ಒಣಗುತ್ತಿರುವ ಒಂದೇ ಮೂಲದ ಮೇಲೆ ಬೆಂಗಳೂರಿನ ಭವಿಷ್ಯ?!
- ಸುರೇಶ್ ನೆಲಮಂಗಲ, ಲೇಖಕ
ಜೂನ್ ಬಂತೆಂದರೆ ಬೆಂಗಳೂರಿಗರ ಕಣ್ಣು ಆಕಾಶದ ಕಡೆಗೆ. ಪ್ರತಿವರ್ಷವೂ ಮುಂಗಾರಿಗಾಗಿ ಕಾಯುತ್ತೇವೆ, ಪರೀಕ್ಷೆಯ ಫಲಿತಾಂಶಕ್ಕಾಗಿ ಕಾಯುವ ವಿದ್ಯಾರ್ಥಿಯಂತೆ. ಈ ಬಾರಿಯೂ ಫಲಿತಾಂಶ ಸಮಾಧಾನಕರವಾಗಿಲ್ಲ. ಬೆಂಗಳೂರು, ಕೋಲಾರ, ಚಿಕ್ಕಬಳ್ಳಾಪುರ, ತುಮಕೂರು, ರಾಮನಗರ ಮತ್ತು ಮೈಸೂರುಗಳನ್ನೊಳಗೊಂಡ ಹಳೆ ಮೈಸೂರು ಪ್ರಾಂತ್ಯ ಮತ್ತೊಮ್ಮೆ ಬರಡು ಮುಂಗಾರನ್ನೇ ಎದುರಿಸುತ್ತಿದೆ. ಹವಾಮಾನ ಇಲಾಖೆ ಈ ವರ್ಷದ ದಕ್ಷಿಣ ಒಳನಾಡು ಕರ್ನಾಟಕದ ಮಳೆಯನ್ನು ‘ಸಾಮಾನ್ಯಕ್ಕಿಂತ ಕಡಿಮೆ’ ಎಂದೇ ಮುಂಚಿತವಾಗಿ ಘೋಷಿಸಿತ್ತು. ಎಲ್ನಿನೊದ ಪ್ರಭಾವದಿಂದ ಮುಂಗಾರು ಕೇರಳಕ್ಕೇ ತಡವಾಗಿ ಬಂತು, ಕರ್ನಾಟಕಕ್ಕೆ ಇನ್ನಷ್ಟು ನಿಧಾನವಾಗಿ ತೆವಳಿತು.
ಇದೇನೂ ಹೊಸ ಸಂಗತಿಯಲ್ಲ. ಮೂಲತಃ ಮಳೆ ಕಡಿಮೆ ಬೀಳುವ ಈ ಪ್ರದೇಶ ಕಳೆದ ಹತ್ತು ವರ್ಷಗಳಲ್ಲಿ ಇಂತಹ ಐದಾರು ನಿರಾಶಾದಾಯಕ ಮುಂಗಾರುಗಳನ್ನು ಕಂಡಿದೆ. ವಿಪರ್ಯಾಸವೆಂದರೆ ಇದೇ ಒಣ ಪ್ರದೇಶದ ಹೆಗಲ ಮೇಲೆ ಇಂದು ಜಗತ್ತಿನ ಅತಿ ಜನನಿಬಿಡ ನಗರಗಳಲ್ಲೊಂದರ ಕುಡಿಯುವ ನೀರಿನ ಭಾರವಿದೆ. ಇಷ್ಟು ದೊಡ್ಡ ಜವಾಬ್ದಾರಿಯನ್ನು ಇಷ್ಟು ಸೂಕ್ಷ್ಮ ಪ್ರದೇಶದ ಮೇಲೆ ಹೊರಿಸಿ ಸುಮ್ಮನಿರುವುದು ಎಷ್ಟು ಸರಿ? ಇದು ಬರೀ ಹವಾಮಾನದ ಪ್ರಶ್ನೆಯಲ್ಲ. ದಶಕಗಳ ರಾಜಕೀಯ ನಿರ್ಲಕ್ಷ್ಯದ, ನಾವೇ ಕೈಯಾರೆ ಕೊಂದ ನದಿಗಳ ಮತ್ತು ಎರಡು ಕೋಟಿಯತ್ತ ದೌಡಾಯಿಸುತ್ತಿರುವ ನಗರವೊಂದು ಒಂದೇ ಒಂದು ಬಿರುಕುಬಿಟ್ಟ ಕೊಳವೆಯ ಮೇಲೆ ಬದುಕು ನಡೆಸುತ್ತಿರುವ ಕಥೆ.
