● ಅಂತಾರಾಷ್ಟ್ರೀಯ ಮಟ್ಟದಲ್ಲಿ ಮಾನ್ಯತೆ ಹೆಚ್ಚಿಸಿಕೊಂಡ Experimental Art
● ದಿನದಿನಕ್ಕೂ ಹೊಸತನದತ್ತ ಮುಖಮಾಡುವುದೂ ಒಂದು ಹೊಸ ಟ್ರೆಂಡ್
ಅಂಕಣ – ದೃಶ್ಯ
- ಗಣಪತಿ ಅಗ್ನಿಹೋತ್ರಿ, ದೃಶ್ಯ ಕಲಾವಿದ, ಕಲಾವಿಮರ್ಶಕ, ಪತ್ರಕರ್ತ
ಸಮಕಾಲೀನ ಸಂದರ್ಭದ ದೃಶ್ಯಕಲೆ ಅನೇಕ ಹೊಸ ಹೊಸ ದಿಕ್ಕುಗಳತ್ತ ಸಾಗಿದೆ. ಅವುಗಳಲ್ಲಿ ಒಂದಿಷ್ಟು ಹೊಸತೇ ಇರಬಹುದು, ಇನ್ನೊಂದಿಷ್ಟು ಹೊಸ ರೂಪವೂ ಆಗಿರಬಹುದು. ಮಗದೊಂದಿಷ್ಟು ಹೊಸತಲ್ಲದೆಯೂ ಹೊಸತೆನಿಸಿಕೊಂಡಿರಬಹುದು. ಆದರೆ, ಅವೆಲ್ಲವೂ ಸಮಕಾಲೀನ ಸಂದರ್ಭದ ಕಲಾಕೃತಿಯಾಗಿಯೇ ದಾಖಲಾಗುತ್ತಿವೆ. ಹೊಸ ಇತಿಹಾಸ ಸೃಷ್ಟಿ ಮಾಡುತ್ತಿವೆ. ರಾಷ್ಟ್ರೀಯ, ಅಂತಾರಾಷ್ಟ್ರೀಯ ಮಾನ್ಯತೆಗಳು ಸಿಗುತ್ತಿವೆ.
ಇತ್ತೀಚಿನ ದಿನಗಳಲ್ಲಿ ಅಂದರೆ ಕೋವಿಡ್ ಕಾಲದ ನಂತರದ ದಿನಗಳಲ್ಲಿ ಅಲ್ಲಲ್ಲಿ ತುಸುವಾಗಿ ಮಹತ್ವ ಪಡೆದುಕೊಳ್ಳುತ್ತಿದ್ದ ಪ್ರಾಯೋಗಿಕ ಅಥವಾ ಪ್ರಯೋಗಾತ್ಮಕ ಕಲೆ (Experimental Art) ಇಂದು ವಿಶೇಷವಾದ ಸ್ಥಾನಮಾನ ಕಂಡುಕೊಳ್ಳುತ್ತಿದೆ. ಕಲಾಭ್ಯಾಸದ ರಚನಾ ಕ್ರಮಗಳು ಮಹತ್ವ ಪಡೆದುಕೊಳ್ಳುವುದರ ಜೊತೆ ಜೊತೆಗೇ ಈ ಪ್ರಾಯೋಗಿಕ ಕಲೆ ತನ್ನ ಸಾಧ್ಯತೆಗಳನ್ನು, ಮೆಚ್ಚಿಕೊಳ್ಳುವವರ ವ್ಯಾಪ್ತಿಯನ್ನೂ ವಿಸ್ತರಿಸಿಕೊಳ್ಳುತ್ತಿದೆ. ರಾಷ್ಟ್ರೀಯ, ಅಂತಾರಾಷ್ಟ್ರೀಯ ಮಟ್ಟದಲ್ಲಿ ದಿನದಿಂದ ದಿನಕ್ಕೆ ಹೊಸ ವೇದಿಕೆಗಳು ಹುಟ್ಟಿಕೊಳ್ಳುತ್ತಿವೆ. ಸಹಜವಾಗಿಯೇ, ಇಂತಹ ಕಲಾಕೃತಿಗಳೂ ಪ್ರಮುಖ ಕಲಾ ಸಂಗ್ರಹಕಾರರ ಕೈ ಸೇರುತ್ತಿವೆ, ಖರೀದಿದಾರರ ಆಕರ್ಷಣೆಗೆ ಕಾರಣವಾಗುತ್ತಿವೆ. ಈ ಬೆಳವಣಿಗೆ ಎಲ್ಲಾ ಕಾಲಘಟ್ಟದಲ್ಲೂ ಇತ್ತು ಎನ್ನುವ ವಾದದ ನಡುವೆಯೂ ದೃಶ್ಯಕಲಾ ಕ್ಷೇತ್ರದ, ಆರ್ಟ್ ವರ್ಲ್ಡ್ ನ ಹೊಸತೆನ್ನುವ ರೀತಿಯಲ್ಲಿ ಪ್ರಚಾರಕ್ಕೆ ಬರುತ್ತಿರುವುದು ಸ್ವಾಗತಾರ್ಹ ಬೆಳವಣಿಗೆ ಎಂದೇ ಹೇಳಬಹುದು.
ದೃಶ್ಯಕಲೆ ಹರಿಯುವ ನೀರಾಗಿ ಇರಬೇಕು ಎನ್ನುವ ವಾದಿಗಳ ನಿಲುವಿಗೆ ಪುಷ್ಟಿಕೊಡುವ ವಿಚಾರಗಳಲ್ಲಿ ಇದೂ ಒಂದು. ಪ್ರಾಯೋಗಿಕ ಅಂದಾಕ್ಷಣ ಇದೊಂದು ಕೇವಲ ಪರೀಕ್ಷಾರ್ಥವಾದ ಕಲೆ ಎಂದು ಅರ್ಥೈಸಿಕೊಳ್ಳಬೇಕಿಲ್ಲ. ಕಲಾವಿದನ ಒಂದೊಂದು ಪ್ರಯತ್ನವೂ ಎಷ್ಟು ಪ್ರಾಮುಖ್ಯತೆಯನ್ನು ಪಡೆದುಕೊಳ್ಳಲು ಸಾಧ್ಯ ಎನ್ನುವುದನ್ನು ಗಮನಿಸಬಹುದಾಗಿದೆ. ಈ ಹಿಂದೆ ದೃಶ್ಯಕಲಾ ಕ್ಷೇತ್ರದಲ್ಲಿ ಕಲಾವಿದರು ತಮ್ಮ ತನವನ್ನು (identity) ದಾಖಲಿಸುವುದಕ್ಕೋಸ್ಕರ ತನ್ನದೊಂದು ಶೈಲಿಯನ್ನಾಗಿ (stylization) ರೂಪಿಸಿಕೊಳ್ಳುವ ಪ್ರಯತ್ನಗಳಿಗೆ ಮಹತ್ವ ಕೊಡುತ್ತಿದ್ದರು. ಬಹುತೇಕ ಕಲಾವಿದರು ಈ ಭ್ರಮಾಲೋಕಕ್ಕೆ ಅಂಟಿಕೊಂಡಿದ್ದೂ ಉಂಟು. ಹಾಗಾದರೆ ಈಗ ಇಲ್ಲವೇ? ಎಂದು ಪ್ರಶ್ನಿಸಬಹುದು. ಈಗಲೂ ಇದೆ, ಇದಕ್ಕೆ ಬಹುದೊಡ್ಡ ಕಾರಣವೂ ಇದೆ. ಕಲೆ ಅಥವಾ ಕಲಾವಿದನ ಭಾವಾಭಿವ್ಯಕ್ತಿ ವಾಣಿಜ್ಯೀಕರಣಕ್ಕೆ ಹೊರಳಿಕೊಳ್ಳುತ್ತಿದ್ದಂತೆ ಶೈಲಿ ಎನ್ನುವುದು ಹೆಚ್ಚಿನ ಮಹತ್ವ ಪಡೆದುಕೊಂಡಿತು. ಯಾವುದೇ ಕಲಾವಿದ ತನ್ನ ಸುತ್ತ ಇಂತಹದ್ದೊಂದು ವ್ಯವಸ್ಥೆ ನಿರ್ಮಾಣವಾಗುತ್ತಿದೆ ಎಂದೆನಿಸಿದಾಗ ಅದರತ್ತ ವಾಲಿಕೊಳ್ಳುವುದು ಸಹಜ. ಪರಿಣಾಮ ಶೈಲಿಗೆ ಹೆಚ್ಚಿನ ಮಹತ್ವ ಬಂತು. ಆದರೆ, ಶೈಲಿ ರೂಪಿಸಿಕೊಂಡಿರುವವರು ಮಾತ್ರ ಕಲಾವಿದರು