- ಡಾ. ಜಗದೀಶ ಮಾನೆ
ರಾಜ್ಯಶಾಸ್ತ್ರ ಪ್ರಾಧ್ಯಾಪಕರು, ಧಾರವಾಡ
ಮನುಷ್ಯನು ನಾಲ್ಕು ಅಕ್ಷರ ಕಲಿತ ತಕ್ಷಣ ಈ ಭೂಮಿಯ ಮೇಲಿನ ಅತ್ಯಂತ ಬುದ್ಧಿವಂತ ಜೀವಿ ತಾನೇ ಎಂಬ ಭ್ರಮೆಯಲ್ಲಿ ಬದುಕುತ್ತಿದ್ದಾನೆ. ವಿಜ್ಞಾನ, ತಂತ್ರಜ್ಞಾನ, ಗಗನಯಾನ, ಕೃತಕ ಬುದ್ಧಿಮತ್ತೆ-ಇವೆಲ್ಲವನ್ನೂ ಕಂಡು ತನ್ನ ಸಾಧನೆಗಳ ಬಗ್ಗೆ ಹೆಮ್ಮೆಪಡುತ್ತಾನೆ. ಆದರೆ, ಪ್ರಕೃತಿಯ ವಿಶ್ವವಿದ್ಯಾಲಯದಲ್ಲಿ ಪದವಿ ಪಡೆದಿರುವ ಅನೇಕ ಜೀವಿಗಳು ಯಾವುದೇ ಶಾಲೆ, ಕಾಲೇಜು, ವಿಶ್ವವಿದ್ಯಾಲಯಕ್ಕೆ ಹೋಗದೆ ಮನುಷ್ಯನಿಗಿಂತ ಅದ್ಭುತವಾದ ಇಂಜಿನಿಯರಿಂಗ್, ಯೋಜನೆ ಮತ್ತು ಪರಿಸರ ನಿರ್ವಹಣೆಯ ಕೌಶಲ್ಯವನ್ನು ಪ್ರದರ್ಶಿಸುತ್ತಿವೆ ಎಂಬ ಸತ್ಯವನ್ನು ಆತ ಮರೆತುಬಿಡುತ್ತಾನೆ. ಹಾಗಾಗಿ ಈ ಪ್ರಕೃತಿಯು ನಮಗೆ ಯಾವಾಗಲೂ ಒಂದು ಸತ್ಯವನ್ನು ಹೇಳುತ್ತದೆ- ‘ಅಹಂಕಾರ ಮನುಷ್ಯನದ್ದು; ಜ್ಞಾನ ಪ್ರಕೃತಿಯದ್ದು’.
ಪ್ರಕೃತಿಯಲ್ಲಿದೆ ತಂತ್ರಜ್ಞಾನದ ಪಾಠ
ಈ ಭೂಮಿಯ ಮೇಲೆ ಇಂದಿಗೂ ಮನುಷ್ಯನ ಅರಿವಿಗೆ ಸಂಪೂರ್ಣವಾಗಿ ಸಿಕ್ಕದ ಸಾವಿರಾರು ವಿಸ್ಮಯಗಳಿವೆ. ಅವುಗಳಲ್ಲಿ ಪ್ರಾಣಿ-ಪಕ್ಷಿಗಳ ಜೀವನಶೈಲಿ ಮತ್ತು ಅವುಗಳ ಬುದ್ಧಿವಂತಿಕೆ ಪ್ರಮುಖವಾದುದು. ಮನುಷ್ಯ ಇಂದು ಕಂಡುಹಿಡಿದಿರುವ ಅನೇಕ ತಂತ್ರಜ್ಞಾನಗಳ ಹಿಂದೆ ಪ್ರಕೃತಿಯೇ ಗುರುವಾಗಿರುವುದನ್ನು ವಿಜ್ಞಾನವೂ ಒಪ್ಪಿಕೊಂಡಿದೆ. ಪಕ್ಷಿಗಳ ಗೂಡಿನಿಂದ ಮನೆ ಕಟ್ಟುವುದನ್ನು, ಜೇಡರ ಬಲೆಯಿಂದ ಬಲಿಷ್ಠ ನಾರುಗಳನ್ನು, ಮೀನುಗಳಿಂದ ಈಜುವ ತಂತ್ರವನ್ನು, ಪಕ್ಷಿಗಳ ಹಾರಾಟದಿಂದ ವಿಮಾನ ನಿರ್ಮಾಣದ ಕಲ್ಪನೆಯನ್ನು ಮನುಷ್ಯ ಕಲಿತಿದ್ದಾನೆ. ಇಂತಹ ಅಸಂಖ್ಯಾತ ಪ್ರಕೃತಿ ಪಾಠಗಳಲ್ಲಿ ಅತ್ಯಂತ ಆಶ್ಚರ್ಯಕರವಾದ ಒಂದು ಅಧ್ಯಾಯವೇ ‘ಬೀವರ್’ ಎಂಬ ಸಣ್ಣ ಜೀವಿಯ ಇಂಜಿನಿಯರಿಂಗ್ ಕೌಶಲ್ಯ.
ಉಪಗ್ರಹ ಚಿತ್ರದಲ್ಲಿ ಮೂಡಿದ ಅಚ್ಚರಿ
2007ರಲ್ಲಿ ಕೆನಡಾದ ಸಂಶೋಧಕರು ಉಪಗ್ರಹ ಚಿತ್ರಗಳನ್ನು ಅಧ್ಯಯನ ಮಾಡುತ್ತಿದ್ದ ಸಂದರ್ಭದಲ್ಲಿ ಒಂದು ವಿಶಿಷ್ಟವಾದ ಡ್ಯಾಮಿನ ರಚನೆ ಅವರ ಗಮನ ಸೆಳೆಯಿತು. ಮೊದಲ ನೋಟಕ್ಕೆ ಅದು ಮಾನವ ನಿರ್ಮಿತ ಅಣೆಕಟ್ಟಿನಂತೆ ಕಂಡರೂ, ಅಲ್ಲಿ ಕಾಂಕ್ರೀಟ್ ಅಥವಾ ಯಂತ್ರೋಪಕರಣಗಳ ಯಾವುದೇ ಕುರುಹುಗಳು ಇರಲಿಲ್ಲ. ಇದರಿಂದ ಸಂಶೋಧಕರ ಕುತೂಹಲ ಇನ್ನಷ್ಟು ಹೆಚ್ಚಾಯಿತು. ನಂತರ ಅವರು ಆ ಪ್ರದೇಶಕ್ಕೆ ತೆರಳಿ ಪರಿಶೀಲನೆ ನಡೆಸಾಗ ಮತ್ತಷ್ಟು ಆಶ್ಚರ್ಯಕರ ಸಂಗತಿಗಳು ಬೆಳಕಿಗೆ ಬಂದವು. ಅದು ಸರ್ಕಾರ ನಿರ್ಮಿಸಿದ ಅಣೆಕಟ್ಟೂ ಅಲ್ಲ, ನೈಸರ್ಗಿಕವಾಗಿ ರೂಪುಗೊಂಡ ಸರೋವರವೂ ಅಲ್ಲ. ಹಾಗಾದರೆ ಆ ಅದ್ಭುತ ರಚನೆಯನ್ನು ನಿರ್ಮಿಸಿದವರು ಯಾರು?
