ಕಲಬುರಗಿ: ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯದ ಕುಲಪತಿಗಳಾದ ಪ್ರೊ.ಬಟ್ಟು ಸತ್ಯನಾರಾಯಣ ಹಾಗೂ ಕುಲಸಚಿವರಾದ ಪ್ರೊ.ಆರ್.ಆರ್.ಬಿರಾದಾರ ಅವರು ಇಂದು ವಿ.ವಿ.ಯ ಆವರಣದ ಅತಿಥಿಗೃಹದಲ್ಲಿ ಮಾಧ್ಯಮಗಳ ಉದ್ದೇಶಿಸಿ “ಏಕ್ ಭಾರತ್ ಶ್ರೇಷ್ಟ ಭಾರತ್ ಕಾರ್ಯಕ್ರಮದ ಭಾಗವಾಗಿ “ಯುವಸಂಗಮ 7ನೇ ಹಂತ” ಕುರಿತು ಮಾಹಿತಿ ನೀಡಿದರು.
ಭಾರತ ಸರ್ಕಾರದ ಶಿಕ್ಷಣ ಸಚಿವಾಲಯದ ಉನ್ನತ ಶಿಕ್ಷಣ ಇಲಾಖೆಯು,‘ಏಕ್ ಭಾರತ್ ಶ್ರೇಷ್ಠ ಭಾರತ್’ ಕಾರ್ಯಕ್ರಮದಡಿ ಹಮ್ಮಿಕೊಂಡಿರುವ ‘ಯುವ ಸಂಗಮ-7ನೇ ಹಂತ” ಭಾರತದ ವಿವಿಧ ಭಾಗಗಳ ಸಾಂಸ್ಕೃತಿಕ, ಸಾಮಾಜಿಕ, ಶೈಕ್ಷಣಿಕ ಹಾಗೂ ಅಭಿವೃದ್ಧಿಪರ ವೈವಿಧ್ಯತೆಯನ್ನು ಅನುಭವಿಸಲು ಮತ್ತು ಅರ್ಥಮಾಡಿಕೊಳ್ಳಲು ಯುವಜನರಿಗೆ ಅವಕಾಶ ಕಲ್ಪಿಸುವ ಉದ್ದೇಶವನ್ನು ಹೊಂದಿದೆ.
ಈ ಕಾರ್ಯಕ್ರಮವು ಐದು ಪ್ರಮುಖ ವಿಷಯಗಳಾದ ಪರ್ಯಟನ (ಪ್ರವಾಸೋದ್ಯಮ), ಪರಂಪರೆ (ಸಂಪ್ರದಾಯಗಳು), ಪ್ರಗತಿ (ಅಭಿವೃದ್ಧಿ), ಪರಸ್ಪರ ಸಂಪರ್ಕ (ಜನರ ನಡುವಿನ ಸಂಪರ್ಕ) ಮತ್ತು ಪ್ರೌದ್ಯೋಗಿಕಿ (ತಂತ್ರಜ್ಞಾನ)ಗಳನ್ನು ಆಧರಿಸಿದೆ. ಈ ವಿಷಯಗಳ ಮೂಲಕ ಭಾಗವಹಿಸುವವರು ವಿವಿಧ ಪ್ರದೇಶಗಳ ಐತಿಹಾಸಿಕ, ಸಾಂಸ್ಕೃತಿಕ ಮತ್ತು ನೈಸರ್ಗಿಕ ಪರಂಪರೆಯನ್ನು ಪರಿಚಯಿಸಿಕೊಳ್ಳಲಿದ್ದಾರೆ. ಸ್ಥಳೀಯ ಸಂಪ್ರದಾಯಗಳು ಮತ್ತು ಜೀವನಶೈಲಿಯ ಬಗ್ಗೆ ಅರಿವು ಪಡೆಯುವುದರ ಜೊತೆಗೆ, ಅಭಿವೃದ್ಧಿ ಉಪಕ್ರಮಗಳು ಹಾಗೂ ಆಡಳಿತ ವ್ಯವಸ್ಥೆಯ ಕುರಿತು ತಿಳಿದುಕೊಳ್ಳಲಿದ್ದಾರೆ. ಅಲ್ಲದೆ, ಸ್ಥಳೀಯ ಸಮುದಾಯಗಳೊಂದಿಗೆ ಸಂವಾದ ನಡೆಸಿ, ತಂತ್ರಜ್ಞಾನ, ನಾವೀನ್ಯತೆ ಮತ್ತು ಶಿಕ್ಷಣ ಕ್ಷೇತ್ರಗಳಲ್ಲಿ ಭಾರತದ ಸಾಧನೆಗಳನ್ನು ನೇರವಾಗಿ ಅರಿತುಕೊಳ್ಳಲಿದ್ದಾರೆ.
