- ಮಹಿಮ ಸಾಮಂತ್, ರಸಾಯನಶಾಸ್ತ್ರ ಪ್ರಾಧ್ಯಾಪಕಿ, ಬೆಂಗಳೂರು
ಸಮಾಜವನ್ನು ಹೊರಗಿನಿಂದ ನಾಶಮಾಡುವ ಶತ್ರುಗಳನ್ನು ಗುರುತಿಸುವುದು ಸುಲಭ. ಆದರೆ ಒಳಗಿನಿಂದ ನಿಧಾನವಾಗಿ ಕೊರೆಯುವ ಅಪಾಯಗಳನ್ನು ಗುರುತಿಸುವುದು ಕಷ್ಟ. ಇಂದು ಮಾನವ ಸಮಾಜದ ಬೇರುಗಳನ್ನೇ ಕರಗಿಸುತ್ತಿರುವ ಮೌನವಾದ ವಿಷಗಳಲ್ಲಿ ಭ್ರಷ್ಟಾಚಾರವೂ ಒಂದು. ಇದು ಕೇವಲ ಲಂಚ ಅಥವಾ ಅಕ್ರಮ ಹಣದ ವ್ಯವಹಾರವಲ್ಲ; ಇದು ನಾಶವಾಗುತ್ತಿರುವ ನಂಬಿಕೆ, ಕರ್ತವ್ಯ ದ್ರೋಹ ಮತ್ತು ಕುಸಿಯುತ್ತಿರುವ ಮೌಲ್ಯಗಳ ಪ್ರತಿಬಿಂಬವಾಗಿದೆ. ಒಂದು ರಾಷ್ಟ್ರದ ಬಲ ಅದರ ಸೇನೆ, ಸಂಪತ್ತು ಅಥವಾ ತಂತ್ರಜ್ಞಾನದಲ್ಲಷ್ಟೇ ಅಲ್ಲದೇ, ನಾಗರಿಕರ ಪ್ರಾಮಾಣಿಕತೆಯಲ್ಲಿಯೂ ಅಡಗಿದೆ. ಆದರೆ ಸ್ವಾರ್ಥ, ಲಾಲಸೆ ಮತ್ತು ಅಪ್ರಾಮಾಣಿಕತೆ ನಿಧಾನವಾಗಿ ಸಮಾಜದ ಪ್ರತಿಯೊಂದು ಹಂತಕ್ಕೂ ನುಗ್ಗಿದಾಗ ರಾಷ್ಟ್ರದ ಆತ್ಮವೇ ದುರ್ಬಲಗೊಳ್ಳಲು ಆರಂಭವಾಗುತ್ತದೆ.
ಇಂದು ಈ ಅನೈತಿಕ ವ್ಯವಸ್ಥೆ ಕೇವಲ ರಾಜಕೀಯ ಅಥವಾ ಸರ್ಕಾರಿ ಕಚೇರಿಗಳಿಗೆ ಮಾತ್ರ ಸೀಮಿತವಾಗಿಲ್ಲ, ಸಮಾಜದ ಪ್ರತಿಯೊಂದು ಹಂತದಲ್ಲಿಯೂ ತನ್ನ ಬೇರುಗಳನ್ನು ಬಿಟ್ಟಿದೆ. ಕೆಲ ಶಿಕ್ಷಕರು ಜ್ಞಾನ ನೀಡುವ ಬದಲು ಹಣಕ್ಕಾಗಿ ಖಾಸಗಿ ಟ್ಯೂಷನ್ ಪಡೆಯಲು ಒತ್ತಾಯಿಸುವುದು, ಕೆಲ ವೈದ್ಯರು ಅಗತ್ಯವಿಲ್ಲದ ಪರೀಕ್ಷೆಗಳು ಮತ್ತು ಔಷಧಿಗಳನ್ನು ಬರೆಯುವುದು, ಕೆಲ ಪೊಲೀಸ್ ಸಿಬ್ಬಂದಿ ನಿಯಮ ಉಲ್ಲಂಘನೆಗೆ ದಂಡ ವಿಧಿಸುವ ಬದಲು ಲಂಚ ಸ್ವೀಕರಿಸುವುದು — ಇವೆಲ್ಲವೂ ಸಮಾಜದ ನಂಬಿಕೆಯನ್ನು ಕುಗ್ಗಿಸುತ್ತವೆ.
