ಸುಧಾರಣೆಯ ಪಥದಲ್ಲಿ ಬಿಜೆಪಿ ಸರ್ಕಾರದ ಮಹತ್ವಾಕಾಂಕ್ಷೆಯ ಮಾರ್ಗಸೂಚಿ
- ಕುನಾಲ್ ಚಟರ್ಜಿ, ಲೇಖಕ
ಪಶ್ಚಿಮ ಬಂಗಾಳದಲ್ಲಿ ದಶಕಗಳ ರಾಜಕೀಯ ಧ್ರುವೀಕರಣದ ನಂತರ, ಹೊಸ ಸರ್ಕಾರ ಅಧಿಕಾರ ವಹಿಸಿಕೊಂಡು ಕೇವಲ ಎರಡು ತಿಂಗಳು ಕಳೆದಿದೆ. ಈ ಅಲ್ಪ ಅವಧಿಯಲ್ಲೇ ರಾಜ್ಯದ ಭವಿಷ್ಯವನ್ನು ಮರುರೂಪಿಸುವ, ಆರ್ಥಿಕತೆಗೆ ಚೇತರಿಕೆ ನೀಡುವ ಮತ್ತು ಸಾರ್ವಜನಿಕ ಆಡಳಿತವನ್ನು ಹಳಿಗೆ ತರುವ ಬೃಹತ್ ಕಾರ್ಯಕ್ರಮವೊಂದನ್ನು ಬಿಜೆಪಿ ಸರ್ಕಾರ ಅನಾವರಣಗೊಳಿಸಿದೆ. ಜನಪ್ರಿಯ ಕಲ್ಯಾಣ ಯೋಜನೆಗಳು, ಪ್ರಮುಖ ಮೂಲಸೌಕರ್ಯ ಹಾಗೂ ಕೈಗಾರಿಕಾ ಹೂಡಿಕೆಗಳ ಈ ಹದವಾದ ಮಿಶ್ರಣವು ಬಂಗಾಳವನ್ನು ಪ್ರಗತಿಯ ಹೊಸದಾರಿಗೆ ಕೊಂಡೊಯ್ಯುವ ಭರವಸೆ ಮೂಡಿಸಿದೆ.
ಸ್ವಚ್ಛ ಆಡಳಿತ ಮತ್ತು ಭ್ರಷ್ಟಾಚಾರದ ವಿರುದ್ಧ ಸಮರ
ನಬಾನ್ನದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಮುಖ್ಯಮಂತ್ರಿ ಸುವೇಂದು ಅಧಿಕಾರಿ, ತಮ್ಮ ಸರ್ಕಾರದ ಮೂಲಮಂತ್ರವನ್ನು ಸ್ಪಷ್ಟಪಡಿಸಿದರು. ಕಾನೂನು ಸುವ್ಯವಸ್ಥೆ ಮತ್ತು ಪಾರದರ್ಶಕತೆಗೆ ಮೊದಲ ಆದ್ಯತೆ ನೀಡಿರುವ ಅವರು, ಅಪರಾಧ ಮುಕ್ತ ಬಂಗಾಳದ ಸಂಕಲ್ಪ ತೊಟ್ಟಿದ್ದಾರೆ. ಇದಕ್ಕೆ ಪೂರಕವಾಗಿ ಸರ್ಕಾರವು ವಿಸ್ಲಬಲೋವರ್ಸ್ (ಮಾಹಿತಿ ನೀಡುವವರು) ರಕ್ಷಣೆ ಮತ್ತು ಆಡಳಿತದ ಹೆಚ್ಚಿನ ಡಿಜಿಟಲೀಕರಣಕ್ಕಾಗಿ ಹೊಸ ಶಾಸನವನ್ನು ತರಲು ಮುಂದಾಗಿದೆ. ಇಲಾಖೆಗಳಲ್ಲಿ ಆಂತರಿಕ ತನಿಖೆಗಳು (ಆಡಿಟ್) ಈಗಾಗಲೇ ಚುರುಕುಗೊಂಡಿದ್ದು, ಬಾಕಿ ಇರುವ ಭ್ರಷ್ಟಾಚಾರ ಪ್ರಕರಣಗಳ ತನಿಖೆಯನ್ನು ಚುರುಕುಗೊಳಿಸಲು ಜಿಲ್ಲಾ ಆಡಳಿತಗಳಿಗೆ ಸೂಚಿಸಲಾಗಿದೆ.
