ರೇಶ್ಮಿ ಆಯಿಷಾ ತಿರುವನಂತಪುರಂ ಕಿಮ್ಸ್ ಹೆಲ್ತ್ ಆಸ್ಪತ್ರೆಯ ಸಿಇಒ ಮತ್ತು ನಾಗರ ಕೊಯಿಲ್ನ ಅದೇ ಸಮೂಹದ ಆಸ್ಪತ್ರೆಯ ನಿರ್ದೇಶಕಿ. ಆಕೆ ಆರ್ಎಸ್ಎಸ್ ಸಂಘಟನೆಯನ್ನು ತಾನು ಪರಿಭಾವಿಸಿದ ಬಗ್ಗೆ, ಆ ಸಂಘಟನೆಯ ಕುರಿತ ತನ್ನ ಒಳನೋಟಗಳನ್ನು ಸಾಮಾಜಿಕ ಜಾಲತಾಣದಲ್ಲಿ ದಾಖಲಿಸಿದ್ದಾರೆ. ಆರ್ಎಸ್ಎಸ್ ಬಗ್ಗೆ ರೇಶ್ಮಿ ಆಯಿಷಾ ಹೇಳಿದ್ದನ್ನು ಇಲ್ಲಿ ನೀಡಲಾಗಿದೆ.
ಮೊದಲು ನನಗೆ ಆರ್ಎಸ್ಎಸ್ ಬಗ್ಗೆ ಸ್ಪಷ್ಟವಾದ ತಿಳಿವಳಿಕೆ ಇರಲಿಲ್ಲ. ಅಲ್ಲಿ ಇಲ್ಲಿ ಕೇಳಲ್ಪಟ್ಟ ವದಂತಿಗಳೇ ನನ್ನ ತಲೆಯೊಳಗೆ ತುಂಬಿದ್ದವು. ಮುಸ್ಲಿಮರನ್ನು ಈ ದೇಶದಿಂದ ಒದ್ದೋಡಿಸುವುದೇ ಆರ್ಎಸ್ಎಸ್ನ ಗುಪ್ತ ಅಜೆಂಡಾ ಎಂದು ಹೇಳಲಾಗುತ್ತಿದ್ದ ವದಂತಿಯನ್ನೇ ನಾನು ನಂಬಿದ್ದೆ. ಹಾಗಾಗಿ ಇದು ನನ್ನನ್ನು ಭಯಗ್ರಸ್ಥಳನ್ನಾಗಿ ಮಾಡಿತ್ತು. ಅದರಿಂದಾಗಿ ನಾನು ಭಯ ಮತ್ತು ದ್ವೇಷದ ಮನೋಭಾವದಿಂದಲೇ ಆರ್ಎಸ್ಎಸ್ ಅನ್ನು ನೋಡುತ್ತಿದ್ದೆ.
ಹೀಗಿರುವಾಗ ತನ್ನ ಸ್ನೇಹಿತನೊಬ್ಬನಿಗೆ ಚಿಕಿತ್ಸೆ ಕೊಡಿಸಲೆಂದು ಒಬ್ಬ ಆರ್ಎಸ್ಎಸ್ ಸ್ವಯಂಸೇವಕರು ನಮ್ಮ ಆಸ್ಪತ್ರೆಗೆ ಬಂದಿದ್ದರು. ಅವರ ಹೆಸರು ಸಿ. ಬಾಬು. ತನ್ನ ಪರಿಚಯ ಮಾಡಿಕೊಂಡ ಅವರು, ತಾನೊಬ್ಬ ಆರ್ಎಸ್ಎಸ್ನ ಪ್ರಾಂತ ಮಟ್ಟದ ಕಾರ್ಯಕರ್ತ ಎಂದು ಹೇಳಿದರು. ಆರ್ಎಸ್ಎಸ್ ಅಂದರೇನೇ ಹೆದರಿಕೊಂಡಿದ್ದ ನನಗೆ ಈತನನ್ನು ನೋಡಿ ಇನ್ನೂ ಹೆದರಿಕೆಯಾಯಿತು. ಆದರೆ ಆ ವ್ಯಕ್ತಿ ಬಲು ಮೃದುವಾಗಿ, ವಿನಯಶಾಲಿಯಾಗಿ ಮಾತನಾಡಿದರು. ಆತನ ವೇಷ – ಕೇವಲ ಒಂದು ಮುಂಡು (ಕೇರಳ ಧೋತಿ), ಒಂದು ಶರಟು ಮತ್ತು ಹೆಗಲಲ್ಲೊಂದು ಬಟ್ಟೆಯ ಬ್ಯಾಗು – ಅತ್ಯಂತ ಸರಳವಾಗಿತ್ತು. ಆದರೂ ಆತ ತಾನೊಬ್ಬ ಪ್ರಾಂತಮಟ್ಟದ ಪದಾಧಿಕಾರಿ ಎಂದಾಗ ನನಗೇ ಅಚ್ಚರಿ! ಇಷ್ಟು ಸರಳ ವೇಷದಲ್ಲಿರುವ ಸಂಘಟನೆಯೊಂದರ ಮುಖಂಡನನ್ನು ನಾನು ಇದುವರೆಗೆ ನೋಡಿರಲಿಲ್ಲ.
