- ಡಾ. ವೀರಣ್ಣ ರಾಜೂರ, ನಿವೃತ್ತ ಪ್ರಾಧ್ಯಾಪಕ
‘ವಚನ’ ಎಂಬ ಪದ ತುಂಬ ಪ್ರಾಚೀನ; ಆದರೆ ಶರಣರು ಅದಕ್ಕೆ ಕೊಟ್ಟ ಅರ್ಥ ನೂತನ. ‘ಮಾತು’ ಎಂಬುದು ಅದರ ಪಾರಂಪರಿಕ ಅರ್ಥ; `ಆತ್ಮಸಾಕ್ಷಿಯ ನುಡಿ’ ಎಂಬುದು ಶರಣರ ಅರ್ಥ. ವಚನವೆಂಬುದು ಶರಣರು ಮನದೆರೆದು ಆಡಿದ ನುಡಿ; ಅದು ಭಕ್ತಿ ಸುಭಾಷೆಯ ನುಡಿ; ಅದು ಸತ್ಯದ ಬೆಳಕನ್ನು ಅಡಗಿಸಿಕೊಂಡ ಜ್ಯೋತಿ; ಅದು ಜ್ಯೋತಿರ್ಲಿಂಗ. ವಚನದ ಅರ್ಥ ಪದದಲ್ಲಿ ಇಲ್ಲ; ಅದನ್ನು ಆಡಿದ (ಆಡುವ) ವ್ಯಕ್ತಿಯಲ್ಲಿ ಅಡಗಿದೆ. ಅದು ನಿಘಂಟುವಿನಲ್ಲಿ ಇಲ್ಲದ ಅರ್ಥ. ಮಾತು – ಕೃತಿ (ನುಡಿ – ನಡೆ) ಒಂದಾದವನು ಆಡಿದ ಸತ್ಯಶುದ್ಧ ಆತ್ಮಸಾಕ್ಷಿಯ ನುಡಿಯೇ ವಚನ. ಅದಿಲ್ಲದವನು ಆಡಿದ ನುಡಿ ಕೇವಲ ಮಾತಷ್ಟೇ.
ಶರಣರ ಈ ಅಭಿವ್ಯಕ್ತಿ ರೂಪಕ್ಕೆ ಜೇಡರ ದಾಸಿಮಯ್ಯ ‘ಸೂಳ್ನುಡಿ’ ಎಂದು ಕರೆದರೆ, ಬಸವಾದಿಗಳು ‘ವಚನ’ ಎಂದು ಕರೆದರು. ಕಲ್ಲುಮಠದ ಪ್ರಭುದೇವ ‘ವಚನಾಗಮ’ ಎಂದು ಕರೆದಿದ್ದಾನೆ. ಅನುಭಾವಿಗಳ ಸತ್ಸಂಗದ ಸಂವಾದದಲ್ಲಿ ಆಕಾರ ಪಡೆದದ್ದು ‘ಸೂಳ್ನುಡಿ’. ಅನುಭವ ಮಂಟಪದ ಚರ್ಚೆಯಲ್ಲಿ ರೂಪುಗೊಂಡಿದ್ದು ‘ವಚನ’. ಸಾಂಪ್ರದಾಯಿಕಶಾಸ್ತ್ರ ಶಿಸ್ತಿಗೆ ಒಳಪಟ್ಟದ್ದು ‘ವಚನಾಗಮ’.
‘ವಚನ’ ಸಾಹಿತ್ಯೇತರ ಉದ್ದೇಶದಿಂದ ಹುಟ್ಟಿದ ವಿಶಿಷ್ಟರೂಪ. ಮೊದಲನೆಯದಾಗಿ ಅದು ಒಂದು ಚಳವಳಿಯ ಮಾಧ್ಯಮ; ಹನ್ನೆರಡನೆಯ ಶತಮಾನದಲ್ಲಿ – ಕರ್ನಾಟಕದ ಕಲ್ಯಾಣದಲ್ಲಿ ನಡೆದ ಮಾನವೋದ್ಧಾರದ ಮಹಾಕ್ರಾಂತಿಯ ಸಮರ್ಥ ಮಾಧ್ಯಮ. ಅದನ್ನು ಸೃಷ್ಟಿಸಿದವರು ಕಾಯಕ ಜೀವಿಗಳೆನಿಸಿದ ಬಸವಾದಿ ಶರಣರು. ಶರಣ ಚಳವಳಿಗೆ ಅನೇಕ ಆಯಾಮಗಳಿವೆ. ಧಾರ್ಮಿಕ, ಸಾಮಾಜಿಕ, ಆರ್ಥಿಕ, ಸಾಹಿತ್ಯಿಕ, ಸಾಂಸ್ಕೃತಿಕ – ಹೀಗೆ ಅದೊಂದು ಮಾನವ ಬದುಕಿನ ಸಮಗ್ರ ಬದಲಾವಣೆಯ ಮಹಾ ಆಂದೋಳನವೆನಿಸಿತ್ತು.