ಬೆಂಗಳೂರು ಎಂದೂ ಕಾವೇರಿಯ ಮಗುವಾಗಿರಲಿಲ್ಲ
“ನಿಮ್ಮ ಮನೆಗೆ ನೀರು ಎಲ್ಲಿಂದ ಬರುತ್ತೆ?” ಎಂದು ಯಾವುದೇ ಬೆಂಗಳೂರಿಗರನ್ನು ಕೇಳಿ — ಥಟ್ಟನೆ ಬರುವ ಉತ್ತರ ‘ಕಾವೇರಿ’. ಆದರೆ ಈ ನಗರದ ಇತಿಹಾಸ ಗೊತ್ತಿರುವವರಿಗೆ ಇದೊಂದು ಆಶ್ಚರ್ಯ ಹುಟ್ಟಿಸುವ ಸತ್ಯ. ಬೆಂಗಳೂರು ಎಂದೂ ಕಾವೇರಿಯ ದಡದ ಮೇಲೆ ಕಟ್ಟಿದ ನಗರವಲ್ಲ. ನಾಲ್ಕು ಶತಮಾನಗಳ ಕಾಲ ಈ ನಗರವನ್ನು ಪೊರೆದದ್ದೇ ಬೇರೆ ಜಲ ವ್ಯವಸ್ಥೆ — ನಂದಿ ಬೆಟ್ಟಗಳಿಂದ ಹುಟ್ಟಿ ಪ್ರಸ್ಥಭೂಮಿಯುದ್ದಕ್ಕೂ ಹರಡಿಕೊಂಡ ಕೆರೆಗಳ ಸರಪಳಿ ಮತ್ತು ಸಣ್ಣಪುಟ್ಟ, ಮಳೆಯಾಶ್ರಿತ ನದಿಗಳ ಜಾಲ.
ಈ ಜಾಲದ ಪ್ರಮುಖ ನದಿ ಅರ್ಕಾವತಿ. ಇದು ಹೆಸರಘಟ್ಟ ಜಲಾಶಯವನ್ನು (1896ರಲ್ಲಿ ನಿರ್ಮಾಣಗೊಂಡ ಬೆಂಗಳೂರಿನ ಮೊದಲ ಕುಡಿಯುವ ನೀರಿನ ಮೂಲ) ಮತ್ತು ತಿಪ್ಪಗೊಂಡನಹಳ್ಳಿ ಜಲಾಶಯವನ್ನು (1933) ತುಂಬಿಸುತ್ತಿತ್ತು. ಈ ಎರಡೂ ಜಲಾಶಯಗಳು ಇಂದು ಬರೀ ಹೆಸರಿಗಷ್ಟೇ ಉಳಿದಿವೆ, ಶುದ್ಧ ನೀರೇ ಇಲ್ಲ. ಇಪ್ಪತ್ತನೇ ಶತಮಾನದ ಆರಂಭದಲ್ಲಿ ನಗರದ ಬಾಯಾರಿಕೆ ತಣಿಸಿದ ನದಿ ಇಂದು ತನ್ನದೇ ಜಲಾಶಯವನ್ನೂ ತುಂಬಿಸಲಾಗದಷ್ಟು ಬಳಲಿಹೋಗಿದೆ.
ಅರ್ಕಾವತಿಯ ಜೊತೆಗೇ ಇದೇ ನಂದಿಬೆಟ್ಟದ ಜಲಾನಯನದಿಂದ ಉತ್ತರ ಪಿನಾಕಿನಿ, ದಕ್ಷಿಣ ಪಿನಾಕಿನಿ, ಚಿತ್ರಾವತಿ, ಸುವರ್ಣಮುಖಿ ಮತ್ತು ಪಾಲಾರ್ ನದಿಗಳು ಹುಟ್ಟುತ್ತವೆ. ಇವೆಲ್ಲವೂ ಋತುಮಾನದ ನದಿಗಳು. ಮಳೆಗಾಲದಲ್ಲಿ ಮಾತ್ರ ತುಂಬಿ ಹರಿಯುವಂಥವು. ಬೆಂಗಳೂರು, ಕೋಲಾರ, ಚಿಕ್ಕಬಳ್ಳಾಪುರ, ಆನೇಕಲ್ ಭಾಗಗಳಲ್ಲಿ ಒಂದಕ್ಕೊಂದು ಜೋಡಿಸಿಕೊಂಡ ನೂರಾರು ಕೆರೆಗಳ ಸರಪಳಿಗೆ ಇವೇ ಜೀವಜಲ. ಒಡೆಯರ್ ಕಾಲದ ಇಂಜಿನಿಯರ್ಗಳು ಈ ಕೆರೆ ವ್ಯವಸ್ಥೆಯನ್ನು ಎಷ್ಟು ಜಾಣ್ಮೆಯಿಂದ ಕಟ್ಟಿದ್ದರೆಂದರೆ, ಒಂದು ಕೆರೆ ತುಂಬಿ ಹರಿದಾಗ ಆ ನೀರು ಮುಂದಿನ ಕೆರೆಗೆ ಹೋಗುತ್ತಿತ್ತು, ಮಳೆಗಾಲದ ಆರ್ಭಟವನ್ನೆಲ್ಲ ಹೀರಿಕೊಂಡು ಬೇಸಿಗೆಯುದ್ದಕ್ಕೂ ನಿಧಾನವಾಗಿ ಬಿಡುಗಡೆ ಮಾಡುತ್ತಿತ್ತು. ಇದು ಆಕಸ್ಮಿಕವಾಗಿ ಆಗಿದ್ದಲ್ಲ — “ಹವಾಮಾನಕ್ಕೆ ಹೊಂದಿಕೊಂಡ ಮೂಲಸೌಕರ್ಯ” ಎಂಬ ಪದವೇ ಹುಟ್ಟುವುದಕ್ಕೂ ಮೊದಲೇ, ನಮ್ಮ ಹಿರಿಯರು ಈ ಜಾಣವ್ಯವಸ್ಥೆಯನ್ನು ಕಟ್ಟಿ ಮುಗಿಸಿದ್ದರು. ಇಂತಹ ಅದ್ಭುತ ವ್ಯವಸ್ಥೆಯನ್ನು ಕೇವಲ ಎರಡು ತಲೆಮಾರುಗಳಲ್ಲಿ ನೆಲಸಮ ಮಾಡಿಬಿಟ್ಟೆವೆನಿಸುತ್ತದೆ.