ಕೆಲ ಎಂಜಿನಿಯರ್ಗಳು ಮತ್ತು ಗುತ್ತಿಗೆದಾರರು ಕಳಪೆ ಗುಣಮಟ್ಟದ ವಸ್ತುಗಳನ್ನು ಬಳಸಿ ರಸ್ತೆ, ಕಟ್ಟಡ ಮತ್ತು ಸೇತುವೆಗಳನ್ನು ನಿರ್ಮಿಸುತ್ತಾರೆ. ಪರಿಣಾಮವಾಗಿ ಸಾರ್ವಜನಿಕ ಆಸ್ತಿ ಹಾಳಾಗುವುದಲ್ಲದೆ ಅನೇಕ ನಿರಪರಾಧಿ ಜೀವಗಳು ಅಪಾಯಕ್ಕೆ ಒಳಗಾಗುತ್ತವೆ. ಕೆಲ ಸರ್ಕಾರಿ ಕಚೇರಿಗಳಲ್ಲಿ ಸಾಮಾನ್ಯ ಪ್ರಮಾಣಪತ್ರ ಪಡೆಯುವುದಕ್ಕೂ ಜನರು ಮಧ್ಯವರ್ತಿಗಳ ಸಹಾಯ ಪಡೆಯಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ಕಾನೂನು ಮತ್ತು ನ್ಯಾಯವನ್ನು ರಕ್ಷಿಸಬೇಕಾದ ಕೆಲ ವಕೀಲರು ಹಾಗೂ ಅಧಿಕಾರಿಗಳೂ ಕೆಲವೊಮ್ಮೆ ಸತ್ಯಕ್ಕಿಂತ ಹಣ ಮತ್ತು ಪ್ರಭಾವಕ್ಕೆ ಹೆಚ್ಚಿನ ಮಹತ್ವ ನೀಡುತ್ತಿರುವುದು ವಿಷಾದನೀಯ.
ಇತ್ತೀಚಿನ ದಿನಗಳಲ್ಲಿ ಪರೀಕ್ಷಾ ವ್ಯವಸ್ಥೆಗಳಲ್ಲಿಯೂ ಅಕ್ರಮ ಪ್ರವೃತ್ತಿಯ ನೆರಳು ಕಾಣಿಸುತ್ತಿದೆ. NEET ಸೇರಿದಂತೆ ಕೆಲವು ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಪ್ರಶ್ನೆಪತ್ರಿಕೆ ಸೋರಿಕೆ, ಅಕ್ರಮ ಪ್ರವೇಶ, ಹಣದ ಪ್ರಭಾವ ಮುಂತಾದ ಘಟನೆಗಳು ಪ್ರತಿಭಾವಂತ ವಿದ್ಯಾರ್ಥಿಗಳ ಕನಸುಗಳಿಗೆ ಧಕ್ಕೆ ತಂದಿವೆ. ಒಬ್ಬ ವಿದ್ಯಾರ್ಥಿ ರಾತ್ರಿ ನಿದ್ದೆ ಬಿಟ್ಟು ಪರಿಶ್ರಮ ಪಡುತ್ತಿದ್ದರೆ, ಮತ್ತೊಬ್ಬನು ಹಣದ ಬಲದಿಂದ ಅವಕಾಶ ಖರೀದಿಸುತ್ತಿರುವುದು ಸಮಾಜದ ಅತ್ಯಂತ ದುಃಖಕರ ಚಿತ್ರವಾಗಿದೆ. ಪರಿಶ್ರಮಕ್ಕಿಂತ ಹಣ ಮತ್ತು ಸಂಪರ್ಕಕ್ಕೆ ಹೆಚ್ಚು ಮೌಲ್ಯ ಸಿಗುತ್ತಿರುವುದು ಯುವಜನತೆಯ ವಿಶ್ವಾಸವನ್ನೇ ಕುಗ್ಗಿಸುತ್ತಿದೆ.