“ಮಧ್ಯಪ್ರದೇಶದ 51 ಸದಸ್ಯರ ನಿಯೋಗ ಕರ್ನಾಟಕಕ್ಕೆ ಭೇಟಿ”
‘ಯುವ ಸಂಗಮ’ ಕಾರ್ಯಕ್ರಮದ ಭಾಗವಾಗಿ, ಮಧ್ಯಪ್ರದೇಶದ 51 ಸದಸ್ಯರ ನಿಯೋಗವು 2026ರ ಸೆಪ್ಟೆಂಬರ್ 28ರಿಂದ ಅಕ್ಟೋಬರ್ 3ರವರೆಗೆ ಕರ್ನಾಟಕಕ್ಕೆ ಭೇಟಿ ನೀಡಲಿದೆ. ಈ ಭೇಟಿಯ ಸಂದರ್ಭದಲ್ಲಿ ನಿಯೋಗದ ಸದಸ್ಯರು ರಾಜ್ಯದ ಶ್ರೀಮಂತ ಸಾಂಸ್ಕೃತಿಕ ಪರಂಪರೆ, ಸಂಪ್ರದಾಯಗಳು, ಶಿಕ್ಷಣ ಸಂಸ್ಥೆಗಳು, ಅಭಿವೃದ್ಧಿ ಉಪಕ್ರಮಗಳು, ಆಹಾರ ಪದ್ಧತಿ, ಕಲೆ ಹಾಗೂ ಐತಿಹಾಸಿಕ ತಾಣಗಳನ್ನು ಪರಿಚಯಿಸಿಕೊಳ್ಳಲಿದ್ದಾರೆ. ಜೊತೆಗೆ ಸ್ಥಳೀಯ ಯುವಕರು ಮತ್ತು ಸಮುದಾಯಗಳೊಂದಿಗೆ ಸಂವಾದ ನಡೆಸಲಿದ್ದಾರೆ.
ಕರ್ನಾಟಕದ 53 ಸದಸ್ಯರ ನಿಯೋಗ ಮಧ್ಯಪ್ರದೇಶಕ್ಕೆ ಭೇಟಿ
ವಿನಿಮಯ ಕಾರ್ಯಕ್ರಮದ ಮತ್ತೊಂದು ಹಂತದಲ್ಲಿ, ಕರ್ನಾಟಕದ 53 ಸದಸ್ಯರ ನಿಯೋಗವು 2026ರ ಅಕ್ಟೋಬರ್ 10ರಿಂದ 17ರವರೆಗೆ ಮಧ್ಯಪ್ರದೇಶದ ಭೋಪಾಲ್ಗೆ ಭೇಟಿ ನೀಡಲಿದೆ. ಈ ಸಂದರ್ಭದಲ್ಲಿ ನಿಯೋಗದ ಸದಸ್ಯರು ಮಧ್ಯಪ್ರದೇಶದ ಸಾಂಸ್ಕೃತಿಕ ಪರಂಪರೆ, ಸಂಪ್ರದಾಯಗಳು, ಪ್ರವಾಸೋದ್ಯಮ, ಶಿಕ್ಷಣ ಸಂಸ್ಥೆಗಳು ಮತ್ತು ಅಭಿವೃದ್ಧಿ ಸಾಧನೆಗಳನ್ನು ಪರಿಚಯಿಸಿಕೊಳ್ಳಲಿದ್ದಾರೆ. ಅಲ್ಲದೆ, ವಿವಿಧ ಸಾಂಸ್ಕೃತಿಕ ಮತ್ತು ಶೈಕ್ಷಣಿಕ ಚಟುವಟಿಕೆಗಳಲ್ಲಿ ಭಾಗವಹಿಸಿ, ಸ್ಥಳೀಯ ಯುವಕರೊಂದಿಗೆ ಸಂವಾದ ನಡೆಸಲಿದ್ದಾರೆ.