‘ಸ್ಥಾವರಕ್ಕಳಿವುಂಟು, ಜಂಗಮಕ್ಕಳಿವಿಲ್ಲ’ ಎಂಬುದು ಆ ಚಳವಳಿಯ ಮೂಲಸೂತ್ರ. ಸ್ಥಗಿತ ವ್ಯವಸ್ಥೆಯನ್ನು ಚಲನಶೀಲಗೊಳಿಸುವುದು, ಅಂದರೆ ಜೀವವಿರೋಧಿ – ಜೀವನವಿರೋಧಿ ಸ್ಥಾಪಿತ ಕಟ್ಟುಪಾಡುಗಳನ್ನು ಒಡೆದುಹಾಕಿ, ಜೀವಕಾರುಣ್ಯದ, ಮಾನವೀಯ ಮೌಲ್ಯಗಳನ್ನು ಜಾರಿಗೊಳಿಸುವುದು ಅದರ ಪರಮ ಗುರಿಯಾಗಿತ್ತು. ಹೀಗಾಗಿ ಧಾರ್ಮಿಕ ಕ್ಷೇತ್ರದಲ್ಲಿ ರೂಢಿಗತವಾಗಿ ನಡೆದು ಬಂದಿದ್ದ ಬಹುದೇವೋಪಾಸನೆ, ಮೂಢನಂಬಿಕೆ, ಕಂದಾಚಾರ, ಪಶುಬಲಿ, ಶೋಷಣೆ ಮೊದಲಾದವುಗಳನ್ನು ನಿರಾಕರಿಸಿ, ವೈಚಾರಿಕ ತಳಹದಿಯ ಮೇಲೆ ‘ಲಿಂಗಾಯತ’ ಎಂಬ ನೂತನ ಸ್ವತಂತ್ರ ಧರ್ಮವೊಂದು ಸ್ಥಾಪಿತವಾಯಿತು. ‘ಇಷ್ಟಲಿಂಗ’ ಈ ಧರ್ಮದ ಏಕದೈವನಿಷ್ಠ ಸಂಕೇತವೆನಿಸಿತು. ಅದು ಕೇವಲ ಧಾರ್ಮಿಕ ಕುರುಹು ಮಾತ್ರ ಎನಿಸದೆ, ಇಡೀ ಮಾನವಕುಲದ ಸಮಾನತೆಯ (ಸರ್ವಸಮಾನತೆಯ) ಸಂಕೇತವೆನಿಸಿತು. ‘ದಯವೇ ಧರ್ಮದ ಮೂಲ’ ಎಂಬುದು ಇದರ ನೆಲಗಟ್ಟೆನಿಸಿತು.
