಅನಂತ್ ನಾಗ್ ಅವರನ್ನು ಜನ ಗುರುತಿಸುವುದು ಒಬ್ಬ ಪ್ರತಿಭಾನ್ವಿತ ಕಲಾವಿದನಾಗಿಯೇ ಹೊರತು ರಾಜಕಾರಣಿಯಾಗಿ ಅಲ್ಲ.
ಅನಂತ್ ನಾಗ್ ಬಗ್ಗೆ ಹೇಳಲು ಆರಂಭಿಸಿದರೆ, ಅವರ ತಮ್ಮ ಶಂಕರ್ ನಾಗ್ ಬಗ್ಗೆ ಹೇಳದೆ ಹೋದರೆ ಅದು ಅಪೂರ್ಣವಾಗುತ್ತದೆ. ಇವರು ತಮ್ಮನ ಜೊತೆಗೆ ಸೇರಿ “ಆಕ್ಸಿಡೆಂಟ್”, “ಮಿಂಚಿನ ಓಟ”, “ಜನ್ಮಜನ್ಮದ ಅನುಬಂಧ”, “ಮಕ್ಕಳಿರಲವ್ವ ಮನೆತುಂಬ”, “ಒಲವೇ ಬದುಕು” ಮುಂತಾದ ಚಿತ್ರಗಳನ್ನು ನಿರ್ಮಿಸಿದರು. ಅವೆಲ್ಲವೂ ಇವರಿಗೆ ಒಳ್ಳೆಯ ಹೆಸರನ್ನು ತಂದುಕೊಟ್ಟವೇ ಹೊರತು ಹಣ ತಂದುಕೊಡಲಿಲ್ಲ. ಅವರೇ ಹೇಳಿದಂತೆ, ಅವಾರ್ಡ್ ಬಂದಿತೇ ಹೊರತು ರಿವಾರ್ಡ್ ಬರಲಿಲ್ಲ.
“ಸಂಕೇತ್” ರೆಕಾರ್ಡಿಂಗ್ ಸಂಸ್ಥೆಯನ್ನು ಸ್ಥಾಪಿಸಿ, ಚೆನ್ನೈಯಲ್ಲಿದ್ದ ಕನ್ನಡ ಚಿತ್ರೋದ್ಯಮವನ್ನು ಬೆಂಗಳೂರಿಗೆ ವರ್ಗಾಯಿಸಲು ಗಮನಾರ್ಹ ಕೊಡುಗೆಯನ್ನು ನೀಡಿದರು. ಅಂಕಣದ ಗಾತ್ರವನ್ನು ಗಮನದಲ್ಲಿರಿಸಿಕೊಂಡು ಶಂಕರ್ ನಾಗ್ ಬಗ್ಗೆ ಹೆಚ್ಚು ಹೇಳಲು ಹೋಗಲಾರೆ. ಒಂದಂತೂ ನಿಜ, ಶಂಕರ್ ನಾಗ್ ಅಪಘಾತದಲ್ಲಿ ತೀರಿಕೊಂಡಾಗ ಅದರ ದುಃಖದಿಂದ ಹೊರಬರಲು ದಶಕಗಳೇ ಬೇಕಾಯಿತು.
ಮೊನ್ನೆ ಪದ್ಮಭೂಷಣ ಪ್ರಶಸ್ತಿ ಸ್ವೀಕರಿಸುವಾಗ ಇವರು ಮೋದಿಯನ್ನು ಬಹಳಷ್ಟು ಹೊಗಳಿಬಿಟ್ಟರು. ಅದಕ್ಕೆ ಮೋದಿ ಖುಷಿಯಾಗಿ ಇವರಿಗೆ ಈ ಪ್ರಶಸ್ತಿ ಸಿಗುವಂತೆ ಮಾಡಿದರು ಎಂದು ಕುಹಕವಾಡುವವರ ಕೂಗು ಆಗಲೇ ಶುರುವಾಗಿದೆ. ಅದಕ್ಕೆ ಚಿಂತಿಸುವ ಅಗತ್ಯವಿಲ್ಲ.
50 ವರ್ಷಗಳಿಗೂ ಮೇಲ್ಪಟ್ಟು ಅಭಿನಯಿಸಿ, ಹಲವು ಚಿತ್ರಗಳನ್ನು ನಿರ್ಮಾಣ ಮಾಡಿ, ತಾಂತ್ರಿಕವಾಗಿ ಕನ್ನಡ ಚಿತ್ರರಂಗವನ್ನು ಬೆಂಬಲಿಸಿ, ಕನ್ನಡ ಚಿತ್ರರಂಗಕ್ಕೆ ಒಂದು ಘನತೆ ಹಾಗೂ ಗಾಂಭೀರ್ಯವನ್ನು ತಂದುಕೊಟ್ಟ ಅನಂತ್ ನಾಗ್ ಅವರಿಗೆ ಈ ಪ್ರಶಸ್ತಿ ಸಿಕ್ಕಿರುವುದು ಅರ್ಹ ವ್ಯಕ್ತಿಗೆ ಸಿಕ್ಕಂತೆಯೇ ಸರಿ.
78ನೇ ವಯಸ್ಸಿನಲ್ಲಿ ಮೋದಿಗೆ ಜಯಕಾರ ಹಾಕಿ ಪ್ರಶಸ್ತಿ ಪಡೆಯ ಬಯಸುವ ಸಣ್ಣ ವ್ಯಕ್ತಿತ್ವದವರಲ್ಲ ಈ ಅನಂತ್. ಒಬ್ಬ ನಟನಿಗೆ ಪ್ರಶಸ್ತಿ ಕೊಟ್ಟು ಮತಗಳನ್ನು ಪಡೆಯಬಹುದು ಎಂದು ಭ್ರಮಿಸುವ ಮುಟ್ಟಾಳರೂ ಅಲ್ಲ ಪ್ರಧಾನಿ ಮೋದಿ. ಅರ್ಹ ವ್ಯಕ್ತಿಗೆ ಸಿಕ್ಕ ನಂತರ ಕುಹಕ ನುಡಿಯುವವರ ಮಾತು ಕಂಠಶೋಷಣೆಯೇ ಹೊರತು ಮತ್ತೇನೂ ಅಲ್ಲ.
- ಸುರೇಶ್ ಪ್ರಭು
ವಿಕ್ರಮ ಓದುಗರ ವಾಟ್ಸಪ್ ಬಳಗಕ್ಕೆ ಸೇರಲು ಈ ಸಂಖ್ಯೆಯನ್ನು ನಿಮ್ಮ ಮೊಬೈಲ್ನಲ್ಲಿ ಸೇವ್ ಮಾಡಿಕೊಂಡು ನಮಗೊಂದು ಸಂದೇಶ ಕಳುಹಿಸಿ. ಮೊಬೈಲ್ ಸಂಖ್ಯೆ: 98800 21122
