- ಮಂಜುನಾಥ ಅಜ್ಜಂಪುರ, ಗೌರವ ಸಂಪಾದಕ, “ವಾಯ್ಸ್ ಆಫ್ ಇಂಡಿಯಾ” ಕನ್ನಡ ಸರಣಿ
ಸಂಘದ ಪ್ರಚಾರಕರಾದ ನಮ್ಮ ಪ್ರೀತಿಯ ಶ್ರೀಧರ್ ಅವರು 1974ರಲ್ಲಿ ನಮ್ಮ (ಅಂದಿನ) ತರೀಕೆರೆ ತಾಲ್ಲೂಕಿಗೆ ‘ತಾಲ್ಲೂಕು ಪ್ರಚಾರಕ್’ ಆಗಿ ಬಂದು ಪರಿಚಯವಾದರು. ಸರಳತೆಯೇ ಸಾಕಾರವೆತ್ತಂತಹ ಅವರು, ನಮ್ಮ ಊರಿನ (ಅಜ್ಜಂಪುರದ) ಸ್ವಯಂಸೇವಕರಿಗೆ ಅನೇಕ ಒಳ್ಳೆಯ ಸಂಗತಿಗಳನ್ನು ಕಲಿಸಿದರು, ಹೇಳಿಕೊಡುತ್ತಿದ್ದರು. ಅವರು ಸಂಘದ ಪ್ರಚಾರಕರಾದ ಆರಂಭಿಕ ದಿನಗಳವು.
ಆ ಅವಧಿಯಲ್ಲಿ, ಎಲ್ಲ ಪ್ರಚಾರಕರೂ ನಮಗೆ ಮಹತ್ತ್ವದ ಅನೇಕ ಪುಸ್ತಕಗಳನ್ನು ಓದಲು ಸಲಹೆ ನೀಡುತ್ತಿದ್ದರು. ಪುಸ್ತಕಗಳ ಮಧ್ಯೆಯೇ ಬೆಳೆದ ನಾನು ಓದುವುದು ಸಾಮಾನ್ಯ ಸಂಗತಿಯಾಗಿತ್ತು. ಆದರೆ, ಈ ಪ್ರಚಾರಕರು ತುಂಬ ತುಂಬ ಕಾರ್ಯನಿರತರಾಗಿರುತ್ತಿದ್ದರು. ಅವರಿಗೆ ಸ್ವತಃ ಓದಲು ಬಿಡುವೇ ಆಗುತ್ತಿರಲಿಲ್ಲ. ಶ್ರೀಧರ್ ಅವರಿಗೆ ಒಮ್ಮೆ “ನೀವು ಯಾವಾಗ ಓದುವಿರಿ, ಸಮಯ – ಬಿಡುವು ಹೇಗೆ ಮಾಡಿಕೊಳ್ಳುತ್ತೀರಿ” ಎಂದೆ. ಅವರು “ನಾನು ಪ್ರತಿನಿತ್ಯ ಮಲಗುವ ಮುಂಚೆ ಕನಿಷ್ಠ ನಾಲ್ಕು ಪುಟಗಳಷ್ಟನ್ನು ಓದುವ ಪರಿಪಾಠವನ್ನಿಟ್ಟುಕೊಂಡಿದ್ದೇನೆ. ತಿಂಗಳಿಗೆ ಹೇಗಾದರೂ ಕನಿಷ್ಠ ನೂರು ಪುಟಗಳನ್ನು ಓದಿದಂತಾಗುತ್ತದೆ” ಎಂದರು. ನನಗೆ ಈ ವಿಧಾನ, ಈ ಕಾರ್ಯತಂತ್ರ ತುಂಬ ಇಷ್ಟವಾಯಿತು. ಕಳೆದ ಐವತ್ತು ವರ್ಷಗಳಲ್ಲಿ ಇದನ್ನೇ ಅನುಸರಿಸುವಂತೆ ತುಂಬ ಜನರಿಗೆ ಹೇಳಿದ್ದೇನೆ.