‘ಅನ್ನಪೂರ್ಣ ಭಂಡಾರ್’: ಸಾಮಾಜಿಕ ಭದ್ರತೆಗೆ ಹೊಸ ಸ್ಪರ್ಶ
ಸರ್ಕಾರದ ಅತ್ಯಂತ ಜನಪ್ರಿಯ ಮತ್ತು ಚರ್ಚಿತ ಯೋಜನೆಯೆಂದರೆ ಅದು ‘ಅನ್ನಪೂರ್ಣ ಭಂಡಾರ್’. ಹಳೆಯ ‘ಲಕ್ಷ್ಮಿ ಭಂಡಾರ್’ ಯೋಜನೆಯನ್ನು ಮರುರೂಪಿಸಿ, ಮಹಿಳೆಯರ ಆರ್ಥಿಕ ಸಬಲೀಕರಣಕ್ಕಾಗಿ ತಿಂಗಳಿಗೆ ಬರೋಬ್ಬರಿ 3,000 ರೂ.ಗಳ ನೇರ ನಗದು ವರ್ಗಾವಣೆಯ ಭರವಸೆಯನ್ನು ಸರ್ಕಾರ ನೀಡಿದೆ. ಇದು ಜೂನ್ 1ರಿಂದಲೇ ಜಾರಿಗೆ ಬಂದಿದೆ.
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಅಗ್ನಿಮಿತ್ರಾ ಪಾಲ್ ಈ ಯೋಜನೆಯ ಪಾರದರ್ಶಕತೆಯ ಬಗ್ಗೆ ಮಾತನಾಡುತ್ತಾ ಹೀಗೆ ಹೇಳುತ್ತಾರೆ: “ನಕಲಿ ಫಲಾನುಭವಿಗಳನ್ನು ಗುರುತಿಸಿ ತೆಗೆದುಹಾಕಲು ತಂತ್ರಜ್ಞಾನದ ನೆರವು ಪಡೆಯಲಾಗುವುದು. ಮರಣ ಹೊಂದಿದ ಅಥವಾ ಮತದಾರರ ಪಟ್ಟಿಯಿಂದ ಹೆಸರುಗಳನ್ನು ತೆಗೆದುಹಾಕಲಾಗಿದ್ದರೂ ಇನ್ನು ಪ್ರಯೋಜನಗಳನ್ನು ಪಡೆಯುತ್ತಿದ್ದ ಜನರಿಗೆ ಇನ್ನು ಮುಂದೆ ಪಾವತಿಗಳನ್ನು ಮಾಡಲಾಗುವುದಿಲ್ಲ. ಅರ್ಹರಿಗೆ ಮಾತ್ರ ಹಣ ತಲುಪಲಿದೆ”.
ಆರೋಗ್ಯ ಕ್ಷೇತ್ರದಲ್ಲಿಯೂ ರಾಜ್ಯವು ದೊಡ್ಡ ಹೆಜ್ಜೆ ಇಟ್ಟಿದ್ದು, ಕೇಂದ್ರದ ‘ಆಯುಷ್ಮಾನ್ ಭಾರತ್’ (AB PM-JAY) ಯೋಜನೆಗೆ ಸಹಿ ಹಾಕಲು ಸಿದ್ಧವಾಗಿದೆ. ಇದರಿಂದ ಪ್ರತಿ ಬಡ ಕುಟುಂಬಕ್ಕೆ ವಾರ್ಷಿಕ 5 ಲಕ್ಷ ರೂ.ವರೆಗಿನ ಉಚಿತ ವೈದ್ಯಕೀಯ ವಿಮೆ ಸಿಗಲಿದ್ದು, ಜಿಲ್ಲಾ ಆಸ್ಪತ್ರೆಗಳ ಆಧುನೀಕರಣಕ್ಕೂ ಚಾಲನೆ ನೀಡಲಾಗಿದೆ.