ಅಥವಾ ಕಲಾಕೃತಿ ಅಂದೇನೂ ಇಲ್ಲ. ಮಾರುಕಟ್ಟೆಯಲ್ಲಿ ಗುರುತಿಸಿಕೊಳ್ಳುವ ಅಥವಾ ಮುಂಚೂಣಿಯಲ್ಲಿ ಇರಬೇಕೆನ್ನುವ ಸಂದಿಗ್ಧತೆ ಎದುರಾದಾಗ ಶೈಲಿ ಮುಖ್ಯವಾಗಲಿದೆ. ಇಲ್ಲಿ ತಪ್ಪು – ಸರಿಯ ಪ್ರಶ್ನೆಯೂ ಉದ್ಭವಿಸುವುದಿಲ್ಲ. ಅವರವರ ನಿಲುವುಗಳ ಮೇಲೆ ನಿರ್ಧಾರವಾಗಲಿದೆಯಷ್ಟೆ.
ಇದರಾಚೆಯ ನಿಲುವೆನಿಕೊಳ್ಳುವ ಪ್ರಯೋಗಾತ್ಮಕ ಕಲೆ ಇದೇ ಕಾರಣಕ್ಕಾಗಿ ಸಮಕಾಲೀನ ಸಂದರ್ಭದಲ್ಲಿ ಹೆಚ್ಚಿನ ಮಹತ್ವ ಪಡೆದುಕೊಳ್ಳುತ್ತಿದೆ. ಸೈದ್ಧಾಂತಿಕವಾಗಿಯೂ ಈ ನಿಲುವು ಹೆಚ್ಚು ಪರಿಶುದ್ಧ ಎನ್ನುವ ರೀತಿಯಲ್ಲಿ ಬಿಂಬಿಸಿಕೊಳ್ಳಲಾಗುತ್ತಿದೆ. ಪಾಶ್ಚಿಮಾತ್ಯ ಕಲಾ ಇತಿಹಾಸಗಳ ಪುಟಗಳನ್ನೊಮ್ಮೆ ತಿರುವಿದರೆ ಎಲ್ಲಾ ಸೈದ್ಧಾಂತಿಕ ಚಳವಳಿಗಳು (Ideological movement) ತಮ್ಮದನ್ನೇ ನಿಜವಾದ ಕಲೆ ಎಂದು ಹೇಳಿಕೊಂಡಿವೆ. ಇಲ್ಲಿ ಪರಸ್ಪರ ಒಪ್ಪಿಕೊಳ್ಳುವ ಅಥವಾ ಮೆಚ್ಚಿಕೊಳ್ಳುವ ಗೋಜಿಗೆ ಹೋಗಲಾರದ ಮನಸ್ಥಿತಿ ಪ್ರದರ್ಶಿಸಿರುವುದನ್ನು ಕಾಣಬಹುದು. ಅದರಂತೆ ಇಂದು ಹೆಚ್ಚಿನ ಮಹತ್ವ ಪಡೆದುಕೊಳ್ಳುತ್ತಿರುವ ಪ್ರಾಯೋಗಿಕ ಕಲೆಯಲ್ಲೂ ಕಲಾವಿದರು ತಮ್ಮ ನಿಲುವಿನ ಬಗ್ಗೆ ಬಹಳ ಸ್ಪಷ್ಟತೆ ಹೊಂದಿದ್ದಾರೆ. ಪ್ರಯೋಗಾತ್ಮಕ ಕಲೆಯನ್ನು ಸಮರ್ಥಿಸಿಕೊಳ್ಳುತ್ತಾರೆ. ಒಪ್ಪಿಕೊಳ್ಳುವುದು ಬಿಡುವುದು ಅವರವರ ಐಚ್ಛಿಕತೆ.