ನಮ್ಮ ನದಿಗಳನ್ನು ನಾವೇ ಕೊಂದ ಬಗೆ
ಅರ್ಕಾವತಿ ಸಾಯುತ್ತಿರುವ ಕಥೆ ಜಲಶಾಸ್ತ್ರಜ್ಞರಿಗೆ ಚೆನ್ನಾಗಿ ಗೊತ್ತಿದೆ. ಆದರೆ ಸಾಮಾನ್ಯ ಬೆಂಗಳೂರಿಗರಿಗೆ ಇದು ಬರೀ ಹಳೆಯ ನೆನಪಲ್ಲ, ಆಕ್ರೋಶ ಹುಟ್ಟಿಸಬೇಕಾದ ವಿಚಾರ. ನದಿಯ ಮೇಲ್ಭಾಗದ ಜಲಾನಯನ ಪ್ರದೇಶಗಳಲ್ಲಿ ಮರಗಳನ್ನು ಬೋಳಿಸಲಾಯಿತು. ಸಾವಿರಾರು ಅಕ್ರಮ ಕೊಳವೆಬಾವಿಗಳು ಮತ್ತು ಕೃಷಿ ಹೊಂಡಗಳು ಎದ್ದುನಿಂತು, ಮಳೆನೀರು ನದಿಪಾತ್ರಕ್ಕೆ ತಲುಪುವ ಮೊದಲೇ ಅದನ್ನು ಹೀರಿಬಿಟ್ಟವು. ಮರಳುಗಾರಿಕೆ ನದಿಪಾತ್ರವನ್ನೇ ಬಗೆದುಹಾಕಿತು. ಒಂದು ಕೆರೆಯಿಂದ ಮತ್ತೊಂದು ಕೆರೆಗೆ ನೀರು ಸಾಗಿಸುತ್ತಿದ್ದ ರಾಜಕಾಲುವೆಗಳನ್ನೂ, ಪ್ರವಾಹ ಪ್ರದೇಶಗಳನ್ನೂ ಒತ್ತುವರಿ ನುಂಗಿಹಾಕಿತು. ಒಳಚರಂಡಿ ಮತ್ತು ಕೈಗಾರಿಕಾ ತ್ಯಾಜ್ಯ ಉಳಿದ ನೀರನ್ನೂ ವಿಷಪೂರಿತಗೊಳಿಸಿ, ಕುಡಿಯುವುದಿರಲಿ ಬೇಸಾಯಕ್ಕೂ ಬಳಸಲಾಗದಂತೆ ಮಾಡಿತು.