ಸಾಮಾಜಿಕವಾಗಿ ನಿರ್ಮಾಣವಾಗಿದ್ದ ಬ್ರಾಹ್ಮಣ, ಕ್ಷತ್ರಿಯ, ವೈಶ್ಯ, ಶೂದ್ರ ಎಂಬ ಶ್ರೇಣೀಕೃತ ವ್ಯವಸ್ಥೆಯನ್ನು ತಿರಸ್ಕರಿಸಿ, ವರ್ಗ – ವರ್ಣ – ಲಿಂಗ ಭೇದ ರಹಿತ ಸಮಸಮಾಜವನ್ನು ಕಟ್ಟಲು ಪ್ರಯತ್ನಿಸಿತು. ಸಮಾನತೆ – ಸ್ವಾತಂತ್ರ್ಯ -ಸಹೋದರತ್ವ ಈ ಸಮಾಜದ ತಳಹದಿ ಎನಿಸಿದವು. ಆರ್ಥಿಕವಾಗಿ ದುಡಿಯುವವನೊಬ್ಬ, ಪಡೆಯುವವ ಮತ್ತೊಬ್ಬ ಎನ್ನುವಂತಿದ್ದ ತಾರತಮ್ಯ ರೀತಿಯನ್ನು ತೊಡೆದು ಹಾಕಿ, ‘ಕಾಯಕ – ದಾಸೋಹ’ ಎಂಬ ಸಮಶ್ರಮ, ಸಮಕ್ರಮ ನೀತಿಯನ್ನು ನಿರೂಪಿಸಿತು. ಎಲ್ಲರೂ ಕಾಯಕ ಮಾಡಬೇಕು; ಕಾಯಕದಲ್ಲಿ ಮೇಲು – ಕೀಳುಗಳಿಲ್ಲ; ಕಾಯಕ ಸತ್ಯಶುದ್ಧವಾಗಿರಬೇಕು. ಕಾಯಕದಿಂದ ಬಂದ ಫಲವನ್ನು ತಾನೂ ಉಣ್ಣಬೇಕು, ಸಮಾಜಕ್ಕೂ ದಾಸೋಹ ಮಾಡಬೇಕು. ಇದರಿಂದ ಆರ್ಥಿಕ ಸಮಾನತೆ, ಸ್ವಾವಲಂಬಿ – ಸ್ವಾಭಿಮಾನದ ಬದುಕು ಎಲ್ಲರದಾಗುತ್ತದೆ ಎಂಬುದು ಇದರ ಇಂಗಿತವಾಗಿತ್ತು.
‘ವಚನ’ ಒಂದು ಸಾಹಿತ್ಯ ಪ್ರಕಾರವಾಗಿಯೂ ತನ್ನ ಮೇಲ್ಮೆಯನ್ನು ಮೆರೆದಿದೆ. ಆದರೆ ಅದು ಈ ಪೂರ್ವದ ಸಾಹಿತ್ಯ ಪ್ರಕಾರಗಳಿಂದ ವಸ್ತು – ರೂಪ – ಭಾಷೆ – ಆಶಯ – ಮೌಲ್ಯ – ಎಲ್ಲ ದೃಷ್ಟಿಯಿಂದಲೂ ಸಂಪೂರ್ಣ ಭಿನ್ನವಾಗಿದೆ. ಇದರ ವಸ್ತು – ಪೂರ್ವ ಸಿದ್ಧವಾದುದಲ್ಲ; ವ್ಯಕ್ತಿನಿಷ್ಠವಾದುದು ಇಡೀ ಬದುಕಿಗೇ ಸಂಬಂಧಿಸಿದುದು. ರೂಪ – ದೀರ್ಘಕಾವ್ಯ ರೀತಿಯದಲ್ಲ; ಸಂಕ್ಷಿಪ್ತತೆಯನ್ನು ಮೈಗೂಡಿಸಿಕೊಂಡ ಮುಕ್ತಕ. ಯಾವುದೇ ಶಾಸ್ತ್ರದ (ಛಂದೋಬಂಧದ) ಕಟ್ಟಿಗೆ ಒಳಗಾಗದ ಸ್ವಚ್ಛಂದತೆ ಅದರ ಲಕ್ಷಣ. ಭಾಷೆ – ಶಿಷ್ಟ, ಸಂಸ್ಕೃತ ಭೂಯಿಷ್ಠವಲ್ಲ; ಜನಪದ ಮೂಲದಿಂದ ಬಂದುದು; ದೇಶೀ ನಿಷ್ಠವಾದುದು. ಸರಳತೆ, ಸಹಜತೆ, ಅದರ ಗುಣ. ಆಶಯ – ಜನಪರ, ಜೀವನಪರ; ಸಕಲಜೀವಾತ್ಮರ ಲೇಸು ಬಯಸಬೇಕೆಂಬುದು. ಸಮಾನತೆ, ಸ್ವಾತಂತ್ರ್ಯ, ಸಹೋದರತ್ವಗಳ ಮೂಲಕ ಸುಂದರ ಸುಖೀ ಸಮಾಜ ನಿರ್ಮಿಸಬೇಕೆಂಬುದು. ಮಾನವನು ಅಂತರಂಗ-ಬಹಿರಂಗ ಶುದ್ಧಿಯ ಮೂಲಕ ಆತ್ಮ ಕಲ್ಯಾಣ, ಲೋಕ ಕಲ್ಯಾಣ ಕಾಣಬೇಕೆಂಬುದು. ಭಕ್ತಿ ಇದರ ಬಹುಮುಖ್ಯ ಮೌಲ್ಯ. ಅನುಭಾವ ಇದರ ಪ್ರಾಣ ಜೀವಾಳ. ಹೀಗೆ ಎಲ್ಲ ದೃಷ್ಟಿಯಿಂದಲೂ ಅನನ್ಯತೆಯನ್ನು ತೋರಿ ತನ್ನ ಸಾಧ್ಯತೆಗಳನ್ನೆಲ್ಲ ಸೂರೆಗೈದು, ಸಾಹಿತ್ಯದ ದಿಕ್ಕನ್ನೇ ಬದಲಿಸಿದ ವಚನ ಸಾಹಿತ್ಯ ವೈಚಾರಿಕ ಪ್ರಪಂಚದ ಒಂದು ಅಚ್ಚರಿ ಎನಿಸಿದೆ. ಕನ್ನಡ ವಿಶ್ವಸಾಹಿತ್ಯಕ್ಕೆ ಕೊಟ್ಟ ಅಪೂರ್ವ ಕೊಡುಗೆ ಎನಿಸಿದೆ.
ಚೆನ್ನಬಸವಣ್ಣ ಒಂದು ವಚನದಲ್ಲಿ ‘ಕಾಯಸಾಹಿತ್ಯ ಎಲ್ಲರಿಗೂ ಉಂಟು, ಆತ್ಮಸಾಹಿತ್ಯ ಅಪೂರ್ವ’ ಎಂದು ಹೇಳುತ್ತಾನೆ. ಅಂದರೆ ಈತನ ಪ್ರಕಾರ ಸಾಹಿತ್ಯದಲ್ಲಿ ಎರಡು ಪ್ರಕಾರ: ಒಂದು ಕಾಯಸಾಹಿತ್ಯ; ಮತ್ತೊಂದು ಆತ್ಮ ಸಾಹಿತ್ಯ. ಇಲ್ಲಿ ಕಾಯಸಾಹಿತ್ಯವೆಂದರೆ ಕವಿಗಳು ಬರೆದ ಸಾಹಿತ್ಯ; ಆತ್ಮಸಾಹಿತ್ಯ ಎಂದರೆ ಶರಣರು ಒರೆದ ಅನುಭಾವ ಸಾಹಿತ್ಯ. ಕಾವ್ಯ ಸಾಹಿತ್ಯವನ್ನು ಯಾರಾದರೂ ಬರೆಯಬಹುದು; ಆದರೆ ಅನುಭಾವ ಸಾಹಿತ್ಯ ನಡೆ-ನುಡಿ ಸಾಮರಸ್ಯ ಸಾಧಿಸಿದ ಶರಣರಿಂದ ಮಾತ್ರ ಸಾಧ್ಯ. ಹೀಗಾಗಿ ಅದು ಅಪೂರ್ವ ಎಂದಿದ್ದಾನೆ. ವಚನ ಇಂಥ ಅನುಭಾವ ಸಾಹಿತ್ಯವಾಗಿದೆ.
ಮುಕ್ತತೆ ವಚನದ ಮುಖ್ಯ ಲಕ್ಷಣ. ಅದು ಶರಣರ ಮುಕ್ತ ಬದುಕು, ಮುಕ್ತ ವಿಚಾರ, ಮುಕ್ತ ಧರ್ಮ, ಮುಕ್ತ ಸಮಾಜ, ಮುಕ್ತ ಭಾಷೆ, ಮುಕ್ತ ಸಾಹಿತ್ಯ, ಮುಕ್ತ ಧೋರಣೆಯನ್ನು ಸೂಚಿಸುತ್ತದೆ. ಮುಕ್ತತೆ ಅಂದರೆ ಸ್ವಚ್ಛಂದತೆ ಅಲ್ಲ. ಸಾಮಾಜಿಕ ಹೊಣೆಗಾರಿಕೆಯನ್ನು ಇಟ್ಟುಕೊಂಡು ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಮೆರೆಯುವುದು. ‘ಕೂಡಲಸಂಗಮದೇವಾ ನಿನಗೆ ಕೇಡಿಲ್ಲವಾಗಿ ಆನು ಒಲಿದಂತೆ ಹಾಡುವೆ’ ಎಂಬ ಮಾತಿನಲ್ಲಿ ಬಸವಣ್ಣನವರು ಅದನ್ನು ಧ್ವನಿಸಿದ್ದಾರೆ.
