ಧಾರವಾಡ: ಎಲ್ಲರ ದೇಹವನ್ನು ಧರಿಸಿರುವ ಭಗವಂತ ಒಬ್ಬನೇ. ಆತ ಎಲ್ಲರಿಗೂ ಸಮಾನನಾಗಿದ್ದು, ಆ ಸಮಾನ ಭಗವಂತನನ್ನು ಎಲ್ಲರೂ ಜಪಿಸಿ ಅನುಸಂಧಾನ ಮಾಡಿದಾಗ ಸಮಾಜ ಸಂಘಟಿತವಾಗುತ್ತದೆ ಎಂದು ಜಗದ್ಗುರು ಮಧ್ವಾಚಾರ್ಯ ಮೂಲ ಮಹಾಸಂಸ್ಥಾನ ಶ್ರೀಮದುತ್ತರಾದಿ ಮಠಾಧೀಶರಾದ ಶ್ರೀ ಶ್ರೀ ಶ್ರೀ 1008 ಶ್ರೀ ಸತ್ಯಾತ್ಮ ತೀರ್ಥ ಶ್ರೀಪಾದಂಗಳವರು ಹೇಳಿದರು.
ತಮ್ಮ 31ನೇ ಚಾತುರ್ಮಾಸ್ಯ ಅಂಗವಾಗಿ ಶ್ರೀಮಠದ ವತಿಯಿಂದ ಆಯೋಜಿಸಿದ್ದ ಸಕಲ ಹಿಂದೂ ಸಮಾಜಗಳ ಸಮ್ಮಿಲನ ಕಾರ್ಯಕ್ರಮದಲ್ಲಿ ಆಶೀರ್ವಚನ ನೀಡಿದ ಅವರು, ಧರ್ಮದ ಮಹತ್ವ ಹಾಗೂ ಹಿಂದೂ ಸಮಾಜದ ಸಂಘಟನೆಯ ಅಗತ್ಯವನ್ನು ವಿವರಿಸಿದರು.
“ಧಾರಣಾತ್ ಇತಿ ಧರ್ಮ”— ಧರಿಸಲ್ಪಡುವುದೇ ಧರ್ಮ. ಧರ್ಮದ ವ್ಯಾಖ್ಯಾನ ಮಹಾಭಾರತ ಮತ್ತು ಭಾಗವತ ಸೇರಿದಂತೆ ನಮ್ಮ ಧಾರ್ಮಿಕ ಗ್ರಂಥಗಳಲ್ಲಿ ವಿಪುಲವಾಗಿ ವಿವರಿಸಲ್ಪಟ್ಟಿದೆ. ನಾವು ಪುಣ್ಯ ಕಾರ್ಯಗಳನ್ನು ಮಾಡಿದ ತಕ್ಷಣವೇ ಅದರ ಫಲ ದೊರೆಯುತ್ತದೆ ಎಂದೇನಿಲ್ಲ. ನಮ್ಮ ಕಾರ್ಯಗಳನ್ನು ಗುರುತಿಸಿ ಅನುಮೋದಿಸುವವರು ಬೇಕಾಗುತ್ತಾರೆ. ಲೌಕಿಕವಾಗಿ ನಮ್ಮ ಕಾರ್ಯಗಳನ್ನು ಗುರುತಿಸದವರು ಇರಬಹುದು. ಆದರೆ ಭಗವಂತ ಸದಾ ತೆರೆದ ಕಣ್ಣಿನಿಂದ ನಮ್ಮನ್ನು ನೋಡುತ್ತಿರುತ್ತಾನೆ. ಆತನೇ ನಮ್ಮ ದೇಹವನ್ನು ಧರಿಸಿ, ನಮ್ಮ ಪುಣ್ಯಕಾರ್ಯಗಳನ್ನು ಹರಸುತ್ತಾನೆ ಎಂದರು.
ಹಿಂದೂ ಧರ್ಮ ಸನಾತನ, ಅನಾದಿ ಮತ್ತು ಅನಂತ. ಅದನ್ನು ಯಾರಿಂದಲೂ ನಾಶಪಡಿಸಲು ಸಾಧ್ಯವಿಲ್ಲ. ಆದರೆ ಧರ್ಮವನ್ನು ಶಿಥಿಲಗೊಳಿಸುವ ಪ್ರಯತ್ನಗಳು ನಡೆಯುತ್ತಿವೆ. ಧರ್ಮರಕ್ಷಣೆಗೆ ಪ್ರಮುಖ ಮಾರ್ಗವೆಂದರೆ ಧರ್ಮದ ಆಚರಣೆ. ಆದ್ದರಿಂದ ನಮ್ಮ ಪೂರ್ವಜರು ರೂಪಿಸಿಕೊಟ್ಟ ಮನೆತನದ, ಸಮುದಾಯದ ನೀತಿ-ನಿಯಮಗಳನ್ನು ಪಾಲಿಸುವುದರೊಂದಿಗೆ, ತಮ್ಮ ತಮ್ಮ ಧಾರ್ಮಿಕ ಆಚರಣೆಗಳನ್ನು ಶ್ರದ್ಧೆಯಿಂದ ಮುಂದುವರಿಸಿ ಸನಾತನ ಧರ್ಮವನ್ನು ರಕ್ಷಿಸುವುದು ಇಂದಿನ ಅಗತ್ಯವಾಗಿದೆ ಎಂದು ತಿಳಿಸಿದರು.