ಇದೇ ಗತಿ ಚಿತ್ರಾವತಿ, ಪಿನಾಕಿನಿ ನದಿಗಳಿಗೆ, ಸುವರ್ಣಮುಖಿಗೆ, ಕೋಲಾರ – ಚಿಕ್ಕಬಳ್ಳಾಪುರದ ಪಾಲಾರ್ ಕೆರೆಗಳಿಗೆ ಒದಗಿತು. ಕಡಿಮೆ ಸಂಪನ್ಮೂಲದಲ್ಲೇ ಒಡೆಯರ್ ಆಡಳಿತ ಈ ಪ್ರದೇಶವನ್ನು ಕರ್ನಾಟಕದ ಅತ್ಯಂತ ಜಲ – ಸುರಕ್ಷಿತ ಒಣ ಪ್ರದೇಶವನ್ನಾಗಿ ಕಟ್ಟಿತ್ತು. ಅರವತ್ತೇ ವರ್ಷಗಳಲ್ಲಿ ಅದೇ ಪ್ರದೇಶ ದೇಶದ ಅತಿಹೆಚ್ಚು ಅಂತರ್ಜಲ ಬಿಕ್ಕಟ್ಟಿನ ಪ್ರದೇಶಗಳಲ್ಲೊಂದಾಗಿಬಿಟ್ಟಿದೆ. ಕೇಂದ್ರ ಅಂತರ್ಜಲ ಮಂಡಳಿಯೇ ಈ ವಲಯದ ಬಹುತೇಕ ಎಲ್ಲ ಬ್ಲಾಕ್ಗಳನ್ನೂ ‘ಅತಿಯಾಗಿ ಬಳಕೆಯಾದ’ ಪ್ರದೇಶವೆಂದು ಗುರುತಿಸಿದೆ. ಅಜ್ಜ – ಅಜ್ಜಿಯರ ಕಾಲದಲ್ಲಿ ಇಪ್ಪತ್ತೇ ಅಡಿ ಆಳದ ತೆರೆದ ಬಾವಿಯಿಂದ ನೀರೆತ್ತುತ್ತಿದ್ದ ಅದೇ ನೆಲದಲ್ಲಿ ಇಂದು ಕೋಲಾರ, ಚಿಕ್ಕಬಳ್ಳಾಪುರದ ರೈತರು 1,000ದಿಂದ 1,500 ಅಡಿ ಆಳಕ್ಕೆ ಕೊಳವೆಬಾವಿ ಕೊರೆಸುತ್ತಿದ್ದಾರೆ.
ಇದೇನೂ ದೈವಕೃತ ದುರಂತವಲ್ಲ. ದಶಕಗಳ ಕಾಲ ಯಾವ ಸರ್ಕಾರವೂ — ರಾಜ್ಯವಿರಲಿ, ಸ್ಥಳೀಯವಿರಲಿ — ನದಿ ಮತ್ತು ಕೆರೆ ಪುನಶ್ಚೇತನವನ್ನು ಬಂಡವಾಳ ಹೂಡಲು ಯೋಗ್ಯವಾದ ಆದ್ಯತೆಯೆಂದು ಪರಿಗಣಿಸದೇ ಇರುವುದರ ಪರಿಣಾಮವಿದು. ಹೊಸ ರಸ್ತೆಗೆ ಉದ್ಘಾಟನೆ ಸಿಗುತ್ತದೆ, ಮೇಲ್ಸೇತುವೆಗೆ ರಿಬ್ಬನ್ ಕತ್ತರಿಸಲಾಗುತ್ತದೆ. ಆದರೆ ಸತ್ತ ನದಿ ಯಾವ ಚುನಾವಣೆಯನ್ನೂ ಗೆಲ್ಲಿಸುವುದಿಲ್ಲವಲ್ಲ — ಹಾಗಾಗಿ ಅದು ಮರೆವಿಗೆ ಸರಿಯುತ್ತದೆ. ಈ ಲೆಕ್ಕಾಚಾರವನ್ನು ಬದಲಿಸುವ ಶಕ್ತಿ ಮತದಾರರಲ್ಲಿದೆ.
ಒಂದೇ ನದಿಯ ಮೇಲೆ ಎರಡು ಕೋಟಿ ಜೀವಗಳ ಜೂಜು
1991ರಲ್ಲಿ ಸುಮಾರು 43 ಲಕ್ಷವಿದ್ದ ಬೆಂಗಳೂರಿನ ಜನಸಂಖ್ಯೆ ಇಂದು 1.4 ಕೋಟಿ ದಾಟಿದೆ. 2031ರ ವೇಳೆಗೆ ಇದು 2.03 ಕೋಟಿ ತಲುಪುತ್ತದೆಂದು ಅಂದಾಜು. ವಾರ್ಷಿಕ ಸುಮಾರು ಶೇ.3.5ರ ಬೆಳವಣಿಗೆ ದರವಿದೆ. ಜಗತ್ತಿನ ಬೆರಳೆಣಿಕೆಯ ನಗರಗಳು ಮಾತ್ರ ಇಷ್ಟು ವೇಗವಾಗಿ ಬೆಳೆದಿರುವುದು. ಇದು ಸಹಜ ಜನಸಂಖ್ಯಾ ಹೆಚ್ಚಳವಲ್ಲ — ಬಹುಪಾಲು ಒಳಬರುವ ವಲಸೆ. ವೈಟ್ಫೀಲ್ಡ್ ನಲ್ಲಿ ಇಳಿಯುವ ಪ್ರತಿ ಟೆಕ್ಕಿ, ಸರ್ಜಾಪುರದಲ್ಲಿ ಫ್ಲಾಟ್ ಹುಡುಕಿ ಬರುವ ಪ್ರತಿ ಕುಟುಂಬ, ಎಲೆಕ್ಟ್ರಾನಿಕ್ ಸಿಟಿಯಲ್ಲಿ ಕಚೇರಿ ತೆರೆಯುವ ಪ್ರತಿ ಸ್ಟಾರ್ಟ್ಅಪ್ — ಇವೆಲ್ಲವೂ ಈ ನಗರದ ಜಲ ಮೂಲಸೌಕರ್ಯ ಎಂದೂ ಹೊರಲು ವಿನ್ಯಾಸಗೊಂಡಿರದ ಭಾರವನ್ನು ಹೆಚ್ಚಿಸುತ್ತಲೇ ಇವೆ.