1974ರಲ್ಲಿ ನಮ್ಮ ಚಿಕ್ಕಮಗಳೂರು ಜಿಲ್ಲೆಯ ಸಖರಾಯಪಟ್ಟಣದಲ್ಲಿ ಹೊ.ವೆ. ಶೇಷಾದ್ರಿಯವರ ಕಾರ್ಯಕ್ರಮವಿತ್ತು. ಅವರು ಆಗ ಸಂಘದ ಕರ್ನಾಟಕ ಪ್ರಾಂತ ಪ್ರಚಾರಕರಾಗಿದ್ದರು. ನಮ್ಮೆಲ್ಲರ ಮೇಲೆ ಅವರ ವೈಚಾರಿಕ ಲೇಖನಗಳ ಪ್ರಭಾವ ಅಪಾರ. ಕಾರ್ಯಕ್ರಮದ ಆಯೋಜನೆಯಲ್ಲಿ ಶ್ರೀಧರ್ ಅವರ ಪಾತ್ರ ದೊಡ್ಡದು. ಅವು ಬಡತನದ – ದಾರಿದ್ರ್ಯದ ದುರ್ದಿನಗಳು. ಆ ಕಾಲದಲ್ಲಿ ನಮ್ಮ ಯಾರ ಬಳಿಯೂ ಹಣವೇ ಇರುತ್ತಿರಲಿಲ್ಲ. ಎಲ್ಲರ ಜೇಬೂ ಖಾಲಿ. ಸಖರಾಯಪಟ್ಟಣದ ಕಾರ್ಯಕ್ರಮದ ಅನಂತರ ಶೇಷಾದ್ರಿಯವರು ಚಿಕ್ಕಮಗಳೂರಿಗೆ ಹೋಗಬೇಕಿತ್ತು. ಆ ದಿನಗಳಲ್ಲಿ ನಾವು ಯಾರೂ ಕಾರು, ಟ್ಯಾಕ್ಸಿ ಮಾಡುವುದು ಅಸಾಧ್ಯವಾಗಿತ್ತು. ಈಗಲೂ ನೆನಪಿದೆ. ಕಡೂರಿನಿಂದ ಚಿಕ್ಕಮಗಳೂರಿಗೆ ಹೋಗುವ KSRTC ಬಸ್ಸಿನಲ್ಲಿ ಶ್ರೀಧರ್ ಅವರು ಕಡೂರಿನಿಂದಲೇ ಚಿಕ್ಕಮಗಳೂರಿಗೆ ಟಿಕೆಟ್ ಪಡೆದುಕೊಂಡು ಹತ್ತಿ ಕುಳಿತು, ಅನಂತರ ಸಖರಾಯಪಟ್ಟಣದಲ್ಲಿ ಶೇಷಾದ್ರಿಯವರು ಅದೇ ಸೀಟಿನಲ್ಲಿ ಕುಳಿತು, ಚಿಕ್ಕಮಗಳೂರಿಗೆ ಪಯಣಿಸಬೇಕಾಗಿತ್ತು. ಶೇಷಾದ್ರಿಯವರು ತುಂಬ ದೊಡ್ಡವರು. ಅಲ್ಲದೇ ಅವರದು ಸೂಕ್ಷ್ಮ ಪ್ರಕೃತಿ. ಅವರಿಗೆ ಆರೋಗ್ಯದ ತೊಂದರೆಯಿದೆ ಎಂದು ಮೊದಲೇ ನ. ಕೃಷ್ಣಪ್ಪನವರು ಹೇಳಿದ್ದರು. ಆದರೆ, ಅವರನ್ನು ಟ್ಯಾಕ್ಸಿಯಲ್ಲಿ ಕಳುಹಿಸಲು ನಮಗೆ ಯಾರಿಗೂ ಅಂದು ಸಾಧ್ಯವಿರಲಿಲ್ಲ. ನೆನಪಾದರೆ ಈಗಲೂ ಈ ಪ್ರಕರಣ ಕಾಡುತ್ತದೆ.
1975ರಲ್ಲಿ ತುರ್ತುಪರಿಸ್ಥಿತಿ ಹೇರಿಕೆಯಾಗಿ, ನಮ್ಮಲ್ಲಿ ಬಹಳ ಜನ ಸ್ವಯಂಸೇವಕರು ಪೊಲೀಸು, ಕೋರ್ಟು, ಸೆರೆಮನೆ ನೋಡಬೇಕಾಯಿತು ಮತ್ತು ಸಾಮಾಜಿಕ ಅವಜ್ಞೆಗಳಿಗೆ ಗುರಿಯಾಗಬೇಕಾಯಿತು. ಆಗೆಲ್ಲಾ ನಮ್ಮಲ್ಲಿ ಪ್ರೇರಣೆ ತುಂಬಿದವರು ಶ್ರೀಧರ್. ಅವರದ್ದು ಮೊದಲೇ ಮಲೆನಾಡಿನ ಸರಳ ಉಡುಪು. ಸಂಘದ ಪ್ರಚಾರಕರಾದ ಮೇಲೂ ಅಂತಹುದೇ ಸರಳಾತಿಸರಳ ಉಡುಪು. ಇವುಗಳಲ್ಲೇ ನೋಡಿದ್ದ ಶ್ರೀಧರ್ ಅವರನ್ನು ಅವರ ಮಾರುವೇಷದಲ್ಲಿ, ಅಂದರೆ ಪ್ಯಾಂಟು – ಶರ್ಟುಗಳಲ್ಲಿ ನೋಡಿದಾಗ, ಸಂಘದ ಕಾರ್ಯಕರ್ತರಾದ ನಮಗೇ ಗುರುತು ಸಿಕ್ಕುವುದು ಕಷ್ಟವಾಗಿತ್ತು.
