ಇಂದಿನ ಸಮಾಜದಲ್ಲಿ ಶ್ರೀಮಂತಿಕೆ, ಅಧಿಕಾರ ಮತ್ತು ಪ್ರಭಾವದ ದರ್ಪದ ಮುಂದೆ ಮಾನವೀಯತೆ, ಪ್ರಾಮಾಣಿಕತೆ ಹಾಗೂ ನಿಸ್ವಾರ್ಥ ಸೇವೆಗಳಿಗೆ ಬೆಲೆ ಕಡಿಮೆಯಾಗುತ್ತಿರುವುದು ಅತ್ಯಂತ ಕಳವಳಕಾರಿ ಸಂಗತಿಯಾಗಿದೆ. ಒಬ್ಬ ವ್ಯಕ್ತಿಯ ನಿಜವಾದ ಶ್ರೀಮಂತಿಕೆ ಆತನ ಬಳಿ ಇರುವ ಹಣ, ಆಸ್ತಿ, ಅಧಿಕಾರ ಅಥವಾ ಹುದ್ದೆಯಿಂದ ನಿರ್ಧಾರವಾಗುವುದಿಲ್ಲ. ಬದಲಾಗಿ ಆತ ಸಮಾಜಕ್ಕಾಗಿ ಮಾಡಿದ ಸೇವೆ, ತೋರಿದ ಮಾನವೀಯತೆ ಮತ್ತು ಸಂಕಷ್ಟದಲ್ಲಿರುವ ಜನರಿಗೆ ನೀಡಿದ ಸಹಾಯದಿಂದ ನಿರ್ಧಾರವಾಗಬೇಕು. ಆದರೆ ಇಂದಿನ ಸಾಮಾಜಿಕ ವ್ಯವಸ್ಥೆಯಲ್ಲಿ ಈ ಮೌಲ್ಯಗಳಿಗೆ ಎಷ್ಟು ಗೌರವ ಸಿಗುತ್ತಿದೆ ಎಂಬ ಪ್ರಶ್ನೆ ನಮ್ಮೆಲ್ಲರನ್ನೂ ಕಾಡುತ್ತಿದೆ.
ಇಂದು ಪ್ರಾಮಾಣಿಕವಾಗಿ ದುಡಿಯುವವರಿಗೆ ಕವಡೆ ಕಾಸಿನ ಕಿಮ್ಮತ್ತೂ ಇಲ್ಲದಂತಾಗಿದೆ. ಆದರೆ ಕಪಟ ನಾಟಕ, ತೋರಿಕೆಯ ಸೇವೆ, ಹೊಗಳಿಕೆ ಮತ್ತು ಚೇಲಾಗಿರಿ ಮಾಡುವವರಿಗೆ ಮಾತ್ರ ಎಲ್ಲ ರೀತಿಯ ಅವಕಾಶಗಳು ಸುಲಭವಾಗಿ ದೊರೆಯುತ್ತಿರುವುದು ದುರಂತದ ಸಂಗತಿಯಾಗಿದೆ. ಕೆಲವು ಸಂಘ-ಸಂಸ್ಥೆಗಳಲ್ಲಿ ನಿಜವಾದ ಸೇವೆಗಿಂತ ವ್ಯಕ್ತಿಪೂಜೆ, ಅಧಿಕಾರದ ಪ್ರಭಾವ, ಹಣದ ಬಲ ಮತ್ತು ಶಿಫಾರಸುಗಳಿಗೆ ಹೆಚ್ಚಿನ ಆದ್ಯತೆ ಸಿಗುತ್ತಿರುವುದು ಸಾಮಾಜಿಕ ಮೌಲ್ಯಗಳ ಅಧಃಪತನಕ್ಕೆ ಸಾಕ್ಷಿಯಾಗಿದೆ.