ಇಷ್ಟು ದೊಡ್ಡ ನಗರ ನೀರು ಕುಡಿಯುವುದಾದರೂ ಎಲ್ಲಿಂದ? ಬಹುಪಾಲು ಒಂದೇ ನದಿಯಿಂದ — ಕಾವೇರಿ. ಮೈಸೂರು ಬಳಿಯ ಕೃಷ್ಣರಾಜಸಾಗರ ಜಲಾಶಯದಿಂದ ಸುಮಾರು ನೂರು ಕಿಲೋಮೀಟರ್ ದೂರ, ನೂರಾರು ಮೀಟರ್ ಎತ್ತರಕ್ಕೆ ಪಂಪ್ ಮಾಡಿ ತರುವ ನೀರಿದು. ಬೆಂಗಳೂರು ಇಂದು ದಿನಕ್ಕೆ ಸುಮಾರು 1,450 ದಶಲಕ್ಷ ಲೀಟರ್ ಕಾವೇರಿ ನೀರು ಪಡೆಯುತ್ತಿದೆ, ಆದರೆ ಬೇಡಿಕೆ 2,600 ದಶಲಕ್ಷ ಲೀಟರ್ಗೆ ಹತ್ತಿರವಿದೆ. ಈ ಅಂತರವನ್ನು ತುಂಬುತ್ತಿರುವುದು ಅಂತರ್ಜಲ — ಒಂದು ಕಾಲದಲ್ಲಿ ಅದನ್ನು ಮರುಪೂರಣಗೊಳಿಸುತ್ತಿದ್ದ ಕೆರೆ-ನದಿಗಳನ್ನೇ ನಾವು ಕಾಂಕ್ರೀಟೀಕರಿಸಿಬಿಟ್ಟಿದ್ದರಿಂದ ಸಾಕಷ್ಟು ವೇಗವಾಗಿ ಮರುಪೂರಣಗೊಳ್ಳದ ಗ್ರಾನೈಟ್ ಜಲಚರ.
ಇಂತಹ ಅವಲಂಬನೆ ಎಷ್ಟು ಅಪಾಯಕಾರಿ ಎಂದು ಒಮ್ಮೆ ಯೋಚಿಸಿ ನೋಡಿ. ಪಶ್ಚಿಮ ಘಟ್ಟಗಳಲ್ಲಿನ ಕಾವೇರಿಯ ಸ್ವಂತ ಜಲಾನಯನವೇ ಕಾಫಿತೋಟ ಮತ್ತು ಪ್ರವಾಸೋದ್ಯಮಕ್ಕಾಗಿ ಅರಣ್ಯನಾಶದಿಂದ ನಲುಗುತ್ತಿದೆ. ಇದೇ ನದಿ ತಮಿಳುನಾಡಿನೊಂದಿಗಿನ ಭಾರತದ ಅತ್ಯಂತ ಕಟುವಾದ ಅಂತಾರಾಜ್ಯ ಜಲ ವಿವಾದದ ಕೇಂದ್ರಬಿಂದು — ಪ್ರತಿ ಕೊರತೆಯ ಮುಂಗಾರಿನಲ್ಲೂ ಈ ವಿವಾದ ಮತ್ತೆ ಭುಗಿಲೇಳುತ್ತದೆ. ಗಲಭೆ, ಬಂದ್, ರಾಜ್ಯಗಳ ನಡುವಿನ ಬಿಕ್ಕಟ್ಟುಗಳಿಗೆ ಕಾರಣವಾಗುತ್ತದೆ. ಹೀಗಾಗಿ ಬೆಂಗಳೂರಿನ ಕುಡಿಯುವ ನೀರಿನ ಭದ್ರತೆ ಏಕಕಾಲಕ್ಕೆ ಮೂರು ಅಪಾಯಗಳಿಗೆ ಒತ್ತೆಯಾಳಾಗಿ ನಿಂತಿದೆ; ಅನಿಶ್ಚಿತ ಮುಂಗಾರು, ನ್ಯಾಯಾಂಗದ ತೀರ್ಪಿನ ಮೇಲೆ ಅವಲಂಬಿತವಾದ ನೆರೆ ರಾಜ್ಯದ ಹಕ್ಕು ಮತ್ತು ಶಿಥಿಲಗೊಳ್ಳುತ್ತಿರುವ ನೂರು ಕಿ.ಮೀ ಸಾಗಣೆ ಜಾಲ. ಇವುಗಳಲ್ಲಿ ಒಂದೇ ಒಂದು ವರ್ಷದಲ್ಲಿ ಕೈಕೊಟ್ಟರೂ ಬಿಕ್ಕಟ್ಟು; ಎಲ್ಲವೂ ಒಟ್ಟಿಗೆ ಕೈಕೊಟ್ಟರೆ ಮಹಾ ದುರಂತ.