ಉದ್ಯೋಗ ಕ್ರಾಂತಿ ಮತ್ತು ಶಿಕ್ಷಣ ಸುಧಾರಣೆ
ಯುವಜನರ ನಿರುದ್ಯೋಗ ಸಮಸ್ಯೆಗೆ ಕಟ್ಟುನಿಟ್ಟಿನ ಪರಿಹಾರ ಕಂಡುಕೊಳ್ಳಲು ಸರ್ಕಾರವು ಒಂದು ಲಕ್ಷ ಸರ್ಕಾರಿ ಹುದ್ದೆಗಳ ಬೃಹತ್ ನೇಮಕಾತಿ ಅಭಿಯಾನವನ್ನು ಪ್ರಕಟಿಸಿದೆ. ಶಿಕ್ಷಣ ಇಲಾಖೆಯೊಂದರಲ್ಲೇ 50,000 ಹುದ್ದೆಗಳು ಭರ್ತಿಯಾಗಲಿದ್ದು, ಒಟ್ಟು ಖಾಲಿ ಹುದ್ದೆಗಳಲ್ಲಿ ಮೂರನೇ ಒಂದು ಭಾಗವನ್ನು ಮಹಿಳೆಯರಿಗೆ ಮೀಸಲಿಡಲಾಗಿದೆ. ಜೊತೆಗೆ ಸರ್ಕಾರಿ ನೌಕರರು ಮತ್ತು ಪಿಂಚಣಿದಾರರಿಗೆ ಶೇ.20ರಷ್ಟು ತುಟ್ಟಿಭತ್ಯೆ (DA) ಹೆಚ್ಚಳ ಮಾಡಿ, ಒಟ್ಟು ಡಿಎಯನ್ನು ಶೇ.38ಕ್ಕೆ ಏರಿಸಿರುವುದು ನೌಕರರ ವಲಯದಲ್ಲಿ ಸಂತಸ ತಂದಿದೆ. ಬಜೆಟ್ನಲ್ಲಿ ಕಾಲೇಜು ಓದುತ್ತಿರುವ ಅವಿವಾಹಿತ ವಿದ್ಯಾರ್ಥಿನಿಯರಿಗೆ 50,000 ರೂ.ಗಳ ಸಹಾಯಧನ ಹಾಗೂ ಹೊಸದಾಗಿ ಬುಡಕಟ್ಟು ವಿಶ್ವವಿದ್ಯಾಲಯವನ್ನು (ಟ್ರೈಬಲ್ ಯೂನಿವರ್ಸಿಟಿ) ಸ್ಥಾಪಿಸುವ ಯೋಜನೆಗಳೂ ಸೇರಿವೆ.