ಕರ್ನಾಟಕ ಮತ್ತು ಮಧ್ಯಪ್ರದೇಶದ ಯುವಜನರು ಪರಸ್ಪರರಿಂದ ಕಲಿಯಲು, ಒಬ್ಬರ ಸಾಂಸ್ಕೃತಿಕ ಸಂಪ್ರದಾಯಗಳನ್ನು ಮತ್ತೊಬ್ಬರು ಪರಿಚಯಿಸಿಕೊಳ್ಳಲು ಹಾಗೂ ಭಾರತದ ಶ್ರೀಮಂತ ಮತ್ತು ವೈವಿಧ್ಯಮಯ ಸಾಂಸ್ಕೃತಿಕ ಪರಂಪರೆಯ ಬಗ್ಗೆ ಆಳವಾದ ಅರಿವು ಬೆಳೆಸಿಕೊಳ್ಳಲು ಅವಕಾಶ ಕಲ್ಪಿಸುವ ಮೂಲಕ ‘ಏಕ್ ಭಾರತ್ ಶ್ರೇಷ್ಠ ಭಾರತ್’ ಪರಿಕಲ್ಪನೆಯನ್ನು ಮತ್ತಷ್ಟು ಬಲಪಡಿಸುವುದು ಈ ವಿನಿಮಯ ಕಾರ್ಯಕ್ರಮದ ಉದ್ದೇಶವಾಗಿದೆ.
ಮಧ್ಯಪ್ರದೇಶದ 51 ಸದಸ್ಯರ ನಿಯೋಗವು 2026ರ ಸೆಪ್ಟೆಂಬರ್ 28ರಂದು ಕಲಬುರಗಿಗೆ ಆಗಮಿಸಲಿದೆ. ಪ್ರವಾಸದ ಅಂಗವಾಗಿ ನಿಯೋಗದ ಸದಸ್ಯರು ಸಮುದಾಯದೊಂದಿಗೆ ಸಂವಾದ ನಡೆಸಲು ತೆಲ್ಲೂರ್ಗೆ ಭೇಟಿ ನೀಡಲಿದ್ದಾರೆ. ಬಳಿಕ ಹುಮ್ನಾಬಾದ್ನ ಬೆಲ್ಲ ತಯಾರಿಕಾ ಘಟಕ, ಬೀದರ್ ಕೋಟೆ ಹಾಗೂ ಬೀದ್ರಿ ಕರಕುಶಲ ಕಲಾವಿದರೊಂದಿಗೆ ಸಂವಾದ ನಡೆಸಲಿದ್ದಾರೆ. ಮುಂದುವರೆದು ನಿಯೋಗವು ಐಐಎಂ ಬೆಂಗಳೂರು, ಇಸ್ರೋ, ವಿಶ್ವೇಶ್ವರಯ್ಯ ಕೈಗಾರಿಕಾ ಮತ್ತು ತಾಂತ್ರಿಕ ವಸ್ತುಸಂಗ್ರಹಾಲಯ ಹಾಗೂ ಲೋಕ ಭವನಕ್ಕೆ ಭೇಟಿ ನೀಡಲಿದೆ. ವಿವಿಧ ಸಾಂಸ್ಕೃತಿಕ, ಶೈಕ್ಷಣಿಕ ಹಾಗೂ ಅನುಭವಾತ್ಮಕ ಚಟುವಟಿಕೆಗಳಲ್ಲಿ ಭಾಗವಹಿಸಿದ ನಂತರ ಕರ್ನಾಟಕ ಪ್ರವಾಸವನ್ನು ಪೂರ್ಣಗೊಳಿಸಿ ಕಲಬುರಗಿಗೆ ಮರಳಲಿದೆ.
ಏತನ್ಮಧ್ಯೆ, ‘ಯುವ ಸಂಗಮ’ ವಿನಿಮಯ ಕಾರ್ಯಕ್ರಮದಲ್ಲಿ ಭಾಗವಹಿಸಲು ಕರ್ನಾಟಕದಿಂದ 5,926 ಅರ್ಜಿಗಳು ಸ್ವೀಕರಿಸಲಾಗಿತ್ತು. ಶಿಕ್ಷಣ ಸಚಿವಾಲಯದ ಮಾರ್ಗಸೂಚಿಗಳನ್ವಯ ಅರ್ಹತೆ ಮತ್ತು ಮೆರಿಟ್ ಆಧಾರದ ಮೇಲೆ ಕರ್ನಾಟಕದಿಂದ 50 ವಿದ್ಯಾರ್ಥಿ ಮತ್ತು ಯುವ ಪ್ರತಿನಿಧಿಗಳನ್ನು ಆಯ್ಕೆ ಮಾಡಲಾಗಿದೆ.
