- ಸು. ನಾಗರಾಜ್, ನಿವೃತ್ತ ಬ್ಯಾಂಕ್ ಅಧಿಕಾರಿ
ಹದಿನಾರು ಹದಿನೇಳನೇ ಶತಮಾನ. ಮ್ಲೇಚ್ಛರ ನಿರಂಕುಶ ಆಧಿಪತ್ಯ ಭಾರತಮಾತೆಯ ಅನೇಕ ರಾಜ್ಯಗಳಲ್ಲಿ ವ್ಯಾಪಿಸಿ ಹಿಂದೂ ಜನಮಾನಸ ಹೀನಾಯ ಸ್ಥಿತಿಗೆ ತಲುಪಿ ಆರುನೂರು ವರ್ಷಗಳೇ ಕಳೆದಿದ್ದವು. ಒಂದೊಂದು ಕುಟುಂಬದಲ್ಲೂ ಅನೇಕ ಪೀಳಿಗೆಗಳು ಗುಲಾಮೀ ಮನಃಸ್ಥಿತಿಗೆ ಒಗ್ಗಿ ಹೋಗಿ ಪ್ರಾರಬ್ಧ ಕರ್ಮ ಇದು ಅನುಭವಿಸೋಣ ಎಂಬ ಪಲಾಯನವಾದ ಅಪ್ಪಿಕೊಂಡಾಗಿತ್ತು. ಒಂದು ಕಡೆ ಘೋರ ಅತ್ಯಾಚಾರಿ ಆಕ್ರಮಣಕಾರರು, ಇನ್ನೊಂದೆಡೆ ಅವರೊಂದಿಗೆ ಕೈ ಜೋಡಿಸಿ ತಮ್ಮವರನ್ನೇ ನಾಶಮಾಡಲು ತೊಡಗಿದ್ದ ದ್ರೋಹಿಗಳು. ಉತ್ತರದ ದಿಲ್ಲಿಯ ಬಾದಶಹಾನ ಬೃಹತ್ ದಾಳಿಕೋರ ಸೈನ್ಯ ಕಂಡ ಕಂಡ ಊರನ್ನೆಲ್ಲಾ ನಾಶಮಾಡುತ್ತಾ, ದೇಗುಲ ಧ್ವಂಸ ಮಾಡುತ್ತಾ, ರೈತರ ಬೆಳೆಗಳಿಗೆ ಬೆಂಕಿ ಇಡುತ್ತಾ, ಮನೆ ಮನೆಗೆ ನುಗ್ಗಿ ಹೆಣ್ಣುಮಕ್ಕಳನ್ನು ಅತ್ಯಾಚಾರ ಮಾಡಿ, ಹೊತ್ತುಕೊಂಡು ಹೋಗುತ್ತಾ ದಕ್ಷಿಣದವರೆಗೆ ಬಂದಿತ್ತು. ಇಲ್ಲಿ ಬಿಜಾಪುರದ ಅದಿಲಶಾಹಿ ಸುಲ್ತಾನ ವಿಜಯನಗರ ಸಾಮ್ರಾಜ್ಯವನ್ನು ಧೂಳೀಪಟಮಾಡಿ ದಕ್ಷಿಣದ ರಾಜ್ಯಗಳ ಮೇಲೆ ಪ್ರಭುತ್ವ ಸಾಧಿಸಿ ಅದೇ ವಿಧ್ವಂಸಕ ಕೃತ್ಯ ನಡೆಸುತ್ತಾ ಅಟ್ಟಹಾಸ ಮಾಡುತ್ತಿದ್ದ. ಈಗಿನ ಸಂಪೂರ್ಣ ಮಹಾರಾಷ್ಟ್ರ ಇವರ ಆಳ್ವಿಕೆಯಲ್ಲಿತ್ತು. ದಿಲ್ಲಿಯ ಸುಲ್ತಾನ ಶಹಜಹಾನನ ಸುಬೇದಾರನಾಗಿ ಔರಂಗಜೇಬ ತನ್ನ ಕ್ರೌರ್ಯಗಳಿಂದ ಆಗಲೇ ಕುಖ್ಯಾತನಾಗಿದ್ದ. (ಅಂದಿನ ಕರಾಳ ಕಾಲಖಂಡವನ್ನು ಭಾರತೀಯ ಇತಿಹಾಸಕಾರರು ಸಂಶೋಧಿಸಿ ಅಧಿಕೃತ ದಾಖಲೆ ಸಮೇತ ಪ್ರಕಟಪಡಿಸದಿದ್ದರೆ, ಬ್ರಿಟಿಷರು ಬರೆಸಿದ, ಬ್ರಿಟಿಷರ ಬೂಟು ನೆಕ್ಕಿದ ದೇಶೀಯ ಕುತಂತ್ರಿಗಳು ಬರೆದ, ತಿರುಚಿದ ಇತಿಹಾಸವೇ ಸತ್ಯ ಎಂಬ ನಂಬುಗೆ ಇತ್ತೀಚಿನ ದಶಕಗಳವರೆಗೆ ವ್ಯಾಪಿಸಿತ್ತು). ಆ ಕಾರ್ಗತ್ತಲೆಯಲ್ಲಿ ಸಹ್ಯಾದ್ರಿಯ ಪರ್ವತಗಳ ಮಡಿಲಿನಿಂದ ಮಿಂಚಿನ ಕಿರಣವೊಂದು ಮೂಡಿಬಂದು ಇಡೀ ದೇಶವನ್ನು ವ್ಯಾಪಿಸಿ ಬೆಳಕಾದ ಚರಿತ್ರೆಯೇ ಅದ್ಭುತ, ಅಲೌಕಿಕ, ಅನಿರ್ವಚನೀಯ.
ಬೆಟ್ಟದ ಇಲಿ ಎಂದು ಹೀಯಾಳಿಸಿ ಬರೆದ ಕುತ್ಸಿತ ಬುದ್ಧಿಯವರೂ ಆ ನೈಜ ಚಾರಿತ್ರಿಕ ದಾಖಲೆಗಳನ್ನು ಕಂಡು ಮೂಕರಾಗುವಷ್ಟು ಪ್ರಖರವಾಯಿತು ಆತನ ಬದುಕು. ಬೆಟ್ಟದ ಹೆಬ್ಬುಲಿಯಾಗಿ ದಟ್ಟ ಅರಣ್ಯ, ಗಿರಿ ಗುಹ್ವರಗಳಲ್ಲಿ, ನದಿ, ನದಗಳಲ್ಲಿ ಸ್ವಚ್ಛಂದವಾಗಿ ವಿಹರಿಸಿ, ತನ್ನ ವೀರಮಾತೆ ಸ್ತನ್ಯಪಾನಮಾಡಿಸುವಾಗಲೇ ತುಂಬಿಸಿದ್ದ ಶೌರ್ಯ ಪ್ರತಾಪಗಳ ಬಿಂದುಗಳು ಬಾಲಕ ಬೆಳೆದಂತೆ ತೇಜಃಪುಂಜವಾಗಿ ಆಕಾಶಕ್ಕೆ ಹರಡಿತು. ಹದಿನೈದರ ಬಾಲಕ ಅಡವಿಯಲ್ಲಿ ಲಂಗೋಟಿಧಾರಿ ಮಾವಳಿ ಬಾಲಕರ ಸ್ನೇಹಗಳಿಸಿ ಅವರಲ್ಲಿ ಸ್ವರಾಜ್ಯದ ಕನಸು ಬಿತ್ತಿದ; ಒಬ್ಬೊಬ್ಬನನ್ನೂ ಜೀವದ ಗೆಳೆಯನಾಗಿ ಮಾಡಿಕೊಂಡ. ಆ ಒಬ್ಬೊಬ್ಬ ಮಾವಳಿ ವೀರನೂ ಶತ್ರುಗಳ ಸಾವಿರ ಸರದಾರರಿಗೆ ಸಮನಾದ. ಕೋಟೆ, ಕೊತ್ತಳಗಳನ್ನು ಗೆಲ್ಲುವುದು, ಸ್ವಾತಂತ್ರ್ಯದ ಧ್ವಜ ಹಾರಿಸುವುದು ಮಕ್ಕಳಾಟವೇ ಆಗಿತ್ತು!.