ಈ ಪ್ರಶ್ನೆಗೆ ಉತ್ತರ ಹುಡುಕುತ್ತಾ ಸಂಶೋಧಕರು ಸುತ್ತಮುತ್ತಲಿನ ಪ್ರದೇಶವನ್ನು ಸೂಕ್ಷ್ಮವಾಗಿ ಗಮನಿಸುತ್ತಿದ್ದಾಗ, ಕೆಲವು ಸಣ್ಣ ಪ್ರಾಣಿಗಳು ಅವರನ್ನು ಕುತೂಹಲದಿಂದ ನೋಡುತ್ತಿದ್ದವು. ಅವುಗಳ ಚಲನವಲನವನ್ನು ಅಧ್ಯಯನ ಮಾಡಿದ ವಿಜ್ಞಾನಿಗಳಿಗೆ ಕೊನೆಗೂ ಸತ್ಯ ಗೊತ್ತಾಯಿತು. ಆ ಅದ್ಭುತ ಡ್ಯಾಮ್ ಅನ್ನು ನಿರ್ಮಿಸಿದ್ದು ‘ಬೀವರ್’ ಎಂಬ ಪ್ರಾಣಿಗಳು ಎಂಬುದು ದೃಢಪಡಿಸಿಕೊಂಡು ತದನಂತರ ವಿಜ್ಞಾನಿಗಳು ಅದಕ್ಕೆ ‘ಬೀವರ್ ಡ್ಯಾಮ್’ ಎಂಬ ನಾಮಕರಣ ಮಾಡಿದರು.
ಹೂವರ್ ಡ್ಯಾಮ್ ಮೀರಿಸಿದ ಬೀವರ್ ಡ್ಯಾಮ್
ಈ ಪ್ರಸಿದ್ಧ ಬೀವರ್ ಡ್ಯಾಮ್ ಕೆನಡಾದ ಆಲ್ಬರ್ಟಾ ಪ್ರಾಂತ್ಯದ ವುಡ್ ಬಫೆಲೊ ನ್ಯಾಷನಲ್ ಪಾರ್ಕ್ ಪ್ರದೇಶದಲ್ಲಿದೆ. ಬೀವರ್ಗಳು ಹೆಗ್ಗಣಗಳ ಜಾತಿಗೆ ಸೇರಿದ ಸಸ್ತನಿಗಳಾಗಿದ್ದು, ಮನುಷ್ಯನ ಊಹೆಗೂ ಮೀರಿದ ಪ್ರಮಾಣದ ಅಣೆಕಟ್ಟುಗಳನ್ನು ನಿರ್ಮಿಸುವ ಸಾಮರ್ಥ್ಯವನ್ನು ಹೊಂದಿವೆ. 2007ರಲ್ಲಿ ಪತ್ತೆಯಾದ ಈ ಡ್ಯಾಮ್ ಸುಮಾರು 850 ಮೀಟರ್ ಉದ್ದವಿದ್ದು, ಅಮೆರಿಕದ ಪ್ರಸಿದ್ಧ ಹೂವರ್ ಡ್ಯಾಮ್ (ಸುಮಾರು 380 ಮೀಟರ್) ಗಿಂತಲೂ ಉದ್ದವಾಗಿದೆ. ಸಾಮಾನ್ಯವಾಗಿ ಬೀವರ್ಗಳು ನಿರ್ಮಿಸುವ ಡ್ಯಾಮ್ಗಳು 100ರಿಂದ 500 ಮೀಟರ್ವರೆಗೆ ವಿಸ್ತಾರ ಹೊಂದಿರುತ್ತವೆ. ಆದರೆ, ಕೆನಡಾದ ಈ ಡ್ಯಾಮ್ ಅವುಗಳ ಅಸಾಧಾರಣ ಇಂಜಿನಿಯರಿಂಗ್ ಸಾಮರ್ಥ್ಯಕ್ಕೆ ಜೀವಂತ ಸಾಕ್ಷಿಯಾಗಿದೆ.
ಇಷ್ಟೊಂದು ಸಣ್ಣ ಜೀವಿಗಳು ಇಂತಹ ಬೃಹತ್ ಡ್ಯಾಮ್ ನಿರ್ಮಿಸುವುದು ಸಾಮಾನ್ಯ ಸಂಗತಿಯಲ್ಲ. ಡ್ಯಾಮ್ ನಿರ್ಮಿಸುವ ಕೌಶಲ್ಯವು ಅವುಗಳಿಗೆ ಪ್ರಕೃತಿಯಿಂದಲೇ ಅನುವಂಶಿಕವಾಗಿ ದೊರೆತಿದೆ. ಬದುಕು, ಸಂತಾನೋತ್ಪತ್ತಿ ಮತ್ತು ಶತ್ರುಗಳಿಂದ ರಕ್ಷಣೆಗಾಗಿ ಅವು ಈ ರೀತಿಯ ನೈಸರ್ಗಿಕ ಅಣೆಕಟ್ಟುಗಳನ್ನು ನಿರ್ಮಿಸಿಕೊಳ್ಳುತ್ತವೆ. ಮನುಷ್ಯನಿಗೆ ಇಂಜಿನಿಯರಿಂಗ್ ಕಲಿಸಲು ವಿಶ್ವವಿದ್ಯಾಲಯಗಳ ಅಗತ್ಯವಿದ್ದರೆ, ಬೀವರ್ಗಳಿಗೆ ಈ ಪ್ರಕೃತಿಯೇ ಒಂದು ದೊಡ್ಡ ವಿಶ್ವವಿದ್ಯಾಲಯವಾಗಿದೆ.