“ಮೌಲ್ಯಗಳು ಸಾಯುವ ಜಾಗದಲ್ಲೇ ಅನೈತಿಕತೆ ಹುಟ್ಟುತ್ತದೆ” ಎಂಬ ಮಾತಿದೆ. ಸಾಮಾನ್ಯ ಜನರ ದಿನನಿತ್ಯದ ಬದುಕಿನಲ್ಲಿಯೂ ಲಂಚದ ಸಂಸ್ಕೃತಿಯ ರೂಪಗಳು ಹೆಚ್ಚುತ್ತಿವೆ. ಆಟೋ, ಟ್ಯಾಕ್ಸಿ, ಬಸ್, LPG ಗ್ಯಾಸ್ ಸೇರಿದಂತೆ ಕೆಲವು ಸಾರ್ವಜನಿಕ ಸೇವೆಗಳಲ್ಲಿ ಜನರ ಅನಿವಾರ್ಯತೆಯನ್ನು ದುರುಪಯೋಗಪಡಿಸಿಕೊಂಡು ಹೆಚ್ಚುವರಿ ಹಣ ವಸೂಲಿ ಮಾಡುವ ಘಟನೆಗಳು ಸಾಮಾನ್ಯವಾಗಿವೆ. ಸಂಕಷ್ಟದ ಸಮಯದಲ್ಲಿ ಸಹಾಯ ಮಾಡುವ ಬದಲು ಜನರ ಅಗತ್ಯವನ್ನೇ ಲಾಭದ ಸಾಧನವಾಗಿಸುವ ಮನೋಭಾವ ಸಮಾಜದ ನೈತಿಕ ದಾರಿದ್ರ್ಯವನ್ನು ತೋರಿಸುತ್ತದೆ.
ಕೆಲ ರಾಜಕಾರಣಿಗಳು ಜನಸೇವೆಯ ಬದಲು ಸ್ವಾರ್ಥ ರಾಜಕಾರಣಕ್ಕೆ ಆದ್ಯತೆ ನೀಡುತ್ತಾರೆ. ಚುನಾವಣೆ ಸಮಯದಲ್ಲಿ ನೀಡುವ ಭರವಸೆಗಳು ನಂತರ ಮರೆತುಹೋಗುತ್ತವೆ. ಅಭಿವೃದ್ಧಿಗೆ ಬಳಸಬೇಕಾದರೆ ಜನರ ತೆರಿಗೆಯ ಹಣ ಕೆಲವರ ವೈಯಕ್ತಿಕ ಲಾಭಕ್ಕೆ ಹರಿದುಹೋಗುವ ಪರಿಸ್ಥಿತಿಯೂ ಕಂಡುಬರುತ್ತದೆ. ಹೀಗಾಗಿ ಈ ಅಕ್ರಮ ವ್ಯವಸ್ಥೆ ಕೇವಲ ಆರ್ಥಿಕ ನಷ್ಟವನ್ನಷ್ಟೇ ಉಂಟುಮಾಡುವುದಿಲ್ಲ; ಅದು ಜನರ ವಿಶ್ವಾಸವನ್ನೂ ಕೊಲ್ಲುತ್ತದೆ.