ವಿಶೇಷವಾಗಿ ಪ್ರಶಸ್ತಿ, ಪುರಸ್ಕಾರ ಮತ್ತು ಸನ್ಮಾನಗಳ ಆಯ್ಕೆಯಲ್ಲಿ ನಿಜವಾದ ಸಾಧಕರಿಗೆ ಆದ್ಯತೆ ಸಿಗಬೇಕಾಗಿದೆ. ಆದರೆ ಕೆಲವೆಡೆ ಪ್ರಭಾವ, ಹಣದ ಲಾಬಿ, ರಾಜಕೀಯ ಸಂಪರ್ಕ ಹಾಗೂ ಅಧಿಕಾರದ ಪ್ರಭಾವದಿಂದ ಪ್ರಶಸ್ತಿಗಳು ಅರ್ಹರ ಕೈತಪ್ಪುತ್ತಿರುವ ಆರೋಪಗಳು ಕೇಳಿಬರುತ್ತಿವೆ. ಪ್ರಶಸ್ತಿ ಎನ್ನುವುದು ವ್ಯಕ್ತಿಯ ಮುಖ ನೋಡಿ ಅಥವಾ ಆತನ ಪ್ರಭಾವಕ್ಕೆ ಮಣಿದು ನೀಡುವ ಉಡುಗೊರೆಯಲ್ಲ. ಅದು ಆತನ ಸೇವೆ, ಸಾಧನೆ, ಪರಿಶ್ರಮ ಮತ್ತು ಸಮಾಜಕ್ಕೆ ನೀಡಿದ ಕೊಡುಗೆಗೆ ಸಲ್ಲಿಸುವ ಗೌರವವಾಗಬೇಕು.
ಇನ್ನೊಂದು ಪ್ರಮುಖ ವಿಚಾರವೆಂದರೆ ಇಂದಿನ ಮುದ್ರಣ ಮತ್ತು ದೃಶ್ಯ ಮಾಧ್ಯಮಗಳ ಕಾರ್ಯವೈಖರಿ. ಪ್ರತಿದಿನ ಪತ್ರಿಕೆಗಳಲ್ಲಿ ಮತ್ತು ದೂರದರ್ಶನಗಳಲ್ಲಿ ಕಾಣಿಸಿಕೊಳ್ಳುವ ಕೆಲವು ವ್ಯಕ್ತಿಗಳಿಗೆ ನಿರಂತರವಾಗಿ ಪ್ರಚಾರ, ಸನ್ಮಾನ, ಪ್ರಶಸ್ತಿ ಹಾಗೂ ವಿವಿಧ ಸಂಘ-ಸಂಸ್ಥೆಗಳ ಜವಾಬ್ದಾರಿಗಳು ದೊರೆಯುತ್ತಿವೆ. ಆದರೆ ಪ್ರಚಾರದಿಂದ ದೂರವಿದ್ದು, ಯಾವುದೇ ಪ್ರತಿಫಲಾಪೇಕ್ಷೆಯಿಲ್ಲದೆ ಸಮಾಜಕ್ಕಾಗಿ ದುಡಿಯುತ್ತಿರುವ ಸಾವಿರಾರು ಗ್ರಾಮೀಣ ಸಾಧಕರು ಮಾತ್ರ ಗುರುತಿಸಿಕೊಳ್ಳದೆ ಉಳಿಯುತ್ತಿದ್ದಾರೆ. ಇದು ನಿಜಕ್ಕೂ ನೋವಿನ ಸಂಗತಿಯಾಗಿದೆ.
ಹಳ್ಳಿಗಳಲ್ಲಿ ವಾಸಿಸುತ್ತಾ ಬಡವರ ಕಷ್ಟಗಳಿಗೆ ಸ್ಪಂದಿಸುವವರು, ಅನ್ಯಾಯದ ವಿರುದ್ಧ ಧ್ವನಿ ಎತ್ತುವವರು, ಪರಿಸರ ಸಂರಕ್ಷಣೆಗೆ ಶ್ರಮಿಸುವವರು, ಶಿಕ್ಷಣ, ಆರೋಗ್ಯ, ಸಾಮಾಜಿಕ ನ್ಯಾಯ ಮತ್ತು ಜನಜಾಗೃತಿಗಾಗಿ ನಿರಂತರವಾಗಿ ಕೆಲಸ ಮಾಡುವವರು ನಮ್ಮ ನಡುವೆ ಸಾಕಷ್ಟು ಜನರಿದ್ದಾರೆ. ಅವರು ಯಾವುದೇ ಪ್ರಚಾರದ ನಿರೀಕ್ಷೆಯಿಲ್ಲದೆ ತಮ್ಮ ಕೈಲಾದ ಸೇವೆ ಮಾಡುತ್ತಿದ್ದಾರೆ. ಜನಸಾಮಾನ್ಯರ ನೋವುಗಳಿಗೆ ಧ್ವನಿಯಾಗಿ, ಸಂಕಷ್ಟದಲ್ಲಿರುವ ಕುಟುಂಬಗಳಿಗೆ ನೆರವಾಗಿ, ಸಮಾಜದ ಅಭಿವೃದ್ಧಿಗಾಗಿ ಹಗಲಿರುಳು ಶ್ರಮಿಸುತ್ತಿದ್ದಾರೆ. ಆದರೆ ಇಂತಹವರ ಸೇವೆಗಳನ್ನು ಗುರುತಿಸುವವರು ಯಾರು?