ಕರಾಳ ತುರ್ತುಪರಿಸ್ಥಿತಿಯ ಅಂದಿನ ದಿನಗಳಲ್ಲಿ, ಅವರು ಒಮ್ಮೆ ನಮ್ಮ ಗೆಳೆಯರ ತೋಟವೊಂದರಲ್ಲಿ ಭೇಟಿಯಾಗಲು ಹೇಳಿಕಳುಹಿಸಿದರು. ಪೊಲೀಸರ ಹದ್ದಿನಕಣ್ಣುಗಳ ನಡುವೆ ಹಾಗೆ ಭೇಟಿ ಮಾಡುವುದೂ ಬಹಳ ಅಪಾಯದ ಕೆಲಸವಾಗಿತ್ತು. ಅಲ್ಲಿ ತೋಟದಲ್ಲಿ ಸೇರಿದವರು ನಾವು ನಾಲ್ಕೇ ಜನ. ಪೊಲೀಸರಿಗಿಂತ ನಮಗೆ ಕಷ್ಟದ ವಿಷಯವೆಂದರೆ, ನಮ್ಮೂರಿನ ಜನ ವಿಪರೀತ ಚುರುಕು ಬುದ್ಧಿಯವರು. ಎಲ್ಲರೂ ಪೊಲೀಸರಿಗಿಂತ ಹೆಚ್ಚಿನ ಊಹಾಶಕ್ತಿಯವರೇ! ನಾವೆಲ್ಲಾ ಸೇರಿದ್ದೇ ಆಗಲೀ, ‘ವಿಕಿರ’ ವಿದಾಯ ಹೇಳಿದ್ದೇ ಆಗಲೀ ಬೇರೆಬೇರೆಯೇ. ಒಬ್ಬೊಬ್ಬರೂ ಪ್ರತ್ಯೇಕವಾಗಿ ಬೇರೆ ಬೇರೆ ದಿಕ್ಕುಗಳಲ್ಲಿ ಸಾಗಿದೆವು. ಆದರೂ, ನನಗೆ ಎದುರಿಗೆ ಸಿಕ್ಕ ನಮ್ಮೂರಿನವನೊಬ್ಬ “ಏನ್ ಶೆಟ್ರೇ, ತೋಟದ ಕಡೆ? ಗುಟ್ಟಾಗಿ ಯಾರನ್ನೋ ಭೇಟಿಯಾದಂತಿದೆ” ಎಂದು ಪ್ರಶ್ನಿಸಿದ. ಅರೆಕ್ಷಣ ಸ್ತಂಭೀಭೂತನಾದೆ. ಮೆಲುನಗೆ ನಕ್ಕು ನಾನು ಏನೂ ಮಾತನಾಡದೆ ಮುಂದೆ ಹೋದೆ. ಪುಣ್ಯಕ್ಕೆ ಆತ ಪೊಲೀಸರಿಗೆ ವಿಷಯ ಮುಟ್ಟಿಸಲಿಲ್ಲ. ಶ್ರೀಧರ್ ಅವರನ್ನೂ ಒಳಗೊಂಡಂತೆ ನಾವೆಲ್ಲಾ ಪಾರಾದೆವು.