ಆದರೆ ಭ್ರಷ್ಟಾಚಾರ ಎಂದರೆ ಕೇವಲ ಹಣದ ಲಂಚವಷ್ಟೇ ಅಲ್ಲ. ಇಂದು ಅದು ಮನಸ್ಸಿನ ಮಟ್ಟಕ್ಕೂ ತಲುಪಿದೆ. ತಪ್ಪು ಗೊತ್ತಿದ್ದರೂ ಮೌನವಾಗಿರುವುದು, ಸತ್ಯವನ್ನು ಸ್ವಾರ್ಥಕ್ಕಾಗಿ ಮರೆಮಾಚುವುದು, ಪರಿಚಯದ ಮೂಲಕ ನಿಯಮ ಮೀರುವುದು — ಇವೆಲ್ಲವೂ ಅಪ್ರಾಮಾಣಿಕತೆಯ ರೂಪಗಳೇ. ಕೈಗೆ ಹಣ ತೆಗೆದುಕೊಳ್ಳುವುದೇ ಭ್ರಷ್ಟಾಚಾರವಲ್ಲ; ಸತ್ಯವನ್ನು ಮೌನಕ್ಕೆ ಮಾರಿಕೊಳ್ಳುವುದೂ ಭ್ರಷ್ಟಾಚಾರವೇ ಆಗಿದೆ.
ಸತ್ಯ ದುರ್ಬಲವಾದಾಗ ಸಮಾಜ ಕುಸಿಯಲು ಆರಂಭವಾಗುತ್ತದೆ. ಇಂದಿನ ಡಿಜಿಟಲ್ ಯುಗದಲ್ಲಿ ಅನೈತಿಕತೆ ತನ್ನ ಹೊಸ ಮುಖಗಳನ್ನು ತೋರಿಸುತ್ತಿದೆ. ನಕಲಿ ಪ್ರಮಾಣಪತ್ರಗಳು, ಆನ್ಲೈನ್ ಪರೀಕ್ಷಾ ಮೋಸಗಳು, ಹಣಕ್ಕಾಗಿ ನಕಲಿ ಸೋಶಿಯಲ್ ಮೀಡಿಯಾ ಫಾಲೋವರ್ಸ್, ಫೇಕ್ ರಿವ್ಯೂಗಳು, AI ಬಳಸಿ ತಪ್ಪು ಮಾಹಿತಿ ಹರಡುವುದು — ಇವೆಲ್ಲವೂ ಆಧುನಿಕ ಅಕ್ರಮ ಮನೋಭಾವದ ರೂಪಗಳಾಗಿವೆ. ತಂತ್ರಜ್ಞಾನ ಬೆಳೆಯುತ್ತಿದ್ದಂತೆ ಈ ಅನೈತಿಕತೆಯೂ ತನ್ನ ರೂಪವನ್ನು ಬದಲಿಸಿಕೊಂಡಿದೆ; ಇಂದು ಅದು ಫೈಲ್ಗಳಲ್ಲಿ ಮಾತ್ರವಲ್ಲ, ಡಿಜಿಟಲ್ ಪರದೆಗಳ ಹಿಂದೆಯೂ ಅಡಗಿದೆ.
ಸಂಬಂಧಗಳಲ್ಲಿಯೂ ಮೌಲ್ಯಗಳ ಕುಸಿತದ ನೆರಳು ಕಾಣಿಸುತ್ತಿದೆ. ಕೆಲವರು ಹಣ, ಸ್ಥಾನಮಾನ ಅಥವಾ ಲಾಭ ನೋಡಿ ಮಾತ್ರ ಸಂಬಂಧ ಬೆಳೆಸುತ್ತಾರೆ. ಉಪಯೋಗ ಮುಗಿದ ನಂತರ ದೂರವಾಗುತ್ತಾರೆ. ಇಂತಹ ಸಂಬಂಧಗಳಲ್ಲಿ ಪ್ರೀತಿ ಕಡಿಮೆ, ಸ್ವಾರ್ಥ ಹೆಚ್ಚು. ಇಂದು ಕೆಲ ಸಂಬಂಧಗಳು ಹೃದಯದಿಂದ ಅಲ್ಲ, ಲಾಭ-ನಷ್ಟದ ಲೆಕ್ಕಾಚಾರದಿಂದ ನಿರ್ಮಾಣವಾಗುತ್ತಿವೆ.