ಮಾಧ್ಯಮಗಳು ಕೇವಲ ನಗರ ಪ್ರದೇಶಗಳಲ್ಲಿರುವ ಪ್ರಭಾವಿ ವ್ಯಕ್ತಿಗಳ ಸಾಧನೆಗಳಿಗೆ ಮಾತ್ರ ಆದ್ಯತೆ ನೀಡದೆ, ಹಳ್ಳಿಹಳ್ಳಿಗಳಲ್ಲಿ ನಡೆಯುತ್ತಿರುವ ಜನಪರ ಕಾರ್ಯಗಳಿಗೂ ಸಮಾನ ಪ್ರಾಮುಖ್ಯತೆ ನೀಡಬೇಕು. ಮಾಧ್ಯಮಗಳ ನಿಜವಾದ ಜವಾಬ್ದಾರಿ ಸಮಾಜದ ಎಲ್ಲ ವರ್ಗಗಳ ಧ್ವನಿಯಾಗುವುದಾಗಿದೆ. ಗ್ರಾಮೀಣ ಭಾಗದ ಸಾಧಕರು, ರೈತರು, ಪರಿಸರ ಹೋರಾಟಗಾರರು, ಸಾಮಾಜಿಕ ಕಾರ್ಯಕರ್ತರು ಮತ್ತು ನಿಸ್ವಾರ್ಥ ಸೇವಕರ ಸಾಧನೆಗಳನ್ನು ಜನರಿಗೆ ಪರಿಚಯಿಸುವ ಮೂಲಕ ಮಾಧ್ಯಮಗಳು ಸಾಮಾಜಿಕ ಬದಲಾವಣೆಗೆ ಕಾರಣವಾಗಬೇಕು.
ಅದೇ ರೀತಿ ದೊಡ್ಡ ದೊಡ್ಡ ಸಂಘ-ಸಂಸ್ಥೆಗಳು, ಮಠ-ಮಾನ್ಯಗಳು ಹಾಗೂ ಸಾಮಾಜಿಕ ಸಂಘಟನೆಗಳು ತಮ್ಮ ಪ್ರಶಸ್ತಿ ಮತ್ತು ಸನ್ಮಾನಗಳ ಆಯ್ಕೆಯಲ್ಲಿ ಪಾರದರ್ಶಕತೆ ಕಾಪಾಡಿಕೊಳ್ಳಬೇಕು. ವ್ಯಕ್ತಿಯ ಆರ್ಥಿಕ ಸ್ಥಿತಿ, ರಾಜಕೀಯ ಸಂಪರ್ಕ, ಹುದ್ದೆ ಅಥವಾ ಪ್ರಭಾವವನ್ನು ಮಾನದಂಡವಾಗಿಸದೆ, ಅವರ ನೈಜ ಸೇವೆ ಮತ್ತು ಸಾಧನೆಯನ್ನು ಪರಿಗಣಿಸಬೇಕು. ಸಮಾಜದ ಕಟ್ಟಕಡೆಯ ವ್ಯಕ್ತಿಯ ನೋವಿಗೆ ಸ್ಪಂದಿಸುವ ವ್ಯಕ್ತಿಗೂ ಗೌರವ ದೊರೆಯುವ ವಾತಾವರಣ ನಿರ್ಮಾಣವಾಗಬೇಕು.