ಬೀವರ್ಗಳ ಶಾರೀರಿಕ ವೈಶಿಷ್ಟ್ಯ
ಪ್ರಕೃತಿಯ ಇಂಜಿನಿಯರ್ಗಳೆಂದು ಕರೆಯಲ್ಪಡುವ ಈ ಬೀವರ್ಗಳು ಸಸ್ತನಿಗಳಾಗಿದ್ದು, ಅರೆಜಲಚರ ಜೀವಿಗಳಾಗಿವೆ. ಮುಖ್ಯವಾಗಿ ಇವು ಎರಡು ಪ್ರಭೇದಗಳಲ್ಲಿ ಕಂಡುಬರುತ್ತವೆ- ಉತ್ತರ ಅಮೆರಿಕಾದ ಬೀವರ್ ಹಾಗೂ ಯುರೇಷಿಯಾದ ಬೀವರ್. ಸುಮಾರು ಮೂವತ್ತು ಮಿಲಿಯನ್ ವರ್ಷಗಳ ಹಿಂದೆ ವಿಕಾಸಗೊಂಡು ಇಂದಿಗೂ ಬದುಕುಳಿದಿರುವ ಅಪರೂಪದ ಜೀವಿಗಳಲ್ಲಿ ಬೀವರ್ಗಳೂ ಸೇರಿವೆ. ಉತ್ತರ ಅಮೆರಿಕ, ಕೆನಡಾ, ಯುರೇಷಿಯಾ, ರಷ್ಯಾ, ಮಂಗೋಲಿಯಾ, ಚೀನಾ, ಟರ್ಕಿ ಸೇರಿದಂತೆ ಅನೇಕ ದೇಶಗಳಲ್ಲಿ ಇವು ಕಂಡುಬರುತ್ತವೆ. ಸಸ್ಯಾಹಾರಿಗಳಾದ ಇವು ಹೆಚ್ಚಾಗಿ ನದಿಗಳು, ತೊರೆಗಳು ಹಾಗೂ ನಿತ್ಯಹರಿದ್ವರ್ಣದ ಕಾಡುಗಳ ಸಮೀಪ ವಾಸಿಸುತ್ತವೆ. ಅಮೆರಿಕನ್ ಬೀವರ್ಗಳಿಗೆ ಹೋಲಿಸಿದರೆ ಯುರೇಷಿಯಾದ ಬೀವರ್ಗಳು ಗಾತ್ರದಲ್ಲಿ ಸ್ವಲ್ಪ ದೊಡ್ಡದಾಗಿರುತ್ತವೆ. ಹೆಗ್ಗಣಗಳ ಕುಟುಂಬದಲ್ಲಿ ಎರಡನೇ ಅತಿದೊಡ್ಡ ಪ್ರಭೇದಗಳಾಗಿವೆ. ಸಾಮಾನ್ಯವಾಗಿ ಇವುಗಳ ದೇಹದ ಉದ್ದ 80 ರಿಂದ 120 ಸೆಂಟಿಮೀಟರ್ ಹಾಗೂ ತೂಕ 11 ರಿಂದ 30 ಕಿಲೋಗ್ರಾಂವರೆಗೆ ಇರುತ್ತದೆ.
ಗಂಡು ಮತ್ತು ಹೆಣ್ಣು ಬೀವರ್ಗಳ ದೇಹರಚನೆಯಲ್ಲಿ ಹೆಚ್ಚಿನ ವ್ಯತ್ಯಾಸ ಕಂಡುಬರುವುದಿಲ್ಲ. ಅಗಲವಾದ ಚಪ್ಪಟೆ ಬಾಲ ಹಾಗೂ ಪೊರೆಯುಳ್ಳ ಕಾಲುಗಳು ಇವುಗಳಿಗೆ ನೀರಿನಲ್ಲಿ ಅತ್ಯಂತ ವೇಗವಾಗಿ ಈಜಲು ನೆರವಾಗುತ್ತವೆ. ಕಂದು ಅಥವಾ ಕೆಂಪು ಮಿಶ್ರಿತ ದಪ್ಪ ಕೂದಲುಗಳು ಅವುಗಳನ್ನು ಚಳಿಯಿಂದ ರಕ್ಷಿಸುತ್ತವೆ. ಇವುಗಳ ಅತ್ಯಂತ ಶಕ್ತಿಶಾಲಿ ಹಾಗೂ ಹರಿತವಾದ ಮುಂಭಾಗದ ಹಲ್ಲುಗಳು ಜೀವನಪೂರ್ತಿ ಬೆಳೆಯುತ್ತಲೇ ಇರುತ್ತವೆ. ಅದೇ ಕಾರಣದಿಂದ ಅವು ದೊಡ್ಡ ಮರಗಳ ಕಾಂಡಗಳನ್ನು ಸುಲಭವಾಗಿ ಕಚ್ಚಿ ಬೀಳಿಸಬಲ್ಲವು. ಈ ಮರಗಳ ಕಾಂಡಗಳು, ಕೊಂಬೆಗಳು ಹಾಗೂ ಕಟ್ಟಿಗೆಗಳನ್ನೇ ಡ್ಯಾಮ್ ನಿರ್ಮಾಣಕ್ಕೆ ಬಳಸುತ್ತವೆ. ನೀರಿನಲ್ಲಿಯೇ ಹೆಚ್ಚು ಸಮಯ ಕಳೆಯುವ ಇವುಗಳು ಸುರಕ್ಷಿತ ವಾಸಸ್ಥಳ ನಿರ್ಮಿಸಿಕೊಳ್ಳುವ ಉದ್ದೇಶದಿಂದಲೇ ಡ್ಯಾಮ್ಗಳನ್ನು ನಿರ್ಮಿಸುತ್ತವೆ.
ಸೂಕ್ಷ್ಮ ಸಮೀಕ್ಷೆ ಮತ್ತು ಸಿಮೆಂಟ್ನಂತಹ ಗೋಡೆ
ಬೀವರ್ಗಳ ಬುದ್ಧಿವಂತಿಕೆಯನ್ನು ಗಮನಿಸಿದರೆ ಎಂಥವರಿಗೂ ಆಶ್ಚರ್ಯವಾಗುತ್ತದೆ. ಯಾವುದೇ ಸ್ಥಳದಲ್ಲಿ ಅಣೆಕಟ್ಟು ಕಟ್ಟುವ ಮೊದಲು ಅವು ನೀರಿನ ಹರಿವನ್ನು ಸೂಕ್ಷ್ಮವಾಗಿ ಗಮನಿಸುತ್ತವೆ. ಎಲ್ಲಿ ನೀರಿನ ವೇಗ ಕಡಿಮೆ ಇದೆ, ಯಾವ ಭಾಗದಲ್ಲಿ ಅಣೆಕಟ್ಟು ನಿರ್ಮಿಸಿದರೆ ಹೆಚ್ಚು ಪ್ರಯೋಜನವಾಗುತ್ತದೆ, ಯಾವ ಸ್ಥಳ ಸುರಕ್ಷಿತವಾಗಿದೆ ಎಂಬುದನ್ನು ಪರಿಶೀಲಿಸಿದ ನಂತರವೇ ನಿರ್ಮಾಣ ಕಾರ್ಯವನ್ನು ಆರಂಭಿಸುತ್ತವೆ. ಅನುಭವೀ ಸಿವಿಲ್ ಇಂಜಿನಿಯರ್ಗಳು ಸ್ಥಳ ಪರಿಶೀಲನೆ ನಡೆಸುವ ರೀತಿಯಲ್ಲಿಯೇ ಬೀವರ್ಗಳೂ ಪ್ರಕೃತಿಯಲ್ಲಿ ತಮ್ಮದೇ ರೀತಿಯ ಸಮೀಕ್ಷೆ ನಡೆಸುತ್ತವೆ.
ಡ್ಯಾಮ್ ನಿರ್ಮಾಣಕ್ಕಾಗಿ ಬೀವರ್ಗಳು ಮೊದಲು ನದಿಯ ದಡದಲ್ಲಿರುವ ಮರಗಳ ಕೊಂಬೆಗಳನ್ನು ಹಾಗೂ ಕಾಂಡಗಳನ್ನು ಕತ್ತರಿಸಿ ಒಂದಕ್ಕೊಂದು ಜೋಡಿಸುತ್ತವೆ. ನಂತರ ನೀರಿನ ದಡದಲ್ಲಿ ದೊರೆಯುವ ಮೆಕ್ಕಲು ಮಣ್ಣು, ಕಲ್ಲುಗಳು, ಸಣ್ಣ ಗಿಡಗಳು ಹಾಗೂ ಇತರ ನೈಸರ್ಗಿಕ ವಸ್ತುಗಳನ್ನು ಬಳಸಿ ಆ ರಚನೆಯನ್ನು ಬಲಪಡಿಸುತ್ತವೆ. ಮಣ್ಣು ಬಿಸಿಲಿಗೆ ಒಣಗಿದ ನಂತರ ಅದು ಸಿಮೆಂಟ್ನಂತೆ ಗಟ್ಟಿಯಾಗುತ್ತದೆ. ಈ ರೀತಿ ಯಾವುದೇ ಯಂತ್ರೋಪಕರಣಗಳ ಸಹಾಯವಿಲ್ಲದೆ, ಪ್ರಕೃತಿಯಲ್ಲಿ ದೊರೆಯುವ ವಸ್ತುಗಳನ್ನು ಮಾತ್ರ ಬಳಸಿ ಅತ್ಯಂತ ಭದ್ರವಾದ ಡ್ಯಾಮ್ಗಳನ್ನು ನಿರ್ಮಿಸುತ್ತವೆ.
ಈ ಡ್ಯಾಮ್ಗಳ ವಿಶೇಷತೆಯೆಂದರೆ, ಅವು ನೀರಿನ ಹರಿವನ್ನು ಸಂಪೂರ್ಣವಾಗಿ تಡೆಯುವುದಿಲ್ಲ. ನೀರು ನಿಧಾನವಾಗಿ ಅವುಗಳ ನಡುವಿನಿಂದ ಹಾಗೂ ಕೆಳಭಾಗದಿಂದ ಹರಿಯುತ್ತಲೇ ಇರುತ್ತದೆ. ಆದರೆ ಹರಿವಿನ ವೇಗ ಕಡಿಮೆಯಾಗುವುದರಿಂದ ನೀರು ಸಹಜವಾಗಿ ಸಂಗ್ರಹವಾಗಲು ಆರಂಭಿಸುತ್ತದೆ. ಕ್ರಮೇಣ ಆ ಪ್ರದೇಶದಲ್ಲಿ ಜೌಗು ಪ್ರದೇಶ ನಿರ್ಮಾಣವಾಗುತ್ತದೆ. ಈ ಜೌಗು ಪ್ರದೇಶ ಬೀವರ್ಗಳ ಬದುಕಿಗೆ ಮಾತ್ರವಲ್ಲದೆ ಅನೇಕ ಜಲಚರ ಜೀವಿಗಳು, ಪಕ್ಷಿಗಳು ಮತ್ತು ಸಸ್ಯಗಳಿಗೆ ಸಹ ಆಶ್ರಯ ನೀಡುವ ಸಮೃದ್ಧ ಪರಿಸರ ವ್ಯವಸ್ಥೆಯಾಗಿ ರೂಪುಗೊಳ್ಳುತ್ತದೆ.