ಪ್ರಕೃತಿಯ ಮೇಲಿನ ಅನ್ಯಾಯವೂ ಒಂದು ರೀತಿಯ ಸಾಮಾಜಿಕ ಅಕ್ರಮವೇ. ಅಕ್ರಮ ಗಣಿಗಾರಿಕೆ, ಮರಗಳ ಕಡಿತ, ನದಿಗಳ ಮಾಲಿನ್ಯ, ಕಳಪೆ ತ್ಯಾಜ್ಯ ನಿರ್ವಹಣೆ — ಇವೆಲ್ಲವೂ ಮುಂದಿನ ಪೀಳಿಗೆಯ ಹಕ್ಕುಗಳನ್ನು ಕಸಿದುಕೊಳ್ಳುವ ಕ್ರಿಯೆಗಳಾಗಿವೆ. ಈ ನೈತಿಕ ಪತನ ಮನುಷ್ಯನನ್ನು ಮಾತ್ರವಲ್ಲ, ಪರಿಸರವನ್ನೂ ನಿಧಾನವಾಗಿ ವಿಷಮಯಗೊಳಿಸುತ್ತದೆ.
ಸಾಮಾಜಿಕ ಒಳಕುಸಿತದ ಮೂಲ ಕಾರಣಗಳಲ್ಲಿ ಅತಿಯಾದ ಲಾಲಸೆ, ತ್ವರಿತ ಯಶಸ್ಸಿನ ಆಸೆ ಮತ್ತು ನೈತಿಕ ಮೌಲ್ಯಗಳ ಕೊರತೆ ಪ್ರಮುಖವಾಗಿವೆ. ಹಿಂದೆ ಗೌರವ ವ್ಯಕ್ತಿತ್ವದಿಂದ ಬರುತ್ತಿತ್ತು; ಇಂದು ಕೆಲವರು ಅದನ್ನು ಹಣ ಮತ್ತು ಸ್ಥಾನದಿಂದ ಅಳೆಯಲು ಆರಂಭಿಸಿದ್ದಾರೆ. “ಹಣ ಇದ್ದರೆ ಎಲ್ಲವೂ ಸಾಧ್ಯ” ಎಂಬ ಮನೋಭಾವವೇ ಈ ಅಕ್ರಮ ಪ್ರವೃತ್ತಿಗೆ ದೊಡ್ಡ ಬಲವಾಗಿದೆ.
ದೊಡ್ಡ ಭ್ರಷ್ಟಾಚಾರಗಳು ಒಂದೇ ದಿನ ಹುಟ್ಟುವುದಿಲ್ಲ; ಅವು ಸಣ್ಣ ಅಪ್ರಾಮಾಣಿಕತೆಗಳ ನೆರಳಲ್ಲಿ ಬೆಳೆದು ದೊಡ್ಡದಾಗುತ್ತವೆ. ಸಾಲಿನಲ್ಲಿ ಮುಂದೆ ಹೋಗುವುದು, ಟಿಕೆಟ್ ಇಲ್ಲದೆ ಪ್ರಯಾಣ ಮಾಡುವುದು, ಸಣ್ಣ ಸುಳ್ಳು ಹೇಳಿ ಲಾಭ ಪಡೆಯುವುದು, ಪರಿಚಯ ಬಳಸಿ ನಿಯಮ ಮೀರುವುದು — ಇಂತಹ ಸಣ್ಣ ಅಪ್ರಾಮಾಣಿಕತೆಗಳೇ ನಂತರ ದೊಡ್ಡಮಟ್ಟದ ಅನೈತಿಕತೆಗೆ ಕಾರಣವಾಗುತ್ತವೆ.