ವಿಶೇಷವಾಗಿ ಕರ್ನಾಟಕ ಸರ್ಕಾರದ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಈ ನಿಟ್ಟಿನಲ್ಲಿ ಗಂಭೀರವಾಗಿ ಚಿಂತನೆ ಮಾಡಬೇಕಾಗಿದೆ. ಇಲಾಖೆಯ ನಿಗಮ-ಮಂಡಳಿಗಳ ಸದಸ್ಯತ್ವ, ನಿರ್ದೇಶಕರ ನೇಮಕಾತಿ ಹಾಗೂ ವಿವಿಧ ಸಾಂಸ್ಕೃತಿಕ ಜವಾಬ್ದಾರಿಗಳನ್ನು ನೀಡುವ ಸಂದರ್ಭದಲ್ಲಿ ಗ್ರಾಮೀಣ ಭಾಗದಲ್ಲಿ ದೀರ್ಘಕಾಲದಿಂದ ಕನ್ನಡ ಭಾಷೆ, ಸಾಹಿತ್ಯ, ಸಂಸ್ಕೃತಿ, ಪರಿಸರ ಮತ್ತು ಸಾಮಾಜಿಕ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸುತ್ತಿರುವ ಅರ್ಹ ವ್ಯಕ್ತಿಗಳನ್ನು ಗುರುತಿಸಬೇಕು. ಜಿಲ್ಲಾ ಮಟ್ಟದ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಚಟುವಟಿಕೆಗಳು ಕೇವಲ ಜಿಲ್ಲಾ ಕೇಂದ್ರಕ್ಕೆ ಸೀಮಿತವಾಗದೆ ಜಿಲ್ಲೆಯ ಪ್ರತಿಯೊಂದು ತಾಲೂಕು, ಹೋಬಳಿ ಮತ್ತು ಗ್ರಾಮೀಣ ಪ್ರದೇಶಗಳಿಗೂ ತಲುಪಬೇಕು. ಗ್ರಾಮೀಣ ಪ್ರತಿಭೆಗಳಿಗೆ ಅವಕಾಶ ಕಲ್ಪಿಸುವುದು ಇಲಾಖೆಯ ಪ್ರಮುಖ ಜವಾಬ್ದಾರಿಯಾಗಬೇಕು.
ನಾಡಿನ ಮಠಾಧೀಶರು, ಸಾಹಿತಿಗಳು, ಚಿಂತಕರು ಮತ್ತು ಸಂಘ-ಸಂಸ್ಥೆಗಳ ಮುಖಂಡರು ಕೂಡ ಈ ಕುರಿತು ಆತ್ಮಾವಲೋಕನ ಮಾಡಿಕೊಳ್ಳಬೇಕಾಗಿದೆ. ದೊಡ್ಡ ವ್ಯಕ್ತಿಗಳನ್ನು ಗುರುತಿಸುವುದಷ್ಟೇ ಸಾಧನೆಯಲ್ಲ; ಸಾಮಾನ್ಯ ಜನರ ಮಧ್ಯೆ ಅಸಾಮಾನ್ಯ ಸೇವೆ ಮಾಡುತ್ತಿರುವ ವ್ಯಕ್ತಿಗಳನ್ನು ಗುರುತಿಸುವುದೇ ನಿಜವಾದ ದೊಡ್ಡತನ. ಹಣ ಮತ್ತು ಅಧಿಕಾರದಿಂದ ಗೌರವವನ್ನು ಖರೀದಿಸಬಹುದು ಎಂಬ ಮನೋಭಾವ ಬದಲಾಗಬೇಕು. ಗೌರವ ಎನ್ನುವುದು ಸೇವೆಯಿಂದ ಗಳಿಸಬೇಕಾದದ್ದು ಎಂಬ ಅರಿವು ಸಮಾಜದಲ್ಲಿ ಮೂಡಬೇಕು.
ಸಮಾಜದಲ್ಲಿ ನಿಸ್ವಾರ್ಥವಾಗಿ ದುಡಿಯುವವರನ್ನು ನಿರ್ಲಕ್ಷಿಸಿದರೆ ಮುಂದಿನ ಪೀಳಿಗೆಯಲ್ಲಿ ಸೇವಾ ಮನೋಭಾವ ಬೆಳೆಸುವುದು ಕಷ್ಟವಾಗುತ್ತದೆ. ಪ್ರಾಮಾಣಿಕತೆಗೆ ಬೆಲೆ ಇಲ್ಲ, ಹಣ ಮತ್ತು ಪ್ರಭಾವ ಇದ್ದರೆ ಮಾತ್ರ ಅವಕಾಶಗಳು ದೊರೆಯುತ್ತವೆ ಎಂಬ ಸಂದೇಶ ಯುವಜನರಿಗೆ ಹೋಗಬಾರದು. ನಿಜವಾದ ಸಾಧಕರನ್ನು ಗುರುತಿಸಿ ಗೌರವಿಸುವ ಮೂಲಕ ಪ್ರಾಮಾಣಿಕತೆ ಮತ್ತು ಮಾನವೀಯತೆಯ ಮೌಲ್ಯಗಳನ್ನು ಉಳಿಸಬೇಕಾಗಿದೆ.