ನನಗಂತೂ ಆಶ್ಚರ್ಯವೋ ಆಶ್ಚರ್ಯ. ನಾನು ಕಲ್ಪಿಸಿಕೊಂಡ ಆರ್ಎಸ್ಎಸ್ ಇದಾಗಿರಲಿಲ್ಲ. ಆರ್ಎಸ್ಎಸ್ ನನ್ನಂತಹ ಮುಸ್ಲಿಮರನ್ನು ಪಾಕಿಸ್ತಾನಕ್ಕೆ ಓಡಿಸಲು ಬಯಸುತ್ತಿದೆಯೇ ಎಂದು ನಾನು ಅವರನ್ನು ಕೇಳಿದೆ. ಅವರು ತಕ್ಷಣ ನಕ್ಕರು. ನನ್ನ ಪ್ರಶ್ನೆಗೆ ತಣ್ಣಗೆ ಉತ್ತರಿಸಿದರು: “ಚೇಚೀ, (ಮಲಯಾಳಂನಲ್ಲಿ ಅಕ್ಕ ಎಂದರ್ಥ) ಆರ್ಎಸ್ಎಸ್ ಬಗ್ಗೆ ನಿಮಗೆ ಯಾರೋ ತಪ್ಪು ಮಾಹಿತಿ ನೀಡಿದ್ದಾರೆ. ನೀವೆಲ್ಲಾ ನಮ್ಮ ಸೋದರ – ಸೋದರಿಯರ ಸಮಾನ” ಎಂದರು. ನನಗಿಂತ ವಯಸ್ಸಿನಲ್ಲಿ ಹಿರಿಯರಾಗಿದ್ದರಿಂದ ನನ್ನ ಹೆಸರು ಹಿಡಿದು ಕರೆಯುವಂತೆ ಕೋರಿದೆ. ಅದಕ್ಕೆ ಅವರ ಉತ್ತರ: “ನಮ್ಮ ಸಂಘಟನೆ ಮಹಿಳೆಯರನ್ನು ಗೌರವಿಸುವುದನ್ನು ಕಲಿಸಿದೆ. ಹಾಗಾಗಿ ನಮಗಿಂತ ಕಿರಿಯ ಮಹಿಳೆಯರನ್ನೂ ನಾವು ಚೇಚೀ ಎಂದೇ ಸಂಬೋಧಿಸುತ್ತೇವೆ”.