ಇತ್ತೀಚಿನ ದಿನಗಳಲ್ಲಿ ಇಡೀ ಹಿಂದೂ ಸಮಾಜವನ್ನು ಒಂದಾಗಿಸಿದ ಶಕ್ತಿ ರಾಮನಾಮವಾಗಿದೆ. ಸಂಘಟಿತ ಸಮಾಜದ ಶಕ್ತಿಯಿಂದಲೇ 500 ವರ್ಷಗಳ ಕಳಂಕ ಸರಿದು ಅಯೋಧ್ಯೆಯಲ್ಲಿ ಭವ್ಯ ರಾಮಮಂದಿರ ನಿರ್ಮಾಣವಾಗಿದೆ. ಈ ಸಾಧನೆಯ ಶ್ರೇಯಸ್ಸು ಇಡೀ ಹಿಂದೂ ಸಮಾಜಕ್ಕೆ ಸಲ್ಲಬೇಕು. ಈ ಕಾರ್ಯಕ್ಕೆ ರಾಷ್ಟ್ರೀಯ ಸ್ವಯಂಸೇವಕ ಸಂಘ ಹಾಗೂ ವಿಶ್ವ ಹಿಂದೂ ಪರಿಷತ್ ಒತ್ತಾಸೆಯಾಗಿ ನಿಂತಿವೆ ಎಂದು ಹೇಳಿದರು.
ಇಂದಿನ ಸಂದರ್ಭದಲ್ಲಿ ಹಿಂದೂ ಸಮಾಜ ಎದುರಿಸುತ್ತಿರುವ ಸವಾಲುಗಳ ಕುರಿತು ಮಾತನಾಡಿದ ಶ್ರೀಪಾದಂಗಳವರು, ಲವ್ ಜಿಹಾದ್ ಹಿಂದೂ ಸಮಾಜಕ್ಕೆ ಒಂದು ಕಂಟಕವಾಗಿ ಪರಿಣಮಿಸಿದೆ. ಇದಕ್ಕೆ ಪರಿಹಾರವಾಗಿ ಆಯಾ ಸಮಾಜಗಳು ಗಟ್ಟಿಯಾಗಿ ನಿಲ್ಲಬೇಕು. ವಿಶೇಷವಾಗಿ ಯುವತಿಯರಿಗೆ ಸೂಕ್ತ ಮಾರ್ಗದರ್ಶನ, ಜಾಗೃತಿ ಹಾಗೂ ಸಂಸ್ಕಾರ ನೀಡುವ ಕಾರ್ಯಕ್ಕೆ ಸಮಾಜ ಹೆಚ್ಚಿನ ಆದ್ಯತೆ ನೀಡಬೇಕು ಎಂದು ಕರೆ ನೀಡಿದರು.
ಸಾಮರಸ್ಯ ವೇದಿಕೆ ಧಾರವಾಡ ಇದಕ್ಕೆ ಸಹಕಾರ ನೀಡಿತ್ತು. 150ಕ್ಕೂ ಹೆಚ್ಚು ಹಿಂದೂ ಸಮಾಜಗಳ ಪ್ರತಿನಿಧಿಗಳು ಭಾಗವಹಿಸಿದ್ದ ಕಾರ್ಯಕ್ರಮದಲ್ಲಿ ಹಲವು ಧಾರ್ಮಿಕ ಹಾಗೂ ಸಾಮಾಜಿಕ ಮುಖಂಡರು ಉಪಸ್ಥಿತರಿದ್ದರು.
ವಿಕ್ರಮ ಓದುಗರ ವಾಟ್ಸಪ್ ಬಳಗಕ್ಕೆ ಸೇರಲು ಈ ಸಂಖ್ಯೆಯನ್ನು ನಿಮ್ಮ ಮೊಬೈಲ್ನಲ್ಲಿ ಸೇವ್ ಮಾಡಿಕೊಂಡು ನಮಗೊಂದು ಸಂದೇಶ ಕಳುಹಿಸಿ. ಮೊಬೈಲ್ ಸಂಖ್ಯೆ: 98800 21122