ಒಟ್ಟಿನಲ್ಲಿ, ಪ್ರಶಸ್ತಿಗಳು ಪ್ರಭಾವಿಗಳಿಗೆ ಮೀಸಲಾಗಬಾರದು; ಅವು ನಿಜವಾದ ಸಾಧಕರನ್ನು ತಲುಪಬೇಕು. ಸಂಘ-ಸಂಸ್ಥೆಗಳ ಜವಾಬ್ದಾರಿಗಳು ಚೇಲಾಗಿರಿಗೆ ಸೀಮಿತವಾಗಬಾರದು; ಅವು ಸೇವಾ ಮನೋಭಾವ ಹೊಂದಿರುವವರಿಗೆ ದೊರೆಯಬೇಕು. ಮಾಧ್ಯಮಗಳ ಬೆಳಕು ನಗರಗಳ ದೊಡ್ಡ ವ್ಯಕ್ತಿಗಳ ಮೇಲೆ ಮಾತ್ರ ಬೀಳದೆ, ಹಳ್ಳಿಗಳಲ್ಲಿ ಮೌನವಾಗಿ ಸೇವೆ ಸಲ್ಲಿಸುವವರ ಮೇಲೂ ಬೀಳಬೇಕು. ಅಧಿಕಾರ ಮತ್ತು ಹಣಕ್ಕಿಂತ ಮಾನವೀಯತೆ, ಪ್ರಭಾವಕ್ಕಿಂತ ಪ್ರಾಮಾಣಿಕತೆ, ತೋರಿಕೆಗಿಂತ ನಿಸ್ವಾರ್ಥ ಸೇವೆಗೆ ಮನ್ನಣೆ ದೊರೆಯುವ ದಿನವೇ ನಮ್ಮ ಸಮಾಜದ ನಿಜವಾದ ಅಭಿವೃದ್ಧಿಯ ದಿನವಾಗಲಿದೆ.
ನಾಡಿನ ಸಂಘ-ಸಂಸ್ಥೆಗಳು, ಮಠಾಧೀಶರು, ಸರ್ಕಾರ ಮತ್ತು ಮಾಧ್ಯಮಗಳು ಈ ನಿಟ್ಟಿನಲ್ಲಿ ಆತ್ಮಾವಲೋಕನ ಮಾಡಿಕೊಂಡು, ಪ್ರಚಾರದ ಹಂಗಿಲ್ಲದೆ ಸಮಾಜಕ್ಕಾಗಿ ದುಡಿಯುತ್ತಿರುವ ನೈಜ ಸೇವಕರನ್ನು ಗುರುತಿಸಿ ಗೌರವಿಸಲಿ ಎಂಬುದೇ ಈ ಲೇಖನದ ಆಶಯವಾಗಿದೆ.
- ಸಂಗಮೇಶ ಎನ್. ಜವಾದಿ,
ಬರಹಗಾರರು, ಪರಿಸರವಾದಿ, ಹೋರಾಟಗಾರರು,
ಬೀದರ ಜಿಲ್ಲೆ.
ವಿಕ್ರಮ ಓದುಗರ ವಾಟ್ಸಪ್ ಬಳಗಕ್ಕೆ ಸೇರಲು ಈ ಸಂಖ್ಯೆಯನ್ನು ನಿಮ್ಮ ಮೊಬೈಲ್ನಲ್ಲಿ ಸೇವ್ ಮಾಡಿಕೊಂಡು ನಮಗೊಂದು ಸಂದೇಶ ಕಳುಹಿಸಿ. ಮೊಬೈಲ್ ಸಂಖ್ಯೆ: 98800 21122
