ವಿದ್ಯಾರ್ಥಿ ಮತ್ತು ಶಿಕ್ಷಕರ ನಡುವಿನ ಬಾಂಧವ್ಯ ತಂದೆ-ಮಕ್ಕಳ ಪ್ರೀತಿ ಹಾಗೂ ಸ್ನೇಹಿತರ ಆತ್ಮೀಯತೆಯಂತೆ ಇರಬೇಕು. ಆದರೆ, ಅದರ ಜೊತೆಗೇ ಒಂದೊಳ್ಳೆಯ ಗೌರವದ ಗಡಿಯೂ ಇರಬೇಕು.
ಶಿಕ್ಷಕರು ಹೇಗಿರಬೇಕು?
ಶಿಕ್ಷಕರು ಅಧಿಕಾರ ಚಲಾಯಿಸದೆ ಒಳ್ಳೆಯ ಮಾರ್ಗದರ್ಶಕರಾಗಬೇಕು. ಮಗು ತಪ್ಪು ಮಾಡಿದಾಗ ಬೈಯುವ ಬದಲು, ಆ ತಪ್ಪು ಯಾಕಾಯಿತು ಎಂದು ತಿಳಿಸಿ ತಿದ್ದಬೇಕು. ಬರೀ ಪಾಠ ಮಾಡುವುದಷ್ಟೇ ಅಲ್ಲ, ವಿದ್ಯಾರ್ಥಿ ಹೇಳುವುದನ್ನು ತಾಳ್ಮೆಯಿಂದ ಕೇಳಿಸಿಕೊಳ್ಳಬೇಕು. ಆಗ ಮಗುವಿಗೆ ಭಯ ಹೋಗಿ ಪ್ರಶ್ನೆ ಕೇಳುವ ಧೈರ್ಯ ಬರುತ್ತದೆ.
ಎಲ್ಲ ಮಕ್ಕಳನ್ನೂ ಒಂದೇ ಕಣ್ಣಿನಿಂದ ನೋಡಬೇಕು. ಒಬ್ಬರನ್ನು ಹೊಗಳಿ ಇನ್ನೊಬ್ಬರನ್ನು ಕಡೆಗಣಿಸಿದರೆ ನಂಬಿಕೆ ಹೊರಟುಹೋಗುತ್ತದೆ. ಮಕ್ಕಳನ್ನು ತಮ್ಮ ಸ್ವಂತ ಮಕ್ಕಳಂತೆ ಪ್ರೀತಿಸಿ ಅವರ ನಂಬಿಕೆ ಗಳಿಸಬೇಕು. ಬರೀ ಸಂಬಳಕ್ಕಾಗಿ ಕೆಲಸ ಮಾಡದೆ, ವಿಷಯದ ಮೇಲೆ ಪ್ರೀತಿಯಿಟ್ಟು, ಆಟ ಮತ್ತು ಹೊಸ ಚಟುವಟಿಕೆಗಳ ಮೂಲಕ ಪಾಠ ಮಾಡಿದಾಗ ಮಕ್ಕಳು ಉನ್ನತ ಮಟ್ಟಕ್ಕೆ ಬೆಳೆಯುತ್ತಾರೆ.
ವಿದ್ಯಾರ್ಥಿಗಳು ಹೇಗಿರಬೇಕು?
ಮಕ್ಕಳಲ್ಲಿ ಗೌರವ ಮತ್ತು ಪ್ರಾಮಾಣಿಕತೆ ಇರಬೇಕು. ಶಿಕ್ಷಕರಲ್ಲಿ ಸುಳ್ಳು ಹೇಳದೆ, ಪಾಠ ಅರ್ಥವಾಗದಿದ್ದರೆ “ಅರ್ಥವಾಗಲಿಲ್ಲ” ಎಂದು ನೇರವಾಗಿ ಹೇಳುವ ಧೈರ್ಯವಿರಬೇಕು. ಶಿಕ್ಷಕರನ್ನು ಕಂಡು ಭಯಪಡದೆ, ಸ್ನೇಹಿತರಂತೆ ಅನುಮಾನ ಕೇಳುವಂತಿರಬೇಕು. ಆದರೆ, ಶಿಕ್ಷಕರು ಕೊಟ್ಟ ಸಲುಗೆಯನ್ನು ಸರಿಯಾಗಿ ಬಳಸಿಕೊಳ್ಳುತ್ತಾ ಅವರ ಗೌರವ ಕಾಪಾಡಿಕೊಳ್ಳುವುದು ಕೂಡ ಮುಖ್ಯ.
ಆದರ್ಶ ಬಾಂಧವ್ಯ ಎಂದರೆ…
ಈ ಸಂಬಂಧವನ್ನು ಒಂದು ತೋಟಕ್ಕೆ ಹೋಲಿಸಬಹುದು. ಶಿಕ್ಷಕರು ತೋಟಗಾರ, ವಿದ್ಯಾರ್ಥಿಗಳು ಸಸಿಗಳು. ತೋಟಗಾರ ದಿನವೂ ಅಳೆದು ತೂಗಿ ನೀರು-ಬಿಸಿಲು ಕೊಟ್ಟರೆ ಮಾತ್ರ ಸಸಿ ಬೆಳೆಯುತ್ತದೆ. ಅತಿಯಾಗಿ ನೀರು ಹಾಕಿದರೂ, ನಿರ್ಲಕ್ಷ್ಯ ಮಾಡಿದರೂ ಸಸಿ ಬಾಡಿಹೋಗುತ್ತದೆ.
ಒಳ್ಳೆಯ ಬಾಂಧವ್ಯವಿದ್ದಾಗ, ವಿದ್ಯಾರ್ಥಿಗೆ ತನ್ನ ಕನಸು, ಭಯ ಅಥವಾ ತಪ್ಪುಗಳನ್ನು ಶಿಕ್ಷಕರ ಹತ್ತಿರ ಹೇಳಿಕೊಳ್ಳಲು ಹಿಂಜರಿಕೆ ಇರುವುದಿಲ್ಲ. ಶಿಕ್ಷಕರಿಗೂ ಆ ವಿದ್ಯಾರ್ಥಿಯ ಸಾಮರ್ಥ್ಯದ ಮೇಲೆ ಪೂರ್ಣ ನಂಬಿಕೆ ಇರುತ್ತದೆ.
- ಅನಿಲಕುಮಾರ ಎಸ್. ಹುಮನಾಬಾದ
ಚಿತ್ರಕಲಾ ಶಿಕ್ಷಕರು
ಡಾ. ಬಿ. ಆರ್. ಅಂಬೇಡ್ಕರ್ ಬಾಲಕಿಯರ ವಸತಿ ಶಾಲೆ, ಆಳಂದ
ವಿಕ್ರಮ ಓದುಗರ ವಾಟ್ಸಪ್ ಬಳಗಕ್ಕೆ ಸೇರಲು ಈ ಸಂಖ್ಯೆಯನ್ನು ನಿಮ್ಮ ಮೊಬೈಲ್ನಲ್ಲಿ ಸೇವ್ ಮಾಡಿಕೊಂಡು ನಮಗೊಂದು ಸಂದೇಶ ಕಳುಹಿಸಿ. ಮೊಬೈಲ್ ಸಂಖ್ಯೆ: 98800 21122