ರಹಸ್ಯ ಸುರಂಗಗಳ ‘ಬೀವರ್ ಲಾಡ್ಜ್’
ಬೀವರ್ಗಳು ಸದಾ ಡ್ಯಾಮ್ ಮೇಲೆಯೇ ವಾಸಿಸುವುದಿಲ್ಲ. ತಮ್ಮ ಕುಟುಂಬಕ್ಕಾಗಿ ಡ್ಯಾಮಿನ ಹಿಂಭಾಗದಲ್ಲಿ ಕಟ್ಟಿಗೆಗಳಿಂದವಿಶೇಷವಾದ ಮನೆಗಳನ್ನು ನಿರ್ಮಿಸಿಕೊಳ್ಳುತ್ತವೆ. ಇವುಗಳನ್ನು ‘ಬೀವರ್ ಲಾಡ್ಜ್’ ಎಂದು ಕರೆಯಲಾಗುತ್ತದೆ. ಹೊರಗಿನಿಂದ ನೋಡಿದರೆ ಅವು ಕೇವಲ ಕಟ್ಟಿಗೆಗಳ ರಾಶಿಯಂತೆ ಕಾಣಬಹುದು. ಆದರೆ ಒಳಭಾಗ ಅತ್ಯಂತ ವ್ಯವಸ್ಥಿತವಾಗಿ ವಿನ್ಯಾಸಗೊಳಿಸಲ್ಪಟ್ಟಿರುತ್ತದೆ. ಮನೆಯ ಪ್ರವೇಶದ್ವಾರವನ್ನು ನೀರಿನ ತಳಭಾಗದಲ್ಲಿ ನಿರ್ಮಿಸುವುದರಿಂದ ಭೂಮಿಯ ಮೇಲಿನ ಶತ್ರುಗಳು ಒಳನುಗ್ಗಲು ಸಾಧ್ಯವಾಗುವುದಿಲ್ಲ.
ಲಾಡ್ಜ್ನ ಒಳಭಾಗದಲ್ಲಿ ಮಣ್ಣಿನಿಂದ ಗೋಡೆಗಳನ್ನು ನಿರ್ಮಿಸಿ, ಕುಟುಂಬ ಸದಸ್ಯರು ವಿಶ್ರಾಂತಿ ಪಡೆಯಲು ಪ್ರತ್ಯೇಕ ಸ್ಥಳಗಳನ್ನು ಸಿದ್ಧಪಡಿಸುತ್ತವೆ. ಸಾಮಾನ್ಯವಾಗಿ ಎಂಟರಿಂದ ಹತ್ತು ಬೀವರ್ಗಳು ಒಟ್ಟಿಗೆ ವಾಸಿಸುವಷ್ಟು ವಿಶಾಲವಾದ ಕೊಠಡಿಯೂ ಇರುತ್ತದೆ. ಮನೆಯ ಮೇಲ್ಭಾಗದಲ್ಲಿ ಗಾಳಿಯಾಡಲು ಸಣ್ಣ ದ್ವಾರವನ್ನು ಬಿಡಲಾಗುತ್ತದೆ. ಜೊತೆಗೆ ಅಪಾಯದ ಸಂದರ್ಭದಲ್ಲಿ ತಪ್ಪಿಸಿಕೊಳ್ಳಲು ಪರ್ಯಾಯ ನಿರ್ಗಮನ ಮಾರ್ಗಗಳನ್ನೂ ನಿರ್ಮಿಸಿರುತ್ತವೆ. ಇಂತಹ ಯೋಜನಾಬದ್ಧ ಮನೆ ನಿರ್ಮಾಣವನ್ನು ನೋಡಿದರೆ, ವಾಸ್ತುಶಿಲ್ಪಿಗಳು ಆಶ್ಚರ್ಯಪಡದೇ ಇರಲಾರರು.
ಇದರಲ್ಲಿಯೇ ಬೀವರ್ಗಳ ದೂರದೃಷ್ಟಿ ಮುಗಿಯುವುದಿಲ್ಲ. ತಮ್ಮ ಮನೆಗಳ ಸುತ್ತಲಿನ ಪ್ರದೇಶವನ್ನು ನೀರು ನಿಲ್ಲುವಂತೆ ರೂಪಿಸಿ, ಅದನ್ನು ಸಹಜ ರಕ್ಷಣಾ ವಲಯವನ್ನಾಗಿ ಪರಿವರ್ತಿಸುತ್ತವೆ. ಇದರಿಂದ ತೋಳ, ಕರಡಿ ಹಾಗೂ ಇತರ ಬೇಟೆಗಾರ ಪ್ರಾಣಿಗಳು ಸುಲಭವಾಗಿ ಮನೆ ಸಮೀಪಕ್ಕೆ ಬರಲು ಸಾಧ್ಯವಾಗುವುದಿಲ್ಲ. ಹಿಂದೆ ರಾಜರು ತಮ್ಮ ಕೋಟೆಗಳ ಸುತ್ತ ಕಂದಕ ತೋಡಿ ನೀರು ತುಂಬಿಸಿ ಶತ್ರುಗಳಿಂದ ರಕ್ಷಣೆ ಪಡೆಯುತ್ತಿದ್ದ ರೀತಿಯಲ್ಲಿಯೇ, ಬೀವರ್ಗಳು ಲಕ್ಷಾಂತರ ವರ್ಷಗಳ ಹಿಂದೆಯೇ ಪ್ರಕೃತಿಯಲ್ಲೇ ಈ ರಕ್ಷಣಾ ತಂತ್ರವನ್ನು ಅಳವಡಿಸಿಕೊಂಡಿವೆ.
ಮೊದಲು ಡ್ಯಾಮ್ ನಿರ್ಮಿಸುವುದು, ನಂತರ ಅದರ ಹಿಂಭಾಗದಲ್ಲಿ ಮನೆ ಕಟ್ಟುವುದು, ಮನೆಗೆ ನೀರಿನ ಅಡಿಯಲ್ಲೇ ರಹಸ್ಯ ಪ್ರವೇಶ ಮಾರ್ಗಗಳನ್ನು ನಿರ್ಮಿಸುವುದು, ಡ್ಯಾಮ್ ಮತ್ತು ಮನೆಯ ನಡುವಿನ ಪ್ರದೇಶವನ್ನು ಜೌಗು ಪ್ರದೇಶವನ್ನಾಗಿ ರೂಪಿಸುವುದು—ಇವೆಲ್ಲವೂ ಬೀವರ್ಗಳ ಅಸಾಧಾರಣ ಯೋಜನಾ ಸಾಮರ್ಥ್ಯಕ್ಕೆ ಸಾಕ್ಷಿಯಾಗಿದೆ. ತಮ್ಮ ವಾಸಸ್ಥಳದ ಸುಳಿವು ಇತರ ಪ್ರಾಣಿಗಳಿಗೆ ಸಿಗದಂತೆ ರಕ್ಷಣೆಯೊಂದಿಗೆ ಬದುಕುವ ಈ ಸಣ್ಣ ಜೀವಿಗಳ ಸೃಜನಶೀಲತೆ, ದೂರದೃಷ್ಟಿ ಹಾಗೂ ಪರಿಸರ ಸ್ನೇಹಿ ಇಂಜಿನಿಯರಿಂಗ್ ನಿಜಕ್ಕೂ ವಿಸ್ಮಯಕಾರಿಯಾಗಿದೆ. ಪ್ರಕೃತಿ ಈ ಜೀವಿಗಳಿಗೆ ನೀಡಿರುವ ಬುದ್ಧಿವಂತಿಕೆ ಮತ್ತು ಜೀವನ ಕೌಶಲ್ಯವನ್ನು ನೋಡಿದಾಗ, ನಿಜವಾದ ಇಂಜಿನಿಯರ್ ಯಾರು ಎಂಬ ಪ್ರಶ್ನೆ ನಮ್ಮ ಮನಸ್ಸಿನಲ್ಲಿ ಮೂಡುತ್ತದೆ.