ವಚನಗಳೇ ಲಿಂಗಾಯತ ಧರ್ಮದ ಧರ್ಮಗ್ರಂಥ. ಆದರೆ ವಚನ ಧರ್ಮಗ್ರಂಥವಾಗಿ-ಹಾಗೆಯೇ ಒಂದು ವಿಶಿಷ್ಟ ಸಾಹಿತ್ಯ ಪ್ರಕಾರವಾಗಿಯೂ ತನ್ನ ವಿಶೇಷತೆಯನ್ನು ತೋರಿದೆ. ಕನ್ನಡ ಸಾಹಿತ್ಯ ಚರಿತ್ರೆಯಲ್ಲಿ ‘ವಚನಯುಗ’ ಎಂಬ ಒಂದು ಕಾಲಘಟ್ಟವನ್ನೇ ಗುರುತಿಸಿಕೊಳ್ಳುವಷ್ಟು ಸಮೃದ್ಧವಾಗಿ ಬೆಳೆದಿದೆ.
ಒಟ್ಟು ಮಾನವ ಬದುಕನ್ನೇ ವಸ್ತುವಾಗಿಸಿಕೊಂಡುದು ವಚನ ಸಾಹಿತ್ಯದ ಮತ್ತೊಂದು ಪ್ರಮುಖ ಲಕ್ಷಣ. ಬದುಕಿನ ಎಲ್ಲ ಸಂಗತಿಗಳಿಗೆ ಇಲ್ಲಿ ಸಹಜ-ಸ್ಪಂದನವಿದೆ; ಎಲ್ಲ ಸಮಸ್ಯೆಗಳಿಗೆ ಸೂಕ್ತ ಪರಿಹಾರವಿದೆ. ಹೀಗಾಗಿ ಇಲ್ಲಿ ಸೃಷ್ಟಿತತ್ತ್ವ, ಪ್ರಕೃತಿ-ಪರಿಸರ, ಧರ್ಮ-ಸಮಾಜ-ಸಂಸ್ಕೃತಿ, ಜ್ಞಾನ-ವಿಜ್ಞಾನ, ಲೌಕಿಕ-ಪಾರಮಾರ್ಥ, ಅಧ್ಯಾತ್ಮ-ಅನುಭಾವ ಎಲ್ಲವೂ ಸಂಗಮಿಸಿವೆ. ಈ ಕಾರಣದಿಂದ ವಿಭಿನ್ನ ನೆಲೆಯ ಅಧ್ಯಯನಕ್ಕೆ ನಿರಂತರ ತನ್ನನ್ನು ಒಡ್ಡಿಕೊಳ್ಳುತ್ತ ಬಂದಿದೆ.
ವಚನ ಸಾಹಿತ್ಯದ ಪ್ರಗತಿಪರ ವಿಚಾರಗಳು ಲೋಕೋತ್ತರವೆನಿಸಿವೆ; ವಿಶ್ವಮಾನ್ಯವಾಗಿವೆ; ಯಾವ ಕಾಲಕ್ಕೂ ತನ್ನ ಪ್ರಸ್ತುತತೆಯನ್ನು ಉಳಿಸಿಕೊಂಡು ಬಂದಿವೆ. ದೇಶದ ಆರ್ಥಿಕ, ಸಾಮಾಜಿಕ, ರಾಜಕೀಯ ಅನೇಕ ಸಮಸ್ಯೆಗಳಿಗೆ ಸೂಕ್ತ ಪರಿಹಾರವನ್ನು ಒದಗಿಸುತ್ತವೆ. ಸಾತ್ವಿಕಬದುಕು, ಸ್ವಸ್ಥಸಮಾಜ, ಸಮೃದ್ಧರಾಷ್ಟ್ರ ನಿರ್ಮಾಣಕ್ಕೆ ನೆರವು ನೀಡುತ್ತವೆ.