ಇದೇನೂ ಕಲ್ಪನೆಯಲ್ಲ. 2024ರ ಬೇಸಿಗೆಯಲ್ಲಿ ಬೆಂಗಳೂರಿನ ಸುಮಾರು 14,000 ಕೊಳವೆಬಾವಿಗಳ ಪೈಕಿ ಬಹುತೇಕ 7,000 ಕೊಳವೆಬಾವಿಗಳು ಬತ್ತಿಹೋಗಿದ್ದವು. ನೀರಿನ ಟ್ಯಾಂಕರ್ ಕಾಳಸಂತೆಯ ಸರಕಾಯಿತು, ಅಪಾರ್ಟ್ ಮೆಂಟ್ಗಳು ಒಂದು ಟ್ಯಾಂಕರ್ಗಾಗಿ ಕಚ್ಚಾಡಿದವು. ಟ್ಯಾಪ್ ಬತ್ತಿಹೋಗಿದ್ದಕ್ಕೆ ಐಟಿ ಉದ್ಯೋಗಿಗಳು ಮನೆಯಿಂದಲೇ ಕೆಲಸ ಮಾಡಬೇಕಾಯಿತು. ಅಂತಾರಾಷ್ಟ್ರೀಯ ಮಾಧ್ಯಮಗಳು ಇದನ್ನು ಕೇಪ್ ಟೌನ್ನ ಕುಖ್ಯಾತ ‘ಡೇ ಜೀರೋ’ಗೆ ಹೋಲಿಸಿದವು. ಆ ಬಿಕ್ಕಟ್ಟು ಶಮನಗೊಂಡಿದ್ದು ಮುಂದಿನ ಮುಂಗಾರು ಸ್ವಲ್ಪ ಕರುಣೆ ತೋರಿದ್ದರಿಂದ ಮಾತ್ರ. ಆದರೆ ಕರುಣೆ ಎಂಬುದು ಜಲನೀತಿಯಲ್ಲ. “ಮುಂದಿನ ಮುಂಗಾರು ಚೆನ್ನಾಗಿ ಬರಬಹುದು” ಎಂಬ ಭರವಸೆಯ ಮೇಲೆ ನಿಂತಿರುವುದನ್ನು ಆಡಳಿತವೆನ್ನುವುದಿಲ್ಲ — ಅದು ಎರಡು ಕೋಟಿ ಜನರ ಮೂಲಭೂತ ಹಕ್ಕನ್ನಿಟ್ಟುಕೊಂಡು ಆಡುತ್ತಿರುವ ಜೂಜು.
ಇದು ಭಾವುಕತೆಯಲ್ಲ, ಬದುಕುಳಿಯುವ ಇಂಜಿನಿಯರಿಂಗ್
ಅರ್ಕಾವತಿ, ಚಿತ್ರಾವತಿ, ಪಿನಾಕಿನಿ ನದಿಗಳ ಮತ್ತು ಪಾಲಾರ್ ಕೆರೆಗಳ ಪುನಶ್ಚೇತನದ ಮಾತೆತ್ತಿದರೆ ಕೆಲವರು “ಇದೆಲ್ಲ ಭಾವುಕ ಪರಂಪರೆಯ ಹಂಬಲ, ಗಂಭೀರ ನೀತಿಯ ವಿಷಯವಲ್ಲ” ಎಂದು ತಳ್ಳಿಹಾಕುತ್ತಾರೆ. ಈ ಧೋರಣೆಯೇ ಐವತ್ತು ವರ್ಷಗಳ ಕಾಲ ಈ ಬಿಕ್ಕಟ್ಟನ್ನು ಕೊಳೆಯಗೊಟ್ಟಿದ್ದು.