ನಾಸಾ ವಿಜ್ಞಾನಿಗಳ ಅಧ್ಯಯನ ಮತ್ತು ಸಂರಕ್ಷಣೆ
2023ರಲ್ಲಿ ನಾಸಾದ ವಿಜ್ಞಾನಿಗಳ ತಂಡವು ಬೀವರ್ಗಳ ಡ್ಯಾಮ್ಗಳು ಪರಿಸರದ ಮೇಲೆ ಬೀರುವ ಪರಿಣಾಮವನ್ನು ಅಧ್ಯಯನ ಮಾಡಲು ಅಮೆರಿಕದ ಐಡಾಹೊ ರಾಜ್ಯಕ್ಕೆ ಭೇಟಿ ನೀಡಿತ್ತು. ಈ ಪ್ರದೇಶದಲ್ಲಿ ಬೀವರ್ಗಳ ಸಂಖ್ಯೆ ಗಮನಾರ್ಹವಾಗಿದೆ. ಒಂದು ಕಾಲದಲ್ಲಿ ಉತ್ತರ ಅಮೆರಿಕಾದಾದ್ಯಂತ ಲಕ್ಷಾಂತರ ಬೀವರ್ಗಳು ಕಂಡುಬರುತ್ತಿದ್ದವು. ಆದರೆ 17ನೇ ಶತಮಾನದಲ್ಲಿ ಅವುಗಳ ಅಮೂಲ್ಯ ಚರ್ಮ ಹಾಗೂ ಮಾಂಸಕ್ಕಾಗಿ ನಡೆದ ಅತಿಯಾದ ಬೇಟೆಯಿಂದ ಅವುಗಳ ಸಂಖ್ಯೆ ಭಾರೀ ಪ್ರಮಾಣದಲ್ಲಿ ಕುಸಿಯಿತು. ಪರಿಣಾಮವಾಗಿ ಕೆಲವು ಪ್ರದೇಶಗಳಲ್ಲಿ ಮಾತ್ರ ಬೀವರ್ಗಳು ಉಳಿದುಕೊಂಡವು. ಅಂತಹ ಪ್ರದೇಶಗಳಲ್ಲಿ ಐಡಾಹೊವೂ ಒಂದು.
ಈ ಪರಿಸ್ಥಿತಿಯನ್ನು ಮನಗಂಡು 1948ರಲ್ಲಿ ಅಮೆರಿಕ ಸರ್ಕಾರವು ಬೀವರ್ಗಳನ್ನು ಸಂರಕ್ಷಿಸುವ ಉದ್ದೇಶದಿಂದ ಅವುಗಳನ್ನು ದೂರದ ಹಾಗೂ ಸುರಕ್ಷಿತ ಪ್ರದೇಶಗಳಿಗೆ ಸ್ಥಳಾಂತರಿಸುವ ಯೋಜನೆಯನ್ನು ಕೈಗೊಂಡಿತು. ಅದರ ಭಾಗವಾಗಿ ಐಡಾಹೊ ಸಮೀಪದ ಬರ್ಗ್ ಕ್ರೀಕ್ ಪ್ರದೇಶಕ್ಕೆ ಅನೇಕ ಬೀವರ್ಗಳನ್ನು ಸ್ಥಳಾಂತರಿಸಲಾಯಿತು. ಆ ನಿರ್ಧಾರದ ಫಲಿತಾಂಶ ಇಂದು ವಿಜ್ಞಾನಿಗಳನ್ನು ಅಚ್ಚರಿಗೊಳಿಸುವಷ್ಟು ಪರಿಣಾಮಕಾರಿಯಾಗಿದೆ.
ಪ್ರಕೃತಿಯ ಅಗ್ನಿಶಾಮಕ ಸಿಬ್ಬಂದಿ
ಬೀವರ್ಗಳು ವಾಸಿಸುವ ಪ್ರದೇಶಗಳು ಸಾಮಾನ್ಯವಾಗಿ ಸುತ್ತಮುತ್ತಲಿನ ಪ್ರದೇಶಗಳಿಗಿಂತ ಹೆಚ್ಚು ಹಸಿರಿನಿಂದ ಕಂಗೊಳಿಸುತ್ತವೆ. ಅವು ನಿರ್ಮಿಸಿರುವ ಡ್ಯಾಮ್ಗಳ ಪರಿಣಾಮವಾಗಿ ಅಲ್ಲಿನ ನೀರಿನ ತೊರೆಗಳು ಹೆಚ್ಚು ಸ್ವಚ್ಛವಾಗಿದ್ದು, ವರ್ಷಪೂರ್ತಿ ನೀರಿನ ಲಭ್ಯತೆ ಉತ್ತಮವಾಗಿದೆ. 2018ರಲ್ಲಿ ಈ ಭಾಗದಲ್ಲಿ ಸಂಭವಿಸಿದ ಭೀಕರ ಕಾಡ್ಗಿಚ್ಚಿನಿಂದ ಸುಮಾರು 60,000 ಎಕರೆ ಪ್ರದೇಶ ಸುಟ್ಟುಹೋದರೂ, ಬೀವರ್ಗಳು ವಾಸಿಸುತ್ತಿದ್ದ ಜೌಗು ಪ್ರದೇಶಗಳು ಹಾಗೂ ಅವುಗಳ ಸುತ್ತಮುತ್ತಲಿನ ಹಸಿರು ಪ್ರದೇಶಗಳು ಬಹುತೇಕ ಸುರಕ್ಷಿತವಾಗಿದ್ದವು. ಈ ಕಾರಣದಿಂದಲೇ ವಿಜ್ಞಾನಿಗಳು ಬೀವರ್ಗಳನ್ನು ‘ಪ್ರಕೃತಿಯ ಅಗ್ನಿಶಾಮಕ ಸಿಬ್ಬಂದಿ’ ಎಂದು ಕರೆಯಲು ಆರಂಭಿಸಿದ್ದಾರೆ.