ಆ ಹೆಸರುಗಳನ್ನೇ ನೋಡಿ:
ತಾನಾಜಿ ಮಾಲಸುರೆ, ಸೂರ್ಯಾಜಿ ಮಾಲಸುರೆ, ಬಾಜಿ ಪಾಸಲ್ಕರ್, ಯೇಸಾಜಿ ಕಂಕ, ಬಾಜಿ ಜೇಧೆ, ಚಿಮಣಾಜಿ, ಬಾಳಾಜಿ…. ಹೀಗೆ ವೀರಾಗ್ರಣಿಗಳಾದರು. ಆ ನೇತಾರನ ಬೆನ್ನು ಬಿಡದ, ಅವನ ಕಾರ್ಯವೇ ದೇವತಾಕಾರ್ಯವೆಂದು ಭಾವಿಸಿದ, ಅವನಿಗಾಗಿ ಪ್ರಾಣಾರ್ಪಣೆ ಮಾಡಲು ಪೈಪೋಟಿ ನಡೆಸಿದ ರಣಧುರಂಧರರಾದರು. ಅವರ ಸಹಾಯದಿಂದಲೇ ಬಿಜಾಪುರದ ಸುಬೇದಾರ, ಏಳಡಿ ಎತ್ತರದ ರಕ್ಕಸ ಸದೃಶ, ಮಹಾನ್ ಕುತಂತ್ರಿ ಅಫ್ಜಲಖಾನನನ್ನು ಅವನ ಅಪಾರ ಸೈನ್ಯದೊಂದಿಗೆ ಯಮಪುರಿಗೆ ಅಟ್ಟಿದ ಅಸದೃಶ ಸಾಹಸ ನಡೆಯಿತು. ಕೆಲವೇ ವರ್ಷಗಳ ಹಿಂದೆ ಔರಂಗಜೇಬನೇ ಜೀವ ಉಳಿಸಿಕೊಳ್ಳಲು ಪಲಾಯನ ಮಾಡುವಂತೆ ಮಾಡಿದ್ದ ಈ ಅಫ್ಜಲ ಖಾನ! ಅವನೆದುರು ಒಂಟಿಯಾಗಿ ನಿಂತು ಅವನ ಚೂರಿಯೇಟನ್ನು ತಪ್ಪಿಸಿಕೊಂಡು ಮಿಂಚಿನ ವೇಗದಲ್ಲಿ ತಮ್ಮ ಬಿಚುವಾದಿಂದ ಅವನ ಹೊಟ್ಟೆಗೆ ಆಳವಾಗಿ ಇರಿದು ಬಗೆದು ಹಾಕಿದ ಈ ಇಪ್ಪತ್ತು ವಯಸ್ಸಿನ ತರುಣ! ಈ ಸುದ್ದಿ ಕೇಳಿ ಔರಂಗಜೇಬನೇ ಬೆಕ್ಕಸ ಬೆರಗಾದ.
ಮುಂದೆ ಔರಂಗಜೇಬನ ದರ್ಬಾರಿಗೇ ಹೋಗಿ ಅವನ ಲಕ್ಷಗಟ್ಟಲೆ ಸೈನ್ಯಕ್ಕೂ ಚಳ್ಳೆಹಣ್ಣು ತಿನ್ನಿಸಿ ತಪ್ಪಿಸಿಕೊಂಡು ಪ್ರತಾಪಗಢಕ್ಕೆ ಬಂದು ಅನಂತರ ಸೂರತ್ತಿನವರೆಗೆ ದಾಳಿ ನಡೆಸಿ ಆ ಮ್ಲೇಚ್ಛರು ಕೊಳ್ಳೆ ಹೊಡೆದಿದ್ದ ಸಂಪತ್ತೆಲ್ಲವನ್ನೂ ವಾಪಸ್ತಂದು, ಅನೇಕ ಕೋಟೆಗಳನ್ನು ಗೆದ್ದು, ಹಿಂದವೀ ಸ್ವರಾಜ್ಯ ಸ್ಥಾಪಿಸಿ ಸಿಂಹಾಸನ ಏರಿದ ಆ ಪುಣ್ಯ ಪುರುಷನೇ ವೀರ ಛತ್ರಪತಿ ಶಿವಾಜಿ.