ಪುನಶ್ಚೇತನಗೊಂಡ ಅರ್ಕಾವತಿ ಜಲಾನಯನ ಬೆಂಗಳೂರಿನ ಸಂಪೂರ್ಣ ಬೇಡಿಕೆಯನ್ನೇ ಪೂರೈಸಬೇಕಿಲ್ಲ. ಭಾಗಶಃ ಪುನಶ್ಚೇತನ ಕೂಡ ಯಲಹಂಕ, ಹೆನ್ನೂರು, ಸರ್ಜಾಪುರ, ವೈಟ್ಫೀಲ್ಡ್ ನಂತಹ ಕಾವೇರಿ ಪೈಪ್ಲೈನ್ ತಲುಪದೇ ಬರೀ ಕೊಳವೆಬಾವಿಯ ಭರವಸೆಯಲ್ಲೇ ಇರುವ ಪರಿಧಿ ಪ್ರದೇಶಗಳ ಅಂತರ್ಜಲವನ್ನು ಗಣನೀಯವಾಗಿ ಮರುಪೂರಣಗೊಳಿಸಬಲ್ಲದು.
ನಶ್ಚೇತನಗೊಂಡ ಕೆರೆಗಳು ಸ್ಥಳೀಯ ಹವಾಮಾನ ಸಮತೋಲಿಸುತ್ತವೆ, ಮಳೆನೀರಿಗೆ ಹೋಗಲು ಜಾಗಕೊಟ್ಟು ನಗರ ಪ್ರವಾಹ ತಗ್ಗಿಸುತ್ತವೆ ಮತ್ತು ಎಲ್ಲಕ್ಕಿಂತ ಮುಖ್ಯವಾಗಿ ಬೇರೊಂದು ರಾಜ್ಯದ ನ್ಯಾಯಾಧಿಕರಣಕ್ಕೆ ಒತ್ತೆಯಾಗದ ನಿಜವಾದ ಎರಡನೇ ಜಲಮೂಲವನ್ನು ಸೃಷ್ಟಿಸುತ್ತವೆ. ಸ್ವತಃ ಸರ್ಕಾರ ನೇಮಿಸಿದ ಸಮಿತಿಗಳೇ ಶಿಫಾರಸು ಮಾಡಿರುವ ಮಾತಿದು: ಕಾವೇರಿಯ ಅವಲಂಬನೆ ಬರೀ ಆಶಿಸಿ ಕಡಿಮೆಯಾಗುವುದಿಲ್ಲ, ನಾವು ಕೈಬಿಟ್ಟ ಸ್ಥಳೀಯ ಜಲವಿಜ್ಞಾನವನ್ನೇ ಮರುನಿರ್ಮಿಸಬೇಕು.
ಇದಕ್ಕೆ ಬೇಕಿರುವುದು ಆಕರ್ಷಕವಲ್ಲದ, ಆದರೆ ನಿರ್ದಿಷ್ಟ ರಾಜಕೀಯ ಇಚ್ಛಾಶಕ್ತಿ. ಚುನಾವಣೆಗೆ ಮೊದಲು ಒತ್ತುವರಿ ಸಕ್ರಮಗೊಳಿಸುವ ಬದಲು ಕೆರೆ – ರಾಜಕಾಲುವೆಗಳ ಸುತ್ತ ಬಫರ್ ವಲಯ ಜಾರಿಗೊಳಿಸುವುದು; ಅಕ್ರಮ ಮರಳುಗಾರಿಕೆಯ ವಿರುದ್ಧ ನಿಜವಾದ ಕ್ರಮ; ಮೆಟ್ರೋ ವಿಸ್ತರಣೆಗೆ ಕೊಡುವಷ್ಟೇ ತುರ್ತಿನಿಂದ ನದಿ ಜಲಾನಯನಗಳ ಹೂಳೆತ್ತುವಿಕೆ ಮತ್ತು ಚೆಕ್ – ಡ್ಯಾಂ ನಿರ್ಮಾಣಕ್ಕೆ ಹಣ ಮತ್ತು ಕೋಲಾರ, ಚಿಕ್ಕಬಳ್ಳಾಪುರ, ರಾಮನಗರ, ತುಮಕೂರುಗಳ ಜಲಭದ್ರತೆಯನ್ನು ಬೆಂಗಳೂರಿನ ಸ್ವಂತ ಭದ್ರತೆಯಿಂದ ಬೇರ್ಪಡಿಸಲಾಗದ್ದೆಂದು ಒಪ್ಪಿಕೊಳ್ಳುವುದು- ಏಕೆಂದರೆ ಜಲವಿಜ್ಞಾನದ ಪ್ರಕಾರ ಅವು ಯಾವತ್ತಿಗೂ ಒಂದೇ ವ್ಯವಸ್ಥೆಯಾಗಿದ್ದವು.