ಕೈಗಾರಿಕಾ ಹಬ್ ಹಾಗೂ ಗ್ರಾಮೀಣಾಭಿವೃದ್ಧಿಯ ಸಮನ್ವಯ
ಬಂಗಾಳವನ್ನು ಕೇವಲ ಕೃಷಿ ಪ್ರಧಾನ ರಾಜ್ಯವಾಗಿ ಉಳಿಸದೆ, ಉತ್ಪಾದನೆ ಮತ್ತು ಲಾಜಿಸ್ಟಿಕ್ಸ್ ಹಬ್ ಆಗಿ ಪರಿವರ್ತಿಸುವ ಬಲವಾದ ದೃಢಸಂಕಲ್ಪ ಬಜೆಟ್ನಲ್ಲಿ ಎದ್ದುಕಾಣುತ್ತಿದೆ. ಪನಾಗಢ್-ದುರ್ಗಾಪುರದಲ್ಲಿ ಸೆಮಿಕಂಡಕ್ಟರ್ ಘಟಕ, ಬಂಕುರಾ ಮತ್ತು ಬೀರ್ಭೂಮ್ನಲ್ಲಿ ರಕ್ಷಣಾ ಉತ್ಪಾದನಾ ಹಬ್ ಮತ್ತು ಪುರ್ಬಾ ಮೇದಿನಿಪುರದಲ್ಲಿ ಆಳ ಸಮುದ್ರದ ಬಂದರು (Deep-sea port) ನಿರ್ಮಾಣದಂತಹ ದೂರಾಸ್ಲೋಚನೆಯ ಯೋಜನೆಗಳು ಇದರಲ್ಲಿ ಸೇರಿವೆ. 100 ಕೋಟಿ ರೂ.ಗಿಂತ ಹೆಚ್ಚಿನ ಹೂಡಿಕೆಯ ಯೋಜನೆಗಳಿಗೆ ‘ಏಕ-ಗವಾಕ್ಷಿ’ (Single-window) ಅನುಮತಿಯನ್ನು ಪ್ರಸ್ತಾಪಿಸಲಾಗಿದೆ.
ಇದೇ ವೇಳೆ, ಗ್ರಾಮೀಣ ಭಾಗದ ಜನರಿಗೆ ಆಸರೆಯಾಗಲು ‘125 ದಿನಗಳ ಕೆಲಸ’ ಕಾರ್ಯಕ್ರಮವನ್ನು ತರಲಾಗಿದೆ. ಈ ಬಗ್ಗೆ ಪಂಚಾಯತ್ ಮತ್ತು ಗ್ರಾಮೀಣಾಭಿವೃದ್ಧಿ ಸಚಿವ ದಿಲೀಪ್ ಘೋಷ್ ವಿವರಿಸುತ್ತಾರೆ: “ಗ್ರಾಮ ಮಟ್ಟದಲ್ಲಿ ಯೋಜನೆಗಳನ್ನು ಕಾರ್ಯಗತಗೊಳಿಸಲು ರಾಜ್ಯದ ವಿವಿಧ ಸಂಸ್ಥೆಗಳ ನಡುವೆ ಸಮನ್ವಯವನ್ನು ಸ್ಥಾಪಿಸುವುದು ನಮ್ಮ ಈಗಿನ ಆದ್ಯತೆಯಾಗಿದೆ. ಮುಂಬರುವ ವರ್ಷಗಳಲ್ಲಿ ಹಳ್ಳಿಗಳಿಗೆ ಪ್ರಯೋಜನ ನೀಡುವ ಬಾಳಿಕೆ ಬರುವ ಸಾರ್ವಜನಿಕ ಆಸ್ತಿಗಳನ್ನು ಸೃಷ್ಟಿಸುವಾಗ ಹೆಚ್ಚಿನ ಕೆಲಸದ ಅವಕಾಶಗಳನ್ನು ಒದಗಿಸುವುದು ನಮ್ಮ ಗುರಿ”.
ಪರಂಪರೆ ಸಂರಕ್ಷಣೆ ಮತ್ತು ಪ್ರವಾಸೋದ್ಯಮದ ನವ ದಿಗಂತ
ಬಂಗಾಳದ ಶ್ರೀಮಂತ ಸಂಸ್ಕೃತಿ ಮತ್ತು ಇತಿಹಾಸವನ್ನು ಜಾಗತಿಕ ಮಟ್ಟಕ್ಕೆ ಕೊಂಡೊಯ್ಯಲು ಸರ್ಕಾರ ಮುಂದಾಗಿದೆ. ಕಾಳಿಘಾಟ್, ತಾರಾಪೀಠ, ಜೊರಾಸಂಕೊ ಠಾಕೂರ್ಬಾರಿ ಸೇರಿದಂತೆ ಪ್ರಮುಖ ಧಾರ್ಮಿಕ ಮತ್ತು ಐತಿಹಾಸಿಕ ತಾಣಗಳ ಜೀರ್ಣೋದ್ಧಾರಕ್ಕಾಗಿ ಮೂರು ವರ್ಷಗಳಲ್ಲಿ 1,000 ಕೋಟಿ ರೂ.ಗಳನ್ನು ಮೀಸಲಿಡಲಾಗಿದೆ. ಪರಿಸರ ರಕ್ಷಣೆಯ ಭಾಗವಾಗಿ ಹೂಗ್ಲಿ ನದಿಯುದ್ದಕ್ಕೂ ಎರಡು ಡಾಲ್ಫಿನ್ ಪಾರ್ಕ್ ಗಳ ಸ್ಥಾಪನೆ, ವೃಕ್ಷ ನೆಡುವಿಕೆ ಮತ್ತು ನದಿ ಸ್ವಚ್ಛಗೊಳಿಸುವ ಯೋಜನೆಗಳನ್ನು ಕೂಡ ಕೈಗೆತ್ತಿಕೊಳ್ಳಲಾಗಿದೆ.