ಬೀವರ್ಗಳ ಡ್ಯಾಮ್ಗಳು ಜೀವವೈವಿಧ್ಯ ಹೆಚ್ಚಿಸುವಲ್ಲಿಯೂ ಮಹತ್ವದ ಪಾತ್ರವಹಿಸುತ್ತವೆ. ಅವುಗಳ ಡ್ಯಾಮ್ಗಳ ಸುತ್ತ ನಿರ್ಮಾಣವಾಗುವ ಜೌಗು ಪ್ರದೇಶಗಳು ಅನೇಕ ಪಕ್ಷಿಗಳಿಗೆ ಗೂಡು ಕಟ್ಟಲು, ಜಲಚರ ಜೀವಿಗಳಿಗೆ ವಾಸಿಸಲು ಹಾಗೂ ವಿಭಿನ್ನ ಸಸ್ಯಗಳು ಬೆಳೆಯಲು ಅನುಕೂಲಕರ ವಾತಾವರಣವನ್ನು ಒದಗಿಸುತ್ತವೆ. ಈ ವೆಟ್ಲ್ಯಾಂಡ್ಗಳು ಕಾರ್ಬನ್ ಡೈಆಕ್ಸೈಡ್ ಅನ್ನು ಹಿಡಿದಿಟ್ಟುಕೊಳ್ಳುವ ಸಾಮರ್ಥ್ಯ ಹೊಂದಿರುವುದರಿಂದ ಹವಾಮಾನ ಬದಲಾವಣೆಯ ಪರಿಣಾಮವನ್ನು ತಗ್ಗಿಸುವಲ್ಲಿಯೂ ಸಹಕಾರಿಯಾಗುತ್ತವೆ. ಜೊತೆಗೆ ಡ್ಯಾಮ್ಗಳು ನೀರಿನ ಹರಿವಿನ ವೇಗವನ್ನು ನಿಯಂತ್ರಿಸುವುದರಿಂದ ಪ್ರವಾಹದ ತೀವ್ರತೆ ಕಡಿಮೆಯಾಗುತ್ತದೆ. ಹೆಚ್ಚಿನ ಪ್ರಮಾಣದ ನೀರು ನೆಲದೊಳಗೆ ಇಂಗುವುದರಿಂದ ಅಂತರ್ಜಲ ವೃದ್ಧಿಯಾಗುತ್ತದೆ. ಬೇಸಿಗೆ ಹಾಗೂ ಬರಗಾಲದ ಸಂದರ್ಭಗಳಲ್ಲಿ ಇದೇ ನೀರು ಅನೇಕ ಪ್ರಾಣಿ-ಪಕ್ಷಿಗಳಿಗೆ ಜೀವದಾಯಕವಾಗುತ್ತದೆ.
ನೈಸರ್ಗಿಕ ನದಿ ಜೋಡಣೆ ಯೋಜನೆ
ಬೀವರ್ಗಳ ಮತ್ತೊಂದು ವಿಶಿಷ್ಟ ಗುಣವೆಂದರೆ, ನೀರಿನ ಕೊರತೆ ಎದುರಾದಾಗ ಅವು ವಿವಿಧ ಸರೋವರಗಳು ಹಾಗೂ ನೀರಿನ ಮೂಲಗಳನ್ನು ಸಣ್ಣ ಕಾಲುವೆಗಳ ಮೂಲಕ ಪರಸ್ಪರ ಸಂಪರ್ಕಿಸುವ ಪ್ರಯತ್ನ ಮಾಡುತ್ತವೆ. ಇದರಿಂದ ಒಂದು ಪ್ರದೇಶದ ನೀರು ಮತ್ತೊಂದು ಪ್ರದೇಶಕ್ಕೂ ಹರಿದು ನೀರಿನ ಸಮತೋಲನ ಕಾಪಾಡಲು ಸಹಾಯವಾಗುತ್ತದೆ. ಮನುಷ್ಯನು ಇಂದು ನದಿ ಜೋಡಣೆ ಯೋಜನೆಗಳ ಬಗ್ಗೆ ಚರ್ಚಿಸುತ್ತಿದ್ದರೆ, ಈ ಸಣ್ಣ ಜೀವಿಗಳು ತಮ್ಮ ಅಗತ್ಯಕ್ಕೆ ತಕ್ಕಂತೆ ಪ್ರಕೃತಿಯಲ್ಲಿಯೇ ನೀರಿನ ನಿರ್ವಹಣೆಯ ಅದ್ಭುತ ಮಾದರಿಯನ್ನು ಬಹಳ ಹಿಂದೆಯೇ ರೂಪಿಸಿಕೊಂಡಿವೆ.