ಕೆಲವೊಮ್ಮೆ ಈ ವ್ಯವಸ್ಥೆಯ ದುಷ್ಪರಿಣಾಮಗಳನ್ನು ಜನರು ಇಚ್ಛೆಯಿಂದ ಅನುಸರಿಸುವುದಿಲ್ಲ; ಪರಿಸ್ಥಿತಿಯ ಒತ್ತಡದಿಂದ ಮಾಡುತ್ತಾರೆ. ಕೆಲಸ ಸಮಯಕ್ಕೆ ಆಗದೇ ತಡವಾಗುವುದು, ಅನಗತ್ಯ ಕಚೇರಿ ಸುತ್ತಾಟ, ವ್ಯವಸ್ಥೆಯ ನಿರ್ಲಕ್ಷ್ಯ — ಇವೆಲ್ಲವೂ ಸಾಮಾನ್ಯ ನಾಗರಿಕನನ್ನು ಲಂಚ ನೀಡುವ ಸ್ಥಿತಿಗೆ ತಳ್ಳುತ್ತವೆ. ತಪ್ಪು ಎಂಬುದು ಗೊತ್ತಿದ್ದರೂ “ಇದಿಲ್ಲದೆ ಕೆಲಸ ಆಗುವುದಿಲ್ಲ” ಎಂಬ ನಿರಾಶೆಯ ಮನಸ್ಥಿತಿ ಸಮಾಜದಲ್ಲಿ ಬೆಳೆದುಬರುತ್ತಿರುವುದು ಅತ್ಯಂತ ಅಪಾಯಕಾರಿ. ಕೆಲವೊಮ್ಮೆ ಲಂಚ ಕೊಡುವ ಕೈಗೂ ನೋವಿರುತ್ತದೆ.
ಕಾನೂನಿಗಿಂತ ಮೊದಲು ಮನಸ್ಸು ಎಚ್ಚರಗೊಳ್ಳಬೇಕು
ಈ ಅನೈತಿಕತೆಯನ್ನು ತಡೆಯಲು ಕೇವಲ ಕಾನೂನು ಸಾಕಾಗುವುದಿಲ್ಲ. ಕಠಿಣ ಶಿಕ್ಷೆಯ ಜೊತೆಗೆ ಮೌಲ್ಯಾಧಾರಿತ ಶಿಕ್ಷಣವೂ ಅಗತ್ಯ. ಮಕ್ಕಳಿಗೆ ಬಾಲ್ಯದಲ್ಲಿಯೇ ಪ್ರಾಮಾಣಿಕತೆ, ಕರ್ತವ್ಯನಿಷ್ಠೆ ಮತ್ತು ಸಮಾಜಪರ ಚಿಂತನೆಗಳನ್ನು ಕಲಿಸಬೇಕು. ಮನೆ, ಶಾಲೆ ಮತ್ತು ಸಮಾಜ — ಈ ಮೂರು ಸೇರಿ ಒಳ್ಳೆಯ ನಾಗರಿಕರನ್ನು ರೂಪಿಸಬೇಕು. ವೈರಸ್ ದೇಹವನ್ನು ದುರ್ಬಲಗೊಳಿಸಿದರೆ, ಈ ನೈತಿಕ ಪತನ ಸಮಾಜದ ಆತ್ಮವನ್ನೇ ದುರ್ಬಲಗೊಳಿಸುತ್ತದೆ. ವೈರಸ್ಗೆ ಔಷಧ ಸಿಗಬಹುದು; ಆದರೆ ಭ್ರಷ್ಟಾಚಾರಕ್ಕೆ ಮನುಷ್ಯನ ಮನಸ್ಸೇ ಔಷಧ.
