ಕಲಬುರ್ಗಿ: ಕಲಬುರ್ಗಿಯ ಪ್ರತಿಭಾವಂತ ಬರಹಗಾರ ಗುರುರಾಜ್ ಬಿ. ಕುಲಕರ್ಣಿ ಅವರು ರಚಿಸಿರುವ ‘ಡಿವೈನ್ ಎಕೋಸ್ ಫ್ರಮ್ ಧಾರವಾಡ್’ (Divine Echoes from Dharwad) ಆಂಗ್ಲ ಕೃತಿಯು ಶ್ರೀ ಸತ್ಯಾತ್ಮ ತೀರ್ಥ ಸ್ವಾಮೀಜಿಯವರ ದಿವ್ಯ ಹಸ್ತದಿಂದ ಧಾರವಾಡದಲ್ಲಿ ಇತ್ತೀಚೆಗೆ ಲೋಕಾರ್ಪಣೆಗೊಂಡಿದೆ.
ಈ ಧಾರ್ಮಿಕ ಹಾಗೂ ಸಾಹಿತ್ಯಿಕ ಕೃತಿಯ ರಚನೆ ಮತ್ತು ಲೇಖಕರ ಸಮಾಜಮುಖಿ ಸೇವೆಯನ್ನು ಗೌರವಿಸುವ ಸಲುವಾಗಿ, ಕಲಬುರ್ಗಿಯ ಜೇವರ್ಗಿ ಕಾಲನಿಯಲ್ಲಿರುವ ಶ್ರೀ ರಾಘವೇಂದ್ರ ಸ್ವಾಮಿ ಮಠದಲ್ಲಿ ಇಂದು ವಿಶೇಷ ಅಭಿನಂದನಾ ಸಮಾರಂಭವನ್ನು ಹಮ್ಮಿಕೊಳ್ಳಲಾಗಿತ್ತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪಂ. ಗಿರಿಶಾಚಾರ್ಯ ಅವಧಾನಿ ವಹಿಸಿದ್ದರು. ಸಮಾರಂಭದಲ್ಲಿ ಸಂಜೀವಾಚಾರ, ವಕೀಲ ಪ್ರಶಾಂತ್ ಕೋರಳ್ಳಿ, ಅನಿಲ ಕುಮಾರ ಕುಲಕರ್ಣಿ, ಪವನ್ ಕುಲಕರ್ಣಿ ಹಾಗೂ ಮಠದ ಪ್ರಮುಖರು ಉಪಸ್ಥಿತರಿದ್ದು, ಲೇಖಕ ಗುರುರಾಜ್ ಕುಲಕರ್ಣಿ ಅವರನ್ನು ಸತ್ಕರಿಸಿ ಅಭಿನಂದಿಸಿದರು.
ಶ್ರೀ ಸತ್ಯಾತ್ಮ ತೀರ್ಥ ಸ್ವಾಮೀಜಿಯವರು ಈ ಕೃತಿಯ ಕುರಿತು ಮೆಚ್ಚುಗೆ ವ್ಯಕ್ತಪಡಿಸಿದ್ದು, ಲೇಖಕರು ಆಂಗ್ಲ ಭಾಷೆಯಲ್ಲಿ ಸಾಹಿತ್ಯ ಕೃಷಿ ಮಾಡುವುದರ ಜೊತೆಗೆ ಧಾರ್ಮಿಕ ವಿಚಾರಗಳನ್ನು ಇಂದಿನ ಯುವ ಪೀಳಿಗೆಗೆ ಮತ್ತು ಜನರಿಗೆ ತಲುಪಿಸುತ್ತಿರುವ ಸೇವೆ ಅತ್ಯಂತ ಶ್ಲಾಘನೀಯ ಎಂದು ವಾಸುದೇವ ರಾವ ಮುಂಡರಗಿ ತಿಳಿಸಿದರು. ಈ ಪುಸ್ತಕವು ಸುಮಾರು 1008 ಜನರಿಗೆ ಭೌತಿಕವಾಗಿ ಹಾಗೂ ಡಿಜಿಟಲ್ ಮಾಧ್ಯಮದ ಮೂಲಕ 10,000ಕ್ಕೂ ಅಧಿಕ ಜನರಿಗೆ ತಲುಪುವ ವಿಶೇಷ ವಿಸ್ತೃತ ಸೇವೆ ನಡೆಯುತ್ತಿರುವುದು ಕಾರ್ಯಕ್ರಮದ ಪ್ರಮುಖ ವಿಶೇಷತೆಯಾಗಿದೆ.
ವಿಕ್ರಮ ಓದುಗರ ವಾಟ್ಸಪ್ ಬಳಗಕ್ಕೆ ಸೇರಲು ಈ ಸಂಖ್ಯೆಯನ್ನು ನಿಮ್ಮ ಮೊಬೈಲ್ನಲ್ಲಿ ಸೇವ್ ಮಾಡಿಕೊಂಡು ನಮಗೊಂದು ಸಂದೇಶ ಕಳುಹಿಸಿ. ಮೊಬೈಲ್ ಸಂಖ್ಯೆ: 98800 21122