ಪ್ರತಿ ಬೆಂಗಳೂರಿಗನಿಗೂ ಒಂದು ಕರೆ
ಇದು ಟ್ಯಾಂಕರ್ಗಾಗಿ ಸಾಲಿನಲ್ಲಿ ನಿಂತವರ, ಬೋರ್ವೆಲ್ ಕೊರೆಸಲು ಕಳೆದ ಬಾರಿಗಿಂತ ಹೆಚ್ಚು ಆಳ, ಹೆಚ್ಚು ಹಣ ಕೊಟ್ಟಿವರ, ಬಾಲ್ಯದ ಕೆರೆ ಇಂದು ಬಡಾವಣೆಯಾಗಿದ್ದನ್ನು ಕಂಡು ನೊಂದವರ ಹೋರಾಟವೂ ಹೌದು. ಅರ್ಕಾವತಿ ಸಹಜವಾಗಿ ಸಾಯಲಿಲ್ಲ. ಪಕ್ಕದ ನದಿ ಸರಿಪಡಿಸುವುದಕ್ಕಿಂತ ಇನ್ನೊಂದು ಕಾವೇರಿ ಪೈಪ್ಲೈನ್ ಹಾಕುವುದೇ ಸುಲಭ ಎಂದುಕೊಂಡ ರಾಜಕೀಯ ವ್ಯವಸ್ಥೆ, ಜಲಾನಯನ ಪ್ರದೇಶ ಪ್ರದೇಶವಾಗಿ, ಒತ್ತುವರಿ ಒತ್ತುವರಿಯಾಗಿ, ಚುನಾವಣಾ ಚಕ್ರ ಚಕ್ರವಾಗಿ ಈ ನದಿಯನ್ನು ಕೊಂದುಹಾಕಿತು. ಅರ್ಕಾವತಿ – ಪಿನಾಕಿನಿ – ಪಾಲಾರ್ ವ್ಯವಸ್ಥೆಯ ಪುನಶ್ಚೇತನಕ್ಕೆ ಒಂದು ರೂಪಾಯಿಯನ್ನೂ ಖರ್ಚು ಮಾಡದೆ ಕಾವೇರಿ ಹಂತ 6, 7ನ್ನು ವಿಸ್ತರಿಸಲು ಖರ್ಚು ಮಾಡುವ ಪ್ರತಿ ರೂಪಾಯಿಯೂ, ರೋಗ ಹರಡುತ್ತಿರುವಾಗ ಬರೀ ಲಕ್ಷಣಕ್ಕೆ ಚಿಕಿತ್ಸೆ ನೀಡಿದಂತೆ.
ಇದನ್ನೆಲ್ಲ ಸರಿಪಡಿಸುವ ಜಾಣ್ಮೆಗೆ ಕರ್ನಾಟಕದಲ್ಲಿ ಕೊರತೆಯಿಲ್ಲ. ಹಳೆ ಮೈಸೂರಿನ ಕೆರೆ ವ್ಯವಸ್ಥೆಯೇ ಅದಕ್ಕೆ ಸಾಕ್ಷಿ, ನಮ್ಮ ಪೂರ್ವಜರು ಇಂದಿಗಿಂತ ಕಡಿಮೆ ಸಂಪನ್ಮೂಲದಲ್ಲೇ ಇದೇ ಸಮಸ್ಯೆ ಬಗೆಹರಿಸಿದ್ದರು. ಬೆಂಗಳೂರಿಗೆ ಕೊರತೆಯಿರುವುದು ಸಂಪನ್ಮೂಲವಲ್ಲ. ಪ್ರತಿ ಚುನಾವಣಾ ಪ್ರಣಾಳಿಕೆಯಲ್ಲಿ, ಪ್ರತಿ ಬಜೆಟ್ ಅಧಿವೇಶನದಲ್ಲಿ ನದಿ ಪುನಶ್ಚೇತನವನ್ನು ಚರ್ಚೆಗೊಳಪಡದ ಅಗತ್ಯವನ್ನಾಗಿಸುವಷ್ಟು ಗಟ್ಟಿಯಾದ ಜನ ಬೆಂಬಲ. ಈ ಮುಂಗಾರು ಈಗಾಗಲೇ ತನ್ನ ತೀರ್ಪು ನೀಡಿಬಿಟ್ಟಿದೆ. ನಾಗರಿಕರು ತಮ್ಮ ತೀರ್ಪನ್ನು ಕೊಡಬೇಕಷ್ಟೇ. ಕಾವೇರಿ ಬೆಂಗಳೂರಿಗೆ ನೂರು ವರ್ಷ ಕೊಟ್ಟಳು. ಮುಂದಿನ ನೂರು ವರ್ಷಗಳನ್ನು ಅವಳೊಬ್ಬಳೇ ಕೊಡಲಾರಳು. ಮನುಜ ಮರೆತ ನದಿಗಳು ಮತ್ತೆ ನೆನಪಿಸಿಕೊಳ್ಳಲು ಕಾಯುತ್ತಿವೆ ಮತ್ತು ಆಥ ಎಷ್ಟು ಬೇಗ ಅವುಗಳನ್ನು ನೆನಪಿಸಿಕೊಳ್ಳುತ್ತಾನೋ ಅಷ್ಟು ಬೇಗ ಈ ನಗರ ಬದುಕುಳಿಯುತ್ತದೆ.