ಮಾಧ್ಯಮಗಳು, ಶಿಕ್ಷಕರು ಮತ್ತು ಯುವಜನತೆ ಈ ಹೋರಾಟದಲ್ಲಿ ಪ್ರಮುಖ ಪಾತ್ರವಹಿಸಬಹುದು. ತಪ್ಪಿನ ವಿರುದ್ಧ ಧ್ವನಿ ಎತ್ತುವ ಧೈರ್ಯ, ಅನ್ಯಾಯವನ್ನು ಪ್ರಶ್ನಿಸುವ ಮನೋಭಾವ ಮತ್ತು ಸತ್ಯದ ಪರ ನಿಲ್ಲುವ ನಿಷ್ಠೆ ಬೆಳೆದಾಗ ಮಾತ್ರ ಸಮಾಜದಲ್ಲಿ ನಿಜವಾದ ಬದಲಾವಣೆ ಸಾಧ್ಯ. ದೇಶಭಕ್ತಿ ಎಂದರೆ ಕೇವಲ ಧ್ವಜ ಹಿಡಿಯುವುದಲ್ಲ; ತಪ್ಪಿನ ಎದುರು ಮೌನವಾಗದೆ ನಿಲ್ಲುವುದೂ ದೇಶಭಕ್ತಿಯೇ.
ಅಂತಿಮವಾಗಿ, ಭ್ರಷ್ಟಾಚಾರವು ಕೇವಲ ಸರ್ಕಾರದ ಅಥವಾ ಕೆಲ ವ್ಯಕ್ತಿಗಳ ಸಮಸ್ಯೆಯಲ್ಲ; ಅದು ಸಮಾಜದ ಆತ್ಮಸಾಕ್ಷಿಯನ್ನು ಪ್ರಶ್ನಿಸುವ ಗಂಭೀರ ಸವಾಲಾಗಿದೆ. ಕಾನೂನುಗಳು ತಪ್ಪನ್ನು ಶಿಕ್ಷಿಸಬಹುದು, ಆದರೆ ಮನುಷ್ಯನ ಮನಸ್ಸನ್ನು ಶುದ್ಧಗೊಳಿಸಲು ಸಾಧ್ಯವಿಲ್ಲ. ಅದಕ್ಕಾಗಿ ಪ್ರಾಮಾಣಿಕತೆ, ನೈತಿಕತೆ ಮತ್ತು ಮಾನವೀಯತೆ ಪ್ರತಿಯೊಬ್ಬರ ಬದುಕಿನ ಭಾಗವಾಗಬೇಕು. ದೇಶವನ್ನು ಬಲಿಷ್ಠವಾಗಿಸುವುದು ಕೇವಲ ಅಭಿವೃದ್ಧಿ ಯೋಜನೆಗಳು ಅಥವಾ ಆರ್ಥಿಕ ಪ್ರಗತಿಯಲ್ಲ; ಸತ್ಯದ ಪರ ನಿಲ್ಲುವ ನಾಗರಿಕರ ಮನೋಭಾವದಲ್ಲಿದೆ. ಒಂದು ರಾಷ್ಟ್ರವನ್ನು ಉಳಿಸುವುದು ಗಡಿಯಲ್ಲಿ ನಿಂತ ಸೈನಿಕರಷ್ಟೇ ಅಲ್ಲ, ದಿನನಿತ್ಯದ ಬದುಕಿನಲ್ಲಿ ಸತ್ಯ ಮತ್ತು ನ್ಯಾಯವನ್ನು ಪಾಲಿಸುವ ಸಾಮಾನ್ಯ ಜನರೂ ಹೌದು. ಆದ್ದರಿಂದ ‘ಭ್ರಷ್ಟಾಚಾರ ಮುಕ್ತ ಭಾರತ’ ಎಂಬುದು ಕೇವಲ ಘೋಷಣೆಯಾಗದೆ, ಪ್ರತಿಯೊಬ್ಬರ ಜೀವನದ ನೈತಿಕ ಸಂಕಲ್ಪವಾಗಬೇಕು. ಏಕೆಂದರೆ ಒಂದು ರಾಷ್ಟ್ರಕ್ಕೆ ಹೊರಗಿನಿಂದ ಬರುವ ಶತ್ರುಗಳಿಗಿಂತ, ಒಳಗಿನಿಂದ ಬೆಳೆವ ಅನೈತಿಕತೆಯೇ ಹೆಚ್ಚು ಅಪಾಯಕಾರಿಯಾಗಿದೆ.