ಅವನ ಮಾತೆ ಜೀಜಾಬಾಯಿ ಅವನನ್ನು ಮಡಿಲಲ್ಲಿ ಕೂಡಿಸಿಕೊಂಡು ಹೇಳಿದ ಕಥೆಗಳು, ರಾಮಾಯಣ, ಮಹಾಭಾರತ. ರಾಮ, ಕೃಷ್ಣರ ಧರ್ಮಪಾಲನೆ, ಆಂಜನೇಯ, ಭೀಮ, ಅರ್ಜುನರ ಶೌರ್ಯ- ಸಾಹಸಗಳನ್ನು, ಮಗುವಾಗಿದ್ದಾಗಲೇ ಕೇಳಿದ ಪರಿಣಾಮ ಆ ಮಗು ಸಿಡಿಲಮರಿಯಾಗಿ ನಾಡ ರಕ್ಷಕನಾಗಿ ಬೆಳೆಯಿತು. ಅವನೊಡನೆ ಆಡಿ ಬೆಳೆದ ಅನಕ್ಷರಸ್ಥ ಮಾವಳಿ ಬಾಲಕರು ಉಜ್ವಲ ರಾಷ್ಟ್ರಭಕ್ತರಾದರು, ವೀರಾಧಿವೀರರಾದರು.
1925ರಲ್ಲಿ ರಾ.ಸ್ವ.ಸಂಘ ಸ್ಥಾಪನೆಯಾದಾಗಿನಿಂದ ಇಂದಿನವರೆಗೂ ನಿತ್ಯ ಶಾಖೆಗೆ ಬರುವ ಬಾಲಕರಿಗೆ ರಾಮ, ಕೃಷ್ಣ, ಹನುಮ ಭೀಮರ ಕಥೆಯ ಜೊತೆಗೆ, ರಾಣಾ ಪ್ರತಾಪ, ಕೃಷ್ಣದೇವರಾಯ, ಗುರುಗೋವಿಂದ ಸಿಂಹ, ಛತ್ರಪತಿ ಶಿವಾಜಿ ಮುಂತಾದವರ ಉಜ್ವಲ ಸಾಹಸಮಯ ಜೀವನಗಾಥೆಯನ್ನೂ ಹೇಳಿಕೊಡುತ್ತಾ ಅವರೆಲ್ಲರನ್ನೂ ರಾಷ್ಟ್ರಕಾರ್ಯಕ್ಕೆ ತನು – ಮನ – ಧನಗಳಿಂದ ಸಮರ್ಪಿತಗೊಳಿಸುವ ಧ್ಯೇಯಬದ್ದರನ್ನಾಗಿ ಬೆಳೆಸಿದೆ. ಜ್ಯೇಷ್ಠ ಶುದ್ಧ ತ್ರಯೋದಶಿಯ ದಿನ ಶಿವಾಜಿ ಮಹಾರಾಜರು ಛತ್ರಪತಿಯಾದರು. ಆ ವೀರಮಾತೆ ಜೀಜಾಬಾಯಿ ಒಬ್ಬ ಶಿವಾಜಿಗೆ ಪ್ರೇರೇಪಿಸಿ ದೇಶಕಾರ್ಯಕ್ಕೆ ಅರ್ಪಿಸಿದರೆ, ಈ ಸಂಘಮಾತೆ ಲಕ್ಷಾಂತರ ಶಿವಾಜಿಗಳನ್ನು ಬೆಳೆಸುವ ಛಾತಿ ಹೊಂದಿದ್ದಾಳೆ.