ನಾಗರಿಕರ ನಿರೀಕ್ಷೆ ಮತ್ತು ಮುಂದಿರುವ ಸವಾಲುಗಳು
ಸರ್ಕಾರದ ಈ ಸುಧಾರಣಾ ಮಜಲುಗಳಿಗೆ ತಳಮಟ್ಟದಲ್ಲಿ ಸಾರ್ವಜನಿಕರಿಂದ ಎಚ್ಚರಿಕೆಯ ಆಶಾವಾದದ ಪ್ರತಿಕ್ರಿಯೆಗಳು ವ್ಯಕ್ತವಾಗುತ್ತಿವೆ. ನಾದಿಯಾ ಜಿಲ್ಲೆಯ ರೀನಾ ದಾಸ್ ಶಾಲೆಗಳ ಶಿಸ್ತಿನ ಕ್ರಮವನ್ನು ಶ್ಲಾಘಿಸಿದರೆ, ಮುರ್ಷಿದಾಬಾದ್ನ ದಿನಗೂಲಿ ಕಾರ್ಮಿಕ ಅಬ್ದುಲ್ ರೆಹಮಾನ್ ‘ಅನ್ನಪೂರ್ಣ ಭಂಡಾರ್’ ಬಡವರ ಕೈಹಿಡಿಯಲಿದೆ ಎಂಬ ನಂಬಿಕೆ ವ್ಯಕ್ತಪಡಿಸಿದ್ದಾರೆ. ಬಂಕುರಾದ ಕಾರ್ಮಿಕ ಸಂಜಯ್ ಮೊಂಡಲ್ ಅವರು ಗ್ರಾಮೀಣ ಕೆಲಸದ ಅವಧಿ ಹೆಚ್ಚಳದಿಂದ ಸಕಾಲಿಕ ವೇತನ ಸಿಗಲಿ ಎಂದು ಆಶಿಸಿದ್ದಾರೆ.
ಆದರೆ, ರಾಜಕೀಯ ವಿಶ್ಲೇಷಕರು ಮತ್ತು ಟೀಕಾಕಾರರ ಪ್ರಕಾರ, ಈ ಭವ್ಯ ಯೋಜನೆಗಳು ಕಾಗದದ ಮೇಲಷ್ಟೇ ಉಳಿಯದೆ ಯಶಸ್ವಿಯಾಗಬೇಕಾದರೆ ಎರಡು ಪ್ರಮುಖ ಸವಾಲುಗಳನ್ನು ದಾಟಬೇಕಿದೆ. ಅವುಗಳೆಂದರೆ, ಹಣಕಾಸಿನ ಸುಸ್ಥಿರತೆ ಮತ್ತು ತಳಮಟ್ಟದ ನಿಖರ ಅನುಷ್ಠಾನ.