ಬಾಬು ಅವರ ಈ ಹೇಳಿಕೆ ನನ್ನಲ್ಲಿ ಇನ್ನಷ್ಟು ಕುತೂಹಲ ಹುಟ್ಟಿಸಿತು. ಇದಾದ ಮೇಲೆ ನಾನು ಆರ್ಎಸ್ಎಸ್ ಬಗ್ಗೆ ಇನ್ನಷ್ಟು ತಿಳಿದುಕೊಳ್ಳಲು ನನ್ನದೇ ‘ಸಂಶೋಧನೆ’ಗೆ ಮುಂದಾದೆ. ಹಲವಾರು ಸ್ವಯಂಸೇವಕರನ್ನು ಭೇಟಿಯಾದೆ. ಆರ್ಎಸ್ಎಸ್ನ ಹಲವು ತರಬೇತಿ ಶಿಬಿರಗಳಿಗೂ ಹೋಗಿದ್ದೆ. ಅಲ್ಲಿ ಎಲ್ಲ ಕಡೆ ಪ್ರತಿಯೊಬ್ಬರೂ ಕೈಜೋಡಿಸಿ, ವಿನಮ್ರರಾಗಿ ನನ್ನನ್ನು ಚೇಚೀ ಎಂದು ಕರೆಯುತ್ತಾ, ಗೌರವದಿಂದ ನೋಡಿಕೊಂಡರು.
ತಿರುವನಂತಪುರಂನಲ್ಲಿರುವ ಆರ್ಎಸ್ಎಸ್ ಕಚೇರಿಗೆ ನಾನು ಮೊದಲು ಭೇಟಿ ಕೊಟ್ಟಾಗ ನನಗೆ ಒಂದು ರೀತಿ ಹೆದರಿಕೆಯಾಗಿತ್ತು. ಆದರೆ ಕ್ರಮೇಣ ಆ ಹೆದರಿಕೆ ಕರಗಿಹೋಯಿತು. ನನ್ನ ಸೋದರರನ್ನು ಭೇಟಿ ಮಾಡುವ ಒಬ್ಬ ಸೋದರಿಯಾಗಿ ನಾನು ಬದಲಾಗಿದ್ದೆ.
ಆರ್ಎಸ್ಎಸ್ ಯಾವುದೇ ಸದಸ್ಯತ್ವದ ಗೋಜಿಲ್ಲದ ಒಂದು ಸಂಘಟನೆ. ಒಬ್ಬ ವ್ಯಕ್ತಿ ತನ್ನ ಹೃದಯ ಪ್ರೀತಿಯಿಂದ ಆರ್ಎಸ್ಎಸ್ನ ಸದಸ್ಯನಾಗಬಹುದು. ಬಹುಶಃ ಇಂತಹದೊಂದು ಸಂಘಟನೆ ಜಗತ್ತಿನಲ್ಲಿ ಇದೊಂದೇ ಇರುವುದಾಗಿರಬಹುದು. ಅಂತೆಯೇ ಇದೊಂದು ಜಗತ್ತಿನ ಅತಿದೊಡ್ಡ ಸಂಘಟನೆ. ರಾಷ್ಟ್ರವನ್ನು ‘ಪರಂ ವೈಭವಂ’ (ವೈಭವದ ಪರಾಕಾಷ್ಠೆಗೆ)ಗೊಳಿಸುವುದೇ ಸ್ವಯಂಸೇವಕರ ಏಕಮೇವ ಗುರಿ. ಭಾರತ ದೇಶ ಉನ್ನತವಾಗಿ ಅಭಿವೃದ್ಧಿ ಹೊಂದಿ, ಪರಮ ವೈಭವಶಾಲಿ ರಾಷ್ಟ್ರವಾಗಬೇಕೆಂಬುದು ಆರ್ಎಸ್ಎಸ್ನ ಹೆಬ್ಬಯಕೆ.
ಕ್ರಮೇಣ ನಾನು ಆರ್ಎಸ್ಎಸ್ನ ಜಿಲ್ಲಾ, ವಿಭಾಗ ಮತ್ತು ಪ್ರಾಂತ ಮಟ್ಟದ ಹಿರಿಯ ಕಾರ್ಯಕರ್ತರು ಹಾಗೂ ಕಿರಿಯ ಕಾರ್ಯಕರ್ತರಿಗೆಲ್ಲ ಚೇಚಿಯಾಗಿಬಿಟ್ಟೆ. ಅಂಥವರ ಪೈಕಿ ಪಿ. ಪರಮೇಶ್ವರ್, ಎಸ್. ಸೇತು ಮಾಧವನ್, ಪಿ.ಪಿ. ಮುಕುಂದನ್, ದಕ್ಷಿಣ ಕೇರಳ ಪ್ರಾಂತ ಪ್ರಚಾರಕ ಎಸ್. ಸುದರ್ಶನ್ ಮತ್ತು ಸರಸಂಘಚಾಲಕರಾದ ಡಾ. ಮೋಹನ ಭಾಗವತ್ ಪ್ರಮುಖರು. ಆರ್ಎಸ್ಎಸ್ ಎಂದರೆ ನಿಜವಾಗಿ ಏನು ಎಂಬುದನ್ನು ಅಂಥವರಿಂದ ಅರಿತುಕೊಂಡೆ.