ಶ್ರೀಧರ್ ಅನಂತರದ ಅರ್ಧ ಶತಮಾನದಲ್ಲಿ ಆಗಾಗ ಸಿಕ್ಕುತ್ತಿದ್ದರು, ಸಿಕ್ಕುತ್ತಿರುತ್ತಾರೆ. ಅದೇ ಸೌಮ್ಯ ಸ್ವಭಾವ, ಮೆದು ಮಾತು. ಶೇಷಾದ್ರಿಯವರು, ನ. ಕೃಷ್ಣಪ್ಪನವರು, ಶ್ರೀಧರ್ ಮತ್ತು ಆ ಬಗೆಯ ಪ್ರಚಾರಕರ ತ್ಯಾಗ ಪರಿಶ್ರಮಗಳಿಂದ ಸಂಘ ಇಂದು ಹೆಮ್ಮರವಾಗಿ ಬೆಳೆದು ನಿಂತಿದೆ. ಕಳೆದ ಶತಮಾನವೊಂದರ ಸಂಘದ ಪ್ರಚಾರಕರ ಹಾಗೂ ಭಾರತೀಯ ಜನಸಂಘದ ಅಂದಿನ ಕಾರ್ಯಕರ್ತರ ಬೆವರು ರಕ್ತಗಳಿಂದ ಇಂದು ಪರಿವಾರದ ಸಂಘಟನೆಗಳು ಬೆಳೆದಿವೆ. ಆದರೂ ಸಂಘದ ಮೂಲ ಧ್ಯೇಯ ಎಲ್ಲೋ ದುರ್ಬಲವಾಗಿದೆ ಎಂಬ ಭಾವನೆ ಮೂಡಿದಾಗ ವಿಷಾದವೆನಿಸುತ್ತದೆ.
ಇದೀಗ ಮಾಲಿನೀ ಭಟ್ಟಾಚಾರ್ಜೀ ಅವರ ವಿಶಿಷ್ಟ ಕೃತಿ ‘SWAYAMSEVAK’ (ಸ್ವಯಂಸೇವಕ್) ಕೈಸೇರುತ್ತಿದ್ದಂತೆ ಹಳೆಯ ನೆನಪುಗಳ ಭಾವಪೂರ್ಣ ಯಾತ್ರೆ. ಅಂದಹಾಗೆ, ಈ ಇಂಗ್ಲಿಷ್ ಕೃತಿಯ ಮೊದಲನೆಯ ಅಧ್ಯಾಯ “Sridhar Sagar : The Everyday Karyakarta” ನಮ್ಮ ಶ್ರೀಧರ್ ಅವರ ಬಗೆಗೇ ಇದೆ. ಇನ್ನೂ ಹಲವು ಸಾಧಕರ, ಸಾಧಕಿಯರ ಧ್ಯೇಯಸಮರ್ಪಿತ ಜೀವನಚಿತ್ರಗಳಿಲ್ಲಿವೆ.
ಇಂಗ್ಲಿಷ್ ಭಾಷಾ ಲೇಖಕರ ನಿರೂಪಣಾ ವಿಧಾನ, ಪ್ರಸ್ತುತಿ, ಪ್ರಾರಂಭ – ಮುಕ್ತಾಯಗಳ ವರಸೆಯೇ ಬೇರೊಂದು ಬಗೆಯದು. ನಮ್ಮ ಕನ್ನಡದ ಲೇಖಕರ ಚಿತ್ರಣದ ವಿಧಾನವೇ ಬೇರೆ. ಇಂಗ್ಲಿಷ್ ಲೇಖಕರಿಗೆ ಸಂದರ್ಶನ ನೀಡುತ್ತಿರುವ ವ್ಯಕ್ತಿಗಳ ಪರಿಸರ, ಕುರ್ಚಿ, ಮೇಜು, ಕಿಟಕಿ, ನೈರ್ಮಲ್ಯಗಳ ಬಗೆಗೂ ಗಮನ ಇರುತ್ತದೆ. ನಮ್ಮ ಲೇಖಕರಿಗೆ ವ್ಯಕ್ತಿಗಳ ಸಮುದಾಯ – ಸಂಘರ್ಷಗಳ ಬಗೆಗೆ ಗಮನ ಹರಿಯುತ್ತದೆ. ಈ ತೌಲನಿಕ ದೃಷ್ಟಿಯಿಂದಲೂ ಈ ಕೃತಿ ಗಮನಾರ್ಹ.
ರಾಷ್ಟ್ರೀಯ ಸ್ವಯಂಸೇವಕ ಸಂಘದ ಬಗೆಗಿನ ಇಂಗ್ಲಿಷ್ ಲೇಖಕರ ನೋಟವು ಸಂಘವನ್ನು ಹೊರಗಡೆಯಿಂದ ನೋಡಿದಂತಿರುತ್ತದೆ. ಅದೇ ಭಾರತೀಯ ಭಾಷೆಗಳಲ್ಲಿ (ಪೂರ್ವಗ್ರಹ – ದ್ವೇಷಗಳಿಲ್ಲದೆ) ಬರೆದ ಬರೆಹಗಳನ್ನು ಓದಿದವರಿಗೆ, ಹಿಂದೂ ಸಮಾಜದ ರಕ್ತ ಮಾಂಸ ಮಜ್ಜೆಗಳ ಕಸುವು ವೇದ್ಯವಾಗುತ್ತದೆ.