ಆಯ್ಕೆಯಾದ ತಂಡದಲ್ಲಿ 26 ಮಹಿಳಾ ಮತ್ತು 24 ಪುರುಷ ಪ್ರತಿನಿಧಿಗಳಿದ್ದು, ಅವರೊಂದಿಗೆ ಮೂರು ಅಧ್ಯಾಪಕ ಸಂಯೋಜಕರು ಮಧ್ಯಪ್ರದೇಶ ಪ್ರವಾಸದಲ್ಲಿ ಭಾಗವಹಿಸಲಿದ್ದಾರೆ. ಈ ಮೂಲಕ ಒಟ್ಟು 53 ಸದಸ್ಯರ ನಿಯೋಗ ಮಧ್ಯಪ್ರದೇಶಕ್ಕೆ ಭೇಟಿ ನೀಡಲಿದೆ.
‘ಯುವ ಸಂಗಮ’ ಉಪಕ್ರಮವು ದೇಶದ ವಿವಿಧ ಭಾಗಗಳ ಯುವಜನರಿಗೆ ಪ್ರಯಾಣಿಸಲು, ಪರಸ್ಪರ ಸಂವಾದ ನಡೆಸಲು ಮತ್ತು ಭಾರತದ ಸಾಂಸ್ಕೃತಿಕ, ಸಾಮಾಜಿಕ ಹಾಗೂ ಅಭಿವೃದ್ಧಿಪರ ವೈವಿಧ್ಯತೆಯನ್ನು ನೇರವಾಗಿ ಅನುಭವಿಸಲು ವೇದಿಕೆಯನ್ನು ಒದಗಿಸುತ್ತಿದೆ.
ಕರ್ನಾಟಕ ಮತ್ತು ಮಧ್ಯಪ್ರದೇಶದ ನಡುವಿನ ಯುವ ಸಂಗಮ 7ನೇ ಹಂತದ ವಿನಿಮಯ ಕಾರ್ಯಕ್ರಮವು ಸಾಂಸ್ಕೃತಿಕ ಕಲಿಕೆ, ಯುವಜನರ ನಡುವಿನ ಸಂವಾದ ಮತ್ತು ಪರಸ್ಪರ ತಿಳುವಳಿಕೆಗೆ ಅವಕಾಶ ಕಲ್ಪಿಸುವುದರ ಜೊತೆಗೆ, ರಾಷ್ಟ್ರೀಯ ಏಕತೆ ಹಾಗೂ ‘ವೈವಿಧ್ಯತೆಯಲ್ಲಿ ಏಕತೆ’ಯ ಭಾವನೆಯನ್ನು ಮತ್ತಷ್ಟು ಬಲಪಡಿಸಲಿದೆ.
ಪತ್ರಿಕಾಗೋಷ್ಟಿಯಲ್ಲಿ ಕುಲಸಚಿವರಾದ ಪ್ರೊ.ಆರ್.ಆರ್.ಬಿರಾದಾರ, ಸಾರ್ವಜನಿಕ ಸಂಪರ್ಕಾದಿಕಾರಿ ಹಾಗೂ ಸಹ ಪ್ರಾಧ್ಯಾಪಕರಾದ ಡಾ.ಗಣಪತಿ.ಬಿ.ಸಿನ್ನೂರು, ಕಾನೂನು ವಿಭಾಗ ನಿಕಾಯದ ಡೀನ್ ಪ್ರೊ.ಬಸವರಾಜ ಎಂ ಕುಬಕಡ್ಡಿ, ರಸಾಯನಶಾಸ್ತ್ರ ವಿಭಾಗದ ಪ್ರಾಧ್ಯಾಪಕ ಪ್ರೊ.ವೆಂಕಟರಮಣ ದೊಡ್ಡಿ, ಸಹಾಯಕ ಕುಲಸಚಿವ ಹಾಗೂ ಸಾರ್ವಜನಿಕ ಸಂಪರ್ಕಾಧಿಕಾರಿ ಡಾ,ಶ್ರೀಕಾಂತ ಎಂ ಕುಸೂರ, ಯುವಸಂಗಮ ಅಧಿಕಾರಿ ಡಾ.ಸಿವಾ, ಕಾರ್ಯಕ್ರಮ ಸಂಯೋಜಕ ಡಾ.ಜಗದೀಶ್ ಬಿರಾದಾರ ಅವರು ಉಪಸ್ಥಿತರಿದ್ದರು.
ವಿಕ್ರಮ ಓದುಗರ ವಾಟ್ಸಪ್ ಬಳಗಕ್ಕೆ ಸೇರಲು ಈ ಸಂಖ್ಯೆಯನ್ನು ನಿಮ್ಮ ಮೊಬೈಲ್ನಲ್ಲಿ ಸೇವ್ ಮಾಡಿಕೊಂಡು ನಮಗೊಂದು ಸಂದೇಶ ಕಳುಹಿಸಿ. ಮೊಬೈಲ್ ಸಂಖ್ಯೆ: 98800 21122