ಕಳೆದ ಹತ್ತು ವರ್ಷಗಳಿಂದ ನಾನು ಅವರಿಗೆಲ್ಲ ಒಬ್ಬ ಸೋದರಿಯಾಗಿರುವೆ. ಬುರ್ಖಾ ಧರಿಸದೆ ಅವರೊಂದಿಗೆ ನಾನು ಸಹಜವಾಗಿ ಕುಳಿತು ಮಾತಾಡಬಲ್ಲೆ. ಅವರ ನಡವಳಿಕೆಯಿಂದ ನನಗೆ ಯಾವುದೇ ಬಗೆಯ ಅನಾನುಕೂಲತೆ ಆಗಿಲ್ಲ.
ಈ ಪ್ರಚಾರಕರೆಲ್ಲ ಧರಿಸುವ ಪಂಚೆ ಮತ್ತು ಶರ್ಟುಗಳು ಅವರದ್ದಲ್ಲ. ಬಹುಶಃ ಯಾರೋ ಉಡುಗೊರೆಯಾಗಿ ನೀಡಿದ್ದು ಇರಬೇಕು. ಅನೇಕ ಸಂದರ್ಭಗಳಲ್ಲಿ ಸಂಘದ ಪ್ರಚಾರಕರ ಬಳಿ ಸ್ವಂತದ ಆಹಾರ ಸೇವನೆಗೆ ಅಥವಾ ಚಹಾ ಕುಡಿಯಲೂ ಹಣವೇ ಇರುವುದಿಲ್ಲ.
ದೇಶದ ಒಳಿತಿಗಾಗಿ ಅವರೆಲ್ಲ ತಮ್ಮ ಸ್ವಂತದ ಸುಖವನ್ನು ತೊರೆದು, ದೇಶಸೇವೆಯನ್ನು ಅಪ್ಪಿಕೊಂಡಿದ್ದಾರೆ. ವಿಲಾಸಿ ಜೀವನ ಶೈಲಿ ಅವರದ್ದಲ್ಲ. ಅವರ ಬಳಿ ದುಬಾರಿ ವಾಹನಗಳು ಇಲ್ಲ. ತಮಗೆ ಲಭ್ಯವಿರುವ ಆಹಾರವನ್ನಷ್ಟೇ ಸೇವಿಸುತ್ತಾರೆ. ಬಸ್ ನಿಲ್ದಾಣಗಳಲ್ಲೋ ಅಥವಾ ರೈಲ್ವೆ ಬೋಗಿಗಳಲ್ಲೋ ತಮ್ಮ ನಿದ್ರೆ ಪೂರೈಸಿಕೊಳ್ಳುತ್ತಾರೆ.
‘ಪರಂ ವೈಭವಂ’- ಈ ದೇಶದ ಪರಮೋಚ್ಚ ವೈಭವ ಹಾಗೂ ಘನತೆಯನ್ನು ಸಾಧಿಸುವುದಕ್ಕಾಗಿ ಅವರೆಲ್ಲ ತಮ್ಮ ಬದುಕನ್ನು ಸಮರ್ಪಿಸಿದ್ದಾರೆ. ಪ್ರಧಾನಿ ನರೇಂದ್ರ ಮೋದಿಯವರು ಕೂಡ ಅವರಂತೆಯೇ ಹಿಂದೆ ಪ್ರಚಾರಕರಾಗಿದ್ದರು ಎಂದು ನನಗೆ ಇತ್ತೀಚಿಗೆ ತಿಳಿಯಿತು.
ಕನ್ನಡಕ್ಕೆ: ದು.ಗು.ಲಕ್ಷ್ಮಣ