ಬೀವರ್ಗಳು ಕೇವಲ ಡ್ಯಾಮ್ ನಿರ್ಮಿಸುವ ಪ್ರಾಣಿಗಳಲ್ಲ; ಅವು ಪ್ರಕೃತಿಯ ಸಮತೋಲನವನ್ನು ಕಾಪಾಡುವ ನಿಜವಾದ ಪರಿಸರ ಸಂರಕ್ಷಕರು. ಅವುಗಳ ಪ್ರತಿಯೊಂದು ನಿರ್ಮಾಣವೂ ಪರಿಸರದೊಂದಿಗೆ ಹೊಂದಾಣಿಕೆಯನ್ನು ಸಾಧಿಸುತ್ತದೆ. ಮನುಷ್ಯ ನಿರ್ಮಿಸುವ ದೊಡ್ಡ ಅಣೆಕಟ್ಟುಗಳಿಂದ ಸಾವಿರಾರು ಎಕರೆ ಅರಣ್ಯ, ಕೃಷಿಭೂಮಿ ಮತ್ತು ಜೀವವೈವಿಧ್ಯ ನಾಶವಾಗುವ ಸಾಧ್ಯತೆ ಇರುವುದು ನಮಗೆ ತಿಳಿದಿದೆ. ಆದರೆ ಬೀವರ್ಗಳ ಡ್ಯಾಮ್ಗಳು ಪ್ರಕೃತಿಗೆ ಹಾನಿ ಮಾಡದೆ, ನೀರನ್ನು ಸಂಗ್ರಹಿಸಿ, ಅಂತರ್ಜಲ ಹೆಚ್ಚಿಸಿ, ಜೌಗು ಪ್ರದೇಶಗಳನ್ನು ನಿರ್ಮಿಸಿ, ಜೀವಜಗತ್ತಿಗೆ ಆಶ್ರಯ ಒದಗಿಸುತ್ತವೆ. ಈ ಕಾರಣಕ್ಕಾಗಿಯೇ ಅವುಗಳನ್ನು ಪ್ರಕೃತಿಯ ನೈಜ ಇಂಜಿನಿಯರ್ಗಳು ಎಂದು ಕರೆಯಲಾಗುತ್ತದೆ.
ಪ್ರಕೃತಿಯ ಸಹಬಾಳ್ವೆಯ ಮಹತ್ವದ ಪಾಠ
ಇಂದು ಜಗತ್ತು ನೀರಿನ ಕೊರತೆ, ಹವಾಮಾನ ಬದಲಾವಣೆ, ಪ್ರವಾಹ, ಬರ ಹಾಗೂ ಪರಿಸರ ನಾಶದಂತಹ ಗಂಭೀರ ಸವಾಲುಗಳನ್ನು ಎದುರಿಸುತ್ತಿದೆ. ಇಂತಹ ಸಂದರ್ಭದಲ್ಲಿ ಬೀವರ್ಗಳಂತಹ ಪುಟ್ಟ ಜೀವಿಗಳು ಪ್ರಕೃತಿಯನ್ನು ಹೇಗೆ ಸಂರಕ್ಷಿಸಬೇಕು, ನೀರನ್ನು ಹೇಗೆ ಉಳಿಸಬೇಕು, ಜೀವವೈವಿಧ್ಯವನ್ನು ಹೇಗೆ ಬೆಳೆಸಬೇಕು ಎಂಬುದಕ್ಕೆ ಜೀವಂತ ಪಾಠವಾಗಿವೆ. ದೊಡ್ಡ ದೊಡ್ಡ ಯೋಜನೆಗಳಿಗಿಂತ, ಪ್ರಕೃತಿಗೆ ಹೊಂದಿಕೊಳ್ಳುವ ಸಾವಿರಾರು ಸಣ್ಣ ಜಲಸಂರಕ್ಷಣಾ ಕ್ರಮಗಳು ಹೆಚ್ಚು ಪರಿಣಾಮಕಾರಿ ಎಂಬ ಸಂದೇಶವನ್ನು ಅವು ತಮ್ಮ ಬದುಕಿನ ಮೂಲಕವೇ ಸಾರುತ್ತಿವೆ.
ಒಟ್ಟಾರೆಯಾಗಿ ಈ ಪ್ರಕೃತಿಯಲ್ಲಿನ ಪ್ರತಿಯೊಂದು ಜೀವಿಯೂ ಮನುಷ್ಯನಿಗೆ ಒಂದಲ್ಲ ಒಂದು ಪಾಠಗಳನ್ನು ಹೇಳುತ್ತವೆ. ಆದರೆ ಆ ಪಾಠಗಳನ್ನು ಕಲಿಯುವ ವಿನಯ ಮನುಷ್ಯನಲ್ಲಿ ಇರಬೇಕು. ಬೀವರ್ಗಳು ಕೇವಲ ನಮಗೆ ಕಲಿಸುವುದು ಡ್ಯಾಮ್ ಕಟ್ಟುವುದಷ್ಟೆ ಅಲ್ಲ; ಈ ಪ್ರಕೃತಿಯೊಂದಿಗೆ ಹೋರಾಡದೆ, ಅದರೊಂದಿಗೆ ಹೊಂದಿಕೊಂಡು ಹೇಗೆ ಬದುಕಬೇಕೆಂಬ ಬದುಕಿನ ದರ್ಶನವನ್ನು. ಸ್ವಾರ್ಥಕ್ಕಾಗಿ ಪ್ರಕೃತಿಯನ್ನು ಶೋಷಿಸುವ ಬದಲು, ಅದರೊಂದಿಗೆ ಸಹಬಾಳ್ವೆ ನಡೆಸಿದಾಗ ಮಾತ್ರ ಮಾನವ ನಾಗರಿಕತೆಗೆ ನಿಜವಾದ ಭವಿಷ್ಯ ಸಿಗುತ್ತದೆ. ಈ ಭೂಮಿಯನ್ನು ನಮ್ಮ ಪೂರ್ವಜರಿಂದ ನಾವು ಪಡೆದಿಲ್ಲ; ನಮ್ಮ ಮುಂದಿನ ಪೀಳಿಗೆಯಿಂದ ಎರವಲು ಪಡೆದಿದ್ದೇವೆ. ಆದ್ದರಿಂದ ಪ್ರಕೃತಿಯನ್ನು ಉಳಿಸುವ ಕಾರ್ಯವೇ ಮಾನವಕುಲದ ಭವಿಷ್ಯವನ್ನು ಉಳಿಸುವ ಕಾರ್ಯವಾಗಿದೆ. ಈ ಪುಟ್ಟ ಬೀವರ್ಗಳು ಕಲಿಸಿದ ಪಾಠವನ್ನು ನಾವು ಜೀವನದಲ್ಲಿ ಅಡವಳಿಸಿಕೊಂಡಾಗಲೇ, ಮನುಷ್ಯನು ನಿಜವಾದ ಅರ್ಥದಲ್ಲಿ ಬುದ್ಧಿವಂತನೆಂದು ಕರೆಸಿಕೊಳ್ಳಲು ಅರ್ಹನಾಗುತ್ತಾನೆ.