ಬಿಜೆಪಿ ಸರ್ಕಾರವು ತನ್ನ ಅಧಿಕಾರದ ಮೊದಲ ಎರಡು ತಿಂಗಳುಗಳಲ್ಲಿ ಬಂಗಾಳದ ಪ್ರಗತಿಗೆ ಒಂದು ಸ್ಪಷ್ಟ ದಿಕ್ಸೂಚಿಯನ್ನಂತೂ ನೀಡಿದೆ. ಆದರೆ ಈ ಹೆಜ್ಜೆಗಳು ಮುಂಬರುವ ದಿನಗಳಲ್ಲಿ ರಾಜ್ಯದ ಜನಸಾಮಾನ್ಯರ ಬದುಕಿನಲ್ಲಿ ಎಷ್ಟು ವೇಗವಾಗಿ ಗೋಚರಿಸುವ ಬದಲಾವಣೆಗಳನ್ನು ತರಲಿವೆ ಎಂಬುದರ ಮೇಲೆ ಇಡೀ ರಾಜ್ಯದ ಕಣ್ಣು ನೆಟ್ಟಿದೆ.
ನಮ್ಮ ಸರ್ಕಾರವು ಸ್ವಚ್ಛ ಆಡಳಿತದ ಭರವಸೆಯ ಮೇಲೆ ಆಯ್ಕೆಯಾಗಿದೆ. ಸಾರ್ವಜನಿಕ ಹಣದ ಪ್ರತಿಯೊಂದು ರೂಪಾಯಿಯನ್ನೂ ಪ್ರಾಮಾಣಿಕವಾಗಿ ಖರ್ಚು ಮಾಡಬೇಕು ಮತ್ತು ಪ್ರತಿಯೊಬ್ಬ ನಾಗರಿಕನೂ ಲಂಚ ನೀಡದೆ ಸರಕಾರಿ ಸೇವೆಗಳನ್ನು ಪಡೆಯಬೇಕು. ಭ್ರಷ್ಟಾಚಾರ ಮತ್ತು ಅಪರಾಧದ ವಿರುದ್ಧ ನಮ್ಮದು ಶೂನ್ಯ ಸಹಿಷ್ಣುತೆ ನೀತಿ.
- ಸುವೇಂದು ಅಧಿಕಾರಿ ಮುಖ್ಯಮಂತ್ರಿ
ವಿದ್ಯಾರ್ಥಿಗಳನ್ನು ಭವಿಷ್ಯದ ಜಾಗತಿಕ ಮಾರುಕಟ್ಟೆಗೆ ಸಿದ್ಧಪಡಿಸುವುದು ನಮ್ಮ ಉದ್ದೇಶವಾಗಿದೆ. ಶಾಲೆಗಳು ಕೇವಲ ಗುಣಮಟ್ಟದ ಶಿಕ್ಷಣವನ್ನು ನೀಡುವುದಲ್ಲದೆ, ಮಕ್ಕಳ ಉದ್ಯೋಗಾವಕಾಶಗಳನ್ನು ಸುಧಾರಿಸುವ ಪ್ರಾಯೋಗಿಕ ಕೌಶಲ್ಯಗಳನ್ನು ಸಹ ಒದಗಿಸಬೇಕು.
- ಜಗನ್ನಾಥ್ ಚಟ್ಟೋಪಾಧ್ಯಾಯ ಉನ್ನತ ಶಿಕ್ಷಣ ಸಚಿವ
ಬಂಗಾಳವನ್ನು ಜಾಗತಿಕ ಪ್ರವಾಸಿ ತಾಣವಾಗಿ ಪರಿವರ್ತಿಸುವ ದೃಷ್ಟಿಕೋನವನ್ನು ಸರ್ಕಾರ ಹೊಂದಿದೆ. ಇದಕ್ಕಾಗಿ ಉದ್ಯಮದ ಪಾಲುದಾರರೊಂದಿಗೆ ಸೇರಿ 90 ದಿನಗಳ ಪ್ರವಾಸೋದ್ಯಮ ಕ್ರಿಯಾ ಯೋಜನೆಯನ್ನು ಸಿದ್ಧಪಡಿಸಲಾಗುತ್ತಿದೆ.
- ಶಂಕರ್ ಘೋಷ್ ಪ್ರವಾಸೋದ್ಯಮ ಸಚಿವ