ಭಾರತೀಯ ದೃಶ್ಯಕಲಾ ಕ್ಷೇತ್ರದಲ್ಲೊಮ್ಮೆ ಇಣುಕಿದರೆ ಕಳೆದ ನಾಲ್ಕಾರು ವರ್ಷಗಳಿಂದೀಚೆಗೆ ಈ ಆಯಾಮದಲ್ಲಿ ಕಲಾಕೃತಿಗಳನ್ನು ರಚಿಸುವ, ಪ್ರದರ್ಶಿಸುವ ಮತ್ತು ಪ್ರಚುರಪಡಿಸುವ ರೂಢಿ ಬಂದಿದೆ. ಒಂದೆರಡು ವರ್ಷಗಳಿಂದೀಚೆಗೆ ಹೆಚ್ಚಿನ ಮಾನ್ಯತೆ ದಕ್ಕಿದೆ. ದೆಹಲಿ, ಮುಂಬೈ, ಕೊಲ್ಕತ್ತಾದಂತಹ ಮಹಾನಗರಿಗಳಲ್ಲಿ ಪ್ರಾಯೋಗಿಕ ಕಲಾಕೃತಿಗಳಿಗೆ ಹೆಚ್ಚಿನ ವೇದಿಕೆಗಳು ಸಿಗುತ್ತಿವೆ. ನವದೆಹಲಿಯಲ್ಲಿ ಪ್ರಾಯೋಗಿಕ ಕಲಾಪ್ರಕಾರವನ್ನು ಮೈಗೂಡಿಸಿಕೊಂಡು ಕಲಾ ಪಯಣ ಮುಂದುವರಿಸಿರುವ ಅನೇಕ ಕಲಾವಿದರ ಗುಂಪೊಂದು ಬಹಳ ಯಶಸ್ವಿಯಾಗಿ ಕಾರ್ಯನಿರ್ವಹಿಸುತ್ತಿದೆ. ಕೊಲ್ಕತ್ತಾ ಮೂಲದ ‘Experimenter’ ಗ್ಯಾಲರಿ ತಾನು ಆಯೋಜಿಸುವ ಬಹುತೇಕ ಪ್ರದರ್ಶನಗಳಲ್ಲಿ ಪ್ರಯೋಗಾತ್ಮಕದ ಹೆಸರಿಲ್ಲೇ ರಚನೆಯಾಗುವ ಕಲಾಕೃತಿಗಳನ್ನು ಪ್ರದರ್ಶಿಸುತ್ತದೆ. ವಿಶೇಷವಾಗಿ ಯುವ ಕಲಾವಿದರು ತೊಡಗಿಕೊಳ್ಳುತ್ತಿರುವುದು ಗಮನಾರ್ಹ ಸಂಗತಿ. ಅಷ್ಟೇ ಅಲ್ಲ, ಬಹಳ ಮುಖ್ಯವಾಗಿ ಯುವ ಕಲಾವಿದರು ಇಂತಹ ಪ್ರಯೋಗಾತ್ಮಕ ಕಲಾಕೃತಿಗಳ ರಚನೆ ಮತ್ತು ನಿಲುವಿಗೆ ಒಗ್ಗಿಕೊಳ್ಳುತ್ತಿರುವುದನ್ನು ಗಮನಿಸಬಹುದಾಗಿದೆ. ಇತ್ತೀಚಿನ ದಿನಗಳಲ್ಲಿ ಇಂತಹ ವೇದಿಕೆಗಳ ಮೂಲಕ ಗುರುತಿಸಿಕೊಂಡಿರುವ ಅನೇಕ ಕಲಾವಿದರು ಇಂದು ಮುಂಚೂಣಿಗೆ ಬಂದಿದ್ದಾರೆ.
ಕೊಲ್ಕತ್ತಾದ Experimenter ಗ್ಯಾಲರಿ ಇಂದು ನಿನ್ನೆ ಹುಟ್ಟಿಕೊಂಡಿದ್ದಲ್ಲ, 2009ರಲ್ಲಿ ಪ್ರಿಯಾಂಕ ಮತ್ತು ಪ್ರತೀಕ್ ರಾಜಾ ಎನ್ನುವವರು ಆರಂಭಿಸಿದರು. ಇಂದು ಇದೇ ಗ್ಯಾಲರಿ ಎರಡು ಪ್ರತ್ಯೇಕ ಸ್ಥಳಗಳಲ್ಲಿ ಕಲಾವಿದರ ಕಲಾಕೃತಿಗಳನ್ನು ಪ್ರದರ್ಶಿಸುತ್ತಿದೆ. ಇಂತಹ ಪ್ರಯತ್ನಗಳು ದೇಶದ ಉಳಿದ ಭಾಗಗಳಲ್ಲಿಯೂ ನಡೆಯಬೇಕಿದೆ. ಬಹಳ ಮುಖ್ಯವಾಗಿ ಗ್ಯಾಲರಿಗಳು ಸಮಕಾಲೀನ ಸಂದರ್ಭಗಳ ಎಲ್ಲಾ ಸಾಧ್ಯತೆಗಳಿಗೂ ಅನುಕೂಲ ಒದಗಿಸುವ ರೀತಿಯಲ್ಲಿ ತೆರೆದುಕೊಳ್ಳಬೇಕಿದೆ. ಕ್ಯುರೇಟರ್ ಅಥವಾ ಕಲಾವಿದರ ಪರಿಕಲ್ಪನೆಗೆ ಅನುಕೂಲವಾಗುವ ರೀತಿಯಲ್ಲಿ ಗ್ಯಾಲರಿ ಸ್ಥಳ ಪರಿವರ್ತನೆಯಾಗಬೇಕಿದೆ. ಕಡೇ ಪಕ್ಷ ಗ್ಯಾಲರಿಗಳು ಇದಕ್ಕೆ ಅವಕಾಶ ಒದಗಿಸುವ ಮನಸ್ಥಿತಿ ಬೆಳೆಯಬೇಕಿದೆ. ಆಗ ಮಾತ್ರ ಪ್ರಯೋಗಾತ್ಮಕ ಕಲೆಯ ವಿಸ್ತಾರ ಸಾಧ್ಯವಾಗಲಿದೆ. ಕಲಾವಿದರ ಹೊಸತನದ ಚಿಂತನೆಗಳು ಅನಾವರಣಗೊಳ್ಳಲಿವೆ.
ಇಂತಹ ಗ್ಯಾಲರಿ ಸ್ಥಳಗಳ ಅಗತ್ಯತೆ ಕರ್ನಾಟಕದಲ್ಲಿ ಇನ್ನಷ್ಟು ಹುಟ್ಟಿಕೊಳ್ಳಬೇಕಿದೆ. ಈಗಾಗಲೇ, ಈ ಆಯಾಮದಲ್ಲಿ ಯೋಚಿಸುವ ಕಲಾವಿದರ ಕಲಾಕೃತಿಗಳು ಬೆಂಗಳೂರಿನ ಒಂದಿಷ್ಟು ಖಾಸಗಿ ಗ್ಯಾಲರಿಗಳಲ್ಲಿ ನಡೆದಿವೆ. ಆದರೆ ಇದಕ್ಕೆ ಸಿಗಬೇಕಾದ ಪ್ರಚಾರ, ಪ್ರಾಮುಖ್ಯತೆ ಸಿಕ್ಕಿಲ್ಲ. ಕರ್ನಾಟಕದ ಅನೇಕ ಕಲಾವಿದರು ಈ ಆಯಾಮದಲ್ಲಿ ಕಲಾಕೃತಿಗಳನ್ನು ರಚಿಸುವಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಅವರ ಕಲಾಕೃತಿಗಳಿಗೆ ಸಿಗಬೇಕಾದ ಫೋಕಸ್ ಕರ್ನಾಟಕದಲ್ಲೇ ಸಿಗುವಂತಾಗಬೇಕಿದೆ. ಸಮಕಾಲೀನ ಕಲೆಯ ಸಾಧ್ಯತೆಗಳು ಈ ನೆಲದ ಕಲಾಪ್ರಿಯರಿಗೆ ಮತ್ತಷ್ಟು, ಮೊಗೆದಷ್ಟು ಸಿಗವಂತಾಗಬೇಕಿದೆ.
